Quantcast

ಅವರು ಹೇಳಿಕೊಟ್ಟ ‘ಅವು’ಗಳು..

ಅಭಿನಂದನ್

ಅಪ್ಪ, ಅಮ್ಮ, ಸಹೋದರ/ರಿ, ಗುರು, ಗೆಳೆಯ/ತಿ…ಈ ಜೀವಗಳು ನಮ್ಮ ಜೀವನವನ್ನು ರೂಪಿಸುವುದರ ಬಗ್ಗೆ ಸಾಕಷ್ಟು ಓದಿದ್ದೀವಿ, ನೋಡಿದ್ದೀವಿ, ಕೇಳಿದ್ದೇವೆ. ಆದ್ರೆ, ಕೆಲವು ದಿನಗಳಿಂದ ನನ್ನ ಜೀವನದ ಹಲವಾರು ಜೀವನ ಕಲೆಗಳನ್ನ (life skills) ರೂಪಿಸಿದ ಅಣ್ಣ ತುಂಬಾ ನೆನಪಿಗೆ ಬರ್ತಿದಾನೆ.

ಈ ಅಣ್ಣ, “ಒಬ್ಬ” ಅಣ್ಣನಲ್ಲ. ಇಲ್ಲಿ ಬರುವ “ನಾನು”, ನಾನಲ್ಲ. ಇಂಥ “ಅಣ್ಣ”, ನಮ್ಮ “ಎಲ್ಲರ” ಜೇವನದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಬಂದು ಏನನ್ನೋ ಒಂದು ಕಲಿಸಿ ಹೋಗಿರ್ತಾರೆ/ಉಳೀದಿರ್ತಾರೆ. ನನ್ನ ಜೀವನದಲ್ಲಿ ಬಂದು, ನನ್ನಲ್ಲೇ ಉಳಿದ ಅಂಥವರನ್ನು, ನಾನು “ಅಣ್ಣ” ಅಂತಿದೀನಿ 25_1185ಅಷ್ಟೆ. “ಅವರಿದ್ದಿಲ್ಲದಿದ್ದರೆ ಹೇಗಪ್ಪಾ!!!” ಅಂತ ಅನ್ನಿಸದೇ ಇರೋ ಅಷ್ಟರ ಮಟ್ಟಿಗೆ ಅವರು ಹೇಳಿಕೊಟ್ಟ “ಅವು”ಗಳು ನನ್ನ ಭಾಗವಾಗಿ ಹೋಗಿವೆ. ಈ ಬ್ಲಾಗನ್ನು ಬರಿಯುತ್ತಿರುವ ಉದ್ದೇಶ ಇಷ್ಟೆ, ಇದನ್ನು ಓದಿದವರಿಗೆ, ಅವರವರ ಅಣ್ಣನಲ್ಲದ ಅಣ್ಣನನ್ನ, ಅವರು ಕಲಿಸಿದ “ಅವು”ಗಳನ್ನ ಒಮ್ಮೆ ನೆನಪಿಸುವುದು.

ಮೊದಲಿಗೆ ನನಗೆ ನೆನಪಾಗುವುದು, ನಾನು ತೀರಾ ಚಿಕ್ಕವನಿದ್ದಾಗ, ಸ್ಕೂಲಿನಲ್ಲಿ ನನಗೆ shoe lace ಕಟ್ಟಲು ಹೇಳಿಕೊಟ್ಟ ನನ್ನದೇ ಕ್ಲಾಸಿನ ಇಬ್ಬರು ಗೆಳೆಯರು. ಎರಡನೇ ಕ್ಲಾಸೋ, ಒಂದನೇ ಕ್ಲಾಸೋ, ನೆನಪಿಲ್ಲ. (ಆದರೆ ಎರಡರಲ್ಲಿ, ಯಾವುದೋ ಒಂದು ಅಂತ ಮಾತ್ರ guarantee ಇದೆ.) ಆ ಸ್ಕೂಲು, ಆ ಗ್ರೌಂಡು, lace ಕಟ್ಟಿದ ಜಾಗ, ಕಟ್ಟಿದವ, ಎಲ್ಲಾ, ಈಗ್ಲೂ lace ಕಟ್ಕೊಬೇಕಾದ್ರೆ ನೆನಪಾಗ್ತಾರೆ.

