Quantcast

ಎರಡು ಹಾಡುಗಳ ನಡುವೆ ‘ಅವಳು’

manjunath_kamathಮಂಜುನಾಥ್ ಕಾಮತ್

“ನಿಜವಾಗಿಯೂ ಕಲಿಸ್ತೀರಾ ?”
ಹೌದಮ್ಮ ನಿಜವಾಗಿಯೂ ಕಲಿಸ್ತೇನೆ.

“ಮನೆಯಲ್ಲಿ ಬಯ್ಯಲ್ವ ನಿಮಗೆ ?”
ಇಲ್ಲನ. ಮನೆಯಲ್ಲಿ ನನಗೆ ಯಾವುದಕ್ಕೂ ಬೇಡ ಅನ್ನಲ್ಲ.

“ಯೂ ಆರ್  ರಿಯಲೀ ಗ್ರೇಟ್”
ಅದ್ರಲ್ಲೇನು ಗ್ರೇಟು ? ನನ್ನ ಮಗಳಿಗೆ ಕಲಿಸಬೇಕು ಅಂತ ಕನಸಿದ್ದೆಲ್ಲವನ್ನೂ ಹೆಂಡತಿಗೇ ಕಲಿಸುವ ಅವಕಾಶ ಸಿಗುತ್ತಿದೆಯಲ್ವ, ಅದ್ಕೆ ಖುಷಿ ಆಗ್ತಿದೆ.

tundu-hyklu“ನಿಮಗೆ ಕಷ್ಟ ಆಗಲ್ವಾ?”
ಕಷ್ಟಪಡದೆ ಇಷ್ಟ ಸಿಗುತ್ತಾ. ನೀನು ನನ್ನ ಜೊತೆಗಿರ್ತೀಯಲ್ವಾ ಅಷ್ಟು ಸಾಕು. ಐ.ಎ.ಎಸ್ ಆಗೋವರೆಗೆ ನಾನು ನಿನ್ನನ್ನು ಸಾಕ್ತೇನೆ. ಆಮೇಲೆ ನೀನು ನಮ್ಮನ್ನು ಸಾಕು. ನಾನು ಮನೆಯಲ್ಲಿ ಮಗು, ಅಪ್ಪ ಅಮ್ಮನ್ನ ನೋಡ್ಕೊಂಡು, ಕಥೆ ಕಾದಂಬರಿ ಬರೀತಿರ್ತೀನಿ. ಅದೇ ನನಗಿಷ್ಟ.

“ಓಕೆ, ಡನ್. ನಮ್ಮನೆಯವ್ರು ಒಪ್ಬೇಕು.”
ನೀನು ನನ್ನ ಒಪ್ಕೋತೀಯಲ್ವಾ. ಅವ್ರನ್ನ ನಾನು ಒಪ್ಪಿಸ್ತೇನೆ. ಖುಷಿ ಖುಶಿಯಿಂದ ಮದುವೆ ಮಾಡಿಸಿಕೊಳ್ತೇನೆ. ಆಯ್ತಾ.

“ಥ್ಯಾಂಕ್ಯು”
ಸ್ಟುಪಿಡ್…ಥ್ಯಾಂಕ್ಸ್ ಎಲ್ಲ ಹೇಳಿದ್ರೆ ಸರಿ ಇರಲ್ಲ ನೋಡು.

“ಈಗ್ಲೇ ಬಯ್ಯೋಕೆ ಶುರೂನ. ನಿಲ್ಲಿ ನಾನೂ ನೋಡ್ಕೋತೇನೆ” ಅಂದವಳು ಮದುವೆಯ ಕನಸಿನ ಗೋಪುರವನ್ನೇ ಕಟ್ಟಿಸಿಬಿಟ್ಟಳು. ಆದರಿದು ಮರುದಿನವೇ ಕುಸಿಯಲಿತ್ತು.

“ನಿಮ್ಮ ನಂಬಿಕೆಗೆ ಅರ್ಹವ್ಯಕ್ತಿ ನಾನಲ್ಲ. ನನ್ನ ಮರ್ತುಬಿಡಿ”.

bagಅವಳು ಹಾಗಂದು ಇಪ್ಪತ್ತು ದಿನಗಳೇ ಕಳೆದಿತ್ತು. ಮಾತಿಲ್ಲ, ಕಥೆಯಿಲ್ಲ. ಹಲವಾರು ಪ್ರಯತ್ನಗಳನ್ನು ಮಾಡಿದೆ. ಬೇರೆಯವರಿಂದ ಮಾತಾಡಿಸಿದೆ. ಪ್ರಯೋಜನವಾಗಲಿಲ್ಲ. ಮೇಲಿಂದ ಮೇಲೆ ಒತ್ತಡ ಹಾಕೋದು ಸರಿಯಲ್ಲ, ಹಠದಿಂದ ಪ್ರೀತಿಯನ್ನು ಗೆಲ್ಲಬಾರದು.

ಹಾಗೆಂದು ಸುಮ್ಮನಾಗಿದ್ದೆ. ಒಂಟಿ ಮನಸ್ಸಿಗೆ ಜಯಂತ್ ಕಾಯ್ಕಿಣಿಯವರ ಈ ಹಾಡು ಬಹಳವೇ ಆಪ್ತವಾಯ್ತು. ಅದು ನನ್ನದೇ ಆಯ್ತು.

ಬೀಸೊ ಗಾಳೀ ಜೊತೆ  ಬೀದಿ ದೀಪಗಳು
ಮಾತನಾಡುತಿರುವಾಗ…
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ…
ಏಕಾಂಗಿ ನಾನು ಏಕಾಂಗಿ.

