Quantcast

ಆ ಸರಳಾ ಟೀಚರ್

b v bharati

ಬಿ ವಿ ಭಾರತಿ 

ನಮ್ಮ ಶಾಲೆಯಲ್ಲಿದ್ದ ಗುರುಗಳೆಲ್ಲ ಯಾವತ್ತೂ ದುರ್ದಾನ ತೆಗೆದುಕೊಂಡವರಂತೆ, ಶಿಲಾಯುಗದಿಂದ ಈಚೆಗೆ ನಕ್ಕೇ ಇಲ್ಲವೇನೋ ಎನ್ನುವಂತೆ ಕಠೋರ ಮುಖದಲ್ಲಿರುತ್ತಿದ್ದರು. ಹಳ್ಳಿಯ ಶಾಲೆಯಿಂದ ಬಂದ ಕೀಳರಿಮೆ, ಇಂಗ್ಲೀಷ್ ಬಾರದ ಕೀಳರಿಮೆ ಎಲ್ಲವೂ ಸೇರಿದ ಆ ದಿನಗಳಲ್ಲಿ ಯಾರಾದರೂ ಒಬ್ಬರೇ ಒಬ್ಬರು ಸಹೃದಯ ಗುರು ಸಿಕ್ಕಿದ್ದರೆ ಬಹುಶಃ ನಾನು ಒಳ್ಳೆಯವಳೇ ಆಗಿಬಿಡುತ್ತಿದ್ದೆನೋ ಏನೋ! ಆದರೆ ಬದುಕು ಅಷ್ಟೆಲ್ಲ ಕರುಣಾಮಯಿ ಆಗಿಲ್ಲದ್ದರಿಂದ ಎಲ್ಲ ಕರ್ಮಠ ಗುರುಗಳೂ ಸೇರಿ, ಇದ್ದ ಕೀಳರಿಮೆಯನ್ನು ಮತ್ತಿಷ್ಟು ಹೆಚ್ಚಿಸಿ ಬಿಟ್ಟಿದ್ದರು. ನಾನು ಕೀಳರಿಮೆಯನ್ನು ಮೇಲರಿಮೆಯ ಮುಸುಕಿನಲ್ಲಿ ಮುಚ್ಚಿ ಅಮಿತಾಭ್ ಥರ ಆಂಗ್ರಿ ಯಂಗ್ ವುಮನ್ ಥರ ಪೋಸ್ ಕೊಡಲಾರಂಭಿಸಿದೆ.

ಬೆಂಚಿನ ಮೇಲೆ ನಿಲ್ಲಿಸಿದರೆ ಅಲ್ಲಿಯೇ ಗೋಡೆಗೆ ಒರಗಿ ನಿಂತು ಐ ಡೋಂಟ್ ಕೇರ್ ಅನ್ನುವ body language ತೋರಿಸುತ್ತಿದ್ದೆ, ಕ್ಲಾಸಿನಿಂದ ಹೊರಗೆ ಒದ್ದೋಡಿಸಿದರೆ ಬಾಗಿಲ ಪಕ್ಕ ನಿಂತು ಕಿಸಿಕಿಸಿ ನಗುತ್ತ I’m not bothered ಅನ್ನುವ ರೀತಿಯ ಸಿಗ್ನಲ್ ತಲುಪಿಸುತ್ತಿದ್ದೆ. ಈ ರೀತಿಯಾಗಿ ಕ್ಲಾಸಿನಲ್ಲಿ ಯಾವುದೇ ಗಲಾಟೆ ಆದರೂ ಇವಳೇ ಅದರ ಹಿಂದಿನ ಕಾಣದ ಕೈ ಇರಬೇಕೇನೋ ಅನ್ನುವ ರೀತಿಯ ವಾತಾವರಣ ಸೃಷ್ಟಿ ಮಾಡಿಟ್ಟಿದ್ದೆ. ಒಮ್ಮೆಯಾದರೂ ಯಾರಾದರೂ ಗುರುಗಳು ಪಕ್ಕ ಕೂರಿಸಿಕೊಂಡು ‘ನಿನ್ನ teacher3ಸಮಸ್ಯೆ ಏನೇ ಹುಡುಗಿ’ ಅಂದಿದ್ದರೂ ಸಾಕಿತ್ತು, ಬಹುಶಃ ನಾನು ಅವರೆದುರು ನನ್ನ inferiority ಯನ್ನೆಲ್ಲ ಕಕ್ಕಿ ಹಗುರಾಗುತ್ತಿದ್ದೆನೋ ಏನೋ. ಆದರೆ ಅಷ್ಟೆಲ್ಲ ಸೂಕ್ಷ್ಮಗಳಿಲ್ಲದ ಗುರುವೃಂದ ನನ್ನನ್ನು ಹೆಚ್ಚು ಹೆಚ್ಚು ರೆಬೆಲ್ ಆಗಿಸುತ್ತಲೇ ಹೋಯಿತು. ಸಣ್ಣಪುಟ್ಟ ತಪ್ಪುಗಳಿಗೆಲ್ಲ ನನ್ನತ್ತ ಬೆರಳು ತೋರಿಸಿ ತೋರಿಸಿ ನನ್ನ ಆತ್ಮಾಭಿಮಾನವನ್ನು ಕೊಲ್ಲುತ್ತಲೇ ಹೋದ ಪರಿಣಾಮವಾಗಿ ನಾನು ‘ಹೇಗೂ ಮೆಚ್ಚದ ಮೇಲೆ ಹೇಗಿದ್ದರೇನು’ ಅನ್ನುವ ಉದಾಸೀನದಲ್ಲಿ ಬದುಕಲು ಶುರು ಮಾಡಿಬಿಟ್ಟೆ.

