Quantcast

ಟಿ ಆರ್ ಪಿ ಬೆನ್ನು ಹತ್ತಿ..

lakshman-370x315

ಡಾ.ಲಕ್ಷ್ಮಣ. ವಿ. ಎ

ವಿದ್ಯುನ್ಮಾನ ಮಾಧ್ಯಮ, ಮೈ ಮನ ಉನ್ಮಾದಗೊಳಿಸುವ ಮಾಧ್ಯಮ. ಸುದ್ದಿಯಾಗಬೇಕಿರುವುದು ಇಲ್ಲಿ ಸುದ್ದಿಯಾಗುವುದಿಲ್ಲ, ನ್ಯಾಯಾಂಗದ ತೀರ್ಪು ಬರುವ ಮುಂಚೆಯೇ ಇಲ್ಲಿ ಆರೋಪಿಗೆ ಸುದ್ದಿ ಮಾಧ್ಯಮಗಳು ಶಿಕ್ಷೆ ಕೊಟ್ಟಿರುತ್ತವೆ. ಸತ್ಯಾಸತ್ಯತೆಗಳು ಬಯಲಾಗುವ ಹೊತ್ತಿನಲ್ಲಿಯೇ ಎಷ್ಟೆಲ್ಲಾ ಆವಾಂತರಗಳು ಸೃಷ್ಟಿಯಾಗಿರುತ್ತವೆ. ಇದು ಆಧುನಿಕ ಮಾಧ್ಯಮ.

ಸುಮಾರು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಬಾಂಬ್ ಸ್ಫೋಟದ ಆರೋಪದ ಮೇಲೆ ಯುವಕನೊಬ್ಬ ಬಂಧಿತನಾದಾಗ ಈ ಮಾಧ್ಯಮಗಳು ಅಲ್ಲೋಲ ಕಲ್ಲೋಲ ಸೃಷ್ಟಿಸಿದವು, ಅವನು ಕೆಲಸ ಕಳೆದುಕೊಂಡ ಶಾಂತಿಯಿಂದ ಬದುಕು ಸವೆಸುತಿದ್ದ ಕುಟಂಬದ ಮಾನ ಬೀದಿ ಪಾಲಾಯಿತು. ಆತನ ವೃದ್ದ ತಂದೆ ತಾಯಿ ಮಾಧ್ಯಮದೆದುರು ನನ್ನ ಮಗ ನಿರಪರಾಧಿ ಎಂದು ಕೈ ಮುಗಿದು ಬೇಡಿಕೊಂಡರೂ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತು. ಮುಂದೆ ದೀರ್ಘ ಕಾಲದ ವಿಚಾರಣೆಯಿಂದ ಅವನು ನಿರಪರಾಧಿಯಾದ.

tv controlಆ ಸುದ್ದಿ ಮಾಧ್ಯಮದ ಕಿವಿಗೆ ಬೀಳಲಿಲ್ಲ. ಬಿದ್ದರೂ ಅದೊಂದು ಸುದ್ದಿಯಾಗದ ಸುದ್ದಿ. ಆರೋಪ ಸಾಬೀತು ಪಡಿಸುವ ಕುರುಡು ಧಾವಂತದಲ್ಲಿ ಹೀಗೊಂದು ಕುಟುಂಬದ ಮಾನ ಹರಾಜಾಯಿತು. ಕಳೆದುಕೊಂಡ ತನ್ನ ಮಾನ, ಕೆಲಸ, ಜೈಲಿನಲ್ಲಿ ಕಳೆದ ಅಮೂಲ್ಯವಾದ ತನ್ನ ದಿನಗಳನ್ನು ಮರಳಿ ಪಡೆಯಲು ಯಾರಲ್ಲಿ ಮೊರೆಯಿಡುವುದು ?.

ಎರಡು ತಿಂಗಳ ಹಿಂದೆ ದೆಹಲಿಯಲ್ಲಿ ಒಂದು ಪ್ರತಿಭಟನೆ ನಡೆದಿತ್ತು. ಅಲ್ಲಿ ದೇಶದ ನೂರಾ ಇಪ್ಪತ್ತೈದು ಕುಟುಂಬಗಳ,  ತಲೆಯ ಮೇಲೆ ಮಲಹೊರುವ ಮತ್ತು ಆ ಅವಘಡಗಳಲ್ಲಿ ಮಡಿದ ಕುಟುಂಬದವರು ತಮಗೆ ಪರ್ಯಾಯ ಉದ್ಯೋಗ ಕಲ್ಪಿಸಿ, ಪುನವರ್ಸತಿ ಒದಗಿಸಬೇಕೆಂಬ ಬೇಡಿಕೆಯನಿಟ್ಟು ಬೀದಿಗಿಳಿದಿದ್ದರು.

