Quantcast

ಒಂದು ಪ್ರೀತಿಯ ಕತೆ ಹೇಳುತ್ತೇನೆ ಎಂದು ಶುರು ಮಾಡಿದಳು..

ಚೀನಾ ದೇಶದ ಪಶ್ಚಿಮ ಭಾಗದಲ್ಲಿರುವ ಸಿಚುವಾನ್ ಪ್ರಾಂತ್ಯದ ರಾಜಧಾನಿಯಾದ ಚೆಂಗ್ಡುವಿನಲ್ಲಿ ಕತೆಗಳನ್ನು ಕೇಳಲಿಕ್ಕೂ ಆಗದೆ ಹೇಳಲಿಕ್ಕೂ ಆಗದೆ ಏನು ಮಾಡುವುದು ಎಂದು ತೋಚದೆ ಸುಮ್ಮನೆ  ಹೊರಗೆ ನೋಡುತ್ತಿದ್ದೆ.

ನಾನಾದರೂ ಏನು ಮಾಡಲಿ! ಏನಾದರೂ ಮಾತಾಡೋಣವೆಂದರೆ, ಏನೋ ತಪ್ಪು ಮಾಡಿದವರ ಹಾಗೆ, ‘ದಮ್ಮಯ್ಯ ನನ್ನಲ್ಲಿ ಒಂದು ಕೇಳಬೇಡಿ’ ಎನ್ನುವ ಹಾಗೆ ಇಲ್ಲಿನವರು ಮುಖ ಮರೆಸಿಕೊಂಡು ಓಡಾಡುತ್ತಿದ್ದರು.

avadhi-column-nagashree- horiz-editedಇಂಗ್ಲಿಷಿನ ಮಾತು ಹಾಗಿರಲಿ, ಕೈಸನ್ನೆ ಬಾಯಿ ಸನ್ನೆ ಮಾಡಿದರೂ, ‘ಬೇಕಾದರೆ ಕೇಳಿಸಿಕೋ, ಇಲ್ಲವಾದರೆ ಬಿಡು’, ಎಂಬಂತೆ, ಗಟ್ಟಿಯಾಗಿ ಅವರ ಭಾಷೆಯಲ್ಲಿ ಏನನ್ನೊ ಒದರಿ ಹೋಗುತ್ತಿದ್ದರು. ಒಂದೆರಡು ಸಲ ಹೀಗೆ ಬೈಸಿಕೊಂಡಿದ್ದೆ. ಅವರು ಬೈಯ್ಯುವಾಗ ಏನು ಬೈಯ್ಯುತ್ತಿರಬಹುದೆಂದು ಊಹಿಸಲೂ ಪ್ರಯತ್ನಿಸುತ್ತಿದ್ದೆ.

ಅವರಾಯಿತು ಅವರ ಪಾಡಾಯಿತೆಂಬಂತೆ ವಾಹನಗಳೂ ಜನರೂ ಮೋಡಗಳೂ ಸಂಚರಿಸುತ್ತಿದ್ದವು. ಇಷ್ಟ ಬಂದಂತೆ ಬದಲಿಸುತ್ತಿದ್ದ ಹವೆ ನನ್ನ ಮನಸ್ಸಿನಂತೆಯೇ ಇತ್ತು. ದೊಡ್ಡ ದೊಡ್ಡ ಕಟ್ಟಡಗಳ ಮೇಲೆ ಪ್ರಾಚೀನ ಕಾಲದ ಲಿಪಿಯ ಹಾಗೆ ಕಾಣುತ್ತಿದ್ದ ಚೈನೀಸ್ ಅಕ್ಷರಗಳನ್ನು, ಅದರಲ್ಲಿರುವ ಗೆರೆಗಳೋ, ಆಯತಾಕಾರಗಳೋ, ತ್ರಿಜ್ಯವೋ, ಅಥವಾ ನಕ್ಷತ್ರಾಕಾರಗಳೋ, ಇನ್ನೂ ಹೇಗೇಗೋ ಕಾಣುತ್ತಿದ್ದವು.

