Quantcast

ಒಮ್ಮೆಲೇ ಪ್ರೇಮಾ ಚೌಹಾಣ್ ನೆನಪಾದಳು..

manjunath kamath

ಮಂಜುನಾಥ್ ಕಾಮತ್

ಚಾಕಿನ ಸಣ್ಣ ಪೀಸು. ಕ್ಲಾಸ್ ರೂಮಿನ ಬಾಗಿಲ ಬಳಿ ಬಿದ್ದಿತ್ತು. ಇನ್ನೇನು ಅದನ್ನು ತುಳಿಯವವನಿದ್ದೆ.

ಒಮ್ಮೆಲೇ ಪ್ರೇಮಾ ಚೌಹಾಣ್ ನೆನಪಾದಳು.

ಬಗ್ಗಿ, ಹೆಕ್ಕಿ, ಬಾಕ್ಸಿನೊಳಗಿಟ್ಟೆ. ಅದು ಸವೆದು ಹೋಗುವವರೆಗೂ ಬರೆಯುತ್ತೇನೆ.

ಪ್ರೇಮಾ ಎರಡು ವರುಷದ ಹಿಂದಿನ ಬ್ಯಾಚಿನ ವಿದ್ಯಾರ್ಥಿನಿ. ಈಗ ಕೊಣಾಜೆಯಲ್ಲಿ ಎಂ.ಸಿ.ಜೆ ಓದುತ್ತಿದ್ದಾಳೆ. ಚಾಕಿನ ಪೀಸ್ ಬಿದ್ದಿರೋದನ್ನು ಕಂಡಾಗಲೆಲ್ಲ ಅವಳು ಕಣ್ಣೆದುರಿಗೆ ಬರುತ್ತಾಳೆ.

chalk piece2ಆ ಒಂದು ಸಂಜೆ. ಕ್ಲಾಸ್ ಮುಗಿದರೂ ಅವಳು ಕ್ಲಾಸ್ ಒಳಗೇ ಇದ್ದಳು. ಉಳಿದೋರೆಲ್ಲ ಹೊರಹೋಗಿದ್ದರೂ ಅವಳೊಬ್ಬಳೇ ರೂಮಿನೊಳಗಿದ್ದು ಅದೇನೋ ಹುಡುಕುತ್ತಿದ್ದಳು. ಡಿಪಾರ್ಟ್ಮೆಂಟಿನೊಳಗಿದ್ದ ನಾನು ಕ್ಲಾಸಿಗೆ ಹೋಗಿ ಏನಮ್ಮಾ ಅಂದೆ. ಏನಿಲ್ಲ ಸರ್ ಅಂದೋಳು ಡಸ್ಟ್ ಬಿನ್ ಬಳಿ ಬಂದು ಹುಡುಕಲು ಸ್ಟಾರ್ಟ್ ಮಾಡಿದಳು. ಅದರೊಳಗೆ ಕೈ ಹಾಕಿ ಎರಡೋ ಮೂರೋ ತುಂಡು ಚಾಕುಗಳನ್ನು ಹೆಕ್ಕಿ ಇದು ಬೇಕಾಗಿತ್ತು ಸರ್. ಸಂಜೆ ಓದೋಕೆ ಒಂದಷ್ಟು ಹುಡುಗರು ಬರುತ್ತಾರೆ. ಬರಿಯೋಕೆ ಬೇಕಿತ್ತು ಎಂದು ಅದನ್ನು ತೆಗೆದುಕೊಂಡು ಹೋದಳು.

****

ಪ್ರೇಮ ವಲಸೆ ಕಾರ್ಮಿಕರೊಬ್ಬರ ಮಗಳು. ಉಡುಪಿಯ ಬೀಡಿನ ಗುಡ್ಡೆಯಲ್ಲಿ ಅವರದೊಂದು ಗುಡಿಸಲು. ಪ್ಲಾಸ್ಟಿಕ್ಕಿನದ್ದೇ ಮನೆ. ಒಂದೇ ಕೋಣೆ. ಅದರಳೊಳಗೇ ಅಡುಗೆ, ನಿದ್ದೆ, ಬಚ್ಚಲು ಮನೆ. ಬಗಲಲ್ಲಿ ಹುತ್ತವೂ ಇತ್ತು. ನಾಗರ ಹಾವುಗಳಂತೂ ನಿತ್ಯಸಂಚಾರಿ.

ಅಂತಹ ವಾತಾವರಣದಲ್ಲಿ ಬೆಳೆದ ಆ ಹುಡುಗಿ ಇದೀಗ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರೋದೇ ಒಂದು ಕ್ರಾಂತಿ. ಅವಳ ಪಾಲಿಗದು ಸುಲಭದ ತುತ್ತು ಆಗಿರಲೇ ಇಲ್ಲ. ಕೆಲಸಮಾಡಿಕೊಂಡಿದ್ದರೆ ಸಾಕೆಂದು ಶಾಲೆಗೆ ಕಳುಹಿಸದೆ ಗುಡಿಸಲಲ್ಲೇ ಕೂರಿಸಿದ್ದರು. ಆದರೆ ಹಟಕ್ಕೆ ಬಿದ್ದ ಹುಡುಗಿ ತನ್ನನ್ನು ಶಾಲೆಗೆ ಕಳುಹಿಸಲೇಬೇಕೆಂದು ಉಪವಾಸ ಕೂತಳು. ಮನೆಯವ್ರ ಮನಸನ್ನು ಬದಲಾಯಿಸಿ ಅಕ್ಷರ ಕಲಿತಳು. ತಾನೊಬ್ಬಳು ಕಲಿತರೆ ಸಾಲದು. ತನ್ನೊಂದಿಗೆ ಕೊಳೆಗೇರಿಯ ಇತರ ಮಕ್ಕಳೂ ಶಾಲೆಗೆ ಬರುವಂತೆ ಮಾಡಿದವಳು.
****