ವಿಶೇಷವೆಂದರೆ ಈ ಎಲ್ಲ ಕುಟುಂಬಗಳು ದೇಶಾದ್ಯಂತ ಯಾತ್ರೆಯ ಮೂಲಕ ದೆಹಲಿಗೆ ಬಂದಿದ್ದರು. ಸಾಮಾಜಿಕ ಪ್ರಜ್ಞೆಯ ಸಂವೇದನಾಶೀಲ ಸಮಾಜ ಇದೊಂದು ಮನುಕುಲದ ದೊಡ್ಡ ಕಂಟಕವೆನ್ನುವಂತೆ ಪ್ರತಿಭಟನೆಯ ದೊಡ್ಡ ಅಭಿಯಾನವನ್ನೇ ಮಾಡಿ ಪ್ರಭುತ್ವದ ಗಮನ ಸೆಳೆಯಬಹುದಾಗಿತ್ತು. ಇಲ್ಲೂ ಕೂಡ ಸಮಾಜ ಮಾಧ್ಯಮ ಎರಡೂ ಕುರುಡಾದವು.

ಒಂದು ವಿಷಯ ನೆನಪಿರಲಿ ಪ್ರಪಂಚದ ಯಾವ ಮೂಲೆಯಲ್ಲೂ ತಲೆ ಮೇಲೆ ಮಲ ಹೊರುವ ಪದ್ಧತಿಯಿಲ್ಲ. ಆದರೆ ಅದು ಸುದ್ದಿಯಾಗಲಿಲ್ಲ ಏಕೆಂದರೆ ಅಲ್ಲಿದ್ದವರು ನಿರ್ಗತಿಕರು, ಅನಕ್ಷರಸ್ಥರು ತಮ್ಮ ಹಕ್ಕುಗಳು ಏನೆಂಬುದು ಅವರಿಗೇ ಅರಿಯದ ಅಮಾಯಕರು ಮುಖ್ಯವಾಗಿ ಈ ಸುದ್ದಿಯಿಂದ ಮಾಧ್ಯಮಗಳಿಗೆ ಚಿಕ್ಕಾಸಿನ ಲಾಭವೂ ಬರಲಾರದೆಂಬ ವ್ಯಾಪಾರೀ ತಂತ್ರ.

ಸುದ್ದಿ ಮಾಧ್ಯಮಗಳ ಸ್ಪರ್ಧೆಯು ಹೆಚ್ಚಾದಂತೆಲ್ಲ ಅವುಗಳ ಗುಣಮಟ್ಟತೆಯೂ ಕಳಪೆಯಾಗತೊಡಗಿ ದಶಕಗಳೇ ಕಳೆದಿವೆ. ಇಲ್ಲಿ ಸುದ್ದಿಯಾಗಬೇಕಾಗಿರುವುದು ಸುದ್ದಿಯಾಗುವುದಿಲ್ಲ, ಅತಿರಂಜಿತ ರೋಚಕ ಸುದ್ದಿಗಳ ರಕ್ತದ ರುಚಿ ತೋರಿಸಿದ್ದು ವಿದ್ಯುನ್ಮಾನ ಮಾದ್ಯಮಗಳೆಂದು ಬೇರೆ ಹೇಳಬೇಕಿಲ್ಲ. ಸಮಾಜದ ದಾರಿ ದೀಪವಾಗಬೇಕಿದ್ದ ಈ ಆಧುನಿಕ ಮಾಧ್ಯಮಗಳು ಕೀಳು ಅಭಿರುಚಿಯ ಸರಣಿಗಳನ್ನೇ ತಮ್ಮ ಆದಾಯದ ಮೂಲಗಳೆಂದು ಪರಿಗಣಿಸಿದ್ದು ಈ ದೇಶದ ದುರಂತವೇ ಸರಿ.

