Quantcast

ಪಿ ಎಂ ಆಫೀಸಿನ ಫಿಜಿಷಿಯನ್ನೂ.

‘ಲಂಕೇಶ’ರ “ಗುಣಮುಖ” ನಾಟಕವೂ, ಪ್ರೈಮ್ ಮಿನಿಸ್ಟರ್ ಆಫೀಸಿನ ಫಿಜಿಷಿಯನ್ನೂ…
ನೋಡಿದ ನಾಟಕ – ಗುಣಮುಖ

shivakumar-mavali

ಶಿವಕುಮಾರ್ ಮಾವಲಿ

” ನಾನು ದೇಹ ಕ್ಕೆ ಮದ್ದು ಕೊಡುವ ಹಕೀಮನೇ ಹೊರತು, ದೇಶಕ್ಕೆ ಮದ್ದು ಕೊಡುವವನಲ್ಲ” ಎನ್ನುತ್ತಲೇ ದೆಶವನ್ನಾಳುವ ಚಕ್ರವರ್ತಿ ಹೇಗಿರಬೇಕು ಎಂದು ಮಾರ್ಮಿಕವಾಗಿ ಹೇಳುತ್ತಾನೆ “ನಾದಿರ್ ಷಾ” ನ ‘ಸನ್ನಿ’ಯನ್ನು ವಾಸಿ ಮಾಡಲು ಬಂದ ವಯೋವೃದ್ಧ ವೈದ್ಯನಾದ ಅಲಾವೀಖಾನ್.

ಇಂಥ ಹಲವಾರು ಹರಿತ ಮತ್ತು ಅರ್ಥಗರ್ಭಿತ ಡೈಲಾಗ್ ಗಳು ಇಡೀ ಗುಣಮುಖ ನಾಟಕದುದ್ದಕ್ಕೂ ಇವೆ. ಅವುಗಳನ್ನು ಅಷ್ಟೇ ಪರಿಣಾಮಕಾರಿಯಾಗಿ ರಂಗದ ಮೇಲೆ ತರುವುದು ಸವಾಲಿನ ಕೆಲಸವೇ. ‘ ರಂಗಧರ್ಮ’ ತಂಡದವರು ತಕ್ಕಮಟ್ಟಿಗೆ ಈ ಸವಾಲಿನ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದರೆಂದೇ ಹೇಳಬಹುದು.

pradeep-tipturಪ್ರದೀಪ್ ತಿಪಟೂರು ನಿರ್ದೇಶನದ ಈ ನಾಟಕ ಪ್ರೇಕ್ಷಕರನ್ನು ರಂಜಿಸುವ ಜೊತೆಗೆ ಆಲೋಚನೆಗೂ ಎಡೆಮಾಡಿಕೊಡುತ್ತದೆ.

ಪರ್ಷಿಯನ್ ದೊರೆ ನಾದಿರ್ ಷಾ ದಿಲ್ಲಿಯಲ್ಲಿ ಮಾಡುವ ಹುಚ್ಚಾಟಗಳು, ಅವನ ಕೊಳ್ಳೆ ಹೊಡೆಯುವ ದಾಹ, ಸ್ತ್ರೀ-ಸಂಗ, ತಿಕ್ಕಲುತನ, ರಾಜಕೀಯ ನಿರ್ಧಾರಗಳು ಮತ್ತವನ ಖಾಯಿಲೆ ಸುತ್ತ ಈ ನಾಟಕ ನಡೆಯುತ್ತದೆ. ತನಗೆ ಬರಬೇಕಾದ ಹಣವನ್ನು ಸಮಯಕ್ಕೆ ಸರಿಯಾಗಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಾದತ್ ಕಾನ್  ಮತ್ತು ಮುಲ್ಕ್ ಎಂಬ ದಿವಾನರನ್ನು ಕೊಲ್ಲುವ ನಾದಿರ್, ತನಗೆ ರೋಗ ಹೆಚ್ಚಾಗಿದ್ದು ಅದನ್ನು ಗುಣಪಡಿಸಲು ಒಬ್ಬ ನುರಿತ ವೈದ್ಯನನ್ನು ನೇಮಿಸುವಂತೆ ದಿಲ್ಲಿಯ ದೊರೆ  ನಜರುದ್ದೀನ್ ಷಾ ಗೆ ತಾಕೀತು ಮಾಡುತ್ತಾನೆ. ಅದರಂತೆ ಅಲಾವೀ ಖಾನ್ ಎಂಬ ಸಾತ್ವಿಕ ಹಕೀಮ ಬರುತ್ತಾನೆ. ಇಡೀ ನಾಟಕದ ಜೀವಾಳವೇ ಆ ದೃಶ್ಯ.