ನಾನು ಕೆಲವು ದಿನಗಳ ಹಿಂದೆ ಹಳೆಯ ಶಾಸನಲಿಪಿಯನ್ನು ಬರೆಯಲು ಅಭ್ಯಾಸ ಮಾಡುತ್ತಿದ್ದ ರೀತಿಯಲ್ಲಿ ಒಂದೊಂದೇ  ಹೊಸ ಅಕ್ಷರಗಳನ್ನು ಬರೆದು ಎಲ್ಲಿಂದ, ಹೇಗೆ, ಯಾವ ರೀತಿ ಗೆರೆಗಳನ್ನು ಎಳೆದರೆ ಸುಲಭವಾಗಿ ಬರೆಯಬಹುದೆಂದು ಯೋಚಿಸುತ್ತಿದ್ದೆ. ಅವರು ಅಕ್ಷರಗಳನ್ನು ಬರೆಯುವಾಗ ಅರ್ಥಗಳು ಹಾಳಾಗದಂತೆ ಅದನ್ನು ತುಂಡರಿಸದೆ ಬರೆಯುತ್ತಾರಂತೆ. ಆದರೆ ಅದು ಅಕ್ಷರಗಳೋ ಶಬ್ದಗಳೋ ಎಂದು ನನಗೆ ಗೊತ್ತಾಗುತ್ತಿರಲಿಲ್ಲ.

ಇನ್ನು ಇವರ ಹೆಸರುಗಳೂ ಅಷ್ಟೇ. ನಾವು ಶಾಲೆಯಲ್ಲಿರುವಾಗ ಬಾಯಿ ತಿರುಚಿ ಮುರುಚಿ ಹೇಳಿದರೂ ಟೀಚರೂ ಸೇರಿದಂತೆ ಎಲ್ಲರಿಗೂ ಉಚ್ಚರಿಸಲು ಕಷ್ಟವಾಗುತ್ತಿದ್ದ  ಕನ್ ಫ್ಯೂಶಿಯಸ್, ಹ್ಯೂಯನ್ ತ್ಸಾಂಗ್ ಎಂಬ ಹೆಸರುಗಳೂ ಆ ವ್ಯಕ್ತಿಗಳೂ ಅಲ್ಲಿ ಅನೇಕರಿಗೆ ತಿಳಿದಹಾಗಿರಲಿಲ್ಲ. ಇದೆಲ್ಲಾ ಬಿಟ್ಟು ಜಾಕಿಚಾನ್ ಬಗ್ಗೆ ಕೇಳಿದರೆ ಎಲ್ಲರೂ ಕಣ್ಣರಳಿಸಿ ಮಾತಾಡುತ್ತಿದ್ದರು.

ಎಲ್ಲಕ್ಕಿಂತ ಅವನ ಹಾಗೆ ಲೆಕ್ಕವಿರದಷ್ಟು ಗರ್ಲ್ ಫ್ರೆಂಡ್ಸ್ ಹೊಂದುವುದೇ ಅವರಿಗೆಲ್ಲಾ ಹೆಮ್ಮೆಯ ವಿಷಯವೆಂದು ಜೆಲ್ಲಿ ಹೇಳುತ್ತಾ ನಿನಗೆ ಮೊದಲು ಯಾರಾದರೂ ಬಾಯ್ ಫ್ರೆಂಡ್  ಇದ್ದರಾ?’ ಎಂದು ಕೇಳಿದಳು. ‘ಅಕ್ಕಾ, ಸ್ವಲ್ಪ ತೆಪ್ಪಗೆ ಕೂತುಕೋ, ಗಂಡನ ಮುಂದೆ ಬಾಯ್ ಫ್ರೆಂಡ್ ವಿಷಯ ಕೇಳುತ್ತೀಯಲ್ಲಾ’ ಎಂದು ರೇಗಿಸಿದೆ.

ಮತ್ತೆ ‘ ಹೇ ನೋ ನೋ ವಾಷಿಂಗ್ ಹೆಡ್ ವಾಷಿಂಗ್ ಹೆಡ್ ಶ್ರೀಯಾ’ ಎಂದು ಐಸ್ ಕ್ರೀಮ್ ತಿನ್ನುತ್ತಾ ನಗುತ್ತಿದ್ದಳು.  ಇಲ್ಲಿ ‘ವಾಷಿಂಗ್ ಹೆಡ್’ ಅಂದರೆ ಕೀಟಲೆ ಮಾಡುವುದು ಎಂದು ಅರ್ಥ. ಅದು ಯಾವ ರೀತಿ ಎಂದು ನನಗೂ ಗೊತ್ತಿಲ್ಲ!! ನಾವು ಆಗಾಗ ಇವರ ಹೆಡ್ಡನ್ನು ವಾಶ್ ಮಾಡುತ್ತಲೇ ಇದ್ದೆವಾದರೂ ಅವರಿಗೆ ನಮ್ಮ ಹೆಡ್ ವಾಶ್ ಗಳಾವುದೂ ಪಕ್ಕಕ್ಕೆ ಹೊಳೆಯುತ್ತಿರಲಿಲ್ಲ!

