Quantcast

ಇದು ಐಪಿಎಲ್ ಅಲ್ಲ, ಬಿಪಿಎಲ್ ಭಾರತದ ಕಥೆ..

lakshman with sainath

ಡಾ ಲಕ್ಷ್ಮಣ ವಿ ಎ

ಉತ್ತರ ಕರ್ನಾಟಕದ ಹಳ್ಳಿಯೊಂದರ ಬಡ ರೈತನೊಬ್ಬತನ್ನ ಎಂಟು ವರ್ಷದ ಮಗನನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸುತ್ತಾನೆ.

ಮಗನಿಗೆ ವಾಸಿಯಾಗದ ಕಾಯಿಲೆಯಿದೆ. ಅದು ಅವನಿಗೂ ಗೊತ್ತು ಆದರೆ ಅವನ ಹಳ್ಳಿಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಾರದು. ಈ ಮಹಾನಗರದಲ್ಲಿ ಒಳ್ಳೆಯ ಉಪಚಾರ ಸಿಕ್ಕು ಅವನು ಬದುಕಿ ಉಳಿದರೂ ಉಳಿಯುವಬಹುದೆಂಬ ಪವಾಡದ ನಿರೀಕ್ಷೆಯಲ್ಲಿದ್ದಾನೆ. ಆಸ್ಪತ್ರೆಯ ವೈದ್ಯರು ಆ ಮಗು ಹೆಚ್ಚೆಂದರೆ ಹತ್ತು ಹದಿನೈದು ದಿನಗಳು ಬದುಕಿ ಉಳಿಯಬಹುದೆಂಬ ಭರವಸೆ ಕೊಟ್ಟಿದ್ದಾರೆ.

body6ಆದರೂ ಆ ತಂದೆಗೆ ಮಗನನ್ನು ಊರಿಗೆ ಕರದೊಯ್ಯಲು ಮನಸಿಲ್ಲ. ಹುಟ್ಟು ಸಾವು ಪುನರ್ಜನ್ಮ ಪವಾಡ ಇದ್ಯಾವುದರ ಪರಿವೆಯಿಲ್ಲದೆ ಮಗ ತನ್ನ ಅಮಾಯಕ ಕಣ್ಣುಗಳಿಂದ ತನ್ನ ಉಪಚರಿಸುವ ವೈದ್ಯರೊಂದಿಗೆ ದಾದಿಯರೊಂದಿಗೆ ಮುಗುಳ್ನಗುತ್ತಾ ಮೌನದಲ್ಲೇ ಮಾತಿಗಿಳಿಯುತ್ತಾನೆ. ಅಪ್ಪನಾದವನಿಗೆ ತನ್ನ ಹೊಟ್ಟೆಗಿಲ್ಲದಿದ್ದರೂ ತನ್ನ ಮಗನ ಬೇಕು ಬೇಡಗಳನ್ನು ಹೇಗೋ ಕಷ್ಟ ಬಿದ್ದು ಹೊಂದಿಸುತ್ತಾನೆ, ಇರುವ ಮೂರು ಕಾಸಿನ ಹಣವನ್ನುತನ್ನ ಧೋತರದ ಮೂಲೆಯಲ್ಲಿ ಕಟ್ಟಿ ಬಲು ಎಚ್ಚರಿಕೆಯಿಂದ ಹಣ ಖರ್ಚು ಮಾಡುತ್ತಾನೆ.

