Quantcast

ಟೈಪ್ ರೈಟರ್ ಎಂಬ ಗರ್ಲ್ ಫ್ರೆಂಡ್

ಮರೆತೇನೆಂದ್ರ.. ಮರೆಯಲಿ ಹ್ಯಾಂಗ

ಎಂ.ವಿ.ಕಾಮತರ ಜೊತೆ ನಾನು

ಸುಚಿತ್ ಕೋಟ್ಯಾನ್ ಕುರ್ಕಾಲು

ಮೊನ್ನೆ ಬುಧವಾರ ಜರ್ಮನಿಯಿಂದ ಬಂದಿದ್ದ ನನ್ನ ಗೆಳೆಯರ ಜೊತೆ ಉಡುಪಿಯಲ್ಲಿ ಸುತ್ತಾಡುತ್ತಾ ಮಣಿಪಾಲದ ಯೂನಿವರ್ಸಿಟಿಗೆ ಬಂದಿದ್ದೆ.

ವಿವಿಯ ಸ್ಕೂಲ್ ಆಫ್ ಕಮ್ಯೂನಿಕೇಷನ್ ವಿಭಾಗದ ಲೈಬ್ರೆರಿಯ ಮುಂದೆ ಒಟ್ಟು ಇರುವ ಪುಸ್ತಕಗಳ ಪಟ್ಟಿಯ ಜೊತೆ  ‘ಬೆಲೆ ಕಟ್ಟಲಾಗದ ಎಂ.ವಿ.ಕಾಮತರ ಸಂಗ್ರಹಗಳೂ ಇವೆ’ ಎಂಬ ಸಾಲು ಕಂಡಾಗ ಮನಸ್ಸು ನನ್ನ ಪಿ.ಜಿ. ಯ ದಿನಗಳನ್ನು ನೆನಪಿಗೆ ತಂದಿತ್ತು.

tundu-hykluನಾನು ‘ಎಂ.ವಿ.ಕಾಮತರ ಜೀವನ ಹಾಗೂ ಪತ್ರಿಕೋದ್ಯಮಕ್ಕೆ ಅವರ ಕೊಡುಗೆಗಳು’ ಎಂಬ ವಿಚಾರದ ಬಗ್ಗೆ ನನ್ನ ಒಂದು ವರ್ಷದ ಆಂಶಿಕ ಪ್ರಬಂಧ ಮಾಡಬೇಕೆಂದು ಮನಸ್ಸು ಮಾಡಿದ್ದೆ. ಅಲ್ಲಿಯವರೆಗೆ ಈ ಮೇರು ಪತ್ರಕರ್ತನನ್ನು ನೋಡದಿದ್ದರೂ ಕೂಡಾ ಹುಂಬ ಧೈರ್ಯದಲ್ಲಿ ಅವರ ಆಫೀಸ್ ನಂಬರಿಗೆ ಕರೆ ಮಾಡಿದ್ದೆ.

ಆ ಕಡೆಯಿಂದ ಸ್ವತಃ ಫೋನೆತ್ತಿಕೊಂಡ ಕಾಮತರು  ‘ಕಾಮತ್ ಹಿಯರ್’ ಎಂದಾಗ ನಿಜವಾಗಿಯೂ ಗಲಿಬಿಲಿಯಾಗಿತ್ತು. ಅವರ ಪಿ.ಎ. ಫೋನೆತ್ತಬಹುದು ಎಂಬ ನನ್ನ ಊಹೆ ಸುಳ್ಳಾಗಿ ಉರುಹೊಡೆದು ಸಿದ್ಧಮಾಡಿಟ್ಟಿದ್ದ ಎರಡಕ್ಷರ ಇಂಗ್ಲೀಷ್ ಕೂಡಾ ಮರೆತು ಹೋಗಿ ಅರೆಬರೆ ಇಂಗ್ಲೀಷ್ ನಲ್ಲಿ ‘ನಿಮ್ಮ ಜೊತೆ ಮಾತಾಡ್ಬೇಕು, ಬರಬಹುದಾ’ ಎಂದಾಗ ಅವರು ಕೂಡಾ ಕನ್ನಡದಲ್ಲೇ ‘ಆಯ್ತು ಶನಿವಾರ ಬನ್ನಿ’ ಎಂದಿದ್ದರು. ಆ ಶನಿವಾರ ‘ಎಂ.ವಿ.ಕಾಮತರ ಜೊತೆ ಮಾತಾಡ್ಲಕ್ಕಿದೆ, ಅಪಾಯಿಂಟ್ ಮೆಂಟ್ ಉಂಟು’ ಎಂದು ಠೀವಿಯಲ್ಲೇ ಸೆಕ್ಯೂರಿಟಿಗೆ ಹೇಳಿ ಅವರ ರೂಮ್ ಒಳ ಹೊಕ್ಕಿದ್ದೆ.

