Quantcast

ದಂಡುಪಾಳ್ಯದಲ್ಲೊಂದು ದಿನ..

ಕಲ್ಲೆತ್ತಿ ಬಂದರು. ಮತ್ತೆ ಹೂವಂತಾದರು

ಪತ್ರಿಕೋದ್ಯಮ ವೃತ್ತಿಯಲ್ಲಿ ನಾವು ಭೇಟಿಯಾಗುವ ಜನರು ವಿಭಿನ್ನ, ಕೆಲವರು ಪ್ರಚಾರಕ್ಕಾಗಿ ಹಪಹಪಿಸುತ್ತಿದ್ದರೆ ಇನ್ನು ಕೆಲವರು ಮುಖ ಕಾಣಬಾರದೆಂದು ದೂರ ಓಡುವವರು.

ಇನ್ನು ಕೆಲವರು ನಿಮ್ಮಿಂದ ಏನು ಆಗೋಲ್ಲ ಸುಮ್ಮನೆ ಯಾಕೆ ಸಮಯ ವ್ಯರ್ಥ ಮಾಡ್ತೀರಿ ಎಂದು ದಬಾಯಿಸುವವರು ಇದ್ದಾರೆ.

Jyothi column low resಹೀಗೆ ದಬಾಯಿಸಿದ ಮುಖದಲ್ಲಿ ಮಂಡ್ಯದ ಆ ಅಜ್ಜಿಯ ಮುಖ ಇನ್ನು ಕಣ್ಣಿಗೆ ಕಟ್ಟಿದ ಹಾಗಿದೆ. ಯಾಕಮ್ಮ ಹಿಂಸೆ ನೀಡ್ತಿ. ನಮ್ಮ ಕಷ್ಟ ನಿಂಗೆ ಪರಿಹರಿಸೋಕಾಗುತ್ತಾ ಸುಮ್ಮನೆ ಹೋಗು ಎಂದು 2004 ರ ಚುನಾವಣಾ ಸಮಯದಲ್ಲಿ ಆ ಅಜ್ಜಿ ದಬಾಯಿಸಿದ್ದು ಕಿವಿಗೆ ಹಾಗೆ ಇನ್ನು ಅಪ್ಪಳಿಸುತ್ತಿದೆ.

ಇನ್ನು ಕೆಲವರಿಗೆ ತಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ಆಶಾವಾದ. ಹಾಗೆ ಮತ್ತೆ ಕೆಲವರಿಗೆ ನಾವು ಸರ್ಕಾರಿ ನೌಕರರಂತೆ ಕಂಡಿದ್ದು ಇದೆ. ಆದಷ್ಟು ಬೇಗ ಒಂದು ಮನೆ ಮಂಜೂರಾಗುವಂತೆ ಮಾಡಿ, ದೇವರು ನಿಮಗೆ ಒಳ್ಳೇದು ಮಾಡ್ತಾನೆ ಎಂದು ಮುಗ್ಧವಾಗಿ ನಕ್ಕು ನಿರೀಕ್ಷೆಯ ಕಣ್ಣಿಂದ ನೋಡಿದ ಮುಖಗಳು ಇವೆ. ಇನ್ನು ಕೆಲವರು ನಿರ್ಲಿಪ್ತತೆಯಿಂದ ಪ್ರತಿಕ್ರಿಯೆಯನ್ನೇ ಕೊಡದವರು.

ಹೀಗೆ ಕಾರ್ಯಕ್ರಮವೊಂದನ್ನು ಮಾಡಲು ದಂಡುಪಾಳ್ಯವನ್ನು ಆರಿಸಿಕೊಂಡು ಅಲ್ಲಿಗೆ ಹೋದಾಗ ಆದ ಅನುಭವ ಇನ್ನು ಬೆಚ್ಚಗೆ ಹಾಗೆ ನೆನಪಿನಂಗಳದಲ್ಲಿ ಹಾಗೆ ಇದೆ.

ದಂಡುಪಾಳ್ಯ. ಬಹುಷಹ ಎಲ್ಲರು ಈ ಊರಿನ ಕುರಿತಂತೆ ಖಂಡಿತ ಕೇಳಿರುತ್ತೀರಿ. ರಕ್ತಪಿಪಾಸುಗಳ ಗುಂಪೊಂದು ಅಲ್ಲೇ ವಾಸವಾಗಿತ್ತು.  ಆ ತಂಡ ರಾಜಧಾನಿ ಬೆಂಗಳೂರಿನಲ್ಲಿ ನೀರು ಕೇಳುವ ನೆಪದಲ್ಲಿ ಕತ್ತು ಸೀಳಿ ಭಯಾನಕವಾಗಿ ಕೊಲೆ ಮಾಡುತ್ತಿತ್ತು. ಅವರು ಬೆಂಗಳೂರಿನಲ್ಲಿ ಬಂದು ಇಂತಹ ಕೃತ್ಯವನ್ನು ಎಸಗುತ್ತಿದ್ರೆ ಎಲ್ಲಿ ಬಂದು ಏನ್ ಮಾಡ್ತಾರೋ ಅನ್ನೋ ಭಯ. ನೀರು ಕೇಳಲು ಯಾರೇ ಬಂದ್ರು ಆತಂಕ ಹೆದರಿಕೆ.