ಅಲ್ಲಿ ಎಲ್ಲರೂ ಒಂಥರಾ ನಿರ್ಮೋಹಿಗಳ ಹಾಗೆ ಓಡಾಡುತ್ತಿದ್ದರು. ಆ ದೇಶ, ಆ ಜನರು ಅವರ ಒಳಮನಸ್ಸುಗಳೆಲ್ಲಾ ನನ್ನ ಕುತೂಹಲ ಕೆರಳಿಸುತ್ತಿದ್ದವು. ಚೆಂಗ್ಡುವಿನಿಂದ ಮುನ್ನೂರು ಕಿ.ಮೀ ದೂರದಲ್ಲಿದ್ದ ಯಾಂಗ್ ತ್ಸೆ ನದಿ ತೀರದ ಚಾಂಗ್ ಶಿಂಗ್ (Chongqing) ಪ್ರಾಂತ್ಯದಲ್ಲಿ  ನದಿ ಬೆಟ್ಟಗುಡ್ಡ, ಪ್ರಾಚೀನ ಪಟ್ಟಣಗಳನ್ನು ನೋಡಿಕೊಂಡು, ಈ ಹುಡುಗಿಯರ ಪ್ರೇಮ ಕತೆಗಳ ಜೊತೆಗೆ  ಚೀನಾದ ‘ಪ್ರೀತಿಯ ಮೆಟ್ಟಿಲುಗಳ ಕಥೆ’ಯನ್ನೂ ಕೊನೆಗೂ ಇವರ ಬಾಯಿಂದ ಕೇಳಿಸಿಕೊಳ್ಳುತ್ತಿದ್ದೆ.

ಅಷ್ಟುದ್ದದ ಕಟ್ಟಡಗಳ ಮಧ್ಯ ಎಲ್ಲಿ ನೋಡಿದರೂ ಸುತ್ತಲೂ ನದಿ ಹರಿಯುತ್ತಿತ್ತು. ಜನರು ತಿನ್ನುತ್ತಾ ಉಣ್ಣುತ್ತಾ, ಹಾಯಾಗಿ ಖುಷಿಯಾಗಿರುವಂತೆ ಕಾಣುತ್ತಿದ್ದರು. ಬಿಸಿಲು ಜೋರಾಗಿ ರಾಚುತ್ತಿತ್ತು, ಏರಾ, ಬರ್ಗರ್ ತಿನ್ನುತ್ತಾ,

‘ಶ್ರೀಯಾ, ಪ್ರೀತಿಸಿದವರಿಗಾಗಿ ಏನೇನೆಲ್ಲಾ ಮಾಡಬಹುದು ಹೇಳು ನೋಡೋಣ’ ಎಂದಳು.

‘ಏನೇನೆಲ್ಲಾ ಇರಬಹುದು ಗೊತ್ತಿಲ್ಲ, ಆದರೆ ಎಲ್ಲಕ್ಕಿಂತಲೂ ಸಕ್ಕತ್ ಎಂದರೆ  ಬಿಟ್ಟು ಹೋಗುವುದು’ ಎಂದೆ.
ಅವಳು, ‘ಓ ನೋ.. ಡೊಂಟ್ಟ್ ವಾಶ್ ಮೈ ಹೆಡ್’ ಎನ್ನುತ್ತಾ ಕಣ್ಣನ್ನು ಇನ್ನಷ್ಟು ಕಿರಿದಾಗಿಸಿ ನಕ್ಕಳು.  ಎಲ್ಲರನ್ನೂ ಪೀಪಲ್ಸ್ ಪಾರ್ಕ್ ನ ಕಲ್ಲಬೆಂಚಿನ ಮೇಲೆ ಕೂರಿಸಿ ಒಂದು ಪ್ರೀತಿಯ ಕತೆ ಹೇಳುತ್ತೇನೆ ಎಂದು ಶುರು ಮಾಡಿದಳು. ಅದು ಲವ್ ಸ್ಟೆಪ್ಸ್ ನ ಕತೆ. ತನ್ನಕ್ಕಿಂತ ಹತ್ತು ವರ್ಷ ದೊಡ್ಡವಳಾದ ಪ್ರಿಯತಮೆಗೆ ನಡೆದಾಡಲು ಸಹಾಯವಾಗಲೆಂದು ೬೦೦೦ ಮೆಟ್ಟಿಲುಗಳನ್ನು ನಿರ್ಮಿಸಿ, ಹೊರಗಿನ ಜಗತ್ತಿನ ಯಾವುದೇ ಸಂಪರ್ಕವಿಲ್ಲದೆ ೫೦ ವರ್ಷ ಕಾಡಿನಲ್ಲೇ ಬದುಕಿದ ಪ್ರೇಮಿಗಳ ಕತೆ.

