Quantcast

ನೀನು ಬೇಗಾ ಮದ್ವೆ ಆಗ್ಬೇಡಮ್ಮ..

ಹೆಣ್ಣೆಂಬ ಕಣ್ಣೀರ ಕಡಲು….

manjula hulikunte

ಮಂಜುಳಾ ಹುಲಿಕುಂಟೆ 

ಈ ಶನಿವಾರ ಅಮ್ಮನ್ನ ನೋಡ್ಬೇಕು ಅನ್ಸಿ ಊರಿಗೆ ಹೋರಟಿದ್ದೆ..ಮೈಸೂರ್ ಬ್ಯಾಂಕ್ ಸರ್ಕಲ್‌ನಿಂದ ದೊಡ್ಡಬಳ್ಳಾಪುರಕ್ಕೆ ಬಸ್ ಸಿಗ್ತು..ಸ್ವಲ್ಪ ದೂರದವರೆಗೂ ಒಬ್ಳೆ ಕೂತಿದ್ದೆ..ತಲೆ ತುಂಬಾ ಏನೇನೋ ಯೋಚ್ನೆ…ತೀರಾ ಗೊಜಲಾಗಿದ್ದೆ..ಯಾವ ಕಡೆ ಕೂಡಾ ಗಮನ ಹರಿಸೋ ಮನಸ್ಥಿತಿಲಿ ನಾನಿರ್ಲಿಲ್ಲ..

ಈ ಮಧ್ಯೆ ನನ್ನ ಪಕ್ಕದ ಸೀಟಲ್ಲಿ ಒಂದು ಹೆಂಗಸು ಮತ್ತು ಪುಟ್ಟ ಹೆಣ್ಮಗು ಕೂತಿದ್ರು,  ಆಕೆ ಪದೇ ಪದೇ ನನ್ನತ್ತ ತಿರುಗಿ ನೋಡ್ತಿದ್ರು..ಯಾಕಂತಾ ಗೊತ್ತಾಗ್ಲಿಲ್ಲ..ಹೆಚ್ಚು ಕಮ್ಮಿ ಆ ತಾಯಿಗೆ 50 ರಿಂದ 55 ವರ್ಷ ವಯಸ್ಸು ,  ನೋಡೋಕೆ ತುಂಬಾ ಲಕ್ಷಣವಾಗಿದ್ರು.. ಮಗು ನಾಲ್ಕೋ ಐದೋ ವರ್ಷದ್  ಇರ್ಬೇಕು..ನಾನು ಸುಮ್ನೆ ಕೂತಿದ್ದೆ.

she in nestಇದ್ದಕ್ಕಿದ್ದಾಗೆ ಆ ಮಗು ಆ ತಾಯಿ ಇಬ್ರೂ ತಾವು ಕೂತಿದ್ದ ಸೀಟ್ನಾ ಬಿಟ್ಟು ನನ್ ಸೀಟತ್ತ ಎದ್ದು ಬಂದ್ರು.  ಆಗಷ್ಟೇ ದೇವಸ್ಥಾನಕ್ಕೆ ಹೋಗಿ ಬಂದಿದ್ರಿಂದ ಆ ತಾಯಿ ಮಗುಗೇ ಪ್ರಸಾದ ಏನೋ ತಿನ್ನಿಸ್ತಿದ್ರು..ಆ ಮಗುನ ಕರೆದ್ಕೊಂಡು ನನ್ ಸೀಟತ್ತ ಬಂದಾಗ . ಜಾಗ ಬಿಡೋಕಂತ ಮಗುನ ನನ್ನ ತೊಡೆ ಮೇಲೆ ಕೂರಿಸ್ಕೊಂಡೆ. ಆಕೆ ನೀರಿನ ಬಾಟಲ್‌ ಕೈಗಿಟ್ಟು,  ಮಗು ಕೈ ತೊಳೆಯಮ್ಮ ಸ್ವಲ್ಪ ಅಂದ್ರು.