ಆರಂಭದಲ್ಲಿ ಅಲಾವೀ ಖಾನ್ ನೊಂದಿಗೆ ತನ್ನ ಮೊಂಡುತನ, ಒರಟುತನಗಳನ್ನು ಪ್ರದರ್ಶಿಸುವ ನಾದಿರ್, “ನಾನು ಯಾರೆಂದು ಗೊತ್ತಿಲ್ಲದ ನೀನೆಂಥ ತಲೆತಿರುಕ? ನಾನು ಚಕ್ರವರ್ತಿ ನಾದಿರ್” ಎನ್ನುತ್ತಾನೆ. ಅದಕ್ಕೆ ಅಲಾವೀ ಖಾನ್ “ನಮ್ಮ ಈ ಕ್ಷಣದ ಸಂಬಂಧವನ್ನು ಮೊದಲು ಸ್ಪಷ್ಟಪಡಿಸಿಕೊ್ಳ್ಳೋಣ. ನೀನು ರೋಗಿ ಮತ್ತು ನಾನು ನಿನಗೆ ಚಿಕಿತ್ಸೆ ನೀಡಲು ಬಂದ ವೈದ್ಯ.” ಎನ್ನುವ ಮಾತನ್ನು ನಮ್ಮ ಬಹಳಷ್ಟು ನಾಯಕರಿಗೆ, ಅಧಿಕಾರಿಗಳಿಗೆ, ಮಂತ್ರಿ ಮಹೋದಯರಿಗೆ ಅರ್ಥೈಸಬೇಕಿದೆ.

ಒಂದು ಫೋನ್ ಕಾಲ್ ಮಾಡಿ ಯಾವುದೇ ಸ್ಥಳದಿಂದ ತಮ್ಮ ಕೆಲಸವಾಗಬೆಕೆಂಬ ಫರ್ಮಾನು ಹೊರಡಿಸುವವರಿಗೆ ಇದು ತಿಳಿಯಬೇಕು. ಮಾಡಿದ ಅನಾಚಾರಕ್ಕಾಗಿ ( ಅದು ಕೊಲೆಯಂಥ ಅಪರಾಧವೇ ಆದರೂ) ವಿಚಾರಣೆಗೆ ಹಾಜರಾಗುವ ರಾಜಕಾರಣಿಗಳು, ಮಠಾಧಿಪತಿಗಳು ಅಥವಾ ಸೆಲೆಬ್ರಿಟಿಗಳ ಬಗ್ಗೆ ನಮ್ಮ ಮೀಡಿಯಾಗಳು ಉಪಯೋಗಿಸುವ ಒಂದು ವಾಕ್ಯದಲ್ಲಿರುವ ತಮಾಷೆಯನ್ನು ಇಲ್ಲಿ ಸ್ಮರಿಸಬಹುದು. “ಪೋಲೀಸರೊಂದಿಗಿನ ಅಥವಾ CID, CIB ನೊಂದಿಗೆ ಶ್ರೀಯುತರು ವಿಚಾರಣೆಗೆ ಸ್ಪಂದಿಸುತ್ತಿದ್ದಾರೆ ಅಥವಾ ಸಹಕರಿಸುತ್ತಿದ್ದಾರೆ.”