ಕಾಮತರ ಆಫೀಸ್ ಕೋಣೆ ಹೊಕ್ಕಾಗ ಹೊಸ ಅನುಭವ ನನಗಾಗಿತ್ತು.  ಅದು ಒಮ್ಮೆ ಲೈಬ್ರೆರಿಯಂತೆ ಕಂಡರೆ ಮತ್ತೊಮ್ಮೆ ಮ್ಯೂಸಿಯಂನಂತೆ ಕಂಡಿತು. ವಿಶಾಲವಾದ ಕಪಾಟಿನಲ್ಲಿ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಕಾಮತರು ಒಂದನ್ನೂ ಓದದೆ ಬಿಟ್ಟಿರಲಿಕ್ಕಿಲ್ಲ ಎಂದು ಅಂದುಕೊಂಡೆ.

ಅವರು ಕುಳಿತುಕೊಳ್ಳುವ ಸ್ಥಳದ ಮುಂದಿರುವ ಮೇಜು ಸಾಕಷ್ಟು ದೊಡ್ಡದಾಗಿದ್ದು ಎದುರಲ್ಲೇ ಪುಟ್ಟದಾದ ಪೋರ್ಟೇಬಲ್ ಟೈಪ್ರೈಟರ್ ಕಾಣಸಿಕ್ಕಿತು. ಅದರ ಬಗ್ಗೆ ವಿಚಾರಿಸಿದರೆ ದೊಡ್ಡದೊಂದು ನಗು ಕಾಮತರ ಮುಖದಲ್ಲಿ.

m v kamath on typewriter

ಎಲ್ಲರೂ ಅದರ ಬಗ್ಗೆ ಕೇಳುತ್ತಾರಂತೆ. ಕಾಮತರಿಗೆ ಈ ಟೈಪ್ರೈಟರ್ ಬಹಳ ಆತ್ಮೀಯವಾದದ್ದು. ಅವರೇ ಹೇಳುವಂತೆ ಅದು ಅವರ ಗರ್ಲ್ ಫ್ರೆಂಡ್. ಬಹಳ ಹಿಂದಿನಿಂದಲೂ ಕಾಮತರು ಅದರಲ್ಲಿ ಲೇಖನಗಳನ್ನು ಟೈಪ್ ಮಾಡುತ್ತಿದ್ದರು. ಕೊನೆಯ ದಿನದವರೆಗೂ ಬಳಸುತ್ತಿದ್ದರು. ಅದರಲ್ಲೇ ನನಗೊಂದು ವೈಯಕ್ತಿಕ ಪತ್ರ ಬರೆದು ಪೋಸ್ಟ್ ಮಾಡಿದ್ದಾರೆ.

ಇದಲ್ಲದೇ ಮೂಲೆಯಲ್ಲೊಂದು ಲ್ಯಾಪ್ ಟಾಪ್, ಒಂದಷ್ಟು ಪೇಪರ್, ಪೆನ್ನು, ಹಾಗೂ ದಿನಪತ್ರಿಕೆಯ ತುಣುಕುಗಳ ಒಂದು ದೊಡ್ಡ ರಾಶಿಯೇ ಅವರ ಮೇಜಿನಲ್ಲಿತ್ತು. ಪತ್ರಿಕೆ ಓದುವಾಗ ಯಾವುದೇ ವಿಷಯ ಸಂಗ್ರಹ ಯೋಗ್ಯ ಎನಿಸಿದರೆ ಅದನ್ನು ಕತ್ತರಿಸಿ ಜೋಪಾನವಾಗಿಟ್ಟುಕೊಳ್ಳುತ್ತಿದ್ದರು. ಮುಂದಕ್ಕೆ ತಮ್ಮ ಲೇಖನಗಳಲ್ಲಿ ಪೂರಕವಾಗಿ ಅವುಗಳನ್ನು ಬಳಸುತ್ತಿದ್ದರು. ಇದು ಅವರು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಪರಿಪಾಠ.

