Quantcast

ಆಕೆ ಫಾತಿಮಾ..

ಮಾನವೀಯತೆ ಮತ್ತೆಲ್ಲಾ ..

ಪತ್ರಿಕೋದ್ಯಮ ಅಂದ್ರೆ ಅದು ನಮ್ಮನ್ನು ನಾವು ಜನರೊಂದಿಗೆ ಗುರುತಿಸಿಕೊಳ್ಳುವ ಮಾಧ್ಯಮ. ಅವರೊಂದಿಗೆ ಅವರಾಗಿ ಬೆರೆತು ಕಷ್ಟ ಸುಖಗಳನ್ನು ಅರಿಯುವ ಮಾಧ್ಯಮ. ಸಮಾಜಮುಖಿ ವಿಷಯಗಳನ್ನು, ಸಮಾಜದ ಓರೆಕೋರೆಗಳನ್ನು ತಿದ್ದುವ, ಹೃದಯ ಹೃದಯಗಳನ್ನು ಬೆಸೆಯುವ ಸಂವಿಧಾನದ ಆಶಯದಡಿ ಕಾರ್ಯನಿರ್ವಹಿಸಬೇಕಾದ ಮಾಧ್ಯಮ.

ಆದರೆ ಇವತ್ತು ಅದು ಸಾಗುತ್ತಿರುವ ದಿಕ್ಕು ಖಂಡಿತವಾಗಿಯು ಆತಂಕವನ್ನು ಹುಟ್ಟು ಹಾಕಿದೆ. ನಾವು ಮಾಡಿದ್ದೆಲ್ಲಾ ಸರಿಯೆನ್ನುವ ಮನೋಭಾವ ಕೆಲವರದ್ದು. ಆನೆ ನಡೆದದ್ದೇ ಹಾದಿ ಎಂಬಂತೆ ಇನ್ನು ಕೆಲವರ ವರ್ತನೆ.

Jyothi column low resಪತ್ರಕರ್ತನ ಅಥವಾ ಪತ್ರಕರ್ತೆಯ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಓದಿಕೊಂಡು ಬಂದ ಹಾಗೂ ಮಾನವೀಯತೆಯ ನೆಲೆಗಟ್ಟಿನಲ್ಲಿ ಈ ವೃತ್ತಿಯನ್ನು ನೋಡುವ ನನ್ನಂತವರಿಗೆ ಖಂಡಿತವಾಗಿ ಇತ್ತೀಚಿನ ಕೆಲ ಬೆಳವಣಿಗೆಗಳು ನೋವುಂಟು ಮಾಡಿದೆ. ಮೊದಲಿಗೆ ನಾವು ದೇವರಲ್ಲ, ನ್ಯಾಯಾಧೀಶರು ಅಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳೋಣ.

ಸ್ಟುಡಿಯೋದಿಂದ ಬಣ್ಣ ಕಳಚಿ ಹೊರಬಂದು ಸತ್ಯಾಸತ್ಯತೆಯನ್ನು ಅರಿಯುವ ಪ್ರಯತ್ನ ಮಾಡೋಣ. ಇದು ಖಂಡಿತವಾಗಿಯು ಎಲ್ಲರು ಹೀಗೆಯೇ ಎಂಬ ಅಹಂಕಾರವಲ್ಲ.

ಮೊದಲು ರಾಜಧಾನಿಗೆ ಬಂದಾಗ ನನ್ನಲ್ಲಿ ಆತಂಕ ಹುಟ್ಟಿಸಿದ್ದು ಪತ್ರಿಕೋದ್ಯಮದಲ್ಲು ಕಾಡುತ್ತಿರುವ ಜಾತೀಯತೆ, ಪ್ರಾದೇಶಿಕತೆ. ವಿಧಾನಸೌಧವನ್ನು ಇದು ಬಿಟ್ಟಿಲ್ಲ. ಅಲ್ಲಾ, ರಾಜಕಾರಣಿಗಳು ಇದನ್ನು ಮಾಡಬಾರದು. ಆಗ ಬುದ್ದಿ ಹೇಳಬೇಕಾದ ನಾವೇ ಹೀಗಾದ್ರೆ.