ಅವಳ ಸುದ್ಧಿಯೇ ಇರಲಿಲ್ಲ. ಆ ಸಂಕಟ ಯಾರಿಗೆ ಬೇಕು. ಅವಳು ಆ ದಿನ ಒಪ್ಪಿ, ಮರುದಿನವೇ ಬೇಡವೆಂದ ಮಾತುಗಳೇ ನೆನಪಾಗಿ, ಕಣ್ಣೀರಾಗುತ್ತಿದ್ದರು. ಮೊದಲೇ ಆಗುವುದಿಲ್ಲ ಅಂದಿದ್ದರೆ ಇಷ್ಟೆಲ್ಲ ಕಾಡುತ್ತಿರಲಿಲ್ಲವೇನೋ. ಒಮ್ಮೆ ಒಪ್ಪಿ, ಮರು ದಿನವೇ ಬೇಡವೆಂದ ಆಘಾತ ಇಪ್ಪತ್ತು ದಿನ ಕಳೆದರೂ ಮರೆಯಲು ಆಗಲಿಲ್ಲ. ಆ ಎರಡು ದಿನಗಳು ಪರಸ್ಪರ ಮಾತನಾಡಿದ್ದ ಮಾತುಗಳ ನೆನಪುಗಳನ್ನೇ ಮೇಲಿನ ಅಕ್ಷರವಾಗಿಸಿದೆ. ಕೊನೆಯ ಮಾತು ಎಂಬಂತೆ ನನ್ನ ಏಕಾಂಗಿತನವನ್ನು ಅವಳ ವಾಟ್ಸಪ್ಪಿಗೆ ಕಳುಹಿಸಿದೆ. ಸುಮ್ಮನಾದೆ. ನಿರಾಳನಾದೆ. ಕಾಯುವುದನ್ನೇ ಬಿಟ್ಟುಬಿಟ್ಟೆ.

ಆದರೆ ಆಕೆ ಬಿಡಲಿಲ್ಲ. ಮರುದಿನ ಪ್ರತಿಕ್ರಿಯೆ ಬಂತು.

“ಏಕಾಂಗಿ ಅಂತ ಯಾಕೆ ಹೇಳ್ತೀರಾ ? ಇಷ್ಟು ದಿನ ಯಾಕೆ ಮಾತಾಡಿಲ್ಲ ನೀವು ?” ಎಂದ ಬೈಗುಳದಲ್ಲಿ ಪ್ರೀತಿಯನ್ನು ಕಂಡುಕೊಂಡು ಮರು ಮಾತನಾಡದೆ ಅವಳನ್ನು ನನ್ನವಳನ್ನಾಗಿ ಹಚ್ಚಿಕೊಳ್ಳುತ್ತಾ ಬಂದೆ.

ಜೋಡಿ ಹಕ್ಕಿಗಳಿಗೆ ತಮ್ಮಿಬ್ಬರ ಹುಟ್ಟು ಹಬ್ಬ ನಿಜಕ್ಕೂ ಸವಾಲು. ಹೇಗೆ ವಿಶೇಷವಾಗಬೇಕು ? ಸಸ್ಪೆನ್ಸು, ಸರ್ಪ್ರೈಸುಗಳು. ಪರಸ್ಪರ ಮತ್ತಷ್ಟು ಹತ್ತಿರವಾಗೋಕೆ ಆ ದಿನ ಬಹಳವೇ ಉಪಕಾರಿ.  ನನ್ನ ಹುಡುಗಿಯ ಜನ್ಮ ದಿನಕ್ಕೂ  ಏನಾದರೂ ಸರ್ಪ್ರೈಸ್ ಕೊಡಬೇಕು. ಏನು ಕೊಡಲಿ?

ಮೊದಲ ಗಿಫ್ಟು. ಸೀರೆ ಕೊಂಡರೆ ಹೇಗೆ?

keybunchಬಟ್ಟೆ ಖರೀದಿಯಲ್ಲಿ ನಾನು ಬಹಳ ಹಿಂದೆ. ನನ್ನ ಬಟ್ಟೆಯ ಆಯ್ಕೆಯೂ ನನ್ನ ಸ್ನೇಹಿತರದ್ದು. ಉಡುಪಿಯ ಕ್ಲಾಸಿಕ್ ಟಚ್ ನ ಗಿರಾಕಿಗಳು ನಾವು. ಪ್ಯಾಂಟು ಶರ್ಟು ಗಳ ಅಳತೆಯೊಂದನ್ನು ಕೊಟ್ಟು ಇಷ್ಟು ಜೋಡಿ ಅಂತಂದು ಎದುರಿಗಿರುವ ಸ್ಟೂಲಿನಲ್ಲಿ ಕೂತು ಬಿಡುವುದು ನನ್ನ ಅಭ್ಯಾಸ. ಪದ್ಮನಾಭ, ಮಂಜು ಕಲ್ಪಾಲು ಅಥವಾ ಸುಚಿತ್ ಆಯ್ಕೆ ಮಾಡಿ ಬಟ್ಟೆಗಳನ್ನು ನನ್ನ ಎದುರಿಗಿಡುತ್ತಾರೆ. ಅವನ್ನೇ ಹೊಲಿಸಿಬಿಡಿ ಎಂದು ಹೇಳವುದಷ್ಟೇ ನನ್ನ ಕೆಲಸ. ನನ್ನದನ್ನೇ ಆಯ್ಕೆ ಮಾಡೋಕೆ ಬಾರದವನಿಂದ ಸೀರೆ ಸೆಲೆಕ್ಷನ್ ಸಾಧ್ಯವೇ.