ಹಾಗೋ ಹೀಗೊ ಹದಿನೈದು ದಿನ ಕಳೆದಾದ ಮೇಲೆ ಕೊನೆಗೊಂದು ದಿನ ಮಗನ ಸಾವಾಗುತ್ತದೆ. ಇದ್ದ ಬಿದ್ದ ದುಡ್ಡೆಲ್ಲ ಖರ್ಚಾಗಿದೆ ಅಂಬ್ಯುಲೆನ್ಸಗೆ ಹೊಂದಿಸಲು ದುಡ್ಡಿಲ್ಲ. ಕೊನೆಗೆ ಒಂದು ಉಪಾಯ ಮಾಡಿ ಹತ್ತಿರದ ಸಿಟಿ ಮಾರ್ಕೆಟ್ಟಿಗೆ ಹೋಗಿ ಅವನ ಮಗನ ಅಳತೆಯ ಒಂದು ಟ್ರಂಕು ಕೊಳ್ಳುತ್ತಾನೆ. ಅದರಲ್ಲಿ ಅವನ ಮಗನ ಶವ ಮಡಚಿ ತಲೆ ಮೇಲೆ ಹೊತ್ತು ನಡೆಯುತ್ತ ಮೆಜೆಸ್ಟಿಕ್ ಗೆ ಬರುತ್ತಾನೆ. ತನ್ನೂರಿನ ಬಸ್ಸು ಬಂದಾಗ ತಾನೇ ಹೊತ್ತು ಬಸ್ಸಿನ ಟಾಪಿಗೇರಿಸುತ್ತಾನೆ. ಒತ್ತೊತ್ತಿ ಬರುತ್ತಿರುವ ದುಖವನ್ನೂ ತಡೆದು ಮುಚ್ಚಿಡುತ್ತಿದ್ದಾನೆ. ಯಾರಿಗೂ ಸಂಶಯ ಬಾರದಿರಲೆಂಬ ಬಲು ಎಚ್ಚರಿಕೆಯಿಂದ. ಏಕೆಂದರೆ ಬಸ್ಸುಗಳಲ್ಲಿ ಶವ ಸಾಗಿಸುವ ಅನುಮತಿಯಿಲ್ಲ.

ಈ ಘಟನೆ ನಡೆದು ಸುಮಾರು ವರ್ಷಗಳೇ ಕಳೆದಿವೆ. ಈ ಎಲ್ಲ ವಿಚಾರಗಳು ಅವನನ್ನು ನೋಡಿಕೊಳ್ಳುತಿದ್ದ ವೈದ್ಯರಿಗೆ ತಡವಾಗಿ ಅರಿವಿಗೆ ಬಂದಾಗ ಈ ಎಲ್ಲ ವಿವರಗಳನ್ನು ಸಂಗ್ರಹಿಸಿ ಪತ್ರಿಕೆಗೆ ಅಂಕಣವಾಗಿ ಬರೆದಾಗ ಸಮಾಜದ ಗಮನಕ್ಕೆ ಬರುತ್ತದೆ.

ಒಂದು ವಾರದ ಹಿಂದೆ ಜಮಖಂಡಿಯ ಕಡೆಯವರು ಡೈಯಾಲಿಸಿಸ್ ಗೆಂದು ರೋಗಿಯೊಬ್ಬನನ್ನು ಬೆಂಗಳೂರಿನ ಖಾಸಗೀ ಆಸ್ಪತ್ರೆಗೆ ಕರೆ ತಂದಾಗ ಆರೋಗ್ಯದ ವಿಪರೀತ ಏರು ಪೇರಾಗಿ ಅನಿರೀಕ್ಷಿತವಾಗಿ ಒಂದು ವಾರ ಆಸ್ಪತ್ರೆಯ ಐ ಸಿ ಯು ನಲ್ಲಿ ಹೆಚ್ಚುವರಿ ಚಿಕಿತ್ಸೆಗಾಗಿ ಇರಬೇಕಾಯಿತು. ಕೊನೆಗೂ ಅವರ ಜೀವವನ್ನು ಉಳಿಸಿಕೊಳ್ಳಲಾಗಲಿಲ್ಲ. ಆಸ್ಪತ್ರೆಯ ಬಿಲ್ಲು ಒಂದು ಲಕ್ಷ ಇಪ್ಪತ್ತು ಸಾವಿರ. ಏನೋ ಕಷ್ಟ ಬಿದ್ದು ಬಿಲ್ಲಿನ ಹಣ ಹೊಂದಿಸಿದ್ದಾಗ್ಯೂ ಶವ ಸಾಗಿಸಲು ಕನಿಷ್ಠ ಇಪ್ಪತ್ತು ಸಾವಿರ ರು ದುಡ್ಡು ಬೇಕು. ಎಲ್ಲರ ಹತ್ತಿರ ಸಾಲ ಕೇಳಿಯಾಗಿದೆ. ಇನ್ನು ಅವರಿಗೆ ಉಳಿದಿರುವ ಏಕೈಕ ದಾರಿಯಾಗಿ ಶವವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗುವ ತೀರ್ಮಾನ ಮಾಡಿದ್ದಾರೆ.

