Quantcast

ಬಬ್ಬು ಸ್ವಾಮಿ ಲೇಖನ ಪ್ರಕಟಿಸಲು ‘ಅವಧಿ’ ಸಿದ್ಧವಿದೆ 

ಕಣ್ಣೀರನ್ನು ಒರೆಸುತ್ತಲೇ ಆಕೆ ಹೊರಗೆ ಹೊರಟಳು..

manjunath kamath

ಮಂಜುನಾಥ್ ಕಾಮತ್

ಜಾತಿಯ ಕಾರಣಕ್ಕೋ, ಬಡವನೆಂಬ ಕಾರಣಕ್ಕೋ ಒಡಿಶಾದಲ್ಲಿ ಆ್ಯಂಬುಲೆನ್ಸ್ ಸಿಗದೆ ದಾನಾ ಸಿಂಗ್ ಮಾಝಿ ತನ್ನ ಹೆಂಡತಿಯ ಶವವನ್ನು ಹೊತ್ತು ಕೊಂಡು ಹೋದ ದಿನವೇ ನನ್ನ ಕ್ಲಾಸಿನಲ್ಲಿ ವಿಶೇಷವೊಂದು ನಡೆದು ಹೋಯ್ತು.

ಪ್ರಥಮ ಬಿ.ಎ ವಿದ್ಯಾರ್ಥಿಗಳಿಗೆ ಹಿಂದಿನ ದಿನ ಅಸೈನ್ ಮೆಂಟ್ ಕೊಟ್ಟಿದ್ದೆ. ಒಂದು, ಉಡುಪಿಯಲ್ಲಿರೋ ಸಾಧಕರನ್ನು ಗುರುತಿಸಿ ಸಂದರ್ಶನ ಮಾಡಬೇಕು. ಎರಡನೆಯದು, ವಿಶೇಷ ಅನ್ನಿಸುವ ಹಾಗೂ ಅತ್ಯಂತ ಕುತೂಹಲದ ವಿಷಯದ ಕುರಿತು ನುಡಿಚಿತ್ರ ಬರೀಬೇಕು.

dalit_pantherಮರು ದಿನದ ಕ್ಲಾಸು. “ಯಾವ ವ್ಯಕ್ತಿ ಹಾಗೂ ಯಾವ ವಿಷಯವನ್ನು ಆಯ್ಕೆ ಮಾಡಿದ್ದೀರಿ, ಆ ಕುರಿತು ಏನಾದ್ರೂ ಕೆಲಸ ಮಾಡಿದ್ದೀರಾ” ಕೇಳಿದೆ. ಎಲ್ರೂ ಅವರವರ ಆಯ್ಕೆಯನ್ನು ಹೇಳುತ್ತಾ ಬಂದರು. ಅದ್ರಲ್ಲೊಂದು ಹುಡುಗಿಯ ಮಾತು ನನ್ನ ಮನಸ್ಸನ್ನು ಕಲುಕಿಬಿಟ್ಟಿತು. ಕ್ಲಾಸಿನ ಎಲ್ಲಾ ವಿದ್ಯಾರ್ಥಿಗಳೂ ಒಮ್ಮೆ ಗಂಭೀರವಾದರು.

ಯಾವತ್ತೂ ಅಷ್ಟೊಂದು ವಿಶ್ವಾಸದಲ್ಲಿ ಮಾತಾಡಿದ್ದೇ ಇಲ್ಲ. ಸ್ವರವೂ ಸಣ್ಣದು. ಕುಳ್ಳ ದೇಹ. ಕುತ್ತಿಗೆಯನ್ನು ಬಗ್ಗಿಸಿಯೇ ಕೂರುತ್ತಿದ್ದಳು. ಆದರೆ ಈ ದಿನ ಮಾತ್ರ ಆಕೆಯೊಳಗೆ ವಿಶಿಷ್ಟ ವಿಶ್ವಾಸವೊಂದಿತ್ತು. ಸ್ವರವೂ ಜೋರಾಗಿತ್ತು. ಕಣ್ಣುಗಳಂತೂ ನನ್ನನ್ನೇ ನೋಡುತ್ತಿದ್ದವು.