ಕೊನೆಗೆ ನನ್ನ ಈ ಆತ್ಮೀಯ ಸ್ನೇಹಿತೆಯೊಬ್ಬರು ನನಗೆ ಸಹಾಯ ಮಾಡಲು ಮುಂದೆ ಬಂದರು. ಸೀರೆಯ ಆಯ್ಕೆಯ ಜವಾಬ್ದಾರಿ ವಹಿಸಿಕೊಂಡರು. ಅದೇ ಮದ್ಯಾಹ್ನ ಕಲ್ಸಂಕದ ಬಳಿ ಇರೋ ಕುಲ್ಯಾಡಿಕಾರ್ಸ್ ನಿಂದ ಸೀರೆಯೊಂದನ್ನು ಕೊಂಡು ತಂದರು. ಅಬ್ಬ. ದೊಡ್ಡ ಕೆಲಸ. ಮುಗೀತು.

ಇನ್ನು ಮೂರನೇ ದಿನಕ್ಕೆ ಅವಳ ಜನುಮ ದಿನ. ಸೋಮವಾರ. ನಾಳೆ ಅಲ್ಲ ನಾಡಿದ್ದು, ಭಾನುವಾರ ರಾತ್ರಿ 12 ಗಂಟೆಗೆ  ತಲುಪಬೇಕು. ಒಂದಷ್ಟೂ ಸುಳಿವಿಲ್ಲದೆ ಅವಳಿಗೆ ಸರ್ಪ್ರೈಸ್ ಕೊಡಬೇಕು. ಅದ್ರಲ್ಲೇ ಇರೋದಲ್ವೇ ಮಜಾ.

ಅಂದ ಹಾಗೆ ಆ ನನ್ನ ಹುಡುಗಿ ಇದ್ದಿದ್ದು ಮೈಸೂರಿನಲ್ಲಿ. ಖಾಸಗಿ ಕಂಪನಿಯೊಂದರಲ್ಲಿ ಟ್ರೈನಿಂಗ್ ಪಡೆಯುತ್ತಿದ್ದಳು. ಮೂರು ತಿಂಗಳು ಕಂಪನಿಯ ಗೆಸ್ಟ್ ಹೌಸ್ ನಲ್ಲೇ ವಾಸ್ತವ್ಯ. ಕೊರಿಯರ್ ಮಾಡೋಣ ಅಂದಾಗ ಸುಚಿತ್ ಬೇಡ ಅಂದ. ಹಾಗಾಗಿ ಉಡುಪಿಯ ಪೋಸ್ಟಾಫೀಸಿಗೆ ಓಡಿದೆವು.

ಸೀರೆ ಖರೀದಿಸುವುದೇ ದೊಡ್ಡ ಕೆಲಸ. ಅದು ಸುಲಭದಲ್ಲೇ ಮುಗೀತು ಅಂತ ಬೀಗುತ್ತಿದ್ದ ಮನಸ್ಸಿಗೆ ಅದನ್ನೀಗ ಕಳಿಸುವ ದೊಡ್ಡ ಕೆಲಸದ ಬಗ್ಗೆ ಅರಿವು ಇದ್ದಂತೆಯೇ ಇರಲಿಲ್ಲ.

“ತಲುಪೋದು ಸೋಮವಾರವ. ಬೇರೆ ಉಪಾಯವೇ ಇಲ್ಲ” ಪ್ರೈವೇಟ್ ಕೊರಿಯರ್ ನ ರಿಸ್ಕ್ ಗೆ ಹೆದರಿ ಸರಕಾರಿ ಅಂಚೆಯ ದಾರಿ ಹಿಡಿದದ್ದು. ಆದರೆ ವ್ಯವಸ್ಥೆ ಅದೆಷ್ಟೇ ಸ್ಪೀಡ್ ಇದ್ದರೂ ಮೈಸೂರಿಗದು ಮುಟ್ಟುವುದು ಸೋಮವಾರವೇ ಅಂದಾಗ ಮನಸ್ಸು ಮುದುಡಿ ಹೋಯ್ತು. ಇನ್ನೇನು ಮಾಡೋದು, ಸೋಮವಾರವಾದ್ರೂ ತಲುಪುತ್ತಲ್ಲ. ಸರಿ, ತೂಗಿ ಎಷ್ಟಾಗುತ್ತೆ ಹೇಳಿ ಅಂತ ಒಳಗಿದ್ದವರ ಕೈಗೆ ಕೊಟ್ಟೆ.

ಅದೇ ಹೊತ್ತಿಗೆ ಸುಧೀರಣ್ಣನ ಫೋನು. ಬೇಸರದಿಂದಲೇ ವಿಷಯ ಹೇಳಿದಾಗ, “ಎಂಥ ರಿಸ್ಕ್ ಮಾರಾಯ. ಪ್ರೊಫೆಷನಲ್ ಕೊರಿಯರ್ ಮೂಲಕ ಕಳುಹಿಸು. ನಾಳೆಯೇ ಮೈಸೂರು ತಲುಪುತ್ತೆ” ಅಂದಾಗ ಮತ್ತೆ ಮುಖ ಅರಳಿ, ತೂಗಲು ಕೊಟ್ಟ ಪ್ಯಾಕೇಟನ್ನು ಹಿಂಪಡೆದು ಕೊರಿಯರ್ ಆಫೀಸಿನ ಕಡೆಗೆ ಓಡಿದೆವು.