ಈ ವಾಕ್ಯದಲ್ಲಿ ಅವರಂಥ ಅವರೂ ತಮ್ಮ ಸ್ಥಾನದ ಘನತೆಯನ್ನು ಮರೆತು ಮಾಮೂಲು ವ್ಯಕ್ತಿಯಂತೆ ಸಹಕರಿಸಿದರು ಎಂದಾಗುತ್ತದೆ. ಆದರೆ ಆ ಕ್ಷಣಕ್ಕೆ ಅವರ ನಡುವಿನ ಸಂಬಂಧ “ಅಪರಾಧಿ- ಅಧಿಕಾರಿ” ಯದು ಎಂಬುದನ್ನು ಅರಿಯದಂತ ಮುಠ್ಠಾಳರಿವರು.

ಇಂಥ ಸಾವಿರಾರು ಉದಾಹರಣೆ ಸಿಕ್ಕಾವು. ತನ್ನ ತಂದೆ ಓರ್ವ ಕೂಲಿಯಾಗಿದ್ದ ಕಾರಣಕ್ಕೆ ಅವನ ಹೆಸರು ಹೇಳಲು ನಾದಿರ್ ನಿರಾಕರಿಸಿದಾಗ , ಅಲಾವೀ ಖಾನ್ ಹೇಳುವ “ಓ ಅಲ್ಲಾಹ್! ಮನುಷ್ಯನನ್ನು ಯಾಕಿಷ್ಟು ಸಂಕೀರ್ಣವಾಗಿಸಿದೆ ? ಭೂಮಿಯನ್ನು ಮರೆಯುವ, ತಾಯಿಯನ್ನು ನಿರ್ಲಕ್ಷಿಸುವ ಮನುಷ್ಯ, ತಂದೆಯ ಹೆಸರು ಹೇಳಲು ನಾಚುವ ಮನುಷ್ಯ, ಇವನ ಕೀಳರಿಮೆಗೆ, ಆತ್ಮವಂಚನೆಗೆ ಕೊನೆಯೇ ಇಲ್ಲವೇ?” ಎನ್ನುವ ಮಾತು ಭೂತಾಯಿ ಮತ್ತು ಹೆತ್ತ ತಾಯಿಯನ್ನು ನಗರ ಸೇರಿ ಎನೋ ದೊಡ್ಡದು ಸಾಧಿಸಿಬಿಟ್ಟಂತೆ ಪೋಷಕರನ್ನು ನಿರ್ಲಿಕ್ಷಿಸುವ ಬಹಳ ಜನರಿಗೆ ಕಪಾಳಮೋಕ್ಷ ಮಾಡುವಂತಿದೆ.
“ಕಿವುಡ ನೀನು. ಮಂಚಕ್ಕೆ ಕರೆದುಕೊಳ್ಳುವ ಯಾವ ಹೆಣ್ಣು? ಅವಳ ಹೆಸರೇನು ಎಂದ ಕೇಳದ ಮೂರ್ಖ. ಮೊಗಲ್ ದೊರೆ ರೇಷ್ಮೆ ಗೊಂಬೆಗಳನ್ನು ಕಳಿಸಿದ್ದರೂ ಸಂಭೋಗಿಸುತ್ತಿದ್ದೆ” ಎಂದು ಅಲಾವೀ ಖಾನ್ ಹೇಳುತ್ತಿದ್ದರೆ, ನಾದಿರ್ ನಿಧಾನಕ್ಕೆ ತನ್ನ ಅಹಂಕಾರ ಮತ್ತು ಕೊಲೆಪಾತಕತನವನ್ನು ಅಲಾವೀಖಾನ್ ನ ಋಜುತ್ವ ಮತ್ತು ವೈದ್ಯಕೀಯದಲ್ಲಿ ಕರಗಿಸಿಕೊಳ್ಳತೊಡಗಿತ್ತಾನೆ.