ಕೊನೆಗೆ ವಿಚಾರವನ್ನು ಆಸ್ಪತ್ರೆಯ ಮಂಡಳಿಯವರಿಗೆ ತಿಳಿಸಿದಾಗ ಅವರು ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಏಕೆಂದರೆ ರೋಗಿ ಬಹು ಅಂಗಾಂಗಗಳ ವಿಫಲತೆಯಿಂದ ನರಳುತಿದ್ದ. ಆಸ್ಪತ್ರೆಯಲ್ಲಿಟ್ಟುಕೊಂಡರೆ ಕಾಯಿಲೆ ಸಾಂಕ್ರಾಮಿಕವಾಗುವ ಅಪಾಯವಿತ್ತು. ಇಂತಹ ಶವಗಳನ್ನು ಶವಾಗಾರದಲ್ಲಿ ಇಡುವುದು ತುಂಬಾ ದುಬಾರಿ ಮತ್ತು ಅಧ್ಯಯನಕ್ಕೆಂದು ಆ ಶವವನ್ನು ವಿದ್ಯಾರ್ಥಿಗಳಿಗೂ ಕೊಡಲಾಗುವುದಿಲ್ಲ. ಸದ್ಯ ಶವ ಆಸ್ಪತ್ರೆಯಿಂದ ಹೊರಗೆ ಹಾಕಿದರೆ ಸಾಕೆಂದರಾ ಅಥವ ಮಾನವೀಯತೆ ಮೆರೆದರಾ ದೇವರೇ ಬಲ್ಲ. ಅಂತೂ ಶವಕ್ಕೆ ಅಂಬುಲೆನ್ಸ ವ್ಯವಸ್ಥೆ ಮಾಡಲಾಯಿತು.

ಬಡವರಿಗೆ ರೋಗ ರುಜಿನಗಳಾದಾಗ ಆ ನೋವನ್ನು ಅನುಭವಿಸುವ ಯಾತನೆ ಒಂದು ಕಡೆಯಾದರೆ ಅದನ್ನು ಉಪಚರಿಸಲು ಬೇಕಾದ ದುಡ್ಡು ಹೊಂದಿಸುವುದೇ ಒಂದು ಸವಾಲಾಗಿರುತ್ತದೆ, ಒಂದು ಕಡೆ ಹೊಂಚುಹಾಕಿ ಕುಳಿತಿರುವ ಸಾವು, ನೋವು, ಆರ್ಥಿಕ ಹಿಂಜರಿತ ಎಂಥವರನ್ನೂ ಹಿಂಡಿ ಹಿಪ್ಪೆ ಮಾಡುತ್ತದೆ.