“ನಾಳೆಯೇ ತಲುಪುತ್ತೆ. ಆದ್ರೆ ರೂ. 260 ಆಗುತ್ತೆ”. ಅಯ್ಯೋ ಆಗ್ಲಿ ಬಿಡಿ. ಹುಡುಗಿಗೆ ಕೊಡ್ತಿರೋ ಮೊದಲ ಗಿಫ್ಟು. ಸರಿಯಾದ ಸಮಯಕ್ಕೆ ಸೇರಬೇಕಷ್ಟೇ. “From ಅಡ್ರೆಸ್ಸೇ ಬರೆದಿಲ್ಲ, ಬರ್ದು ಕೊಡಿ” ಅಂದು ಕೊರಿಯರಿನ ಹುಡುಗಿ ಪ್ಯಾಕೆಟ್ ವಾಪಾಸುಕೊಟ್ಟರು. ಪಕ್ಕಾ ಪ್ರೊಫೆಷನಲ್ಲು.

ಅದರಲ್ಲಿರೋ To ಅಡ್ರೆಸ್ಸು ನನ್ನ ಹುಡುಗಿಯ ಹೆಸರಿರಲ್ಲಿರಲಿಲ್ಲ. ಅವಳ ಜೊತೆಗಿರೋ, ನನಗೂ ಪರಿಚಯವಿರೋ ಸ್ನೇಹಿತೆಯ ಹೆಸರಿಗೆ ಬರೆದಿದ್ದೆ. ರಾತ್ರಿ 12 ಕ್ಕೆ ಸರಿಯಾಗಿ ಅವಳಿಗೆ ನೀಡಬೇಕು. ಅಲ್ಲಿಯವರೆಗೆ ಒಂಚೂರು  ಸುದ್ದಿಯೂ ಗೊತ್ತಾಗಬಾರದೆಂಬ ಒಪ್ಪಂದಕ್ಕೆ ಅವಳೂ ಒಪ್ಪಿದ್ದಳು.

From ನನ್ನ ಹೆಸರನ್ನೇ ಹಾಕಿದರೆ, ಕೊರಿಯರ್ ತಲುಪುವಾಗ ನನ್ನ ಹುಡುಗಿಯೂ ಅವಳ ಜೊತೆಗಿದ್ದರೆ ಪ್ಲ್ಯಾನುಗಳೆಲ್ಲವೂ ಮಣ್ಣುಪಾಲು. ಗೊಂದಲವಾಯ್ತು. ಮರುಕ್ಷಣವೇ ಬಂದ ಆಲೋಚನೆಯಂತೆ ಸುಚಿತ್ ನ ಒಪ್ಪಿಗೆಯನ್ನು ಪಡೆಯದೇ ಮೊಬೈಲ್ ನಂಬರ್ ನನ್ನದನ್ನ ಹಾಕಿ ಅವನ ಮನೆ ಅಡ್ರೆಸ್ಸು ಬರೆದೆ.

ಇನ್ನೇನು ಪ್ಯಾಕೇಟಿಗೆ ಗಮ್ ಟೇಪು ಹಾಕಿ ಮುಚ್ಚುತ್ತೇನೆ  ಅನ್ನುವಾಗ ಪಕ್ಕದ ಅಂಗಡಿಯಲ್ಲಿ ನೇತು ಹಾಕಿದ್ದ ಗೊಂಚಲಿನಲ್ಲಿ ಜೋಡಿ ಚಪ್ಪಲಿಯ ಕೀಬಂಚು ಆಕರ್ಷಕವಾಗಿ ಕಂಡಿತು. ಅದನ್ನೂ ಕಳಿಸಿಬಿಡೋಣವೆಂದು ನಾನೊಂದು ಕೊಂಡೆ. ತನ್ನ ಹುಡುಗಿಗಾಗಿ ಸುಚಿತ್ ಕೂಡಾ ಕೊಂಡುಕೊಂಡ.

ಕೀ ಬಂಚನ್ನು ಸೇರಿಸಿ, ಕೊನೆಗೆ ಮತ್ತೊಮ್ಮೆ ಸೀರೆಯನ್ನು ನೋಡಿ ಕಣ್ತುಂಬಿಸಿಕೊಂಡೆ. ಗಮ್ ಟೇಪ್ ಹಾಕಿ ಮುಚ್ಚಿದೆ.

saree“ನಾಳೆ ಮೈಸೂರು ಆಫೀಸಿಗೊಮ್ಮೆ ಕಾಲ್ ಮಾಡಿ” ಎಂದು ಅಲ್ಲಿನ ನಂಬರನ್ನು ರಶೀದಿಯಲ್ಲೇ ಬರೆದುಕೊಟ್ಟಳು ಕೊರಿಯರ್ ನ ಹುಡುಗಿ.  ಜೋಪಾನವಾಗಿರಲಿ ಎಂದು ಪರ್ಸಿನೊಳಗಿಟ್ಟೆ. ಬುಲೆಟ್ ಏರಿದೆ. ಹಿಂದೆ ಸುಚಿತ್ ಕೂಡಾ ಕೂತುಬಿಟ್ಟ. ಸರ್ಪ್ರೈಸ್ ಸ್ಟೋರಿ ಸಕ್ಸೆಸ್ ಆಗಲಿ ಎಂಬುದಷ್ಟೇ ಮನಸು  ತುಂಬಿತ್ತು.

ಸೀರೆ, ಕೀಬಂಚ್ ಇದ್ದ ನನ್ನ ಗಿಫ್ಟ್ ಪ್ಯಾಕೆಟ್ಟು ಮರುದಿನವೇ ಮೈಸೂರು ತಲುಪಿತ್ತು. ಆದರೆ 10 ಗಂಟೆಗೆ ಅಲ್ಲಿನ ಕೊರಿಯರ್ ಆಫೀಸಿಗೆ ಕರೆ ಮಾಡಿದ್ದ ನನಗೆ ನಿರಾಸೆ, ಸಿಟ್ಟು ಭುಗಿಲೆದ್ದಿತು.