ಹೀಗಿರುವಾಗಲೇ ಒಂದು ದಿನ ಶಾಲೆಯಲ್ಲಿ ಪ್ರೇಯರ್‌ಗೆ ನಿಂತಿದ್ದಾಗ ಟೀಚರ್‌ಗಳ ಸಾಲಿನಲ್ಲಿ ಒಂದು ಹೊಸಮುಖ! ನಾವೆಲ್ಲ ಅವರು ಯಾರಿರಬಹುದೆನ್ನುವ ಕುತೂಹಲದಲ್ಲಿರುವಾಗಲೇ ಅವರು ನಮ್ಮ ಶಾಲೆಗೆ ಬಂದ ಹೊಸ ಟೀಚರ್ ಎಂದು ಹೆಡ್ ಮಾಸ್ಟರ್ ಪರಿಚಯಿಸಿದರು. ಆಸಕ್ತಿಯಿಂದ ಅವರನ್ನು ನೋಡಿದೆ. ತೆಳ್ಳಗೆ, ಉದ್ದಕ್ಕೆ ಇದ್ದ ಅವರ ಆ ನಿಲುವು, ಮುಖದ ತುಂಬ ಇದ್ದ ಮುಗುಳ್ನಗೆ, ಕುತ್ತಿಗೆಯ ಮೇಲಿದ್ದ ಸಣ್ಣ ‘ಕಲ್ಪನಾ ಮಚ್ಚೆ’, ಜೊತೆಗೆ ಸಣ್ಣ ಸಣ್ಣ ಕರಿಮಣಿ ಸರವಿದ್ದ ನೀಳ ಕೊರಳು ನನ್ನನ್ನು ಯಾಕೆ ಆ ಪರಿ ಆಕರ್ಷಿಸಿತೋ ಗೊತ್ತಿಲ್ಲ, ಅವರನ್ನೇ ಬಿಟ್ಟ ಕಣ್ಣು ಬಿಟ್ಟಂತೆ ನೋಡಿದ್ದೆ. ಮರುಕ್ಷಣವೇ ವೈರಾಗ್ಯ ಆವರಿಸಿತ್ತು – ಅಯ್ಯೋ ಬಿಡು, ನೋಡೋದಿಕ್ಕೆ ಚೆನ್ನಾಗಿದ್ದಾರಷ್ಟೇ. ಇವರೂ ಉಳಿದವರ ಹಾಗೆ ಬಯ್ತಲೇ ಇರ್ತಾರೆ. ಟೀಚರ್‌ಗಳೆಂದರೆ ಇರೋದೇ ಹಾಗಲ್ವಾ ಎಂದು. ಜೊತೆಗೆ ಯಾವ ಕ್ಲಾಸಿಗೆ ಅವರು ಬರುತ್ತಾರೋ ಗೊತ್ತಿಲ್ಲದ ಕಾರಣ ಯಾರು ಬಂದರೇನು, ಯಾರು ಹೋದರೇನು ಬಿಡು ಅಂದುಕೊಂಡು ಸುಮ್ಮನಾಗಿದ್ದೆ.