ಮೇಲಿನ ಎರಡು ಘಟನೆಗಳು ಬಿಪಿಎಲ್ ಭಾರತದ ಎರಡು ಬಿಡಿ ಬಿಡಿ ಭಾವಗಳು

ಸದ್ಯಕ್ಕೆ ಓಡಿಶಾದ ಕಾಳಹಂಡಿ ಜಿಲ್ಲೆಯ ದಾನಾಸಿಂಗ್ ಮಾಝಿ ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತು ಹತ್ತು ಕಿ.ಮಿ.ನಡೆದು ದೇಶದ ಸುದ್ದಿ ಮಾಧ್ಯಮಗಳಿಗೆ ಆಹಾರವಾಗಿದ್ದಾನೆ. ಈ ಓಡಿಶಾದ ಕಾಳಹಂಡಿ, ಮಲ್ಕನಗಿರಿ, ಕೋರಾಫುಟ್, ನೌಪಾದ ಮುಂತಾದ ಶಾಪಗ್ರಸ್ಥ ಜಿಲ್ಲೆಗಳ ನೈಜ ಸ್ಥಿತಿ ಅರಿಯಬೇಕೆಂದರೆ ಪಿ.ಸಾಯಿನಾಥ್ ಬರೆದ “ಬರ ಅಂದರೆ ಎಲ್ಲರಿಗೂ ಇಷ್ಟ”ಎನ್ನುವ ಪುಸ್ತಕ ಓದಬೇಕು. ಕನ್ನಡಕ್ಕೆ ಜಿ.ಎನ್.ಮೋಹನ್ ಅನುವಾದಿಸಿದ್ದಾರೆ. ಅಲ್ಲಿಯ ಬಡತನ ಅಮಾಯಕತೆ, ಭ್ರಷ್ಟಗೊಂಡ ಸರಕಾರದ ಸೇವೆಗಳು, ಅಧಿಕಾರಶಾಹಿಯ ಜಡತ್ವದ ಅರಿವಾಗಿ ಒಂದು ಬಗೆಯ ವಿಷಾದ ನಿಮ್ಮನ್ನು ತಟ್ಟುತ್ತದೆ.

422318_431265750248139_1276529435_nಇಲ್ಲಿ ಐ.ಪಿ.ಎಲ್.ಇಂಡಿಯಾ ತನ್ನ ಜಿ.ಡಿ.ಪಿ. ವೃದ್ದಿಸಲು ಏನೇನೋ ಕಸರತ್ತು ಮಾಡಿ ಪ್ರಜೆಗಳಿಗೆ ಸುಖದ ದಿನಗಳನ್ನು ನೀಡುವ ವಾಗ್ದಾನ ಮಾಡಿ ಬುಡಕಟ್ಟು ಜನಾಂಗದವರನ್ನು ಒಕ್ಕಲೆಬ್ಬಿಸುತ್ತದೆ. ಮಂಗಳ ಗ್ರಹದಲ್ಲಿ ನೀರಿನ ಕುರುಹು ಪತ್ತೆ ಹಚ್ಚಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ.
ಆದರೆ ಈ ನತದೃಷ್ಟ ಹಳ್ಳಿಗರಿಗೆ ಒಂದು ಬಿಂದಿಗೆ ನೀರು ತರಲು ನಾಲ್ಕು ಕಿ.ಮಿ.ನಡೆಯಬೇಕು. ಉಪ್ಪು ಖಾರ ಬೆಂಕಿಪೊಟ್ಟಣ ತರಲು ಎರಡು ಕಿ.ಮಿ.ನಡೆಯಬೇಕು ವಯಸ್ಸಾದವರಿಗೆ ರೋಗಿಗಳಿಗೆ ಆಸ್ಪತ್ರೆ ತಲುಪಿಸಲು “ಡೋಲಿ” ಉಪಯೋಗಿಸಬೇಕು. ಮಳೆ, ಚಳಿ, ಬಿಸಿಲು, ಪ್ರವಾಹ ಇಲ್ಲಿ ಯಾವ ಲೆಕ್ಕಕ್ಕೂ ಬರುವುದಿಲ್ಲ. ಎಷ್ಟೋ ರೋಗಿಗಳು ಆಸ್ಪತ್ರೆ ತಲುಪುವ ಹೊತ್ತಿಗೆ ಸತ್ತೇ ಹೋದ ದಾಖಲೆ ಕೂಡ ಇದೆ.

