Quantcast

ಚಿಕ್ ಚಿಕ್ ಸಂಗತಿ: ಅವರು ‘ಮದರ್’

ಜಿ ಎನ್ ಮೋಹನ್ 

ಮುಖಪುಟ ಕಲೆ: ಕೆ ಪ್ರಭಾಕರ್
‘ಮೋಹನ್..’
‘ಮೋಹನ್.. ಜಿ ಎನ್ ಮೋಹನ್ ಎಲ್ಲಿದ್ದರೂ ಬೇಗ ಬರಬೇಕು’

ಹಾಗಂತ ಕೂಗು ದ್ವನಿವರ್ಧಕದ ಮೂಲಕ ನನ್ನ ಕಿವಿಗೆ ಮುಟ್ಟಿದಾಗ ನಾನು ಕಿನ್ನರಿಯನ್ನು ಎತ್ತಿಕೊಂಡು ಆಚೆ ಬೀದಿಯಲ್ಲಿದ್ದೆ
ಪುಟ್ಟ ಕೂಸು ಅದು. ತಿಂಗಳುಗಳ ಲೆಕ್ಕ. ಹಾಗಾಗಿ ಜನಜಂಗುಳಿಯ ಮಧ್ಯೆ ಉಸಿರು ಕಟ್ಟಿತೇನೋ ಒಂದಿಷ್ಟು ಭಿಕ್ಕಲು ಶುರು ಮಾಡಿದಳು

img_20160913_131346_863ಅವಳು ಹಾಗೆ ಮಾಡಿದ್ದೇ ತಡ ನಾನು ಒಂದಿಷ್ಟು ಸ್ವಚ್ಚಂದ ಗಾಳಿಗಾಗಿ
ಅವಳನ್ನು ಎತ್ತಿಕೊಂಡು ಹೊರ ಬಂದಿದ್ದೆ

ಆಗಲೇ ಕೂಗು ಕಿವಿಗೆ ಬಿದ್ದದ್ದು
ನಾನು ಎದ್ದೆನೋ ಬಿದ್ದೆನೋ ಎಂದು ಮಗುವನ್ನು ಎತ್ತಿಕೊಂಡು ಧಾಪುಗಾಲು ಹಾಕುತ್ತ ಓಡಿ ಬಂದೆ

ಬಂದವನೇ ಅವರ ಎದುರು ನಿಂತೆ
ಅವರು ನನಗಾಗಿ ಎಂದು ಕೈನಲ್ಲಿ ಒಂದು ಕಾಣಿಕೆ ಹಿಡಿದು ನಿಂತಿದ್ದರು
ಕೊಡಲು ಕೈ ಚಾಚಿದರು
ಆದರೆ ನನ್ನ ಕೈನಲ್ಲಿ ಕೂಸು
ನಾನು ಮತ್ತೆ ತಬ್ಬಿಬ್ಬು..

ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಅವರು ಕೈ ಚಾಚಿದರು
ಅವರು ಹಾಗೆ ಕೈ ಚಾಚಿದವರೇ ಮಗುವನ್ನು ಸ್ಪರ್ಶಿಸಿದರು, ತಲೆ ನೇವರಿಸಿದರು
ನಂತರ ಮಗುವನ್ನು ತಮ್ಮ ತೋಳಿಗೆ ತೆಗೆದುಕೊಂಡರು
ನನ್ನ ಕೈನಲ್ಲಿದ್ದ ಹಸುಗೂಸು ಕಿನ್ನರಿ ಈಗ ಅವರ ಕೈನಲ್ಲಿ

ಅವರು.. ಅವರು.. ಮದರ್ ತೆರೇಸಾ

ಹೌದು ನೀವು ನಂಬಲೇಬೇಕು ಅವರು ಮದರ್ ತೆರೇಸಾ

ಮಂಗಳೂರಿನಲ್ಲಿದ್ದ ದಿನಗಳು ಅವು.
ಹಾಗೆ ಬಂದ ಮದರ್ ತೆರೇಸಾರನ್ನು ನಾವು ಪುಟ್ಟ ಮಕ್ಕಳಂತೆ ಹಿಂಬಾಲಿಸಿದ್ದೆವು
ವರದಿ ಮಾಡುವುದು ಒಂದು ಕಡೆಯಾದರೆ, ಜಿನುಗುವ ಕೀವನ್ನು ಒರೆಸಿದ, ಕಣ್ಣೇರು ತೊಡೆದ, ಹೇಲು ಉಚ್ಚೆ ಬಾಚಿದ,
ಮೈನಲ್ಲಿ ಕುಷ್ಠದ ಕಲೆಗಳು ಇಲ್ಲವೇ ಇಲ್ಲವೇನೋ ಎನ್ನುವಂತೆ ಮೈ ತೊಳೆದ ಆ ಕೈಗಳನ್ನೂ ನೋಡಬೇಕಿತ್ತು

ಹಾಗೆಯೇ ದೃಢವಾದ ಕಣ್ಣುಗಳನ್ನೂ, ಸದಾ ಒಂದು ಹೂ ನಗೆ ಚೆಲ್ಲಿಯೇ ಇರುತ್ತಿದ್ದ ಮುಖವನ್ನೂ..

