Quantcast

ನಮಸ್ಕಾರ ಡಿ.ಜಿ. ಮಾಮ

Alaka Jitendraಅಲಕಾ ಜಿತೇಂದ್ರ

                                              ನೆನಪಿನಂಗಳದಲ್ಲಿ ಸದಾ ಕಾಡುವ ಗುರು  ದಿವಂಗತ ಡಿ.ಜಿ. ಹೆಗ್ಡೆಯವರಿಗೆ ಶಿಕ್ಷಕರ ದಿನಾಚರಣೆಯಂದು ಒಂದು ಅಕ್ಷರ ನಮನ.

ಬದುಕಿನ ರಂಗಮಂಚದಲ್ಲಿ ಸಾವಿರಾರು ಪಾತ್ರಗಳು. ಅವುಗಳಲ್ಲಿ ಹತ್ತಿರವಾಗುವ ಹಲವು ಪಾತ್ರಗಳು ವ್ಯಕ್ತಿಗಳಾಗಿ ನೆನಪಿನಲ್ಲುಳಿಯುತ್ತಾರೆ. ಅವರಲ್ಲಿ ಕೆಲವರು ಕೇವಲ ವ್ಯಕ್ತಿಗಳಾಗದೆ, ವ್ಯಕ್ತಿತ್ವವೇ ಆಗಿ ನಮ್ಮ ನೆನಪಿನಂಗಳಕ್ಕೆ ಇಳಿದು ಸದಾ ಕಾಡುತ್ತಲೇ ಇರುತ್ತಾರೆ. ಅಂಥ ಒಂದು ಮೇರುವ್ಯಕ್ತಿತ್ವವೇ ನನ್ನ ‘ಡಿ.ಜಿ. ಮಾಮ’. ಹೌದು, ನಾನು ಬಾಲ್ಯದಲ್ಲಿ ಅವರನ್ನು ಕರೆಯುತ್ತಿದ್ದುದೇ ಹಾಗೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ  ಪ್ರೊ. ಡಿ.ಜಿ. ಹೆಗ್ಡೆ- ದಿವಾಕರ ಗಣೇಶ್ ಹೆಗ್ಡೆ, ಅಪ್ಪನ ಗೆಳೆಯರ ಬಳಗದಲ್ಲಿ ಒಬ್ಬರು.

264300_2083964132253_7979273_nಬಾಲ್ಯದಲ್ಲಿ ನನಗೆ ಡಿ.ಜಿ.ಮಾಮ ಅಂದರೆ ಅಪ್ಪನ ಬಳಗದ ಅತಿ ಸುಂದರ ವ್ಯಕ್ತಿ, ಗಂಟೆಗಟ್ಟಲೆ ಹರಟೆ ಹೊಡೆಯಬಲ್ಲ ಅದ್ಭುತ ವಾಗ್ಮಿ, ಹಬ್ಬದ ದಿನಗಳಲ್ಲಿ ಅವರು ತಂದುಕೊಡುತ್ತಿದ್ದ ಹೋಳಿಗೆ. ಇಷ್ಟೇ ಗೊತ್ತಿದ್ದುದು. ಮುಂದೆ ದೊಡ್ಡವಳಾಗುತ್ತಾ ಅವರ ಪ್ರತಿಭೆಯ ಅನಾವರಣವಾದಂತೆಲ್ಲಾ ಅವರು ಅಪ್ಪನ ಗೆಳೆಯರಾಗಿರುವುದೇ ನನಗೆ ಹೆಮ್ಮೆಯ ಸಂಗತಿಯಾಗಿತ್ತು.

ಯಕ್ಷಗಾನ, ನಾಟಕ, ಸಿನಿಮಾ, ಧಾರಾವಾಹಿ ಹೀಗೆ ಹಲವು ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಡಿ.ಜಿ. ಹೆಗ್ಡೆಯವರು ನಿಜಕ್ಕೂ ಉತ್ತಮ ಕಲಾವಿದರು. ಯಕ್ಷಗಾನದ ಹವ್ಯಾಸಿ ಕಲಾವಿದರಾಗಿದ್ದ ಅವರು  ‘ಕೃಷ್ಣ’, ‘ಅಶ್ವತ್ಥಾಮ’, ‘ಸುಧನ್ವ’ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದರು.