ಕಳೆದ ತಿಂಗಳು ಬೆಂಗಳೂರಿನ  ಕಾರ್ಯಕ್ರಮವೊಂದರಲ್ಲಿ  ಮಾಧ್ಯಮ ಲೋಕದ ಭಿನ್ನ ಪಯಣಿಗರೆಂದೇ ಗುರುತಿಸಿಕೊಂಡಿರುವ ಪಿ.ಸಾಯಿನಾಥರು, ಆಧುನಿಕ ಮಾಧ್ಯಮ ಸಾಗುತ್ತಿರುವ ದಾರಿಯನ್ನು ಅಂಕಿ ಸಂಖ್ಯೆ ಗಳ ಸಮೇತ ಮಂಡಿಸುತಿದ್ದಾಗ ಒಂದು ಬಗೆಯ ವಿಷಾದ ಕಾಡಿತು. ಅವರು ಮಾಡಿದ ಅಧ್ಯಯನದ ಪ್ರಕಾರ ದೇಶದ ನಾಲ್ಕು ರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳು ಕೇವಲ ದೆಹಲಿ ನಗರವೊಂದಕ್ಕೆ ಪ್ರತಿಶತ 51 ರಷ್ಟು ಪ್ರಾಮುಖ್ಯತೆಯನ್ನು ನೀಡುತ್ತವೆ.  ನಂತರದ ಸ್ಥಾನ ಮುಂಬೈ, ಕಲಕತ್ತಾ, ಚೆನ್ನೈನ ಪಾಲು  ಪ್ರತಿಶತ 5 ರಷ್ಟು ಮಾತ್ರ. ಬಾಲಿವುಡ್, ಕ್ರಿಕೆಟ್ ಪ್ರತಿಶತ 4 ರಷ್ಟು.

ಇನ್ನು ಕೃಷಿ, ಶಿಕ್ಷಣ, ಆರೋಗ್ಯದ ಪಾಲು ಶೋಚನೀಯ. ಹಳ್ಳಿಗಳು ನೆನಪಾಗುವುದು ಓಡಿಷಾದ ಕಾಳಹಂಡಿಯಲ್ಲಿ ಶವ ಹೊತ್ತು ಹತ್ತು ಕಿ.ಮಿ. ಸಾಗಿದ ವ್ಯಕ್ತಿಯಂತಹ ದಾರುಣ ಘಟನೆಗಳು ನಡೆದಾಗ ಮಾತ್ರ.

ಜಾಗತೀಕರಣಗೊಂಡೆಂತೆಲ್ಲಾ ಪತ್ರಿಕಾರಂಗದ ಸ್ವರೂಪ ಬದಲಾಗಿ ಪತ್ರಿಕೋದ್ಯಮವಾಯಿತು. ಹಣ ಬಾಚುವ ಬೃಹತ್ ಉದ್ಯಮವಾಯಿತು. ಬಂಡವಾಳುದಾರರು ದೇಶದ ಪ್ರಮುಖ ಚಾನೆಲ್ ಗಳ ಒಡೆಯರಾದರು ಸುದ್ದಿಯ ವೇಷದಲ್ಲಿ ಕಳಪೆ ರಂಜನೆ, ಅತಿರೋಚಕತೆ, ವಿಜೃಂಭಿಸತೊಡಗಿತು. ಟಿ.ಆರ್.ಪಿ ಗೋಸ್ಕರ ಸಿದ್ಧಾಂತಗಳು ಅಪಮೌಲ್ಯಗೊಂಡವು. ಚಾನೆಲ್ ಗಳು ಆಯಾ ರಾಜಕೀಯ ನೇತಾರರ ಮುಖವಾಡಗಳಾಗಿ ಬದಲಾದವು. “ಪೇಯ್ಡ್ ನ್ಯೂಸ್”ಎಂಬ ವೈರಸ್ ಹುಟ್ಟಿಕೊಂಡಿತು. ರೈತರ ಆತ್ಮಹತ್ಯೆಯಂತಹ ಸಂವೇದನಾಶೀಲ ಸಂಗತಿಗಳು ತಮ್ಮ ರೇಟಿಂಗ್ ಹೆಚ್ಚಿಸಿಕೊಳ್ಳುವ ಸಾಧನವಾಗಿ ಬಳಸಿಕೊಂಡವೇ ಹೊರತು ಅದರ ಮೂಲಕಾರಣಗಳನ್ನು ಹುಡುಕಿ ಅದಕ್ಕೊಂದು ಪರಿಹಾರ ಸೂಚಿಸುವ ಜವಾಬ್ದಾರಿ ಹೊರಲಿಲ್ಲ. ಹೀಗಾಗಿ ಜನರ ದನಿಯಾಗಬೇಕಿದ್ದ ಚಾನೆಲ್ ಗಳು ಸಮಾಜದ ವಿಶ್ವಾಸವನ್ನು ಕಳೆದುಕೊಂಡಿರುವುದರಲ್ಲಿ ಅಚ್ಚರಿಯೇನಲ್ಲಾ.

