Quantcast

ಮಳಿ ಇಲ್ಲಾ ಕೆಸರಿಲ್ಲ, ಅದೆಂಗಿಲ್ಲಿ ಕಮಲ ಅಳ್ಳಿಬುಡ್ತೈತಿ ?

ಇಷ್ಟು ವರ್ಸ ಇಲ್ಲದ್ದ್ ಕಾನೂನು ಅದ್ ಯಾದು ಬಂದೈತಬೇ ಇತ್ತಿತ್ಲಾಗ ?

ಕೋತಿಗೌಡಪ್ಪರ ಇರ್ಪಜ್ಜ, ಗಡೆದೆಪ್ಪರ ಯಗ್ಗಪ್ಪ, ಉತ್ತಂಗಿ ಟಾಕ, ಎಲ್ಲಾರು ಹಿಂದ್ಲು ಮುಂದ್ಲು ಮನಿ ಹುಡ್ರೆಲ್ಲಾ ಸೇರಿಕಂಡು ಟವಲ್ ನಾಗ ಬುತ್ತಿ ಕಟಿಗಂಡು ದನಗುಳ ಹೊಡ್ಕಂಡು ಜೌಳದ ಕಡಿಗೆ ಹೊಂಟಿದ್ರು, ಹಿಂದಿಲಿಂದ ಹಾದ್ಯಾಗ ಬೀಳಾಕತ್ತಿದ್ದ ವತ್ಲಿಗಟ್ಲೆ ಸೆಗಣಿನ ಕಲ್ ಪುಟ್ಯಾಕ ತುಂಬಿಕೋತ ಬನ್ನಿಗೋಳದ ಶಿವಮ್ಮ ಹೊಂಟಿದ್ಲು, ಅದಾ ಟೈಂಗೆ ಸರೀಗೆ ಗುಡಿ ಕಡಿಗೆ ಬರಾಕತ್ತಿದ್ದ ಮೈಲವ್ವ, ‘ಅವಾ ಮನಿತುಂಬ ದನಾ ಕಟ್ಗಂಡಿಬೇ ಶಿವಮ್ಮಾ, ಹಾದ್ಯಾಗ್ಲ ಸಗಣಿನೂ ಬಿಡಲ್ಲ ಅಂತಿಯಲ್ಲಾ ಈಟಾಕಂದು ಆಸಿ ಇರಬಾರದ್ರಬೇ ಮನಿಷ್ಯಾರಿಗೆ’ ಅಂದ್ಲು.

shivu poster cut low1ಮೈಲವ್ವನ ದನಿ ಕೇಳಿದ ಶಿವಮ್ಮ ‘ಏನ್ ಮಾಡ್ತಿಬೇ ವಜ್ಜೀ, ದೇವ್ರು ಅಂಬೋನೊಬ್ಬಾನು ಈ ವಡ್ಲಾ ಅನ್ನಾದೊಂದನ್ನ ಮಾಡ್ಯಾನಲ್ಲವ್ವಾ, ಎಲ್ಲಾ ಅದ್ಕಾ ಮಾಡಾದು ನೋಡು’ ಅಂದ್ಲು. ‘ಊರಾಗಿಲ್ಲದ ವಡ್ಲ ನಿನಿಗ್ಯಾ ಕೊಟ್ಟಾನ ಬುಡವ್ವ’ ಅನ್ನಾಕತ್ತಿದ್ಳು ಮೈಲವ್ವ, ಅಷ್ಟತ್ಗೆ, ಶಿವಮ್ಮ ಹಿಡ್ಕಂಡಿದ್ದ ಕಲ್ ಪುಟ್ಟಿ ತುಂಬ್ತು ಅದನ್ನ ತಮ್ಮನಿ ಅಂಗ್ಳದಾಕ ಹಾಕಿ ಬರಾಕ ಹೊಂಟ್ಳು.