‘ನಾಗಮಂಡಲ’, ‘ಒಡಿಸ್ಸಿ’, ‘ಕಾಲ’, ‘ಅಗ್ನಿ ಮತ್ತು ಮಳೆ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿ, ‘ಬಾ ನಲ್ಲೆ ಮಧುಚಂದ್ರಕೆ’, ‘ಬಂಗಾರ್ ಪಟ್ಲೇರ್’, ‘ಕಾದಂಬರಿ’, ‘ಮುತ್ತಿನಂಥ ಹೆಂಡ್ತಿ’  ಸಿನಿಮಾಗಳಿಂದ, ‘ಗುಡ್ಡದ ಭೂತ’, ‘ಸೃಷ್ಟಿ’ ಯಂಥ ಧಾರಾವಾಹಿಗಳಿಂದ  ಜನರಿಗೆ ಇನ್ನಷ್ಟು ಹತ್ತಿರವಾಗಿದ್ದರು. ನಾನು ಅವರ ಯಕ್ಷಗಾನದ ವೇಷಗಳನ್ನು ಹೆಚ್ಚು ನೋಡಿರದಿದ್ದರೂ ಅವರು ಅಭಿನಯಿಸಿದ ನಾಟಕಗಳನ್ನು, ಸಿನಿಮಾಗಳನ್ನು ನೋಡಿ ಹೆಮ್ಮೆ ಪಟ್ಟಿದ್ದೆ. ‘ಗುಡ್ಡದ ಭೂತ’ ಧಾರಾವಾಹಿಯಲ್ಲಿ ನನಗೂ ಅಮ್ಮನಿಗೂ ಒಂದೊಂದು ಪುಟ್ಟ ಪುಟ್ಟ ಪಾತ್ರಗಳನ್ನು ಕೊಡಿಸಿದಾಗ ಡಿ.ಜಿ. ಮಾಮನ ಮೇಲೆ ಅಭಿಮಾನ ಹೆಚ್ಚಾಗಿತ್ತು.

ಕಾಲೇಜು ಮೆಟ್ಟಿಲೇರುತ್ತಿದ್ದಂತೆ ಅವರು ನನಗೆ ಕೇವಲ ಡಿ.ಜಿ. ಮಾಮ ಆಗಿ ಉಳಿದಿರಲಿಲ್ಲ. ನನ್ನ ಸಂಸ್ಕೃತದ ಗುರುವಾಗಿದ್ದರು. ಸಹಜವಾಗಿಯೇ ಗುರುವಿನ ಬಗ್ಗೆ ಭಯ, ಭಕ್ತಿ ಬೆಳೆದಿತ್ತು. ಗುರುಪುತ್ರಿ ಚಿತ್ರಲೇಖಾ ನನ್ನ ಆತ್ಮೀಯ ಗೆಳತಿಯಾದಳು. ಡಿ.ಜಿ. ಹೆಗ್ಡೆಯವರ ನಿಜವಾದ ಪ್ರತಿಭೆಯ ಅನಾವರಣವಾಗುತ್ತಿದ್ದುದು ಅವರ ಸಂಸ್ಕೃತ ತರಗತಿಗಳಲ್ಲೇ. ಅವರ ಅಪಾರ ಜ್ಞಾನಭಂಡಾರ, ನಿರರ್ಗಳ ವಾಕ್ ಚಾತುರ್ಯ, ಧ್ವನಿಯ ಏರಿಳಿತ, ಹಾವಭಾವ, ಕಾಳಿದಾಸ- ಭಾಸನ ನಾಟಕಗಳ ಒಂದೊಂದು ಸಾಲುಗಳನ್ನೂ ಅತ್ಯದ್ಭುತವಾಗಿ ವಿವರಿಸುತ್ತಿದ್ದ ರೀತಿ, ಅದಕ್ಕೆ ಸೇರಿಸುತ್ತಿದ್ದ ಉಪಕಥೆಗಳು, ಅವರ ಅನುಭವ ಕಥನಗಳು, ಜೊತೆಗೊಂದಿಷ್ಟು ಹಾಸ್ಯ ಇವುಗಳಲ್ಲಿ ತಲ್ಲೀನರಾಗಿರುತ್ತಿದ್ದ ನಮಗೆ ಸಮಯ ಸರಿದದ್ದೇ ತಿಳಿಯುತ್ತಿರಲಿಲ್ಲ.

270827_2083968572364_7958727_nಡಿ.ಜಿ. ಹೆಗ್ಡೆ ಅನ್ನುವ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುತ್ತಿದ್ದುದು ಕೇವಲ ಅವರ ಪ್ರತಿಭೆಯಿಂದಲ್ಲ. ಅವರ ಶಿಸ್ತು, ಮಗುವಿನಂಥ ಮುಗ್ಧತೆ, ಪರೋಪಕಾರಿ ಮನೋಭಾವ, ವಿಧ್ಯಾರ್ಥಿಗಳೊಂದಿಗೆ ಬೆರೆಯುತ್ತಿದ್ದ ರೀತಿ, ಹೆಣ್ಣುಮಕ್ಕಳ ರಕ್ಷಣೆಯ ಬಗೆಗಿದ್ದ ಕಾಳಜಿ, ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಗುಣ – ಇಷ್ಟವಾಗದೇ ಇರುವುದಕ್ಕೆ ಕಾರಣಗಳೇ ಇಲ್ಲ.