ಮೊದಲ ಪೀರಿಯಡ್ ಇಂಗ್ಲೀಷ್ ಇತ್ತು. ನಾವೆಲ್ಲ ಹಳೆಯ ಮಿಸ್‌ಗಾಗಿ ಕಾಯುತ್ತಿರುವಾಗಲೇ ಹೊಸ ಮಿಸ್ ನಮ್ಮ ಕ್ಲಾಸಿಗೆ ಕಾಲಿಟ್ಟರು. ದೂರ ನೋಡಿದ್ದಕ್ಕಿಂತ ಹೆಚ್ಚು ಸುಂದರವಾಗಿದ್ದರು. ಅವತ್ತು ಮೊದಲ ದಿನ ಪಾಠ ಮಾಡುವುದಿಲ್ಲವೆಂದು ಹೇಳಿ, ಇಡೀ ಮುಖದ ತುಂಬ ಬೆಳದಿಂಗಳಂಥ ನಗು ಹರಡಿಕೊಳ್ಳುತ್ತಾ ‘ಎಷ್ಟೊಂದು ಜನ ಮಕ್ಕಳು ನನಗೆ! ಎಲ್ಲರೂ ನಿಮ್ಮ ಪರಿಚಯ ಮಾಡಿಕೊಳ್ಳಿ’ ಅಂದರು! ನಮ್ಮನ್ನು ಮನುಷ್ಯರ ಹಾಗೆ ನೋಡಿದ ಆ ಟೀಚರ್ ಮೇಲೆ ಆ ಕ್ಷಣದಲ್ಲೇ ಭಯಾನಕ ಪ್ರೀತಿ ಹುಟ್ಟಿಬಿಟ್ಟಿತು. ಎಲ್ಲರ ಪರಿಚಯ ಮಾಡಿಕೊಳ್ಳುತ್ತಾ, ಯಾವುದಾದರೂ ಪ್ರತಿಭೆ ಇರುವ ವಿದ್ಯಾರ್ಥಿ ಅನ್ನಿಸಿದರೆ ಅವರ ಬೆನ್ನು ತಟ್ಟುತ್ತ, ತಲೆ ತಡವುತ್ತ ಹೋದಾಗ ನಾನು ತೆರೆದ ಬಾಯಿ ಮುಚ್ಚದ ಸ್ಥಿತಿಯಲ್ಲಿದ್ದೆ.