“ಶನಿವಾರ ಮಧ್ಯಾಹ್ನದೊಳಗೇ ಅವರ ಕೈ ತಲುಪುತ್ತೆ ಸಾರ್ . ಇದು ಪಕ್ಕಾ ಪ್ರೊಫೆಷನಲ್ಲು” ಎಂದ್ಯಾಕೆ  ಅವಳು ಸುಳ್ಳು ಬಳುಕಬೇಕಿತ್ತು. ಇವರು ನೋಡಿದ್ರೆ, “ಈವತ್ತು ನಾಳೆ ಆ ಕಂಪನಿಯವ್ರಿಗೆ ವೀಕೆಂಡು. ರಜಾ. ಸೋಮ್ವಾರ ಡೆಲಿವರಿ ಮಾಡ್ತೇನೆ  ಬಿಡ್ರಿ” ಅಂತ ಕಾಲ್ ಕಟ್ ಮಾಡಿದ್ದರು.

ಪ್ರೀತ್ಸೋರ ಭಾವನೆಗಳು ಇವರಿಗೆಲ್ಲಿ ಅರ್ಥ ಆಗ್ಬೇಕು. ಉಡುಪಿ ಕಛೇರಿಗೆ ಫೋನು ಮಾಡಿದರೆ ಮತ್ತದೇ ಬಳುಕಿನ ಮಾತು ಕೇಳುವ ಬದಲು ಸುಮ್ನೆ ಇರೋದೇ ವಾಸಿ. ಸೋಮ್ವಾರವಾದ್ರೂ ತಲುಪುತ್ತಲ್ಲಾ. ಹಾಗೆ ಮೊದ್ಲೇ ಹೇಳಿದ್ದಿದ್ರೆ ಪೋಸ್ಟಿನ ಮೂಲಕಾನೇ ಕಳಿಸುತ್ತಿದ್ದೆ. ಹಣವಾದರೂ ಉಳಿಯುತ್ತಿತ್ತು. ಆ ಹಣದಲ್ಲಿ 3g recharge ಮಾಡಿ ಹದಿನೈದು ದಿನವಾದರೂ ಹರಟಬಹುದಿತ್ತು.

ಶಪಿಸುವಷ್ಟು ಶಪಿಸಿದೆ. ಕೊರಿಯರ್ ಹುಡುಗಿಯ ಬಳುಕಿನ ಮಾತಿಗೆ ಮಾರುಹೋಗಿದ್ದಕ್ಕೆ ಪರಿತಪಿಸಿದೆ.

“ಈವತ್ತು ಡೆಲಿವರಿ ಇಲ್ವಂತೆ. ಮೈಸೂರು ಪೇಟೆಗೇನಾದ್ರೂ ಬರೋಕಿದ್ರೆ ಕೊರಿಯರ್ ಆಫೀಸಿಂದ ಪ್ಯಾಕೆಟ್ ತಗೋತೀರ ಪ್ಲೀಸ್”

“ತೊಂದ್ರೆ ಆಗಲ್ಲಾಂದ್ರೆ ನನಗೋಸ್ಕರ ಪೇಟೆಗೆ ಬಂದು ತಗೋಬಹ್ದಾ?” ಎಂದು ಆ ನಮ್ಮ ಸ್ನೇಹಿತೆಗೆ ಎರಡು ಮೆಸೇಜು ಮಾಡಿದ್ದೆ.

ಭಾನುವಾರ ರಾತ್ರಿ ಹತ್ತಾದರೂ ಅವಳಿಂದ ಉತ್ತರವಿರಲಿಲ್ಲ. ನಾನಾಗಿಯೇ ಮತ್ತೆ ಕೇಳೋಕೆ ಮುಜುಗರ. ಟ್ರೈನಿಂಗ್ ಅಲ್ವಾ. ತುಂಬಾ ಓದೋಕೆ ಇರುತ್ತೆ ಅಂತ ಹಿಂದೊಮ್ಮೆ ಹೇಳಿದ್ದು ನೆನಪಾಗಿ, ತೊಂದ್ರೆ ಕೊಡೋದೇ ಬೇಡ ಎಂದು ತೆಪ್ಪಗಾಗಿದ್ದೆ.

ನಾನು ಯೋಜಿಸಿದಂತೆ ನಡೆಯುತ್ತಿದ್ದರೆ ಇನ್ನೆರಡು ಗಂಟೆಯಲ್ಲಿ, ಅಂದ್ರೆ ನಡುರಾತ್ರಿ 12 ಗಂಟೆಗೆ ಆ ಸೀರೆಯ ಕಟ್ಟು ನನ್ನವಳ ಕೈ ಸೇರಬೇಕು. ಅವಳಿಗದು ಆಶ್ಚರ್ಯವಾಗಿ ನನಗವಳು ಕರೆ ಮಾಡಬೇಕು.

“ಡಿಸ್ಟರ್ಬ್ ಮಾಡ್ತೀರೋದ್ದಕ್ಕೆ sorry. ಎಣಿಸಿದ ಹಾಗೇ ಆಗ್ಲೇ ಇಲ್ಲ. ನಾಳೆ ಮಧ್ಯಾಹ್ನದೊಳಗೆ ಪಾರ್ಸೆಲ್ ಬರಬಹುದು. ಅದ್ನ ಅವಳಿಗೊಂದು ಮುಟ್ಟಿಸಿ ಬಿಡಿ”.

