Quantcast

ಅವರು ಇಲ್ಲವಾದರು..

ಅಪರೂಪದ ಸಾಹಿತಿಯೊಬ್ಬನ

ಅಕಾಲಿಕ ಸಾವು

ಇಲ್ಲಿವೆ ಕಂಬನಿಯ ಮಾಲೆ

kumvee

ಕುಂ ವೀರಭದ್ರಪ್ಪ 

ಡಾ ಪ್ರಹ್ಲಾದ ಅಗಸನಕಟ್ಟೆ ಅಪರೂಪದ ಗೆಳೆಯ.

ತಮ್ಮ ಪತ್ನಿಯ ಮನೆ ದೇವರು ಎನ್ನುವ ನೆಪದಲ್ಲಿ ಕೊಟ್ಟೂರಿಗೆ ಬಂದು ಹೋಗುತ್ತಿದ್ದರು. ಎಲ್ಲ ಸಮಸ್ಯೆಗಳ ಕುರಿತು ಮೆಲುದನಿಯಲ್ಲಿ ಮಾತಾಡುತ್ತಿದ್ದರು, ಎಲ್ಲರೊಂದಿಗೆ ಅಪಾರ ಪ್ರೀತಿ ಇರಿಸಿಕೊಂಡಿದ್ದ ಅಜಾತ ಶತ್ರು.

ಕೆಲವು ತಿಂಗಳುಗಳ ಹಿಂದೆ ಏಕಕಾಲದಲ್ಲಿ ಅವರು ಕುತುಬ್ ಮಿನಾರಿಗೆ ಬೆನ್ನಂಟಿಸಿ ಫೋಟೋ ತೆಗೆಸಿಕೊಂಡ ಗಳಿಗೆಯಲ್ಲಿ ನಾನು ಅದೇ ದೆಹಲಿಯ ಕರೋಲಭಾಗ ಏರಿಯಾದಲ್ಲಿ ಸುತ್ತಾಟ ನಡೆಸಿದ್ದೆ, ಇವನ್ನೆಲ್ಲ ಫೇಸ್ ಬುಕ್ ನಲ್ಲಿ ನೋಡಿ ಅರೆ! ಎಂದು ನಾವಿಬ್ಬರು ಒಮ್ಮೆ ಉದ್ಗರಿಸಿದ್ದೆವು.

ಮಹಾಕಾದಂಬರಿ ಬರೆಯಬೇಕೆಂದು ಕೆಲವು ವರ್ಷಗಳಿಂದ ಅಂದುಕೊಳ್ಳುತ್ತಲೆ ಇದ್ದರು, ಹೇಗೋ ರಿಟೈರಾದಿರಲ್ಲ ಇನ್ಮೇಲೆ ಬರೀರಿ ಎಂದಿದ್ದೆ.

ಆದರೆ ಅವರು ಮೂರು ತಿಂಗಳು ಎಕ್ಸಟೆನ್ಷನ್ ಪಡೆದು ಕೊನೆಯ ತಪ್ಪು ಮಾಡಿದರು.

ಇಮ್ಮೀಡಿಯಟ್ ತಮ್ಮನಂತಿದ್ದ ಅವರು ನಮಗಿಂತ ಮೊದಲೆ ನಿರ್ಗಮಿಸಿ ಕೈಕೊಟ್ಟು ಕಥೆಗಳನ್ನು ಅಪೂರ್ಣ ಹಾಗು ಜಟಿಲಗೊಳಿಸಿದರು. ಯಾಕೆ ಹೀಗೆ ?

jogur-sb1ಡಾ.ಎಸ್.ಬಿ. ಜೋಗುರ

ಗೆಳೆಯ ಪ್ರಹ್ಲಾದ ಅಗಸನಕಟ್ಟೆ ಇನ್ನಿಲ್ಲ.. ಎನ್ನುವ ಸುದ್ಧಿ ಕ್ಷಣ ಹೊತ್ತು ನನ್ನನ್ನು ಆಘಾತಕ್ಕೆ ಈಡು ಮಾಡಿತು.

ನಾನು, ಅಗಸನಕಟ್ಟೆ ಮತ್ತು ಬಸು ಬೇವಿನಗಿಡದ ಮತ್ತೆ ಮತ್ತೆ ಧಾರವಾಡದಲ್ಲಿ ಸೇರಿ ಹರಟೆ ಹೊಡೆಯುವದಿತ್ತು. ನಾವು ಬರೆದ ಕತೆಗಳನ್ನು ಪ್ರಹ್ಲಾದ ಪ್ರಾಮಾಣಿಕವಾಗಿ ಪರಾಮರ್ಶಿಸುತ್ತಿದ್ದರು.

ಕೇವಲ ಮೂರು ದಿನಗಳ ಹಿಂದಷ್ಟೆ ನಾನು ನಮ್ಮ ಪತ್ರಿಕೆಗೆ [ಜೋಗುರ ಟೈಮ್ಸ್] ಒಂದು ಕತೆಯನ್ನು ಕೇಳಿದ್ದೆ. ಆಯ್ತು ಎಂದಿದ್ದರು. ಪೋನ್ ಮಾಡಿದಾಗಲೊಮ್ಮೆ ಏನು ಬರೆದಿರಿ..? ಯಾವ ಪುಸ್ತಕ ಓದಿದಿರಿ ಎಂದು ಕೇಳುವ ಏಕೈಕ ಗೆಳೆಯ ಅವರಾಗಿದ್ದರು.