ಕೊನೆಗು ಆ ಗುಂಪು ಪೋಲೀಸರ ಬಲೆಗೆ ಬಿದ್ದಿತ್ತು. ಜೈಲುಪಾಲಾಗಿತ್ತು. ಆ ನಂತರ ಅವರ ಕುರಿತಂತೆ ಸಿನಿಮಾವು ಚಿತ್ರೀಕರಣವಾಗಿತ್ತು.

ಹಾಗಾದ್ರೆ ದಂಡುಪಾಳ್ಯ ಹೇಗಿರಬಹುದೆಂಬ ಕುತೂಹಲ ನನಗೆ ಹಾಗೆ ಉಳಿದಿತ್ತು. ನೋಡೋಣ ಅಲ್ಲಿನ ಪರಿಸ್ಥಿತಿ ಹೇಗಿರುತ್ತೆ ಅಂತ ದಂಡುಪಾಳ್ಯ ಕುರಿತಂತೆ ಕಾರ್ಯಕ್ರಮ ಮಾಡಲು ನಮ್ಮ ತಂಡ ಹೊರಡಲು ರೆಡಿಯಾಗಿತ್ತು.

ಅಂದು ರಾತ್ರಿಯಾಗಿತ್ತು. ಹೊಸಕೋಟೆ ಬಳಿಯಿರುವ ದಂಡುಪಾಳ್ಯ ಬೋರ್ಡ್ ಕಣ್ಣಿಗೆ ಕಂಡಿತು. ಟಿವಿಯೆಂದು ಗೊತ್ತಾದ ಹಾಗೆ ಅದ್ಯಾಕೆ ಏನಾಯಿತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಅಲ್ಲಿ  ಒಂದು ಗುಂಪಿಗೆ ಸಿಟ್ಟು ನೆತ್ತಿಗೆ ಹತ್ತಿತ್ತು. ನಮ್ಮ ಡ್ರೈವರ್, ಕ್ಯಾಮರಾ ಮ್ಯಾನ್ ನನ್ನನ್ನು ಸೇರಿಸಿ ಎಲ್ಲರಿಗು ಬೈಯ್ಗುಳದ   ಸುರಿಮಳೆ. ಅವರು ನಾವೇನು ಹೇಳುತ್ತಿದ್ದೇವೆ ಅನ್ನೋದನ್ನು ಕೇಳಿಸಿಕೊಳ್ಳೋ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೆಲವರು ಕಲ್ಲನ್ನು ಕೈಯಲ್ಲೆತ್ತಿ ಹಾಕಲು ಬಂದ್ರು. ನಾನು ಡ್ರೈವರಿಗೆ ಕಾರು ವಾಪಾಸು ತಿರುಗಿಸಲು ಹೇಳಿದೆ, ಪರಿಸ್ಥಿತಿ ಕೈಮೀರಿದಾಗ ನಮಗೆ ನಮ್ಮ ಕುರಿತಂತೆ ಹೇಳಲು ಅವಕಾಶವೇ ಸಿಗದಾಗ ಸುಮ್ಮನಾಗಿ ಅಲ್ಲಿಂದ ನಿರ್ಗಮಿಸುವುದೇ ಒಳ್ಳೆಯ ದಾರಿ ಎಂದು ನಿರ್ಧರಿಸಿ ಮತ್ತೆ ಬೆಂಗಳೂರಿಗೆ ವಾಪಾಸಾದೆವು.

ಆದ್ರೆ ಅಲ್ಲಿನ ಜನರ ಮನವೊಲಿಸಬೇಕು, ಸಿಟ್ಟಿಗೆ ಕಾರಣ ತಿಳಿಯಬೇಕೆಂದು ನಿರ್ಧರಿಸಿದೆ. ಮತ್ತೆ ಬೆಳಿಗ್ಗೆ ದಂಡುಪಾಳ್ಯಕ್ಕೆ ಪ್ರಯಾಣ ಬೆಳೆಸಿದೆವು. ಅಲ್ಲೇ ಟೀ ಅಂಗಡಿಯಲ್ಲಿ ಕೂತು ಕೆಲವರಲ್ಲಿ ನಾವು ಸ್ಟೋರಿ ಮಾಡುವ ಉದ್ದೇಶವನ್ನು ವಿವರಿಸಿದೆ.