ಮಾರನೆಯ ದಿನ ಅವರ ಕ್ಲಾಸಿಗೆ ನಾನು ಉತ್ಸಾಹದಿಂದ ಎದುರು ನೋಡಲಾರಂಭಿಸಿದೆ. ಪಾಠದ ಬಗ್ಗೆ ಎಂದೂ ಕುತೂಹಲ ಮೂಡಿಸದ, ಆಸಕ್ತಿ ಕೆರಳಿಸದ ರೋಬಾಟಿಕ್ ಟೀಚರ್‌ಗಳ ನಡುವೆ ಇವರು, ಬೆಂಗಳೂರಿಗೆ ಬಂದ ನಂತರದ ದಿನದಲ್ಲಿ ಅದೇ ಮೊದಲ ಬಾರಿಗೆ ಪಾಠದಲ್ಲಿ ಆಸಕ್ತಿ ಹುಟ್ಟಿಸಿದ್ದರು. ಕ್ಲಾಸಿನಲ್ಲಿ ಯಾವುದೇ ತರಲೆ ಮಾಡದೇ, ಹಿಂದಿನ ಬೆಂಚಿನಡಿಯಲ್ಲಿ ತಲೆ ಬಾಗಿಸಿ ಊಟ ಮಾಡದೇ, ತದೇಕಚಿತ್ತದಿಂದ ಪಾಠ ಕೇಳಿದ ಮೊದಲ ದಿನವದು! ಇಂಗ್ಲೀಷ್ ಪಾಠ ಮೊತ್ತಮೊದಲ ಬಾರಿಗೆ ನನಗೆ ಅರ್ಥವಾಗಿತ್ತು!! ಕ್ಲಾಸ್ ಮುಗಿದ ನಂತರ ನಗುತ್ತಾ ‘ಮಕ್ಕಳಾ ಪಾಠದ ಬಗ್ಗೆ ಏನಾದ್ರೂ ಕೇಳುವುದಿದೆಯಾ’ ಎಂದಾಗ ನಾವು ಆಶ್ಚರ್ಯದಿಂದ ಸಾಯುವುದೊಂದು ಬಾಕಿ! ಅಲ್ಲಿಯವರೆಗೆ ಟೀಚರ್‌ಗಳು ಹೇಳಿದ್ದಷ್ಟನ್ನು ನೀರಸವಾಗಿ ‘ನೋಟ್ಸ್’ ಬರೆದುಕೊಳ್ಳುತ್ತಾ, ಆಕಳಿಸುತ್ತಾ ಕ್ಲಾಸ್ ಮುಗಿಸುತ್ತಿದ್ದ ನಮಗೆ ಈ ಪರಿ ಹೊಸದು! ಅಲ್ಲಿಂದ ಮುಂದೆ ನಾವು ಅವರ ಪಾಠ ಇರುವ ದಿನ ಜ್ವರವೇ ಕಾಯ್ದರೂ ಶಾಲೆ ತಪ್ಪಿಸಿಕೊಳ್ಳುತ್ತಿರಲಿಲ್ಲ.

ಅವತ್ತೊಂದು ದಿನ ಶಾಲೆಗೆ ಕಾಲಿಟ್ಟಾಗ ಎದುರಾದ ವಿಜಯಾ ‘ಇವತ್ತು ಟೀಚರ್‌ನ ನೋಡಿದ್ಯಾ’ ಅಂತ ಕುತೂಹಲದಿಂದ ಕೇಳಿದಾಗ ನಾನು ಯಾಕಿರಬಹುದು ಅಂತ ಆಶ್ಚರ್ಯದಿಂದ ನೋಡಿದ್ದೆ. ಆಗಲೇ ಟೀಚರ್ ಸಲ್ವಾರ್ ಕಮೀಜ಼್ ಹಾಕಿ ಶಾಲೆಗೆ ಬಂದಿದ್ದಾರೆ ಅನ್ನುವ ಬ್ರೇಕಿಂಗ್ ನ್ಯೂಸ್ ಅವಳು ಬಾಯಿ ಬಿಟ್ಟಿದ್ದು! ಕುತೂಹಲದಿಂದ ಸ್ಟಾಫ್ ರೂಮಿಗೆ ನೆಪ ಮಾಡಿಕೊಂಡು ಓಡಿದೆ …. ವಾವ್! ಪುಟ್ಟ ಹುಡುಗಿಯ ಹಾಗೆ ಕಾಣುತ್ತಿದ್ದರು ಟೀಚರ್. ನಾವೆಲ್ಲರೂ ಇಲ್ಲಸಲ್ಲದ ನೆಪ ಹೂಡಿಕೊಂಡು ಅವರನ್ನು ಹೋಗಿ ಹೋಗಿ ನೋಡಿ ಬಂದೆವು! ಆ ನಂತರ ಅವರ ಕ್ಲಾಸ್ ಇರುವಾಗ ಟೀಚರ್ ನಾಪತ್ತೆ! ಅವರ ಹೊಸ ರೂಪವನ್ನು ಕಾಣಲು ನಾವು ಕಾತುರರಾಗಿದ್ದಾಗಲೇ ಇವರೆಲ್ಲಿ ಮಾಯವಾದರು ಅಂತ ಸಿಡಿಮಿಡಿಗೊಂಡೆವು. ಅವತ್ತು ಟೀಚರ್ ಬರಲೇ ಇಲ್ಲ ….

