Quantcast

ತುಂಬಾ ಭಾವುಕನಾಗಿ ಹೇಳುತ್ತಿದ್ದೇನೆ ಗೆಳೆಯರೆ..

ಎಚ್ ಎಸ್ ರೇಣುಕಾರಾಧ್ಯ 

ಈ ಮಾತುಗಳನ್ನು ನಾನು ಇಲ್ಲಿ ಹೇಳುವುದು ಸರಿಯೋ,ತಪ್ಪೋ ಗೊತ್ತಾಗದೆ ಸುಮ್ಮನೆ ಅವಿವೇಕಿಯಂತೆ,ತುಂಬಾ ಭಾವುಕನಾಗಿ ಹೇಳುತ್ತಿದ್ದೇನೆ ಗೆಳೆಯರೆ ತಪ್ಪಿದ್ದರೆ ಕ್ಷಮೆಯಿರಲಿ.

ನಾನು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನಲ್ಲಿ 2000ನೇ ಇಸವಿಯಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿದ್ದು.

ಆದರೆ ಎರಡು ವರ್ಷ ಕಳೆಯವಷ್ಟರಲ್ಲಿ ನಾನು ಓದಿದ, ನನ್ನದೇ ಸಮುದಾಯದ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ಖಾಲಿ ಇದೆ, ಸಂಬಳವೂ ಹೆಚ್ಚು,(4 ಸಾವಿರ ರೂ) ಎಂಬುದು ತಿಳಿಯಿತು. ನನಗೆ ಪಾಠ ಮಾಡಿದ ಮೇಸ್ಟ್ರ ಜೊತೆ ಸಹೋದ್ಯೋಗಿಯಾಗುವ ಹೆಮ್ಮೆಯ, ಗೌರವದ ಕಾರಣವೆಂದು ಹೊರಗೆ ಕಾರಣ ಹೇಳುತ್ತಿದ್ದರೂ, ವಾಸ್ತವ ಬೇರೆಯೇ ಆಗಿತ್ತು. ಅವತ್ತಿನ ನನ್ನ ಬದುಕು ಕೇರ್ ಆಪ್ ಪುಟ್ಪಾತ್ ಆಗಿದ್ದುದು. ಆ ದಿನಗಳು ನನ್ನ ನನ್ನ ಬದುಕಿನ ಅತ್ಯಂತ ಕಷ್ಟದ ದಿನಗಳು.

5e00c312e237d3704636ff6be5b6900cಆ ದಿನಗಳು ಬರಲು ಕಾರಣ ಬೇರಾರು ಅಲ್ಲ ಸ್ವತಃ ನಾನೇ. ಸಂಪ್ರದಾಯಸ್ಥ, ಸ್ಥಿತಿವಂತ ಕುಟುಂಬದಲ್ಲಿ ಬೆಳೆದ ನಾನು. ನನ್ನ ಎಂಎ ಹಂತದ ವರೆಗೂ, ಜಾತಿ, ಸಂಪ್ರದಾಯ ಕೆಡದ ಮಂಗನ ಹಾಗೆ ಸುಖವಾಗಿ ಬೆಳೆದೆ. ಆದರೆ ಯಾವಾಗ ಎಂಎ ಪದವಿಗಾಗಿ, ಜ್ಞಾನಭಾರತಿ ಕ್ಯಾಂಪಸ್ಸಿಗೆ ಕಾಲಿಟ್ಟೆನೋ, ಕಿ.ರಂ ಮತ್ತು ನಟರಾಜ ಹುಳಿಯಾರರ ಪಾಠ ಕೇಳಿದೆನೋ, ಮಂಜುನಾಥ ನೆಟ್ಕಲ್ ಎಂಬ ಜೀವದ ಗೆಳೆಯನ ಜೊತೆ ಬಿದ್ದೆನೋ,ಅವತ್ತೇ ಅಪ್ಪಟ ಮನುಷ್ಯನಾದೆ.

ಇತ್ತ ಮನೆಯಲ್ಲಿ ದಿನದಿಂದ ದಿನಕ್ಕೆ ಎಲ್ಲರ ಮನಸ್ಸಿನಿಂದಲೂ, ಅವರ ನೀಡುತ್ತಿದ್ದ ಎಲ್ಲಾ ಸವಲತ್ತುಗಳಿಂದಲೂ ದೂರಾದೆ. ಕೊನೆಗೆ ಮನೆಯಿಂದಲೇ ಅಕ್ಷರಃ ಹೊರದಬ್ಬಿಸೆಕೊಂಡೆ. ಅದು ನಾನು ಇಷ್ಟಪಟ್ಟ ಹೆಣ್ಣು ಅನ್ಯಜಾತಿಯಳೆಂಬ ಒಂದೇ ಒಂದು ಕಾರಣಕ್ಕೆ.