ದಂಡುಪಾಳ್ಯ ಕುರಿತಂತೆ ನೆಗೆಟಿವ್ ಆಗಿ ಕೆಲವು ಚಾನೆಲ್ ಗಳು ವರದಿ ಮಾಡಿರೋದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ನಾನು ಇಡೀ ದಂಡುಪಾಳ್ಯವನ್ನೇ ಕೊಲೆಗಟುಕರ ಹಳ್ಳಿ ಎಂದು ಹೇಳೋದು ತಪ್ಪು ಅನ್ನೋದರ ಕುರಿತು ಸ್ಟೋರಿ ಮಾಡುತ್ತೇನೆಂದು ಅವರ ಮನಸ್ಸು ಬದಲಾಯಿಸುವ ಪ್ರಯತ್ನ ಮಾಡಿದೆ. ಮತ್ತೆ ನಾನು ಸತ್ಯವನ್ನೇ ಹೇಳಿದ್ದೆ. ಹೇಗೆ ಗ್ರಾಮವೊಂದು ಕೆಲವು ಪಾತಕಿಗಳಿಂದಾಗಿ ಶಿಕ್ಷೆಯನ್ನು ಅನುಭವಿಸಬೇಕು ಮತ್ತು ಅಲ್ಲಿನ ಎಲ್ಲಾ ಜನ ತಾವು ಮಾಡದ ತಪ್ಪಿಗೆ ಆರೋಪಿಯಂತೆ ನೋಡಲ್ಪಡುತ್ತಿದ್ದಾರೆ ಅನ್ನೋದನ್ನು ಕಾರ್ಯಕ್ರಮದಲ್ಲಿ ಹೇಳೋ ಪ್ರಯತ್ನವನ್ನು ಮಾಡುವ ಉದ್ದೇಶ ನನ್ನದಾಗಿತ್ತು. ಅದಕ್ಕಾಗಿ ಗ್ರೌಂಡ್ ರಿಪೋರ್ಟಿಂಗ್ ಮಾಡಲು ನಾನು ತಂಡದ ಜೊತೆ ತೆರಳಿದ್ದೆ.

dandupalya-gang1ಗದ್ದೆ ಬದಿಯಲ್ಲಿ ಮಧ್ಯವಯಸ್ಸಿನ ತಾಯಿಯೊಬ್ಬರು ಕಂಡರು. ಅವರನ್ನು ಮಾತಾಡಿಸತೊಡಗಿದೆ.

“ ಏನು ಹೇಳೋದಮ್ಮ, ನಮ್ಮನ್ನು ಕೊಲೆಗಡುಕರ ಥರಾ ನೋಡ್ತಾರೆ. ಬಸ್ ನಲ್ಲಿ ಹೋದ್ರು ನೀವು ಯಾವ ಊರು ಅಂತಾರೆ, ಸುಳ್ಳು ಹೇಳಲಾರದೆ ದಂಡುಪಾಳ್ಯವೆಂದರೆ ದೂರ ಸರಿಯುತ್ತಾರೆ. ಇಲ್ಲಿನ ಹೆಣ್ಣು ಮಕ್ಕಳನ್ನು ಮದುವೆಯಾಗಲು ಯಾರು ಒಪ್ಪೋದಿಲ್ಲ, ಹಾಗೆ ಹೆಣ್ಣು ಮಕ್ಕಳನ್ನು ಕೊಡೋದು ಇಲ್ಲ. ನಾವೇನಮ್ಮ ತಪ್ಪು ಮಾಡಿದ್ದೀವಿ?  ಆ ತಾಯಿ ಪ್ರಶ್ನೆಗೆ ಉತ್ತರ ಕೊಡೋದು ನನ್ನ ಪಾಲಿಗೆ ಕಷ್ಟದ ಮಾತಾಗಿತ್ತು.

ಹೀಗೆ ಹಲವು ಹೆಣ್ಣುಮಕ್ಕಳನ್ನು ಮಾತಾಡಿಸಿ ದಂಡುಪಾಳ್ಯದವರು ಇದ್ದ ಆ ಗುಡಿಸಲಿನ ಬಳಿ  ನಮ್ಮ ತಂಡ ತೆರಳಿತು. ಅಲ್ಲಿ ಯಾರು ಇರಲಿಲ್ಲ. ಅಲ್ಲೇ ಇದ್ದ ಯುವಕರ ತಂಡಕ್ಕೆ ಅವರು ಹೇಗಿದ್ದರು ಏನು ಮಾಡುತ್ತಿದ್ದರು ಎಂದು ಕೇಳಿದೆ.

