Quantcast

ಒಂದು ಬಸ್ಸು ಹಿಡಿದು..

ಮೊನ್ನೆ ಒಂದು ದಿನ ಆಫೀಸಿಗೆ ಹೋದವಳು ತೀರಾ ಕಿರಿಕಿರಿಯೆನಿಸಿ ಇರಲಾಗದೆ, ರಜೆಹಾಕಿ ಬಂದು ಬಿಟ್ಟೆ.

ಸದ್ಯ ಯಾರೂ, ಏನು ಎತ್ತ ಎಂದು ವಿಚಾರಿಸಲಿಲ್ಲ.

ಏನೂ ಮಾಡಲು ತೋಚದೆ, ಒಂದು ವೋಲ್ವೋ ಬಸ್ಸನ್ನು ಹತ್ತಿ ದಿನದ ಪಾಸು ಕೊಂಡು ಸಿಕ್ಕಸಿಕ್ಕಲ್ಲಿ ಇಳಿದು ಸಿಕ್ಕಸಿಕ್ಕ ಬಸ್ಸನ್ನು ಹತ್ತಿ ಬೆಂಗಳೂರಿನ ಟ್ರಾಫಿಕ್ಕನ್ನು ಆರಾಮವಾಗಿ ಬಸ್ಸಿನ ಒಳಗೆ ಕುಳಿತು ನೋಡುತ್ತಿದ್ದೆ.

avadhi-column-nagashree- horiz-editedಬೆಳಗ್ಗಿನ ಪೀಕ್ ಆರ್ ಮುಗಿದದ್ದರಿಂದ ಹೇಳಿಕೊಳ್ಳುವಷ್ಟು ರಶ್ ಏನೂ ಇರಲಿಲ್ಲ. ಅದಕ್ಕೇ ಇರಬೇಕು ಬಸ್ಸು ಒಂದು ರೀತಿ ಹಿತಕರವಾಗಿತ್ತು. ‘ಕಂಡಕ್ಟರ್  ಹಾಗೂ ಡ್ರೈವರ್ ಯಾವೂರ ವಿಷಯವೋ ಏನೋ ಸಕ್ಕತ್ ಎಂಜಾಯ್ ಮಾಡಿಕೊಂಡು ಮಾತಾಡುತ್ತಾ ಹಾಯಾಗಿದ್ದರು. ಬಹುಪಾಲು ಟೆಕ್ಕಿಗಳು ಹಾಂಡ್ಸ್ ಫ್ರೀ ಹಾಕಿಕೊಂಡು ಗುಮ್ಮ ಮುಖ ಮಾಡಿಕೊಂಡು ಈ ಲೋಕಕ್ಕೇ ತಾವು ಅಪರಿಚಿತರು ಎನ್ನುವ ಹಾಗೆ ಹತ್ತಿ ಇಳಿಯುತ್ತಿದ್ದರು.

ಇನ್ನುಳಿದವರು ಏನೂ ಮಾಡಲು ತೋಚದೆ  ಸುಮ್ಮನೆ ಒಬ್ಬರ ಮುಖ ಇನ್ನೊಬ್ಬರು ನೋಡುತ್ತಲೋ, ಸಿಗ್ನಲ್ ಬಂದಾಗ ಮುಖ ಹಿಂಜಿಕೊಂಡೋ, ಹಾಡು ಕೇಳಿ ಕನಸಲ್ಲಿ ಮನಸಲ್ಲಿ ಸುಖಪಡುತ್ತಲೋ, ಈ ಲೋಕದಲ್ಲಿ ಮಾತಾಡಲು ಇನ್ನೇನಿದೆ ಮಾತಾಡಲೇಬಾರದು ಎಂದು ವೇದಾಂತಿಗಳಂತೆ ಬಾಯಿ ಮುಚ್ಚಿ ಕುಳಿತಿದ್ದರು. ನನಗೂ ಹೇಳಹೆಸರಿಲ್ಲದವಳ ಹಾಗೆ ಹೀಗೆ ಅಲೆದು ಇವರನ್ನೆಲ್ಲಾ ನೋಡಿದ ಮೇಲೆ ಮನಸ್ಸು ಸ್ವಲ್ಪ ಸಡಿಲವಾಗುತ್ತಿತ್ತು.