ಮರುಕ್ಷಣವೇ ರಿಪ್ಲೈ,

“sorry sorry, ಹೇಳೋಕೆ ಮರ್ತಿದ್ದೆ. ಪ್ಯಾಕೇಟು ನಿನ್ನೇನೇ ತಲುಪಿತ್ತು. ಗ್ರೂಪ್ ಸ್ಟಡಿ ಮಾಡ್ತಾ ಇದ್ವಿ. ಸೋ… ಮರ್ತು ಹೋಯ್ತು. ಈವತ್ತು ಮಧ್ಯರಾತ್ರೀನೆ ಕೊಟ್ಟು ಬಿಡ್ತೀನಿ. ಟೆನ್ಶನ್ ಮಾಡ್ಕೋಬೇಡಿ” ಅಂದ್ಬಿಟ್ಳು.

ಹೋದ ಜೀವ ಮರಳಿ ಬಂದಂತಾಯ್ತು. ಸರ್ಪ್ರೈಸ್ ಸರ್ಕಸ್ಸು ಸಕ್ಸೆಸ್ ಆಗೋ ಖುಷಿ.

ಇನ್ನು ಇಪ್ಪತ್ತು ನಿಮಿಷವಿದೆ. ಸುಮ್ನೆ ಮಾತಾಡಿಸೋಣ ವೆಂದು ಚ್ಯಾಟಿಂಗ್ ಶುರು ಮಾಡಿದೆ.

“sorry”

” ನೀವು ಊರಲ್ಲಿದ್ದಿದ್ರೆ ನಿಮ್ಮ ಬಡ್ಡೇನಾ ಚಂದ ಸೆಲೆಬ್ರೇಟ್ ಮಾಡ್ಬಹುದಿತ್ತು”

“ಫರ್ಸ್ಟ್ ಟೈಮ್ ಅಲ್ವಾ, ಏನಾದ್ರೂ ಗಿಫ್ಟ್ ಕೊಡ್ಬೇಕಿತ್ತು”

“Sorry ಆಯ್ತಾ, ಊರಿಗೆ ಬಂದಾಗ ಭೇಟಿಯಾಗೋಣ. ಆಗ ಏನಾದ್ರೂ ಕೊಡ್ತೀನೆ” ಅಂತೆಲ್ಲಾ ಮಾತಾಡೋವಾಗ ಗಂಟೆ 12 ಬಡಿಯಿತು.

ನನ್ನ ಕೊನೆಯ ಮೆಸೇಜಿಗೆ ಉತ್ತರವೂ ಇಲ್ಲ. ಫೋನೂ ಇಲ್ಲ. ಅರ್ಧ ಗಂಟೆ ಕಳೆಯಿತು. ಗಂಟೆ ಒಂದಾಯ್ತು.  ಯೋಜನೆ ಮತ್ತೆಲ್ಲಾದ್ರೂ ಎಡವಟ್ಟಾಯ್ತಾ. ಚಡಪಡಿಕೆಯಲ್ಲಿ ನಿದ್ದೆಯೂ ಬರ್ತಿಲ್ಲ. ಅಯ್ಯೋ ವಿಧಿಯೇ ಅಂದುಕೊಳ್ಳುವಾಗ್ಲೇ ನನ್ನವಳ ಮೆಸೇಜು ಬಂತು. ಸೀರೆಯನ್ನು ಉಟ್ಟುಕೊಂಡು, ಕನ್ನಡಿ ಮುಂದೆ ನಿಂತುಕೊಂಡು ತೆಗೆದ ಐದಾರು ಫೋಟೋಗಳೂ ಬೆನ್ನಹಿಂದೆ ಬಂದವು.

ಕೊರಿಯರ್ ಹುಡುಗಿಗೆ ಸುಮ್ಮನೇ ಶಪಿಸಿದ್ದು ನೆನಪಾಯ್ತು. ನಗುಬಂತು. ಪಾಪ, ಬೇಜಾರೂ ಆಯ್ತು. ಮರುದಿನ ಸುಚಿತ್ ಹತ್ರ ಈ ಪ್ರಸಂಗವನ್ನೆಲ್ಲಾ ಹೇಳ್ತಿದ್ದಾಗ ಗೊಂದಲದ ಕಾರಣ ನಾನೇ ಎಂಬುದು ಗೊತ್ತಾಯ್ತು.

ಮೈಸೂರಿಗೆ ಕಾಲ್ ಮಾಡಿ “ಪ್ರೋ ಪ್ರಿಮಿಯಮ್” ಅಂತ ಹೇಳಿ. ಕೂಡ್ಲೇ ತಲುಪಿಸುತ್ತಾರೆ ಅಂತ ಕೊರಿಯರ್ ಹುಡುಗಿ ಅಂದಿದ್ಲು. ಭಾವನೆಗಳ ಅಲೆಯಲ್ಲಿ ತೇಲುತ್ತಿದ್ದ ನನಗದು ಕೇಳಿಸಿಯೂ ಕೇಳಿಸಿರಲಿಲ್ಲ.  Sorry and Thank u ಹುಡ್ಗಿ. ಕೆಲಸದಲ್ಲಿ ನೀವಂತೂ ಪಕ್ಕಾ ಪ್ರೊಫೆಷನಲ್ಲು.

