Quantcast

ಕಲ್ಬುರ್ಗಿಯವರ ‘ಮಾರ್ಗ’

ಎಂ.ಎಂ. ಕಲ್ಬುರ್ಗಿಯವರ ‘ಮಾರ್ಗ’ : ಒಂದು ಸಮೀಕ್ಷೆ

ಕೆ. ರಘುನಾಥ್, ಮುಂಬಯಿ

ನಮ್ಮಲ್ಲಿ ಸಂಶೋಧನಾ ವಿಧಾನ ನಡೆದು ಬಂದ ದಾರಿಯನ್ನು ಕುರಿತು ಕಲ್ಬುರ್ಗಿಯವರು ಮುನ್ನುಡಿಯಲ್ಲಿ ‘ಸಾಮಗ್ರಿ ಶೋಧಮುಖಿ, ಸಾಮಗ್ರಿ ಸಂಯೋಜಿತ ಮುಖಿ, ಸಾಮಗ್ರಿ ವ್ಯಾಖ್ಯಾನ ಮುಖಿ’ ಎಂದು ಮೂರು ಬಗೆಗಳನ್ನು ಗುರುತಿಸಿ ಆ ಮೂರು ದಾರಿಗಳ ಮೂಲಕವೂ ತಾವು ಹಾದು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ಇದು ಅವರ ಸಂಶೋಧನಾ ಸ್ವರೂಪದ ಮೇಲೆ ಬೆಳಕು ಚೆಲ್ಲುತ್ತದೆ. ಕನ್ನಡದ ಸಂದರ್ಭದಲ್ಲಿ ಮೊದಲ ಘಟ್ಟದಲ್ಲಿ ಸಂಶೋಧನೆಯು ಕವಿ, ಕಾಲ, ದೇಶ, ಧರ್ಮಗಳಿಗೆ ಸಮೀತವಾಗಿದ್ದು ಎರಡನೆಯ ಘಟ್ಟದಲ್ಲಿ ಕವಿಯ ಕೃತಿಗಳ ಸಾಂಸ್ಕೃತಿಕ ಹಿನ್ನೆಲೆಯನ್ನು ಶೋಧಿಸುವುದರ ಕಡೆಗೆ ತನ್ನ ಗಮನವನ್ನು ಕೇಂಧ್ರೀಕರಿಸಿದ್ದರೆ, ಈಗ ಅದು ಸಾಂಸ್ಕೃತಿಕ ಅಧ್ಯಯನದ ವಿಭಿನ್ನ ನೆಲೆಗಳ ಕಡೆಗೆ ಹೊರಳಿಕೊಳ್ಳುತ್ತಿದೆ. ಇದಕ್ಕೆ ಪಂಪ ಯುಗ, ವಚನ ಚಳವಳಿ, ಕುಮಾರ ವ್ಯಾಸ ಯುಗಗಳನ್ನು ಕುರಿತು ನಡೆದರುವ ಸಂಶೋಧನೆಗಳು ಸಾಕ್ಷಿಯಾಗಿವೆ.

ವೈಜ್ಞಾನಿಕ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳಿಗೂ, ಮಾನವಿಕ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳಿಗೂ ಮೂಲಭೂತ ವ್ಯತ್ಯಾಸವಿದೆ. ಅದರಲ್ಲೂ ಭಾಷೆಯನ್ನು ರೂಪಕಗಳ ನೆಲೆಯಲ್ಲಿ ಬಳಸಲ್ಪಡುವ ಸಾಹಿತ್ಯನ ಪ್ರಕಾರದಲ್ಲಿ ‘ಇದಮಿತ್ಥಂ’ ಎಂದು ಸ್ಥಾಪಿಸಲು ಸಾಧ್ಯವಾಗುತ್ತದೆ ಎಂಬುದು ಅನುಮಾನಾಸ್ಪದ ವಿಷಯ.

