Quantcast

ಸಿ ಎನ್ ಆರ್ ಕಂಡಂತೆ ಪುರಂದರ ರೈ

ಆತ್ಮಾವೈ ಪುತ್ರ ನಾಮಾಸಿ

CNR

ಸಿ. ಎನ್. ರಾಮಚಂದ್ರನ್

ಕಳೆದ ಶತಮಾನದ 40ರ ದಶಕದಲ್ಲಿ ತಂದೆಯೊಬ್ಬರು ತಮಗೆ ಮೊದಲ ಮಗ ಹುಟ್ಟಿದಾಗ, ಅವರ ಕುಟುಂಬಕ್ಕೆ ತುಂಬಾ ಆತ್ಮೀಯರಾಗಿದ್ದ ಶಿವರಾಮ ಕಾರಂತರನ್ನು ಭೇಟಿ ಮಾಡಿ ಮಗನಿಗೆ ಒಂದು ಹೆಸರನ್ನು ಆವರು ಸೂಚಿಸಬೇಕೆಂದು ಕೋರುತ್ತಾರೆ. ಆಗ ಕಾರಂತರು ‘ವಿವೇಕ ಎಂದು ಹೆಸರಿಡಿ’ ಎನ್ನುತ್ತಾರೆ. ಆ ತಂದೆ ತಮಗೆ ಸರಿಯಾಗಿ ಕೇಳಿಸಲಿಲ್ಲವೋ ಏನೋ ಎಂಬ ಅಳುಕಿನಿಂದ ಮತ್ತೊಮ್ಮೆ ‘ವಿವೇಕಾನಂದ ಎಂತಲೇ?’ ಎಂದು ಕೇಳುತ್ತಾರೆ. ಕಾರಂತರು ‘ಏನೂ ಬೇಡ, ವಿವೇಕ ಸಾಕು. ವಿವೇಕವಿದ್ದರೆ ಆನಂದ ತಾನಾಗಿಯೇ ಬರುತ್ತದೆ’ ಎನ್ನುತ್ತಾರೆ. ಆ ತಂದೆ ಆಗ ಮಂಗಳೂರಿನಲ್ಲಿದ್ದ ಅಗ್ರಾಳ ಪುರಂದರ ರೈ.
********

ಡಾ. ವಿವೇಕ ರೈ ಅವರನ್ನು ನಾನು ಮೊದಲ ಬಾರಿಗೆ ಭೇಟಿ ಮಾಡಿದುದು 1984ರಲ್ಲಿ ನಾನು ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗವನ್ನು ಸೇರಿದಾಗ. ಅಂದಿನಿಂದಲೂ ಅವರ ಹಾಗೂ ನನ್ನ ಸ್ನೇಹ ಅಬಾಧಿತವಾಗಿ ಮುಂದುವರೆದಿದೆ. ಕಾಲಕ್ರಮದಲ್ಲಿ ಅವರನ್ನು ಅರ್ಥಮಾಡಿಕೊಳ್ಳುತ್ತಾ, ಅವರ ಸಾಧನೆಗಳನ್ನು ಗಮನಿಸುತ್ತಾ ಬಂದಿರುವ ನನಗೆ ಇಂದಿಗೂ ಅವರ ಬಗ್ಗೆ ಆಶ್ಚರ್ಯವನ್ನು ಮೂಡಿಸುವ ಸಂಗತಿಯೆಂದರೆ ಭಿನ್ನ ಕ್ಷೇತ್ರಗಳಲ್ಲಿ ಅವರಿಗಿರುವ ಅಭಿರುಚಿ ಮತ್ತು ಆಳವಾದ ಪರಿಶ್ರಮ.

purandara rai coupleಕನ್ನಡ ಭಾಷೆ-ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ವಿದ್ವತ್ತು ಮತ್ತು ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಬೋಧನೆ; ತುಳು-ಕನ್ನಡ ಮೌಖಿಕ ಪರಂಪರೆಗಳ ವ್ಯಾಪಕ ಅಧ್ಯಯನ; ಕನ್ನಡ ವಿವಿ, ಹಂಪಿ, ಮತ್ತು ಮೈಸೂರಿನ ‘ಮುಕ್ತ ವಿಶ್ವವಿದ್ಯಾನಿಲಯ’ ಇವುಗಳ ಕುಲಪತಿಗಳಾಗಿ ಉಚ್ಚ ಮಟ್ಟದಲ್ಲಿ ಯಶಸ್ವಿ ಆಡಳಿತಾನುಭವ; ಕನ್ನಡದಲ್ಲಿ 20ಕ್ಕೂ ಮಿಕ್ಕಿ ವಿಮರ್ಶನ ಕೃತಿಗಳ ರಚನೆ; ಅಂಕಣಕಾರರು, ಅನುವಾದಕರು -ಇಷ್ಟು ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಲು ವಿವೇಕ ರೈ ಅವರಿಗೆ ಹೇಗೆ ಸಾಧ್ಯವಾಯಿತು?

