Quantcast

ಓ ನನ್ನ ಜನರೇ ಇದು ನನ್ನ ಕೊನೆಯ ಮಾತು..

ಆತ ಸಾಲ್ವಡೊರ್ ಅಲೆಂಡೆ

darga
ರಂಜಾನ್ ದರ್ಗಾ 

ಮುಖಪುಟದ ಚಿತ್ರ- ಅಲೆಂಡೆ  ಅವರು ಹತ್ಯೆಗೊಳಗಾದಾಗ ಛಿದ್ರವಾದ ಅವರ ಕನ್ನಡಕ.

ಈಗಲೂ ಅದನ್ನು ಅಲ್ಲಿಯ ಮಯೂಸಿಯಮ್ ನಲ್ಲಿ ಕಾಪಿಡಲಾಗಿದೆ

ಚಿಲಿ ದೇಶದ ವಿಶ್ವವಿಖ್ಯಾತ ಕವಿ ಪಾಬ್ಲೊ ನೆರುದಾ, ರಾಜಧಾನಿ ಸ್ಯಾಂಟಿಯಾಗೊದಲ್ಲಿ 1973ನೇ ಸೆಪ್ಟೆಂಬರ್ 23ರಂದು ನಿಗೂಢವಾಗಿ ನಿಧನರಾದರು. ನೆರುದಾ ಸಾವಿಗೆ 12 ದಿನಗಳ ಮುಂಚೆ ಚಿಲಿ ಸೈನ್ಯದ ಮಹಾದಂಡನಾಯಕ ಅಗೊಸ್ಟೊ ಫಿನೊಶೆ, ಅಮೆರಿಕದ ನೆರವಿನೊಂದಿಗೆ ರಾಷ್ಟ್ರಪತಿ ಭವನ ‘ಲಾ ಮೊನೆದಾ’ allendeಮೇಲೆ ಬಾಂಬುದಾಳಿ ಮಾಡಿ ಚಿಲಿಯ ಮೊದಲ ಚುನಾಯಿತ ಸಮಾಜವಾದಿ ಸರ್ಕಾರದ ರಾಷ್ಟ್ರಪತಿ ಸಾಲ್ವಡೊರ್ ಅಲೆಂಡೆ ಅವರನ್ನು ಕೊಲೆ ಮಾಡಿದ. ಅವರ ಪಾಪ್ಯುಲರ್ ಯೂನಿಟಿ ಸರ್ಕಾರವನ್ನು ಉರುಳಿಸಿ ಸರ್ವಾಧಿಕಾರಿಯಾದ. 1973ನೇ ಸೆಪ್ಟೆಂಬರ್ 11 ರಂದು ಚಿಲಿಯಲ್ಲಿ ಪ್ರಾರಂಭವಾದ ಆತನ ಸರ್ವಾಧಿಕಾರ 17 ವರ್ಷಗಳ ವರೆಗೆ ಮುಂದುವರಿಯಿತು.

ಅಮೆರಿಕದ ಬಹುರಾಷ್ಟ್ರೀಯ ಬಂಡವಾಳಗಾರರ ಹಿಡಿತದಲ್ಲಿದ್ದ ಚಿಲಿಯ ತಾಮ್ರದ ಗಣಿಗಳನ್ನು ಅಲೆಂಡೆ ಅವರು ಯಾವುದೇ ಪರಿಹಾರ ಕೂಡ ಕೊಡದೆ ರಾಷ್ಟ್ರೀಕರಣಗೊಳಿಸಿದ್ದು ಐತಿಹಾಸಿಕವಾಗಿತ್ತು. ಜನತೆಯ ಹೋರಾಟಗಳ ಮಧ್ಯೆ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಅಲೆಂಡೆ ಅವರಿಗೆ ಜನತೆಯ ಆಶೋತ್ತರಗಳಿಗೆ ಬಾಯಿಯಾಗುವುದು ಸಹಜವಾಗಿತ್ತು. ತಮ್ಮ ಜನರನ್ನು ಪ್ರೀತಿಸುವುದು ಎಂದರೆ ಸುಲಿಗೆಯನ್ನು ವಿರೋಧಿಸುವುದು ಎಂದೇ ಅರ್ಥ. ಅಂತೆಯೆ ತಮ್ಮ ಜನರನ್ನು ನಿಜವಾಗಿ ಪ್ರೀತಿಸುವ ಬಡ ರಾಷ್ಟ್ರಗಳ ಕವಿಗಳನ್ನು ಮತ್ತು ನಾಯಕರನ್ನು ಸಾಮ್ರಾಜ್ಯಶಾಹಿಗಳು ಎಂದೂ ಸಹಿಸುವುದಿಲ್ಲ. ಈ ‘ಅಪರಾಧ’ಕ್ಕಾಗಿಯೇ ನೆರುದಾ ಮತ್ತು ಅವರ ಮಿತ್ರ ಅಲೆಂಡೆ ಅವರು ಬಲಿಯಾಗಬೇಕಾಯಿತು.