ಹಾಗಾಗಿ ಮಾಧ್ಯಮ ಇವತ್ತು ಮತ್ತೆ ಚರ್ಚೆಯ ವಸ್ತುವಾಗುತ್ತಿದೆ.ಮತ್ತೆ ಇಲ್ಲು ಇದನ್ನು ಮೀರಿ ಕೆಲಸ ಮಾಡುವ ಮಂದಿಯು ಇದ್ದಾರೆ ಅನ್ನೋದು ಇನ್ನು ಆಶಾವಾದವನ್ನು ಜೀವಂತವಾಗಿರಿಸಲು ಕಾರಣ.

ಜಾತಿ ಮೀರಿ ರಾಜಕಾರಣ ಬೆಳೆಯಬೇಕೆನ್ನುವ ನಾವು ಜಾತಿ ಆಧಾರದ ಸಮಾವೇಶಗಳನ್ನು ಕವರೇಜ್ ಮಾಡಬೇಕಾಗಿದೆ. ಜಾತಿ ಮೀರಿ ಬೆಳೆಯಬೇಕಾದ ನಾವು ಜಾತಿ ಆಧಾರದ ಪ್ರಶಸ್ತಿಗಳನ್ನು ಸ್ವೀಕರಿಸಬೇಕಾಗಿದೆ. ಬಹುಷಃ ಇದನ್ನು ಮೀರಿ ಬೆಳೆಯೋದು ಖಂಡಿತ ಕಷ್ಟವೆನಿಸುತ್ತಿದೆ.

ಇನ್ನು ಇತ್ತೀಚೆಗೆ ನಡೆದ ರಮ್ಯಾ ಹೇಳಿಕೆಯಿಂದ ಉಂಟಾದ ಗದ್ದಲವನ್ನೇ ಗಮನಿಸೋಣ. ಪ್ರಾಮಾಣಿಕವಾಗಿ ಹೇಳಬೇಕಂದ್ರೆ ನನಗ್ಯಾವ ಪಕ್ಷವಿಲ್ಲ. ಹಾಗಾಗಿ ರಮ್ಯಾ ಹೇಳಿಕೆಯನ್ನಷ್ಚೇ ಗಮನಿಸಿದ್ರು ಅಷ್ಟೊಂದು ರಾದ್ಧಾಂತವನ್ನು ಎಬ್ಬಿಸುವ ಅಗತ್ಯವಿರಲಿಲ್ಲ. ಹಾಗಂತ ನಾನು ದೇಶ ಬಿಟ್ಟು ಯಾಕೆ ಹೋಗಬೇಕು, ನನ್ನ ನಾಯಿಗಳು ಇಲ್ಲಿವೆ ಎಂದು ಒಂದು ಕಡೆ ರಮ್ಯಾ ಹೇಳಿದ್ದು ಯಾಕೋ ಈ ಹೇಳಿಕೆ ಬೇಕಿತ್ತಾ ಎಂದು ಯೋಚಿಸುವಂತೆ ಮಾಡಿದ್ದು ನಿಜ. ಆದರೆ ಅದರ ಬೆನ್ನಲ್ಲೇ ನಾಯಿಯ ಫೋಟೋಗೆ ಆಕೆಯ ಮುಖವನ್ನು ಹಾಕಿ ವಿಕೃತ ಸಂತೋಷ ಪಡುವ ಮಂದಿಯ ಮಧ್ಯೆ ಆಕೆಯ ತಣ್ಣನೆಯ ಪ್ರತಿಕ್ರಿಯೆ ಹೆಚ್ಚು ಪ್ರಬುದ್ಧವೆನಿಸಿದ್ದು ನಿಜ.