ಮಕ್ಳಂದ್ರೆ ಅತಿಯಾಗಿ ಇಷ್ಟ ಪಡೋ ನಂಗೆ, ಆ ಮೃದು ಸ್ಪರ್ಷ ಅಂದ್ರೆ  ಖುಷಿ ..ಹಾಗೆ ನೀರಿಸ್ಕೊಂಡು ಮಗು ಕೈತೊಳೆದು ಆ ಪುಟ್ಟ ಕೈಯನ್ನ ನನ್ನ ಬೊಗಸೆಯಲ್ಲಿ ಹಿಡಿದು ಮತ್ತೆ ಕಿಟಕಿ ಕಡೆ ಮುಖಮಾಡ್ದೆ…ಆ ಅಮ್ಮ ನನ್ನ ನೋಡ್ತಾನೆ ಇದ್ರು..ಇದ್ದಕ್ಕಿದ್ದಾಗೆ ಮದ್ವೆ ಆಗಿದ್ಯಾ ಅಮ್ಮ ಅಂದ್ರು..ನಾನು ಕ್ಷಣ ಮುಖ ನೋಡಿ ಇನ್ನು ಇಲ್ಲಮ್ಮ ಅಂದೆ..ತಕ್ಷಣ ಆಕೆಯ ಬಿಳಿ ಮುಖ ಪೂರಾ ನೋವಿಂದ ಕೆಂಪಾಗಿ..ಕಣ್ತುಂಬಾ ನೀರು..

ಏನಾಯ್ತು ಅನ್ವಾಗ್ಲೆ ..ನಾನು ನನ್ ಮಗಳಿಗೆ ಮೋಸ ಮಾಡ್ಬಿಟ್ಟೆ ..ನೀನು ಬೇಗಾ ಮದ್ವೆ ಆಗ್ಬೇಡಮ್ಮ.. ಯೋಚ್ನೆ ಮಾಡಿ ನೀನೇ ಒಳ್ಳೆ ನಿರ್ಧಾರ ತಗೋ , ಅಪ್ಪ ಅಮ್ಮ ಹೇಳಿದ್ರಂತಾ ಬೇಗ ಮದ್ವೆ ಆಗಿ,  ಬದ್ಕನ್ನ ಹಾಳ್ ಮಾಡ್ಕೋಬೇಡಾ ಅಂತಾ ಅಳ್ತಾಲೇ ಒಂದೇ ಉಸಿರಲ್ಲಿ ಹೇಳ್ತಿದ್ರು..ನಂಗೆ ಅದು ಹೊಸತು ಅನ್ನಿಸಿದ್ರು,  ಅಷ್ಟು ದೊಡ್ಡವರು ಹಾಗೇ ಗೊತ್ತು ಗುರಿನೇ ಇಲ್ದಿರೋ ನನ್ನತ್ರ ..ಅದೂ ತುಂಬಿರೋ ಬಸ್ಸಲ್ಲಿ ಹೀಗೆ ಅಳ್ತಾ ಹೇಳ್ತಿದ್ದಾರೆ..