ಈ ಹಿನ್ನೆಲೆಯಲ್ಲಿ ಮಾರ್ಗ-1 ರಲ್ಲಿ ಸಂಚಿತವಾಗಿರುವ ಲೇಖನಗಳನ್ನು ಗಮನಿಸಿದಾಗ ಸ್ಪಷ್ಟವಾಗುವ ಸಂಗತಿಯೆಂದರೆ ಇಲ್ಲಿ ಸಾಹಿತ್ಯದ ಪಠ್ಯವನ್ನು ಶಾಸನ ಪಠ್ಯದೊಂದಿಗೆ ಹೋಲಿಸಿ ನೋಡುವ ವಿಧಾನ. ಇದು ಹೆಚ್ಚು ಅಧಿಕೃತ ವಿಧಾನ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಹೀಗೆ ಮಾಡುವಾಗ ಉಂಟಾಗುವ ತೊಡಕೆಂದರೆ ಸಾಹಿತ್ಯಕ ಪಠ್ಯವೊಂದು ಕೊಡುವ ಐತಿಹಾಸಿಕವೆನ್ನಬಹುದಾದ ವಿವರಗಳು ಎಷ್ಟರಮಟ್ಟಿಗೆ ವಿಶ್ವಾಸಾರ್ಹ ಎನ್ನುವುದು.

m m kalburgi1ಇದೇ ಪ್ರಶ್ನೆಗಳನ್ನು ಶಾಸನಗಳಿಗೂ ಅನ್ವಯಿಸಬಹುದೇನೋ. ಉದಾಹರಣೆಗೆ, ಪಂಪಭಾರತದಲ್ಲಿ ಪಂಪ ಉಲ್ಲೇಖಿಸುವ ನಾಲ್ಕು ಯುದ್ಧಗಳಲ್ಲಿ ಕೊನೆಯದಕ್ಕೆ ಇನ್ನೂ ಶಾಸನಾಧರ ಸಿಕ್ಕಿಲ್ಲವೆಂದು ಬರೆದಿದ್ದಾರೆ. ಒಂದು ವೇಳೆ ಆ ಶಾಸನ ಇನ್ನು ಮುಂದೆ ದೊರೆತು ಪಂಪನ ಹೇಳಿಕೆ ನಿಜವಾಯಿತೆನ್ನೋಣ ಆಗಲೂ ಅದರಿಂದ ಪಂಪನ ಕೃತಿಯ ಮೌಲ್ಯ ಮಾಪನಕ್ಕೆ ಹೇಗೆ ಸಹಾಯವಾಗುತ್ತದೆ ಎಂಬ ಪ್ರಶ್ನೆ ಉಳಿದೇ ಉಳಿಯುತ್ತದೆ.

ಅದೇ ರೀತಿಯಲ್ಲಿ ಪಂಪ ಅರಕೇಸರಿಯನ್ನು ಅರ್ಜುನನ ಜೊತೆಗೆ ‘ತಗುಳ್ಚಿ’ ಹೇಳಿದ್ದರಿಂದ ಅರಿಕೇಸರಿಗೂ ನ್ಯಾಯ ಸಂದಂತೆ ಆಗಲಿಲ್ಲ, ಅರ್ಜುನನಿಗೂ ನ್ಯಾಯ ಸಂದಂತೆ ಅಗಲಿಲ್ಲ ಎನ್ನುವುದು ಅವರ ನಿಲುವು. ತನ್ನ ಕಾಲದ ರಾಜಕೀಯ ಸಂವೇದನೆಯನ್ನು ತೆಕ್ಕೆಗೆ ಒಗ್ಗಿಸಿಕೊಳ್ಳಲು ಅರಿಕೇಸರಿಯನ್ನು ನೆಪವನ್ನಾಗಿ ಮಾಡಿಕೊಳ್ಳವುದು ಅವನಿಗೆ ಅನಿವಾರ್ಯವಾಗಿತ್ತು ಎಂಬುದೇ ಸತ್ಯಕ್ಕೆ ಹತ್ತಿರವಾಗುವುದಿಲ್ಲವೇ? ಕೆ.ವಿ. ಸುಬ್ಬಣ್ಣ ಅವರ ‘ಪಂಪನ ಕವಿತೆಗೆ ಒಂದು ಹೊಸ ಅನುಸಂಧಾನ’ ಎನ್ನುವ ಲೇಖನ ಇದಕ್ಕೆ ಸಾಕ್ಷಿಯಾಗಿದೆ.

