Quantcast

ನ್ಯಾಯಾಂಗ: ಜ್ವರ ಯಾರದ್ದು? ಬರೆ ಯಾರದ್ದು?

rajaram tallur low res profile

ರಾಜಾರಾಂ ತಲ್ಲೂರು

ಎಪ್ರಿಲ್ ತಿಂಗಳಲ್ಲಿ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಗಳು ಸಾರ್ವಜನಿಕವಾಗಿ ಕಣ್ಣೀರು ಹರಿಸಿದ ಬಳಿಕ, ನ್ಯಾಯಾಂಗ ಮತ್ತು ಶಾಸಕಾಂಗಗಳ ನಡುವೆ ಮುಸುಕಿನ ಅಡಿ ಏನೋ ನಡೆದಿದೆ ಎಂಬುದು ದಿನೇ ದಿನೇ ಸ್ಪಷ್ಟಗೊಳ್ಳುತ್ತಾ ಬಂದಿದೆ. ದೇಶದ ಎಲ್ಲ ಮೂಲಭೂತ ವ್ಯವಸ್ಥೆಗಳ ತಳಕಟ್ಟಿನ ಕಲ್ಲು ಅಲ್ಲಾಡಿಸುವ ತಂತ್ರದ ಭಾಗವಾಗಿಯೇ ಈ ಗುದ್ದಾಟ ನಡೆದಿದೆಯೇ ಎಂಬ ಪ್ರಶ್ನೆ ಪ್ರತೀದಿನ ಕೊಬ್ಬುತ್ತಿದೆ…

ಈ ಇಡಿಯ ಕಥೆಯ ಆರಂಭ – ದೇಶದ ಹೈಕೋರ್ಟ್ ಗಳಲ್ಲಿ ಒಟ್ಟು 485  ನ್ಯಾಯಮೂರ್ತಿ ಹುದ್ದೆಗಳು ಖಾಲಿಬಿದ್ದಿರುವುದು. ಅಂದರೆ, ಒಟ್ಟು 45%  ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ. ಬೆಂಗಳೂರು, ಚತ್ತೀಸ್ ಗಢ, ಚೆನ್ನೈ, ಅಲಹಾಬಾದ್, ಪಾಟ್ನಾ, ಜಾರ್ಖಂಡ್, ಕೇರಳ ಮತ್ತು ಗುವಾಹಟಿ ರಾಜ್ಯ avadhi-column-tallur-verti- low res- cropಹೈಕೋರ್ಟ್ ಗಳಲ್ಲಿ ಹಲವು ನ್ಯಾಯಪೀಠಗಳು ಖಾಲಿ ಕುಳಿತಿದ್ದರೆ, ತ್ರಿಪುರ, ಸಿಕ್ಕಿಂ, ಕೇರಳ, ಮಣಿಪುರಗಳಲ್ಲಿ ರಾಜ್ಯದ ಮುಖ್ಯನ್ಯಾಯಮೂರ್ತಿ ಹುದ್ದೆಗಳೇ ಖಾಲಿ ಇವೆ. ದೇಶದ ಹೈಕೋರ್ಟುಗಳಲ್ಲಿ ಅಂದಾಜು 40 ಲಕ್ಷಕ್ಕೂ ಮಿಕ್ಕಿ ಪ್ರಕರಣಗಳು ವಿಚಾರಣೆ ಇಲ್ಲದೆ ಕೊಳೆಯುತ್ತಿವೆ!

ಈ ಕಥೆಗೊಂದು ಹಿನ್ನೆಲೆ ಇದೆ – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೂರೇ ತಿಂಗಳಿನಲ್ಲಿ ದೇಶದ ನ್ಯಾಯಾಂಗಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬದಲಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ 99 ನೇ ತಿದ್ದುಪಡಿ ತರುವ ಹಾಗೂ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC)  ರಚಿಸುವ ಕಾಯಿದೆಗೆ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಒಪ್ಪಿಗೆ ಪಡೆದುಕೊಂಡರು. ದೇಶದ 16 ರಾಜ್ಯಗಳೂ ಇದಕ್ಕೆ ಒಪ್ಪಿಗೆ ಸೂಚಿಸಿದವು. 31-12-2014ರಂದು ರಾಷ್ಟ್ರಪತಿ ಮುಖರ್ಜಿಯವರೂ ಇದಕ್ಕೆ ಅಂಕಿತದ ಮುದ್ರೆಯೊತ್ತಿದರು.

ಆದರೆ, ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ (ನ್ಯಾಯಮೂರ್ತಿಗಳಾದ ಜೆ. ಎಸ್. ಕೇಹರ್, ಎಂ ಬಿ ಲೊಕೂರ್, ಕುರಿಯನ್ ಜೋಸೆಫ್, ಆದರ್ಶ್ ಗೋಯಲ್, ಜೆ. ಚಲಮೇಶ್ವರ್)  ಈ ತೀರ್ಮಾನವನ್ನು  4:1 ಬಹುಮತದಿಂದ ತಿರಸ್ಕರಿಸಿ, ಇಪ್ಪತ್ತು ವರ್ಷಗಳಿಂದ ಚಾಲ್ತಿಯಲ್ಲಿರುವ ಕೊಲೀಜಿಯಂ ವ್ಯವಸ್ಥೆಯನ್ನೇ ಎತ್ತಿಹಿಡಿಯಿತು.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಉದ್ದೇಶಿತ ಹೊಸ ವ್ಯವಸ್ಥೆಯಲ್ಲಿ ನ್ಯಾಯಾಂಗ ಮಾತ್ರವಲ್ಲದೇ ಶಾಸಕಾಂಗ ಮತ್ತು ಶಾಸಕಾಂಗದಿಂದ ನೇಮಿತರಾದವರು ಕೂಡ NJAC ಸದಸ್ಯರಾಗಿ ನ್ಯಾಯಮೂರ್ತಿಗಳ ನೇಮಕದಲ್ಲಿ ಪಾಲ್ಗೊಳ್ಳಬಹುದು. ಕೊಲೀಜಿಯಂ ವ್ಯವಸ್ಥೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ತಂಡ ಈ ಕೆಲಸ ಮಾಡುತ್ತದೆ. [ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಭಾರತೀಯ ವೈದ್ಯಕೀಯ ಮಂಡಳಿ (MCI) ಬದಲಾವಣೆಗೆ ನಡೆದಿರುವ ಪ್ರಯತ್ನಗಳನ್ನೂ ಗಮನಿಸಬೇಕು]

