Quantcast

ಹೀಗೂ ಆಗಿತ್ತು..

ಜಲಪಾತದ ದಾರಿ ತೋರಿಸಿದ ಪ್ಲಾಸ್ಟಿಕ್ ಕವರುಗಳು

rakesh konajeರಾಕೇಶ್ ಕೊಣಾಜೆ 

ಇದು ಸುಮಾರು ಐದು ವರ್ಷಗಳ ಹಿಂದಿನ ಘಟನೆ.

ಈ ವಿಷಯವನ್ನು ಈ ವರೆಗೆ ಕೆಲವೇ ಕೆಲವು ಸ್ನೇಹಿತರಲ್ಲಿ ಹಂಚಿಕೊಂಡಿದ್ದು ಬಿಟ್ಟರೆ ಮತ್ಯಾರಲ್ಲೂ ಹೇಳಿರಲಿಲ್ಲ. ಮನೆಯವರಲ್ಲಂತೂ ಅಪ್ಪಿತಪ್ಪಿಯೂ ಹೇಳದಂತೆ ಎಚ್ಚರಿಕೆ ವಹಿಸಿದ್ದೆ. ಒಂದು ವೇಳೆ ಮನೆಯವರಲ್ಲಿ ಹೇಳಿದ್ದರೆ ನನ್ನ ನೆಚ್ಚಿನ ಹವ್ಯಾಸವಾದ ಟ್ರೆಕ್ಕಿಂಗ್ ಗೆ ಮನೆಯ ಕಡೆಯಿಂದ ಯಾವತ್ತೂ ಪರ್ಮಿಷನ್ ಸಿಗುತ್ತಿರಲಿಲ್ಲ ಎಂಬ ಹೆದರಿಕೆಯೂ ನಾನು ಈ ಘಟನೆಯನ್ನು ಹೇಳದೇ ಇರಲು ಕಾರಣವಾಗಿದೆ. ಆದರೆ ಇಂದು ಅವಧಿಯಲ್ಲಿ ಹೇಳುತ್ತಿದ್ದೇನೆ ಕೇಳಿ.

tundu-hykluನಾನಾಗ ಅಗ್ನಿಶಾಮಕ ಇಲಾಖೆಯಲ್ಲಿ ಕೆಲಸದಲ್ಲಿದ್ದೆ. ಒಂದು ದಿನ ಗೆಳೆಯರೆಲ್ಲ ಸೇರಿಕೊಂಡು ಎಲ್ಲಿಗಾದರೂ ಟ್ರೆಕ್ಕಿಂಗ್ ಹೋಗಬೇಕು ಎಂದು ಪ್ಲ್ಯಾನ್ ಮಾಡಿದೆವು. ದಿನಾಂಕ ಹಾಗೂ ಸ್ಥಳದ ನಿಗದಿಗಾಗಿ ಗೆಳೆಯರೆಲ್ಲರೂ ನನಗೆ ಜವಾಬ್ದಾರಿ ವಹಿಸಿದರು.

ನಾನೂ ನಮ್ಮೆಲ್ಲರ ಫ್ರೀ ಟೈಮ್ ಹಾಗೂ ಆಸಕ್ತಿಗನುಗುಣವಾಗಿ ಸ್ಥಳ ಹಾಗೂ ದಿನಾಂಕದ ನಿಗದಿ ಮಾಡಿದೆ. ಎಲ್ಲರೂ ಆ ದಿನ ನಾನು ನಿಗದಿ ಪಡಿಸಿದ್ದ ನಮ್ಮ ಪಕ್ಕದ ಜಿಲ್ಲೆಯಲ್ಲಿರುವ ಕೂಡ್ಲು ತೀರ್ಥ ಜಲಪಾತಕ್ಕೆ ತೆರಳುವ ಬಗ್ಗೆ ಸಮ್ಮತಿ ಸೂಚಿಸಿದರು.