china tree೨೯ ವರ್ಷದ ಕ್ಯು ಚಾವೋ ಕ್ವಿನ್  ಗೆ ಗಂಡ ತೀರಿ ಹೋಗಿ ವರ್ಷವಾಗಿತ್ತು. ಜೊತೆಗೆ ಒಂದು ಮಗುವೂ ಇತ್ತು. ಅದೇ ಊರಿನ  ಲಿಯ ಗುವೋ ಜಿಯಾಂಗ್ ಎಂಬ ೧೯ ವರ್ಷದ ತರುಣ ಅವಳನ್ನು ಪ್ರೀತಿಸುತ್ತಾನೆ.  ೧೦ ವರ್ಷ ದೊಡ್ಡವಳಾದ ವಿಧವೆಯನ್ನು ಪ್ರೇಮಿಸಲು ಇವನಿಗೇನು ಬಂದಿದೆ ಎಂದು ಕ್ವಿನ್ ಗೆ ಅನ್ನಿಸಿದರೂ ಬೇರೇನೂ ಯೋಚಿಸದೆ ಅವನ ಪ್ರೀತಿಗೆ ಮರುಳಾಗಿ ಸೈ ಅಂದುಬಿಡುತ್ತಾಳೆ. ಪ್ರೀತಿಯೇನೋ ಇಬ್ಬರಿಗೂ ಉಕ್ಕುವ ತನಕ ಬಂದಿರುತ್ತದೆ, ಆದರೆ ಮದುವೆಯಾಗಿ ಸಂಸಾರ ಮಾಡುವುದಾದರೂ ಹೇಗೆ?

ಅದು ೧೯೫೦ರ ಸಮಯ, ಪ್ರೀತಿಸಿ ಮದುವೆಯಾಗುವುದೇ ದೊಡ್ಡ ಸಂಗತಿಯಾಗಿರುವಾಗ, ತನ್ನಕ್ಕಿಂತ ಹಿರಿಯಳಾದ ವಿಧವೆಯನ್ನು ಮದುವೆಯಾಗುವುದು ಸಣ್ಣ ವಿಷಯವಾಗಿರಲಿಲ್ಲ. ಬಾಯಿಂದ ಬಾಯಿಗೆ ವಿಷಯ ಹರಡಿ ಊರು ತುಂಬಾ ಗುಲ್ಲೆಬ್ಬಿಸಿತ್ತು. ಜನ ಮಾತಾಡಿದರು, ಎಚ್ಚರಿಸಿದರು, ಬೆದರಿಸಿದರು. ಆದರೆ ಯಾವುದಕ್ಕೂ ಜಗ್ಗಲಿಲ್ಲ ಈ ಪ್ರೇಮಿಗಳು, ಒಂದು ದಿನ ರಾತ್ರಿ ಕ್ವಿನ್ ಮಗುವನ್ನು ಜಿಯಾಂಗ್ ಹೊತ್ತುಕೊಂಡು ಪ್ರಿಯತಮೆಯ ಜೊತೆ  ಗುಡ್ಡೆ ಹತ್ತಿಯೇ ಬಿಟ್ಟನು. ನಡೆದು ಗುಹೆಯೊಂದನ್ನು ಸೇರಿಕೊಂಡರು. ಕಾಡುಪ್ರಾಣಿಗಳ ಭಯ ಒಂದು ಕಡೆ, ಹೊಟ್ಟೆಗೆ ಹಿಟ್ಟಿಲ್ಲದಿರುವುದು ಇನ್ನೊಂದು ಕಡೆ. ಏನೇ ಆದರೂ ಊರವರ ಬಂಧುಗಳ ಸಹವಾಸವೇ ಬೇಡವೆಂದು, ಮತ್ತೆ ತಿರುಗಿ ಅಲ್ಲಿನ ಕೆಟ್ಟ ಪ್ರಪಂಚವೇ ಬೇಡವೆಂದು ಅಲ್ಲೇ ವಾಸಿಸಲು ಶುರುಮಾಡಿದರು.