ಕಾಮತರು ದಿನಕ್ಕೆ ಏನಿಲ್ಲವೆಂದರೂ ಹತ್ತು ದಿನಪತ್ರಿಕೆಗಳನ್ನು ಓದುತ್ತಿದ್ದರು. ಈವರೆಗೆ ಅವರು ಬರೆದ ಲೇಖನಗಳೆಷ್ಟೋ, ಸ್ವತಃ ಅವರಿಗೇ ನೆನಪಿಲ್ಲ.ಇಳಿ ವಯಸ್ಸಿನಲ್ಲಿಯೂ ಫ್ರೀ ಪ್ರೆಸ್ ಜರ್ನಲ್, ಜನ್ಮಭೂಮಿ, ಹಿತವಾದ, ಆರ್ಗನೈಸರ್, ಸೆಂಟಿನಲ್, ನ್ಯೂಸ್ ಟುಡೇ, ಉದಯವಾಣಿ, ಆಫ್ಟರ್ನೂನ್ ಡಿಸ್ಪ್ಯಾಚ್ & ಕೊರಿಯರ್, ಹನ್ಸ್ ಇಂಡಿಯಾ ಪತ್ರಿಕೆಗಳಿಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದರು. ಅವರ ಅಂಕಣಗಳ ವಿಶೇಷವೆಂದರೆ ಅದರಲ್ಲಿ ಅಡಕವಾಗಿರುವ ಮೌಲ್ಯಗಳು ಹಾಗೂ ಅವರು ಎತ್ತುವ ಮಹತ್ವದ ವಿಚಾರಗಳು. ಅವರ ಪ್ರತೀ ಅಂಕಣ ಬರಹದಲ್ಲಿಯೂ ಸಾಕಷ್ಟು ಅಂಕಿ-ಅಂಶಗಳು, ಪೂರಕ ದಾಖಲೆಗಳು ಇದ್ದೇ ಇರುತ್ತಿತ್ತು. ಇದಕ್ಕೆಲ್ಲಾ ಅವರು ಓದುವ ಪತ್ರಿಕೆಗಳು ಹಾಗೂ ಅವರ ವಿಷಯ ಸಂಗ್ರಹ ಶೈಲಿಯೇ ಮೂಲ ಕಾರಣ.

 

ಎಂ.ವಿ.(ಮಾಧವ ವಿಟ್ಠಲ) ಕಾಮತರು ಹುಟ್ಟಿದ್ದು ಉಡುಪಿಯಲ್ಲಿ; ಇಲ್ಲಿಯ ಓರ್ವ ಖ್ಯಾತ ವಕೀಲರ ಮಗನಾಗಿ ಸಪ್ಟೆಂಬರ್ 7, 1921 ರಲ್ಲಿ ಜನಿಸಿದರು. ಕಾಮತರ ಬಾಲ್ಯದ ದಿನಗಳು ಅತ್ಯಂತ ಸುಂದರವಾಗಿಯೂ, ಸ್ಮರಣೀಯವಾಗಿಯೂ ಇದ್ದವು.

