Quantcast

ಅಮೇರಿಕಾದಲ್ಲಿ ಮಸಾಲೆ ದೋಸೆ

ಕಳೆದುಕೊಂಡದ್ದನ್ನು ಹುಡುಕೋ ಪ್ರಯತ್ನ

ಅಣ್ಣ ಕೊಡಿಸಿದ ಮಸಾಲೆದೋಸೆ, ಬೆಚ್ಚನೆಯ ಪ್ರೀತಿ

ಕ್ಯಾಲಿಫೋರ್ನಿಯಾದಿಂದ ನಮ್ಮ ಪಯಣ ಮುಂದುವರಿದಿದ್ದು ಅಮೆರಿಕಾದ ಬ್ರೆಡ್ ಬಾಸ್ಕೆಟ್ ಒಮಾಹಾದ ಕಡೆ. ಸಿಕ್ಕಾಪಟ್ಟೆ ಮಳೆ ಬಿದ್ದ ಕಾರಣ ಒಮಹಾದಲ್ಲಿ ಪ್ರವಾಹದ ಪರಿಸ್ಥಿತಿ. ಇದ್ರಿಂದ ಅಲ್ಲಿನ ಜನರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ರು. ವಿಮಾನದಲ್ಲಿ ಪ್ರಯಾಣದ ವೇಳೆ ನಮ್ಮ ತಂಡವನ್ನು ಮುನ್ನಡೆಸುತ್ತಿದ್ದ ಬಾನಿ ಈ ವಿಷಯ ತಿಳಿಸಿದ್ರು. ಹೀಗೆ ಮಾತಾಡುತ್ತಲೇ  ವಿಮಾನನಿಲ್ದಾಣದಲ್ಲಿ ಆಗಲೇ ಬಂದಿಳಿದಿದ್ದೆವು.

jyothi irvattur3ಮತ್ತೆ  ರಸ್ತೆ ಮೂಲಕ ನಮ್ಮ ಪಯಣ ಮುಂದುವರಿದಿತ್ತು. ಪಯಣದುದ್ದಕ್ಕು ರಸ್ತೆಯ ಇಕ್ಕೆಲಗಳಲ್ಲಿ ಹಸಿರು. ಮೈ ಮುತ್ತಿಕ್ಕುತ್ತಿದ್ದ ತಂಪನೆಯ ಗಾಳಿ.

ಎಷ್ಟೊಂದು ವೈರುಧ್ಯ, ಹವಾಮಾನದಲ್ಲಿ, ಭೌಗೋಳಿಕ ಸ್ವರೂಪದಲ್ಲಿ, ವಾಷಿಂಗ್ಟನ್ ವಿಶಾಲತೆ, ಪಾರಂಪರಿಕ ಚಿತ್ರಣವನ್ನು ಕಟ್ಟಿಕೊಟ್ಟರೆ, ನ್ಯೂಯಾರ್ಕ್ ನ ಗಗನಚುಂಬಿ ಕಟ್ಟಡಗಳು ಕುಬ್ಜತೆ, ನಗರೀಕರಣದ ವೇಗವನ್ನು ಪ್ರತಿಬಿಂಬಿಸುವಂತಿದ್ದವು. ಇನ್ನು ಕ್ಯಾಲಿಫೋರ್ನಿಯಾ ಹಿತವಾದ ಹವಾಮಾನದೊಂದಿಗೆ ಖುಷಿ ಕೊಟ್ಟಿತ್ತು.

ಒಮಾಹಾದಲ್ಲಿ ಕೃಷಿಗೆ ಆದ್ಯತೆ, ಹಾಗಾಗಿ ಕಣ್ಣು ಹಾಯಿಸದಲ್ಲೆಲ್ಲಾ ಪೈರು, ಹಸಿರು ಕಣ್ಣಿಗೆ ಹಿತವೆನಿಸುತ್ತಿತ್ತು. ಫ್ಲೈ ಓವರ್ ಗಳು ಸಾಮಾನ್ಯವಾಗಿ ಅಲ್ಲಲ್ಲಿ ಕಣ್ಣಿಗೆ ರಾಚುತ್ತಿತ್ತು.