ಪ್ರೀತಿಯನ್ನು ಯಾವುದೇ ವಸ್ತುವಿನಿಂದ ಅಥವಾ ಅದಕ್ಕೆ ತೆರುವ ಬೆಲೆಯಿಂದ ಅಳೆಯುವುದು ಸರಿಯಲ್ಲ. ಆದರೂ ವಸ್ತುಗಳು ಇಬ್ಬರನ್ನೂ ಹತ್ತಿರ ತರುತ್ತವೆ. ದೂರದೂರಲ್ಲಿರೋ ಇಬ್ಬರಿಗೂ ಮತ್ತಷ್ಟು  ಸಮೀಪವಾದ ಭಾವ.

girlಬೆಂಗ್ಳೂರಿಗೆ ಹೋಗಿದ್ದೆ. ವಿಜಯನಗರದ ಮಾರ್ಕೆಟ್ಟು ರೋಡಿನಲ್ಲಿ ಸ್ನೇಹಿತರೊಂದಿಗೆ ಅಡ್ಡಾಡುತ್ತಿದ್ದೆ. ಬೀದಿ ಬದಿಯ ಅಂಗಡಿಗಳಲ್ಲಿ ಓಲೆ, ಜುಮ್ಕಿ, ಕ್ಲಿಪ್ಪು, ಪರ್ಸು… ಅದ್ಯಾವುದೂ ಬೇಡ. ಕೊನೆಗೆ ಬ್ಯಾಗಿನಂಗಡಿಯೊಂದಕ್ಕೆ ನುಗ್ಗಿ ಬೆಳ್ಳನೆಯ ಬ್ಯಾಗೊಂದನ್ನು ಆಯ್ಕೆ ಮಾಡಿದೆ. ನಿಜವಾಗಿ ಆಯ್ಕೆ ಮಾಡಿದ್ದು ನಾನಲ್ಲ. ಸ್ನೇಹಿತೆ ಸೀಮ. ಆದ್ರೆ ಅದನ್ನು ನನ್ನ ಹುಡುಗಿ ಹತ್ರ ಹೇಳೋ ಹಾಗಿಲ್ಲ. ಕೊಂಡ ಮೇಲೆ ಕಳಿಸುವ ಕಳಕಳಿ. ಅಲ್ಲೇ ಕೊರಿಯರ್ ಆಫೀಸನ್ನು ಹುಡುಕಿ, ಹುಡುಗೀ ಅಡ್ರೆಸ್ಸನ್ನು ಬರೆದು ಹೃದಯದ ಭಾರವನ್ನು ಅದ್ಯಾರದೋ ಕೈಗೆ ಒಪ್ಪಿಸುವಾಗಿನ ಸಂಕಟ ಮತ್ತು ಜವಾಬ್ದಾರಿ ಪ್ರೀತೀಲಿದ್ದೋರಿಗಷ್ಟೇ ಗೊತ್ತು ಬಿಡಿ.

ಯಾರಿಗೋ ಯಾಕೆ, ಆ ಹುಡುಗೀಗೇ ಆ ಸಂಕಟ ಅರ್ಥ ಆಗಿಲ್ಲ ಅನ್ಸುತ್ತೆ. ಮರುದಿನವೇ ಬ್ಯಾಗು ಅವಳನ್ನು ತಲುಪಿತ್ತು. ಅವಳು ಖುಷಿಯಿಂದಲೇ ಕೊಂಡುಕೊಂಡಳು. ಆದರೆ ಅದನ್ನು ಬಳಸಲಿಲ್ಲ.

ಬ್ಯಾಗು ಅವಳಿಗೆ ತಲುಪಿದ ದಿನವೇ ನಮ್ಮೊಬ್ಬರ ಮೂಲಕ ಅವಳ ತಂದೆಗೆ ವಿಷಯ ತಿಳಿಸಿದೆ. ನನ್ನ ಮನೆಯಲ್ಲಿ ಮೊದಲೇ ವಿಷಯ ಹೇಳಿದ್ದೆ. ಒಂದೇ ಜಾತಿ. ಸಮಸ್ಯೆಯೇ ಇರಲಿಲ್ಲ. ಆದರೆ ಅವಳ ತಂದೆ ಅಷ್ಟ್ಯಾಕೆ ಸಿಟ್ಟಾದರೋ. ಅವಳಣ್ಣನಂತೂ ಎರಡು ದಿನ ಮೈಸೂರಲ್ಲಿ ಹೋಗಿ ಕೂತು ಅವಳ ಮನಸ್ಸನ್ನು ಬದಲಾಯಿಸಿಬಿಟ್ಟ.

ಅದೆಷ್ಟೋ ಸಲ ಹೇಳಿದ್ದೆ. ಅವಳೂ ಮನೇಲಿ ಹೇಳುತ್ತೇನೆ ಅಂದಿದ್ದಳು. ನೀನು ಹೇಳಿಟ್ಟರೆ ಒಳ್ಳೆಯದಾಗುತ್ತೆ. ಅರೇಂಜ್ ಮ್ಯಾರೇಜ್ ರೀತೀಲೆಲ್ಲಾ ಹೋದ್ರೆ ಜಾತಕ ನೋಡ್ತಾರೆ. ಅದು ಕೂಡಿ ಬಂದಿಲ್ಲಾಂದ್ರೆ ನಮ್ಮ ಕಥೆ ಮುಗೀತು‌. ಹೇಗಾದ್ರೂ ಅವ್ರ ಕಿವಿಗೆ ಹಾಕು. ಮತ್ತೆ ನಾನು ನೋಡ್ಕೋತ್ತೇನೆ ಅಂದಿದ್ದೆ.

ಮೂರು ತಿಂಗಳಲ್ಲಿ ಮೂರು ಸಲ ಹೇಳುತ್ತೇನೆ ಅಂತ ಹೊರಟವಳು ಹೇಳದೇ ಹಿಂತಿರುಗಿದ್ದಳು. ನಿಜಕ್ಕೂ ತಪ್ಪಾಗಿದ್ದು ಅದೇ. ಅಮ್ಮನ ಬಳಿ ಹೇಳಿದ್ದಿದ್ರೂ ಸಾಕಿತ್ತು. ಮುಂಗೋಪಿ ತಂದೆಯ ಮನಸ್ಸನ್ನು ತಾಯಿಯೇ ಬದಲಿಸುತ್ತಿದ್ದರು. ಕೈ ಕಾಲು ಮುರೀತೇನೆ ಅಂತ ಮುಂದೆ ಬಂದ ಅವಳಣ್ಣನನ್ನೂ ಅವರೇ ತಡೆಯುತ್ತಿದ್ದರು.