ಈ ಪ್ರಶ್ನೆಗೆ ಉತ್ತರ, ಪ್ರಾಯಃ, ವಿವೇಕ ರೈ ಅವರ ತಂದೆ ಪುರಂದರ ರೈ ಅವರ ಬದುಕಿನಲ್ಲಿದೆ ಎಂದು ಕಾಣುತ್ತದೆ. ಪುರಂದರ ರೈ (1916-2001) ಅವರ ಬದುಕೂ ಕೂಡಾ ಭಿನ್ನ ಆಸಕ್ತಿಗಳ ಹಾಗೂ ಭಿನ್ನ ವೃತ್ತಿಗಳ ರೋಚಕ ಕಥನ. ಬಂಟ ಸಮುದಾಯದ ಒಂದು ಕೃಷಿಕ ಕುಟುಂಬದಲ್ಲಿ ಜನಿಸಿದ ಪುರಂದರ ರೈ ಅನೇಕ ವರ್ಷಗಳ ಕಾಲ ಆಳುಗಳೊಡನೆ ತಾವೂ ಬಾಲ ಕೃಷಿ ಕಾರ್ಮಿಕರಾಗಿ ಗದ್ದೆಯಲ್ಲಿ ದುಡಿದವರು. ಬಡತನದ ಕಾರಣದಿಂದ ಅಲ್ಲಲ್ಲಿ ನಿಂತು ನಿಂತು ಮುಂದುವರೆಯುತ್ತಿದ್ದ ಅವರ ಶಿಕ್ಷಣ ಸ್ವಾತಂತ್ರ್ಯ ಹೋರಾಟದ ಕಾರಣದಿಂದ 1936ರಲ್ಲಿ ಹೈಸ್ಕೂಲು ಶಿಕ್ಷಣಕ್ಕಷ್ಟೇ ಸೀಮಿತವಾಯಿತು.

ಅಂದು ಕರಾವಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಕುಳಾಲು ಅಣ್ಣಪ್ಪ ಭಂಡಾರಿ, ಕುಳಾಲು ಪದ್ಮನಾಭ ರೈ, ಅಗರಿ ಲಕ್ಕಪ್ಪ ರೈ ಮುಂತಾದವರ ಭಾಷಣಗಳನ್ನು ಕೇಳಿ, ತಾವೂ ಆ ಚಳುವಳಿಗೆ ನೇರವಾಗಿ ಧುಮುಕಿದರು; ಮತ್ತು 1938ರಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಸಕ್ರಿಯ ಕಾರ್ಯಕರ್ತರಾಗಿ, ಅವಕಾಶ ಸಿಕ್ಕಾಗಲೆಲ್ಲಾ ಸ್ವಾತಂತ್ರ್ಯ ಚಳುವಳಿಯ ಉದ್ದೇಶ-ಸ್ವರೂಪಗಳನ್ನು ಕುರಿತು ಮತ್ತು ರಾಷ್ಟ್ರೀಯ ನೆಲೆಯ ನಾಯಕರಾದ ಗಾಂಧಿ, ನೆಹರೂ, ಮುಂತಾದವರನ್ನು ಕುರಿತು ಸಾರ್ವಜನಿಕ ಭಾಷಣಗಳನ್ನು ಮಾಡಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ ಪುಣಚಾ ಪೆರಿಯಾಲ್ತಡ್ಕದಲ್ಲಿ ನಡೆದ ದೀರ್ಘ ಮೆರವಣಿಗೆಯಲ್ಲಿ ಅವರ ಹೆಗಲಿನ ಮೇಲೆ ದಲಿತ ಬಾಲಕನೊಬ್ಬನನ್ನು ಕೂರಿಸಿಕೊಂಡು ಮೆರವಣಿಗೆಯ ಮುಂಭಾಗದಲ್ಲಿ ಜೈಕಾರ ಹಾಕುತ್ತಾ ನಡೆಯುತ್ತಾ ಸಂಭ್ರಮಿಸಿದವರು ಪುರಂದರ ರೈ. 1938ರಲ್ಲಿ ಖಾದಿ ಉಟ್ಟ ರೈ ಅವರ ಜೀವನ ಪರ್ಯಂತ ಬೇರೆ ಬಗೆಯ ಉಡುಪು ಧರಿಸಲಿಲ್ಲ.