chalk piece3ಚಾಕಿನ ತುಂಡುಗಳನ್ನು ಕೊಂಡುಹೋದ ವಾರದ ನಂತರ ಒಂದು ಸಂಜೆ. ನಾನೂ ಸುಚಿತ್ ಕಲ್ಪನಾ ಥಿಯೇಟರಿಗೆ ಸಿನಿಮಾಕ್ಕೆಂದು ಹೊರಟವರು ಬೀಡಿನಗುಡ್ಡೆ ರಸ್ತೆ ಹಿಡಿದಿದ್ದೆವು. ಅದೆಷ್ಟೋ ಹುಡುಗ್ರಿಗೆ ಕಲಿಸ್ತೇನೆ ಅಂದಿದ್ದ ಪ್ರೇಮಾಳ ನೆನಪಾಗಿ, ಯಾರಿಗೆ ಕಲಿಸ್ತಾಳೆ ನೋಡವೆಂದು ಆಕೆಯ ಗುಡಿಸಲಿಗೆ ಹೋದೆವು. ನಾನೇನೋ ಒಂದಿಬ್ರು ಮಕ್ಳಿರ್ಬಹುದು ಅಂದ್ಕೊಂಡಿದ್ದೆ. ಆದ್ರೆ ಹತ್ತಕ್ಕೂ ಹೆಚ್ಚು ವಲಸೆ ಕಾರ್ಮಿಕರ ಮಕ್ಕಳು ಆ ಗುಡಿಸಲಿನೊಳಗಿದ್ದರು. ಹುಡುಗ ಹುಡುಗಿಯರು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಕಲಿಯುವ ವಿದ್ಯಾರ್ಥಿಗಳು. ಅವ್ರೆಲ್ಲರಿಗೂ ಉಚಿತ ಟ್ಯೂಷನ್ ಪ್ರೇಮ ಕೊಡುತ್ತಿದ್ದಳು.

ಟ್ಯೂಷನ್ ಅನ್ನೋದಕ್ಕಿಂತಲೂ ಹೆಚ್ಚಾಗಿ ಅವ್ರಿಗೆ ಶಿಕ್ಷಣದ ಪ್ರಾಮುಖ್ಯತೆಯ ಪಾಠ ಹೇಳಿಕೊಡುತ್ತಿದ್ದಳು. ತಂದೆ ತಾಯಿಯರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಉದಾಸೀನ. ದುಡಿದು ತರೋರಿಗಷ್ಟೇ ಅಲ್ಲಿ ಮಾನ್ಯತೆ. ಅದೆಷ್ಟೋ ಪುಟಾಣಿಗಳು ಉಡುಪಿ, ಮಣಿಪಾಲದಲ್ಲಿ ಭಿಕ್ಷೆಗಾಗಿ ಕೈಚಾಚೋದು ಮಾಮೂಲಾಗಿತ್ತು. ಅದನ್ನು ತಪ್ಪಿಸಬೇಕು. ತನ್ನ ಕೊಳೆಗೇರಿಯ ಪುಟಾಣಿಗಳೆಲ್ಲಾ ಶಾಲೆಗೆ ಹೋಗಬೇಕು.ಅವ್ರ್ಯಾರೂ ದಿಕ್ಕುತಪ್ಪಬಾರದೆಂಬ ಉದ್ದೇಶದಿಂದ ಕಲಿಸುತ್ತಿದ್ದಳು.

ಸ್ಲೇಟು ಚಾಕುಗಳನ್ನು ಉಪಯೋಗಿಸಿ ಇಂಗ್ಲೀಷು, ಗಣಿತ, ವಿಜ್ಞಾನಗಳನ್ನೆಲ್ಲಾ ಅವರಿಗೆ ಕಲಿಸುತ್ತಿದ್ದಳು. ತುಂಡಾಗಿ ಬಿದ್ದಿದ್ದ ಚಾಕುಗಳು ಕೊಳೆಗೇರಿಯ ಗುಡಿಸಲಿನಲ್ಲಿ ಅಕ್ಷರಗಳಾಗಿ ಬೆಳಗುತ್ತಿದ್ದವು.

ಪತ್ರಿಕೋದ್ಯಮ ಅವಳದೇ ಆಯ್ಕೆ. ಎಂ.ಸಿ.ಜೆ ಆದಮೇಲೆ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಬೇಕೆಂಬುದು ಗುರಿ. ಅವಳ ಕನಸೆಲ್ಲಾ ನನಸಾಗಲಿ. ವಲಸೆಕಾರ್ಮಿಕರ ಅಭಿವೃದ್ಧಿಗಾಗಿ ಹೋರಾಡುತ್ತಿರೋ ಅವಳಿಗೆ ಒಳ್ಳೆಯದಾಗಲಿ.

(ಪ್ರೇಮ ಈಗ ಬೀಡಿನಗುಡ್ಡೆಯಲ್ಲಿಲ್ಲ. ವಿಪರೀತ ಅನಾರೋಗ್ಯಕ್ಕೆ ತುತ್ತಾದ ಕಾರಣಕ್ಕೆ ಬೇರೆ ಬಾಡಿಗೆ ಮನೆಯನ್ನು ಹುಡುಕ್ಕೊಂಡಿದ್ದಾರೆ)

ಚಿತ್ರಗಳು ಮೂರು ವರುಷ ಹಿಂದಿನದು. ಸುಚಿತ್ ಕೋಟ್ಯಾನ್ ತೆಗೆದಿದ್ದು.

chalk piece4

 

Add Comment

Leave a Reply