Quantcast

G20: ರಾಮಾಯಣದೊಳಗೊಂದು ಪಿಟ್ಕಾಯಣ

rajaram tallur low res profile

ರಾಜಾರಾಂ ತಲ್ಲೂರು

ಚೀನಾದ ಹಾಂಗ್ಜೋವ್ ನಲ್ಲಿ ಒಟ್ಟಾಗಿರುವ G20 ನಾಯಕರ ಮೂಡ್ ನ್ನು  ಸರಳವಾಗಿ ಒಂದು ಮಾತಿನಲ್ಲಿ ಹೇಳಬೇಕೆಂದರೆ ಅದು “ಮಧ್ಯಾಹ್ನದ ಊಟ ಬಳಿಕ ಶಾಲೆಯಲ್ಲಿ ಮೊದಲ ಪೀರಿಯಡ್ ಗಣಿತದ್ದಾಗಿದ್ದು, ಮೇಸ್ಟ್ರು ಬಹಳ ಸ್ಟ್ರಿಕ್ಟ್ ಇದ್ದರೆ ಹೇಗಿರತ್ತೋ ಹಾಗೆ!”

ಗ್ಲೋಬಲೈಜೇಷನ್ನಿನ ಬಲೂನು ಅತ್ತ ಮೇಲೂ ಹಾರದೆ ಇತ್ತ ಕೆಳಗೂ ಇಳಿಯದೆ ಅಟಕಾಯಿಸಿಕೊಂಡಿರುವುದನ್ನು 2008ರಿಂದಲೂ ಗಮನಿಸುತ್ತಾ ಬಂದಿರುವ International Monetary Fund (ಐ ಎಂ ಎಫ್) ಈ ಬಾರಿ ಸಭೆಯ ಮೂಲ ಅಜೆಂಡಾವನ್ನು ಸಿದ್ಧಪಡಿಸುವಾಗ ಕಟು ಸತ್ಯಗಳನ್ನು ಮುಂದಿರಿಸಿದೆ. “ಬ್ರೆಕ್ಸಿಟ್ ತಂದ ಕುಸಿತದ ಬಳಿಕ ಜಾಗತಿಕ ಮಾರುಕಟ್ಟೆ ಆ avadhi-column-tallur-verti- low res- cropಹೊಡೆತದಿಂದ ಸಾವರಿಸಿಕೊಂಡಿದೆಯಾದರೂ, ಇನ್ನೂ ಚೇತರಿಸಿಕೊಂಡಿಲ್ಲ. ಕಡಿಮೆ ಆದಾಯವರ್ಗದ ದೇಶಗಳಲ್ಲಿ  ಇನ್ನೂ ಆದಾಯ ವ್ರದ್ಧಿ ಆಗದಿರುವುದರಿಂದ ಗ್ಲೋಬಲೀಕರಣದ ಸಾಮರ್ಥ್ಯದ ಬಗ್ಗೆ ಆತಂಕ, ಶಂಕೆ ಮೂಡುತ್ತಿದ್ದು, ಆರ್ಥಿಕ ಸುಧಾರಣೆಗಳಿಗೆ ಅನುಕೂಲಕರವಾದ ರಾಜಕೀಯ ವಾತಾವರಣ ನಿರ್ಮಾಣ ಕಷ್ಟವಾಗುತ್ತಿದೆ. ಹಾಗಾಗಿ ಎಲ್ಲ ದೇಶಗಳೂ 2018ಕ್ಕೆ ಮುನ್ನ ಈಗಿರುವ ಜಾಗತಿಕ ಜಿಡಿಪಿ 3.1ನ್ನು ಕಡಿಮೆಯೆಂದರೂ 2 ಪಾಯಿಂಟುಗಳಷ್ಟು ಏರಿಸಿಕೊಳ್ಳಬೇಕು; ಅದಕ್ಕಾಗಿ “ಒತ್ತಾಯಪೂರ್ವಕ ಕ್ರಮಗಳ” ಆವಶ್ಯಕತೆ ಇದೆ” – ಎಂದು  IMF ಆಡಳಿತ ನಿರ್ದೇಶಕಿ, ಕ್ರಿಸ್ಟಿನ್ ಲಾಗಾರ್ದ್ ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ.