ನಾನೂ ನನ್ನ ಇಲಾಖೆಯಲ್ಲಿ ಅಂದಿನ ದಿನ ರಜೆಗಾಗಿ ಅರ್ಜಿ ಹಾಕಿದೆ. ಆದರೆ ಅಂದು ನಮ್ಮ ದೇಶದ ಪ್ರಧಾನಿ ಜಿಲ್ಲೆಯಲ್ಲಿ ನಡೆಯುವ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಜಿಲ್ಲೆಗೆ ಭೇಟಿ ನೀಡುವ ಕಾರ್ಯಕ್ರಮವೂ ನಿಗದಿಯಾದ್ದರಿಂದ ಹಿರಿಯ ಅಧಿಕಾರಿಯೊಬ್ಬರು ಯಾರಿಗೂ ರಜೆ ಕೊಡಬಾರದು ಎಂದು ಸರ್ಕ್ಯುಲರ್ ಹೊರಡಿಸಿದರು. ನಾನು ಎಷ್ಟೇ ಪರಿಪರಿಯಾಗಿ ಕೇಳಿಕೊಂಡರೂ ನಮ್ಮ ಠಾಣಾಧಿಕಾರಿಯವರು ರಜೆ ನೀಡಲು ನಿರಾಕರಿಸಿಯೇ ಬಿಟ್ಟರು.

ನಮ್ಮ ಪಿಕ್ನಿಕ್ ದಿನ ನಿಗದಿಯಾಗಿದ್ದು ಅವಾಗಲೇ ಉಳಿದ ಹತ್ತು ಮಂದಿ ಸ್ನೇಹಿತರು ತಮ್ಮ ತಮ್ಮ ಕೆಲಸದಿಂದ ಬಿಡುವು ಮಾಡಿಕೊಂಡಿದ್ದ ಕಾರಣ ಪಿಕ್ನಿಕನ್ನು ಮುಂದೆ ಹಾಕುವುದು ನನಗೆ ಸರಿ ಅನ್ನಿಸಲಿಲ್ಲ. ಅವರಲ್ಲೆರಲ್ಲಿ ನೀವು ಹೋಗಿ ಬನ್ನಿ ನಾನು ಇನ್ನೊಮ್ಮೆ ನಿಮ್ಮ ಜತೆಯಾಗುತ್ತೇನೆ ಎಂದು ಹೇಳಿ ಅವರನ್ನು ಹೋಗಲು ಹೇಳಿ ನಾನು ಅಂದು ಮನಸ್ಸಿಲ್ಲದ ಮನಸ್ಸಿನಲ್ಲಿ ಠಾಣೆಗೆ ಕರ್ತವ್ಯಕ್ಕೆ ಹಾಜರಾದೆ. ನನ್ನ ಸ್ನೇಹಿತರೆಲ್ಲರೂ ಪಿಕ್ನಿಕ್ ಗೆ ತೆರಳಿ ಎಂಜಾಯ್ ಮಾಡಿ ವಾಪಸ್ಸಾದರು.

ಆದರೆ ನಾನು ಆವರೆಗೆ ಕೂಡ್ಲು ತೀರ್ಥದ ದರ್ಶನ ಮಾಡದೇ ಇದ್ದ ಕಾರಣ ಹಾಗೂ ಪಿಕ್ನಿಕ್ ತೆರಳಿ ಬಂದ ಗೆಳೆಯರು ನನ್ನ ಹೊಟ್ಟೆ ಉರಿಸಲೆಂದೇ ಆ ಜಲಪಾತವನ್ನು ವಿಧವಿಧವಾಗಿ ಹೊಗಳಲು ಶುರು ಹಚ್ಚಿಕೊಂಡರು. ಅವರು ನನ್ನ ಹೊಟ್ಟೆ ಉರಿಸುತ್ತಿರುವಾಗ ನಾನು ಒಂದು ನಿರ್ಧಾರಕ್ಕೆ ಬಂದೆ ನಾನೂ ಜಲಪಾತ ನೋಡಬೇಕು. ಹೌದು ಒಬ್ಬನೇ ತೆರಳಿ ಜಲಪಾತ ನೋಡಿ ಫೋಟೊಗಳ ಸಮೇತ ಬಂದು ಇವರ ಹೊಟ್ಟೆ ಉರಿಸಬೇಕು ಎಂದು ನಿರ್ಧಾರ ಮಾಡಿದೆ.