ಅವ್ರಿಗೆ ನಾನು ಹೇಗೆ ಪ್ರತಿಕ್ರಿಯಿಸ್ಬೇಕೋ ಗೊತ್ತಾಗ್ದೆ ಒಂದು ಕ್ಷಣ ಸ್ಥಬ್ಧವಾದೆ ..ತೊಡೆ ಮೇಲೆ ಮಗು ಬೇರೆ..ಆ ನಂತ್ರ ಸವಾರಿಸ್ಕೊಂಡು ಮತ್ತೊಂದು ಕೈಯಲ್ಲಿ ಆವ್ರ ಭುಜ ಸವರಿ ಸುಧಾರಿಸ್ಕೊಳ್ಳಿ ಅಂತಾ ನೀರು ಕೊಟ್ಟೆ..ಆದ್ರೆ ಅವ್ರ ಕಣ್ಣೀರು ಕಡಿಮೇ ಆಗ್ಲೇ ಇಲ್ಲ..ಏನಾಯ್ತಮ್ಮ..ಮಗ್ಳು ಏನ್ಮಾಡ್ತಿದ್ದಾರೆ ಅಂದೆ..ಅವ್ರು ಅಳ್ತಾನೆ ಹೇಳೋಕೆ ಶುರು ಮಾಡಿದ್ರು , ಸಂಬಂದಿಕ್ರೆ ನಂಗೆ ಮೋಸ ಮಾಡಿದ್ರಮ್ಮ…ಅವ್ರ ಮಾತ್ಕೇಳಿ ನನ್ ಮಗಳಿಗೆ 16 ವರ್ಷಕ್ಕೆ ಮದ್ವೆ ಮಾಡ್ದೇ,  ಈಗ ಅವ್ಳಿಗೆ ಒಂದು ಮಗುನು ಇದೆ..ಆದ್ರೆ ನಿತ್ಯ ಕಣ್ಣೀರಲ್ಲಿ ಕೈತೊಳಿತಿದ್ದಾಳೆ..ಅಂತದ್ರು.

ಗಂಡನ ಸಮಸ್ಯೆನಾ..ಏನ್ಮಾಡ್ತಿದ್ದಾರೆ ಅಳಿಯಾ ಅಂದ್ರೆ ಆಕೆಗೆ ಅದು ಸರಿಯಾಗಿ ಗೊತ್ತಿಲ್ಲ..ಟಿವಿ ಕೆಲ್ಸ ಮಾಡ್ತಾರೆ ಅಂದ್ರು..ನಾನು ಚಾನೆಲ್‌ನಲ್ಲಿ ಕೆಲ್ಸನಾ ಅಂದೆ ..ಇಲ್ಲ..ದೊಡ್ಡ ಬಾಂಡ್ಲಿಗಳು ಬರುತ್ವಲ್ಲಾ ಅದನ್ನ ಹಾಕೋದು ಅಂದ್ರು..

ಆ ನಂತ್ರ ಸುಮ್ಮನಾಗಿ ಗಂಡ ಸ್ವಲ್ಪ ಒಳ್ಳೇವ್ನೆ ಆದ್ರೆ ಅವಳ ಅತ್ತೆದೆ ಕಾಟ..ದಿನಾ ಜಗಳ ಮಾಡಿ ಬೀದಿಯಲ್ಲಿ ನನ್ ಮಗಳನ್ನ ಎಳೆದು ಹೋಡಿತಾಳೆ..ಅಂತಾ ಅಳು ಜೋರ್ ಮಾಡಿದ್ರು…ಪಾಪ ಅಷ್ಟು ದೊಡ್ಡವರಿಗೆ ಹೇಗೆ ಸಮಾಧಾನ ಮಾಡೋದು ಅಂತಾ ಗೋತ್ತಾಗ್ದೆ ..ಸ್ವಲ್ಪ ಹೊತ್ತಿನ ನಂತ್ರ.. ಅಳಿಯಾ ಒಳ್ಳೆಯವ್ರಿದ್ರೆ ನಿಮ್ ಜೊತೆ ಕರೆದ್ಕೊಂಡು ಬಂದು ನೋಡ್ಕೋಂಬೊದಲ್ವಾ ಅಂದೆ..

ಅದಕ್ಕೆ ಅಳಿಯಾ ಒಪ್ಪಲ್ಲಮ್ಮಾ..ಅಮ್ಮನ್ನ ಬಿಟ್ಟು ಬರೋದಕ್ಕೆ ಆಗೋದಿಲ್ಲ ಅಂತಾರೆ..ಜೊತೆಗೆ ನನ್ ಮಗ್ಳು ಬರೋಳಲ್ಲ..ಅಷ್ಟೂ ವರ್ಷದಿಂದ ಆ ನರಕ ಅನುಭವಿಸ್ತಾ ..ನನ್ ಬದ್ಕು ಇಷ್ಟೇ ಬಿಡಮ್ಮಾ ಇನ್ನ,  ಅದ್ರ ಬಗ್ಗೆ ಯೋಚಿಸ್ಬೇಡಾ ಅಂತಾಳೆ ಅಂತಾ ಮತ್ತಷ್ಟು ಜೋರಾಗಿ ಅಳೋಕೆ ಶುರುಮಾಡಿದ್ರು..ಜನ ಆಡ್ಕೊಂತಾರೆ ಅನ್ನೋ ಭಯ ಅವ್ಳಿಗೆ ಅಂದ್ರು ..ಕೊನೆಗೆ ಬದ್ಕಿಗಿಂತಾ ದೊಡ್ಡದಾ ಅದು..ಜನ ಹೇಗಿದ್ರು ಮಾತಾಡ್ತಾರೆ ಅಂದೆ..