Suchit Kotyan Kurkaluಉಡುಪಿಗೆ ಗಾಂಧೀಜಿಯವರು ಭೇಟಿ ಕೊಟ್ಟಾಗ ಕಾಮತರ ತಂದೆ ಮುಂದಾಳತ್ವ ವಹಿಸಿದ್ದು, ಮೋತಿಲಾಲ್ ನೆಹರೂ ತೀರಿಕೊಂಡಾಗ ಉಡುಪಿಯಲ್ಲಿ ನಡೆದ ಶೋಕ ಮೆರವಣಿಗೆಯಲ್ಲಿ ಪುಟಾಣಿ ಕಾಮತರನ್ನು ಆನೆಯ ಮೇಲೆ ಕುಳ್ಳಿರಿಸಿ ಕೈಗೊಂದು ಮೋತಿಲಾಲರ ಫೋಟೋ ಕೊಟ್ಟು ಮುಂದೆ ಸಾಗುವಂತೆ ಮಾಡಿದ್ದು, ಕಾಮತರು ಆನೆಯ ಮೇಲೆ ಹೆದರಿ ಮೈ ಬೆವತು ಇನ್ನೆಂದೂ ಇಂತಹ ದುಸ್ಸಾಹಸ ಮಾಡಬಾರದೆಂದು ನಿಶ್ಚಯಿಸಿದ್ದು, ಗೋಟಿ- ಗಿಲ್ಲಿದಾಂಡು ಆಡಿ, ಗಾಳಿಪಟ ಹಾರಿಸಿ ಮಜಾ ಮಾಡಿದ್ದು, ಮುಂತಾದ ಅನುಭವಗಳು ಬಹಳ ರಸವತ್ತಾಗಿ ಅವರ ನೆನಪಿನಂಗಳದಿಂದ ಮೂಡಿಬರುತ್ತಿತ್ತು. ಅದನ್ನೆಲ್ಲಾ ಹೇಳಿ ಯಾವಾಗಲೂ ನಗಿಸುತ್ತಿದ್ದರು, ತಾವೂ ನಕ್ಕು ಹಗುರಾಗುತ್ತಿದ್ದರು.

ಕಾಮತರು ಡಾಕ್ಟರ ಆಗಬೇಕೆಂದು ಆಸೆ ಪಟ್ಟವರು. ಮುಂಬಯಿಯಲ್ಲಿ ಬಿ.ಎಸ್ಸಿ ಮಾಡಿ ಕೆಮಿಸ್ಟರಾದವರು. ಡಾಕ್ಟರರಾಗಲು ಬಹಳ ಪ್ರಯತ್ನಪಟ್ಟು ನಂತರ ಅಸಾಧ್ಯವಾದಾಗ ಸಮುದ್ರ ತೀರದಲ್ಲಿ ಕೂತು ಬಹಳ ಅತ್ತವರು.

ಉದ್ಯೋಗ ಬಿಟ್ಟು ರಸ್ತೆಯ ಬದಿಯಲ್ಲಿ ಬ್ಯಾಗ್ ಮಾರಿದವರು. ಶಿಕ್ಷಕ ವೃತ್ತಿಯನ್ನೂ ಮಾಡಿ ಕೆಲಕಾಲ ಮಕ್ಕಳಿಗೆ ಪಾಠ ಮಾಡಿದವರು. ಒಮ್ಮೆ ರಾಮಕೃಷ್ಣ ಮಿಶನ್ ಸೇರಿ ಸನ್ಯಾಸಿಯಾಗಬೇಕೆಂದೂ ಬಯಸಿದವರು !. ಆದರೆ ಕಾಮತರ ಹಣೆಯಲ್ಲಿ ಬೇರೆಯೇ ಬರೆದಿತ್ತು. ಪತ್ರಕರ್ತನಾಗುವತ್ತ ಕಾಮತರು ಒಲವು ತೋರಿ ಅಂದಿನ ಕ್ರಾಂತಿಕಾರಿ ಧೇಶಭಕ್ತ ಪತ್ರಿಕೆ ‘ಫ್ರೀ ಪ್ರೆಸ್ ಜರ್ನಲ್’ಗೆ 100 ರೂಪಾಯಿಗೆ ವರದಿಗಾರನಾಗಿ ಸೇರಿದರು. ಮುಂದೆ ಪತ್ರಕರ್ತನಾಗಿ ಬೆಳೆದು ಒಂದೊಂದೇ ಮೆಟ್ಟಿಲು ಹತ್ತಿ ಯಶಸ್ಸಿನ ಉತ್ತುಂಗಕ್ಕೇರಿದರು.