ಅದಕ್ಕಾಗಿ ಮುಂದಿನ ವಾರಾಂತ್ಯದಲ್ಲಿ ಹೋಗಲು ರಜೆಗಾಗಿ ಅರ್ಜಿ ಹಾಕಿದೆ. ಅದೃಷ್ಟವಶ್ಯಾತ್ ನನಗೆ ರಜೆ ಸಿಕ್ಕಿತು. ಎರಡು ದಿನ ರಜೆ ಹಾಕಿದ್ದರಿಂದ ಕೂಡ್ಲು ತೀರ್ಥವು ಹೆಬ್ರಿಯಲ್ಲಿರುವುದರಿಂದ ಅದಕ್ಕೆ ಮಂಗಳೂರಿನಿಂದ ತೆರಳಬೇಕಾದರೆ ಕಾರ್ಕಳ ಮೂಲಕ ತೆರಳಬೇಕಾಗಿದ್ದರಿಂದ ಕಾರ್ಕಳದಲ್ಲಿರುವ ಅಜ್ಜಿ ಮನೆಯಲ್ಲಿ ಒಂದು ರಾತ್ರಿ ಕಳೆದು ಮರುದಿನ ಬೆಳಗ್ಗೆ ಬೇಗನೇ ಎದ್ದು ಕೂಡ್ಲು ತೀರ್ಥಕ್ಕೆ ತೆರಳುವ ನಿರ್ಧಾರ ಮಾಡಿದ್ದರಿಂದ ಅದರಂತೆ ಅಜ್ಜಿ ಮನೆಯಲ್ಲುಳಿದು ಮರು ದಿನ ಬೆಳಗ್ಗೆ ಬೇಗನೇ ಕೂಡ್ಲು ತೀರ್ಥದ ಕಡೆಗೆ ನನ್ನ ಬೈಕನ್ನು ಚಲಾಯಿಸಲು ಪ್ರಾರಂಭಿಸಿದೆ.

Falls roadನಾನು ಕೇಳಿ ತಿಳಿದುಕೊಂಡ ಪ್ರಕಾರ ಕೂಡ್ಲು ತೀರ್ಥ ಹೆಬ್ರಿಯಲ್ಲಿದೆ ಎಂದುಕೊಂಡಿದ್ದೆ. ಆದರೆ ಹೆಬ್ರಿಯಿಂದಲೂ ಹಲವಾರು ಕಿಲೋಮೀಟರ್ ಗಳಷ್ಟು ದೂರದ ಹಳ್ಳಿಯಲ್ಲಿ ಸೀತಾನದಿ ಹರಿದು ಕೂಡ್ಲು ತೀರ್ಥ ಜಲಪಾತ ಅಥವಾ ಸೀತಾ ಫಾಲ್ಸ್ ನಿರ್ಮಾಣಗೊಂಡಿದೆ ಎಂದು ನನಗೆ ಗೊತ್ತಿರಲಿಲ್ಲ. ಹೆಬ್ರಿಯಲ್ಲಿ ಅಲ್ವ ಎಂದು ಕೇವಲವಾಗಿ ತಿಳಿದುಕೊಂಡು ಹೋದವನಿಗೆ ಅಲ್ಲಿಂದಲೂ ಸರಿಯಾಗಿ ಅಭಿವೃದ್ದಿಯಾಗದ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿರುವಾಗ ನಾನು ಇಲ್ಲಿಗೆ ಬೈಕಲ್ಲಿ ಬಂದು ತಪ್ಪು ಮಾಡಿದೆ ಅನ್ನಿಸಿದ್ದಂತೂ ನಿಜ.