ಅಂಗಿಯ ಗುಂಡಿ ಹಾಕಿಕೊಳ್ಳೋದು, ಮೇಲಿಂದ ಟೀ ಶರ್ಟು ಹಾಕಿಕೊಳ್ಳೊದು ಹೇಳಿಕೊಟ್ಟ ಅಮ್ಮ. ಲೋಟದಿಂದ ನೀರನ್ನು ಎತ್ತಿ ಕುಡಿಯುವುದನ್ನ ಹೇಳಿಕೊಟ್ಟ ಅಜ್ಜಿ, ಬುಕ್ಕುಗಳಿಗೆ ಬೈಂಡ್ ಹಾಕೋದನ್ನ ಹೇಳಿಕೊಟ್ಟ, ಶರ್ಟು-ಪ್ಯಾಂಟಿಗೆ ಇಸ್ತ್ರಿ ಮಾಡೋದನ್ನ ಹೇಳಿಕೊಟ್ಟ ಮಾಮ. ಇಸ್ತ್ರಿ ಮಾಡ್ಕೋಬೇಕು ಅಂತ ಹೇಳಿಕೊಟ್ಟ ಕಸಿನ್. ಸೈಕಲ್ ಚೇನು ಬಿದ್ದರೆ ಹಾಕಿಕೊಳ್ಳೊದನ್ನ, ನೀಟಾಗಿ in shirt ಮಾಡ್ಕೊಳೋದನ್ನ, ತಲೆ ಬಾಚೋದನ್ನ, ಉದ್ದವಿರುವ ಪ್ಯಾಂಟನ್ನ ಕರೆಕ್ಟಾಗಿ ಮಡಚಿಕೊಳ್ಳೋ ವಿಧಾನಾನ ನಡುರಸ್ತೆಯಲ್ಲಿ ತೋರಿಸಿದ, ಬ್ಯಾಂಕಿನಲ್ಲಿ ಡೆಪಾಸಿಟ್ ಚಲನ್ ತುಂಬಿಸೋದನ್ನ ಹೇಳಿಕೊಟ್ಟ , ಕಿತ್ತು ಹೋದ ಹವಾಯಿ ಚಪ್ಪಲಿಯನ್ನು ಕಿತ್ತೋಗೊವರ್ಗೂ re-use ಮಾಡೋದನ್ನ ಹೇಳಿಕೊಟ್ಟ, ಮೊದಲ ಬಲ್ಬ್ ಹತ್ತಿಸಲು ಸಹಾಯ ಮಾಡಿದ ಪಕ್ಕದ/ನೆಂಟರ ಮನೆಯ ಅಕ್ಕ-ಅಣ್ಣಂದಿರು.

ಮೊದಲ application form ತುಂಬಿಸಲು, telegram ಕಳಿಸಲು ಸಹಾಯ ಮಾಡಿದ ಚಿಕ್ಕಪ್ಪ, ದೊಡ್ಡಪ್ಪಂದಿರು. ಹತ್ತನೇ ಕ್ಲಾಸಿನಲ್ಲಿ, ಗಣಿತದ tricks ಹೇಳಿಕೊಟ್ಟ ದೊಡ್ಡಪ್ಪನ ಮಗ, ಶೇವ್ ಮಾಡಿಕೋಳ್ಳೋದನ್ನ ಹೇಳಿಕೊಟ್ಟ ಚಡ್ಡಿ ದೋಸ್ತ್, ಅದನ್ನ verify ಮಾಡಿದ ಮಾಮನ ದೋಸ್ತ್. ಲೂನ, ಸ್ಕೂಟರ್ ವಿದ್ಯೆ ಕಲಿಸಿದ, ಮೊದಲ purse ಕೊಡಿಸಿದ, ದುಡ್ಡು ಎಣಿಸುವುದನ್ನು ಕಲಿಸಿದ ಸೋದರ ಮಾವಂದಿರು.

ಏನೋ ಯೋಚಿಸುತ್ತಾ ತಿಂದ ಚಾಕಲೇಟಿನ ಕವರನ್ನ ಚಿಂದಿ ಚಿಂದಿ ಮಾಡಿ ಕೆಳಗೆ ಹಾಕಿದ್ದು ತಪ್ಪು ಎಂದು ಕಲಿಸಿಕೊಟ್ಟ ಗೆಳತಿ, e-mail ಸೃಷ್ಟಿಸಿ ಕೊಟ್ಟ net centreನವ, ಕೆಲಸದಲ್ಲಿ windows-E ಮ್ಯಾಜಿಕ್ ತೋರಿಸಿದ mentor, “: )” ಅರ್ಥೈಸುವುದು ಹೇಗೆ ಎಂದು ಹೇಳಿಕೊಟ್ಟ ಕೆಲಸದ ಬ್ಯಾಚ್ ಮೇಟ್. ಮೆಣಸಿನ ಕಾಯಿ ಹೇಗೆ ಹೆಚ್ಚಿದರೆ ಒಗ್ಗರಣೆಗೆ ಖಾರ ಜಾಸ್ತಿಯಾಗತ್ತೆ ಅಂತ ಹೇಳಿಕೊಟ್ಟ ರೂಮ್-ಮೇಟ್.

ಮಾಡೋ ಕೆಲಸಾನ “ನೆಟ್ಟಗೆ” ಮಾಡೋದನ್ನ ಹೇಳಿಕೊಡ್ತಿರೋ ಮಡದಿ. ಇದೂವರೆಗೂ ಮಾಡದೇ ಇರೋ ಕೆಲಸ ಎಷ್ಟಿದೆ ಅಂತ ತೋರಿಸ್ಕೊಡ್ತಿರೋ ಮಗಳು…….

ಈಗ ಅರ್ಥ ಆಗಿರ್ಬೋದು, ಯಾಕೆ ಮೊದಲಿಗೆ ಕಂಡ “life skills” ಬರ್ತಾ ಬರ್ತಾ “ಅವು” ಆಯ್ತು ಅಂತ. ಮೇಲಿನದ್ದೆಲ್ಲ ತೀರಾ ಖಾಸಗಿಯಾದ, ಆಪ್ತವಾದ “ಅವು”ಗಳು. “ಅವು” life skillsಗಿಂತ ಹತ್ತಿರವಾದುವುಗಳು. “ಅವ”ಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ.

ನೀವೂ ಒಂದು ರೌಂಡ್ ನಿಮ್ಮ “ಅಣ್ಣ” ನನ್ನ ನೆನೆಸಿ ಬನ್ನಿ.
ಆಮೇಲೆ ಬಂದು googleನಲ್ಲಿ “how to…” ಮಾಡಿ 🙂

Add Comment

Leave a Reply