ಮಾರನೆಯ ದಿನ ಶಾಲೆಗೆ ಬಂದ ಟೀಚರ್ ಮುಖದಲ್ಲಿ ಎಂದಿನ ಬೆಳದಿಂಗಳ ನಗೆ ಇರಲಿಲ್ಲ…. ಆ ನಂತರದ ದಿನಗಳಲ್ಲಿ ಅವರು ಸಲ್ವಾರ್ ಕಮೀಜ಼್ ಧರಿಸಿದ್ದಕ್ಕೆ ಹೆಡ್‌ಮಾಸ್ಟರ್ ಅವರ ರೂಮಿಗೆ ಕರೆಸಿ ವಾರ್ನಿಂಗ್ ಕೊಟ್ಟಿದ್ದರೆಂದು ತಿಳಿಯಿತು. ಆ ನಂತರ ಅವರೆಂದು ಸೀರೆ ಬಿಟ್ಟು ಮತ್ತೆ ಯಾವ ಉಡುಪೂ ಧರಿಸಲಿಲ್ಲ….

ಅವತ್ತೊಂದು ದಿನ ನನ್ನದೇನೂ ತಪ್ಪಿಲ್ಲದೇ ಒಬ್ಬರು ಟೀಚರ್ ತುಂಬ ಅವಮಾನಿಸಿ ಬಿಟ್ಟಿದ್ದರು. ಅದು ತುಂಬ ದೊಡ್ಡ ಗಲಾಟೆಯಾಗಿ ಹೋಗಿ ಹೆಡ್‌ಮಾಸ್ಟರ್ ರೂಮಿಗೆ ಕರೆಸಿ ವಾರ್ನಿಂಗ್ ಕೊಡುವ ಮಟ್ಟಕ್ಕೆ ಹೋಗಿಬಿಟ್ಟಿತ್ತು. ತಪ್ಪು ಮಾಡಿದ್ದರೆ ಸರಿ, ಆದರೆ ಮಾಡದೆಯೂ ಹೀಗೆ ಬಯ್ಯಿಸಿಕೊಳ್ಳ ಬೇಕಾಯಿತಲ್ಲಾ ಎಂದು ಬೆಂಕಿ ಉಂಡೆಯಾಗಿ ಹೋಗಿದ್ದೆ. ಅದಾದ ನಂತರ ಕ್ಲಾಸಿಗೆ ಬಂದ ಪ್ರತಿಯೊಬ್ಬ ಟೀಚರ್ ‘ಏನು ನಿನ್ನದು ಗಲಾಟೆ’ ಅಂತ ಕೇಳುವುದು, ನಾನು ನಡೆದಿದ್ದನ್ನು ವಿವರಿಸಲು ಹೊರಟರೆ ಅದರ ಕಡೆ ಗಮನವೇ ಇಲ್ಲದಂತೆ ‘ನಿನ್ನದು ಬರೀ ಗಲಾಟೆಯೇ ಆಗಿಹೋಯಿತು’ ಅಂತ ಇನ್ನಿಷ್ಟು ಆ ಬೆಂಕಿಗೆ ತುಪ್ಪ ಸುರಿಯುವುದು! ಕೊನೆಯಲ್ಲಿ ನನ್ನ ಪ್ರೀತಿಯ ಟೀಚರ್ ಪಾಠ ಮುಗಿದ ನಂತರ ಹೊರಡುವಾಗ ನನ್ನನ್ನು ಎದುರು ಸ್ಟಾಫ್ ರೂಮಿಗೆ ಬರ ಹೇಳಿದ್ದರು.