ಎರಡು ತಿಂಗಳ ಹಿಂದೆ ಅವರು ನಿವೃತ್ತಿಯಾದ ಮರುದಿನ ಧಾರವಾಡಕ್ಕೆ ಆಗಮಿಸಿದ್ದರು. ನಾನು, ಬಸು ಮತ್ತು ಅಗಸನಕಟ್ಟೆಯವರು ಕುಳಿತು ಊಟ ಮಾಡುತ್ತಾ ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ಆಗ ಪ್ರಹ್ಲಾದ ಅವರು ಸದ್ಯದ ಸಾಹಿತ್ಯಕ ಪರಿಸರದ ಬಗ್ಗೆ ಅಪಾರವಾಗಿ ನೊಂದುಕೊಂಡಂತೆ ಮಾತನಾಡಿದ್ದರು. ಅದೆಲ್ಲಾ ಬಿಡಿ ಖಾಲಿ ಕೊಡಗಳ ಸದ್ದು ಯಾವಾಗಲೂ ಇದ್ದದ್ದೇ ಆ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದೆ.

ಪ್ರಹ್ಲಾದ ನಿಜವಾಗಿಯೂ ಹೊಸ ಬರಹಗಾರರನ್ನು ಪ್ರೀತಿಯಿಂದ ಓದುತ್ತಿದ್ದರು. ಅಭಿಪ್ರಾಯಗಳನ್ನು ಹೇಳುತ್ತಿದ್ದರು. ಒಬ್ಬ ಕತೆಗಾರನನ್ನು ಕಂಡರೆ ಇನ್ನೊಬ್ಬ ಕತೆಗಾರ ಮೈ ಪರಚಿಕೊಳ್ಳುವ ಪರಿಸರದಲ್ಲಿಯೂ ಅವರು ತಣ್ಣಗೆ ಕುಳಿತು ನಮ್ಮ ಕತೆಗಳ ಬಗ್ಗೆ ಮಾತನಾಡಿ, ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.

ಆ ಕೊರತೆ ನಮ್ಮನ್ನೀಗ ಕಾಡತೊಡಗಿದೆ.

ರಾಜಕೀಯವನ್ನು ಮೀರಿರುವಂಥಾ ಸಾಹಿತ್ಯಕ ಪರಿಸರದ ನಡುವೆ ಪ್ರಹ್ಲಾದ ಅಗಸನಕಟ್ಟೆ ಒಬ್ಬ ಅಪರೂಪದ ಸಾಹಿತಿ, ಕತೆಗಾರ, ವಿಮರ್ಶಕ. ಇವೆಲ್ಲವನ್ನೂ ಮೀರಿ ಒಬ್ಬ ಒಳ್ಳೆಯ ಮನುಷ್ಯ.

ಅವರ ವಿಶ್ರಾಂತ ಜೀವನದ ಬರವಣಿಗೆಯ ಬಗ್ಗೆ ನನ್ನಂಥಾ ಅನೇಕ ಗೆಳೆಯರು ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಅವೆಲ್ಲವುಗಳನ್ನು ಹುಸಿಗೊಳಿಸಿ ಹೀಗೆ ಅಕಾಲಿಕವಾಗಿ ಅವರು ನಡೆದು ಹೋದರು.

vasudhendra1

ವಸುಧೇಂದ್ರ 

ಹಿರಿಯ ಕತೆಗಾರ ಪ್ರಹ್ಲಾದ ಅಗಸನಕಟ್ಟೆ ತೀರಿಕೊಂಡ ವಿಷಯ ಮನಸ್ಸಿಗೆ ತುಂಬಾ ದುಃಖವನ್ನು ನೀಡಿದೆ.

ಅತ್ಯಂತ ಸಹೃದಯದ ವ್ಯಕ್ತಿ.

ಹಲವಾರು ಬಾರಿ ಅವರೊಡನೆ ಒಡನಾಡಿದ್ದೇನೆ.

ಅವರ ನಿರಂತರ ಅಕ್ಷರ ಕೃಷಿಯ ಉತ್ಸಾಹ ನನ್ನನ್ನು ಬೆರಗುಗೊಳಿಸಿತ್ತು.

gavisiddha hosamani

ಗವಿಸಿದ್ಧ ಹೊಸ್ಮನಿ 

ನನ್ನ ‘ತಾಯವ್ವ’ ಕಥೆ ಇನ್ನೂ ಅವರಲ್ಲಿಯೇ ಉಳಿದಿದೆ.