ಅವರು ಯಾರ ಜೊತೆನು ಬೆರೆಯುತಿರಲಿಲ್ಲ ಮೇಡಂ. ಊರಿನೊಳಗು ಅಪರೂಪಕ್ಕೆ ಬರುತ್ತಿದ್ದರು. ಯಾವಾಗಲೊಮ್ಮೆ ಬರುತ್ತಿದ್ದರು, ಹೋಗುತ್ತಿದ್ದರು  ಎಂದು ಕೆಲವರು ಹೇಳಿದ್ರು. ಆ ಪುಟ್ಟ ಗುಡಿಸಲನ್ನು ನೋಡುತ್ತಿದ್ದ ಹಾಗೆ ಅವರು ಎಸಗಿದ ಪಾಪ ಕೃತ್ಯ ನೆನಪಾಗಿ ಮನಸ್ಸಿಗೆ ಒಂಥರಾ ವೇದನೆಯೆನಿಸಿತು.

ಅದೆಂಥಾ ಮನಸ್ಥಿತಿಯಿರಬೇಕಲ್ವ. ಕತ್ತು ಸೀಳಿ ರಕ್ತ ಕುಡಿಯಬೇಕೆಂಬ ಮನಸ್ಸು ಬರಬೇಕಾದ್ರೆ ಆ ಮನಸ್ಸಿನ ಕ್ರೂರತೆ ಎಷ್ಟಿರಬೇಕಲ್ವ?

ಸಿನೆಮಾ ಆಗಿ ದಂಡುಪಾಳ್ಯ

ಸಿನೆಮಾ ಆಗಿ ದಂಡುಪಾಳ್ಯ

ಹಾಗೇ ಮಾತಾಡುತ್ತಾ ಅಲ್ಲಿನ ಗ್ರಾಮಸ್ಥರ ನೋವಿನ ಕಥೆಯನ್ನು ಕೇಳಿ  ಪುಟ್ಟ ಹೋಟೇಲೊಂದರತ್ತ ಹೆಜ್ಜೆ ಹಾಕಿದ್ವಿ. ಹಿಂದಿನ ದಿನ ಇದ್ದ ರೋಷ ಗ್ರಾಮಸ್ಥರಲ್ಲಿ ಮಾಯವಾಗಿತ್ತು. ನಮ್ಮ  ತಂಡದ ಮೇಲೆ ವಿಶ್ವಾಸ ಮೂಡಿತ್ತು. ಆ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿಯು ನನ್ನ ಮೇಲಿತ್ತು. ಹಾಗಾಗಿ ಸ್ಕ್ರಿಪ್ಟ್ ನಿಂದ ಹಿಡಿದು ಎಡಿಟಿಂಗ್ ವರೆಗು ಹೆಚ್ಚಿನ  ಗಮನ ಕೊಡಲು ನಿರ್ಧರಿಸಿದ್ದೆ. ಆ ಗ್ರಾಮದ ಜನರಲ್ಲಿ ಅಷ್ಟೊಂದು ಸಿಟ್ಟು ಆಕ್ರೋಶ ಮಡುಗಟ್ಟಲು ನಮ್ಮ ದಿವ್ಯ ನಿರ್ಲಕ್ಷ್ಯವು ಕಾರಣವೆಂಬುದರ ಅರಿವು ನನಗಿತ್ತು.

ನಿಜ ಕೆಲವೊಮ್ಮೆ  ಕವರೇಜ್ ಮಾಡುವ ಸಂದರ್ಭದಲ್ಲಿ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ಯಾವುದೋ ಚಾನಲ್ ಅಥವಾ ಮಾಧ್ಯಮದವರು ಮಾಡಿದ ತಪ್ಪಿಗೆ ನಾವು ಬೆಲೆತೆರಬೇಕಾಗುತ್ತದೆ. ಆಗ ಬೇಕಾಗಿರೋದು ಸಹನೆ. ಮತ್ತೆ ನಮ್ಮ ಬದ್ಧತೆಯನ್ನು ಕವರೇಜ್  ನಂತ್ರ ನಾವು ತೋರಿಸುವ ರೀತಿ.

ದಂಡುಪಾಳ್ಯದಲ್ಲಿ ನಾನು ಕಳೆದ ಗಂಟೆಗಳು ಆರಂಭದಲ್ಲಿ ಆಕ್ರೋಶದಿಂದ ಮತ್ತೆ ಸಹಜವಾಗಿ ಕೊನೆಗೆ ಸಮಾಜಕ್ಕೆ ಸಂದೇಶವೊಂದನ್ನು ರವಾನಿಸುವ ಪ್ರಯತ್ನದಲ್ಲಿ ಕೊನೆಯಾಯಿತು.

ಮುಂದಿನ ವಾರ ಮತ್ತೊಂದಿಷ್ಚು ಕವರೇಜ್ ನ ನೆನಪಿನೊಂದಿಗೆ  ಬರ್ತೀನಿ

ಅಲ್ಲಿವರೆಗು ಟೇಕ್ ಕೇರ್ ..

ಜ್ಯೋತಿ…..

 

Add Comment

Leave a Reply