ಅದೊಂದು ಬಸ್ಸು, ಒಬ್ಬರು ಹತ್ತುತ್ತಾರೆ, ಇನ್ನೊಬ್ಬರು ಇಳಿಯುತ್ತಾರೆ. ಹತ್ತಬೇಕಾದರೆ ಬಾಗಿಲು ತೆರೆದು ಆಹ್ವಾನಿಸಿಕೊಳ್ಳುತ್ತದೆ, ಹತ್ತಿದ ಕೂಡಲೇ ಬಾಗಿಲು ಮುಚ್ಚಿ ತನ್ನ ಲೋಕಕ್ಕೆ ಕೊಂಡೊಯ್ಯುತಿತ್ತು, ಒಂದು ಹಾಡು, ಇಷ್ಟು ಹರಟೆ, ಎಷ್ಟೊಂದು ಮನಸ್ಸುಗಳು, ಮುಖಗಳು, ಮತ್ತಷ್ಟು ಪರಿಮಳಗಳು, ಒಂದು ಪುಟ್ಟ ಲೋಕವನ್ನೇ ಸೃಷ್ಟಿಸುತ್ತಿತ್ತು. ಸ್ವಲ್ಪ ದೂರವಾದರೂ ನಮ್ಮ ದಾರಿಯಲ್ಲೇ ಇರುವವರು ಎಂದುಕೊಂಡರೆ ಅಷ್ಟರಲ್ಲೇ ಇಳಿದು ಬಿಡುತ್ತಾರೆ, ಮತ್ತೊಬ್ಬರು ಹತ್ತುತ್ತಾರೆ, ಎಲ್ಲರೂ ಇಳಿದು ಕೊನೆಗೆ ಡ್ರೈವರ್ ಕಂಡಕ್ಟರ್ ಕೂಡಾ ಇಳಿದು, ಖಾಲಿ ಬಸ್ಸಿನ ತುಂಬಿಕೊಳ್ಳದ ಸೀಟುಗಳಂತೆ ಒಂಟಿಯಾಗಿರುವುದೇ ನಿಜ. ಮಾತಾಡದೆ ಸುಮ್ಮನಿರಬೇಕು ಅನಿಸುತ್ತಿತ್ತು.

ಹೀಗೆ ಏನೇನೋ ಅಂದುಕೊಂಡು ಮುಂದಿನ ಸ್ಟಾಪಲ್ಲಿ ಇಳಿಯಬೇಕು ಅನ್ನುವಷ್ಟರಲ್ಲಿ, ಅಲ್ಲೇ ಬಲಬದಿಯಲ್ಲಿ, ನಾವು ಆಗಾಗ ಹೋಗುತ್ತಿದ್ದ ಊಟದ ಮೆಸ್ ಕಾಣಿಸಿತು.

ಈ ಬೆಂಗಳೂರಲ್ಲಿ, ರೋಟಿ ಬಿರಿಯಾನಿ ಪಿಜ್ಜಾ ಪಾಸ್ತಾ ತಿಂದು ಬೇಜಾರಾದಾಗ, ಮನೆಯಲ್ಲಿ ಅಡಿಗೆ ಮಾಡಲೂ ಬೋರಾದಾಗ, ನಾವು ಈ ಊಟದ ಮೆಸ್ಸಿಗೆ ಹೋಗುವುದಿದೆ. ೩೫-೪೦ ವರ್ಷಗಳಿಂದಲೂ ಇದು ಹೀಗೇ ಇಲ್ಲೆ ಇದೆಯಂತೆ. ಕುಂದಾಪುರದ ಕಡೆಯವರು ನಡೆಸುತ್ತಿರುವ ಈ ಮೆಸ್ಸಿನಲ್ಲಿ ಅದೆಷ್ಟೋ ಬಾರಿ  ಹಿತವಾಗಿ  ನಾವೂ ಊಟಮಾಡಿ ಮಾಡಿಕೊಂಡು ಬಂದಿದ್ದೆವು.