ಅಲ್ಲೂ ಇಲ್ಲೂ ಚಲಮೇಶ್ವರ!

CJI crying courtಹೊಸ NJAC ವ್ಯವಸ್ಥೆಯ ಪರವಾಗಿ ನಿಂತ ಸಂವಿಧಾನ ಪೀಠದ ಏಕೈಕ ನ್ಯಾಯಮೂರ್ತಿ ಎಂದರೆ ಜ| ಜಸ್ತಿ ಚಲಮೇಶ್ವರ ಅವರು. ಉಳಿದೆಲ್ಲರೂ ಹಳೆಯ ವ್ಯವಸ್ಥೆಯೇ ಬೇಕೆಂಬವರು. ಈಗ ಕಳೆದ ವಾರದಿಂದ ಜ| ಚಲಮೇಶ್ವರ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೊಲೀಜಿಯಂ ವ್ಯವಸ್ಥೆಯ ಸದಸ್ಯರೂ ಆಗಿರುವ ದೇಶದ 5ನೇ ಅತ್ಯಂತ ಹಿರಿಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜ| ಚಲಮೇಶ್ವರ ಅವರು ಕೊಲೀಜಿಯಂ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ; ಹಾಗಾಗಿ ತಾನಿನ್ನು ಆ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಇದು ಬಹಳ ಕುತೂಹಲಕರ ಬೆಳವಣಿಗೆ!

ಈ ನಡುವೆ, ಕೊಲೀಜಿಯಂ ಆಯ್ಕೆ ಮಾಡಿ ಕಳುಹಿಸಿದ್ದ 74 ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಶಿಫಾರಸು ಪಟ್ಟಿಯನ್ನು ಕೇಂದ್ರ ಸರ್ಕಾರ ನೆನೆಗುದಿಗೆ ಹಾಕಿ ಕುಳಿತು, ನ್ಯಾಯಾಂಗಕ್ಕೆ ತಿರುಮಂತ್ರ ಹಾಕಿದೆ. ಇದು ನ್ಯಾಯಾಂಗವನ್ನು ಸಿಟ್ಟಿಗೆಬ್ಬಿಸಿದ್ದೂ ಆಗಿದೆ. ಇದೇ ಎಪ್ರಿಲ್ ತಿಂಗಳಿನಲ್ಲಿ ನ್ಯಾಯದಾನದಲ್ಲಿ ವಿಳಂಬ ಕೂಡ ಕಕ್ಷಿದಾರರಿಗೆ ಅನ್ಯಾಯ ಮಾಡಿದಂತೆ ಎಂದು ಲೆ| ಕರ್ನಲ್ ಅನಿಲ್ ಭೋತ್ರಾ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಜ| ಟಿ. ಎಸ್. ಠಾಕೂರ್ ಅವರು “ಸರ್ಕಾರ ನ್ಯಾಯಮೂರ್ತಿಗಳ ನೇಮಕ ಮಾಡದಿದ್ದರೆ ನ್ಯಾಯಾಂಗದ ಕ್ರಮ ಎದುರಿಸಬೇಕಾದೀತು”ಎಂಬ ನೇರ ಎಚ್ಚರಿಕೆಯನ್ನೂ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರ ಮೂಲಕ ಸರಕಾರಕ್ಕೆ ತಲುಪಿಸಿದ್ದಾಗಿದೆ.

ಇಷ್ಟಾದರೂ ಸರ್ಕಾರ ಮಾತ್ರ ಪ್ರತಿಕ್ರಿಯಿಸಿಲ್ಲ. ಬದಲಾಗಿ ಗುಜರಾತ್ ನ ಜ| ಎಂ ಆರ್ ಷಾ. ದಿಲ್ಲಿಯ ಜ| ವಾಲ್ಮೀಕಿ ಮೆಹ್ತಾ ಅವರ ವರ್ಗಾವಣೆ ಕೋರಿ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯನ್ನೂ ನೆನೆಗುದಿಗೆ ಹಾಕಿ ಕುಳಿತಿದೆ ಎಂದು ವರದಿಗಳು ಹೇಳುತ್ತಿವೆ.

ಈ ತಿಕ್ಕಾಟ ದೇಶದ ಸಾಂವಿಧಾನಿಕ ವ್ಯವಸ್ಥೆಯನ್ನು ಗಂಡಾಂತರದ ಸ್ಥಿತಿಗೆ ತಂದಿಡದಿದ್ದರೆ ಸಾಕು!

3 Comments

 1. Guruprasad
  September 8, 2016
  • Anonymous
   September 8, 2016
 2. ರಾಜಾರಾಂ ತಲ್ಲೂರು
  September 8, 2016

Add Comment

Leave a Reply