ಪಂಪ ಯುಗದ ಮೌಲ್ಯಗಳನ್ನು ಕುರಿತು ಎಂ. ಎಂ. ಕಲ್ಬುರ್ಗಿ ಮತ್ತು ಇತರ ಸಂಶೋಧಕರು ಆಗಿನ ಶಾಸನಗಳನ್ನು ಆಧರಿಸಿ ಮಾಡಿದ ವಿಶ್ಲೇಷಣೆಗಳು ಇದೇ ಬಗೆಯಲ್ಲಿ ಆಗಿನ ರಾಜಪ್ರೇರಿತ, ರಾಜ ಪೋಷಿತ ಲಿಖಿತ ಆಧಾರಗಳನ್ನು ಬಳಸಿಕೊಂಡು ಮಂಡಿಸುವ ‘ವೀರ, ತ್ಯಾಗ, ಭೋಗ’ ಇತ್ಯಾದಿ ಮೌಲ್ಯಗಳು ಎಷ್ಟರ ಮಟ್ಟಿಗೆ ಸಾರ್ವತ್ರಿಕವಾಗಿ ಅನ್ವಯವಾಗುತ್ತಿದ್ದವು ಎಂಬುದನ್ನು ಇನ್ನೂ ಶೋಧಿಸಬೇಕಾಗಿದೆ. ಆದರೆ ಪಂಪ ಯುಗವನ್ನು ಕುರಿತ ಇವರ ಮುಖ್ಯ ಸಾಧನೆಗಳೆಂದರೆ ಶಾಸನಗಳನ್ನು ಆಧರಿಸಿ ಪಂಪನ ತಾಯಿ ಅಬ್ಬಣಬ್ಬೆ ಎಂಬುದನ್ನು ಸ್ಥಾಪಿಸಿರುವುದು ಮೌಲಿಕವಾದ ಸಂಗತಿಯಾಗಿದೆ.

ಎರಡನೆಯ ಭಾಗದಲ್ಲಿ ವಚನ ಸಾಹಿತ್ಯವನ್ನು ಕೇಂದ್ರವನ್ನಾಗಿಟ್ಟುಕೊಂಡು ತಮ್ಮ ಸಂಶೋಧನೆಯನ್ನು ನಡೆಸಿದ್ದಾರೆ. ಇದರಲ್ಲಿ ವಚನಕಾರರ ಜೀವನವನ್ನು ಅವರ ವಚನಗಳ, ಅವರ ಕುರಿತ ಕಾವ್ಯಗಳ ಹಾಗೂ ಶಸನಗಳ ಆಧಾರದ ಮೇಲೆ ಪುನರ್ ರಚನೆ ಮಾಡಲು ಬರೆದ ಲೇಖನಗಳು ಒಂದು ಭಾಗವಾದರೆ, ಶೂನ್ಯ ಸಂಪಾದನೆಯಲ್ಲಿನ ವಿಭಿನ್ನ ಪಾಠಗಳನ್ನು ಅವುಗಳ ಸಂಪಾದನಾ ಕ್ರಮಗಳನ್ನು ಕುರಿತ ಲೇಖನಗಳು ಎರಡನೆಯ ಭಾಗ.