ಪುಟ್ಟ ಹುಡುಗನಿದ್ದಾಗ ಕುಂದಾಪುರದಿಂದ ಘಟ್ಟ ಹತ್ತಿ ಬಂದು ಈ ಮೆಸ್ಸನ್ನು ಶುರುಮಾಡಿರುವ ಅಜ್ಜ,  ಅವರ ಮಗ, ಹಾಗೂ ಅಲ್ಲಿನ ಹುಡುಗರು,  ಊಟದಷ್ಟೇ ಉಪಚಾರ ಮಾಡುತ್ತಾರೆ.

ಆ ಮೆಸ್ಸೆಂಬುದು ಕೂಡಾ ಬರುವವರ ಹೋಗುವವರ ಒಂದು ಪುಟ್ಟ ಪ್ರಪಂಚದಂತೆ!

lunch messಅಜ್ಜನ ಮಗನಿಗೆ ನಾವು ಚಿರಪರಿಚಿತರಾದರೂ ಅಜ್ಜನಿಗೆ  ನಮ್ಮ ನೆನಪು ಅಷ್ಟಾಗಿ ಇರುತ್ತಿರಲಿಲ್ಲ. ಹೋದಾಗಲೆಲ್ಲಾ  ಎಲ್ಲಾಯಿತು ನಿಮಗೆ.. ಎಂದು ಕೇಳುತ್ತಿದ್ದರು. ಮೊನ್ನೆ ಒಂದು ಶನಿವಾರ ಹೋಗಿದ್ದೆವು. ಪರ್ವತದ ಹಾಗಿದ್ದ ಮೆಟ್ಟಿಲೇರಿ ಒಳಗೆ ಹೋದಾಗ, ಅಜ್ಜ,  ಯಾವಾಗಿನಂತೆ ಸ್ವಚ್ಚ ಬಿಳಿ ಪಂಚೆ ಬನಿಯನ್ ಹಾಕಿಕೊಂಡು ಪೂರ್ತಿ ನರೆತ ಕೂದಲನ್ನು ನೀಟಾಗಿ ಬಾಚಿಕೊಂಡು, ಬೆನ್ನು ಬಾಗಿಸಿಕೊಂಡು ಒಬ್ಬರೇ ಏನೋ ಗೊಣಗಿಕೊಂಡು ಓಡಾಡುತ್ತಿದ್ದರು, ಮಗ ಎಲ್ಲೋ ಹೊರಗೆ ಹೋಗಿರಬೇಕು, ಹುಡುಗರು ಎಂದಿನಂತೆ, ತರಕಾರಿ ಹಚ್ಚುತ್ತಾ, ಮಧ್ಯಾಹ್ನದ ಊಟಕ್ಕೆ ರೆಡಿ ಮಾಡುತ್ತಾ, ಈ ಅಜ್ಜನಿಗೆ ಇನ್ನು ತಲೆ ನೆಟ್ಟಗಾಗುವುದಾದರೂ ಎಲ್ಲಿಂದ ಎನ್ನುವ ಹಾಗೆ ಅವರೊಳಗೆ ನಗುತ್ತಿದ್ದರು.

ಅಜ್ಜ, ನಾವಿದ್ದಲ್ಲಿಗೆ ಬಂದು, ಇವರಿಗೆ ಚಪಾತಿ ಪಾಯಸ ಎಲ್ಲಾ ಕೊಡಿ ಎಂದು ಹುಡುಗರಿಗೆ ಹೇಳುತ್ತಾ, ಒಂದು ಕುರ್ಚಿ ಎಳೆದುಕೊಂಡು, ಮಾತಾಡಲು ಶುರುಮಾಡಿದರು. ಮಗ ಇದ್ದಾಗ ಅವರು ಜಾಸ್ತಿ ಮಾತಾಡುತ್ತಿರಲಿಲ್ಲ.  ಬಂದವರೊಡನೆ ಮಾತಾಡಬಾರದು ಎಂದಿದ್ದಾರಂತೆ. ಯಾರಾದರೂ ಅಷ್ಟೇ, ಎಷ್ಟು ಹೊತ್ತು ಸುಮ್ಮನಿರಬಹುದು?