ಕಾಮತರು ಓರ್ವ ಅಪ್ಪಟ ದೇಶಭಕ್ತನಾಗಿದ್ದರು. ಪತ್ರಿಕೆ ಸೇರುವುದಕ್ಕಿಂತ ಮುಂಚೆ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕರ್ತನಾಗಿ ದುಡಿದಿದ್ದರು. ನಂತರದ ದಿನಗಳಲ್ಲಿ ತಮ್ಮ ಬರಹಗಳಲ್ಲಿ ಹೊಳಪು ಸಾಧಿಸಿಕೊಂಡಂತೆ ರಾಷ್ಟ್ರಪ್ರೇಮ, ದೇಶದ ಕುರಿತಾದ ಅವರ ಅನಿಸಿಕೆಗಳು ಬಹಳ ಪರಿಣಾಮಕಾರಿಯಾಗಿ ಅವರ ಲೇಖನಗಳಲ್ಲಿ ಗೋಚರಿಸತೊಡಗಿದವು. 1947 ರಲ್ಲಿ ಆಗಸ್ಟ್ 14 ರ ಮಧ್ಯರಾತ್ರಿ ಸ್ವಾತಂತ್ರ್ಯ ದೊರಕಿದ ಸಂದರ್ಭವನ್ನು ಆ ಸ್ಥಳದಲ್ಲಿದ್ದುಕೊಂಡು ವರದಿ ಮಾಡಿದ ಬಗ್ಗೆ ಹೇಳುವಾಗ ಕಾಮತರ ಮುಖ ಅರಳುತ್ತದೆ. ಕಣ್ಣೀರು ಅವರಿಗರಿವಿಲ್ಲದಂತೆಯೇ ಜಿನುಗುತ್ತದೆ.

ಆ ವರದಿಯನ್ನು ಮಾಡಿದ ಪತ್ರಕರ್ತರಲ್ಲಿ ಇಂದು ಬದುಕಿರುವವರು ಕಾಮತರೊಬ್ಬರೇ. ಇದಲ್ಲದೆ ನಾಥೂರಾಮ್ ಗೋಡ್ಸೆಯ ಟ್ರಯಲ್ ವರದಿ ಮಾಡಿದ್ದು, ‘ಕಾಶ್ಮೀರದ ಹುಲಿ’ ಶೇಕ್ ಅಬ್ದುಲ್ಲಾ ಬಂಧನದ ವರದಿ ಮಾಡಲು ಅಪಾಯವನ್ನು ಲೆಕ್ಕಿಸದೆ ಶ್ರೀನಗರಕ್ಕೆ ತೆರಳಿದ್ದು, ಭಾರತ ಸೇರಿ ವಿಶ್ವದ ಅಗ್ರಗಣ್ಯ ನಾಯಕರನ್ನೆಲ್ಲಾ ಸಂದರ್ಶಿಸಿದ್ದು, ಮುಂತಾದವುಗಳು ಇವರ ವೃತ್ತಿ ಬದುಕಿನ ಕೆಲವು ರೋಮಾಂಚಕಾರಿ ಅನುಭವಗಳು.

ಪಿಟಿಐ ಕರೆಸ್ಪಾಂಡೆಂಟ್ ಆಗಿ ಅಮೇರಿಕಾ, ಟೈಮ್ಸ್ ಆಫ್ ಇಂಡಿಯಾದ ವಕ್ತಾರನಾಗಿ ಜರ್ಮನಿ, ಪ್ಯಾರಿಸ್ ನಲ್ಲಿ ದುಡಿದವರಿವರು. ಇಲ್ಲಸ್ಟ್ರೇಟೆಡ್ ವೀಕ್ಲಿಯ ಸಂಪಾದಕತ್ವ, ಪ್ರಸಾರ ಭಾರತಿಯ ಅಧ್ಯಕ್ಷ ಹುದ್ದೆಯಂತಹ ಅತ್ಯುನ್ನತ ಪದವಿಗಳನ್ನೂ ಕಾಮತರು ಅಲಂಕರಿಸಿದ್ದಾರೆ. ಅಂದಿನ ‘ಇಲ್ಲಸ್ಟ್ರೇಟೆಡ್ ವೀಕ್ಲಿ’ಯ ಗುಣಮಟ್ಟ ಇಂದಿಗೂ ಎಲ್ಲೆಡೆಗಳಲ್ಲಿ ಪ್ರಶಂಸೆಗೊಳಗಾಗುತ್ತಿರುವುದು ಕಾಮತರ ವೃತ್ತಿ ತತ್ಪರತೆಗೊಂದು ಸಾಕ್ಷಿ.