ಅವತ್ತು ಅವರನ್ನು ಭೇಟಿಯಾಗಿ ಸರ್, ‘ಇದು ಕಥೆ ಆಗಿದೆಯಾ?’ ಅಂತ ಕೇಳಿದಾಗ.. ಓದಿ ಹೇಳ್ತೀನಿ ಹೊಸ್ಮನಿ ಅಂತ ಹೇಳಿ ಕಳುಹಿಸಿದ್ದರು. ಹೀಗೆ ಹಲವಾರು ಬಾರಿ ಅವರನ್ನು ಕಂಡಿದ್ದೆ. ಮಾತನಾಡಿಸಿದ್ದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಶ್ರವಣಬೆಳಗೊಳದಲ್ಲಿ ಆಯೋಜಿಸಿದ್ದ ಏಳು ದಿನದ ಕಥಾ ಕಮ್ಮಟಕ್ಕೆ ಶಿಬಿರಾರ್ಥಿಯಾಗಿ ಹೋದಾಗ ಸರ್ ಶಿಬಿರದ ನಿರ್ದೇಶಕರಾಗಿದ್ದರು. ಕಥೆಗಳ ಬಗ್ಗೆ ಮಾತನಾಡಿದರು. ಮಾತಾಡಿಸಿದರು. ಸರ್, ಕೂಡ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರಿಂದಲೇನೋ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನಂತಹ ಹುಡುಗರ ಬಗ್ಗೆ ಸಾಕಷ್ಟು ಪ್ರೀತಿ ಇತ್ತು ಅವರಿಗೆ. ನಿಮಗೆ ನಿತ್ಯ ಸುದ್ದಿ ತಿದ್ದಿ ತಿದ್ದಿ ತಪ್ಪುಗಳನ್ನು ಬಹುಬೇಗ ಗೊತ್ತು ಹಿಡೀತಿರಿ ಹೊಸ್ಮನಿ ಅಂತ ಹೇಳಿ ತಮ್ಮದೊಂದು ಕಥಾ ಸಂಕಲನದ proof reading ಜವಾಬ್ದಾರಿ ವಹಿಸಿದ್ದರು ನನಗೆ.

ಧಾರವಾಡ ಅಂದರೆ ಅಲ್ಲಿ ಅದೆಷ್ಟು ಬರೆಹಗಾರರು. ಪುಸ್ತಕ ಬಿಡುಗಡೆ, ನಾಟಕ ಪ್ರದರ್ಶನ ಒಂದಿಲ್ಲೊಂದು ಕಾರ್ಯಕ್ರಮ ನಿತ್ಯ ಇದ್ದೆ ಇರುತ್ತಿದ್ದವು. ಅಲ್ಲೇ ಹತ್ತಿರದಲ್ಲೇ ಇರುವ ಹುಬ್ಬಳ್ಳಿಯಲ್ಲಿ ಅಂತಹ ಪರಿಸರ ಇಲ್ಲ. ಕೆಲವರ ಪ್ರಯತ್ನದಿಂದ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅಂತಹ ವಾತಾವರಣ ಕಂಡು ಬರತೊಡಗಿತ್ತು. ಈ ಪ್ರಯತ್ನದಲ್ಲಿ ಸರ್ ಪಾಲು ಕೂಡ ಅಷ್ಟೇ ಮಹತ್ವದ್ದು. ಅವರು.., ಆ ಸರ್.. ಯಾರೆಂದರೆ ವಿಮರ್ಶಕ, ಹಿರಿಯ ಕಥೆಗಾರ ಡಾ.ಪ್ರಹ್ಲಾದ ಅಗಸನಕಟ್ಟೆ.

ಕೆಲವು ಹೊತ್ತಿನ ಹಿಂದೆ ಫೇಸ್ ಬುಕ್ ಗೋಡೆಯಲ್ಲಿ ಪ್ರಹ್ಲಾದ ಅಗಸನಕಟ್ಟೆ ಇನ್ನಿಲ್ಲ ಅನ್ನುವ ಸಾಲುಗಳನ್ನು ಓದುತ್ತಲೇ ಮನಸಿಗೆ ತುಂಬಾ ನೋವಾಯಿತು. ನಂಬಲು ಆಗಲಿಲ್ಲ

ಅವರನ್ನು ಅದೆಷ್ಟೋ ಸಲ ಕಂಡಿದ್ದು.. ಮಾತನಾಡಿದ್ದು..ಎಲ್ಲ ಎಲ್ಲವೂ ನೆನಪಾಗಿ
ಕಣ್ಣು ತೇವಗೊಂಡವು. ಯಾರೇ ಇರಲಿ ಅಕ್ಕರೆಯಿಂದ ಮಾತನಾಡಿಸುತ್ತಿದ್ದ, ಬರೆಹದ ಬಗ್ಗೆ ಕೇಳಿ
ಬರೆಯಲು ಹೇಳುತ್ತಿದ್ದರು.

ಅಗಸನಕಟ್ಟೆ ಸರ್ ನ್ನು ಬಿಟ್ಟು ಹುಬ್ಬಳ್ಳಿಯನ್ನು ಕಲ್ಪಿಸಿಕೊಳ್ಳಲಾರೆ.

One Response

  1. kumbar Veerabhadrappa
    September 7, 2016

Add Comment

Leave a Reply