ಒಂದಿಷ್ಟು ಜೋಕ್, ಹಾಡು ಮಾತುಗಳ ಜೊತೆ ಪಯಣವು ಸಾಗಿತ್ತು. ನಾವು ಮೂರು ದಿವಸ ಕಳೆಯಬೇಕಿದ್ದ ಮನೆಯೆದುರು ಬಂದು ನಿಂತಿದ್ದೆವು. ಭಾರೀ ಮಳೆಯಿತ್ತು. ಒಂದು ರೀತಿಯಲ್ಲಿ ಹಳ್ಳಿಯ ಗಾಢ ಮೌನವಿತ್ತು. ಅದು ದೊಡ್ಡ ಮನೆ. ಅಡುಗೆಕೋಣೆ, ಹಾಲ್, ಮತ್ತೊಂದು ರೂಮು, ವಿಶಾಲವಾದ ಮನೆಯಲ್ಲಿ ಒಬ್ಬಳೇ.

ಅಷ್ಟರಲ್ಲಿ ಸ್ವಲ್ಪ ಮಳೆ ನಿಂತಿತ್ತು. ಎಲ್ಲರು ತರಕಾರಿ ಮನೆ ಸಾಮಾನು ತರಲು ಹೊರಟೆವು, ಮನೆಯಲ್ಲೇ ಅಡುಗೆ ಮಾಡೋ ಪ್ಲಾನ್ ಎಲ್ಲರದ್ದಾಗಿತ್ತು. ಬೇಕಾದ ತಾಜಾ ತರಕಾರಿ, ಮತ್ತೊಂದಷ್ಟು ಮಸಾಲೆ ಪದಾರ್ಥಗಳು, ಬ್ರೆಡ್, ಜ್ಯೂಸ್ , ಯೋಗರ್ಟ್ ನೊಂದಿಗೆ ವಾಪಸಾದೆವು.

ಕಾಫಿ ಕುಡಿಯಬೇಕೆನಿಸಿತು. ಕಾಫಿ ಕುಡಿದು ಮತ್ತೆ ಅಡುಗೆ ಮಾಡಿದೆ, ಹಾಗೆ ನೂರುಗಲ್ ಕೂಡ ತಮ್ಮದೇ ಶೈಲಿಯಲ್ಲಿ ಅದೇನೋ ಸ್ಪಷೆಲ್ ಅಡುಗೆ ಮಾಡಿದ್ರು. ಅದರ ಹೆಸರು ದೇವರಾಣೆಗು ನಂಗೇ ನೆನಪಿಲ್ಲ. ಇಬ್ಬರು ಕೂತು ಹರಟುತ್ತಾ ಮಾಡಿದ್ದನ್ನು  ತಿಂದು ಆಗಿತ್ತು. ಮತ್ತೆ ಮಳೆ ಸುರಿಯುತ್ತಿತ್ತು. ಧೋ ಎಂಬ ಸದ್ದಿಗೆ ಬೆಡ್ ಶೀಟ್ ಹೊದೆದು ಮಲಗುವುದರಲ್ಲಿರುವ ಖುಶಿ ಬೇರೆ ಯಾವುದರಲ್ಲಿದೆ ಹೇಳಿ? ಅಲಾರ್ಮ್ ಇಟ್ಟು ಮಲಗಿದೆ.