ಅಂತೂ ಇಂತೂ ಪ್ರಯಾಸ ಪಟ್ಟು ಸೀತಾಫಾಲ್ಸ್ ಎಲ್ಲಿ ಬರುತ್ತೆ ಎಂದು ದಾರಿಯಲ್ಲಿ ಸಿಕ್ಕ ಸಿಕ್ಕವರನ್ನು ಕೇಳುತ್ತಾ ಸೀತಾ ಫಾಲ್ಸ್ ನ್ನು ನೋಡಲೇ ಬೇಕು ಎಂಬ ಹಠದಿಂದ ತೆರಳಿದ ನನಗೆ ಅಲ್ಲಿ ಮತ್ತೆ ಸುಮಾರು ಒಂದೂವರೆ ಕಿ.ಮೀ. ಗಿಂತಲೂ ಹೆಚ್ಚು ದೂರ ನಡೆದುಕೊಂಡು ಗುಡ್ಡದಲ್ಲಿ ಹೋಗಬೇಕು ಎಂಬುದನ್ನು ಯಾವೊಬ್ಬನೂ ಹೇಳಿರಲಿಲ್ಲ. ಇದು ನಾನು ಜಲಪಾತದ ಕಡೆಗೆ ಮಾಡುತ್ತಿದ್ದ ಮೊದಲ ಟ್ರೆಕ್ಕಿಂಗ್ ಕೂಡ ಆಗಿದ್ದ ಕಾರಣ ಅನುಭವವೂ ಇರಲಿಲ್ಲ ನನ್ನಲ್ಲಿ.

ಬೈಕ್ ತೆರಳುವ ಮಾರ್ಗ ಕೊನೆಗೊಂಡಾಗ ನಾನು ಗಲಿಬಿಲಿಗೊಂಡು ಅಲ್ಲೇ ಗದ್ದೆಯಲ್ಲಿ ಕೃಷಿ ಮಾಡುತ್ತಿದ್ದ ಒಬ್ಬರನ್ನು ಕರೆದು ಸೀತಾ ಫಾಲ್ಸ್ ಗೆ ಹೇಗೆ ಹೋಗೋದು ಎಂದಾಗ ಅವರು “ಅಲ್ಲಿಗೆ ಹೋಗ್ಬೇಕಾದರೆ ಸ್ವಲ್ಪ ನಡೆಯಬೇಕು. ನೀವು ಬಂದಿರುವುದು ಮಳೆ ನಿಂತು ಸ್ವಲ್ಪ ದಿನವಾದ ಕಾರಣ ದಾರಿಯುದ್ದಕ್ಕೂ ಇಂಬಳದ ಕಾಟವಿದೆ. ನನಗೆ ಐವತ್ತು ರೂಪಾಯಿ ಕೊಟ್ಟರೆ ಸುಣ್ಣದ ಕೋಲನ್ನು ಕೊಡುತ್ತೇನೆ” ಎಂದರು. ಅವರಿಂದ ಐವತ್ತು ರೂಪಾಯಿ ಕೊಟ್ಟು ಸುಣ್ಣವನ್ನು ತುದಿಗೆ ಪ್ಲಾಸ್ಟಿಕ್ ಮೂಲಕ ಕಟ್ಟಿದ್ದ ಕೋಲನ್ನು ಪಡೆದು ನಡೆಯಲು ಪ್ರಾರಂಭಿಸಿದೆ.

ನಿಜ ಹೇಳಬೇಕೆಂದರೆ ನನಗೆ ಜಲಪಾತವಿದ್ದಲ್ಲಿಗೆ ತೆರಳಲು ಸರಿಯಾದ ದಾರಿಯೂ ಗೊತ್ತಿರಲಿಲ್ಲ. ಆದರೂ ಅವರಲ್ಲಿ ಈ ಮಾತನ್ನು ಹೇಳದೆ ಗೆಳೆಯರ ಅಪಹಾಸ್ಯದಿಂದ ಪಾರಾಗಬೇಕು ಎಂಬ ಒಂದೇ ಒಂದು ಹಠದಿಂದ ಸೀತಾ ಫಾಲ್ಸ್ ಕಡೆಗೆ ನನ್ನ ಪಯಣವನ್ನು ಮುಂದುವರಿಸಿದೆ.  ದಾರಿಯ ಪ್ರಾರಂಭದಲ್ಲಿ ಜನರು ತೆರಳಿದ್ದ ಸವೆದಿರುವ ಕಾಲುದಾರಿಯನ್ನು ನೋಡಿಕೊಂಡು ಅದರಲ್ಲಿಯೇ ನಡೆದುಕೊಂಡು ಮುಂದೆ ಹೋಗುತ್ತಿದ್ದ ನಾನು ಒಂದು ಕಡೆ ಮರ ಬಿದ್ದಿರುವುದನ್ನು ಕಂಡು ದಾರಿ ನೇರವಾಗಿಯೇ ಇರಬೇಕು ಎಂದು ಊಹಿಸಿಕೊಂಡು ಅದೇ ದಾರಿಯಲ್ಲಿ ಹೆಜ್ಜೆ ಹಾಕಿದೆ. ಮುಂದೆ ಹೆಜ್ಜೆ ಹಾಕಿದ ಹಾಗೆ ಜಲಪಾತದ ಬೋರ್ಗರೆತದ ಶಬ್ದ ಕೇಳುತ್ತಿತ್ತು ಹೊರತು ಜಲಪಾತಕ್ಕೆ ತೆರಳುವ ದಾರಿಯು ನಾಪತ್ತೆಯಾಗಿತ್ತು.