ನಾನು ಬಯಸಿ ಬಯಸಿ ಬಂದ ನನ್ನ ಸಮುದಾಯದ ಕಾಲೇಜು, ಆ ಮೊದಲ ವರ್ಷದ ಕೊನೆಗೆ ನನಗೆ ಬೇಸಿಗೆ ಕಾಲದ ಎರಡು ತಿಂಗಳ ಸಂಬಳ ಕೊಡದೇ, ಮುಂದಿನ ಶೈಕ್ಷಣಿಕ ವರ್ಷಕ್ಕೂ ವೃತ್ತಿಯಲ್ಲಿ ಮುಂದುವರೆಸುತ್ತಾರೋ, ಇಲ್ಲವೋ ಎಂಬುದನ್ನು ತಿಳಿಸದೆ, ಅಕ್ಷರಶಃ ಬೀದಿಪಾಲು ಮಾಡಿತ್ತು. ಅದೇ ಸಮಯದಲ್ಲಿ ನನ್ನ ಮತ್ತು ಈಗ ನನ್ನ ಪತ್ನಿಯಾಗಿರುವ ರೂಪಾಳ ಪ್ರೇಮ, ಮದುವೆಯ ಹಂತ ತಲುಪಿ, ಯಾವ ಗಳಿಗೆಯಲ್ಲಾದರೂ ಮದುವೆಯಾಗಲೇಬೇಕಾದ ಒತ್ತಡದ ಸ್ಥಿತಿಯಲ್ಲಿತ್ತು.

ಇದು ಕಾಲೇಜಿನ ಎಲ್ಲರಿಗೂ ತಿಳಿದಿತ್ತು. ಹೊಸ ಜೀವನದ ಕನಸನ್ನು ಕಾಣುತ್ತಿದ್ದ ನನಗೆ, ಈ ಘಟನೆ ದೊಡ್ಡ ಮಾನಸಿಕ ಆಘಾತ ಉಂಟುಮಾಡಿತ್ತು. ಏನು ಮಾಡಬೇಕೆಂದು ತೋಚದೆ, ಅಸಹಾಯಕನಾಗಿ, ಪ್ರಾಂಶುಪಾಲರ, ನಿರ್ದೇಶಕರ, ಅಧ್ಯಕ್ಷರ ಮನೆಗಳಿಗೆ ಹೋಗಿ, ಕಾರಣ ಕೇಳಿದೆ. ಪಾಠದ ಬಗ್ಗೆ ಯಾವುದೇ ತೊಂದರೆಯಿಲ್ಲವೆಂದು, ಆದರೆ ನಿಮ್ಮ ವೈಯಕ್ತಿಕ ಬದುಕಿನ ಕೆಲ ನಡವಳಿಕೆಗಳಲ್ಲಿ ಬದಲಾವಣೆ ಮಾಡಿಕೊಂಡರೆ ಮುಂದುವರೆಸುತ್ತೇವೆ ಎಂದರು.

ನನ್ನ ಕಷ್ಟ ಹೇಳಿಕೊಂಡು ಬೇಡಿಕೊಂಡೆ, ಆ ಒಂದು ಷರತ್ತಿಗೆ ಒಪ್ಪಿದರೆ ಮುಂದುವರೆಸುತ್ತೇವೆ ಅಷ್ಟೇ ಎಂದರು. ಆದರೆ ಅವರ ಷರತ್ತನ್ನು ಒಪ್ಪುವ ಹಂತದಲ್ಲಿ ನಾನು ಇರಲಿಲ್ಲ. ಅಷ್ಟರಲ್ಲಾಗಲೇ ನಾನು ಸಂಪ್ರದಾಯಸ್ಥ ಲಿಂಗಾಯತರ ಎಲ್ಲ ಸಂಪ್ರದಾಯ, ಆಚರಣೆಗಳಿಗೂ ತಿಲಾಂಜಲಿ ಇತ್ತು ಮಾಹೇಶ್ವರ ಸ್ಥಲ ತಲುಪಿಯಾಗಿತ್ತು. (ಅಂದರೆ ಹಂದಿ, ಗೋಮಾಂಸ ತಿನ್ನುವ ಹಂತಕ್ಕೆ ತಲುಪಿರುವ ಲಿಂಗಾಯಿತರನ್ನು ಈ ಸ್ಥಲದಿಂದ, ಗುರುತಿಸಿ, ನಾವು ಕೆಲ ಜಾತಿಗೆಟ್ಟ ಗೆಳೆಯರು ಕಾಲೆಳೆದುಕೊಳ್ಳುತ್ತೇವೆ).