ಮುಂಜಾನೆ ಆಗುತ್ತಿದ್ದಂತೆ ಕಿಟಕಿಯ ಪರದೆ ಸರಿಸಿ ಹೊರಗಡೆ ದೃಷ್ಟಿ ನೆಟ್ಟೆ. ಮಳೆಯ ಹನಿ ಸೋಕಿ ಗಿಡ ಮರಗಳು ಇನ್ನು ಉಲ್ಲಾಸವಾಗಿರುವಂತೆ ಕಂಡಿತು. ಹಿತವಾದ ಹವಾಮಾನ ಮನಸ್ಸಿಗೆ ಖುಷಿ ಅನ್ನಿಸಿತ್ತು. ಅಲ್ಲಿ ಕೆಲವು ಪ್ರತಿನಿಧಿಗಳನ್ನು ಭೇಟಿ ಮಾಡೋ ಕಾರ್ಯಕ್ರಮವಿತ್ತು. ಹೀಗೆ ಕೆಲವರ ಭೇಟಿ ನಂತ್ರ ಪ್ರಮುಖವಾದ ನಮ್ಮ ಭೇಟಿ ಅಲ್ಲಿನ ರೈತರೊಬ್ಬರ ಮನೆಗೆ. ಹಲವು ಕಿಲೋಮೀಟರ್ ದೂರವಿದ್ದ ಆ ಪ್ರಗತಿಪರ ರೈತನ ಮನೆ ಆಗಲೇ ತಲುಪಿದ್ದೆವು.

ಅವರ ಮನೆ ಸಾಂಪ್ರದಾಯಿಕವಾಗಿತ್ತು. ಹಳೆಯ ಅಮೆರಿಕಾದ ಸಿನಿಮಾಗಳಲ್ಲಿ ತೋರಿಸುವಂತೆ ಮನೆ ಕಾಣುತ್ತಿತ್ತು. ಇಬ್ಬರು ಮಕ್ಕಳನ್ನು ನಮಗೆ ಪರಿಚಯಿಸಿದ್ರು. ಅಲ್ಲಿನ ರೈತರ ಸ್ಥಿತಿಗತಿ ಬಗ್ಗೆ ಮಾತಾಡಿದ್ರು. ಗಿಣ್ಣುವಿನಿಂದ ತಯಾರಿಸಿದ ಖಾದ್ಯವೊಂದನ್ನು ಕೊಟ್ಟರು. ತುಂಬಾನೆ ರುಚಿಯಾಗಿತ್ತು. ಅಮೆರಿಕಾದ ರೈತರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಆ ಪ್ರಗತಿಪರ ರೈತರು ತಿಳಿಸಿದ್ರು. ಹಾಗೆ ಹರಟುತ್ತಾ ಇನ್ನೊಂದು ಕಪ್ ಕಾಫಿ ಕುಡಿದೆವು, ಕುದುರೆಗಳು, ದನ ಕರುಗಳನ್ನು ಅಲ್ಲಿ ಸಾಕಲಾಗಿತ್ತು. ಮತ್ತೆ ಹಸುರಿನಲ್ಲಿ ನಡೆದಾಡುತ್ತಾ ಒಂದಿಷ್ಟು ವಿಷಯಗಳನ್ನು ವಿನಿಮಯ ಮಾಡಿಕೊಂಡೆವು.

ಆಗಲೇ ಸಂಜೆಯಾಗಿತ್ತು. ಮತ್ತೆ ನಾವು ತಂಗಿದ್ದ ಕಾಟೇಜ್ ನತ್ತ ಪಯಣ ಬೆಳೆಸಿದೆವು. ಬಹುತೇಕ ಒಮಾಹಾದ ಭೇಟಿ ಮುಗಿದಿತ್ತು.

ಒಮಾಹಾದಲ್ಲಿ ಮೌನವಿತ್ತು. ಹಸುರಿತ್ತು. ಅಮೆರಿಕಾದ ಬ್ರೆಡ್ ಬಾಸ್ಕೆಟ್ ನಂಗೆ ತುಂಬಾ ಇಷ್ಟಾನು ಆಗಿತ್ತು.