ವಚನಗಳ ಸಂಕಲನ, ಸಂಗ್ರಹ, ಸಂಪಾದನೆಗಳು ನಡೆದ ಬಂದ ದಾರಿಯ ಮೇಲೆ ಬೆಳಕು ಚೆಲ್ಲುವ ಲೇಖನಗಳು ಮೂರನೆಯದು. ವೀರಶೈವ ಧಾರ್ಮಿಕ ಪರಿಭಾಷೆಗಳ ಸಮಕಾಲೀನ ಮಹತ್ವವನ್ನು ಎತ್ತಿ ಹಿಡಿಯುವಂತಹ ಲೇಖನಗಳು ನಾಲ್ಕನೆಯದು. ಹರಿಹರ, ಚಾಮರಸ ಮುಂತಾದ ವೀರಶೈವ ಕವಿಗಳಲ್ಲಿ ಕಂಡುಬರುವ ಶಿವಶರಣ ಜೀವನ ವಿನ್ಯಾಸ ಮತ್ತು ಮೌಲ್ಯಗಳ ಅನ್ವೇಷಣೆ ಐದನೆಯದು.

ಮೊದಲನೆಯದಕ್ಕೆ ನಿದರ್ಶನವಾಗಿ ಬಸವಣ್ಣ, ಅಲ್ಲಮ ಪ್ರಭು, ನೀಲಲೋಚನೆ ಮುಂತಾದವರ ಕುರಿತಾದ ಲೇಖನಗಳನ್ನು ನೋಡಬಹುದು. ಬಸವಣ್ಣ ನೀಲಲೋಚನೆಯನ್ನು ಮದುವೆಯಾಗಬೇಕಾಗಿ ಬಂದ ಸಂದರ್ಭವನ್ನು ವಿಶ್ಲೇಷಿಸುತ್ತಾ ಅನ್ಯ ಜಾತಿಗೆ ಸೇರಿರಬಹುದಾದ ಅವಳನ್ನು ಮದುವೆಯಾಗುವುದರ ಮೂಲಕ ಜಾತ್ಯಾತೀತ ಸಮಾಜವನ್ನು ಕಟ್ಟಲು ಹೊರಟ ತಾನೇ ವೈಯಕ್ತಿಕ ಮಾದರಿಯನ್ನು ಹಾಕಿಕೊಡುವುದಕ್ಕಾಗಿ ಮಾಡಿದ ಎಂಬ ಪ್ರಮೇಯವನ್ನು ಮಂಡಿಸಿದ್ದಾರೆ.

ಆದರೆ ಮೊದಲ ಹೆಂಡತಿಯನ್ನು ಮದುವೆಯಾಗುವಾಗಲೇ ಇದನ್ನು ಮಾಡಬಹುದಿತ್ತಲ್ಲವೇ ಎಂಬ ಪ್ರಶ್ನೆ ಇದರಿಂದ ಸಹಜವಾಗಿಯೇ ಮೂಡುತ್ತದೆ. ತನ್ನ ಅಕ್ಕನನ್ನು ಡೋಹರ ಕಕ್ಕಯ್ಯನಿಗೆ ವಿವಾಹ ಮಾಡಿಕೊಟ್ಟಿದ್ದರ ಫಲವೇ ಚೆನ್ನಬಸವಣ್ಣ ಎನ್ನುವ ರಹಸ್ಯದ ಮೇಲೆ ಬೆಳಕು ಚೆಲ್ಲಿ ವೀರಶೈವ ಸಮಾಜದಿಂದ ವಿರೋಧವನ್ನು ಎದುರಿಸಬೇಕಾಗಿ ಬಂದು ಕಡೆಗೆ ತಮ್ಮ ವಾದವನ್ನು ಹಿತೆಗೆದುಕೊಳ್ಳಬೇಕಾಗಿ ಬಂದದ್ದು, ಬಸವಣ್ಣ ಕಟ್ಟಿದ ವೀರಶೈವ ಸಮಾಜಕ್ಕೆ ಹಿಡಿದ ಗ್ರಹಣಕ್ಕೆ ದಾಖಲಾಗಿದೆ ಎಂದು ಇಲ್ಲಿ ವಿಷಾದದಿಂದ ದಾಖಲಿಸಬೇಕಾಗಿದೆ. ಬಹುಶಃ ಇದನ್ನು ಕುರಿತೇ ಮುನ್ನುಡಿಯಲ್ಲಿ ತಮ್ಮ ಕಾಲ ಕೆಳಗೆ ತೋಡಿದ ಅಗ್ನಿಕುಂಡಗಳೆಂದು ಕಲ್ಬುರ್ಗಿಯವರು ಹೇಳಿದ್ದಾರೆ.