ಬಹು ಕಷ್ಟಪಟ್ಟು ಸಂಪಾದಿಸಿರುವ ನನ್ನ ಈ ಮನುಷ್ಯ ನಡವಳಿಕೆಯನ್ನು ಬದಲಾಯಿಸಿಕೊಳ್ಳಲಾಗದೆ, ಕೆಲಸ ಕಳೆದುಕೊಂಡು, ಅಕ್ಷರಶಃ ಬೀದಿಪಾಲಾಗಿದ್ದ ನನ್ನ ಬದುಕನ್ನು ತನ್ನ ತೆಕ್ಕೆಯಲ್ಲಿಟ್ಟು ಜೋಪಾನ ಮಾಡಿದ್ದು, ಪ್ರೆಸಿಡೆನ್ಸಿ ಕಾಲೇಜು. 2003-04ರಲ್ಲಿ ಇಡೀ ಬೆಂಗಳೂರೆಂಬ ಬೆಂಗಳೂರಲ್ಲಿ ಕನ್ನಡ ಭಾಷಾ ಉಪನ್ಯಾಸಕರಿಗೆ ಮೊದಲ ತಿಂಗಳ ಸಂಬಳವೇ 7500 ₹ ಕೊಟ್ಟ ಕಾಲೇಜಿದು.

ಈ ಕಾಲೇಜಿನ ಮುಖ್ಯಸ್ಥರು ಶುದ್ದ ವ್ಯಾಪಾರಿ ಮನೋಭಾವದ ವ್ಯಕ್ತಿಯಾಗಿದ್ದರೂ, ಉಪನ್ಯಾಸಕ ವರ್ಗದ ಮೇಲೆ, ಅದರಲ್ಲೂ ನನ್ನ ಮೇಲೆ ತೋರಿಸುತ್ತಿದ್ದ ಮನುಷ್ಯಪ್ರೀತಿ, ಗೌರವವನ್ನು ನಾನೆಂದಿಗೂ ಮರೆಯಲಾರೆ. ಅಂದ ಹಾಗೆ ಈ ಕಾಲೇಜು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾಗಿದೆ. ಇದರ ಮುಖ್ಯಸ್ಥರ ಹೆಸರು ನಿಸಾರ್ ಅಹಮದ್.

ಕಳೆದ ಮೂರ್ನಾಲ್ಕು ದಿನಗಳಿಂದ ಹೆಣ್ಣು ಮಗಳೊಬ್ಬಳು ನೆರೆಯ ದೇಶದ ಮತ್ತು ಸಹೋದರರ ಬಗ್ಗೆ ಹೇಳಿದ ಮಾತಿಗೆ, ನರ ಹರಿದುಕೊಳ್ಳುತ್ತಿರುವ, ಧರ್ಮ ರಕ್ಷಕರೇ, ದೇಶಭಕ್ತರೆ, ಈಗ ನೀವೆ ಹೇಳಿ ಸ್ವರ್ಗವನ್ನು ಇಲ್ಲಿ ಈ ದೇಶದಲ್ಲಿ ಸೃಷ್ಟಿಸುತ್ತಿರುವವರು ಯಾರು? ನರಕವನ್ನು ಸೃಷ್ಟಿಸುತ್ತಿರುವವರು ಯಾರೆಂದು.

ಕೊನೆಯ ಮಾತು. ಇಂದು ನಾನು ಬದುಕಿನಲ್ಲಿ ಅತ್ಯಂತ ಸಂತೋಷದಿಂದ, ನೆಮ್ಮದಿಯಿಂದ, ಎಲ್ಲ ರೀತಿಯಿಂದಲೂ ಒಳ್ಳೆಯ ಬದುಕನ್ನು ಬದುಕಲು ಸಾಧ್ಯವಾಗಿರಲು ಕಾರಣ ಅದೇ ನೀವು ಹೇಳುವ ಅನ್ಯ ಜಾತಿಯ ನನ್ನ ಮಡದಿಯ ಬೆಂಬಲದಿಂದ.

ಇಂದಿಗೂ ನಾನು ಆ ನನ್ನ ಸಮುದಾಯದ ಕಾಲೇಜನ್ನು, ಹಾಗೂ ನನ್ನ ರಕ್ತಸಂಬಂಧಿಗಳ ಜೊತೆ ಯಾವುದೇ ರೀತಿಯ ಸಂಬಂಧ ಇಟ್ಟುಕೊಂಡಿಲ್ಲ ಮುಂದೆಂದೂ ಇಟ್ಟುಕೊಳ್ಳುವುದಿಲ್ಲ. ಇದು ನನ್ನ ಧರ್ಮ.

Add Comment

Leave a Reply