ನಾಲ್ವತ್ಮೂರು ವರ್ಷಗಳ ಹಿಂದೆ, 1973ನೇ ಸೆಪ್ಟೆಂಬರ್ 11ರಂದು ಚಿಲಿಯ ರಾಷ್ಟ್ರಪತಿ ಭವನ ‘ಮೊನೆದಾ’ ಬಾಂಬ್ ದಾಳಿಗೀಡಾಗಿದೆ. ಕೆಲದಿನಗಳಿಂದ ಅಮೆರಿಕದ ಸಾಮ್ರಾಜ್ಯಶಾಹಿಯ ನೆರವಿನಿಂದ ಮಿಲಿಟರಿ ದುಷ್ಟಕೂಡದ ಫ್ಯಾಸಿಸ್ಟರು ಇಡೀ ಚಿಲಿಯ ಗಲ್ಲಿಗಳಲ್ಲೆಲ್ಲ ನೆತ್ತರು ಹರಿಸುತ್ತಿದ್ದಾರೆ. ಮಿಲಿಟರಿ ಪಿತೂರಿ ಮತ್ತು ಬರ್ಬರ ಪ್ರತಿಕ್ರಾಂತಿಯಿಂದಾಗಿ ಕಂಡ ಕಂಡಲ್ಲೆಲ್ಲ ಸಮೂಹ ಕೊಲೆಗಳಾಗುತ್ತಿವೆ.

ಈ ಎಲ್ಲ ಹೀನ ಕೃತ್ಯಗಳ ಜೊತೆಗೇ ಹೆಂಗಳೆಯರ ಅವಿರತ ಮಾನಭಂಗ ನಡೆದಿದೆ. ಕೊಲೆಗಡುಕರು ಅನೇಕ ಕಡೆ ಹೆಣಗಳನ್ನೆಲ್ಲ ಬೀದಿಯ ಮೇಲೆ ಬಿಟ್ಟು, ‘ಇದು ಪಾಠ’ ಎಂದು ಹೇಳುತ್ತಿದ್ದಾರೆ. ಇದು ಫ್ಯಾಸಿಸ್ಟರ ಶಿಕ್ಷಣ ವೈಖರಿ!
ಇಂಥ ಪರಿಸ್ಥಿತಿಯಲ್ಲೂ ಶಾಂತಿಯ ಪ್ರತಿಪಾದಕರಾದ ಚಿಲಿಯ ರಾಷ್ಟ್ರಪತಿ ಅಲೆಂಡೆ ಎದೆಗುಂದಲಿಲ್ಲ. ಹೇಡಿಯಂತೆ ಮೊನೆದಾ ಬಿಟ್ಟು ಓಡಿ ಹೋಗಲಿಲ್ಲ. ಜನರಲ್ಲಿ ಏಕತೆ ಮತ್ತು ಪ್ರತಿಭಟನಾ ಶಕ್ತಿ ತುಂಬಲು ಪ್ರಯತ್ನಿಸಿದರು.

ಬಾಂಬ್ ದಾಳಿಗೀಡಾದ ರಾಷ್ಟ್ರಪತಿ ಭವನದಲ್ಲೇ ಉಳಿದರು. ಆದರೆ ಯುದ್ಧನಿಪುಣರಲ್ಲದ ಸಂಗಾತಿಗಳನ್ನೆಲ್ಲ ಹೊರಗೆ ಕಳುಹಿಸಿದರು. ನಂತರ ಅವರು ಜನರನ್ನು ಉದ್ದೇಶಿಸಿ ಮಾತನಾಡಿದ್ದನ್ನು ಮಗಳು ಇಸಾಬೆಲ ಧ್ವನಿಮುದ್ರಣ ಮಾಡಿಕೊಂಡರು. ಕೊನೆಗೆ ‘ಮೊನೆದಾ’ ಮೇಲೆ ಮುಂದುವರಿದ ಬಾಂಬ್ ದಾಳಿಯಲ್ಲಿ ಅಲೆಂಡೆ ಹುತಾತ್ಮರಾದರು.