ಎರಡನೆಯ ಭಾಗದಲ್ಲಿ ಶೂನ್ಯ ಸಂಪಾದನೆಯ ವಿಭಿನ್ನ ಪಾಠಗಳನ್ನು ಕುರಿತು ನಡೆಸಿರುವ ಅಧ್ಯಯನದಲ್ಲಿ ಅವರ ಅಪಾರ ಪಾಂಡಿತ್ಯ, ವೈಜ್ಞಾನಿಕ ಗ್ರಂಥ ಸಂಪಾದನೆ ದೃಷ್ಟಿಕೋನಗಳು ಮಿಳಿತಗೊಂಡಿವೆ. ಸಂಕಲನ, ವ್ಯವಸ್ಥಾಪನ, ವ್ಯಾಖ್ಯಾನ ಈ ಮೂರೂ ಹಂತಗಳಲ್ಲಿ ನಡೆದ ಶೂನ್ಯ ಸಂಪಾದನೆಗಳ ಸಂಪಾದನೆ ನಡೆದು ಬಂದ ದಾರಿಯನ್ನು ಅತ್ಯಂತ ಖಚಿತವಾಗಿ ಗುರುತಿಸಿರುವುದಲ್ಲದೇ, ಆಗಬೇಕಾದ ಕಾರ್ಯವನ್ನು ನಿರ್ದೇಶಿಸಿದ್ದಾರೆ.

ಮೂರನೆಯದಾಗಿ ವೀರಶೈವ ಧಾರ್ಮಿಕ ಪರಿಭಾಷೆಗಳಾದ ಗುರು, ಲಿಂಗ, ಜಂಗಮ, ಕಾಯಕ, ದಾಸೋಹ ಇತ್ಯಾದಿಗಳು ಹುಟ್ಟಿಕೊಂಡ ಸಮಕಾಲೀನ ಸನ್ನಿವೇಶದ ಮಹತ್ವವನ್ನು ಮತ್ತು ಅವುಗಳ ಸಮಕಾಲೀನತೆಯನ್ನು ಎತ್ತಿಹಿಡಿದಿದ್ದಾರೆ.
ನಾಲ್ಕನೆಯದಾಗಿ ಹರಿಹರನ ರಗಳೆಗಳಲ್ಲಿ ಅವರು ಕಾಣುವುದು ಸಾಮಾಜಿಕ ಸಂಘರ್ಷದ ಧ್ವನಿ. ಇವುಗಳಲ್ಲಿ ಪ್ರಧಾನವಾಗಿ ಕಾಣಿಸಲು ಬಯಸುವ ಸಮರ್ಥನೆಯ ದಾಟಿಯನ್ನು ಕುರಿತು ವಿದ್ವಾಂಸರಲ್ಲಿ ಇರುವ ಭಿನ್ನಾಭಿಪ್ರಯವನ್ನು ಇಲ್ಲಿ ಗಮನಕ್ಕೆ ತಂದುಕೊಳ್ಳುವುದು ಅಗತ್ಯವಾಗಿದೆ.