“ಕುತೂಹಲ, ವಿಶೇಷ ಅಂದ್ರಲ್ವ ಸರ್… ನಂಗೆ ಬಬ್ಬು ಸ್ವಾಮಿಯ ಬಗ್ಗೆ ಬರೀಬೇಕೂಂತ ಆಸೆ ಇದೆ. ಅದ್ರ ಬಗ್ಗೆ ಇದ್ದ ಒಂದು ಪುಸ್ತಕವನ್ನು ಓದಿ ಬಂದಿದ್ದೇನೆ” ಎಂದಳು.

ನನಗೆ ಆ ವಿಷಯ ಅಷ್ಟೊಂದು ಆಸಕ್ತಿ ಅನ್ನಿಸಲಿಲ್ಲ. ದೈವದ ಬಗ್ಗೆ, ದೇವರ ಬಗ್ಗೆ, ದೇವಸ್ಥಾನದ ಬಗ್ಗೆ ನನಗಂತೂ ಕುತೂಹಲ ಅಷ್ಟಕ್ಕಷ್ಟೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು. ಅವರ ಅಭಿರುಚಿ, ಆಸಕ್ತಿ, ಕುತೂಹಲಗಳನ್ನೇ ಪೋಷಿಸಬೇಕೆಂದು “ವೆರೀ ಗುಡ್, ಚೆನ್ನಾಗಿದೆ, ಅದನ್ನೇ ಬರೆಯಿರಿ” ಅಂದೆ.

ಆ ವಿಷಯ ಹೇಳುತ್ತಿದ್ದಾಗ ಅವಳ ಮುಖದಲ್ಲಿ ಹೆಚ್ಚಿದ್ದ ಕಳೆ, ವಿಭಿನ್ನ ಆವೇಷದ ಬಗ್ಗೆ ಹೊಗಳಿದೆ. ಅಷ್ಟೇ. ಮುಂದೆ ಬೇರೆಯವರನ್ನು ಕೇಳೋದಕ್ಕೆಂದು ಬೆರಳನ್ನು ಹುಡುಗರ ಕಡೆಗೆ ತಿರುಗಿಸುತ್ತೇನೆ ಈ ಹುಡುಗಿ ಅಳಲು ಶುರು.

ಇಷ್ಟು ದಿನಗಳಲ್ಲಿ ಅವಳು ಮಾತಾಡಿದ್ದೇ ಇಲ್ಲ. ಇವತ್ತು ನೋಡಿದ್ರೆ ಮಾತಾಡಿದ್ದು ಮಾತ್ರವಲ್ಲ ಜೋರಾಗಿ ಅಳುತ್ತಿದ್ದಾಳೆ. ತಡೆಯುವುದು ಸರಿ ಅನ್ನಿಸಲಿಲ್ಲ. ದುಃಖವಿದ್ದರೆ ಎಲ್ಲವೂ ಹೊರಹೋಗಲಿ ಎಂದು ಅವಳಷ್ಟಕ್ಕೇ ಅಳಲು ಬಿಟ್ಟೆ.

ಸ್ವಲ್ಪ ಹೊತ್ತಲ್ಲಿ ಸುಧಾರಿಸಿಕೊಂಡ ಮೇಲೆ, ನಿನ್ನ ಮನಸ್ಸಲ್ಲಿರೋದೆಲ್ಲವನ್ನೂ ಹೇಳಿಕೊಳ್ಳಮ್ಮಾ ಎಂದೆ. ಕಣ್ಣೀರು ಮತ್ತೆ ಧಾರೆಯಾಗಿ ಸುರಿಯುತ್ತಿದ್ದರೂ ಆದಷ್ಟು ನಿಯಂತ್ರಿಸಿಕೊಂಡು ಮಾತನಾಡಿದಳು. ಅವಳ ಮಾತು ನಿಜಕ್ಕೂ ನಮಗೆಲ್ಲ ಮಾರ್ಗದರ್ಶಕವಾಗಿತ್ತು. ದಲಿತರ ಬದುಕಿನ ಕನ್ನಡಿಯಾಗಿತ್ತು.