allende-with-castroಸಾಲ್ವಡೊರ್ ಅಲೆಂಡೆ 1970ರಿಂದ 73ರವರೆಗೆ ಅಂದರೆ, ಬದುಕಿನ ಕೊನೆಯ ಕ್ಷಣದ ವರೆಗೆ ಚಿಲಿಯ ಅಧ್ಯಕ್ಷರಾಗಿದ್ದರು. ಚಿಲಿಯಲ್ಲಿ ಶಾಂತಿಯುತವಾಗಿ ಸಮಾಜವಾದಿ ವ್ಯವಸ್ಥೆ ತರಲು ಶ್ರಮಿಸಿದರು. ಹಲವು ಏಕಸ್ವಾಮ್ಯವಾದಿಗಳ ಗುಂಪು, ಬಹುರಾಷ್ಟ್ರೀಯ ಬಂಡವಾಳ, ಕೆಲ ಸೈನ್ಯಾಧಿಕಾರಿಗಳ ಕೈವಾಡ ಮತ್ತು ಅಮೆರಿಕದ ಸಾಮ್ರಾಜ್ಯಶಾಹಿಗಳ ಸಹಾಯದಿಂದಾಗಿ 1973ನೇ ಸೆಪ್ಟೆಂಬರ್ 11ರಂದು ಪ್ರಜಾಪ್ರಭುತ್ವವಾದಿ ಸರ್ಕಾರವನ್ನು ಉರುಳಿಸಿ ಫಿನೋಷೆ ನೇತೃತ್ವದಲ್ಲಿ ಸರ್ವಾಧಿಕಾರವನ್ನು ಜಾರಿಗೊಳಿಸಲಾಯಿತು.

ಸೈನ್ಯಾಡಳಿತದಿಂದಾಗಿ ರಾಜಕೀಯ ಪಕ್ಷಗಳು ಕಾನೂನು ಬಾಹಿರಗೊಂಡವು. ನಾಗರಿಕ ಹಕ್ಕುಗಳು ದಮನಗೊಂಡವು. ಸರ್ವಾಧಿಕಾರಕ್ಕೆ ವಿರೋಧ ವ್ಯಕ್ತಪಡಿಸುವವರಿಂದಾಗಿ ಜೈಲುಗಳೆಲ್ಲ ತುಂಬಿಹೋದವು. ಅಲೆಂಡೆ ಸರ್ಕಾರದ ಅನೇಕ ಸುಧಾರಣಾ ಕಾರ್ಯಕ್ರಮಗಳು ಮೂಲೆಗುಂಪಾದವು. ಹೊರದೇಶಗಳ ಬಂಡವಾಳ ಅಲ್ಲಿ ಸ್ವತಂತ್ರವಾಗಿ ರಾರಾಜಿಸತೊಡಗಿತು.

ಸೇನಾಧಿಕಾರಕ್ಕೆ ತುತ್ತಾದಾಗ ಚಿಲಿಯ ಜನಸಂಖ್ಯೆ ಒಂದು ಕೋಟಿಯಷ್ಟಿತ್ತು. ಸರ್ವಾಧಿಕಾರ ಸ್ಥಾಪಿತವಾದ ಮೊದಲ ಆರು ತಿಂಗಳಲ್ಲೇ 30 ಸಾವಿರ ಪ್ರಜಾಪ್ರಭುತ್ವವಾದಿಗಳ ಕೊಲೆ ಮಾಡಲಾಯಿತು. 1,50,000 ಮಂದಿಯನ್ನು ಜೈಲಿಗೆ ಕಳುಹಿಸಲಾಯಿತು. ರಾಜಕೀಯ ಮತ್ತು ಆರ್ಥಿಕ  ಒತ್ತಡಗಳಿಂದಾಗಿ ಚಿಲಿಯ ಐದು ಲಕ್ಷ ಜನರು ದೇಶ ಬಿಟ್ಟು ಹೋಗುವಂಥ ಪರಿಸ್ಥಿತಿ ಉಂಟಾಯಿತು.

