Quantcast

ನಾನೂ ವಿಮಾನ ಏರಿದೆ..

Gopal Wajapeyi

ಗೋಪಾಲ ವಾಜಪೇಯಿ 

ನಿಮ್ಮ ‘ಶಿಲ್ಲಾಂಗ್ ನಲ್ಲಿ’… ಮೊದಲ ಕಂತು ಓದಿದೆ.

ನನ್ನ ಶಿಲ್ಲಾಂಗ್ ಪ್ರವಾಸ ನೆನಪಿಗೆ ಬಂತು.

ಅದು 1997. ಪಿ. ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದ ಕಾಲ.

PIBಯವರು ಕರ್ನಾಟಕದ ಒಂದಿಪ್ಪತ್ತು ಜನ ಪತ್ರಕರ್ತರನ್ನು ಪಶ್ಚಿಮ ಬಂಗಾಳ, ಅಸ್ಸಾಮ್, ಮತ್ತು ಮೇಘಾಲಯಗಳ ಪ್ರವಾಸಕ್ಕೆ ಕರೆದೊಯ್ದಿತು. ನಮಗೆಲ್ಲ ಎಕ್ಸೆಕ್ಯುಟಿವ್ ಕ್ಲಾಸ್ ವಿಮಾನ ಯಾನದ ಜೊತೆಗೆ ರಾಜೋಪಚಾರ.

shillongಅದು ಗಗನಯಾನದ ನನ್ನ ಮೊದಲ ಅನುಭವ.

ಬೆಳಿಗ್ಗೆ ಎಂಟಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟ ನಾವು ಕಲ್ಕತ್ತಾದಲ್ಲಿ ಇಳಿದದ್ದು ಮುಂದೆ ಎರಡು ಗಂಟೆಗಳ ನಂತರ. ಆವತ್ತು ಅಲ್ಲಿ ಹೋಳಿ ಹಬ್ಬ. ಹೆಂಗಸರು ಗಂಡಸರೆನ್ನದೆ ಎಲ್ಲ ಬಂಗಾಳಿಗಳೂ ಇತರ ಪ್ರಯಾಣಿಕರ ಸುದ್ದಿಗೆ ಬಾರದೆ, ಪರಸ್ಪರ ರಂಗು ಬಳಿದು-ಬಳಿಸಿಕೊಳ್ಳುತ್ತ ರಂಗು ರಂಗಾಗಿ ಕಾಣುತ್ತಿದ್ದರು.

ಹಾಗೆ ರಂಗು ರಂಗಿನ ಕೆನ್ನೆಗಳೊಂದಿಗೆ ನಮ್ಮೊಂದಿಗೆ ಗುವಾಹಾಟಿಗೆ ಇನ್ನೊಂದು ವಿಮಾನದಲ್ಲಿ ಬಂದ ಕನ್ನೆಯರು ಈಗಲೂ ನನ್ನ ಕಣ್ಣ ಮುಂದೆ ನಿಂತೇ ಇದ್ದಾರೆ. ಶಿಲ್ಲಾಂಗ್ ಇವತ್ತಿಗೂ ನಂಗೆ ನೆನಪಿನಲ್ಲಿ ಉಳಿಯುವುದಕ್ಕೆ ನಮಗೆ ಸಂಪೂರ್ಣವಾಗಿ ಭಿನ್ನವೆನಿಸುವ ಅಲ್ಲಿಯ ಭಾಷೆ, ಸಂಸ್ಕೃತಿ, ಬದುಕು, ಆಹಾರ ಪದ್ಧತಿಗಳೇ ಮುಂತಾದ ವಿಶಿಷ್ಟ ಸಂಗತಿಗಳೇ ಕಾರಣ.

ನಾನು ಅಲ್ಲಿಗೆ ಹೋದ ಸಂದರ್ಭದಲ್ಲಿ ಅದಾವುದೋ ಕಾರಣದಿಂದ ಸಂಜೆ ನಾಲ್ಕಕ್ಕೆಲ್ಲ ಕರ್ಫ್ಯೂ ಶುರುವಾಗುತ್ತಿತ್ತು. ಅಂಥದರಲ್ಲೇ ಭೇಟಿಯಾದ ಗದಗಿನ ಒಬ್ಬ ಯೋಧ ನಮಗೆ ಎಷ್ಟೆಲ್ಲ ನೆರವಾದ ! ಆಗ ಶಿಲ್ಲಾಂಗಿನಲ್ಲಿದ್ದ ಒಬ್ಬ ಖಾಸಿ ಜನಾಂಗದ ನೂರೈದು ವರ್ಷದ ಹಿರಿಯನನ್ನು ನಾನು ಭೇಟಿ ಮಾಡಿ ಅರ್ಧ ಗಂಟೆ ಕಾಲ ಅವನ ಮನೆಯಲ್ಲಿ ಕೂಡಲು ಸಾಧ್ಯವಾದದ್ದು ಆ ಯೋಧನ ಕಾರಣದಿಂದಲೇ. ಆ ಅಜ್ಜ ನನಗೆ ಶಿಲ್ಲಾಂಗಿನ ಇತಿಹಾಸದ ಕೆಲವು ಪ್ರಸಂಗಗಳನ್ನು ಹೇಳಿದ್ದ.

ಹಾಗೆಯೆ ವಾಪಸು ಬರುವಾಗ ಗುವಾಹಾಟಿಯಲ್ಲಿ ಒಂದು ವಾರ ಉಳಿದೆವು. ಆಗೊಂದು ದಿನ ನಾನು ಬೆನ್ನು ನೋವಿನ ನೆವ ಒಡ್ಡಿ ಆಗ ಅಲ್ಲಿ ರಾಜಪಾಲರಾಗಿದ್ದ ಲೋಕನಾಥ ಮಿಶ್ರ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಎರಡು ಗಂಟೆ ಕಾಲ ಮಾತಾಡಿ ಅನೇಕ ವಿಚಾರಗಳನ್ನು ತಿಳಿದುಕೊಂಡು ಬಂದಿದ್ದೆ.

ಲೋಕನಾಥ ಮಿಶ್ರರು ಓಡಿಯಾ ಭಾಷೆಯ ಮೊದಲ ಪತ್ರಿಕಾ ಸಂಪಾದಕ, ಸಿನಿಮಾ ಹೀರೋ. ಅವರು ಸಂಪಾದಕರಾಗಿದ್ದ ಪತ್ರಿಕೆಯ ಹೆಸರು ‘ಮಾತೃಭೂಮಿ’, ಮತ್ತು ಅವರು ನಟಿಸಿದ ಚಿತ್ರದ ಹೆಸರು ‘ಚಾರುಲತಾ’. ಲೋಕನಾಥ ಮಿಶ್ರರು ಮಂತ್ರ ಚಿಕಿತ್ಸೆ ನೀಡುವಲ್ಲಿ ಸಿದ್ಧಹಸ್ತರಾಗಿದ್ದರು.

ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ ರಾಜೇಂದ್ರ ಪ್ರಸಾದ್.

Add Comment

Leave a Reply