1943ರಲ್ಲಿ, ಕೊರವಂಜಿ ಪತ್ರಿಕೆಯಲ್ಲಿ ಪ್ರಕಟವಾದ ಸೋಡ್ತಿ ಎಂಬ ಕಥೆಯಿಂದ ಅಗ್ರಾಳರ ಸಾಹಿತ್ಯಕ ಬದುಕು ಪ್ರಾರಂಭವಾಯಿತು. ಅನಂತರ ಅವರ ಇತರ ಕಥೆಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿ, ಅವರ ಮೊದಲ ಕಥಾ ಸಂಕಲನ ರಸಾಯನ 1952ರಲ್ಲಿ ಪ್ರಕಟವಾಯಿತು. ಇಂದಿಗೂ ಪ್ರಗತಿಶೀಲ ಸಂದರ್ಭದಲ್ಲಿ ಬರೆದ ನಮ್ಮೂರ ಮಾರಿ, ದೇವರೆಲ್ಲಿ? ಇಂತಹ ಕಥೆಗಳು ಪ್ರಸ್ತುತವೆನಿಸುತ್ತವೆ. ಸರ್ವೋದಯ ವಾರಪತ್ರಿಕೆಯಲ್ಲಿ ‘ಪರಿಮಳೆಗೆ ಪತ್ರ’ ಎಂಬ ಅಂಕಣ ಮಾಲೆಯನ್ನು ಎರಡು ವರ್ಷಗಳ ಕಾಲ ಬರೆದರು. ಅಗ್ರಾಳರ ಹಾಸ್ಯಪ್ರಜ್ಞೆ, ಕಿರು ವಿವರಗಳಿಗೂ ಅವರು ಕೊಡುವ ಲಕ್ಷ್ಯ, ತಾವು ಪ್ರವಾಸದಲ್ಲಿ ಕಲಿತದ್ದು ಇತರರಿಗೂ ಲಾಭದಾಯಕವಾಗಬೇಕು ಎನ್ನುವ ಕಕ್ಕುಲಾತಿ, ಇವೆಲ್ಲವೂ ಅವರ ನಮ್ಮ ಪ್ರವಾಸಾನುಭವ ಎಂಬ ದೀರ್ಘ ಪ್ರವಾಸ ಕಥನದಲ್ಲಿ ಕಂಡುಬರುತ್ತವೆ.

purandararai34ಒಟ್ಟಾರೆಯಾಗಿ ನೋಡುವುದಾದರೆ, ಅಗ್ರಾಳರು ಕಥಾಸಂಕಲನ, ಪ್ರವಾಸ ಕಥನ, ಅನುವಾದ, ಲೇಖನ ಸಂಕಲನ, ಸಂಪಾದಿಸಿದ ಕೃತಿಗಳು, ಇತ್ಯಾದಿ ಕನ್ನಡದಲ್ಲಿ, ಮತ್ತು ತುಳುವಿನಲ್ಲಿ ಲೇಖನಗಳು ಸೇರಿದಂತೆ ವೈವಿಧ್ಯಮಯ ಸಾಹಿತ್ಯಕ ಕಾರ್ಯಗಳಲ್ಲಿ ಸದಾ ನಿರತರಾಗಿದ್ದರೆಂಬುದು ಗೊತ್ತಾಗುತ್ತದೆ. ಇದರೊಡನೆಯೇ, 1961 ರಿಂದ ಸುಮಾರು 18 ವರ್ಷಗಳ ತನಕ ಪ್ರಜಾವಾಣಿ ಹಾಗೂ ಡೆಕನ್ ಹೆರಾಲ್ಡ್ ಪತ್ರಿಕೆಗಳಿಗೆ ಪುತ್ತೂರಿನಿಂದ ವರದಿಗಾರರಾಗಿ ಕೆಲಸ ಮಾಡಿದರು. ಹಾಗೆಯೇ ಕೆಲವು ವರ್ಷಗಳ ಕಾಲ ಶಾಲಾ ಮಾಸ್ತರರಾಗಿಯೂ ದುಡಿದರು. ಇಷ್ಟೇ ಅಲ್ಲದೆ, ಯೋಗಾನಂದ ಪರಮಹಂಸರ ಆತ್ಮಕಥನದ ಒಂದು ಭಾಗವನ್ನು ಮೆಚ್ಚಿ, ಅದನ್ನು ಇತರರಿಂದ ಅನುವಾದಿಸಿ, ಪವಾಡಗಳ ಸಿದ್ಧಾಂತ ಎಂಬ ಹೆಸರಿನಲ್ಲಿ ಸ್ವತಃ ಅದನ್ನು ಪ್ರಕಟಿಸಿದರು.