ಬಾಂಬ್ ದಾಳಿಗೀಡಾಗಿ ಹುತಾತ್ಮರಾಗುವುದಕ್ಕೆ ಸ್ವಲ್ಪ ಮುಂಚೆ ಅಲೆಂಡೆ ಅವರು ಜನರನ್ನುದ್ದೇಶಿಸಿ ಮಾತನಾಡಿದ್ದನ್ನು ಧ್ವನಿಮುದ್ರಣ ಮಾಡಿಕೊಂಡ ಇಸಾಬೆಲ, ಆ ಧ್ವನಿ ಜಗತ್ತಿಗೆ ಕೇಳಿಸುವಂತೆ ಮಾಡಿದರು. ಅಲೆಂಡೆ ಅವರ ಆ ಏಕಾಂತದ ಭಾಷಣ, ಕೋಟಿ ಕೋಟಿ ಜನರಲ್ಲಿ ಮಾನವ ಘನತೆಯ ಚೈತನ್ಯ ತುಂಬುವ ಅಮರ ಕಾವ್ಯವಾಗಿದೆ. ಅವರ ಇಡೀ ಭಾಷಣ, ಅದು ಇದ್ದ ಹಾಗೆಯೆ ಕನ್ನಡದಲ್ಲಿ ಕಾವ್ಯವಾಗಿದೆ.

allende2

ಓ ನನ್ನ ಜನರೇ….

ಓ ನನ್ನ ಜನರೇ ಇದು ನನ್ನ ಕೊನೆಯ ಮಾತು.
ದಾಳಿಯಿಟ್ಟಿವೆ ವಿಮಾನಗಳು ಆಕಾಶವಾಣಿಯ ಮೇಲೆ.
ನನ್ನ ಮಾತಿನಲ್ಲಿ ಕಹಿಯಿಲ್ಲ ಬರಿ ಆಶಾಭಂಗವಿದೆ,
ನೈತಿಕ ಶಿಕ್ಷೆಯಿದೆ ವಚನ ಕೊಟ್ಟು ವಂಚಿಸಿದವರಿಗೆ.

ಚಿಲಿಯ ಸಮುದಾಯವೇ ಕೇಳಿ ನಿನ್ನೆಯ ವರೆಗೂ
ತೋರಿಸುತ್ತಿದ್ದ ವಿಧೇಯತೆ ಮೆಂಡೋಜ ಮಹಾಶಯ.
ಈಗ ನೋಡಿ ಮಾರ್ಗದಶರ್ಿಯಾದ ಕೊಲೆಗಡುಕರ.
ಗಾಯಗೊಳಿಸಿದ್ದಾರೆ ಚಿಲಿಯನ್ನು; ಕೊಲ್ಲಲು ಸಾಧ್ಯವಿಲ್ಲ.

ಕಾಮರ್ಿಕರೇ, ರೈತರೆ, ನಾಡಿನ ಸಮಸ್ತ ಜನರೇ
ಬರ್ಬರರು ಮಾಡಿದ ಈ ಸ್ಥಿತಿಯ ಮುಂದೆ ನಿಂತು
ಹಿಂಜರಿಯದೆ ಹೇಳುತ್ತಿದ್ದೇನೆ ನಾ ಬಿಡಲಾರೆ
ಸಮಸ್ತ ಜನತೆಯ ಸೊತ್ತನ್ನು; ನನ್ನ ಚಿಲಿಯನ್ನು.

ಇದು ಐತಿಹಾಸಿಕ ನಿರ್ಣಯ; ನನ್ನನ್ನೇ ಬಲಿ ಕೊಡುವೆ.
ನನ್ನ ಜನರಿಗೆ ತೋರಿಸುವ ವಿಧೇಯತೆ ಇದು.
ಹೌದು ನಾ ಸಾಯಬಹುದು; ನಾನೊಬ್ಬ ಮನುಷ್ಯ.
ನಾ ಸತ್ತರೇನು ಮತ್ತು ಹುಟ್ಟುತ್ತಾರೆ ಚಿಲಿಯ ಮಣ್ಣಲ್ಲಿ.
ಮತ್ತೆ ಮತ್ತೆ ಒತ್ತಿ ಹೇಳುವೆ; ಭರವಸೆ ಕೊಡುವೆ
ಯಾವ ಸಂಶಯವೂ ಇಲ್ಲ ಚಿಲಿಯ ಬದುಕಲ್ಲಿ.
ಬೆಳೆಯುತ್ತಲೇ ಹೋಗುವುದು ಬಿತ್ತಿದ ಆತ್ಮಸಾಕ್ಷಿಯ ಬೀಜ,
ಘನೋದ್ದೇಶಗಳು ಈಡೇರುತ್ತಲೇ ಹೋಗುವವು.