ಗೆಡ್ಡೆಗೆಣಸು ಹಣ್ಣು,  ಸೊಪ್ಪುಗಳನ್ನು ತಿಂದು ಬದುಕುತ್ತಿದ್ದರು. ಅವರಿಗೆ ಬೇರೆಯಾವುದೇ ಆಕಾಂಕ್ಷೆಗಳು ಇರಲಿಲ್ಲ. ಬಂಧುಗಳು, ಮನೆಮಠ ಯಾವುದೂ ಬೇಕಿರಲಿಲ್ಲ. ಬೆಳಗ್ಗೆಯಾದರೆ ಜಿಯಾಂಗ್ ಆಹಾರ ಹುಡುಕಿಕೊಂಡು ಹೋಗುತ್ತಿದ್ದನು. ದಾರಿ ಮಧ್ಯ  ಅವನಿಗೆ ಹಸಿವು ನೀರಡಿಕೆಗಳಾದರೆ ಕ್ವಿನ್ ಬೆಟ್ಟ ಇಳಿದೋ ಹತ್ತಿಯೋ ಹೋಗಬೇಕಿತ್ತು.  ಹೀಗೆ ಒಂದು ದಿನ ಕ್ವಿನ್ ಗರ್ಭಿಣಿಯಾಗುತ್ತಾಳೆ. ಈ ಸಮಯದಲ್ಲಿ ಹೆಂಡತಿಗೆ ಕಷ್ಟವಾಗಬಾರದೆಂದು ಆ ಕಡಿದಾದ  ಕಾಡಿನಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ನಿರ್ಮಿಸಲು ಆರಂಭಿಸಿದನಂತೆ. ಆಗ ಆರಂಭಿಸಿದವನು ಮುಂದಿನ ೫೦ ವರ್ಷಗಳಲ್ಲಿ ೬೦೦೦ ಮೆಟ್ಟಿಲು ನಿರ್ಮಿಸಿರುವನು. ಆದರೆ ಕ್ವೀನ್ ಗೆ ಒಮ್ಮೆಯೂ ಅಷ್ಟೂ ಮೆಟ್ಟಿಲುಗಳನ್ನು ಹತ್ತಿ ಇಳಿಯಲು ಸಾಧ್ಯವಾಗಲಿಲ್ಲವಂತೆ.

೨೦೦೧ ರಲ್ಲಿ  ಟ್ರೆಕ್ಕಿಗ್ ಟೀಮ್ ಒಂದು  ಹತ್ತುತ್ತಾ ಹೋದಂತೆ ಮುಗಿಯದ ಮೆಟ್ಟಿಲುಗಳನ್ನು ನೋಡಿ ಆಶ್ಚರ್ಯಗೊಂಡು  ನೋಡಿದಾಗಲೇ ಹೊರ ಪ್ರಪಂಚಕ್ಕೆ ಇವರ ಪ್ರೇಮಕಥೆ ಅರಿವಿಗೆ ಬಂದದ್ದು. ೫ ದಶಕಗಳ ಕಾಲ ಯಾರ ಗೋಜಿಗೂ ಇಲ್ಲದೆ ಅತ್ಯಂತ ಪ್ರೀತಿಯಿಂದ ನೆಮ್ಮದಿಯಿಂದ ಬದುಕಿದ್ದಾರೆ. ೨೦೦೭ರಲ್ಲಿ ತನ್ನ ೭೨ನೇ ವಯಸ್ಸಿನಲ್ಲಿ ಜಿಯಾಂಗ್ ತೀರಿಹೋದನು. ಸಾಯುವವರೆಗೆ ತನ್ನನ್ನು ಬಿಟ್ಟುಹೋಗುವುದಿಲ್ಲವೆಂದು ಭಾಷೆ ಕೊಟ್ಟಿದ್ದ ಪತಿ ಬಿಟ್ಟು ಹೋದನೆಂದು ಕ್ವಿನ್ ಕೊರಗುತ್ತಿದ್ದಳು. ಅದೇ ಕೊರಗಿನಲ್ಲಿ ೨೦೧೨ರಲ್ಲಿ ತನ್ನ ೮೭ ವರ್ಷಕ್ಕೆ ಅವಳೂ ತೀರಿಕೊಂಡಳಂತೆ. ಅವರು ಉಳಿದುಕೊಂಡಿದ್ದ ಗುಹೆಯನ್ನು ಚೀನಾ ಸರಕಾರ ರಾಷ್ಟ್ರೀಯ ಸ್ಮಾರಕವೆಂದು ಕಾಪಾಡಿಕೊಂಡು ಬಂದಿದೆ.