ಶಿವಮ್ಮ ಮನಿ ಕಡಿಗೆ ಹೊಂಟಿದ್ನ ನೋಡಿದ ಮೈಲವ್ವ, ಈಕಡಿಗೆ ತಿರುಗಿ, ದನ ಹೊಡ್ಕಂಡು ಹೊಂಟಿದ್ದ ಹುಡ್ರಿಗೆ ಕೂಗಿ ‘ಹುಷಾರಿ ಕಾಯ್ಕಂಡು ಬರ್ರಲೋ ದನಗುಳ್ನ. ಜೌಳದ ಜಾಲಿ ಪೆಳಿಗುಳಾಗ ಹಸದ ತ್ವಾಳಗುಳು ಕುಂತಾವಂತ್ಯ. ಎತ್ಗುಳೇನಾ ಹೆಂಗಾ ತಪ್ಪಿಸ್ಕಂಬುಡಬೋದು, ಆದ್ರ ಆಕ್ಳಗುಳು ಅದಾವಲ್ಲಾ ಅವಕ್ಕೇನೂ ಆಗದಂಗ ಕಾಯ್ಕಂಬರ್ರೆಲೋ ಪುಣ್ಯಾತ್ಮರಾ, ಯಾಕಂದ್ರ ಆ ನಮ್ಮವ್ವ ಗೋಪಿತಾಯಿ ಮೈ ತುಂಬಾ ದೇವ್ರುಗಳನ್ನ ತುರಿಕ್ಯಾರ ನಮ್ ಹಿರಿಕ್ರು, ತಿಳಿತಿಲ್ಲು?’ ಅಂತ ಹೇಳಿದ್ದನ್ನ ಕೇಳಿದ ಆ ಹುಡ್ರೊಳಗೊಬ್ಬ ‘ನಮ್ ದನಗುಳ್ನ ಹೆಂಗ ಕಾಯ್ಬೇಕು ಅನ್ನಾದು ನಮಿಗೊತ್ತು, ಅದ್ರಾಗ ನಿಂದೇನಬೇ ಯಜಮಾನ್ಕಿ ? ಸುಮ್ನ ನಡಿಯಿನ್ನು ಕರಿಯವ್ನ ಗುಡಿ ಹಾದಿ ಹಿಡದು.’ ಅಂದ.

ಆ ಹುಡ್ರು ಮಾತು ಕೇಳಿದ ಮೈಲವ್ವ, ‘ನೀವೇಳಾದೂ ಖರೆ ಐತಿ ಬುಡ್ರಲೋ ಹುಡ್ರಾ, ಅಪ್ಪಗುಟ್ಟಿದ ಉತ್ರ ಕೊಟ್ರಿ ಬಿಡ್ರಲೊ ಏನಾರ ಯಾಕಾ ಆಗವಲ್ದಾಕ. ಅದನ್ನಾ ಇನ್ನೊಂದೀಟು ಜೋರ್ ಹೇಳ್ರಲೊ, ನನ್ನ ಕಿವಿ ಬಲು ಮಂದಾಗ್ಯಾವು.’ ಅಂತ ತನಗ ತಾನಾ ಅಂದ್ಕೋತ ಕರಿಯವ್ವನ ಗುಡಿತಾವ ಬಂದು ನಿಂತು ‘ಏನಬೇ ಕರಿಯವ್ವಾ ಹೆಂಗದಿ ? ನಾನೂ ನೋಡೇ ನೋಡೀನಿ ಅದ್ಯಾವಾಗಬೇ ನೀನು ದುಸ್ಟ್ರ ಸಂಹಾರ ಮಾಡಾಕ ಗುಡಿ ಬುಟ್ಟು ಎದ್ದು ಬರಾದು ? ನಿನಿಗೇನು ಹೇಳಾಕ ಅಕೈತವಾ ನನಿಗ್ಯ ? ಹೆಂಗಾ ನಿನಿಗ್ಯ ತಿಳದಂಗ ನೀ ಮಾಡ್ವಾ. ನಮ್ ಕೈಯಾಗೇನೈತಿ ಹೇಳು ?’ ಅಂದ್ಕೋತ ಕಟ್ಟಿ ಹತ್ತಿ ಕುಂತ್ಲು.