ಹಾಗಾಗಿ ನಾವೆಂದೋ ‘ಕರುಣಾಳು ಬಾ ಬೆಳಕೇ..’ ಎಂದು ಕರೆದಿದ್ದಕ್ಕೆ ಬಂದೇ ಬಿಟ್ಟರೇನೋ ಎನ್ನುವಂತೆ
ನಮ್ಮ ಮೊರೆಯನ್ನು ಆಲಿಸಿದವರ ಬೆನ್ನು ಹತ್ತಿ ನಡೆದಿದ್ದವು

ನಾನು ಕೇಳಿದೆ- ಅಮ್ಮ, ನಿಮ್ಮೊಳಗೆ ಆ ಕೀವು ಕಾಣದ, ಅಸಹ್ಯ ಪಡದ ಮನಸ್ಸು ಹುಟ್ಟಿದ್ದು ಯಾವಾಗ

ತೆರೇಸಾ ಮತ್ತೆ ಅದೇ ನಗು ನಗುತ್ತಾ ಹೇಳಿದರು-
ಒಂದು ಘಟನೆ ಹೇಳಿಬಿಡುತ್ತೇನೆ- ಹೀಗೇ ಒಬ್ಬರು ಬಂದಿದ್ದರು.. ನಾನು ಮೈನ ಕೀವು ಒರೆಸುತ್ತಾ ನಿಂತಿದ್ದೆ
ಅವರಿಗೆ ಅದೆಷ್ಟು ಅಸಹ್ಯವಾಯಿತೋ ಗೊತ್ತಿಲ್ಲ
ಕೋಟಿ ಕೊಟ್ಟರೂ ನಾನು ಈ ಕೆಲಸ ಮಾಡುತ್ತಿರಲಿಲ್ಲ ಎಂದರು
ನಾನು ಹೇಳಿದೆ- ನಾನೂ ಅಷ್ಟೇ ಕೋಟಿ ಕೊಟ್ಟರೂ ಈ ಕೆಲಸ ಖಂಡಿತಾ ಮಾಡುತ್ತಿರಲಿಲ್ಲ
ಆದರೆ ಇದು ಈ ರೋಗಿಯ ಒಳಗೆ ಇರುವ ಜೀಸಸ್ ನನ್ನ ಹುಡುಕುವ ನನ್ನ ಕೆಲಸವಷ್ಟೇ ಎಂದು

ತೆರೇಸಾಗೆ ಬದಲಾವಣೆಯ ದಾರಿಗಳು ನಮ್ಮಿಂದಲೇ ಆರಂಭವಾಗುತ್ತದೆ ಎಂದು ಗೊತ್ತಿತ್ತು
ಆ ದಿನಗಳು ರಾಜಕಾರಣ ತನ್ನ ಹೆಸರನ್ನು ತುಂಬಾ ಕೆಡಿಸಿಕೊಂಡಿದ್ದ ದಿನಗಳು
ಹಾಗಾಗಿ ನಾನು ರಾಜಕಾರಣಿಗಳ ಬಗ್ಗೆ ಕೇಳಿದೆ
ಅವರು ಒಂದೇ ಮಾತು ಹೇಳಿದರು-
ಕಾಲಿನ ಮೇಲೆ ನಡೆದಾಡುವವರೆಲ್ಲರೂ ಆತನೆದುರು ಮಂಡಿಯೂರಲೂ ಬೇಕು ಎಂದು ಗೊತ್ತಾಗುವ ಕಾಲ ದೂರವೇನಿಲ್ಲ

ಇನ್ನು ಇದ್ದ ಪ್ರಶ್ನೆ ಒಂದೇ-
ನೀವು ‘ಕನ್ವರ್ಟ್’ ಮಾಡುತ್ತೀರಿ.. ಅದಕ್ಕಾಗಿಯೇ ಈ ಸೇವೆಯ ಸೋಗು ಎನ್ನುತ್ತಾರೆ

ತೆರೇಸಾ ಥೇಟ್ ತಮ್ಮದೇ ಶೈಲಿಯಲ್ಲಿ ನಕ್ಕು ಹೇಳಿದರು-
ಹೌದು ನಾನು ಕನ್ವರ್ಟ್ ಮಾಡುತ್ತೇನೆ
ಒಬ್ಬ ಮನುಷ್ಯನನ್ನು ಇನ್ನೂ ಉತ್ತಮ ಮನುಷ್ಯನನ್ನಾಗಿ
ಒಬ್ಬ ಹಿಂದೂವನ್ನು ಇನ್ನೂ ಉತ್ತಮ ಹಿಂದೂ ಆಗಿ
ಒಬ್ಬ ಮುಸ್ಲಿಂ ನನ್ನ ಇನ್ನೂ ಉತ್ತಮ ಮುಸ್ಲಿಂ ನನ್ನಾಗಿ
ಒಬ್ಬ ಕ್ರಿಶ್ಚಿಯನ್ ನನ್ನ ಇನ್ನೂ ಉತ್ತಮ ಕ್ರಿಶ್ಚಿಯನ್ ಆಗಿ ಎಂದರು

ನನ್ನ ಬಳಿ ಮಾತಿರಲಿಲ್ಲ
ಈಗ ಅದೇ ತೆರೇಸಾ ನನ್ನ ಮಗುವನ್ನು ಎತ್ತಿ ಮಾತನಾಡಿಸುತ್ತಿದ್ದರು
ಹೆಸರು ಕೇಳಿದರು ಕಿನ್ನರಿ ಎಂದೆ. ಅರ್ಥ ಕೇಳಿದರು fairy ಎಂದೆ
ಒಂದು ಕ್ಷಣ ನಿಜಕ್ಕೂ ದೇವಲೋಕದ ಕಿನ್ನರಿಯನ್ನು ಕೈನಲ್ಲಿ ಹಿಡಿದಿದ್ದೇನೋ ಎನ್ನುವಂತೆ ನೋಡಿದರುimg_20160913_131335_847

ನಂತರ ನನಗೊಂದು ಕಾಣಿಕೆ ಕೊಟ್ಟರು
ಒಂದು ಪೆನ್, ಒಂದು ಪೆನ್ ಸ್ಟಾಂಡ್
ಅದೊಂದು ಬರೆಯುವ ಅಕ್ಷಯ ಪಾತ್ರೆ

ಮೊನ್ನೆ ಹೀಗಾಯ್ತು
ಮದರ್ ತೆರೇಸಾ ಗೆ ‘ಸಂತ’ ಪದವಿ ನೀಡುವುದಕ್ಕೆ ಚರ್ಚೆ ಆರಂಭವಾದಾಗ

ಇಂತಿಷ್ಟು ಪವಾಡಗಳು ಮಾಡಿದ್ದರೆ ಮಾತ್ರ ಸಂತ ಪದವಿ ಎನ್ನುವ ನಿಯಮವಿದೆ

ಅವರಿಗೆ ಸಂತ ಪದವಿ ದಯಪಾಲಿಸಲು ಒಂದು ಪವಾಡದ ಕೊರತೆಯಿದೆ ಎಂದು
ವ್ಯಾಟಿಕನ್ ಮಂಡಳಿ ತೀರ್ಮಾನಿಸಿತ್ತು

ತಕ್ಷಣ ನಾನು ಅದೇ ಪೆನ್ ಎತ್ತಿಕೊಂಡೆ

ವ್ಯಾಟಿಕನ್ ಗೆ ಕಿನ್ನರಿಯ ಕಥೆ ಹೇಳಿದೆ
ಈ ಪವಾಡವನ್ನೂ ಸೇರಿಸಿಕೊಳ್ಳಿ
ಒಬ್ಬ ಮನುಷ್ಯನನ್ನು ಒಬ್ಬ ಮನುಷ್ಯನಂತೆ ನೋಡಿದ ಪವಾಡ
ಆಗ ಲೆಕ್ಕ ಸರಿಯಾಗುತ್ತದೆ
ಇನ್ನು ಮದರ್ ಗೆ ಸಂತ ಪದವಿ ನೀಡಬಹುದಲ್ಲಾ ಎಂದು

ಹಾಗೆ ಮನುಷ್ಯತ್ವದ ಪವಾಡ ಕಂಡವರ
ಅದೆಷ್ಟು ಪತ್ರಗಳು ಅವರನ್ನು ಮುಟ್ಟಿದ್ದವೋ ಮದರ್ ‘ಸಂತ’ರಾದರು

ನದಿಯಲ್ಲಿರುವ ಮೀನುಗಳನ್ನು, ಹಸಿದವರ ತಟ್ಟೆಯಲ್ಲಿರುವ ಬ್ರೆಡ್ ಚೂರುಗಳನ್ನು
ಕ್ರಿಸ್ತ ದ್ವಿಗುಣಗೊಳಿಸಿದ ಎನ್ನುತ್ತದೆ ಬೈಬಲ್

ಮದರ್ ತೆರೇಸಾರಂತಹವರ ಸಂಖ್ಯೆಯನ್ನೂ ಬರೀ ದ್ವಿಗುಣವಲ್ಲ, ನೂರು ಪಟ್ಟಾಗಿಸಲಿ

One Response

  1. Dr. Prabhakar M. Nimbargi
    September 14, 2016

Add Comment

Leave a Reply