ಕನ್ನಡದ ಮಣ್ಣಲ್ಲಿ ಹುಟ್ಟಿದ ಕನ್ನಡದ ಕುವರ ಎಂ.ವಿ.ಕಾಮತ್. ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಮಾತೃಭೂಮಿಯ, ಮಾತೃಭಾಷೆಯ ಋಣವನ್ನು ಕಾಮತರೆಂದೂ ಮರೆತಿಲ್ಲ. ಸರಿಸುಮಾರು ಸ್ವಾತಂತ್ರ್ಯ ದೊರೆತ ಕಾಲದಲ್ಲಿ ಕಾಮತರು ತನ್ನ ಗೆಳೆಯರಾದ ಹನುಮೇಶ, ರಾಮಚಂದ್ರ ಮತ್ತು ಸೋಮನಾಥರ ಜೊತೆಗೂಡಿ ಮುಂಬೈಯಲ್ಲಿ ‘ನುಡಿ’ ಎಂಬ ಕನ್ನಡ ಪತ್ರಿಕೆ ಆರಂಭಿಸಿದ್ದರು. ಮುಂದೆ ಅಲ್ಪಕಾಲದಲ್ಲಿ ‘ನುಡಿ’ ಮುಂಬೈ ಕನ್ನಡಿಗರ ಅಚ್ಚುಮೆಚ್ಚಿನ ಪತ್ರಿಕೆಯಾಯಿತು.

ಅಂದು ಕಾಸರಗೋಡಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ಣ ವರದಿ, ಕನ್ನಡ ಗ್ರಂಥಗಳ ವಿಮರ್ಶೆಯೂ ಈ ಹೊಸ ಪತ್ರಿಕೆಯಲ್ಲಿ ಪ್ರಕಟಗೊಂಡವು. ಅವೆಲ್ಲಾ ಆ ಕಾಲಕ್ಕೆ ಕನ್ನಡ ಪತ್ರಿಕೋದ್ಯಮದಲ್ಲೇ ಹೊಸದೊಂದು ಆವಿಷ್ಕಾರವಾಗಿತ್ತು. ಖ್ಯಾತ ಕಾದಂಬರಿಕಾರ ವ್ಯಾಸರಾಯ ಬಲ್ಲಾಳರು ಸೇರಿದಂತೆ ಅನೇಕರು ಈ ಪತ್ರಿಕೆಗೆ ಲೇಖನಗಳನ್ನು ಬರೆದರು.

m v kamath typewriterಪತ್ರಿಕೆ ಇಷ್ಟೆಲ್ಲಾ ವೈವಿಧ್ಯಗಳನ್ನು ಹೊಂದಿದ್ದರೂ ಆರ್ಥಿಕವಾಗಿ ಸುಧಾರಿಸಲಿಲ್ಲ. ಮುಂದಕ್ಕೆ ಅದು ‘ಫ್ರೀ ಪ್ರೆಸ್’ ಆಡಳಿತದಡಿಯಲ್ಲಿ ಬಂತು. ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿ 1950 ರ ಆಗಸ್ಟ್ ನಲ್ಲಿ ಪತ್ರಿಕೆ ನಿಂತು ಹೋಯಿತು. ‘ನುಡಿ’ ಪತ್ರಿಕೆ ಕಾಮತರ ಹಾಗೂ ಅವರ ಗೆಳೆಯರ ಕಿಸೆಗಳನ್ನು ಕೊರೆದರೂ ಕನ್ನಡ ಪತ್ರಿಕೆಯೊಂದನ್ನು ಸ್ಥಾಪಿಸಿ, ಅದಕ್ಕಾಗಿ ದುಡಿದ ಸಂತೃಪ್ತ ಮನೋಭಾವ ಕಾಮತರಲ್ಲಿತ್ತು.