ಆಕೆ ನೋವನ್ನ ಪಕ್ಕಕ್ಕಿಟ್ಟು ಸಿಟ್ಟಲ್ಲಿ ಹೇಳಿದ್ರು,  ನನ್ ಮಗ್ಳು ಒಮ್ಮೆ ಹೂ ಅಂದ್ರೂ ಅವ್ರಿಗೆ ಒಂದು ಗತಿ ಕಾಣಿಸ್ಬಿಡ್ತೀವಮ್ಮಾ..ನನ್ನ ಗಂಡು ಮಕ್ಕಳು ಅದೇ ಅಂತಾರೆ ಅಂದ್ರು..ನಾನು ಸುಮ್ನೆ ಮುಖ ನೋಡ್ತಿದ್ದೆ..ನೋಡೋಕೆ ಬಡವರೇನು ಅಲ್ಲ..ತಿಳಿಯದಿರೋ ಜನಾನು ಅಲ್ಲಾ ಅನ್ನೋ ಹಾಗಿದ್ರು..ಮತ್ತೆ ಆ ತಾಯಿ ಹೇಳ್ತಿದ್ರು..ಒಬ್ಳೆ ಮಗ್ಳು ಅಂತಾ ಕೇಳಿದ್ದೆಲ್ಲಾ ಕೊಟ್ಟೋ..ಬೇಕಿರೋದೆಲ್ಲಾ ತಗೆದು ಕಳಿಸ್ದೋ..ಆದ್ರೆ ಮಗಳು ಒಂದು ದಿನಾನು ನೆಮ್ಮದಿಯಾಗಿಲ್ಲಮ್ಮ..

ನಾನೇ ನನ್ ಮಗಳ ಬದ್ಕಿಗೆ ಬೆಂಕಿ ಇಟ್ಟೆ..ಅವ್ಳಿಗೆ ಅವ್ರೆಲ್ಲಾ ಅಷ್ಟು ಹಿಂಸೆ ಮಾಡಿದ್ರು,  ಒಂದು ಮಾತೂ ನಮ್ಮತ್ರ ಹೇಳೋದಿಲ್ಲ..ಅವ್ರ ಅಕ್ಕ-ಪಕ್ಕದ ಮನೆಯವ್ರು ಫೋನ್ ಮಾಡಿ ನಿಮಗೆ ಮಗಳು ಬೇಡ್ವಾ ..ಆ ಮಗು ಇನ್ನ ಬದ್ಕಲ್ಲ , ಬಂದು ಕರೆದ್ಕೊಂಡು ಹೋಗಿ ಅಂತಾರೆ..ಆದ್ರೆ ಅವ್ಳೇ ಜನ ಆಡ್ಕೋಂತಾರೆ, ಗಂಡ ಬರಲ್ಲ ಅಂತಾ ಅಲ್ಲಿರ್ತಾಳೆ..ಅಂದ್ರು..ಜೊತೆಗೆ ನಮ್ಗೆನೂ ಕಡಿಮೆ ಇಲ್ಲ,