gunamukhaಇನ್ನು ರಜ್ವಿ, ನಾದಿರ್ ನ ಬಾಲಬಡಕನಂತೆ ಭಾಸವಾಗುತ್ತ ಅವನಂತೆಯೇ ಆಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾನೆ. ಆದರೆ ಸುಲೇಮಾನ್ ತನ್ವೀರ್ ಮಾತ್ರ ದೊರೆಗೂ ಮೀರಿದ ಮೃಗತ್ವವನ್ನು ಮೈಗೂಡಿಸಿಕೊಂಡು, ರಕ್ತಕ್ಕಾಗಿ ಹಾತೊರೆಯುತ್ತಾನೆ. ಆ ಪಾತ್ರಧಾರಿ ಇದನ್ನು ತುಂಬಾ ಚೆನ್ನಾಗಿ ಅಭಿನಯಿಸಿದರೂ ಕೂಡ. Congrats for that.

ಕೊನೆಗೆ ನಾದಿರ್ ನನ್ನು ಅಲಾವೀಖಾನ್ ಗುಣಮುಖ ಮಾಡಲು ಸಶಕ್ತನಾದನೋ ಇಲ್ಲವೋ ಎಂಬುದು ಸುಲಭವಾಗಿ ಬಗೆಹರಿಯುವುದಿಲ್ಲ. ‘ಕೋಹಿನೂರ್ ವಜ್ರ ಮತ್ತು ಮಯೂರ ಸಿಂಹಾಸನವನ್ನು ನಾನು ಹೊತ್ತೊಯ್ಯಲೋ ಅಥವಾ ಅವು ಇಲ್ಲೇ ಇರಲೋ? ನಾನು ಪರ್ಷಿಯಾ ಕ್ಕೆ ಹೊರಟು ಹೋಗಲೋ ಅಥವಾ ಭಾರತದಲ್ಲಿಯೇ ಇರಲೇ? ‘ ಎಂಬ ನಾದಿರ್ ಷಾ ನ ಪ್ರಶ್ನೆ ಗೆ ಅಲಾವೀ ಖಾನ್ “ನಿಮ್ಮ ರಾಜಕೀಯ ನನಗೆ ಅರ್ಥ ವಾಗಲ್ಲ. ನಾನು ದೇಶಕ್ಕೆ ಮದ್ದು ಕೊಡುವ ಹಕೀಮನಲ್ಲ ದೇಹಕ್ಕೆ ಮಾತ್ರ ” ಎಂದು ಹೇಳುತ್ತಾನಾದರೂ ನಾದಿರ್ ಗೆ ಈ ವಿಷಯದಲ್ಲಿ ತೆಗೆದುಕೊಳ್ಳಬಹುದಾದ ನಿರ್ಧಾರಕ್ಕೆ ಅಲಾವೀಖಾನ್ ನೊಂದಿಗಿನ ಸಂಭಾಷಣೆಯಲ್ಲೇ ಉತ್ತರ ಸಿಕ್ಕಿರಲಿಕ್ಕೂ ಸಾಕು.

ಹಾಗಾಗಿಯೇ ಹೇಳಿದ್ದು ಇಂತಹ “METAPHYSICAL PHYSICIAN” ಗಳು ನಮ್ಮ ಪ್ರಧಾನ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ, ಮಂತ್ರಿಗಳಿಗೆ, ಸೆಲೆಬ್ರೆಟಿಗಳಿಗೆ, ಅವಶ್ಯವಾಗಿದ್ದಾರೆ. ಆಗ ಮಾತ್ರ ನಾವು ದೇಶ ಎಂದರೆ ಜನ ಎಂದು ಭಾವಿಸುವ, ಜನರ ನಾಡಿ ಮಿಡಿತ ಹಿಡಿಯಬಲ್ಲ, ಚರ್ಕವರ್ತಿಯ ಸಾಮಾನ್ಯತೆ ಮತ್ತು ಸಾಮಾನ್ಯನ ಘನತೆಯನ್ನು ಎತ್ತಿಹಿಡಿಯಬಲ್ಲ ನಾಯಕರನ್ನು ಈ ದೇಶದಲ್ಲಿ ಕಾಣಬಹುದೇನೋ…..