“ಬಬ್ಬು ಸ್ವಾಮಿ ದಲಿತೋದ್ಧಾರಕ್ಕಾಗಿ ದುಡಿದವರು. ಮೇಲ್ವರ್ಗದವರ ಶೋಷಣೆಯ ವಿರುದ್ಧ ಹೋರಾಡಿದವರು. ಅವರು ನಮ್ಮ ಪರವಾಗಿ ಮಾತಾಡಿದುದ್ದಕ್ಕೆ ಅವ್ರನ್ನೇ ಹಿಂಸಿಸಿ ಹಿಂಸಿಸಿ ಜೀವಂತ ಸಾಯಿಸುತ್ತಿದ್ದರಂತೆ. ಅದರೂ ಛಲ ಬಿಡದೇ ಹೋರಾಡಿದ್ದಾರೆ. ನಮಗಿಂದು ಅವರೀಗ ಶಕ್ತಿ. ಅವರು ಬದುಕಿದ ದಾರಿಯೇ ಕುತೂಹಲ. ನನ್ನ ಮೊದಲ ಲೇಖನ ಅವರ ಬಗ್ಗೆ ಬರೀಬೇಕು. ಅವರೆಂದರೆ ನನಗೆ ಪ್ರೀತಿ” ಎಂದವಳು ಮತ್ತೆ ಅಳಲು ಪ್ರಾರಂಭಿಸಿದಳು.

ನನಗೊಂದು ಸಂಶಯ ಬಂತು. ಅವಳು ಭಕ್ತಿಯ ಪರಾಕಾಷ್ಟೆಯಲ್ಲಿ ಅಳುತ್ತಿದ್ದಾಳಾ? ಯಾವುದೇ ದೈವ, ದೇವರನ್ನು ಅಷ್ಟೊಂದು ಹಚ್ಚಿಕೋ ಬಾರದು. ಮಿತಿ ಮೀರಿದರೆ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತೇವೆ ಅನ್ನೋದು ನನ್ನ ಅಭಿಪ್ರಾಯ. ಆದ್ರೆ ಅದನ್ನು ಹೇಳದೆ, ಹೇರದೆ ಮತ್ತೆ ಅವಳನ್ನು ಕೇಳಿದೆ, “ನೀನೀಗ ಅಳುತ್ತಿರೋದು ಯಾರಿಗಾಗಿ ದೇವರಿಗಾಗಿಯಾ? ಅಥವಾ….”

manjunatha kamath classನನ್ನ ಮಾತನ್ನು ಅವಳೇ ತಡೆದು “ಅಲ್ಲ ಸರ್. ನಾನು ಅವರನ್ನು ದೇವರಾಗಿ ನೋಡುತ್ತಿಲ್ಲ. ನಮ್ಮ ನಾಯಕರಾಗಿ ಕಾಣುತ್ತಿದ್ದೇನೆ. ನಮಗೀಗ ತಕ್ಕ ಮಟ್ಟಿನ ಸ್ಥಾನಮಾನವಿದೆ. ಆದರೆ ನಮ್ಮ ಹಿಂದಿನವರು ಜಾತಿಯ ಕಾರಣಕ್ಕೆ ಅದೆಷ್ಟು ಕಷ್ಟ ಪಟ್ಟಿದ್ದಾರಲ್ಲ, ನಮ್ಮ ಉದ್ಧಾರಕ್ಕಾಗಿ ದುಡಿದವರೂ ಹಿಂಸೆ ಅನುಭವಿಸಿದ್ದಾರಲ್ವಾ… ಇದನ್ನೆಲ್ಲಾ ಯೋಚಿಸಿದಾಗ ಅಳು ಬರುತ್ತೆ ಸರ್” ಎಂದು ಮಾತು ನಿಲ್ಲಿಸಿದಳು.

