Quantcast

ಇದು ಮಂಡ್ಯ ದಾಟಿದ ನಂತರ ನಡೆದ ಘಟನೆ..

ನಿಸರ್ಗ 

ಎಲ್ಲ ಬರೆದಿದ್ದನ್ನು ಓದುತ್ತಿರುವಾಗ, ಸುಮಾರು ಮೂರು ವರ್ಷಗಳ ಹಿಂದೆ ನಾನು ಕಂಡ ಘಟನೆಯೊಂದು ನೆನಪಾಗಿ ಕಾಡತೊಡಗಿತು.

ಮರೆತೇ ಹೋಗಿದ್ದ ಆ ಘಟನೆಯನ್ನು, ಎಲ್ಲರೂ ಎಲ್ಲರನ್ನೂ ದೂಷಿಸಿಕೊಳ್ಳುತ್ತಿರುವುದನ್ನು ನೋಡಿ, ಹಂಚಿಕೊಳ್ಳಬೇಕೆನಿಸಿತು. ಆಗ ನಾನು ಬೆಂಗಳೂರಿಂದ ಮೈಸೂರಿಗೆ ಬಸ್ಸಲ್ಲಿ ಹೋಗುತ್ತಿದ್ದೆ. ಮಂಡ್ಯದ ಹತ್ತಿರದಲ್ಲೆಲ್ಲೋ ಒಬ್ಬ ಹೆಂಗಸು ಮಗನ ಜೊತೆಯಲ್ಲಿ, ಕಷ್ಟಪಟ್ಟು ನಿಧಾನಕ್ಕೆ ನಡೆಯುತ್ತಿದ್ದ ತನ್ನ ಗಂಡನನ್ನು ಗಟ್ಟಿಯಾಗಿ ಹಿಡಿದುಕೊಂಡು ಬಂದು, ನನ್ನ ಸೀಟಿನ ಮುಂದಿನ ಸೀಟಲ್ಲಿ ಕೂರಿಸಿದಳು. ಬಸ್ಸಿಂದ ಕೆಳಗಿಳಿದು ಓಡುತ್ತ ಹೋಗಿ ಎಳನೀರು ತಂದು ಕುಡಿಸಿದಳು. ಪಕ್ಕದ ಸೀಟಲ್ಲಿ ಮಗ ಇದನ್ನೆಲ್ಲ ನೋಡುತ್ತ ಕಂಗಾಲಾಗಿ ಕುಳಿತಿದ್ದ.

ksrtc driverಇದನ್ನೆಲ್ಲ ನೋಡುತ್ತಿದ್ದ ನಾನು ಬೆದರಿ ನನ್ನ ಪಕ್ಕದಲ್ಲಿ ಕುಳಿತಿದ್ದ ಹಿರಿಯರ ಮುಖ ನೋಡಿದೆ. ನಾವು ತುಸು ಸುಧಾರಿಸಿಕೊಂಡು ಮುಂದೆಯೇ ಕುಳಿತಿದ್ದ ಹೆಂಗಸನ್ನು ಮಾತಾಡಿಸಿದೆವು. ಅವಳು ನಮ್ಮ ಕಡೆಗೆ ತಿರುಗಿ ಸಣ್ಣ ದನಿಯಿಂದ ಮಾತಾಡಿದಳು. ನಡುನಡುವೆ ಕ್ಷೀಣವಾಗಿ ಕೆಮ್ಮುತ್ತಿದ್ದ ಗಂಡನನ್ನು ಸಮಾಧಾನ ಪಡಿಸುತ್ತಿದ್ದಳು. ಅವಳ ಗಂಡನಿಗೆ ಕೆಲವು ದಿನಗಳ ಹಿಂದೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಹಾರ್ಟ್ ಆಪರೇಶನ್ ಆಗಿದೆ. ಆಸ್ಪತ್ರೆಯಿಂದ ಮನೆಗೆ ಕರೆದೊಯ್ದ ನಂತರ ಅವನ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಅದಕ್ಕೇ ಅವನನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದಳು.