ಅವ್ಳ ಹೆಸ್ರಲ್ಲೇ ಕಟ್ಟಿಸಿರೋ ಮನೆ ಇದೆ..ಬಂದ್ರೆ ರಾಣಿ ಆಗೆ ಬದುಕ್ಬೋದು ಅಂತಿದ್ರು..ಮುಂದೆ ನಾನೇನೇಳೋದು ..ದೊಡ್ಡಬಳ್ಳಾಪುರ ಹತ್ರ ಆಗ್ತಿತ್ತು..ಮಗಳಿಗೆ ತಿಳಿಸೇಳಿ..ಅಷ್ಟು ಚಿಕ್ಕವಯಸ್ಸಿಗೆ ಅಂತಾ ಬದುಕು ಬೇಕಾ ..ಜಗತ್ತು ತುಂಬಾ ಬದಲಾಗಿದೆ ಅಂತಾ ಹೇಳಿ ಸುಮ್ನಾದೆ…ಆದ್ರೆ ನಾನೇಳಿದ್ದಷ್ಟು ಜಗತ್ತು ಬದಲಾಗಿಲ್ಲ ಅನ್ನೋದು ನಂಗೂ ಗೊತ್ತಿತ್ತು…

ನಂಗೆ ಸೋಸೆ ಬಂದಾವ್ಳೆ ..ಟೈಂಗೆ ಹೇಳಲ್ಲ ಅಡ್ಗೆ ಮಾಡಲ್ಲ, ಹೇಳಿದ್ನಕೇಳಲ್ಲ ಅಂತಾ ಅಕ್ಕ-ಪಕ್ಕದವ್ರತ್ರ ಮಾತಾಡೋ ಹೆಂಗಸರಂದ್ರೆ ಅಸಹ್ಯ…ಅವ್ರನ್ನ ಅಮ್ಮಂದ್ರು ಅಂತಾ ಒಪ್ಪಿಕೊಳ್ಳೋಕೆ ಆಗೋದೆ ಇಲ್ಲ..ಇನ್ನ ಹೆಂಡ್ತಿಗಿಂತ ತಾಯಿನೇ ಮೊದ್ಲು ಅನ್ನೋ ಕೈಲಾಗ್ದಿರೋ ಗಂಡಸ್ರಂದ್ರೂ ಆಗೋಲ್ಲ..ಯಾಕಂದ್ರೆ ಯಾರು ತಾಯಿನಾ ನಿಜವಾಗಿ ಗೌರವಿಸ್ತಾನೋ ಆ ವ್ಯಕ್ತಿ ತನ್ನದೇ ಮಕ್ಕಳಿಗೆ ತಾಯಾಗೋ ಹೆಂಡತೀನೂ ಅದೇ ಸಮಕ್ಕೆ ನೋಡ್ಬೇಕು..

ಇದೆಲ್ಲದ್ರ ಜೊತೆಗೆ ಅತ್ತೆ ಹಾಗೆ ಸರಿ ಇಲ್ಲ..ಹೀಗೆ ಸರಿ ಇಲ್ಲ ಅಂತಾ ಅವ್ರನ್ನ ತಿರಸ್ಕರಿಸಿ ಚಿಕ್ಕದ್ದಕ್ಕೆಲ್ಲಾ ಮನೆ ಒಡೆಯೋ ಮಾತಾಡೋ ಸೋಸೆಯಂದ್ರೂ ಆಗೋಲ್ಲ..ಸಂಬಂಧಗಳು ಅತೀ ಸೂಕ್ಷ್ಮ..ಯಾರಿಗೂ ಯಾರೂ ಆಳಲ್ಲ..ಯಾರ ಬದ್ಕನ್ನ ಯಾರೂ ನಿರ್ಧರಿಸಬೇಕಿಲ್ಲ..ಇಷ್ಟು ಸಣ್ಣ ಬದ್ಕಲ್ಲಿ..ಒಟ್ಟಿಗೆ ಬದ್ಕೋದು ಅಷ್ಟು ಕಷ್ಟನಾ ಅನ್ನೋ ಭಯ ಕಾಡುತ್ತೆ…