ಸರಿ, ಇನ್ನು ಇವರೂ ‘ಯಾಕೆ ಹೀಗೆಲ್ಲ ಮಾಡುತ್ತಿ’ ಅಂತ ಶುರು ಮಾಡುತ್ತಾರೆ ಅನ್ನುವ ನಿರೀಕ್ಷೆಯಲ್ಲಿ ಅಲ್ಲಿಗೆ ಹೋದೆ. ­­­­­­­­­­

ಅಲ್ಲಿ ಆಗಿದ್ದೇ ಬೇರೆ! ಅವರು ನನ್ನನ್ನು ಹತ್ತಿರಕ್ಕೆಳೆದುಕೊಂಡು ಬೆನ್ನು ಸವರುತ್ತಾ ನಡೆದಿದ್ದು ಏನೆಂದು ಕೇಳಿದರು! ಮೊತ್ತಮೊದಲ ಬಾರಿಗೆ ನನ್ನ ಮಾತನ್ನು ಕೇಳಲು ಇಡೀ ಶಾಲೆಯಲ್ಲಿ ಒಬ್ಬರಿದ್ದರು! ಆ ನಿಮಿಷದಲ್ಲಿ ಎಂದೂ ಅಳದ ನಾನು ಬಿಕ್ಕುತ್ತಲೇ ನಡೆದಿದ್ದನ್ನೆಲ್ಲ ವಿವರಿಸಿದ್ದೆ. ತಾಳ್ಮೆಯಿಂದ ಎಲ್ಲ ಕೇಳಿದ ಅವರು ನನ್ನನ್ನು ಸಮಾಧಾನಿಸಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಭೋರ್ಗರೆವ ಜಲಪಾತದ ಹಾಗಿದ್ದ ನನ್ನನ್ನು ಹರಿವ ನದಿಯಾಗಿಸಿದ್ದರು ….! ಅಲ್ಲಿಂದ ಹೊರಡುವಾಗ ‘ಏನು ತುಂಟ ಮಕ್ಕಳಪ್ಪಾ ನನ್ನವು’ ಅನ್ನುತ್ತ ತುಟಿಯುಬ್ಬಿಸಿ ನಕ್ಕಿದ್ದರು …. ನಾನು ಸಿಕ್ಕ ಹುಲ್ಲು ಕಡ್ಡಿಯನ್ನು ಭದ್ರವಾಗಿ ಹಿಡಿದುಕೊಂಡಿದ್ದೆ ….

ಯಾರೂ ನಂಬುವುದಿಲ್ಲ ಅಂದಾಗ ರೆಬೆಲ್ ಆಗಿದ್ದ ನಾನು, ನಂಬುವ ಒಂದು ಜೀವವಿದೆ ಅಂತಾದಾಗ ಆ ನಂಬಿಕೆ ಉಳಿಸಿಕೊಳ್ಳಬೇಕು ಅನ್ನುವ ಪ್ರಾಮಾಣಿಕ ಪ್ರಯತ್ನಕ್ಕೂ ಇಳಿದೆ… ಸಫಲಳೂ ಆದೆ. ಹಾಗೇ ಮುಂದುವರೆದಿದ್ದರೆ ಈ ಬದುಕಿನ ಗಂಟೇನು ಹೋಗುತ್ತಿತ್ತೋ ಕಾಣೆ.

ಒಂದು ದಿನ ಬೆಳಗಿನ ಪ್ರೇಯರ್ ಮುಗಿಸಿ ನಾವೆಲ್ಲ ಕ್ಲಾಸಿಗೆ ಹೊರಡುವಾಗಲೇ ಹೆಡ್‌ಮಾಸ್ಟರ್ ರೂಮಿಂದ ಕಣ್ಣೊರೆಸಿಕೊಳ್ಳುತ್ತ ಹೊರಬಂದ ಟೀಚರ್ ರಭಸದಿಂದ ಸ್ಟಾಫ್ ರೂಮಿಗೆ ಹೋಗಿ, ಅವರ ವ್ಯಾನಿಟಿ ಬ್ಯಾಗ್ ಭುಜಕ್ಕೆ ಹಾಕಿಕೊಳ್ಳುತ್ತ ಬಿರುಗಾಳಿಯ ಹಾಗೆ ನಡೆದು ಹೋಗುವುದು ಕಾಣಿಸಿತು. ಯಾಕೆ, ಏನು ಎನ್ನುವುದು ತಿಳಿಯದ ನಾವು ಕಕ್ಕಾಬಿಕ್ಕಿಯಾಗಿ ಅವರನ್ನೇ ನೋಡುತ್ತಿರುವಾಗಲೇ ಶಾಲೆಯಿಂದ ಹೊರಬಿದ್ದರು. ಮತ್ತೆ ಎಂದೂ ನಾವು ಅವರನ್ನು ನೋಡಲೇ ಇಲ್ಲ ….