ಉದಾಹರಣೆಗೆ, ಡಾ. ಜಿ.ಎಸ್. ಶಿವರುದ್ರಪ್ಪನವರು ಮತ್ತು ಸಿ. ವೀರಣ್ಣನವರು ‘ವಚನಕಾರರ ಕಾಲಕ್ಕೆ ಅತ್ಯಂತ ಸಮೀಪವಿದ್ದ ಹರಿಹರ ಹೆಚ್ಚು ಐತಿಹಾಸಿಕ ಚಿತ್ರವನ್ನು ಕೊಡಬಹುದಾಗಿತ್ತು ಎನ್ನುವ ಹಾಗೂ ಅವನ ಭಕ್ತಿಯ ಅತಿರೇಕದಲ್ಲಿ ವಚನಕಾರರನ್ನು ಶಿವ ಸಂಕಲ್ಪದ ಕೀಲುಬೊಂಬೆಗಳನ್ನಾಗಿ ಮಾಡಿಬಿಟ್ಟಿದ್ದಾನೆ ‘ ಎಂಬ ಹೇಳಿಕೆಗಳು ಇವರ ನಿಲುವು  ಎಷ್ಟರ ಮಟ್ಟಿಗೆ ಸಮರ್ಥನೀಯ ಎಂಬ ಪ್ರಶ್ನೆಯನ್ನು ಒಡ್ಡುತ್ತದೆ.

‘ನೀಲಲೋಚನೆ ಜೀವನದ ತಿರುವು’ ಕುರಿತ ಲೇಖನದಲ್ಲಿ, ಜಂಗಮನೊಬ್ಬ ಬಂದು ‘ಹೆಂಗೂಸಿಲ್ಲದೆ ಇರ್ದುದಿಲ್ಲ’ ಎಂದಾಗ ಅವಳನ್ನು ಬಸವಣ್ಣ ಊರಿನಲ್ಲಿ ವೇಶ್ಯೆಯರು ದೊರೆಯದ ಪ್ರಯುಕ್ತ ಅವನಿಗೆ ಒಪ್ಪಿಸುತ್ತಾನೆ. ನೀಲಲೋಚನೆ ಅದಕ್ಕೆ ಸಿದ್ಧವಾಗಿಯೇ ಇದ್ದು ಜಂಗಮನಲ್ಲಿಗೆ ಹೋದಾಗ ಜಂಗಮ ಸಂಗಮದೇವನಾಗಿ ಪರಿವರ್ತನೆ ಹೊಂದುತ್ತಾನೆ. ಅದನ್ನು ಅವಳು ಬಸವಣ್ಣನಿಗೆ ತಿಳಿಸಿದಾಗ, ‘ಮುನ್ನವಾರೆಂದು ಕೊಟ್ಟೆನು ತಾಯೇ’ ಎಂದು ಬಿಡುತ್ತಾನೆ. ಈ ಪ್ರಸಂಗ ನಡೆದ ನಂತರ ಅವಳನ್ನು ತಾಯಿ ಎಂದೇ ಪರಿಗಣಿಸತೊಡಗುತ್ತಾನೆ. ಅವಳಿಗೆ ದಾಂಪತ್ಯದ ಬದುಕು ಇಲ್ಲವಾಗುತ್ತದೆ.

m m kalburgiಅವಳ ವಚನಗಳಲ್ಲಿ ತುಂಬಿಕೊಂಡಿರುವ ವಿರಹ ಧ್ವನಿಯನ್ನು ಕುರಿತು ಕಲ್ಬುರ್ಗಿಯವರು ಅತ್ಯಂತ ವಿಷಾದಿಂದ ಬರೆಯುತ್ತಾರೆ. ಆದರೆ ಬಸವಣ್ಣನ ಈನಿಲುವಿನ ವಿರುದ್ಧವಾಗಿ ಅವರು ಧ್ವನಿಯೆತ್ತದಿರುವುದು ಆಶ್ಚರ್ಯವಾಗಿದೆ. ಹೆಣ್ಣಿಗೆ ಸ್ವಾತಂತ್ರ್ಯವನ್ನು ತಂದುಕೊಡಲು ಕಾರಣವಾದ ವಚನ ಚಳವಳಿಯ ಹರಿಕಾರನೊಬ್ಬನ ಈ ನಿಲುವನ್ನು ಒಪ್ಪುವುದು ಹೇಗೆ?