ನೀವೇ, ಹೌದು ನೀವೇ ಇತಿಹಾಸ ಸೃಷ್ಟಿಸುವವರು.
ಇತಿಹಾಸ ನಮ್ಮದಿದೆ; ಇತಿಹಾಸ ಸೃಷ್ಟಿಸುವವರದು.
ವೈರಿಗಳಿಂದು ಬಲಿಷ್ಠರಾಗಿದ್ದಾರೆ, ಎಳೆಯಬಹುದು ಗುಲಾಮಗಿರಿಗೆ.
ಅಪರಾಧದಿಂದ- ಒತ್ತಾಯದಿಂದ ಆಳಲಾಗದು ಜನರನ್ನು.

ನಾನೊಬ್ಬ ಮನುಷ್ಯ; ನ್ಯಾಯದ ಬಯಕೆಗಳಿಗೆ ಬಾಯಿಯಾದವ.
ಸಂವಿಧಾನಕ್ಕೆ ಬೆಲೆ ಇತ್ತವ, ವಚನಕ್ಕೆ ಬದ್ಧನಾದವ.
ಸದಾ ನಂಬಿಕೆಯಿಟ್ಟು ಒಗ್ಗಟ್ಟನ್ನು ಎತ್ತಿತೋರಿಸಿದಿರಿ ನೀವು.
ನನಗಾವ ಭಯವಿಲ್ಲ; ಕೇವಲ ನಿಮಗಾಗಿ ಚಿಂತಿಸುತ್ತಿರುವೆ.

ಈ ಕ್ರೂರ ಘಳಿಗೆ; ನಾ ಮಾತನಾಡಬಲ್ಲ ಕೊನೆಯ ಘಳಿಗೆ.
ಈ ಘಟನೆಯಿಂದ ಏನು ಕಲಿಯಬಹುದೆಂಬುದನ್ನು
ಬಿಡಿಸಿ ತಿಳಿಸಬಲ್ಲೆ ನಾ ನಿಮಗೆ ಒಂದೊಂದಾಗಿ.
ಯಾರ ಕೈವಾಡವಿದು, ಏಕೆ ಎಂಬುದನ್ನು ಹೇಳಬಲ್ಲೆ!

ಪರದೇಶದ ಬಂಡವಾಳ, ಸಾಮ್ರಾಜ್ಯವಾದ ಕೈ ಕೂಡಿಸಿದವು.
ಪ್ರತಿಗಾಮಿಗಳೊಡನೆ ಹೂಡಿದವು ಹೂಟ ದಂಗೆಯೇಳುವಂತೆ.
ಸೈನ್ಯ ಮುರಿಯಿತು ಸಂಪ್ರದಾಯ, ಬಲಿಯಾಯಿತು ವ್ಯವಸ್ಥೆಗೆ.
ಗಾಯವಾಯಿತು ಚಿಲಿಗೆ; ಚಿಲಿ ಸತ್ತಿಲ್ಲ ಸಾಯುವುದಿಲ್ಲ.

ಬಾಂಬುದಾಳಿಗೀಡಾಗಿ ಬಾನುಲಿ ಬರಿದಾಗಿದೆ, ಮೌನವಾಗಿದೆ.
ಕೇಳಿಸದಂತಾಗಿದೆ ನನ್ನ ಸ್ಪಷ್ಟ ಶಬ್ದಗಳು ನಿಮಗೆಲ್ಲ.
ಕಾಮರ್ಿಕರ ನಿಷ್ಠೆಗೆ ನಿಷ್ಠೆ ತೋರಿದ ಯೋಗ್ಯ ಮನುಷ್ಯನ
ನೆನಪು ಉಳಿಯುವುದು ನಿಮ್ಮಲ್ಲಿ, ಸದಾ ನಿಮ್ಮೊಡನೆ ಇರುವೆ.