ಕಾಮತರು ಪತ್ರಕರ್ತನಾಗಿ ಈ ದೇಶಕ್ಕೆ ಸಲ್ಲಿಸಿದ ಅಮೋಘ ಸೇವೆಯನ್ನು ಪರಿಗಣಿಸಿ ಸರಕಾರ ಅವರಿಗೆ 2004 ರಲ್ಲಿ ಪ್ರತಿಷ್ಠಿತ ‘ಪದ್ಮಭೂಷಣ’ ಪ್ರಶಸ್ತಿಯಿತ್ತು ಗೌರವಿಸಿದೆ. ಮಂಗಳೂರು ವಿವಿಯಿಂದ 2007 ರಲ್ಲಿ ಗೌರವ ಡಾಕ್ಟರೇಟ್ ಇವರಿಗೆ ಸಂದಿದೆ. ಇದಲ್ಲದೆ 2011 ರಲ್ಲಿ ‘ಶ್ರೇಷ್ಠ ಕೊಂಕಣಿಗ’ ಪ್ರಶಸ್ತಿಗೂ ಕಾಮತರು ಭಾಜನರಾಗಿದ್ದಾರೆ.

ವೃತ್ತಿಯಿಂದ ನಿವೃತ್ತರಾದರೂ ಬರವಣಿಗೆಯ ನಂಟನ್ನು ಕಾಮತರು ಬಿಡದೆ ಪತ್ರಿಕೆಗೆ ಅಂಕಣಗಳನ್ನು ಬರೆಯುವುದರ ಜೊತೆಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲಿ ಆಧ್ಯಾತ್ಮದಿಂದ ಹಿಡಿದು ಬ್ಯಾಂಕ್ ಚರಿತ್ರೆಯವರೆಗೆ ಎಲ್ಲವೂ ಬಂದು ಹೋಗಿದೆ. ಈವರೆಗೆ ಅವರು ಬರೆದಿರುವ ಒಟ್ಟು ಕೃತಿಗಳ ಸಂಖ್ಯೆ 46. ಇದಲ್ಲದೆ 2 ಗ್ರಂಥಗಳ ಸಂಪಾದನೆ, 8 ಕೃತಿಗಳಿಗೆ ಬೇರೆ ಬೇರೆ ಅಧ್ಯಾಯಗಳನ್ನು ಬರೆದಿದ್ದಾರೆ. ಈ ಪೈಕಿ ಅವರ ‘ಸಾಯಿಬಾಬಾ ಆಫ್ ಶಿರಡಿ’  24 ಬಾರಿ ಮರುಮುದ್ರಣ ಕಂಡಿದ್ದು ಒಂದು ದಾಖಲೆಯಾದರೆ,  6 ಬ್ಯಾಂಕ್ ಗಳ ಚರಿತ್ರೆ ಬರೆದದ್ದು ಒಂದು ವಿಶ್ವದಾಖಲೆಯಾಗಿದೆ.

ಕಾಮತರು ಜೀವನದುದ್ದಕ್ಕೂ ಮೌಲ್ಯಗಳನ್ನು ಪಾಲಿಸಿಕೊಂಡು ಬಂದು ಯಾವುದಕ್ಕೂ ರಾಜಿಮಾಡಿಕೊಳ್ಳದೆ ಬದುಕಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ ಪತ್ರಿಕಾ ರಂಗಕ್ಕೆ ಬಂದು ವಿವಿಧ ತಲೆಮಾರುಗಳ ಜೊತೆ ಕೆಲಸಮಾಡಿರುವ ಕಾಮತರಿಗೆ ಪ್ರಸಕ್ತ ಪತ್ರಿಕೋದ್ಯಮ ಸೇರಿದಂತೆ ಇಡೀ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಬೇಸರವಿದೆ. ತಮ್ಮ ಕೊನೆಯ ಲೇಖನದವರೆಗೆ ಸರಕಾರ ಆದರ್ಶಗಳನ್ನು ಮರೆತಾಗ, ಜನರು ತಮ್ಮ ಸಂಸ್ಕೃತಿಯನ್ನು ಮೂಲೆಗಿಟ್ಟಾಗ ಪ್ರಖರವಾಗಿ ಖಂಡಿಸಿ ಲೇಖನಗಳನ್ನು ಬರೆದು ತನ್ನ ಸಾಮಾಜಿಕ ಜವಾಬ್ದಾರಿಯನ್ನು ತೋರ್ಪಡಿಸಿದ್ದರು.