ಅದೇ ರೀತಿಯಲ್ಲಿ ಕಳ್ಳನೊಬ್ಬ ಬಂದು ಅವಳ ವಾಲೆಗ ಕೈಹಾಕಿ ಕದ್ದೊಯ್ಯಲು ಪ್ರಯತ್ನಿಸಿದಾಗ ಏಕೆ ಬಿಚ್ಚಿಕೊಡಲಿಲ್ಲವೆಂದು ಅವಳ ಮೇಲೆ ಹರಿಹಾಯುವ ಬಸವಣ್ಣನನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದನ್ನು ಕಲ್ಬುರ್ಗಿಯವರು ಸಮರ್ಥನೆಯ ದಾಟಿಯಲ್ಲಿ ಬರೆಯುತ್ತಾರೆ.

ಆದರೆ ವಿಮರ್ಶಾ ಮಾರ್ಗದಲ್ಲಿ ಅವರು ಬರೆದಿರುವ ಲೇಖನಗಳು ಅದು ನಾಗಚಂಧ್ರನ ‘ಜಲರಾವಣ’ ನನ್ನು ಕುರಿತದ್ದಾಗಲೀ, ‘ನನ್ನಿಯೊಳ್ ಇನತನಯಂ’ ಆಗಲೀ ಅವರ ವಸ್ತುನಿಷ್ಠ ಅಧ್ಯಯನಕ್ಕೆ ಅತ್ಯುನ್ನತ ಮಾದರಿಗಳಾಗಿವೆ. ರಾವಣನ ಜೀವನವೇ ಜಲಮಯವಾಗಿತ್ತೆಂದು ಸ್ಥಾಪಿಸುವಾಗಲೀ ಅವರ ಅಪಾರ ಪಾಂಡಿತ್ಯ ಮತ್ತು ಸಹೃದಯತೆಗಳು ಬೆಳಕಿಗೆ ಬರುತ್ತವೆ.

ಹೊಸಗನ್ನಡ ಸಾಹಿತ್ಯದಲ್ಲಿ ಸ.ಸ. ಮಾಳವಾಡರ ವಿಚಾರ ಸಾಹಿತ್ಯದ ಮಹತ್ವವನ್ನು ಡಿ.ಎಲ್. ನರಸಿಂಹಾಚಾರ್ಯರ ವ್ಯಕ್ತಿತ್ವದ ಘನತೆಯನ್ನು, ಆರ್. ಸಿ. ಹಿರೇಮಠರ ವರ್ಗಬೋಧನೆಯ ಪಾಂಡಿತ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಪ್ರಾಯೋಗಿಕ ವಿಮರ್ಶೆಯಲ್ಲಿ ಅವರಿಗೆ ಇರುವ ಗತಿಗೆ ಚೆನ್ನವೀರ ಕಣವಿಯವರು ಬೇಂದ್ರೆ್ಯವರನ್ನು ಕುರಿತು ಬರೆದಿರುವ ಕವಿತೆಯ ಬಗ್ಗೆ ಮಾಡಿರುವ ವಿಮರ್ಶೆಯು ಸಾಕ್ಷಿಯಾಗಿದೆ.

ನನ್ನ ಮುಖ್ಯ ಭಿನ್ನಾಭಿಪ್ರಾಯವೆಂದರೆ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳನ್ನು ಬ್ರಾಹ್ಮಣ ಸಾಹಿತ್ಯವೆಂದು ಹಣೆಪಟ್ಟಿ ಕಟ್ಟಿರುವ ಬಗೆಗೆ. ಇದು ನಮ್ಮ ಸಾಹಿತ್ಯ ಚರಿತ್ರೆಯ ಮೊದಲ ಘಟ್ಟದಲ್ಲಿ ನಡೆದ ಸಾಂಪ್ರದಾಯಕ ವಿಭಾಗ ಕ್ರಮಕ್ಕಿಂತ ಹೇಗೆ ಭಿನ್ನವಾಗಿದೆ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ.