trpಮೊನ್ನೆ ಬೆಂಗಳೂರಿನ ಪೂಜಿತಾ ಎಂಬ ಮಗು ಮನೆಬಿಟ್ಟು ಹೋದಾಗ ಅವಳನ್ನು ಪತ್ತೆ ಹಚ್ಚಲು ಮಾಧ್ಯಮಗಳ ಮಾಡಿದ ಪ್ರಯತ್ನವನ್ನು ಮುಕ್ತ ಮನಸ್ಸಿನಿಂದ ಹೊಗಳಲೇಬೇಕು. ಆದರೆ ತದನಂತರದ ಬೆಳವಣಿಗೆಯಲ್ಲಿ ಎಂದಿನಂತೆ ಮಾಧ್ಯಮಗಳು ಎಡವಿದವು.

ಪ್ರಸ್ತುತದಲ್ಲಿ ಶಿಕ್ಷಣದ, ಸಿಲೇಬಸ್ ನಿಂದಾಗಿ ಮುಗ್ಧ ಕಂದಮ್ಮಗಳ ಮೇಲಾಗುತ್ತಿರುವ ಒತ್ತಡ, ಪೋಷಕರ ಅತಿಯಾದ ನಿರೀಕ್ಷೆಗಳು ಇಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಆದದ್ದೇ ಬೇರೆ ಮನೆ ಬಿಟ್ಟು ಹೋದ ಮಗುವಿನ ಪ್ರಯಾಣವನ್ನು ಟಿ.ವಿ ಚಾನೆಲ್ ನವರು  ಅತಿರಂಜಿತವಾಗಿ ವೈಭವೀಕರಿಸಿ ಅವಳನ್ನು ಒಬ್ಬ ನಾಯಕಿಯೆಂಬಂತೆ ಬಿಂಬಿಸುವ ಸ್ಪರ್ಧೆಗೆ ಬಿದ್ದವು. ಇದರಲ್ಲಿ ಆ ಮಗುವಿನ ಪೋಷಕರದೂ ತಪ್ಪಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇಲ್ಲಿ ಪೂಜಿತಾ ಎಂಬ ಮಗು ಕೇವಲ ಸಾಂಕೇತಿಕ ಮಾತ್ರ ಅವಳು ಇಡೀ ದೇಶದ ಶಿಕ್ಷಣದ ಅವ್ಯವಸ್ಥೆ ಯನ್ನು ಪ್ರತಿನಿಧಿಸುವ ರಾಯಭಾರಿಯಾಗಿ ನಮ್ಮ ಕಣ್ಣೆದುರಿಗೆ ಇದ್ದಾಳೆ.

ಇನ್ನು ಬಾಲಿವುಡ್ ಜೋಡಿಗಳ ರೋಮ್ಯಾನ್ಸ್, ಅವರ ಮದುವೆ, ವಿಚ್ಛೇದನೆಯ ವಿಷಯಗಳು ಬಂದರಂತೂ ಮುಗಿದೇ ಹೋಯಿತು. ಅರಮನೆ ಮೈದಾನದ ಮದುವೆ ವಿಚಾರ ನೇರ ಪ್ರಸಾರ ಮಾಡುವಂತಹ  ದರ್ದು ಏನಿದೆ ?