ನಂಗೂ ಒಡಹುಟ್ಟಿದೋರು ಮೂರು ಜನ ಅಕ್ಕಂದ್ರು…ಅದೇ ಕಷ್ಟದಲ್ಲಿ ಮುಳುಗಿ ಹೇಳೋಕೆ ಆಗದಂತೆ ಬದುಕ್ತಿರೋರು..ಹೆಣ್ಣೆತ್ತವರ ಕಷ್ಟ ಏನು ಅಂತಾ ಅರಿವಾಗುತ್ತೆ ..ಹೀಗೆ ಕಂಡವ್ರ ಮನೆ ಹೆಣ್ಮಳ್ಳ ಬದುಕ್ನ ಸ್ಮಶಾನ ಮಾಡಿ ತಾವು ನೆಮ್ಮದಿಯಾಗಿರ್ದೆ ..ಅವ್ರನ್ನೂ ನೆಮ್ಮದಿಯಾಗಿ ಬದುಕೊಕೆ ಬಿಡದೆ ಅದ್ಯಾಕಿಷ್ಟು ಕೆಟ್ಟ ಬದ್ಕನ್ನ ಬದಿಕ್ತಾರೋ ಅರ್ಥಾನೆ ಆಗೋಲ್ಲ …

ಜೊತೆಗೆ ಜನಾ ಏನೋ ಅಂತಾರೆ ಅಂತಾ ಚಿಕ್ಕವಯಸ್ಸಿಗೆ ಹೆಣ್ಮಕ್ಕಳ ಮದ್ವೆ ಮಾಡಿ ಅವ್ರನ್ನು ನರಕಕ್ಕೆ ನೂಕಿ,  ಕಣ್ಣೀರಲ್ಲೇ ಕೈತೊಳೆಯೋ ಅಪ್ಪ – ಅಮ್ಮಂದಿರ ಬಗ್ಗೆನೂ ಕೋಪ ಬರುತ್ತೆ..

ಊರನ್ನ ತಲುಪೋವರೆಗೂ ಆ ತಾಯಿ,  ಆಕೆ ಕಣ್ಣೀರು..ಆ ಹೆಣ್ಣಿನ ಅಸಹಾಯಕತೆ ನನ್ನ ಹಿಡಿದಿಟ್ಟಿತ್ತು..ಈಗ್ಲೂ ಆ ಹಿಂಸೆ ಸಣ್ಣಗೆ ಕಂಪಿಸೋ ಹಾಗೆ ಕಾಡ್ತಿದೆ…ಬದ್ಕು ತೀರಾ ದೊಡ್ಡದು ಸಂಬಂಧಗಳೂ ಅತೀ ಸೂಕ್ಷ್ಮ , ಇಲ್ಲಿ ಉಳಿಸ್ಕೊಳ್ಳೋದು ತುಂಬಾ ಕಷ್ಟ..ಕೂಡಿಡೋದು ಅಷ್ಟು ಸುಲಭದ ಮಾತಲ್ಲ ಅಂತಾ ಯೋಚಿಸೋ ನನ್ನೋಳಗೆ …ಸರಿ ಹೀಗೆಲ್ಲಾ ಕೂಡಿಡ್ತಾ …ಉಳಿಸ್ಕೊಳ್ಳೋ ನೆಪದಲ್ಲಿ ಬದುಕನ್ನೇ ಬಲಿ ಕೊಡೋ ಆ ಎಳೆ ಹೆಣ್ಣುಮಕ್ಕಳ ಕಥೆ ಏನು ಅನ್ನೋ ಪ್ರಶ್ನೆ ಹುಟ್ಟುತ್ತೆ….

ಬೇರೆ ದಾರಿಗಳೇ ಇಲ್ವಾ ಈ ಕಾಲಾತೀತ ಕರ್ಮಕ್ಕೆ ಅನ್ನೋ ನೋವು ಇದೆ..

ಉತ್ತರಗಳು ಮಾತ್ರ ಯಾವತ್ತಿಗೂ ಅಸ್ಪಷ್ಟ…

Add Comment

Leave a Reply