ನಮಗೆ ಮೊದಲು ಶಾಲೆಯಲ್ಲಿ ಸ್ಟಡೀ ಬೆಲ್ ಅಂತ ಒಂದಿತ್ತು. ಬೆಲ್ ಆದತಕ್ಷಣ ಒಂದು ಘಂಟೆ ಮಾತನಾಡದೆ ಸುಮ್ಮನೆ ಕುಳಿತು ಓದಬೇಕೆಂಬ ನಿಯಮವಿತ್ತು. ಮಾತನಾಡಿದರೆ ಅವರ ಹೆಸರನ್ನು ಕ್ಲಾಸ್ ಲೀಡರ್ ಬರೆದುಕೊಂಡು ಟೀಚರ್ ಗೆ ನೀಡಿ ನಂತರ ಪನಿಶ್ ಮೆಂಟ್ ಸಿಗುತ್ತಿತ್ತು. ಒಂದು ಘಂಟೆ ಆಗಿ ಸ್ಟಡಿ ಪಿರಿಯೆಡ್ ಮುಗಿದ ತಕ್ಷಣ ಎಲ್ಲರೂ ಖುಷಿಯಿಂದ ಹೋ ಎಂದು ಬೊಬ್ಬೆ ಹೊಡೆಯುತ್ತಾ ಕುಣಿಯುತ್ತಿದ್ದರು.  ಅಜ್ಜನಿಗೂ ಹಾಗೆ, ಮಗ ಇದ್ದರೆ ಸ್ವಲ್ಪ ಸ್ಟಡಿ ಬೆಲ್ಲಿನ ಹಾಗೆ.

‘ನೋಡಿ, ಎಲ್ಲಕ್ಕಿಂತ ದೊಡ್ಡ ನಾಮ ಯಾವುದು ಗೊತ್ತುಂಟಾ ನಿಮಗೆ’ ಎಂದು ಇದ್ದಕ್ಕಿದ್ದ ಹಾಗೆ ಅಜ್ಜ ಕೇಳಿದರು.

ಇದೇನಪ್ಪಾ ಅಡ್ಡ ನಾಮವೋ ಉದ್ದ ನಾಮವೋ ಇನ್ನೇನೋ ಹೇಳಬಹುದೆಂದು ನಾನು ಅಂದುಕೊಳ್ಳುತ್ತಿದ್ದೆ.

ಅಲ್ಲಿದ್ದವರೆಲ್ಲಾ ಇದೆಲ್ಲ ಮಾಮೂಲಿ ಎಂಬಂತೆ ನಗುತ್ತಿದ್ದರು.

‘ಶ್ರೀರಾಮನಾಮಕ್ಕಿಂತ ಯಾವುದು ದೊಡ್ಡದು ಹೇಳಿ, ಶ್ರೀ ಎಂದರೆ ಏನು? ಸಂಪತ್ತು, ಆ ತಾಯಿ ಭಗವತಿ, ಇವತ್ತು ಅವಳಿಂದಲೇ ಹೀಗಿರುವೆ, ನೀವೆಲ್ಲಾ ಇಂಗ್ಲೀಷು ಕಲಿತವರು, ನನಗೆ ಅದೆಲ್ಲಾ ಗೊತ್ತಾಗುವುದಿಲ್ಲ, ಇರಲಿ, ಊಟಮಾಡಿ ಊಟಮಾಡಿ’ ಎಂದರು.

ಆದರೂ ಅವರಿಗೆ ಮಾತಾಡದೆ ಇರಲು ಆಗುತ್ತಿರಲಿಲ್ಲ, ನಾನೇ ನಕ್ಕು ಅವರ ಧಾಟಿಯಲ್ಲೇ ‘ಎಲ್ಲಾಯಿತು ನಿಮಗೆ … ಎಂದು ಮಾತಿಗೆ ಶುರುಮಾಡಿದೆ.