ದೇಶದ ಭದ್ರತೆಯಂತಹ ಸೂಕ್ಷ್ಮ ವಿಚಾರದಲ್ಲೂ ಈ ವಿದ್ಯುನ್ಮಾನ ಮಾಧ್ಯಮದ ನಡೆ ಪ್ರಶ್ನಾರ್ಹವಾಗಿದೆ. ಮುಂಬೈ ತಾಜ್ ಹೊಟೇಲ್ ನ  ದಾಳಿಯ ಸಂದರ್ಭದಲ್ಲಿ ಟಿ.ವಿ ಯಲ್ಲಿ ಬರುತಿರುವ ನೇರ ಪ್ರಸಾರ ನೋಡುತ್ತ ಪಾಕಿಸ್ತಾನದಲ್ಲಿ ಕುಳಿತು ನೋಡುತಿದ್ದ ಉಗ್ರಗಾಮಿ ನಾಯಕನೊಬ್ಬ ಅಲ್ಲಿಂದಲೇ ಆ ಹೊಟೇಲಿನಲ್ಲಿ ಅಡುಗಿ ಕುಳಿತಿರುವ ನಾಗರಿಕರನ್ನು ಗುರುತಿಸಿ ಅವರನ್ನು ಕೊಲ್ಲಲು ಉಗ್ರಗಾಮಿಗಳಿಗೆ ಸಂದೇಶ ನೀಡುತ್ತಿದ್ದ. ಹೀಗೆ ವಿಶ್ವ ಸಮುದಾಯದ ಮುಂದೆ ದೇಶದ ಮಾನ ಹೋಗುವುದು ಒತ್ತಟ್ಟಿಗಿರಲಿ ಅಮಾಯಕರ ಜೀವ ತೆಗೆದದ್ದು ಈ ಟಿ.ಆರ್.ಪಿ ಯೆಂಬ ಭೂತ.

ಮೇಲಿನ ಘಟನೆಗಳು ತಕ್ಷಣಕ್ಕೆ ನೆನಪಿಗೆ ಬಂದಂತಹ ವಿವರಗಳು. ಏಕೆಂದರೆ ಪ್ರತಿ ಕ್ಷಣ, ಪ್ರತಿ ನಿಮಿಷ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲಾಗುತ್ತಿದೆ.

ಭಾರತವೆಂದರೆ ಕೇವಲ ದೆಹಲಿ, ಮುಂಬೈ, ಕಲಕತ್ತಾ, ಚೆನ್ನೈ ಅಲ್ಲ. ಕೇವಲ ಬಾಲಿವುಡ್, ಕ್ರಿಕೆಟ್, ಬಿಗ್ ಬಾಸ್, ಮನೆಯೊಂದು ಮೂರು ಬಾಗಿಲು ಮನೆ ಮುರಿಯುವ ಧಾರಾವಾಹಿ ಅಲ್ಲ.

ಇಲ್ಲೊಂದು ಪ್ರಶ್ನೆಯಿದೆ ಈ ಟಿ.ಆರ್.ಪಿ ಯನ್ನು ತಂದುಕೊಡುವ ಬಂಡವಾಳದಾರರು ಯಾರು ?

ನಾವೇ ಅಲ್ಲ ವೇ ? ಆದರೆ ನರಮಾಂಸದ ಚಟ ಅಂಟಿಕೊಂಡವರಿಗೆ ಅದರಿಂದ ಬಿಡುಗಡೆ ಅಷ್ಟು ಸುಲಭ ಸಾಧ್ಯವೇ ? ಇಲ್ಲಿ ಯಾರನ್ನು ದೂರುವುದು ಅದು ಕೂಡ ಪ್ರಶ್ನೆಯಾಗಿಯೇ ಇದೆ.

ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಮಾಧ್ಯಮಗಳು ಬಹಳ ಪ್ರಮುಖ ನಿಜ ಆದರೆ ಮಾಧ್ಯಮದಲ್ಲಿ ಪ್ರಜಾಪ್ರಭುತ್ವ ತರುವವರು ಯಾರು ? ಎಂಬ ಸಾಯಿನಾಥರ ಪ್ರಶ್ನೆಗೆ ನವಮಾದ್ಯಮಗಳು ತಮ್ಮ  ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ.

9 Comments

 1. kvtirumalesh
  September 14, 2016
 2. Gubbachchi Sathish
  September 14, 2016
 3. ಚಲಂ
  September 14, 2016
 4. Ratnakar Patil
  September 13, 2016
 5. Anonymous
  September 13, 2016
 6. Rudranna Harthikote
  September 13, 2016
 7. Sarojini Padasalagi
  September 13, 2016
 8. Ashalatha
  September 13, 2016
 9. ಮಮತಾ ಅರಸೀಕೆರೆ
  September 13, 2016

Add Comment

Leave a Reply