Jyothi column low resಅಮೆರಿಕಾದಲ್ಲಿ ಕಡೆಯದಾಗಿ ನಾವು ತೆರಳಿದ್ದು ಫ್ಲೋರಿಡಾಗೆ. ಕಡಲತಡಿಯಲ್ಲಿ ಸುಂದರವಾದ ದೃಶ್ಯಗಳನ್ನು ನೋಡುತ್ತಾ ಸಾಗುತ್ತಿದ್ದರೆ ಅದೆಂತಾ ಖುಷಿ ಅನ್ನಿಸುತ್ತಿತ್ತು. ಜನಜಂಗುಳಿಯಲ್ಲದ ಸುಂದರ ಫ್ಲೋರಿಡಾದಲ್ಲು ಮೌನಕ್ಕೆ ಜಾಗವಿತ್ತು. ಮತ್ತೆ ಇಲ್ಲಿ ತುಂಬಾ ಖುಷಿಯಿರಲು ಇನ್ನು ಒಂದು ಕಾರಣವಿದೆ. ಷಿಕಾಗೋ ದಲ್ಲಿದ್ದ ನನ್ನಣ್ಣ ನನ್ನ ನೋಡಲು ಫ್ಲೋರಿಡಾಗೆ ಬಂದಿದ್ದ. ಅವ ಬಂದ ಸುದ್ದಿ ಕೇಳಿ ಖುಷಿಗೆ ಪಾರವೇ ಇರಲಿಲ್ಲ.

ಎಲ್ಲಾದರು ಇಂಡಿಯನ್ ಫುಡ್ ತಿನ್ನುವ ಅಂತ ಹೋಟೇಲ್ ಹುಡುಕಿಕೊಂಡು ಹೊರಟೆವು. ದಾರಿಯ ತುಂಬೆಲ್ಲಾ ಮಾತು ಮಾತು. ಹಳೆಯ ನೆನಪುಗಳು ಈಗಿನ ವಿಚಾರಗಳು ಇನ್ನು ಏನೇನೋ ಮಾತಾಡುತ್ತಲೇ ಇದ್ದೆವು.

ಕಾಸರಗೋಡಿನವರ ಆ ಪುಟ್ಟ ಹೋಟೇಲು ಕಣ್ಣಿಗೆ ಬಿತ್ತು. ಮಸಾಲೆದೋಸೆ ಆರ್ಡರ್ ಮಾಡಿ ಖುಷಿಯಾಗಿತ್ತು. ಚಿತ್ರಾನ್ನ ಪಾರ್ಸೆಲ್ ಮಾಡಿಸಿಯಾಗಿತ್ತು. ಹಾಗೆ ಕನ್ನಡದಲ್ಲಿಯೇ ಮಾತು. ತುಂಬಾನೆ ಖುಷಿಯೆನಿಸಿತು. ಜಗತ್ತಿನ ಯಾವುದೇ ಮೂಲೆಗೆ ಹೋದ್ರು ಮಾತೃಭಾಷೆಯಲ್ಲಿ  ಮಾತಾಡಿದ್ರೆ  ಸಿಗೋ ಖುಷಿ ಖಂಡಿತವಾಗಿಯು ಯಾವುದರಿಂದಲು ಸಿಗಲು ಸಾಧ್ಯವೇ ಇಲ್ಲ.

ಮತ್ತೆ ವಾಪಸು ನಾನುಳಿದುಕೊಂಡಿದ್ದ ಹೋಟೇಲ್ ಗೆ ಬಿಟ್ಟ ನಂತರ ಅಣ್ಣ ವಾಪಾಸು ತೆರಳಬೇಕಿತ್ತು.