ರಂಗಸಜ್ಜಿಕೆ ಗಮನಸೆಳೆಯುವಂತೆ ಇತ್ತು. ಎಲ್ಲ ಪಾತ್ರಗಳು ರಂಗದ ಮೇಲೆ ಕೂತು ತಮ್ಮ ಸಮಯಕ್ಕೆ ಎದ್ದು ಬಂದು ಅಭಿನಯಿಸುವಂತೆ ಮಾಡಿದ್ದರಿಂದ ಆಗಾಗ ಅವರ ಮೇಲೆ ಕಣ್ಣು ನಾಟುತ್ತಿತ್ತು. ನಾದಿರ್ ನ ಪಾತ್ರಧಾರಿಯು ವಿಶೇಷವಾಗಿ ಅಭಿನಯಿಸಲು ಯತ್ನಿಸಿದರು. ಆದರೆ ನರಳಾಟ ನಾಟಕದುದ್ದಕ್ಕೂ ಇದ್ದದ್ದರಿಂದ ಅಷ್ಟೊಂದು ಅವಶ್ಯಕತೆ ಇತ್ತಾ ಅಥವಾ ಅದನ್ನು ಬೇರೆ ಹೇಗಾದರೂ ತೋರಿಸಬಹುದಾ ಯೋಚಿಸಿದರೆ ಒಳಿತು.

ಏಕೆಂದರೆ ಕೆಲ ಸಂಭಾಷಣೆಗಳು ತೀರ ಮಾಮೂಲಿನಂತೆ ಬಂದು ಬಿಟ್ಟವು. ಉದಾ : ಹುಳ ಆಡುವುದನ್ನು ಗಮನಿಸಿ ಎಂಬ ಡೈಲಾಗ್. ಉಳಿದಂತೆ ಅವರ ಅಭಿನಯ ಅಭಿನಂದನಾರ್ಹ. ಅಲಾವಿಖಾನ್ ಅವರ ಸಂಭಾಷಣೆ ನಿಖರವಾಗಿ ಪಾತ್ರಕ್ಕೆ ತಕ್ಕಂತೆ ಇತ್ತು. ಅಭಿನಯವೂ ಓಕೆ. ಆದರೆ ಇನ್ನಷ್ಟು ಸೌಮ್ಯತೆ ಅವರ ಅಭಿನಯಕ್ಕೆ ಬೆರೆತರೆ, ನಾದಿರ್ ನ ಎದುರು ಆ ಪಾತ್ರ ಇನ್ನೂ ಗಟ್ಟಿಯಾಗುತ್ತದೆ.

ರಜ್ವಿ ಪಾತ್ರಧಾರಿ ಕರಾರುವಕ್ಕಾಗಿ ಅಭಿನಯಿಸಿದರಾದರೂ ನೀಟಾಗಿ ಬಾಚಿದ್ದ ಅವರ ಕ್ರಾಪು ಯಾಕೋ ಪಾತ್ರದೊಂದಿಗೆ ತಾಳೆಯಾಗುತ್ತಿರಲಿಲ್ಲ.ಆದರೆ ಅವರ ಡೈಲಾಗ್ ಡೆಲಿವರಿ ಮತ್ತು ಪ್ರಖರತೆ ಇಷ್ಟವಾಯ್ತು. ತನ್ವೀರ್ ಸೂಪರ್… ಆಫ್ಜಲ್ ತನ್ನ ವಿಶೇಷ ಮ್ಯಾನರಿಸಂ ನಿಂದ ಆಕರ್ಷಿಸಿದರೆ, ಮುಲ್ಕ್ ಪಾತ್ರಧಾರಿ ಪಾತ್ರಕ್ಕೆ ತಕ್ಕುದಾದ ಅಭಿನಯ ನೀಡಿದರು.