ಬ್ರಾಹ್ಮಣರು ಬರೆದದ್ದನ್ನು ಬ್ರಾಹ್ಮಣ ಸಾಹಿತ್ಯವೆಂದು ಕರೆಯುವುದಾದರೆ, ಬಸವಣ್ಣ ಬರೆದದ್ದು ಯಾಕೆ ಬ್ರಾಹ್ಮಣ ಸಾಹಿತ್ಯವಾಗಬಾರದು? ಸಾಹಿತ್ಯಕ್ಕೆ ಜಾತೀಯ ರಾಜಕಾರಣವನ್ನು ತರುವುದು ಸಂಶೋಧನೆಯ ಹೆಸರಿನಲ್ಲಿ ಸರಿಯಲ್ಲ ಎಂದು ನನ್ನ ಖಚಿತವಾದ ಅಭಿಪ್ರಾಯ.

ಅದಕ್ಕೆ ಪ್ರಾಚೀನ ಸಾಹಿತ್ಯವನ್ನು ಇನ್ನು ಮೇಲೆ ಕನ್ನಡ ಸಾಹಿತ್ಯ ಚರಿತ್ರೆಯನ್ನು ಒಂದು ಕವಿರಾಜಮಾರ್ಗ ಪೂರ್ವ ಯುಗ, ಎರಡು ಕವಿರಾಜಮಾರ್ಗ ಯುಗ, ಮತ್ತು ವಚನ ಸಾಹಿತ್ಯ ಮಧ್ಯಯುಗವೆಂದು ವಿಭಜಿಸುವುದು ಸೂಕ್ತವೆಂದಿದ್ದಾರೆ. ಹಾಗೆಯೇ ವೀರಶೈವ ಯುಗದ ವ್ಯಾಪ್ತಿಯನ್ನು ಹನ್ನೆರಡನೇ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗೆ ತಂದು ‘ಭಕ್ತಿ ಎಂಬ ಮನ ನಡುಗನ್ನಡವೆಂಬ ವಚನ, ಶಟ್ಪದಿಯೆಂಬ ಕಾಯದೃಷ್ಟಿಯಿಂದ, ವೀರಶೈವ ಯುಗವೆಂಬ ಹೆಸರಿನಿಂದ ಕರೆಯಬೇಕಾಗುತ್ತದೆ’ ಎಂದಿರುವುದು, ಕನ್ನಡ ಸಾಹಿತ್ಯ ಚರಿತ್ರೆಯನ್ನು ಪುನರ್ ರಚಿಸುವ ಒಂದು ವಸ್ತುನಿಷ್ಠ ಪ್ರಯತ್ನವಾಗಿದೆ.

ಮೇಲಿನ ಸ್ಥೂಲ ಸಮೀಕ್ಷೆಯಿಂದ ನನಗೆ ಕಲ್ಬುರ್ಗಿಯವರ ಸಂಶೋಧನೆ ಯಾಕೆ ಮಹತ್ವದ್ದಾಗಿ ಕಾಣುತ್ತದೆಂದರೆ, ಬಹುತೇಕ ಅವರ ವಸ್ತುನಿಷ್ಠತೆ, ಪ್ರಾಮಾಣಿಕತೆ ಮತ್ತು ತತ್ಪರತೆಗಳು. ಈ ಮೂರೂ ಗುಣಗಳು ಮುಪ್ಪರಿಗೊಂಡು ಅವರು ಕನ್ನಡ ಸಂಶೋಧನಾ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಮತ್ತು ಈಗಿನ ಸಂಶೋಧಕರಿಗೆ ತೋರುಗಂಬವಾಗಿ ಪರಿಣಮಿಸಿದ್ದಾರೆ.

Add Comment

Leave a Reply