ಸದ್ಯ ದಾನಾಸಿಂಗ್ ಮಾಝಿ ಚರ್ಚೆಯಲ್ಲಿದ್ದಾನೆ, ಇರುತ್ತಾನೆ. ಇನ್ನೊಂದು ದುರಂತ, ಸಾವು, ಮನು ಕಲಕುವ ಘಟನೆ ನಡೆಯುವ ತನಕ ಕ್ಯಾಮರಾ ಕಣ್ಣುಗಳನ್ನು ಎದುರಿಸುತ್ತಾನೆ.

ಆದರೆ ವ್ಯವಸ್ಥೆಯ ಕಣ್ಣುಗಳು ತೆರೆಯುವುದು ಯಾವಾಗ?

ದೇಶದ ಕಟ್ಟ ಕಡೆಯ ವ್ಯಕ್ತಿಯೊಬ್ಬನ ಸಾವಿನಂತಹ ದಾರುಣ ಸ್ಥಿತಿಯಲ್ಲಿಯೂ ಸಮಾಜ, ವ್ಯವಸ್ಥೆ, ಅಮಾನವೀಯತೆಯನ್ನು ತೋರಲು ಕಾರಣಗಳೇನು?
ಅವನು ದಲಿತನೆಂಬ ಕಾರಣಕ್ಕಾಗಿ ಅಂಬುಲೆನ್ಸ್ ನಿರಾಕರಿಸಲಾಯಿತಾ? ಅಥವ ಲಂಚ ಕೊಡಲಾರದ ಅಸಹಾಯಕತೆಯೊಂದು ಹೀಗೆ ಮಾಡಿತಾ? ನೆನಪಿರಲಿ ಅಲ್ಲಿಯ ಸರಕಾರ ಶವಗಳಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸುತ್ತದೆ.

ಜಿಲ್ಲಾಧಿಕಾರಿಗಳ ಹೇಳಿಕೆಯ ಪ್ರಕಾರ ಅವನು ಆಸ್ಪತ್ರೆಯ ಸಿಬ್ಬಂದಿ ಗೆ ಹೇಳದೇ ಕೇಳದೇ ಬಂದಿದ್ದಾನಂತೆ. ಸರಕಾರ ತನಿಖೆಗೆ ಅದೇಶಿಸಿದೆ. ಸತ್ಯ ಹೊರಬರುವ ನಿರೀಕ್ಷೆ ಇಟ್ಟುಕೊಳ್ಳೋಣ. ಆದರೆ ಅವನು ಸುಮಾರು ಹತ್ತು ಕಿ.ಮಿ.ತನ್ನ ಹೆಂಡತಿಯ ಶವವನ್ನು ತಲೆಯ ಮೇಲೆ ಹೊತ್ತು ನಡೆಯುವಂತಹ ಅಮಾನವೀಯ ಅನಿವಾರ್ಯತೆ ವ್ಯವಸ್ಥೆ ಸೃಷ್ಟಿಸಿದ್ದೇಕೆ?

ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಷೇರು ಮಾರುಕಟ್ಟೆಯ ಏರಿಳಿತದ ಮೇಲೆ ಅಳೆಯಬೇಕಾ? ಕೇವಲ ಜಿ.ಡಿ.ಪಿ.ಯೊಂದೇ ಅಭಿವೃದ್ಧಿಯ ಮಾನದಂಡವಾ?

ಸದ್ಯಕ್ಕೆ ನಮ್ಮನ್ನೆಲ್ಲರ ಅಂತಃಕರಣವನ್ನು ಕಲಕಬೇಕಾದ ಪ್ರಶ್ನೆಇದು ಅಲ್ಲವೇ?

6 Comments

 1. mallappa
  August 27, 2016
 2. Harish Karkera
  August 27, 2016
 3. Dr. Prabhakar M. Nimbargi
  August 27, 2016
  • Avadhi
   August 27, 2016
 4. S.p.vijaya Lakshmi
  August 27, 2016
 5. Sangeeta Kalmane
  August 27, 2016

Add Comment

Leave a Reply