ಇತ್ತೀಚಿನ ದಿನಗಳಲ್ಲಿ ನನ್ನನ್ನು ತೀರಾ ಕಾಡಿದ ವಿಷಯ ಇದಾಗಿರೋದ್ರಿಂದ ಸ್ವಲ್ಪ ನನ್ನ ಅನಿಸಿಕೆಯನ್ನು ಬರೆದೆ ಅಷ್ಟೇ…

ಈಗ ಮತ್ತೆ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಮಾಡಿದ ಕವರೇಜ್ ನ ಚಿತ್ರಣ ನಿಮ್ಮ ಮುಂದಿಡುತ್ತೇನೆ.

ಆಕೆ ಫಾತಿಮಾ ( ಹೆಸರು ಬದಲಾಯಿಸಲಾಗಿದೆ) 10 ವರ್ಷ ಗಳ ಹಿಂದೆ ನಡೆದ ಘಟನೆ. ತೀರಾ ಬಡತನದಲ್ಲೇ ಜೀವನ ತಳ್ಳುತ್ತಿದ್ದ ಆಕೆ ಅಡುಗೆ ಕೆಲಸಕ್ಕೆ ಹೋಗುತ್ತಾಳೆ. ಆಗ ಪ್ಯಾರಿಮಾ ಎಂಬ ಹೆಂಗಸೊಬ್ಬಳು ಪರಿಚಯವಾಗುತ್ತಾಳೆ. ಆಕೆ ಪುಸಲಾಯಿಸಿ ವೀಳ್ಯದೆಲೆಯಲ್ಲಿ ಮತ್ತು ಬರಿಸುವ ಪದಾರ್ಥ ಬೆರೆಸಿ ನವದೆಹಲಿಗೆ ಕರೆದುಕೊಂಡು ಹೋಗುತ್ತಾಳೆ. ಮಾಂಸದಂಧೆಗೆ ತಳ್ಳುತ್ತಾಳೆ.

ನಾಲ್ಕು ಗೋಡೆಯ ಮಧ್ಯೆ ಜೀವನ. ದಿವಸಕ್ಕೆ ಹತ್ತು ಜನ, ಕೆಲವೊಮ್ಮೆ ಕಡಿಮೆ ಜನ, ಹದ್ದಿನಂತೆ ಎರಗುತ್ತಿದ್ರು. ತಪ್ಪಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ನಾನಿದ್ದೆ. ಹೀಗೆ ಹತ್ತು ವರ್ಷಗಳು ಕಳೆದು ಹೋದವು, ಗರ್ಭಕೋಶಕ್ಕೆ ಸಾಕಷ್ಟು ಏಟಾಗಿತ್ತು. ಒಂದು ದಿವಸ ಹೇಗೋ ತಪ್ಪಿಸಿಕೊಂಡು ಹೊರಗಡೆ ಓಡೋಡಿ ಬಂದೆ. ರಸ್ತೆಯಲ್ಲಿ ಬಿದ್ದಿದ್ದೆ. ನನಗೆ ತನ್ನ ನೋವಿನ ಕಥೆ ಆಕೆ ಹೇಳುತ್ತಿದ್ದರು.

red light area2ಹೀಗೆ ಬಿದ್ದಿದ್ದ ನನ್ನನ್ನು ಈ ಸಹೋದರ ಕರೆದುಕೊಂಡು ಬಂದ. ಎಂದು ಮಾನನ ಕಡೆ ಆಕೆ ಬೆರಳು ತೋರಿಸಿದ್ಲು. ಅದು ಗುಡಿಸಲು, ಷರ್ಟಿನ ಮೇಲೆ ಪೇಂಟಿನ ಕಲೆಯಿದ್ದ ಮಾನ ಹಿಂದಿಯಲ್ಲಿ ನನ್ನ ಜೊತೆ ಕಥೆ ಹೇಳ ತೊಡಗಿದ.

 

ಈ ಸಹೋದರಿ ಬಿದ್ದಿದ್ದಳು.ರಕ್ತ ಸೋರುತ್ತಿತ್ತು. ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿ ಮರು ದಿನ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಚಿಕಿತ್ಸೆ ಕೊಡಿಸಿದೆ. ಕೂಡಿಟ್ಟ ಹಣವನ್ನು ಸಹೋದರಿಗಾಗಿ ಖರ್ಚು ಮಾಡಿದೆ.