ಏನು ಮಾಡಲಿ. ಪ್ರೇಮ ರೋಗಿ ಆಗಿದ್ದೆ. ಅವಳಣ್ಣ ಹೊಡೆದಿದ್ದರೇನೇ ಖುಷಿ ಆಗ್ತಿತ್ತೇನೋ. ಅವನದು ಕೇವಲ  ಬೆದರಿಕೆಯಾಗಿತ್ತು. ಒಂದರ್ಧ ಗಂಟೆ ಮಾತಿಗೇನಾದ್ರೂ ಆತ ಸಿಗುತ್ತಿದ್ದಿದ್ದರೆ ಅವನನ್ನು ಒಪ್ಪಿಸುತ್ತಿದ್ದೆನೇನೋ. ಆದ್ರೆ ನಾನೆಲ್ಲಿ ಸೋತೆ ಗೊತ್ತಾ ? ಅವಳಣ್ಣ ಮೈಸೂರಿಗೆ ಹೋಗಿ ಬಂದ ದಿನವೇ ಕೊನೆ. ಆ ಮೇಲೆ ಅವಳು ಮಾತನ್ನೇ ಬಿಟ್ಟಿದ್ದು ದೊಡ್ಡ ತಪ್ಪಾಗಿ ಹೋಗಿತ್ತು. ಸ್ವಲ್ಪ ದಿನದ ಮೇಲೆ ಅವರು ನನ್ನನ್ನು ವಿರೋಧಿಸಿದ್ದು ಯಾಕೆಂದು ಗೊತ್ತಾಗಿತ್ತು. ಆ ಕಥೆ ಬೇರೆಯೇ ಇದೆ ಬಿಡಿ. ಅದ್ನ ಆಕೆಗೆ ಹೇಳ್ಬೇಕಿತ್ತು. ಅವಳಿಗದು ಅರ್ಥ ಆದ್ರೆ ಎಲ್ಲವೂ ಸರಿಯಾಗ್ತಿತ್ತು. ಆದ್ರೆ ಅದಕ್ಕವಳು ಅವಕಾಶವನ್ನೇ ಕೊಡಲಿಲ್ಲ. ಮಾತಿನ ಬಾಗಿಲನ್ನೇ ಮುಚ್ಚಿದ್ದಳು. ಮನಸ್ಸನ್ನು ಕೂಡಾ‌.

ಆ ಹೊತ್ತಿಗೆ ಇನ್ನೊಂದು ಹಾಡು ಆಪ್ತವಾಯಿತು. ಅದೂ ಕಾಯ್ಕಿಣಿಯವ್ರದ್ದೇ. ಕೃಷ್ಣ ರುಕ್ಕು ಸಿನಿಮಾದ್ದು.

(ಹುಡುಗಿ)
ಹೇಳಿಲ್ಲ ಯಾರಲ್ಲು ನಾನು
ಈ ಗುಟ್ಟಲ್ಲಿ ಶಾಮೀಲು ನೀನು…

ಇಶ್ಕ್ ಜೀನಾಭಿ ಹೈ, ಇಶ್ಕ್ ಮರ್ ನಾ ಬಿ ಹೈ…

ಮೂರು ತಿಂಗಳಲ್ಲಿ ಪ್ರೀತಿ ಚೆನ್ನಾಗಿಯೇ ಅರಳಿತ್ತು. ನಾನು  ಮನೇಲಿ ಹೇಳಿದ್ದೆ. ಒಪ್ಪಿದ್ರು. ಆದ್ರೆ ಅವ್ಳು ಮಾತ್ರ ಯಾರಲ್ಲೂ ಹೇಳದೆ ಗುಟ್ಟಾಗಿಯೇ ಇಟ್ಟುಬಿಟ್ಟಳು. ನನ್ನಿಂದ ದೂರ ಹೋಗಿ ಬಿಟ್ಟಳು.

ಇವಳು “ಅವಳು”ಗಳ ಪಟ್ಟಿಯಲ್ಲಿ ಒಬ್ಬಳಷ್ಟೇ. ಶಾಲೆ ಸೇರಿದಂದಿನಿಂದ ಇವತ್ತಿನವರೆಗೂ ಬಹಳಷ್ಟು ಜನ ಬಂದು ಹೋಗಿದ್ದಾರೆ. ಅದೆಲ್ಲವೂ ಪ್ರೀತಿಯೇ ಎಂದು ಹೇಳುವಂತಿಲ್ಲ.ಬೆಳವಣಿಗೆಯ ವಿವಿಧ ಹಂತಗಳಲ್ಲಿ ನನ್ನೊಂದಿಗೆ  ಭಾಗಿಯಾಗಿ ಪ್ರೇಮವನ್ನು ಹಂಚಿ ಹೋದವರು. ಅವರ ಕಥೆಗಳನ್ನೂ ಹೇಳುವಂತದ್ದೇ. ಅದು ಇನ್ನೊಮ್ಮೆಗೆ.  ನಾಳೆ ಮೇಲಿನ “ಅವಳ ಹುಟ್ಟಿದ ಹಬ್ಬ”. ಕಳೆದ ವರುಷ ಸರ್ಪ್ರೈಸ್ ಗಿಫ್ಟು ಕೊಟ್ಟ ನೆನಪಿನ ನೆಪದಲ್ಲಿ ಅವಧಿಯಲ್ಲಿ ಅಂಕಣವಾಗುವ ಸಲುವಾಗಿ ಮತ್ತೊಮ್ಮೆ ಬಂದು ಹೋದಳು.

Add Comment

Leave a Reply