busಹೋ ಎಂದು ಬಾಯಿಬಿಟ್ಟು ನಗುತ್ತಾ, ನಾನು ಹುಟ್ಟಿದ್ದು ಕುಂಭಾಸಿಯಲ್ಲಿ, ಓದು ತಲೆಗೆ ಹತ್ತಲಿಲ್ಲ. ಎರಡು ಜೊತೆ ಹರ್ಕಟು ಅಂಗಿ ಚಡ್ಡಿ ಹಿಡ್ಕೊಂಡು  ಸಣ್ಣವನಿರುವಾಗಲೇ ಇಲ್ಲಿ ಬಂದು ಬಿಟ್ಟೆ. ಇಲ್ಲಿ ನಮ್ಮ ಊರಿನವರದ್ದೇ ಒಂದು  ಹೋಟೇಲಿನಲ್ಲಿ ಮುಸುರೆ ತೊಳೆದುಕೊಂಡು, ಮನೆ ಮಠ ಇಲ್ಲದೆ ಅಲ್ಲೇ ಮಲಗುತ್ತಿದ್ದೆ. ಸುಮಾರು ವರ್ಷ ಅವರಿವರ ಹೋಟೇಲುಗಳಲ್ಲಿ ದುಡಿದು,  ಕೊನೆಗೆ ಒಂದು ಮೆಸ್ಸು ಶುರುಮಾಡಿಕೊಂಡು ಇನ್ನೂ ನಡೆಸುತ್ತಿದ್ದೇನೆ.

ಒಬ್ಬನೇ ನಡೆಸಿಕೊಂಡು ಓಣಿಯ ಹಾಗೆ ಇದ್ದ ಮೆಸ್ಸು ಈಗ ಮಾಣಿಗಳಿಗೆಲ್ಲಾ ಸಂಬಳ ಕೊಡುವಷ್ಟಾಗಿದೆ . ನನ್ನ ಹಾಗೇ ಊರಿಂದ ಇಲ್ಲಿಗೆ ಬಂದವರೆಲ್ಲರೂ ದೊಡ್ಡ ಉದ್ಯಮಿಗಳಾಗಿದ್ದರೆ, ಆದರೆ ನನಗೇನೂ ಬೇಸರವಿಲ್ಲ, ನಾನೂ ಬೆಳೆದು ಬೆಳೆದು ಚರ್ಮವೆಲ್ಲಾ ಸುಕ್ಕುಗಟ್ಟುವ ತನಕ ಬೆಳೆದು ಬೆಂಡಾಗಿರುವೆ ನೋಡು,  ಎಂದು ನಕ್ಕರು.

ಅಷ್ಟರಲ್ಲಿ ಅವರ ಮಗ ಬಂದು, ನಮನ್ನು ನೋಡಿ, ‘ಇವರಿಗೆ, ಮಾತಾಡಬೇಡಿ ಎಂದು ಎಷ್ಟು ಹೇಳಿದರೂ ಅರ್ಥವಾಗುವುದಿಲ್ಲ, ಬಂದವರಿಗೆಲ್ಲಾ ಇವರ ಓಬಿರಾಯನ ಕಾಲದ ಕತೆ ಹೇಳುತ್ತಾರೆ, ಎಲ್ಲಿ ವ್ಯಾಪಾರ ಕಮ್ಮಿ ಆಗುವುದೋ’ ಎಂದು ಮುಜುಗರದಿಂದ ಹೇಳಿದರು.

ನನ್ನ ಮಗ ಅವನಿಗೆ ಏನೂ ಗೊತ್ತಾಗುವುದಿಲ್ಲ, ನಾವು ಆಗಿನ ಕಾಲದಲ್ಲಿ ಕಷ್ಟಪಟಿದ್ದೆಲ್ಲಾ ಇವಕ್ಕೆ ನಾಯಿ ಸಮ. ನನಗೆ ಶೋಕಿಗೀಕಿ ಎಲ್ಲಾ ಬೇಡ, ನಾಲ್ಕು ಮಾತಾಡಿ ಹಸಿದವರು ಬಂದು ಊಟಮಾಡಿಕೊಂಡು ಹೋದರೆ ಸಾಕು,  ಜಾಸ್ತಿ ದುಡ್ಡಿನ ಹಿಂದೆ ಹೋದರೆ, ನಾಳೆ ನಾವು ದುಡ್ಡನ್ನೇ ತಿಂದು ಬದುಕ್ಲಿಕ್ಕಂತು ಆಗೂದಿಲ್ಲ, ರಟ್ಟೆಗೆ ಶಕ್ತಿ ಬೇಕು, ಹೊಟ್ಟೆಗೆ ಅನ್ನನೇ ಬೇಕು,  ಕಷ್ಟಪಡುವುದು ಯಾರಿಗೂ ಬೇಡ ಎನ್ನುತ್ತಾ ಆ ಪವಾಡ ಪುರುಷ ವಾದಿರಾಜರು ಮಾಡಿದ್ದು ಸುಳ್ಳಲ್ಲ, ಎಂದು ಒಂದು ಕತೆ ಹೇಳಿದರು.