ನಿಜಕ್ಕೂ ನನಗೆ ದಲಿತರ ಬದುಕಿನ ಕುರಿತು ಹೆಚ್ಚಿನ ಅರಿವು ಇರಲಿಲ್ಲ. ಅವರಿಗೆ ರಿಸರ್ವೇಷನ್ ಕೊಟ್ಟಿರೋ ಕುರಿತು ಯಾರಾದರೂ ಅಸಾಮಾಧಾನ ವ್ಯಕ್ತಪಡಿಸಿದರೆ ನಾನೂ ಅದಕ್ಕೆ ಹೂಂಗುಡುತ್ತಿದ್ದೆ. ಆದರೆ ಈ ಹುಡುಗಿಯ ಕಣ್ಣೀರು ನನ್ನ ಕಣ್ಣನ್ನು ತೆರೆಸಿತು. ಅಂಬೇಡ್ಕರ್ ಬದುಕಿನ ಬಗ್ಗೆ ಓದಿದ್ದೇನೆ, ಸಿನಿಮಾನೂ ನೋಡಿದ್ದೇನೆ. ಆದರದು ಸಿನಿಕತೆಯಂತೆಯೇ ಕಾಣುತ್ತಿತ್ತು. ಗಂಭೀರವಾಗಿ ಆಲೋಚನೆಗೆ ಹೋಗಿರಲಿಲ್ಲ. ಆದರೀ ಹುಡುಗಿಯ ಮಾತು, ಅದೇ ದಿನ ನಡೆದ ಹೆಣ ಹೊತ್ತುಕೊಂಡು ಹೋದ ಘಟನೆ, ದಲಿತರ ಹೋರಾಟಗಳು ಮೌಲ್ಯ ಪಡೆಯುತ್ತಾ ಬಂದವು. ಆಲೋಚನೆಗೆ ಹಚ್ಚಿದವು.

ಉಳಿದ ವಿದ್ಯಾರ್ಥಿಗಳಂತೂ ಅವಳ ಮಾತು ಕೇಳಿ ಅವಕ್ಕಾಗಿದ್ದರು. ದಲಿತರೆಂದರೆ ಇಷ್ಟು ಕಷ್ಟವಿದೆ ಎಂಬುದು ಅವರಿಗೂ ಗೊತ್ತಿರಲಿಲ್ಲವಂತೆ. ಚೋಮನದುಡಿ ನಾಟಕದಲ್ಲಿ ನಟಿಸಿದ್ದ ಇಬ್ಬರು, “ಆ ನಾಟಕದ ರೀಡಿಂಗಲ್ಲೇ ಅಳುವಂತಾಗಿತ್ತು ಸರ್. ಆದರೆ ಅದೆಲ್ಲವೂ ನಿಜ, ಇವತ್ತಿಗೂ ಜೀವಂತವಾಗಿದೆ ಎಂಬುದನ್ನು ಅವಳ ಕಣ್ಣೀರು ನೋಡಿಯೇ ಗೊತ್ತಾಗಿದ್ದು ಸರ್” ಅಂದರು.

ಕೊನೆಗೆ ನಾನು ಆ ಹುಡುಗಿಗೆ ಹೇಳಿದ್ದಿಷ್ಟು ” ನಿನ್ನ ಕಣ್ಣೀರಿಗೆ ಬೆಲೆ ಇದೆ. ಇನ್ನು ಮುಂದೆ ದಲಿತರು ಯಾರೂ ಅಳಬಾರದು. ಸಮಾಜ ಸುಧಾರಕಿ ನೀನಾಗಬೇಕು. ನಿನ್ನ ಜೊತೆಗೆ ನಾವಿದ್ದೇವೆ. ಬಬ್ಬು ಸ್ವಾಮಿಯ ಬಗ್ಗೆ ಆದಷ್ಟು ಬೇಗ ಬರೆದು ಪತ್ರಿಕೆಗೆ ಕಳಿಸು. ನಿನ್ನ ಮನಸ್ಸಿನ ಭಾವನೆಗಳನ್ನೆಲ್ಲಾ ವ್ಯಕ್ತಪಡಿಸು”.

ಅಷ್ಟನ್ನು ಹೇಳುವಾಗಲೇ ಬೆಲ್ಲು ಬಡಿಯಿತು. ಕಣ್ಣೀರನ್ನು ಒರೆಸುತ್ತಲೇ ಆಕೆ ಹೊರಗೆ ಹೊರಟಳು. ಅವಳ ಜೊತೆ ಜೊತೆಗೇ ಉಳಿದವರೂ ಹೊರಟರು.

Add Comment

Leave a Reply