ಅವಳು ಕಥೆ ಮುಗಿಸುವಾಗ ನಾನೊಂದು ನಿಟ್ಟುಸಿರಿಟ್ಟೆ.  ಈ ನದಿಯ ದಡದ ಮೇಲಿನ ನಗರ ಈ ಕಾರಣಕ್ಕೇ ಸುಂದರವಾಗಿರ ಬೇಕು ಅನ್ನಿಸಿತು.

ನಮ್ಮ ಜೊತೆಗಿದ್ದ ಮನಿಲಾದ ಕ್ರಿಸ್ಟಲ್, ಕತೆ ಕೇಳಿ ಬೆರಗಾಗಿ ತನ್ನ ಬಾಯ್ ಫ್ರೆಂಡನ್ನು ನೆನಪಿಸಿಕೊಳ್ಳುತ್ತಿದ್ದಳು. ಅವಳಿಗೊಬ್ಬ ಬಾಯ್ ಫ್ರೆಂಡ್ ಇದ್ದನಂತೆ. ಆದರೆ ಅವನು ಗೇ ಅಂತ ತಿಳಿದ ಮೇಲೆ ಅವನನ್ನು ಬಿಟ್ಟುಬಿಟ್ಟಳಂತೆ. ‘ಮನಿಲಾದಲ್ಲಿ ತುಂಬಾ ಹುಡುಗರು ಗೇ ಆಗಿರುವರು, ನನಗೇ ಗೊತ್ತೇ ಆಗಲಿಲ್ಲ, ಮೋಸ ಮಾಡಿಬಿಟ್ಟ’ ಎನ್ನುತ್ತಿದ್ದಳು.  ಅವಳು ನೋಡಲು ಸ್ವಲ್ಪ ಚೀನೀಯರ ಹಾಗೇ ಇದ್ದಳೆಂದು ನಮ್ಮ ಟೀಮಿನ ಚೀನಾದ ಹಿಕೋಮಾನಿಗೆ ಅವಳನ್ನು ಕಂಡರೆ ಇಷ್ಟವಿತ್ತು.

ಒಂದು ಸಲ ತನ್ನ ಅಮ್ಮನನ್ನು ಕರೆದುಕೊಂಡು ಬಂದು ಅವಳನ್ನು ಪರಿಚಯಿಸಿದ್ದ. ನ್ಯೂಜಿಲಾಂಡಿನ ಮೈಕ್ ತನ್ನ ಹೊಸ ಕ್ಯಾಮೆರದಲ್ಲಿ, ಅವರ ಫೋಟೋ ತೆಗೆದು, ‘ನೋಡಮ್ಮಾ, ನಿನ್ನ ಫ್ಯೂಚರ್ ಅತ್ತೆಯ ಜೊತೆ ಮುದ್ದಾಗಿ ಕಾಣಿಸುತ್ತೀಯಾ’ ಎಂದು ರೇಗಿಸುತ್ತಿದ್ದರೆ ಅವಳಿಗೆ ಮೈಯ್ಯೆಲ್ಲಾ ಉರಿದು ಹುಳ್ಳಗೆ ನಗುತ್ತಿದ್ದಳು. ಕೊನೆಗೆ ಯಾರಿಗೆ ಯಾರು ಏನೇ ಹೇಳಿದರೂ ‘ವಾಷಿಂಗ್ ಹೆಡ್ ವಾಷಿಂಗ್ ಹೆಡ್’ ಎನ್ನುತ್ತಾ ಅದನ್ನು ಅಲ್ಲೇ ಮುಗಿಸುತ್ತಿದ್ದೆವು.

