Quantcast

ಸುರಿದ ಮಳೆಯೆಲ್ಲ ಮುಂಗಾರು ಮಳೆಯಾಗೋದಿಲ್ಲ !

ಶಶಾಂಕ್ ನಿರ್ದೇಶನದ ಮುಂಗಾರುಮಳೆ-2 ಅಂತೂ ತೆರೆಕಂಡಿದೆ. ಈ ಚಿತ್ರದ ಅರ್ಧ ಹಾಡುಗಳು, ಆಹ್ ಅನ್ನಿಸುವಂತಿದ್ದ ದೃಷ್ಯಗಳನ್ನು ಕಂಡು ಮರುಳಾಗಿ ಚಿತ್ರಮಂದಿರಕ್ಕೆ ಹೋದ ಮಂದಿ ಫಸ್ಟ್ ಹಾಪ್ ಮುಗಿಯುವ ಹೊತ್ತಿಗೆಲ್ಲಾ ಭೀಕರ ಬರಗಾಲಕ್ಕೆ ಸಿಕ್ಕವರಂತೆ ಕಸಿವಿಸಿಗೊಂಡು, ಕುಂತಲ್ಲೇ ಕೊಸರಾಡುತ್ತಿದ್ದರು !
mm2ಹೈಟೆಕ್ ಅಸಡ್ಡಾಳ ಕ್ಯಾರೆಕ್ಟರಿಗೆ ಬ್ರಾಂಡ್ ಆಗಿರೋ ಗಣೇಶ್ ಈ ಚಿತ್ರದಲ್ಲಿ ಅಗರ್ಭ ಶ್ರೀಮಂತನ ಮಗನಾಗಿ ಅವತಾರವೆತ್ತಿದ್ದಾರೆ. ಪ್ರತಿಯೊಂದರಲ್ಲಿಯೂ ಹೊಸ ಉನ್ಮಾದ ಬಯಸೋ ಮಗ, ಅದಕ್ಕೆ ನೋಟಿನ ಕಂತೆಗಳನ್ನೇ ಹರಡಿ ಸಪೋರ್ಟ್ ಮಾಡೋ ಅಪ್ಪ… ಅಪ್ಪನಾಗಿ ಕಾಣಿಸಿಕೊಂಡಿರೋ ಕ್ರೇಜಿಸ್ಟಾರ್ ರವಿಚಂದ್ರನ್ ತನ್ನ ಮಗ ಉನ್ಮಾದದ ಆವೇಗಕ್ಕೆ ಪ್ರೀತಿಯನ್ನೇ ಪಣವಾಗಿಟ್ಟು ಆಟವಾಡುತ್ತಿದ್ದರೂ ಮುದ್ದು ಮಗನ ಲೀಲಾವಳಿಗಳನ್ನು ಎಂಜಾಯ್ ಮಾಡುತ್ತಾರೆ.ಇಲ್ಲಿ ನಾಯಕ ಕ್ಷಣಕ್ಕೊಂದು ಹುಡುಗಿಯೊಂದಿಗೆ ಓಡಾಡುತ್ತಾನೆ. ಹೆಲಿಕಾಫ್ಟರಿನಲ್ಲೇ ಬಂದಿಳಿದು ಹುಡುಗೀರಿಗೆ ಪ್ರಪೋಸ್ ಮಾಡುತ್ತಾರೆ. ಆದರೆ ಯಾರೊಂದಿಗೂ ಹೀರೋಗೆ ಲವ್ವಾಗುವುದೇ ಇಲ್ಲ. ಆತನದ್ದೇನಿದ್ದರೂ ಹುಡುಗೀರೊಂದಿಗೆ ಕೈ ಕೈ ಹಿಡಿದು ಸುತ್ತಿ ದಿನಕ್ಕೊಂದು ಚಿಟ್ಟೆ ಚೇಂಜ್ ಆಗುತ್ತಿರಬೇಕೆಂಬ ಬಯಕೆ. ಸಿಕ್ಕ ಹುಡುಗಿಯರೆಲ್ಲಾ ಇವನಿಗೆ ಬೋರು ಬೋರು!
mungaru_maleಈ ನಡುವೆ ಹೀರೋಗೆ ಓರ್ವ ಹುಡುಗಿ ಸಿಗುತ್ತಾಳೆ. ಇವನು ಮಾಮೂಲಿನಂತೆಯೇ ಮುಂದುವರೆಯುತ್ತಾನೆ. ಅದೇಕೋ ಆಕೆ ತುಂಬಾ ಇಷ್ಟವಾಗಿ ಬಿಡುತ್ತಾಳೆ. ಆದರೆ ರಾತ್ರಿ ಹಗಲಾಗೋವಷ್ಟರಲ್ಲಿ ಆಕೆಯೇ ಹೀರೋನನ್ನು ಬಿಟ್ಟು ಹೋಗಿರುತ್ತಾಳೆ. ರಾಜಸ್ಥಾನಕ್ಕೆ ಟೂರ್ ಹೋದಂತೆ, ಮರಳುಗಾಡಿನಲ್ಲಿ ಹೊಯ್ದಾಡುವ ಫಸ್ಟ್ ಹಾಫ್ ಮೈ ಪರಚಿಕೊಳ್ಳುವಂತೆ ಮಾಡುತ್ತದೆ. ದೃಷ್ಯಗಳನ್ನು ಅದ್ಬುತವಾಗಿ ಕಟ್ಟಿಕೊಡಲಾಗಿದ್ದರೂ ಯಾವ ಫೀಲ್ ಕೂಡಾ ಹುಟ್ಟೋದಿಲ್ಲ. ಗಣೇಶನ ಎಕ್ಸೈಟ್’ಮೆಂಟ್ ಪ್ರೇಕ್ಷಕರ ಮನಸಿಗೆ ದಾಟಿಕೊಳ್ಳುವುದೂ ಇಲ್ಲ. ಇರೋದರಲ್ಲಿ ದ್ವಿತೀಯಾರ್ಧ ಒಂಚೂರು ನಿರೀಕ್ಷೆ ಹುಟ್ಟಿಸುತ್ತದೆ. ಅದೂ ರವಿಶಂಕರ್ ಎಂಟ್ರಿಯ ನಂತರ. ಬದುಕಲ್ಲಿ ಮೊದಲ ಬಾರಿಗೆ ಕಾಡಲು ಶುರು ಮಾಡುವ ಹುಡುಗಿಯನ್ನು ಹುಡುಕಿಕೊಂಡು ಬರುವ ಪ್ರೀತಮ್ (ಗಣೇಶ್)ಗೆ ಪ್ರೇಕ್ಷಕರ ನಿರೀಕ್ಷೆಯಂತೆಯೇ ಶಾಕ್ ! ಕಾದಿರುತ್ತದೆ. ಅದೇನೆಂದರೆ, ಆಕೆಗಾಗಲೇ ಮದುವೆ ಫಿಕ್ಸ್ ಆಗಿರುತ್ತದೆ. ಜೊತೆಗೆ ಮಳೆ ಕೂಡಾ ಸುರಿಯಲು ಶುರುವಾಗುತ್ತದೆ. ಮುಂಗಾರು ಮಳೆ ಧೋ ಅಂತ ಹನಿದರೂ ಪ್ರೇಕ್ಷಕನೆದೆ ಭಣ ಭಣ… ಯಾಕೆಂದರೆ, ಮುಂಗಾರು ಮಳೆ ಬಂದ ನಂತರ ಸ್ವತಃ ಗಣೇಶ್ ಅದೆಷ್ಟು ಸಲ ಇಂಥವೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೋ. ಹೀಗಾಗಿ ಚಿತ್ರದಲ್ಲಿ ಗಣೇಶ್’ಗೆ ಹುಡುಗಿಯರು ಬೋರಾದರೆ ಪ್ರೇಕ್ಷಕರಿಗೆ ಗಣೇಶನೇ ಬೋರು ಅನಿಸಿಬಿಡುತ್ತಾರೆ!
mungaru-male-2-1ಶೇಖರ್ ಚಂದ್ರರ ಕ್ಯಾಮೆರಾ ಕೆಲಸ ಅದ್ಭುತವಾಗಿದ್ದರೂ ಯಾವ ಆ್ಯಂಗಲ್ ನಲ್ಲಿ ಕೂಡಾ ನಾಯಕಿಯೊಬ್ಬಳನ್ನು ಚೆಂದ ಕಾಣಿಸಲು ಸಾಧ್ಯವಾಗಿಲ್ಲ. ಹಿನ್ನೆಲೆ ಸಂಗೀತ ಭಯಂಕರವಾಗಿದ್ದರೂ ಹಾಡುಗಳು ಮೋಹಕ. ಶಶಾಂಕ್ ಮುಂಗಾರುಮಳೆ-೨ ಚಿತ್ರ ಯೋಗರಾಜ ಭಟ್ಟರ ಮುಂಗಾರುಮಳೆಯನ್ನೇ ತೊಳೆದು ಬಿಸಾಡುತ್ತದೆ ಎಂಬರ್ಥದಲ್ಲಿ ಪೋಸು ಕೊಟ್ಟಿದ್ದರು. ಆದರೆ ಯಾವ ವೇಗವೂ ಇಲ್ಲದ, ಹೊಸತನವೂ ಇಲ್ಲದ ಈ ಚಿತ್ರ ತೀರಾ ನಿರಾಸೆ ಹುಟ್ಟಿಸುತ್ತದೆ. ಹನಿವ ಮಳೆಯೆಲ್ಲ ಮುಂಗಾರುಮಳೆಯಾಗೋದಿಲ್ಲ ಎಂಬ ಸತ್ಯವೂ ಈ ಮೂಲಕ ಜಾಹೀರಾಗಿದೆ!

Add Comment

Leave a Reply