ನನ್ನ ಪಕ್ಕ ಕುಳಿತಿದ್ದವರು ಹಾರ್ಟ್ ಆಪರೇಶನ್ ಆದವರನ್ನು ಬಸ್ಸಲ್ಲಿ ಕರೆದೊಯ್ಯಬಾರದು, ಬಸ್ಸಿನ ಕುಲುಕಾಟದಿಂದ ದೇಹ ಇನ್ನಷ್ಟು ಹೈರಾಣಾಗುತ್ತದೆ, ಕಾರಲ್ಲಿ ಕರೆದೊಯ್ಯಬೇಕಿತ್ತು ಎಂದು ಅವಳಿಗೆ ಹೇಳಿದರು. ಹಳೆಯ, ಚಿಂದಿಯಾಗುವುದರಲ್ಲಿದ್ದ ರಗ್ಗನ್ನು ಸುತ್ತಿಕೊಂಡು ನಡುಗುತ್ತ ಕುಳಿತಿದ್ದ ಗಂಡನ ಕಡೆಗೊಮ್ಮೆ ನೋಡಿ ಮುಖ ತಿರುಗಿಸಿಕೊಂಡಳು. ಅಸಹಾಯಕತೆಯ ಮುಂದೆ ನಾವು ತಲೆಬಗ್ಗಿಸಿದೆವು.

ಸುಮಾರು ಹತ್ತು ನಿಮಿಷಗಳಾಗಿರಬಹುದು, ಗಂಡ ತಟಸ್ಥನಾಗಿ ಕುಳಿತುಬಿಟ್ಟಿದ್ದ. ಅವಳು ಅವನನ್ನು ಅಲುಗಾಡಿಸುತ್ತಿದ್ದಳು. ಮಗ ಗಟ್ಟಿಯಾಗಿ ಅಳುತ್ತಿದ್ದ. ಅವಳು ಕಿರುಚಿದಳು. ಬಸ್ಸಲ್ಲೆಲ್ಲ ಗಲಿಬಿಲಿ. ಡ್ರೈವರ್ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿ ಎದ್ದು ಬಂದು ಕಂಡಕ್ಟರ್ ಬಳಿಯಲ್ಲಿ ಏನೋ ಪಿಸುಗುಟ್ಟುತ್ತಿದ್ದ. ಆಚೀಚೆ ಕುಳಿತವರ ಜೊತೆಗೆ ನಾನೂ ಕಿರುಚಿದೆ, ದಯವಿಟ್ಟು ಹತ್ತಿರದ ಆಸ್ಪತ್ರೆಗೆ ಬಸ್ಸನ್ನು ಬೇಗನೆ ತೆಗೆದುಕೊಂಡು ಹೋಗಿ ಎಂದು. ಎಲ್ಲರ ಮುಖ ಬಿಳಿಚಿಕೊಂಡಿತ್ತು. ಅವಳು ಗಂಡನನ್ನು ಅಲುಗಾಡಿಸುತ್ತಲೇ ಇದ್ದಳು. ಅವನು ನನ್ನ ಮುಂದೆಯೇ ಕೂತಿದ್ದ. ನಾನು ಮರಗಟ್ಟಿ ಹೋಗಿದ್ದೆ.

body6ಡ್ರೈವರ್ ಮುಖ್ಯ ರಸ್ತೆ ಬಿಟ್ಟು ಒಳ ರಸ್ತೆಗೆಲ್ಲೋ ಬಸ್ಸನ್ನು ತಿರುಗಿಸಿ ಸರ್ಕಾರಿ ಆಸ್ಪತ್ರೆಯೊಂದರ ಬಳಿ ನಿಲ್ಲಿಸಿದ. ಕೆಲವು ಹುಡುಗರು ಅವನನ್ನು ಎತ್ತಿಕೊಂಡು ಆಸ್ಪತ್ರೆಯೊಳಗೆ ಕರೆದೊಯ್ದರು. ಉಳಿದವರು ಬೇಗಬೇಗನೆ ಎಲ್ಲರಿಂದ ದುಡ್ಡು ಸಂಗ್ರಹಿಸಿ ಮಗನ ಕೈಗಿತ್ತರು. ಅವನು ಅದನ್ನು ನಮ್ಮ ಕಾಲಡಿಗೆಸೆದು ಆಸ್ಪತ್ರೆಯ ಒಳಗೋಡಿದ. ನಿಧಾನಕ್ಕೆ ಒಬ್ಬೊಬ್ಬರೆ ಭಾರ ಹೆಜ್ಜೆಗಳನ್ನಿಟ್ಟು ಬಸ್ಸಿನ ಒಳಗೆ ಬಂದರು. ನಾನು ನನ್ನ ಪಕ್ಕ ಕುಳಿತವರನ್ನು ಏನಾಯಿತು ಸರ್ ಎಂದೆ. ಅವನು ಆಗಲೇ ಸತ್ತು ಹೋಗಿದ್ದ, ನಿನಗೆ ಗೊತ್ತಾಗಲಿಲ್ಲವೇನಮ್ಮ ಎಂದು ಅವರು ಕೇಳಿದರು.