603597_537190939657734_2050445181_nರಾತ್ರಿ ನದಿ ಶಾಂತವಾಗಿ ಹರಿಯುತ್ತಿತ್ತು. ಇಲ್ಲಿನ ಝಗಮಗಿಸುವ ಬೆಳಕಿಗೆ ಆಕಾಶ ಮಂದವಾಗಿತ್ತು. ಊಟ ಮಾಡಿದ ತಕ್ಷಣ ಮಲಗಬಾರದೆಂಬ ಕಾರಣಕ್ಕೆ, ಇಲ್ಲಿ ಆರು ಗಂಟೆಗೇ ಡಿನ್ನರ್ ಮುಗಿಸುತ್ತಾರೆ. ಆರು ಗಂಟೆಗೆ ಡಿನ್ನರ್ ಮುಗಿಸಿ ೯ ಗಂಟೆಗೆ ನನಗೆ ಮತ್ತೆ ಹಸಿವಾಗುತ್ತಿತ್ತು. ಜೆಲ್ಲಿ ನನ್ನ ಕೈ ಹಿಡಿದುಕೊಂಡು ಆಕಳಿಸುತ್ತಾ ಬರುತ್ತಿದ್ದಳು. ನನಗೊಬ್ಬಳಿಗೇ ಕೇಳಿಸುವಂತೆ ‘ನಾನು ನಿನಗಿಂತ ಮೂರು ತಿಂಗಳಿಗೆ ದೊಡ್ಡವಳು, ನಿನಗೆ ಮದುವೆಯಾಗಿ ವರ್ಷಗಳೇ ಕಳೆದಿದೆ. ನನಗೊಂದು ಬಾಯ್ ಫ್ರೆಂಡ್ ಕೂಡಾ ಇಲ್ಲ ನೋಡು, ನಾನು ಚೆನ್ನಾಗಿಲ್ಲವಾ? ಎಂದು ಕೇಳಿದಳು.

ಅವಳಿಗೂ, ಒಬ್ಬ ಬಾಯ್ ಫ್ರೆಂಡ್ ಇದ್ದನಂತೆ ಆದರೆ ಅವಳಿಗಿಂತ ಸಣ್ಣವಯಸ್ಸಿನವನಂತೆ. ‘ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ. ಸಣ್ಣವಯಸ್ಸಿನವನನ್ನು ಮದುವೆಯಾದರೆ ಸರಿ ಇರುತ್ತದಾ’ ಎಂದು ಕೇಳಿದಳು.  ‘ನಿನ್ನದು ಚೀನಾ ದೇಶದ ಇನ್ನೊಂದು ಅದ್ಭುತ ಪ್ರೇಮ ಕತೆಯಾಗುವುದರಲ್ಲಿ ಸಂಶಯವೇ ಇಲ್ಲ ಮಾರಾಯ್ತಿ ನಿನ್ನ ರಾಜಕುಮಾರ ನಿನಗಾಗಿ ಕಾದುಕೊಂಡಿರಬೇಕು, ಇಷ್ಟರಲ್ಲೇ ನಿನಗೆ ಸಿಗುತ್ತಾನೆ ನೋಡು, ಇಂತಹ ಪ್ರೇಮ ಕತೆಗಳಿರುವುದಕ್ಕಾಗಿಯೇ ಮುಂದೆ ನಡೆಯುವುದಕಾಗಿಯೇ ಈ ಭೂಮಿ ಇನ್ನೂ ಎಲ್ಲವನ್ನೂ ಸಹಿಸಿಕೊಂಡಿರುವುದಲ್ಲವಾ” ಎಂದಿದ್ದೆ. ಅವಳು ಖುಷಿಯಲ್ಲಿ ಏನೂ ತೋಚದೆ ಬಂದು ತಬ್ಬಿಕೊಂಡಿದ್ದಳು.