ಜಲಪಾತದ ಶಬ್ದವನ್ನು ಆಧರಿಸಿ ಮುಂದುವರೆಯಲು ಮನಸ್ಸಲ್ಲೇ ನಿರ್ಧರಿಸಿದ ನಾನು ಅದರಂತೆಯೇ ನನ್ನ ಎಡಭಾಗಕ್ಕೆ ಹೆಜ್ಜೆ ಹಾಕಲು ಪ್ರಾರಂಭಿಸಿದೆ. ಆದರೆ ಎಲ್ಲಿ ಹೋದರೂ ದೊಡ್ಡದಾದ ಪೊದೆಗಳು ಮತ್ತು ಕಲ್ಲುಗಳು ಹಾಗೂ ಮರಗಳು ನನ್ನನ್ನು ಎದುರುಗೊಳ್ಳುತ್ತಿತ್ತೇ ಹೊರತು ದಾರಿ ಮಾತ್ರ ಮರೀಚಿಕೆಯಾಯಿತು.

ಅಲ್ಲಿಗೆ ಹೋದ ನಂತರ ಯಾವುದೇ ರೀತಿಯಿಂದಲೂ ದಾರಿ ಹುಡುಕಲು ಸಾಧ್ಯವಾಗಲ್ಲ ಎಂದು ಗಾಬರಿಗೊಂಡ ನಾನು ಇದ್ದ ಎಲ್ಲಾ ದೈವ ದೇವರುಗಳನ್ನೂ ಮನಸ್ಸಿನಲ್ಲಿಯೇ ನೆನೆದು ಜಲಪಾತ ಸಿಗದಿದ್ದರೆ ಪರವಾಗಿಲ್ಲ ಮನೆ ಕಡೆಗೆ ತೆರಳಲು ದಾರಿಯಾದರೂ ಸಿಗಲಿ ಎಂದು ಮತ್ತೆ ಹಿಂತಿರುಗಲು ಅನಿಯಾದೆ. ಆದರೆ ಅಲ್ಲಿವರೆಗೆ ಸಾಕಷ್ಟು ನಡೆದಿದ್ದ ನಾನು ಸುಸ್ತಾಗಿದ್ದರಿಂದ ಅಲ್ಲಿಯೇ ಒಂದು ಕಲ್ಲಿನ ಮೇಲೆ ಕುಳಿತು ಗಾಬರಿ ಹಾಗೂ ಸುಸ್ತಿನಿಂದ ಬ್ಯಾಗ್ ನಲ್ಲಿ ಕೊಂಡೋಗಿದ್ದ ನೀರನ್ನು ಹೊರ ತೆಗೆದು ಕುಡಿದು ದನಿವಾರಿಸಿಕೊಂಡು ಸ್ವಲ್ಪ ಹೊತ್ತು ಕುಳಿತು ಮತ್ತೆ ಹಿಂದೆ ಹೋಗುವ ಎಂದು ಕಲ್ಲಿನ ಮೇಲೆ ಕುಳಿತು ನೀರು ಕುಡಿಯಲು ಪ್ರಾರಂಭಿಸಿದೆ.