ಮೈಲವ್ವ ಒಬ್ಬಾಕೆ ಕಟ್ಟಿಗೆ ಕುಂತಿದ್ದನ್ನ ನೋಡಿಕೋಂತ ಬಂದ ನಮ್ ಬುಡೇನಜ್ಜ ‘ಏನ್ ಉಂಡು ಬಂದೆಬೇ ಮೈಲವ್ವಾ ?’ ಅಂತ ಕೇಳಿದ. ‘ನನ್ ಸೊಸಿ ರೊಟ್ಟಿ ಹಾಕಿದ್ಲು, ಚಿಬ್ಲ್ಯಾಕ ಬೀಳಾ ಸುಡ್ ಸುಡೋ ರೊಟ್ಟಿ ಉಣ್ಣಾ ಸುಖಾನಾ ಬ್ಯಾರೆ ಐತಿ ಬುಡು, ನಿನ್ಯ ನನ್ ಮಗ ಎಮ್ಮಿ ಕಾಯಾಕ ಹೋದಾಗ ಅಕ್ಕಕ್ರಿ ಸೊಪ್ಪು, ಕರ್ಚಿಕಾಯಿ, ಎಳೇ ಕುಸುಬಿ ಎಲಿನೂ ಕಿತ್ಗಂಡು ಬಂದಿದ್ದ,’ ಅಂತ ಇನ್ನೂ ಊಟದ ಮಜಾನ ಹೇಳಾಕತ್ತಿದ್ಲು, ನಡುಕ ಬಾಯಿ ಹಾಕಿದ ಬುಡೇನಜ್ಜ ‘ಸಾಕ್ ಬುಡಬೇ ನಿಮೌನ್. ಹೊಟ್ಟಿ ಹುರಿಯಂಗ ತಿಂದ್ ಬಂದಿದ್ನ ವರ್ಣನಾ ಮಾಡಿ ಹೇಳಾಕತ್ ಬುಟ್ಲು ಇಲ್ಲಿ.’ ಸಾಕ್ ಬುಡು ನಾ ಬರಿ ಮಸರು ಕಡ್ಲಿಪುಡಿ, ರೊಟ್ಟಿ ತಿಂದು ಬಂದೀನಿ ಆತಿಲ್ಲು.’ ಅಂದ.

Shivu Morigere-1 (1)ಇವರ ಮಾತುಗಳನ್ನ ಕೇಳಿಕಾಂತ ಬರಾಕತ್ತಿದ್ದ ರಾಮಣ್ಣ ‘ಉಣ್ಣಾ ವಿಚಾರಕ್ಕ ಯಾಕಿಂಗ ಮುಂಜ್ ಮುಂಜಾಲೆ ಹೊಡದಾಡಕತ್ತಿರೋ ನಿಮ್ಮೋಳು, ನೀವು ಏನು ಉಣ್ಣಾಕು ಅನ್ನಾದನ್ನೂ ಇವತ್ತು ಬ್ಯಾರೆ ಯಾರೋ ಡಿಸೈಡ್ ಮಾಡಾ ಕೆಟ್ ವಾತಾವರಣ ಸುರು ಆಗೈತಿ ಅಂತಾದ್ರಾಗ ನಿಮ್ಮದೊಂದು ಗದ್ಲ ಎಬ್ಸೀರಲ್ಲ’ ಅಂದ್ಕೋತ ‘ಅತ್ತತ್ತ ಸರ್ಕಳ್ಳೋ ಸಾಬಣ್ಣ ‘ಅಂತ ಬುಡೇನಜ್ಜನ ಸರಿಸಿ ಕುಂತ್ಗಂಡು ಏನೂ ಮಾತಾಡ್ದಂಗ ತನ್ನ ಬಕ್ಕಣದಾಗಿದ್ದ ಹಂಪ್ಸಾರ ಬೀಡಿ ಕಟ್ ತಗದು ತಾನೊಂದು ಹಚ್ಗಂಡು ಬುಡೇನಜ್ಜಗೊಂದು ಕೊಟ್ಟು ‘ನೀನೊಂದು ಹಚ್ಗಂತಿ ಏನ್ ಬೇ ಮೈಲವ್ವಾ ?’ ಅಂದ. ರಾಮಣ್ಣನ ಮಾತು ಕೇಳಿದ ಮೈಲವ್ವ  ಸುಮ್ನ ಕುಂದ್ರಲೋ ಅಡ್ಬಿಟ್ಟಿ ಅಂತ ಬೈದ್ಲು.