ಅವರ ಮನೆಯಂತೂ ಸದಾ ಕಲಾವಿದರಿಂದ, ಕಲಾರಾಧಕರಿಂದ ತುಂಬಿರುತ್ತಿತ್ತು. ಹಾಡು, ಹರಟೆ, ಕುಣಿತಗಳೆಲ್ಲಾ ಮಧ್ಯರಾತ್ರಿ ಕಳೆದರೂ ಸಾಗುತ್ತಿತ್ತು. ಈ ಸಂಭ್ರಮಗಳಲ್ಲಿ  ನಾನೂ ಆಸೆಪಟ್ಟು ಭಾಗಿಯಾಗುತ್ತಿದ್ದೆ. ಅವರ ಮನೆಯಲ್ಲಿದ್ದುಕೊಂಡೇ ಕಾಲೇಜು ಕಲಿಯುತ್ತಿದ್ದ ಅವರ ಊರಿನ ಮಕ್ಕಳಿಗೂ ಕಲಾಸಕ್ತಿ ಬೆಳೆಯದೇ ಇರುತ್ತಿರಲಿಲ್ಲ. ಬಂದವರಿಗೆಲ್ಲಾ ಕಾಫಿ, ತಿಂಡಿ, ಊಟ ನೀಡುತ್ತಿದ್ದ ಡಿ.ಜಿ. ಯವರ ಪತ್ನಿ ಜಯಶ್ರೀ ಆಂಟಿಯಂತೂ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ಸರಿ.

ಆದರೆ ಈ ಎಲ್ಲಾ ಸಂತೋಷದ ದಿನಗಳ ಮೇಲೆ ತೆರೆ ಎಳೆದಂತೆ ಬಂದಿತ್ತು 2002 ರ ಜೂನ್ 14 ರ ಮಳೆಗಾಲದೊಂದು ಕರಾಳ ದಿನ. ಆಸ್ಪತ್ರೆಯಲ್ಲಿದ್ದ ಪರಿಚಯಸ್ತರನ್ನು ನೋಡಲು ಬೈಕಿನಲ್ಲಿ ಹೊರಟಿದ್ದ ಪ್ರೊ.ಡಿ.ಜಿ. ಹೆಗ್ಡೆಯವರ ಮೇಲೆ ಬಸ್ಸಿನ ರೂಪದಲ್ಲಿ ಬಂದೆರಗಿತ್ತು ಮೃತ್ಯು. ಬೇರೆಯವರ ಕಷ್ಟಕ್ಕೆ ಸದಾ ಮಿಡಿಯುವ ಸಹೃದಯಿ ಜೀವವೊಂದು ಹೀಗೆ ವಿಧಿಯಾಟಕ್ಕೆ ಬಲಿಯಾಗಿತ್ತು. ಕಾಳಿದಾಸನ ‘ರಘುವಂಶ’ದಲ್ಲಿ ಅಜನ ಪತ್ನಿ ಇಂದುಮತಿಗೆ ನಾರದರ ಕೈಯಲ್ಲಿದ್ದ ಹೂಮಾಲೆ ತಾಗಿ ಬಂದ  ಸಾವು ಎಷ್ಟು ಆಕಸ್ಮಿಕವೋ ಅಷ್ಟೇ ಆಕಸ್ಮಿಕವಾಗಿದ್ದ ಡಿ.ಜಿ.ಹೆಗ್ಡೆಯವರ ಸಾವು ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತು.