ಅವಾಗ ನನ್ನ ಬ್ಯಾಗ್ ನಲ್ಲಿದ್ದ ಬಿಸ್ಕಿಟ್ ಪ್ಯಾಕೊಂದು ನನ್ನ ಕಣ್ಣಿಗೆ ಬಿತ್ತು. ಅದನ್ನು ಕಂಡೊಡನೆ ತಲೆಯಲ್ಲಿ ಯೋಚನೆಯೆಂದು ಹೊಳೆಯಿತು. ಅದೇ ನೋಡಿ, “ಮನುಷ್ಯನು ತಾನು ಹೋದಲ್ಲೆಲ್ಲಾ ತನ್ನ ಜತೆ ತಂದಿದ್ದ ಪ್ಲಾಸ್ಟಿಕ್ ಕವರ್ ಗಳು ಅಥವಾ ನೀರು ಕುಡಿಯುವ ಬಾಟಲ್ ಗಳನ್ನು ಖಂಡಿತವಾಗಿಯೂ ಎಸೆದಿರುತ್ತಾನೆ”. ನಾನೂ ಇವಾಗ ಅದನ್ನು ಆಧರಿಸಿ ಜಲಪಾತದ ಕಡೆಗೆ ತೆರಳಿದ್ರೆ ಖಂಡಿತವಾಗಿಯೂ ಇವುಗಳು ನನ್ನನ್ನು ಜಲಪಾತದ ಕಡೆಗೆ ಕರೆದೊಯ್ಯುತ್ತವೆ. ಇಲ್ಲಿವರೆಗೆ ಬಂದಿರೋದಕ್ಕೆ ಒಂದು ಟ್ರೈ ಮಾಡೋಣ ಆಗದೇ ಇದ್ದರೆ ಮತ್ತೆ ವಾಪಾಸು ಹೋಗೋಣ ಎಂದು ನಿರ್ಧರಿಸಿದೆ.

plasticನಂತರ ಸ್ವಲ್ಪ ಸುಧಾರಿಸಿಕೊಂಡು ನಾನು ಅಂದುಕೊಂಡಂತೆ ಹೋದ ದಾರಿಯಲ್ಲಿಯೇ ಹಿಂದೆ ಬಂದೆ. ಸ್ವಲ್ಪ ದೂರ ನಡೆದಾದ ನಂತರ ನಾನು ಬಂದಿದ್ದ ಸವೆದಿದ್ದ ದಾರಿ ನನ್ನ ಕಣ್ಣಿಗೆ ಬಿತ್ತು. ಅಲ್ಲಿಯೇ ನೋಡಿ ನಾನು ಮನಸ್ಸಿನಲ್ಲಿಯೇ ಯೋಚಿಸಿದ್ದಂತೆ ಗುಟ್ಕಾ ಪ್ಯಾಕೆಟುಗಳೂ ಕಂಡವು. ನಂತರ ನಾನು ಇವುಗಳನ್ನು ಅನುಸರಿಸಿಕೊಂಡು ಹೋದರೆ ಖಂಡಿತಾ ಜಲಪಾತವನ್ನು ಸೇರುತ್ತೇನೆ ಎಂದು ನಂಬಿಕೆಯನ್ನು ಗಟ್ಟಿಗೊಳಿಸಿ ದೇವರ ಮೇಲೆ ಭಾರ ಹಾಕಿ ನಡೆಯಲು ಪ್ರಾರಂಭಿಸಿದೆ.