ಅಣ್ಣ ಅಂದ್ರೆ ಸಿಕ್ಕಾಪಟ್ಟೆ ಪ್ರೀತಿ. ಚಿಕ್ಕವರಿರುವಾಗ ಕಿತ್ತಾಟ. ಅಪ್ಪ ಎಲ್ಲಾ ನಂಗೆ ತಂದುಕೊಡ್ತಾರೆ ಅಂತ ಸಿಟ್ಟು ಅವನಿಗೆ, ಒಮ್ಮೆ ಸಿಂಹದ ಚಿತ್ರವಿರೋ ಹೊದಿಕೆಗೆ ಕಿತ್ತಾಡಿ ಅಪ್ಪ ಬೈದ ನಂತ್ರ ಹೊಲದಲ್ಲಿ ಮಲಗಿ ಸಿಟ್ಟಿನ ತೀವ್ರತೆ ಹೇಗಿರುತ್ತೆ ಅಂತ ತೋರಿಸಿಕೊಟ್ಟಿದ್ದ, ಶಾಲೆಗೆ ಚಕ್ಕರ್ ಹಾಕಿ ಕೆಲವೊಮ್ಮೆ ಗುಡ್ಡೆಯಲ್ಲೇ ಕೂತು ಬುತ್ತಿ ತಿಂದು ಹರಟುವ ಗುಂಪಿನ ನಾಯಕನು ಅವನಾಗಿದ್ದ. ಲೈನ್ ಮ್ಯಾನ್ ಸೈಕಲ್ ಇಟ್ಟು ಕೆಲಸಕ್ಕೆಂದು ಕೆಳಗಡೆ ಹೋದ್ರೆ ಸೈಕಲ್ ಟಯರ್ ಪಂಚರ್ ಮಾಡಿ ಅಡಗಿಕೊಳ್ಳುತ್ತಿದ್ದ, ಧರ್ಮಸ್ಥಳ ಉಜಿರೆಯ ಸಿದ್ಧವನಕ್ಕೆ ವಿದ್ಯಾಭ್ಯಾಸಕ್ಕೆ ಹೋದ ನಂತರ ಅವನನ್ನು ಮಿಸ್ ಎಷ್ಟು ಮಾಡಿಕೊಳ್ಳುತ್ತಿದ್ದೇನೆಂದು ಅರಿವಾಗಿತ್ತು.

ಆಗ ಫೇಮಸ್ ಆಗಿದ್ದ ಪ್ರಾಣ್ ಕ್ಯಾರಕ್ಟರ್ ಅಣ್ಣನಂತೆ ಅಂದುಕೊಳ್ಳುತ್ತಿದ್ದೆ. ಯಾವಾಗ ಬರ್ತಾನೆಂದು ಕಾಯುತ್ತಿದ್ದೆ.  ಹೀಗೆ ಎಲ್ಲರಂತೆ ಅಣ್ಣ ತಂಗಿಯ ಭಾವನಾತ್ಮಕ ಸಂಬಂಧ ನಮ್ಮದು. ಅಣ್ಣ ತೆರಳುವಾಗ ಮನಸ್ಸಿನೊಳಗೆ ನೋವನಿಸಿತು. ಹಳೆಯ ನೆನಪುಗಳು ಹಾಗೆ ಮೆಲ್ಲಗೆ ಅಪ್ಪಳಿಸಿತು. ಅವತ್ತು ಅಮೆರಿಕಾದಲ್ಲಿ ಕೊನೆಯ ದಿನವಾಗಿತ್ತು. ನಮ್ಮ ತಂಡವನ್ನು ನೋಡಿಕೊಳ್ಳುತ್ತಿದ್ದ ಬಾನಿ ಜೊತೆ ಹಾಗೆ ವಾಕ್ ಮಾಡಿದೆವು. ಆಕೆ ಕನ್ನಡದ ಹಾಡು ಹಾಡಬೇಕೆಂದಳು. ನಾನು ಹಾಡಿದೆ.

ಅಮೆರಿಕಾದ ಕುರಿತಂತೆ ನನಗಿದ್ದ ಕಲ್ಪನೆ, ವಾಸ್ತವ ಎರಡರ ನಡುವಿನ ಸಂಘರ್ಷದ ನಡುವೆ ಪ್ರವಾಸ ಮುಗಿದಿತ್ತು.

ಮರುದಿನ ಮತ್ತೆ ವಾಷಿಂಗ್ಟನ್ ನತ್ತ ನಮ್ಮ ಪಯಣ ಸಾಗಿತ್ತು.  ಅಲ್ಲಿಂದ ಮತ್ತೆ  ದೇಶಕ್ಕೆ ತೆರಳುವ ಪಯಣ .ಇದು ಅಮೆರಿಕಾ ಕುರಿತ ನೆನಪುಗಳು,.ಬರುವ ವಾರ ಮತ್ತೆ ಸಿಗ್ತೀನಿ..

ಅಲ್ಲಿವರೆಗು  ಟೇಕ್ ಕೇರ್..

ಜ್ಯೋತಿ

 

 

Add Comment

Leave a Reply