ಈ ಬಗ್ಗೆ ಈಗ ಹಾಂಗ್ಜೋವ್ ನಲ್ಲಿ  G20 ನಾಯಕರು ಚರ್ಚೆ ನಡೆಸುತ್ತಿದ್ದಾರೆ.

ಈ ರಾಮಾಯಣದ ನಡುವೆ ಒಂದು ಪಿಟ್ಕಾಯಣ ಕೂಡ ನಡೆದಿದೆ.

G20 ಅತಿಥೇಯ ದೇಶವಾಗಿರುವ ಚೀನಾ, ಜಾಗತಿಕ ಶಕ್ತಿಯಾಗುವ ತನ್ನ ಮಹತ್ವಾಕಾಂಕ್ಷೆಯ ಕಾರಣದಿಂದಾಗಿ ಅಮೆರಿಕ ಜೊತೆ ಒರೆಸಾಟಕ್ಕೆ ಇಳಿದಿದೆ. ಪ್ರಸಂಗಾವಧಾನ, ಚಾಣಾಕ್ಷತೆ ತೋರಿಸದಿದ್ದರೆ, ಈ ಅಡಕತ್ತರಿಯಲ್ಲಿ “ವಿಶ್ವಗುರು” ಭಾರತ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಶನಿವಾರ ಅಮೆರಿಕ ಅಧ್ಯಕ್ಷರು ಚೀನಾದಲ್ಲಿ ಬಂದಿಳಿದಾಗ, ವಿಮಾನ ನಿಲ್ದಾಣದಲ್ಲೇ ಅವರನ್ನು ವಿರೋಧಿ ಘೋಷಣೆಗಳು ಸ್ವಾಗತಿಸಿರುವುದು G20ಗೆ ಒಳ್ಳೆಯ ಆರಂಭ ಖಂಡಿತಾ ಅಲ್ಲ.

ಭಾರತದ ಜೊತೆ ಭೂವಿವಾದಗಳಿದ್ದರೂ ಕೂಡ, ಮೇಲ್ನೋಟಕ್ಕೆ 2014-15ರ ವೇಳೆಗೆ ಸುಮಾರಿಗೆ ಚೆನ್ನಾಗಿದ್ದ ಭಾರತ –ಚೀನಾ ಸಂಬಂಧಗಳು, ಆ ಬಳಿಕ ಹಠಾತ್ ಹದಗೆಡತೊಡಗಿದವು. ಚೀನಾ Nuclear Suppliers Group (ಎನ್ ಎಸ್ ಜಿ) ಗೆ ಭಾರತ ಪ್ರವೇಶಿಸಲು ಅಡ್ಡಿಯಾಯಿತು ಹಾಗೂ ಮುಂಬೈ ದಾಳಿಯ ರೂವಾರಿ ಮಸೂದ್ ಅಝರ್ ನ್ನು UN ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ವಿರೋಧ ಸೂಚಿಸಿತು.

g 20ಈ ನಡುವೆ, ಚೀನಾ ವಿದೇಶ ಸಚಿವರು ಇತ್ತೀಚೆಗೆ ಭಾರತಕ್ಕೆ  ಬಂದು NSGಗೆ ಭಾರತದ ಸದಸ್ಯತ್ವ ಸಂಪೂರ್ಣ ಮುಗಿದ ಚಾಪ್ಟರ್ ಅಲ್ಲ ಎಂದು ಮೊಣಕೈಗೆ ಬೆಲ್ಲ ಸವರಿ ಹೋಗಿದ್ದಾರೆ. ಇದರ ಹಿಂದೆ ಒಂದು ತಂತ್ರವಿದೆ. ಆ ಗುಟ್ಟೇನೆಂದರೆ, ಚೀನಾಕ್ಕೆ ಅದರ ದಕ್ಷಿಣ ಸಮುದ್ರದಲ್ಲಿ ಅಮೆರಿಕ ಜೊತೆ ಸಾಗರವ್ಯಾಪ್ತಿಯ ಕುರಿತಾದ ವಿವಾದದಲ್ಲಿ ಜಾಗತಿಕ ನ್ಯಾಯಾಲಯದಲ್ಲಿ ಪ್ರತಿಕೂಲ ತೀರ್ಪು ಬಂದಿದೆ. ಆ ತೀರ್ಪಿಗೆ ಭಾರತ ಬೆಂಬಲ ನೀಡಬೇಕೆಂದು ಅಮೆರಿಕ ಭಾರತವನ್ನು ಮೇಲಿಂದ ಮೇಲೆ ಒತ್ತಾಯಿಸುತ್ತಿದೆ. ಈ ಬೀಸುವ ಕತ್ತಿಯಿಂದ ಪಾರಾಗಲು, ಚೀನಾಕ್ಕೆ ಭಾರತದ ಬೆಂಬಲ ಬೇಕಿದೆ!