ಅವರ ವಿಚಾರಧಾರೆಗಳು ಪತ್ರಿಕೋದ್ಯಮದ ಮೆಟ್ಟಿಲು ಹತ್ತುತ್ತಿರುವ ಮರಿ ಪತ್ರಕರ್ತರಿಗೊಂದು ಆದರ್ಶ. ‘ಪತ್ರಿಕೋದ್ಯಮವೆಂದರೆ ಇದು’ ಎಂದು ತನ್ನ ಜೀವನದ ಮೂಲಕ, ವಿಚಾರವಾದೀ ಬರಹಗಳ ಮೂಲಕ ಹಾಗೂ ತನ್ನ ಕಟುನಿಲುವುಗಳ ಮೂಲಕಗಳ ಎಲ್ಲರಿಗೂ ತೋರಿಸಿಕೊಟ್ಟಿವರು ಇಂದು ನಮ್ಮೊಂದಿಗಿಲ್ಲ. ಹಿರಿಯರೊಬ್ಬರು ಗತಿಸಿದರೆ ಲೈಬ್ರೆರಿಯೊಂದು ಸುಟ್ಟು ಬೂದಿಯಾದಂತೆ ಎಂದು ಆಫ್ರಿಕನ್ ಗಾದೆಯೋದು ಹೇಳುತ್ತದೆ. ಮರೆಯಾಗುತ್ತಿರುವ ಪತ್ರಿಕೋದ್ಯಮದ ತತ್ವ-ಸಿದ್ಧಾಂತಗಳು, ಪತ್ರಕರ್ತರಲ್ಲಿನ ಬದ್ಧತೆಯ ಕೊರತೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಎಂ.ವಿ.ಕಾಮತರ ಜೀವನ ನೆನಪಾಗುತ್ತದೆ.

 

ಎಂ.ವಿ.ಕಾಮತರನ್ನು ನೆನಸಿಕೊಂಡು ಲೈಬ್ರೆರಿಯೊಳಗೆ ಹೊಕ್ಕಾಗ ಸಣ್ಣ ಆಸೆಯೊಂದು ಮನದೊಳಗೆ ಮೂಡಿತ್ತು. ನಾನು ನನ್ನ ಆಂಶಿಕ ಪ್ರಬಂಧದ ಪ್ರತಿಯೊಂದನ್ನು ಅವರಿಗೆ ನೀಡಿ ‘ಸರ್ ನಿಮ್ಮ ಪುಸ್ತಕ ಭಂಡಾರದಲ್ಲಿ ಇದನ್ನೂ ಸೇರಿಸುತ್ತೀರಾ’ ಎಂದು ಕೇಳಿದ್ದೆ. ಸಂತೋಷವಾಗಿ ಸ್ವೀಕರಿಸಿದ್ದರು.

ಆ ಪುಸ್ತಕನೇನಾದರೂ ಇಲ್ಲಿರಬಹುದಾ ಎಂದು ಹುಡುಕುತ್ತಿರುವಾಗ ಅದೇ ನನ್ನ ಕಣ್ಣಿಗೆ ಬಿತ್ತು.

ಕಾಮತರು ಅದನ್ನು ಜೋಪಾನವಾಗಿರಿಸಿದ್ದರು. ಅವರ ಕಾಲನಂತರವೂ ಅದು ಲೈಬ್ರೆರಿಯೊಳಗೆ ಸಂಗ್ರಹವಾಗಿತ್ತು. ನನ್ನಂತವನೊಬ್ಬನ ಪ್ರಬಂಧ ಮಣಿಪಾಲ ವಿವಿಯ ವಿಭಾಗವೊಂದರ ಲೈಬ್ರೆರಿಯೊಳಗಿರುವುದನ್ನು ಕಂಡು ನನ್ನ ಜರ್ಮನ್ ಗೆಳೆಯರಿಗೂ ಪರಮಾಶ್ಚರ್ಯವಾಯಿತು. ಅವರೇ ಆ ಬುಕ್ ನನ್ನ ಕೈಗೆ ಕೊಟ್ಟು ಫೋಟೋ ಹೊಡೆಸಿಕೊಂಡರು.

ಎಂ.ವಿ.ಕಾಮತರನ್ನು ಸರಳತೆ ನೆನದು ಕಣ್ಣಾಲಿಗಳು ತುಂಬಿ ಬಂತು.

Add Comment

Leave a Reply