ಆ ನಂತರದ ದಿನಗಳಲ್ಲಿ ನಮ್ಮ ಕ್ಲಾಸಿನಲ್ಲೇ ಇದ್ದ ಟೀಚರ್ ಮಗಳೊಬ್ಬಳು ನಾನಾ ಒಳಸುಳಿಗಳ ಬಗ್ಗೆ ಹೇಳುತ್ತಿದ್ದಳು … ಹೆಡ್‌ಮಾಸ್ಟರ್‌ಗೆ ಆ ಟೀಚರ್ popularity ನುಂಗಲಾರದ ತುತ್ತಾಗಿತ್ತೆಂದೂ, ಮಕ್ಕಳನ್ನೆಲ್ಲ ‘ನನ್ನ ಮಕ್ಕಳು’ ಅನ್ನುತ್ತಿದ್ದುದು ಆಕ್ಷೇಪಣಾರ್ಹವಾಗಿತ್ತೆಂದೂ, ಅವರಿಂದಾಗಿ ಮಕ್ಕಳು ಕೆಡುತ್ತಿದ್ದಾರೆಂದು ಕಿರುಕುಳ ಕೊಡುತ್ತಿರೆಂದೂ, ಕೊನೆಗೆ ಶಾಲೆ ಬಿಡಿಸಿ ಆ ಕ್ಷಣಕ್ಕೆ ಹೊರಡಿರಿ ಅಂದರೆಂದೂ … ಒಟ್ಟಿನಲ್ಲಿ ಎಲ್ಲ ಅಗಲಿಕೆಗೂ ಒಂದು ನೆಪ ಮಾತ್ರ ಇರುತ್ತದೆ ಅಷ್ಟೇ ….

ಬದುಕೆಂದರೆ ಹೀಗೇ ಅಲ್ಲವಾ? ಯಾರೋ ತೆಗೆದುಕೊಂಡ ಯಾವುದೋ ನಿರ್ಧಾರ ಮತ್ತೆ ಯಾವುದೋ ಬದುಕುಗಳನ್ನು ಕಟ್ಟಿರುತ್ತದೆ ಮತ್ತು ನಾಶ ಕೂಡಾ ಮಾಡಿರುತ್ತದೆ. ಸರಳಾ ಟೀಚರ್ ಆ ನಂತರ ಎಲ್ಲಿಗೆ ಹೋದರೋ ನನಗೆ ಗೊತ್ತಿಲ್ಲ. ಆದರೆ ಎಲ್ಲೇ ಇದ್ದರೂ ನನ್ನಂಥ ನಾಲ್ಕಾರು ಜನರು, ಇವತ್ತು – ಈ ಶಿಕ್ಷಕರ ದಿನದಂದು – ಅವರನ್ನು ಪ್ರೀತಿಯಿಂದ ನೆನೆಯುತ್ತಿರುತ್ತಾರೆಂಬುದು ಮಾತ್ರ ಖಂಡಿತವಾಗಿಯೂ ಸತ್ಯ ….

12 Comments

 1. Rekha Gowda
  September 8, 2016
  • ಭಾರತಿ ಬಿ ವಿ
   September 8, 2016
 2. manjukiran
  September 6, 2016
  • ಭಾರತಿ ಬಿ ವಿ
   September 8, 2016
 3. N.Viswanatha
  September 5, 2016
  • ಭಾರತಿ ಬಿ ವಿ
   September 6, 2016
 4. H.S. Raghavendra Rao
  September 5, 2016
  • ಭಾರತಿ ಬಿ ವಿ
   September 5, 2016
 5. ಕಲಾವತಿ ರಂಗಧಾಮಯ್ಯ
  September 5, 2016
  • ಭಾರತಿ ಬಿ ವಿ
   September 5, 2016
 6. 'ಶ್ರೀ' ತಲಗೇರಿ
  September 5, 2016
  • ಭಾರತಿ ಬಿ ವಿ
   September 5, 2016

Add Comment

Leave a Reply