ಇವರು ಹಚ್ಚಿಗಂಡಿದ್ದ ಚುಟ್ಟ ಅರ್ಧ ಸುಟ್ಟಿತ್ತೇನೋ, ಅಷ್ಟತ್ಗಿ ಬೆನ್ನಿಗೊಂದು ದೊಡ್ ಬ್ಯಾಗ್ ಸಿಗೆಬುಟ್ಕಂಡು ಕೈಯಾಗೊಂದು ವಾರ್ಟ್ ಬಾಟ್ಲಿ ಹಿಡ್ಕಂಡು ಅಕ್ಕಿ ನಾಗ ಮನಿಕಡಿಗೊಂಟಿದ್ದ. ಅದನ್ನ ನೋಡಿದ ಬುಡೇನಜ್ಜ ‘ಓ ಹೋ ಹೋಹೋ, ಈಗ ಬಂತೇನಪಾ ತಮ್ಮಾ ಬೆಂಗಳೂರು ? ಮಳಿ ಆಗೈತೇನಲ್ಲಿ ? ಹೆಂಗೈತಿ ಅಲ್ಲಿ ಜನ?’ ಅಂತ ಒಂದಾ ಉಸ್ರಿಗೆ ಕೇಳಿದ. ಬುಡೇನಜ್ಜನ ಮಾತು ಕೇಳಿದ ನಾಗ ‘ಊನಜ್ಜಾ ಈಗ್ ಬಂದೆ, ಕೆಟ್ಟು ಪಟ್ಣ ಸೇರು ಅನ್ನಾ ಗಾದಿ ಇರಬೋದು, ಹಂಗಂತ, ಪಟ್ನದಾಗ ಇರಾರೆಲ್ಲಾ ಕೆಟ್ಟಾರು ಅನ್ನಕ್ಕಾಕೈತೇನಜ್ಜಾ ?’ ಅಂತ ಇನ್ನೂ ಏನಾ ಹೇಳಾಕ ಹೊಂಟಿದ್ದ, ನಡುಕ ಬಾಯಿ ಹಾಕಿದ ಮೈಲವ್ವ ‘ಲೋ,ಲೊಲೊಲೊ ತಮ್ಮಾ ಗಡಾನ ಮನಿ ಮುಟ್ಗ ಹೋಗಪ್ಪಾ, ಹಿಂಗ ನಡೋ ಹಾದ್ಯಾಗ ನೀ ಮಾತಾಡಿದ್ದು ಯಾರಾರ ಪಟ್ನದೋರು ಕೇಳಿಸ್ಕಂದು ದೇಸ ದ್ರೋಹ ಆಗೈತಿಲ್ಲಿ ಅಂತಂದು ಇಟಿಗಿ ಪೊಲೀಸ್ರಿಗೆ ಪೋನ್ ಹಚ್ಚಿ ಹೇಳಿ ಗೀಳ್ಯಾರು.’ ಅಂದದ್ದನ್ನ ಕೇಳಿದ ನಾಗ ‘ಪೂರಾ ರಾತ್ರಿ ಬಸ್ ನ್ಯಾಗ ಬಂದೀನಲ್ಲಾ, ಮೈ ಕೈಯಲ್ಲಾ ನೋಯಕಚ್ಚಿ ನಿದ್ದಿ ಬಂದೈತಿ, ಬೇಗ್ನತ್ತು ಸಿಗ್ನಿನಂತ್ರಜ್ಜೋ, ಇಕ್ಕರಿ’ ಅಂದ್ಕೋತ ತನ್ನ ಬಕ್ಕಣದಾಗಿದ್ದ ನೂರುಪ್ಪಾಯಿ ನೋಟು ಕೊಟ್ಟು ತನ್ ಮನಿಕಡಿಗೊಂಟ.