ಸಂಸ್ಕೃತಿ, ಶಿಕ್ಷಣ. ರಾಮಾಯಣ, ಇತ್ಯಾದಿಗಳನ್ನು ಕುರಿತು ಆಕಾಶವಾಣಿಯಲ್ಲಿ ಬಿತ್ತರವಾದ ‘ಚಿಂತನ’ ಮಾಲೆಯನ್ನು ರಚಿಸಿದರು. ಕೃಷಿ, ಸಾಹಿತ್ಯ, ಪತ್ರಿಕೆ, ಸ್ವಾತಂತ್ರ್ಯ ಹೋರಾಟ, ಗಾಂಧೀವಾದ, ಅಧ್ಯಾಪನ, ರೈತ ಸಂಘಟನೆ, ವ್ಯಾಪಾರ, ಕಲೆ, ತುಳು, ಮನೆಮದ್ದು –ಹೀಗೆ ಅಪ್ಪನ ಕಾರ್ಯಕ್ಷೇತ್ರಗಳನ್ನು ನೆನಪಿಸಿಕೊಂಡರೆ ಬೆರಗು ಆಗುತ್ತದೆ ಎಂದು ವಿವೇಕ ರೈ ಅವರು ತಮ್ಮ ತಂದೆಯವರ ಬಗ್ಗೆ ದಾಖಲಿಸುವುದು ಅತಿಶಯೋಕ್ತಿ ಎಂದೇನೂ ಅನಿಸುವುದಿಲ್ಲ.

ಅಗ್ರಾಳರದು ಎಂತಹ ವಿಷಮ ಪರಿಸ್ಥಿತಿಯಲ್ಲಿಯೂ ಸ್ವಾಭಿಮಾನಕ್ಕೆ ಸ್ವಲ್ಪವೂ ಕುಂದುಂಟಾಗದಂತಹ ಬದುಕು. ಸ್ವಾಭಿಮಾನವು ಕೊಡುವ ಆತ್ಮಸ್ಥೈರ್ಯದ ಒಂದು ಪ್ರಮುಖ ನಿದರ್ಶನವೆಂದರೆ ಅವರು ಮಂಗಳೂರಿನಲ್ಲಿ ನಡೆದ ಪ್ರಜಾವಾಣಿಯ ವರದಿಗಾರರ ಮತ್ತು ಏಜಂಟ್ ರ ಸಭೆಯಲ್ಲಿ ಎತ್ತಿದ ಪ್ರಶ್ನೆ. ಆ ಸಭೆಯ ಅಧ್ಯಕ್ಷರು ಪ್ರಜಾವಾಣಿಯನ್ನು ಸ್ಥಾಪಿಸಿದ ನೆಟ್ಟಕಲ್ಲಪ್ಪನವರು; ಅವರನ್ನೇ ಅಗ್ರಾಳರು ಕೇಳಿದರು: ನೀವು ಕೊಡುವುದು ತಿಂಗಳಿಗೆ 20 ರೂ ಸಂಭಾವನೆ. ನಾವು ಕಳುಹಿಸಿದ ಸುದ್ದಿ ಪ್ರಕಟವಾಗಿದೆಯೆ ಎಂದು ನೋಡಲು ನಿಮ್ಮ ಪತ್ರಿಕೆಗಳನ್ನು ಕೊಂಡುಕೊಳ್ಳಲು ಈ ಹಣ ಸಾಕಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ನಾವು ಹೇಗೆ ವರದಿ ಮಾಡುವುದು? ನೆಟ್ಟಕಲ್ಲಪ್ಪನವರಿಗೆ ಈ ಪ್ರಶ್ನೆ ಪ್ರಸ್ತುತವೆನಿಸಿ, ಕೂಡಲೇ ವರದಿಗಾರರೆಲ್ಲರಿಗೂ ಉಚಿತವಾಗಿ ಪತ್ರಿಕೆಗಳ ಪ್ರತಿಗಳನ್ನು ಕೊಡುವ ವ್ಯವಸ್ಥೆ ಮಾಡಿದರಂತೆ.