ಮತ್ತೆ ಜ್ಞಾನ ಶಕ್ತಿ ಬಂದಾಗ ಊರಿನ ಬಗ್ಗೆ ಕೇಳಿ ಇಲ್ಲಿ ಕರೆದುಕೊಂಡು ಬಂದೆ. ಮೊದಲು ಒಪ್ಪದ ಆಕೆಯ ಪತಿ ಈಗ ಒಪ್ಪಿಕೊಂಡಿದ್ದಾರೆ. ಅದೇ ಸಂತೋಷ. ಕೇಸು ಸಂಬಂಧ ಇಲ್ಲೇ ಇವರ ಜೊತೆ ಇದ್ದೇನೆ. ಮತ್ತೆ ವಾಪಾಸು ಹೋಗಬೇಕು.

ಮಾತೇ ಹೊರಳದ ಪರಿಸ್ಥಿತಿ ನನ್ನದು. ಅರೆ ಯಾರು ಮುಸ್ಲಿಂ ಯಾರು ಹಿಂದು. ? ಏನಾಗಿದೆ ನಮಗೆಲ್ಲಾ ಮುಸ್ಲಿಂ ಸಹೋದರಿಯನ್ನು ಊರಿಗೆ ಕರೆದು ಸುರಕ್ಷಿತವಾಗಿ ಬಿಟ್ಟ ಹಿಂದೂ ಮಾನನಿಗೆ ಮಾನವೀಯತೆ ಬಿಟ್ಟು ಬೇರೇನು ಕಾಣಲಿಲ್ಲ. ರಕ್ತದ ಮಡುವಲ್ಲಿ ಬಿದ್ದ ಸಹೋದರಿ ಮಾತ್ರ ಕಾಣುತ್ತಿದ್ದಳು. ಅದು ಬಿಟ್ಟು ಅವಳಿಗಂಟಿದ ಬುರ್ಖಾವಾಗಲಿ, ಜಾತಿಯಾಗಲಿ ಧರ್ಮವಾಗಲಿ ಕಾಣಲಿಲ್ಲ.

ಇಂತಹ ಉದಾಹರಣೆಗಳು ಕಣ್ಣ ಮುಂದಿರುವಾಗಲು ದ್ವೇಷದ ಬೀಜ ಬಿತ್ತುವುದೇಕೆ? ತಪ್ಪು ಮಾಡಿದಾಗ ಜಾತಿ ಧರ್ಮ ಮಾನದಂಡವಾಗುವುದಿಲ್ಲ ಅಲ್ಲವೇ.?

ಮನೆ ಸೇರಿರುವ ಮುಸ್ಲಿಂ ಸಹೋದರಿ ಈಗ ಆ ಕತ್ತಲ ಕೋಣೆಯ ನೆನಪಾಗಿ ಇಂದಿಗು ಬೆಚ್ಚಿ ಬೀಳುತ್ತಾಳೆ. ಆದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಹಳ್ಳಿಯ ಜನ ಆಕೆಗೆ ಮೊದಲ ಪ್ರೀತಿಯನ್ನೇ ನೀಡಿರೋದು ಆಕೆ ಸಾಮಾನ್ಯರಂತೆ ಬದುಕಲು ನೋವು ಮೆಲ್ಲ ಮೆಲ್ಲನೆ ಮರೆಯಲು ಸಹಕಾರಿಯಾಗಿದೆ.

ಒಂದು ಸಮಾಜ ಬದುಕಬೇಕಾದ ಪರಿ ಇದು.

ಮಾನವೀಯತೆ ಮೊದಲು… ಮತ್ತೆಲ್ಲಾ ಅಲ್ವಾ ?

ಬರೋ ವಾರ ಮತ್ತೊಂದಿಷ್ಟು ನೆನಪಿನೊಂದಿಗೆ ಬರ್ತೀನಿ

One Response

  1. ಲಕ್ಷ್ಮಣ್ ವಿ ಎ
    September 5, 2016

Add Comment

Leave a Reply