ನಾಗ ಕೊಟ್ಟ ನೂರುಪ್ಪಾಯಿನ ಕೈಯಾಗಿಡಕಂಡಿದ್ದ ರಾಮಣ್ಣ, ಮೈಲವ್ವನ ಕಡಿಗೆ ತಿರುಗಿ ‘ಅಲ್ಲಬೇ ಮೈಲವ್ವಾ, ಇಷ್ಟು ವರ್ಸ ಇಲ್ಲದ್ದ್ ಕಾನೂನು ಅದ್ ಯಾದು ಬಂದೈತಬೇ ಇತ್ತಿತ್ಲಾಗ ?, ಊರು ಅಂದಿಂದೆ ಉದ್ಮಾನ ಇದ್ದುದ್ದಾ, ಒಳ್ಳೇರು ಕೆಟ್ಟೋರು ಎಲ್ಲಾ ಕಡಿಗೂ ಅದಾರ ಆದ್ರ ಅದನ್ನ ಹೇಳಾಕ್ಕೂ ಈಗ ಯಾರದರ ಪರ್ಮಿಸನ್ ತಗಬೇಕೇನು ?’ ಅಂದ. ರಾಮಣ್ಣನ ಮಾತು ಕೇಳಿದ ಮೈಲವ್ವ ‘ಊನಲೋ ರಾಮಾ, ಇವತ್ ನಾವು ಏನಾ ಮಾತಾಡಕ್ಕಿಂತ ಮುಂಚಿ ಅದ್ರಾಗ ದೇಸ ಪ್ರೇಮ ಎಷ್ಟೈತಿ ಅಂತ ಚೆಕ್ ಮಾಡ್ಕಂಡಾ ಮಾತಾಡಾಕು. ಹಂಗಾಗೈತಿ ನಮ್ ಪರಿಸ್ಥಿತಿ.’ ಅಂದ್ಲು. ‘ಹಂಗಾರ ನಮ್ ಅಂಬೇಡ್ಕರ್ ಇಷ್ಟು ದಪ್ಪನ್ ಪುಸ್ತಕ ಬರದಿದ್ದು?’ ಅಂತ ಕೇಳ್ದ. ‘ಮಾಡ್ದೋರ ಪಾಪ ಆಡ್ದೋರ್ ಬಾಯಾಗ ಅನ್ನಂಗ ನಮಿಗ್ಯಾಕ ಬೇಕಲೋ ದೊಡ್ಡೋರ ಉಸಾಬ್ರಿ ? ಅದು ಅತ್ಲಾಗ ಇರ್ಲಿ, ಈ ಸಾಲಿ ಹುಡ್ರಿಗೆ ಉಣ್ಣಾದ್ರು ಜತಿಗ್ಯ, ಚಕ್ಕಲಿ ನಿಪ್ಪಟ್ಟು ಕೊಡಾಕ ಮನಸು ಮಾಡೈತಂತಲ್ಲ ಸರ್ಕಾರ ಗೊತ್ತೈತೇನು ನಿನಗ ?’ ಅಂತ ಕೇಳಿದ್ಲು ಮೈಲವ್ವ.