ಅದು, ನಮ್ಮ ಊರಿನಲ್ಲಿ ಎಲ್ಲರೂ ತಿಂದು ಸವಿಯುವ ಮಟ್ಟುಗುಳ್ಳದ ಕತೆ. ಈಗಲೂ ನನಗೆ ಇಲ್ಲಿ ಸಿಗುವ ಯಾವ ಬದನೆಯೂ ಸರಿಹೋಗುವುದಿಲ್ಲ, ಊರಿನ ಗುಳ್ಳವನ್ನು ಹುಡುಕಿ ತಂದು ತಿಂದರೇ ತೃಪ್ತಿ.

ಮಟ್ಟು ಉಡುಪಿ ಜಿಲ್ಲೆಯಲ್ಲಿರುವ ಪುಟ್ಟ ಊರು. ಆ ಮಟ್ಟಿನ ಜನರಿಗೆ ವಾದಿರಾಜರು ಜನಿವಾರವನ್ನು ನೀಡದೆ ಸೋದೆಯಿಂದ ತಂದ ಬದನೆ ಬೀಜವನ್ನು ನೀಡಿ ಕೃಷಿಗೆ ಪೋತ್ಸಾಹಿಸಿದರಂತೆ. ಬರೀ ಜನಿವಾರ ಒಂದೇ ಅನ್ನ ನೀಡುವುದಿಲ್ಲ, ಶ್ರಮ ಜೀವನವೂ ಅಷ್ಟೇ ಅಗತ್ಯ ಎಂದು ಮನವರಿಕೆ ಮಾಡಿಕೊಟ್ಟರಂತೆ. ಅಜ್ಜ ಅಷ್ಟೇ ಮುಗ್ದವಾಗಿ ಇದನ್ನು ಹೇಳುತ್ತಿದ್ದರು. ಶ್ರೀರಾಮನಾಮ ಜಪಿಸಿಕೊಂಡು, ವಾದಿರಾಜರನ್ನು ಭಜಿಸಿಕೊಂಡು ಇವರು ಎಷ್ಟು ನೆಮ್ಮದಿಯಾಗಿದ್ದಾರೆ ಎನಿಸಿತು!

ಬಸ್ಸು, ಮೆಸ್ಸು ಎಲ್ಲವೂ ಹೀಗೆ, ಅಲ್ಲಿ ಸಿಕ್ಕಿರುವುದನ್ನು ಮೂಟೆ ತುಂಬಿಸಿಕೊಂಡು ಜೀವಂತವಾಗುತ್ತಾ ಹೋಗಬೇಕು. ಬಸ್ಸಿನಲ್ಲಿ ಇದ್ದವರು ಈಗ ಇಳಿದಿರುತ್ತಾರೆ, ಅಜ್ಜ ಇನ್ನೊಬ್ಬರಿಗೆ ಕತೆ ಹೇಳುತ್ತಾ ಖುಷಿಯಾಗಿರಲಿ. ನಾನೂ ಏನೋ ಸಿಕ್ಕಿದ ಖುಷಿಯಲ್ಲಿ  ಅಲ್ಲಿಂದ ಇಳಿದು ಸೀದಾ ಮನೆಗೆ ಹೋಗುವ ಬಸ್ಸನ್ನು ಹಿಡಿದಿದ್ದೆ.

One Response

  1. Sunil
    September 12, 2016

Add Comment

Leave a Reply