ಅವಾಗಲೇ ನನಗೆ ಗೊತ್ತಾಗಿದ್ದು ನಾನು ದಾರಿ ತಪ್ಪಿದ್ದೇನೆ ಎಂದು. ಅಲ್ಲೊಂದು ಮರ ಹಿಂದಿನ ರಾತ್ರಿ ಜಲಪಾತದ ಕಡೆಗೆ ಹೋಗುವ ದಾರಿಗೆ ಅಡ್ಡಲಾಗಿ ಬಿದ್ದಿತ್ತು. ಹಾಗಾಗಿ ನಾನು ದಾರಿ ತಪ್ಪಿದ್ದೆ. ನಾನಂದುಕೊಂಡಂತೆ ಅಲ್ಲಿ ಬಿಸ್ಲೆರಿ ನೀರಿನ ಬಾಟಲ್ ಗಳು ಮರದ ಆಚೆ ಕಡೆ ಕಂಡು ಬಂದ ಕಾರಣ ನಾನು ಮರವನ್ನು ದಾಟಿ ಮುನ್ನಡೆದೆ. ಅಲ್ಲಿ ಸುಮಾರು ದೂರ ಪ್ಲಾಸ್ಟಿಕ್ ಕವರ್ ಗಳೂ ಹಾಗೂ ಬಾಟಲ್ ಗಳನ್ನು ಹುಡುಕಿಕೊಂಡು ದಾರಿಯನ್ನು ಕಂಡುಕೊಂಡು ಮುಂದೆ ನಡೆಯುತ್ತಿರುವಾಗ ಜಲಪಾತದ ಬೋರ್ಗರೆತ ಜೋರಾಗಿ ಕೇಳಲಾರಂಭಿಸಿತು. ನಂತರ ಹೀಗೇ ಮುಂದೆ ನಡೆಯುತ್ತಿದ್ದಾಗ ಮತ್ತೆ ಜನರು ನಡೆದುಕೊಂಡು ಹೋಗಿದ್ದ ಸವೆದ ದಾರಿ ನನ್ನ ಕಣ್ಣಿಗೆ ಬಿತ್ತು ಅದರಲ್ಲಿ ತೆರಳಿದ ನನಗೆ ಮುಂದುಗಡೆ ಬಾನಿನಂದೆ ಭುವಿಗೆ ಶಿವನ ಜಡೆಯಿಂದ ನೆಗೆಯುವ ಗಂಗೆಯಂತೆ ಕೂಡ್ಲು ತೀರ್ಥವೆಂಬ ಜಲಪಾತವು ದರ್ಶನ ನೀಡಿತು.

ನಾನು ಅಲ್ಲಿಗೆ ತೆರಳಿದಾಗ ಅಲ್ಲಿ ನಾಲ್ಕು ಮಂದಿ ಯುವಕರು ಸ್ನಾನ ಮಾಡುತ್ತಾ, ತಾವು ಹೊತ್ತು ತಂದಿದ್ದ ಮದ್ಯದ ಬಾಟಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಅರಚಾಡುತ್ತಾ ಖುಷಿಯಲ್ಲಿ ತೇಲಾಡುತ್ತಿದ್ದರು. ನಾನು ಅಲ್ಲಿಗೆ ಹೋದವನೇ ನನ್ನ ಟ್ರೈಪಾಡ್ ಮತ್ತು ಕ್ಯಾಮರಾವನ್ನು ಹೊರ ತೆಗೆದು ಫೊಟೊ ಕ್ಲಿಕ್ಕಿಸತೊಡಗಿದೆ. ನನ್ನನ್ನು ಕಂಡ ಒಬ್ಬರು ಹತ್ತಿರ ಬಂದು ನೀವು ಒಬ್ರೇ ಬಂದ್ರಾ ಅಂದರು. ಹೌದು ಎಂದು ನಾನುತ್ತುರಿಸಿದೆ. ನಿಮಗೆ ತಲೆ ಸರಿ ಇಲ್ವಾ ಇಂತಹ ಪ್ರದೇಶಗಳಿಗೆ ಒಬ್ಬರೇ ಬರುತ್ತಾರ..? ದಾರಿ ತಪ್ಪಿದ್ದರೆ ಏನು ಮಾಡುತ್ತಿದ್ರಿ ಎಂದು ನನ್ನನ್ನು ಗದರಿದರೂ ಕೂಡ.