bjpdroughtಮೈಲವ್ವನ ಮಾತು ಕೇಳಿದ ರಾಮಣ್ಣ ‘ಈ ಸರ್ಕಾರ ಹಿಂಗ ಬಡವ್ರ ಪರವಾಗಿ ನಿಂತ್ರ ಇರೋದ ಪಕ್ಸಗುಳಿಗೆ ವಾದಾ ಮಾಡಾಕ ಏನು ವಿಷಯಾನಾ ಇಲ್ದಂಗಾಗಿಬುಡ್ತೈತೇನೋಪ್ಪಾ, ಹಿಂಗಾ ಆದ್ರ ಮುಂದೆಂಗ ಇವ್ರ ಗತಿ ?’ ಅಂದ. ರಾಮಣ್ಣನ ಮಾತಿಗೆ ಬುಡೇನಜ್ಜ ‘ಅಯ್ಯಾ ರಾಮಣ್ಣಾ, ನಮ್ಮ ರಾಜ್ಯದಾಗ ಜನ್ರಿಗೆ ಈ ಗೌರ್ಮೆಂಟ್ ಮ್ಯಾಲ ಒಳಗೊಳಗಾ ಕಂಡೆಬಟ್ಟೆ ಸಿಟೈತಂತ್ಯ. ಇವತ್ತಾ ಓಟು ನಡದ್ರ, ಕಮಲದೋರ ಸರ್ಕಾರ ಫುಲ್ ಲೀಡ್ ನಾಗ ಬರ್ತೈತಂತ್ಯ ಯಾರಾ ಯಾರಿಗೂ ಗೊತ್ತಾಗ್ದಂಗ ಸರ್ವೇ ಮಾಡ್ಯಾರಂತ್ಯ. ಗೊತ್ತಿಲ್ಲೇನು ನಿನಿಗ್ಯ ?’ ಅಂದ ಮಾತು ಕೇಳಿದ ಮೈಲವ್ವ ‘ಅಯ್ಯಾ ನಮ್ಮಪ್ನಾ ? ಮಳಿಯಿಲ್ಲ, ಕೆಸರಿಲ್ಲ ಅದೆಂಗಿಲ್ಲಿ ಕಮಲ ಅಳ್ಳಿಬುಡ್ತೈತಿ ?’ ಅಂತ ಕೇಳಿದ್ಲು. ಮೈಲವ್ವನ ಮಾತಿಗೆ ರಾಮಣ್ಣ ‘ನನಿಗೇನು ಗೊತ್ತಬೇ ನೀನಂತೂ. ಇನ್ನೊಂದೆಲ್ಡು ವರ್ಸ ತಡಿ ಅವಾಗೆಲ್ಲಾ ಗೊತ್ತಾಕೈತಿ ಆತಿಲ್ಲು?’ ಅಂದು ಕಟ್ಟಿಯಿಂದ ಒಂದೀಟು ಹಿಂದಕ್ಕ ಸರದು ಬೇನ ಮರದ ಬಡ್ಡಿಗೆ ಬೆನ್ನು ಕೊಟ್ಟು ಕುಂತ.