ಆದರೆ ನಜರುದ್ದೀನ್ ಷಾ ಪಾತ್ರದ ಕಲ್ಪನೆ ನನಗೆ ಕೊಂಚ ಗೊಂದಲವಾಯಿತು. ಆತ ಕೊಂಚ ಹುಂಬ, ಪುಕ್ಕಲ, ಹೊಣೆಗೇಡಿ ಎಂಬುದಾಗಿ ನಾಟಕದಲ್ಲಿ ಇದೆ. ಆದರೆ ಆತನ ಆಂಗಿಕ ಅಭಿನಯವನ್ನು ‘ ಖೋಜಾ’ ರೀತಿಯಲ್ಲಿ ತೋರಿಸಿದ್ದು ಸ್ವಲ್ಪ ಕಿರಿಕಿರಿಯಾಯ್ತು.

gunamukha-showಅವನ ಕೈಯಲ್ಲಿರುವ ಹೂವನ್ನು ಮಾತ್ರ ಬಳಸಿ ಅದನ್ನು ಸಾಂಕೇತಿಕವಾಗಿ ಅಭಿನಯಿಸಿದ್ದರೆ ಸಾಕಿತ್ತೇನೊ ಎಂಬುದು ನನ್ನ ಅಭಿಪ್ರಾಯ ಅಷ್ಟೇ. ಅದನ್ನು ತಿರಸ್ಕರಿಸುವ ಅಧಿಕಾರ ಅವರಿಗಿದೆ. ಬೆಳಕು ಸಮಯೋಚಿತವಾಗಿತ್ತು. ಹಿನ್ನೆಲೆ ಸಂಗೀತದ ಕೊರತೆಯಿರುವಂತೆ ಕಾಣಿಸಿತು. ಒಟ್ಟಿನಲ್ಲಿ ಹೊಸಬರೆಲ್ಲ ಸೇರಿ ಒಂದು ಒಳ್ಳೆಯ ನಾಟಕವನ್ನೇ ಪ್ರದರ್ಶಿಸಿದರು ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನಷ್ಟು ನಾಟಕ ಆಡುವ ಹುಮ್ಮಸ್ಸು ಇವರಿಗೆ ಪ್ರಾಪ್ತಿಯಾಗಲಿ ಎಂದು ಆಶಿಸುತ್ತೇನೆ.

ಒಂದು ಅರಿಕೆ :

ದಯಮಾಡಿ ಯಾವುದೇ ರಂಗತಂಡ ಇಲ್ಲಿ ನಾಟಕ ಮಾಡಿದರೂ ನಾಟಕದ ಬಗ್ಗೆ ಪ್ರಾರಂಭದ ಮುನ್ನ ಒಂದೆರೆಡು ಪೀಠಿಕೆಯ ಮಾತುಗಳನ್ನು ಹೇಳಿ ನಾಟಕ ಶುರು ಮಾಡಿ..ಯಾಕೆಂದರೆ ನೀವು ಪ್ರದರ್ಶಿಸುವ ನಾಟಕಕ್ಕೆ ಪ್ರೇಕ್ಷಕನನ್ನು ಇದು ಮಾನಸಿಕವಾಗಿ ಸಿದ್ಧಗೊಳಿಸುತ್ತದೆ.ಇಲ್ಲವಾದಲ್ಲಿ ಅರ್ಧ ತಾಸು ನಾಟಕ ಮುಗಿದರೂ ಕೆಲವರಿಗೆ ಏನೆಂದು ತಲೆಬುಡ ತಿಳಿಯುವುದಿಲ್ಲ..ಮುಂದಿನ ನಾಟಕಕ್ಕೆ ಅಂತ ಹೊಸ ಪ್ರೇಕ್ಷಕನನ್ನು ನೀವು ಕಳೆದುಕೊಂಡುಬಿಡುತ್ತೀರಿ ಎಂಬ ಕಾಳಜಿಯಿಂದ ಇದನ್ನು ಇಲ್ಲಿ ಹೇಳಿದ್ದೇನೆ.

ನಿಮ್ಮ ಪ್ರೀತಿಯ ಪ್ರೇಕ್ಷಕ,

 

Add Comment

Leave a Reply