ಇಲ್ಲ, ನನಗೆ ಗೊತ್ತಾಗಿರಲಿಲ್ಲ. ಕೆಲವೇ ಸೆಕೆಂಡುಗಳ ಮುಂಚೆ ನನ್ನ ಮುಂದೆಯೇ ಕುಳಿತು, ಚೂರು ಚೂರೇ ಎಳನೀರು ಕುಡಿದು ಸಣ್ಣಗೆ ಕೆಮ್ಮುತ್ತಿದ್ದವ, ತಟಸ್ಥನಾಗಿ ಕುಳಿತಾಗ, ಅವನು ಸತ್ತುಹೋದನೆಂದು ನನಗೆ ಗೊತ್ತಾಗಲಿಲ್ಲ. ಕಾರಲ್ಲಿ ಕರೆದೊಯ್ದಿದ್ದರೆ ಬದುಕುತ್ತಿದ್ದನಾ ಎಂದು ಅವರನ್ನು ಕೇಳಿದೆ. ಅವರು ಮುಂದೆ ಮಾತನಾಡಲಾಗದೆ ಬೇರೆಲ್ಲೋ ದೃಷ್ಟಿ ನೆಟ್ಟು ಸುಮ್ಮನೆ ಕುಳಿತರು. ಬಸ್ಸು ಮತ್ತೆ ಮೈಸೂರಿನ ಕಡೆಗೋಡಿತು.

ಮಧ್ಯಪ್ರದೇಶದಲ್ಲೆಲ್ಲೋ ಬಸ್ಸಿನಲ್ಲಿರುವ ಶವವನ್ನು ಕೆಳಗಿಳಿಸಲೇಬೇಕೆಂದು ಜನರೆಲ್ಲ ಹಠ ಹಿಡಿದರಂತೆ. ಆದರೆ ಅಂದು ನಾವೆಲ್ಲ ಆಸ್ಪತ್ರೆಯ ಕಡೆಗೆ ಬಸ್ಸು ತಿರುಗಿಸಿ ಎಂದು ಹಠ ಹಿಡಿದಿದ್ದೆವು. ಆದರೇನಾಯಿತು?

ಬರಿಯ ಅನುಕಂಪವೊಂದರಿಂದ ಅವನನ್ನು ಉಳಿಸಲಾಗಲಿಲ್ಲ. ಶವ ಸಾಗಿಸುವುದು ಆಚೆಗಿರಲಿ, ಮೊದಲು ಅವನೇಕೆ/ಅವಳೇಕೆ ಶವವಾದರೆಂದು ನೋಡಿದರೆ, ಕ್ರೂರ ಅಣಕದ ಅರಿವಾದೀತು. ಇನ್ನೂ ದುರಂತವೆಂದರೆ, ಅರಿವಾದರೂ ಸಹ, ಹೀಗೆ ಬರೆದು, ಮಾತಾಡಿ, ಕೈಕಟ್ಟಿ ಕುಳಿತಿರಬೇಕಾದ ನಮ್ಮಂತವರ ಪರಿಸ್ಥಿತಿ.

2 Comments

  1. Dr. Prabhakar M. Nimbargi
    August 29, 2016
    • Mallappa
      August 29, 2016

Add Comment

Leave a Reply