ಈ ತನಕ ಭಾರತ ತೀರ್ಪಿನ ವಿವಾದದಲ್ಲಿ ಅಮೆರಿಕವನ್ನು ಬೆಂಬಲಿಸಿಲ್ಲವಾದರೂ, ಚೀನಾ ಜೊತೆ ಸಂಬಂಧ ಹಳಸುತ್ತಾ ಹೋದರೆ, ಭಾರತಕ್ಕೆ ಅಮೆರಿಕವನ್ನು ಬೆಂಬಲಿಸದೆ ಬೇರೆ ಹಾದಿ ಉಳಿಯದು. ಜೊತೆಗೆ ಇತ್ತೀಚೆಗಿನ ಬೆಳವಣಿಗೆಗಳು, ಭಾರತದ ಹಾದಿ ಕೂಡ ಇದೇ ದಿಕ್ಕಿನಲ್ಲಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತಿವೆ. ಅಂತಿಮವಾಗಿ, ಅಮೆರಿಕಕ್ಕೆ ಭಾರತದ ಬೆಂಬಲವು ಏಷ್ಯಾದ ವ್ಯವಹಾರಗಳಲ್ಲಿ ಮೂಗು ತೂರಿಸಲು ಅಮೆರಿಕಕ್ಕೆ ಲೈಸನ್ಸ್ ಒದಗಿಸುವ ಕೆಲಸವಾಗಬಹುದು.

ಭಾರತ-ಚೀನಾಗಳು ಏಷ್ಯಾದ, ಜಗತ್ತಿನ ಶಕ್ತಿಗಳಾಗಿ ಬಲಗೊಳ್ಳಬೇಕಿದ್ದರೆ ತಮ್ಮ “ಬೆಕ್ಕಿನ ಬೆಣ್ಣೆ ಜಗಳ” ಬಿಟ್ಟು ಸಮಾನ ಗುರಿಗಳ ಸಾಧನೆಗಾಗಿ ಆರೋಗ್ಯಕರ ಪೈಪೋಟಿಗೆ ಇಳಿಯಬೇಕಾಗುತ್ತದೆ. ಈ ಬಾರಿ ಅತಿಥೇಯ ಚೀನಾ G20 ಸಭೆಯ ಅಜೆಂಡಾ ಸಿದ್ಧಪಡಿಸುವಾಗ, ಮೂಲ ಅಂಶಗಳನ್ನು ಹೊರತುಪಡಿಸಿ ಬೇರೆ ಚರ್ಚೆಗಳಿಗೆ ಅವಕಾಶ ಇಲ್ಲ ಎಂದಿದೆ. ಇದು ಒಳ್ಳೆಯ ನಿರ್ಧಾರ.

ಈಗ ಭಾರತ ತನ್ನ ಬಲದ ಮೇಲೆ “ವಿಶ್ವಗುರು” ಆಗುತ್ತದೆಯೋ ಅಥವಾ ಅಮೆರಿಕದ ಊರುಗೋಲಾಗುತ್ತದೆಯೋ ಎಂಬುದು, ಭಾರತದ ಪ್ರಧಾನಿ ಈ ಇಕ್ಕಟ್ಟಿನ ಸನ್ನಿವೇಶವನ್ನು ಎಷ್ಟು ಚಾಣಾಕ್ಷತನದಿಂದ ನಿಭಾಯಿಸುತ್ತಾರೆ ಎಂಬುದರ ಮೇಲೆ ನಿರ್ಧಾರ ಆಗಲಿದೆ.

Add Comment

Leave a Reply