ಪುರಂದರ ರೈ ಅವರದು ಹೋರಾಟದ ಬದುಕು, ಗಾಂಧೀಜಿಯವರ ತತ್ವಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಂತಹ ಬದುಕು. ಜೀವದ ನಾಶವೆ ಸಾಹಿತ್ಯಕ್ಕೆ ಒಪ್ಪಿಗೆ ಇಲ್ಲ. ದೇಶನಾಶ ಹೇಗೆ ಒಪ್ಪಿಗೆಯಾದೀತು? ನೆರೆಹೊರೆಯವರೊಡನೆ ಸಾಮರಸ್ಯವಿಲ್ಲದಿದ್ದರೆ ಸುಖ ನಮಗೆಲ್ಲಿ? ಸಹರಕ್ಷಣ, ಸಹಭೋಗ, ಸಹಶೌರ್ಯ, ಸಹಕಾರ್ಯ, ಸಹಜ್ಞಾನ ಬೆಳಕು ಎಂಬುದು ಸಾಹಿತ್ಯದ ಗುರಿ ಎಂಬ ಅವರ ಮಾತುಗಳು ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗುತ್ತವೆ.
ತಮ್ಮ ಆತ್ಮಕಥನಾತ್ಮಕ ದೀರ್ಘ ಲೇಖನವೊಂದರಲ್ಲಿ ಪುರಂದರ ರೈ ತಮ್ಮ ಮಗನ ಬಗ್ಗೆ ಹೀಗೆ ಹೇಳುತ್ತಾರೆ:

ವಿವೇಕ ಸೌಮ್ಯ ಸ್ವಭಾವದವ, ಆದರೆ ಛಲವಾದಿ. ಈ ಬಗೆಯ ಛಲವು ತಂದೆ-ಮಕ್ಕಳಿಬ್ಬರಿಗೂ ಸಮಾನವಾಗಿದೆಯೆಂದು ಕಾಣುತ್ತದೆ. ಅಷ್ಟೇನೂ ಸಾಂಸ್ಥಿಕ ಶಿಕ್ಷಣ ದೊರಕದೇ ಹೋದರೂ ತಮ್ಮ ಛಲದಿಂದ ಪುರಂದರ ರೈ ಸ್ವಾತಂತ್ರ್ಯ ಹೋರಾಟಗಾರರಾದರು, ಸಾಹಿತಿಯಾದರು, ಪ್ರಜಾವಾಣಿ ವರದಿಗಾರರಾದರು. ಹಾಗೆಯೇ, ವಿವೇಕ ರೈ ಒಂದು ಹೊಸ ವಿವಿಯಲ್ಲಿ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸಿದರು; ಅನೇಕ ಸಮಸ್ಯೆಗಳನ್ನು ಎದುರಿಸಿ ಎರಡು ವಿವಿಗಳನ್ನು ಕುಲಪತಿಗಳಾಗಿ ಮುನ್ನಡೆಸಿದರು.

ಸಾಮಾನ್ಯವಾಗಿ, ತಂದೆ-ಮಕ್ಕಳ ನಡುವೆ ಪೀಳಿಗೆಗಳ ಅಂತರದ ಕಾರಣದಿಂದ, ಭಿನ್ನ ವಿಚಾರ-ವಿರೋಧಗಳೇ ಹೆಚ್ಚು ಕಂಡು ಬರುತ್ತವೆ. ಆದರೆ, ಪುರಂದರ ರೈ ಹಾಗೂ ವಿವೇಕ ರೈ ಈ ಹೇಳಿಕೆಗೆ ಒಂದು ಅಪವಾದ; ಇಬ್ಬರೂ ಸಮಾನ ಸಾಮಾಜಿಕ ಪ್ರಜ್ಞೆ ಹಾಗೂ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡವರು.

Add Comment

Leave a Reply