ನನ್ನ ನೆಲದ ವಿನಮ್ರ ಸ್ತ್ರೀಯರೆ, ವೀರರ ತಾಯಂದಿರೆ,
ಕಾಖರ್ಾನೆಯಲ್ಲಿ, ಹೊಲದಲ್ಲಿ ದುಡಿಯುವ ಹೆಣ್ಣುಮಕ್ಕಳೇ,
ನೀವು ಹೆಚ್ಚು ಹೆಚ್ಚು ದುಡಿದು ದೇಶದ ಹಸಿವು ಹಿಂಗಿಸಿದಿರಿ.
ಮಾತಾಡುವೆ ನಾ ನಿಮ್ಮೆಲ್ಲರಿಗಾಗಿ ಹೃದಯ ತುಂಬಿ.
ದೇಶಾಭಿಮಾನಿಗಳೇ, ವಿವಿಧ ಕಾಯಕಜೀವಿಗಳೇ
ಕೆಲದಿನಗಳ ಹಿಂದೆ ಬರ್ಬರ ಪ್ರತಿಕ್ರಾಂತಿಯ ವೇಳೆ,
ಜನರ ರಕ್ತ ಹೀರುವ ಸುಲಿಗೆ ಸಾಮ್ರಾಜ್ಯದ ಸಂಸ್ಥೆಗಳ
ಬಾಡಿಗೆಯ ಬಂಟರೊಡನೆ ಹೋರಾಡಿದಿರಿ ಹಂಗುದೊರೆದು.

ನಾಡಿನ ಯುವಜನರೇ ಮಾತನಾಡುವೆ ನಿಮ್ಮನ್ನುದ್ದೇಶಿಸಿ:
ಈ ದೇಶದ ವೀರಗೀತೆಗಳನ್ನೆಲ್ಲ ಹಾಡುತ್ತ ನೀವೆಲ್ಲ
ನಮ್ಮ ಹೋರಾಟದ ಹುರುಪಿನಲ್ಲಿ ಸಂತೋಷ ಕೊಟ್ಟಿರಿ.
ನನ್ನ ಚಿತ್ತಭಿತ್ತಿಯ ಮೇಲೆ ಕಿಕ್ಕಿರಿದು ತುಂಬಿದಿರಿ.

ಹಿಂಸೆಗೊಳಪಟ್ಟು ನರಳುತ್ತಿರುವ ನನ್ನ ಜನರೇ
ಚಿಲಿಯ ಹೃದಯಗಳೇ, ಕಾಮರ್ಿಕರೇ, ರೈತರೇ,
ಕರಾಳ ಫ್ಯಾಸಿಸ್ಟರ ಆಕ್ರಮಣದಿಂದ ಹಾಳಾಗಿವೆ
ಸೇತುವೆಗಳು, ರೈಲ್ವೆಗಳು ಎಣ್ಣೆಗೊಳವೆಗಳು.

ಸ್ತಬ್ಧತೆಯನ್ನು ಗಮನಿಸಿ: ಇತಿಹಾಸ ನ್ಯಾಯಸ್ಥಾನದಲ್ಲಿರುವುದು.
ಅವರು ಏನಾಗಬೇಕಿತ್ತೋ ನಾಳೆ ಅದೇ ಆಗುವರು.
ಭವಿಷ್ಯ ನಮ್ಮದಿದೆ ತಿಳಿಯಿರಿ; ಭವಿಷ್ಯ ದುಡಿಯುವವರದಿದೆ.
ಚಿಲಿ ಸತ್ತಿಲ್ಲ, ಸಾಯುವುದಿಲ್ಲ, ಅದು ಬರಿಗಾಯಗೊಂಡಿದೆ.

ಓ ನನ್ನ ಜನರೇ, ನಿಮ್ಮನ್ನು ರಕ್ಷಿಸಿಕೊಳ್ಳಿ.
ಬಲಿದಾನ ಮಾಡಬೇಡಿ, ಹಿಂಸೆಗೊಳಪಡಬೇಡಿ.
ನಂಬಿಕೆಯಿದೆ ನನಗೆ ಚಿಲಿಯ ಭವಿಷ್ಯದಲ್ಲಿ.
ನವ ಸಮಾಜದ ಹೊಣೆಹೊತ್ತ ನೀವು ಆಳುವಿರಿ.

ಬಹುದಿನ ಬದುಕಲಿ ಚಿಲಿ – ಚಿಲಿ ಬದುಕಲಿ ಬಹುದಿನ.
ಜನ ಕಾಮರ್ಿಕರು ಬದುಕಲಿ ತುಂಬುದಿನ.
ನನ್ನ ತ್ಯಾಗ ಹಾಳಾಗುವಂಥದ್ದಲ್ಲ; ಇದು ಪಾಠ
ಹೇಡಿತನಕ್ಕೆ ವಿಶ್ವಾಸಘಾತಕ್ಕೆ ನೈತಿಕ ಶಿಕ್ಷೆ.
-ರಂಜಾನ ದಗರ್ಾ

Add Comment

Leave a Reply