417920_537193602990801_1102748938_nಆ ರಾತ್ರಿ ಅವರು ಹೇಳಿದ ಎಲ್ಲಾ ಕತೆಗಳನ್ನು ನೆನೆಸಿಕೊಂಡು ಒಂಥರಾ ಖುಷಿಯಾಗುತ್ತಿತ್ತು.ಹೊರಗೆ ಜೋರಾಗಿ ಮಳೆ ಸುರಿದು ಚಳಿಯಾಗುತ್ತಿತ್ತು. ಅವರೆಲ್ಲರ ಮೇಲೆ, ಈ ದೇಶದ ಮೇಲೆ ನನಗೆ ಪ್ರೀತಿ ಹುಟ್ಟುತ್ತಿತ್ತು. ಅಷ್ಟರಲ್ಲಿ ಏರಾ ಫೋನ್ ಮಾಡಿ ತಾನು ಬಾಯ್ ಫ್ರೆಂಡ್ ಜೊತೆ ಅಡುಗೆ ಮಾಡುತ್ತಿರುವೆ ಎನ್ನುತ್ತಾ ಖುಷಿಯಾಗಿದ್ದಳು. ಯಾರು ಮೊದಲನೆಯದ್ದಾ ಬ್ಯಾಕ್ ಅಪ್ ಬಾಯ್ ಫ್ರೆಂಡಾ? ಎಂದು ರೇಗಿಸಿದೆ, ಶ್! ಮೆತ್ತಗೆ ಮೆತ್ತಗೆ ಎಂದು ನಗುತ್ತಾಆಮೇಲೆ ಮಾತಾಡುವೆ ಬಾಯ್ ಖುಷಿಯಿಂದ ಫೋನು ಕುಕ್ಕಿದ್ದಳು.

ಒಂದು ಸಲ ಏರಾ ತನ್ನ ಬ್ಯಾಕ್ ಅಪ್ ಬಾಯ್ ಫ್ರೆಂಡ್ ಎಂದು ಯಾರನ್ನೋ ಪರಿಚಯಿಸಿದ್ದಳು.‘ಆವತ್ತು ಇನ್ನೊಬ್ಬನಿದ್ದನಲ್ಲ, ಜೇಸನ್  ಅವನ ಕತೆಯೇನು’ ಎಂದು ಕೇಳಿದರೆ, ‘ಐದು ವರ್ಷ ಬಿಟ್ಟು ಅವನನ್ನೇ ಮದುವೆಯಾಗುವುದು, ಆದರೆ ಅವನು ಎಲ್ಲಾದರೂ ಕೈ ಎತ್ತಿದರೆ ಅಂತ ಇವನು ಬ್ಯಾಕ ಅಪ್ ಗೆ ಇರುತ್ತಾನೆ’ ಎಂದಳು.  ಆದರೆ ಬ್ಯಾಕ್ ಅಪ್ ಹುಡುಗನಿಗೂ ಫರ್ಸ್ಟ್ ಗರ್ಲ್ ಫ್ರೆಂಡು ಅಂತ ಒಬ್ಬಳಿರುತ್ತಾಳಂತೆ. ಆಮೇಲೆ ಯಾರು ಯಾರ ಜೊತೆಗಿರಬೇಕು ಯಾರನ್ನು ಬಿಡಬೇಕೆಂಬುದು ಅವರವರ ನಿರ್ಧಾರವಂತೆ.

ಇಲ್ಲಿನ ಜನಾಂಗವೊಂದರಲ್ಲಿ, ಮೂರು ಹೆಂಡತಿಯರನ್ನು ಹೊಂದುವುದು ನ್ಯಾಯ ಸಮ್ಮತವೂ ಆಗಿರುವುದು. ಆದರೆ ಯಾರಿಗೂ ಮೂರು ಗಂಡಂಡಿರು ಇರುವುದಿಲ್ಲವಂತೆ! ಏನೋಪ್ಪಾ ವಾಲ್ಯು ಸಿಸ್ಟಮೇ ಸರಿ ಇಲ್ಲವೆಂದು ಯಾರೋ ಗೊಣಗುತಿದ್ದರು.ನನಗೂ ಅದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ, ಈ ದೇಶವೊಂದೇ ಅಲ್ಲ ಎಲ್ಲವನ್ನೂ ದೂರದಲ್ಲಿ ನಿಂತು ಅದರ ಪಾಡಿಗೆ ಅದನ್ನು  ನೋಡುವುದೇ ಒಳ್ಳೆಯದು ಅನ್ನಿಸುತ್ತಿತ್ತು.

205_537194632990698_1350758259_n

Add Comment

Leave a Reply

%d bloggers like this: