Quantcast

ಜೋಗಿ ಕಂಡಂತೆ ಕುಂ ವೀ

ಜೋಗಿ 

ಯಾವತ್ತೋ ಕಾರ್ಕಳಕ್ಕೆ ಹೋಗಿದ್ದರಂತೆ. ಅಲ್ಲಿ ಬಸ್ಸಲ್ಲಿ ಸಿಕ್ಕವರು ಭಗವತೀ ಕಾಡು ನೋಡಿಲ್ವಾ ಅಂತ ಕೇಳಿದರಂತೆ. ತಕ್ಷಣ ಬಸ್ಸಿಂದ ಇಳಿದು, ಬಸ್ಸಲ್ಲೇ ಸಿಕ್ಕ ಇಬ್ಬರು ಹುಡುಗರನ್ನು ಜೊತೆ ಮಾಡಿಕೊಂಡು ಭಗವತಿ ಕಾಡಿಗೆ ಹೋಗಿದ್ದು ಬಂದರಂತೆ. ಆಮೇಲೆ ಬಂದದ್ದೇ ‘ಭಗವತಿ ಕಾಡು’ ಎಂಬ ಕತೆ.

ಮೊನ್ನೆಯೂ ಅಷ್ಟೇ. ಅವರ ಪುಸ್ತಕ ಬಿಡುಗಡೆಗೆಂದು ಬಂದರು. ವಿಷ್ಣು ಅಭಿಮಾನಿಗಳ ಜೊತೆ ಮಹದಾಯಿ ಹೋರಾಟಕ್ಕೆ ಬೀದಿಗಿಳಿದರು. ಸ್ಮಾರಕ ಇರಬೇಕಾದ್ದು ಹೃದಯದಲ್ಲೇ ಹೊರತು, ನೆಲದಲ್ಲಲ್ಲ ಅಂದರು.

bhagavathi kaadu kum veeಬನ್ರೀ ಟೀ ಕುಡಿಯೋಣ ಅಂತ ಚಾಮರಾಜಪೇಟೆ ಸುತ್ತಿದರು. ಈ ಸಲ ಕಟ್ಟೆ ಗುರುರಾಜ್ ಪುಸ್ತಕ ಬಿಡುಗಡೆಗೆ ಬಂದರು. ಒಂದು ಕಾಲದಲ್ಲಿ ನಾನೂ ಹೊಸ ಕತೆಗಾರನೇ ಆಗಿದ್ದನಲ್ಲವೇ ಅಂದರು.

ಆನೆ ಡಾಕ್ಟರು ಚಿಟ್ಟಿಯಪ್ಪ ಮಾತಾಡುವುದನ್ನು ತನ್ಮಯರಾಗಿ ಕೇಳಿಸಿಕೊಂಡರು. ಚಿಟ್ಟಿಯಪ್ಪ ಊರಾದ ಸೋಮವಾರ ಪೇಟೆಗೆ ಹೋಗೋಣ ಒಂದ್ಸಲ ಅಂದರು. ಟಿ ಎನ್ ಸೀತಾರಾಂ ಸಿಕ್ಕಾಗ ನನ್ನನ್ನೂ ಡ್ರಾಮ ಜೂನಿಯರ್ ನೋಡೋಕೆ ಕರಕೊಂಡು ಹೋಗಿ ಅಂತ ಮಗುವಿನಂತೆ ಕೇಳಿಕೊಂಡರು. ಅವರು ಒಪ್ಪಿದ ಮೇಲೆ ಇಡೀ ದಿನ ನಾಡಿದ್ದು ಡ್ರಾಮಾ ಜೂನಿಯರಿಗೆ ಹೋಗ್ತೀನಿ. ಅಚಿಂತ್ಯನನ್ನು ಒಂದೇ ಒಂದು ಸಲ ಎತ್ಕೋಬೇಕು ಅಂತ ಮತ್ತೆ ಮತ್ತೆ ಹೇಳ್ತಿದ್ದರು.

ನಮ್ಮ ಕ್ಲಬ್ಬಿಗೆ ಹೋದರೆ ಕಿಟಕಿಯಿಂದ ಹೊರಗೆ ನೋಡುತ್ತಾ ದೊರೈ ಕೆರೆಯ ವಿಸ್ತಾರಕ್ಕೆ ಬೆರಗಾಗುತ್ತಾ, ಇದು ಜೀವಂತ ಕೆರೆ ಅಂತ ಹಾಗೇ ನಿಂತು ಬಿಟ್ಟರು. ಊಟ ತಂದು ಕೊಟ್ಟು ಹಿಂತಿರುಗುತ್ತಿದ್ದ ಮಾಣಿಯನ್ನು ಥಟ್ಟನೆ ಗುರುತಿಸಿದವರಂತೆ, ನೀನು ಮಂಜಾ ಅಲ್ವಾ ಅಂತ ಕೇಳಿದರು. ಎಲ್ಲಿದ್ದೀಯೋ, ಮಾತಾಡಿಸೋಕ್ಕಾಗಲ್ವಾ ಅಂತ ಬೈದರು. ನನ್ನ ಸ್ಟೂಡೆಂಟು. ಇಪ್ಪತ್ತು ವರ್ಷದ ಹಿಂದೆ ಪಾಠ ಮಾಡಿದ್ದೆ ಅಂದರು. ದಾರಿ ತಪ್ಪಿದ್ದ, ಎಂಟಿಆರ್ ಹೊಟೆಲಲ್ಲಿದ್ದ ಅಂತ ಕೇಳಿದ್ದೆ. ಇಲ್ಲಿ ಸಿಕ್ಕಿದ ನೋಡಿ ಅಂತ ಖುಷಿಯಾಗಿ, ಮನೆಗೆ ಫೋನ್ ಮಾಡಿ ಮನೆಯಾಕೆಗೆ ಮಂಜ ಸಿಕ್ಕ ಸುದ್ದಿ ಹೇಳಿಕೊಂಡರು.

ಮಗ ಬೈಕಲ್ಲಿ ಟೂರ್ ಹೋಗಿದ್ದನ್ನು ಲೈಕ್ ಮಾಡಿದ್ದೀರಲ್ಲ, ಬೈದು ಬುದ್ಧಿ ಹೇಳಬೇಕಿತ್ತು ಅಂತ ಅಪ್ಪಟ ತಂದೆಯ ಆತಂಕದಲ್ಲಿ ಹೇಳಿದರು.

ಊಟ ಮುಗಿಸಿ ಬರುವಾಗ ಮಂಜನ ಯೋಗಕ್ಷೇಮ ವಿಚಾರಿಸಿಕೊಂಡು ಅವನ ಕೈಗಷ್ಟು ದುಡ್ಡು ತುರುಕಿ, ಬಂದ್ರೆ ಮಾತಾಡಿಸೋ ಅಂದರು. ಜೊತೆಗಿದ್ದ ಬಿ ಎಸ್ ಲಿಂಗದೇವರು ಹತ್ತಿರ ಅವರೂರ ಕತೆ ಕೇಳಿದರು. ತಮ್ಮೂರ ಕತೆ ಹೇಳಿದರು.

ಅವರು ಕುಂ. ವೀರಭದ್ರಪ್ಪ.

1987ರಲ್ಲಿ ನಾನು ಮೊದಲ ಸಲ ನೋಡಿದ್ದು. ಬಳ್ಳಾರಿಯಲ್ಲಿ ಕಥಾ ಕಮ್ಮಟಕ್ಕೆ ಬಂದಿದ್ದರು. ಮಿಕ್ಕವರು ಕತೆಯ ತಂತ್ರ, ನಿರೂಪಣೆ ಅಂತ ಹೇಳುತ್ತಿದ್ದರೆ, ಇವರು ಬಳ್ಳಾರಿಯ ಬೀದಿಗಳಲ್ಲಿ ಅಲೆದಾಡಿಸಿ ಮಿರ್ಚಿ, ಮಂಡಕ್ಕಿ ಕೊಡಿಸಿ ಬೇರೆಯೇ ಕತೆ ಹೇಳಿಕೊಟ್ಟಿದ್ದರು.

ಈಗಲೂ ಹಾಗೆಯೇ ಇದ್ದಾರೆ. ಮನುಷ್ಯರಂತೆ.

ಕುಂವೀ ಸರ್ ಗೊಂದು ಪ್ರೀತಿಯ ನಮಸ್ಕಾರ.

One Response

  1. Anonymous
    September 1, 2016

Add Comment

Leave a Reply