269460_2083970212405_2372550_nಇಡೀ ಕಾಲೇಜು ಅವರಿಗಾಗಿ ಕಣ್ಣೀರಿಟ್ಟಿತು. ತಂದೆಯನ್ನು ಕಳೆದುಕೊಂಡ ಗೆಳತಿಯೊಂದಿಗೆ ಅಂದು ನಾನಿದ್ದೆ. ಅವಳ ದುಃಖ ಹಂಚಿಕೊಳ್ಳುವ ಪ್ರಯತ್ನದಲ್ಲಿದ್ದೆ. ಹಿಂದಿನ ದಿನ ನಮ್ಮ ಮನೆಯ ಗೇಟಿನೆದುರು ನಿಂತು ತನ್ನೊಂದಿಗೆ ಗಂಟೆಗಟ್ಟಲೆ ಹರಟೆ ಹೊಡೆದಿದ್ದ ಗೆಳೆಯನನ್ನು ನೆನೆಸಿಕೊಂಡು ಅಪ್ಪನೂ ಕಣ್ಣೀರಿಟ್ಟರು. ಡಿ.ಜಿ. ಹೆಗ್ಡೆಯವರ ಜನಪ್ರಿಯತೆಗೆ, ಹೃದಯವಂತಿಕೆಗೆ ಅಂದು ನೆರೆದಿದ್ದ ಜನಸಮೂಹವೇ ಸಾಕ್ಷಿಯಾಗಿತ್ತು.

ಒಮ್ಮೆ ನನ್ನ ಪರ್ಸೊಂದನ್ನು ಬಸ್ಸಿನಲ್ಲಿ ಕಳಕೊಂಡಾಗ, ಇದೇ ಡಿ.ಜಿ. ಸರ್ ಆ ಬಸ್ಸನ್ನು ಹುಡುಕಿಕೊಂಡು ಅದರ ಗ್ಯಾರೇಜ್ ವರೆಗೂ ಹೋಗಿ ಪರ್ಸ್ ಹುಡುಕಿ ತಂದು ಕೊಟ್ಟಿದ್ದರು. ಅದೇ ಪರ್ಸನ್ನು ನಾನು ಮತ್ತೊಮ್ಮೆ ಕಳಕೊಂಡಿದ್ದೆ. ಹುಡುಕಿ ತರಲು ನನ್ನ ಪ್ರೀತಿಯ ಗುರು ಅಂದು ಇರಲೇ ಇಲ್ಲ. ಗುರುವಿನೊಂದಿಗೆ ಅವರ ಮನೆಯಲ್ಲಿ ಕುಳಿತು ಊಟ ಮಾಡಿದ್ದು, ಅವರು ಬೈಕಿನಲ್ಲಿ ಕಾಲೇಜಿಗೆ ಡ್ರಾಪ್ ಕೊಟ್ಟಿದ್ದು, ಅವರ ಪಾಠ ಮಾಡುವ ರೀತಿಗೆ ಮನ ಸೋತಿದ್ದು, ಅವರ ಸಿಂಹದ ಘರ್ಜನೆಗೆ ಪುಂಡು ಹುಡುಗರೆಲ್ಲಾ ಭಯಪಡುತ್ತಿದ್ದುದು. ಇವೆಲ್ಲಾ ಮತ್ತೊಮ್ಮೆ ಘಟಿಸಲು ಸಾಧ್ಯವಿಲ್ಲದೇ ಕೇವಲ ನೆನಪುಗಳಾಗಿ ಉಳಿದು ಹೋದವು. ಡಿ.ಜಿ. ಹೆಗ್ಡೆಯವರನ್ನು ಕಳಕೊಂಡ ಆಘಾತದಿಂದ ಹೊರಬರದ ಅವರ ಪತ್ನಿ ಮುಂದಿನ ಆರೇ ವರ್ಷದಲ್ಲಿ ಪತಿಯನ್ನನುಸರಿಸಿ ಹೊರಟೇ ಬಿಟ್ಟರು.

ಈಗಲೂ ಅಂದರೆ 14 ವರ್ಷಗಳ ನಂತರವೂ, ಖಾಲಿಯಾದ ಅವರ ಮನೆಯ ಗೋಡೆಯಲ್ಲಿ ತೂಗುಹಾಕಿದ ಭಾವಚಿತ್ರದೊಳಗಿನಿಂದ ಹಸನ್ಮುಖಿ ಡಿ.ಜಿ. ಹೆಗ್ಡೆಯವರು ಅವರ ಗತಕಾಲದ ಕಲಾ ವೈಭವವನ್ನು ಸಾರುತ್ತಲೇ ಇದ್ದಾರೆ.

10 Comments

 1. manasi sudhir
  September 7, 2016
 2. Anonymous
  September 6, 2016
  • Alaka
   September 6, 2016
 3. Vedavyasa bhat
  September 5, 2016
  • Alaka
   September 6, 2016
 4. k satyanarayana
  September 5, 2016
  • Alaka
   September 6, 2016
 5. ಡಾ. ಮಾಧವಿ ಎಸ್. ಭಂಡಾರಿ
  September 5, 2016
  • Alaka
   September 5, 2016
 6. Gopalayya
  September 5, 2016

Add Comment

Leave a Reply