ರಾಮಣ್ಣ ಹಿಂದಕ್ಕ ಸರದು ಕುಂತಿದ್ನ ನೋಡಿದ ಬುಡೇನಜ್ಜ ಮೈಲವ್ವನ ಕಡಿಗೆ ತಿರುಗಿ ‘ಬೇ ಮೈಲವ್ವ, ಮನ್ಯ ನಮ್ ಬಳ್ಳಾರಿ ಜಿಲ್ಲಿಗ್ಯಾ ಬಂದು ಯಡ್ಯೂರಪ್ಪ ಏನ್ ಹೇಳ್ಯಾರಂತ ಕೇಳಿಯೇನು ?’ ಅಂದದ್ದಕ್ಕ ‘ಏನ್ ಹೇಳ್ಯಾರ ?’ ಅಂದ್ಲು. ‘ನಮ್ ರಾಜ್ಯದಾಗ ಭ್ರಷ್ಟಾಚಾರ ತಾಂಡಾಡಕತೈತಂತೆ ಗೊತ್ತೇನು ನಿನಗ ?’ ಅಂತ ನಕ್ಕ.  ನಗು ನೋಡಿದ ಮೈಲವ್ವ ‘ಕಾಮಾಲಿ ಕಮ್ಮಿ ಆದ ಮ್ಯಾಲ  ಎಲ್ಲಾಸರಿ ಕಾಣಬೋದು ಬುಡು ಔರಿಗೆ’ ಅಂತ ನಗಿಗೆ ನಗಿ ಸೇರ್ತು. ಇವರಿಬ್ರೂ ನಗಾದು ನೋಡಿದ ರಾಮಣ್ಣ, ‘ಬೇ ಇಲ್ಲಿ ಕೇಳ್ರಬಿಲ್ಲಿ, ಏನಾ ಮಾತಾಡಾದು ಬುಟ್ಟು ಇನ್ನೇನಾ ಮಾತಾಡಾಕ ಚಾಲೂ ಮಾಡೀರಲ್ಲ’ ಅಂತ ಏನಾ ಹೇಳಾಕಂತ ಹೊಂಟ ಅದಾ ಟೈಮ್ ಸರಿಗೆ ಹೊಸ ಪ್ಲಾಟ್ ಕಡ್ಯಾಗಿಂದ ಬರಬರ ಬಂದ ಅಂಚಿ ಹನ್ಮಣ್ಣ, ‘ಯಮ್ಮೋ ಲಮಾಣ್ಯಾರ್ ಸೀತಮ್ಮ ಹೋದ್ಲಮ್ಮೋ’ ಅಂದ.

ಹನ್ಮಣ್ಣನ ಮಾತು ಕೇಳಿದ ಮೈಲವ್ವ ‘ಸಿವ್ ಸಿವ್ನಾ… ಪಾರಾದ್ಲು ಬುಡಲೋ ತಮ್ಮಾ. ಅಂತಿದ್ದಂಗನಾ ರಾಮಣ್ಣ ‘ಸಾಬಣ್ಣ ಕೆರ ಮೆಟ್ಗ, ನಡಿರಿ ಹೋಗಿ ಸೀತಮ್ಮನ ಔರವ್ವ ಭೂಮ್ತಾಯಿ ಮಡ್ಲಿಗಾಕಿ ಬರಾನು ಮದ್ಲಾ ಅದಕ್ಕ ಹಿಂದಿಲ್ಲಾ ಮುಂದಿಲ್ಲ ಯಾರೂ ದಿಕ್ಕಿಲ್ಲದ ದ್ರೇಹ ಅದು.’ ಅಂತ ಹೇಳ್ತಿದ್ದಂಗನಾ ‘ನಾವು ಹಳೇ ಕಾಲ್ದ ಮಂದಿ ಅದೀವಿ ಹಿಂಗ ಒಬ್ರಿಗೊಬ್ರು ಅಕ್ಕೀವಿ ಆದ್ರ ಈಗಿನ ಮಂದಿ ಸತ್ತೋದ ಹೆಂಡ್ತಿನ ಊರಿಗೆ ತಗಂಡೋಗಾಕ ರೊಕ್ಕ ಇಲ್ದ ಮೂರು ಮೈಲಿ ಹೆಗ್ಲಮ್ಯಾಗ ಹೊತ್ಗಂಡು ಎದಿಮಟ ಬೆಳದ ಮಗಳು ಅಳಾದ್ನೂ ಸುಮ್ನಿರಿಸ್ಕೋತ ಹೋಗಾದು ನೋಡಿ ಕಳ್ಳು ಚುರ್ ಅಂದಿತ್ತಲೋ ರಾಮಾ, ಆ ಮಗ್ಳ ಶಾಪ ತಟ್ಟದಂಗ ಬುಡಾಲ ಬುಡು’ ಅಂದ್ಕೋತ ಎಲ್ಲಾರು ಹೊಸ ಪ್ಲಾಟ್ ಕಡಿಗೆ ಹೊಂಟ್ರು.

 

Add Comment

Leave a Reply