Quantcast

ರಸವೀಂಟಿ ಕುಡಿಯಬೇಕೇ ಚೆಲುವೆ..

ಕಲ್ಲಾಗಲೂ ಕಾಲವಿದೆ..

S_P_Vijayalakshmiಎಸ್. ಪಿ. ವಿಜಯಲಕ್ಷ್ಮಿ

ನಾಗರದ ಜಡೆ ಹೆಣ್ಣೆ ಚಿತ್ತ ಕಲಕಿದ ಕನ್ನೆ
ಎಂಥ ಮಾಟವೆ ನಿನ್ನ ಹೆರಳ ಹೆಣಿಕೆಯಲಿ…
ಜಡೆಬಿಲ್ಲೆ ಸಿಂಗಾರ ಸುಮಸಿರಿಯ ಶಿಖೆಗಿರಿಸಿ
ವಂಕಿ ವಡ್ಯಾಣ, ತೋಳಬಂದಿಯ ಧರಿಸಿ
ಅರೆನಗ್ನಳಾಗಿ ನಿಂತಿರುವೆಯಲ್ಲೆ…?
ಬಿಗಿಯುಡುಗೆ ಧರಿಸಿ, ನಿನ್ನಾ ತೋರನಿತಂಬಗಳ ಭಾರದಲಿ
ಕೆಣಕುತಿಹೆಯಲ್ಲೇ ಹಸಿಹಸಿಯ ನೋಟವನುClick-2
ಅಸಿತ ಕಟಿ ಕಂಡು, ಗೊಂಡೆ ಕುಚ್ಚನು ಕಂಡು
ಮಂದಿ ಹುಚ್ಚಾಗುತಿಹರು, ಅರಿವಿಲ್ಲವೇನೇ…?
ಹೇಳಬಾರದೇ, ಇದೇನು ಮುಗ್ಧತೆಯೋ, ಬಿಂಕವೋ, ವೈರಾಗ್ಯವೋ…

ಹೇ ತೋಯಜೆ, ಹೇ ತೋರ ನಿತಂಬಿನಿ
ಗುಟ್ಟೊಂದ ಹೇಳುವೆ ಕಿವಿಗೊಟ್ಟು ಕೇಳು.
ತನುತುಂಬ ಜವನಿಕೆಯು ಹೊಕ್ಕು ಸೊಕ್ಕಾಗಿರುವಾಗ
ಎಲ್ಲವಿದ್ದೂ ಬಿಂಕದಲಿ ಹೀಗೆ ಕಲ್ಲಾಗಿ ನಿಂತರೆ
ನೀ ಸಾಧಿಸುವುದೇನೇ…?

ವ್ಯರ್ಥವಾಗುತಿದೆ ಮದನಿಕೆ ಈ ನಿನ್ನ ಲಾವಣ್ಯ
ಹರಯಕ್ಕೆ ಒಂಟಿತನ ಶಾಪ ಕಣೆ.
ಭುವಿಯ ಕಣಕಣದಲ್ಲಿ ಚೆಲು-ಒಲವು ಇರುವಾಗ ಯೌವ್ವನದ
ರಸವೀಂಟಿ ಕುಡಿಯಬೇಕೇ ಚೆಲುವೆ…

ಹ್ಞಾಂ, ಹಾಗೆಂದು ಹಸಿಹುಸಿಯ ನಂಬದಿರು,
ಹರಿದು ತಿನ್ನುವ ರಕ್ಕಸರಿಹರು ಇಲ್ಲಿ
ನಿನ್ನಂಥ ರೂಪಸಿಗೆ ರೂಪವೇ ಶಾಪ ಈ ಲೋಕದಲ್ಲಿ
ಮರುಳಾಗದಿರು ಕಂಡಕಂಡವರ ಹೊಗಳಿಕೆಗೆ, ನಂಬುಗೆಯಿಡು ಈ ಯುಗಯುಗಗಳ
ಪ್ರೇಮತೃಷಿಕನೊಳಗೆ …
ನೋಡು, ನನ್ನೆದೆಯೊಳಗೆ ಹುಚ್ಚುಹೊಳೆ ಹರಿಯುತಿದೆ…
ನಾಗರವೆ ನಾನಾಗಿ ಹಬ್ಬಿ ಹರಿಯುವ ತುಡಿತ
ತೋರನಿತಂಬದ ಹಾಸಿನಲಿ ಒರಗಿ ಮೈಮರೆಯುವಾ ಮಿಡಿತ
ಮುಷ್ಠಿಯಲಿ ಸಿಂಹಕಟಿ ಹಿಡಿಯುವಾ ಎದೆಬಡಿತ
ಮುನಿಯದಿರು, ‘ನಾನೀನು’ ಅಳಿಯುವುದು, ‘ಸಾರ್ಥ’ಉಳಿಯುವುದು
ಹೀಗಲ್ಲವೇನೇ
ಕೇಳಿಸುತಿಲ್ಲವೇನೇ….?
ಸಂಶಯಿಸದಿರು,
ಕಾಮದಲೆಯ ಸುಳಿಗೆ ಸಿಕ್ಕಿಸದೆ ಪ್ರೇಮಪಲ್ಲಂಗದಲಿ ನಿನ್ನ ಕಣ್ಗೊಂಬೆಯಂತೆ ಕಾಪಿಡುವೆ…
ಬಿಂಕ ತೊರೆದು ಕೊರಳ ಕೊಂಕಿಸೆ ಒಮ್ಮೆ…

ಇಲ್ಲ, ನೀ ಹಾಗೆ ಮಾಡಲಾರೆ, ಬಾಹ್ಯಾಂತರ್ಯಗಳ ತಾಕಲಾಟದಲಿ ದೇಹ-ಮನಸುಗಳ
ಕಲ್ಲಾಗಿಸಿಕೊಂಡ ಶಾಪಗ್ರಸ್ತೆ ನೀನಿರಬಹುದು…
ಚಿಂತಿಸದಿರು, ನಾನೇ ನಿನ್ನೆದುರು ನಿಂತು, ಒಮ್ಮೆ, ಒಂದೇ ಒಂದು ಬಾರಿ
ನಿನ್ನ ಹವಳ ತುಟಿಗಳಿಗೆ ನನ್ನಧರದಾ ಮಧುವುಣಿಸಿಬಿಡುವೆ.
‘ಛಿಲ್, ಛಿಲ್ಲು, ಛಿಲ್ಲೆನುತ’ ಕಾವುಕ್ಕಿ, ಜೀವಸಂಚಲನ ಕಟಿ, ತುಟಿ, ಜಘನ, ವೇಣಿಯಲಿ ಚಿಮ್ಮಿದರೆ,
ಹಿಂಬದಿಯ ಕಾಳನಾಗರ ತೂಗೀತು, ಅಸಿತನಡು ಬಳುಕೀತು, ತೋರನಿತಂಬ ಮೃಣ್ಮಯವಾಗಿ ನರ್ತಿಸಿತು…
ಆಗಲಾದರೂ ವೈರಾಗ್ಯ, ಅಳುಕು, ಬಿಂಕ, ಲಜ್ಜೆ, ಅಂಜಿಕೆಗಳ ಬಿಸುಡು,
ಹಸಿಹಸಿಗೆ ಕರಗದೊಲು ನಿನ್ನ ಹೆಣ್ತನವ ಕಾಪಿಟ್ಟು
ಸವಿದುಬಿಡು ಎಲ್ಲವನು, ಕೊರಳಹಾರವೆ ಆಗಿ
‘ಕಲ್ಲಾಗಲೂ ಕಾಲವಿದೆ…..!’

Add Comment

Leave a Reply