ಆದರೆ ಅವರಲ್ಲಿ ನಾನು ಜಲಪಾತವನ್ನು ನೋಡಲು ಪಟ್ಟ ಪಾಡನ್ನು ಮಾತ್ರ ಹೇಳಲಿಲ್ಲ. ಅಲ್ಲಿ ತಂಪಾಗಿದ್ದ ಸೀತಾ ನದಿಯ ನೀರನ್ನು ಸ್ಪರ್ಶಿಸಿದ ಕೂಡಲೇ ನನ್ನ ಎಲ್ಲಾ ಆಯಾಸ ಹಾಗೂ ಅಲ್ಲಿ ತಲುಪಲು ನಾನು ಪಟ್ಟಿದ್ದ ಕಷ್ಟಗಳ ನೆನಪೆಲ್ಲವೂ ಮಾಯವಾಗಿತ್ತು. ಅಲ್ಲಿಂದ ಹಿಂದೆ ಬರುವಾಗ ಅಲ್ಲಿದ್ದ ಯುವಕರಲ್ಲೊಬ್ಬರು ನನ್ನ ಸ್ನೇಹಿತರಾಗಿದ್ದರು. ಅವರು ಭಟ್ಕಳದಲ್ಲಿ ಒಂದು ಪತ್ರಿಕೆಯ ವರದಿಗಾರರಂತೆ. ಇವಾಗಲೂ ಅವರ ಜತೆ ಸ್ನೇಹವನ್ನು ಮುಂದುವರೆಸಿದ್ದೇನೆ. ವಾಪಸ್ ಅವರ ಜತೆ ಮಾತನಾಡುತ್ತಾ ಬಂದ ಕಾರಣ ನನಗೆ ದಾರಿ ಸವೆದಿದ್ದು ಗೊತ್ತಾಗಲಿಲ್ಲ.

ಅವರು ಇಲ್ಲೆ ಆಗುಂಬೆ ಘಾಟ್ ನಲ್ಲಿ ಸೂರ್ಯಾಸ್ತ ನೋಡಿ ಹಿಂದೆ ಹೋಗಿ ಎಂದು ಸಲಹೆ ನೀಡಿದರು. ಅವರ ಮಾತಿನಂತೆಯೇ ನಾನು ನನ್ನ ಬೈಕನ್ನು ಆಗುಂಬೆ ಘಾಟ್ ಕಡೆಗೆ ತಿರುಗಿಸಿ ಸೂರ್ಯಾಸ್ತವನ್ನು ನೋಡಲು ಮಾತ್ರ ವಿಫಲನಾದೆ. ಅವತ್ತು ಪೂರ್ತಿ ಮೋಡವಿದ್ದ ಕಾರಣ ನನಗೆ ಸೂರ್ಯಾಸ್ತದ ಒಳ್ಳೆಯ ದರ್ಶನವಾಗಲಿಲ್ಲ. ಅಲ್ಲಿಂದ ವಾಪಾಸು ಮನೆ ಕಡೆಗೆ ಹೊರಟ ನಾನು ಸತತ ನಾಲ್ಕು ಗಂಟೆಗಳ ಬೈಕ್ ಸವಾರಿಯ ನಂತರ ಮತ್ತೆ ಮಂಗಳೂರಿನ ಮನೆ ತಲುಪಿದ್ದೆ.

ಜೀವನದಲ್ಲಿ ಮೊದಲ ಬಾರಿ ಸ್ನೇಹಿತರೊಂದಿಗೆ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳೊಂದು ಜಿದ್ದಿಗೆ ಬಿದ್ದು ಮೊದಲ ಬಾರಿ ಜಲಪಾತವೊಂದನ್ನು ನೋಡಬೇಕು ಎಂದು ತೆರಳಿದ್ದ ನಾನು ಇಂತಹ ಭಿನ್ನವಾದ ಅನುಭವದೊಂದಿಗೆ ಹಿಂದೆ ಬರುತ್ತೇನೆ ಎಂದುಕೊಂಡಿರಲಿಲ್ಲ. ಮನುಷ್ಯನ ಬೇಜವಾಬ್ದಾರಿಯಿಂದ ಸ್ವಚ್ಚಂದವಾಗಿರುವ ಪ್ರಕೃತಿ ಮಾತೆಯ ಮಡಿಲಲ್ಲಿ ತಾನು ಕೊಂಡೊಗಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಬರುವುದಕ್ಕೆ ವಿರೋಧಿಯಾಗಿರುವ ನಾನು. ದಾರಿ ತಪ್ಪಿ ಕಾಡಿನಲ್ಲಿ ಅಲೆದು ಮತ್ತೆ ನನ್ನ ದಾರಿಯನ್ನು ತಲುಪಲು ಕಾರಣವಾಗಿದ್ದು ಇದೇ ಪ್ಲಾಸ್ಟಿಕ್ ಕವರ್ ಗಳು ಎಂಬುದೂ ಸತ್ಯ.

Add Comment

Leave a Reply