Quantcast

ನಡುವಲ್ಲೊಂದು ಪುಟದ ಕಿವಿ ಮಡಚಿದೆ!

suchith kotian

ಸುಚಿತ್ ಕೋಟ್ಯಾನ್ ಕುರ್ಕಾಲು

ಇತ್ತೀಚೆಗೆ ಬರೆಯುವುದೆಂದರೆ ಏನೋ ತಾತ್ಸಾರ- ಉದಾಸೀನ.

ಓದುವುದನ್ನೇ ಪೂರ್ಣಕಾಲಿಕ ವೃತ್ತಿ ಮಾಡಿಕೊಳ್ಳಬೇಕೆಂದು ಒಮ್ಮೊಮ್ಮೆ ಅನಿಸುವುದಿದೆ. ಶನಿವಾರ ನನಗೆ ತರಗತಿ ಇಲ್ಲದಿರುವುದರಿಂದ ಬಿಡುವು. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಓದೋಣವೆಂದು ಮನೆ ಪೋರ್ಟಿಕೋದಲ್ಲಿ ಶರ್ಟಿನ ಹಂಗಿಲ್ಲದೆ ತಂಪಾದ ಗ್ರಾನೈಟ್ ನೆಲದ ಮೇಲೆ ಬಿದ್ದುಕೊಂಡಾಗ ಕೈಯಲ್ಲಿದ್ದದ್ದು ‘ಬೊಗಸೆಯಲ್ಲಿ ಮಳೆ’ ಎಂಬ ಜಯಂತ ಕಾಯ್ಕಿಣಿಯವರ ಪುಸ್ತಕ.

ಎಲ್ಲಿಯವರೆಗೆ ಓದಿದ್ದೆ ಎಂದು ನೆನಪು ಮಾಡಿಕೊಳ್ಳುವುದು ಕಷ್ಟವಾದ್ದರಿಂದ ಪುಟದ ಕಿವಿಯನ್ನು ಮಡಚಿ ಗುರುತಿಟ್ಟುಕೊಳ್ಳುವುದು ನನ್ನ (ದುರ್)ಅಭ್ಯಾಸ. ಇಂದೂ ಓದೋಣ ಎಂದು ಪುಸ್ತಕ ಬಿಚ್ಚಿದೆ. ಕಿವಿ ಮಡಚಿಟ್ಟ ಪುಟ ಸಿಕ್ಕಿತು.

tundu-hykluಸಹೋದ್ಯೋಗಿ ಮಿತ್ರ ನಾಗೇಶ್ ವರ್ಷದ ಹಿಂದೆ ಹೇಳಿದ್ದ ಮಾತು ಮತ್ತೆ ಮತ್ತೆ ಕಿವಿಯೊಳಗೆ ಕೇಳಿಸುತ್ತಿದೆ. ಅವರಿಗೆ ಪುಟದ ಕಿವಿಯನ್ನು ಮಡಚಿಟ್ಟವರ ಮೇಲೆ ಅಗಾಧ ಕೋಪ. ಆ ರೀತಿ ಮಾಡುವುದರಿಂದ ಪುಸ್ತಕ ಬೇಗ ಹಾಳಾಗುತ್ತದೆಂದು ಅವರಿಗೆ ಬೇಸರವಾಗುತ್ತಿತ್ತು.

ಅದು ಸತ್ಯವೂ ಹೌದು. ನಮ್ಮ ಕಾಲೇಜಿನ ಗ್ರಂಥಾಲಯದ ಹಲವು ಪುಟಗಳ ಮೇಲ್ತುದಿ ತುಂಡಾಗಿರುವುದಕ್ಕೆ ಇದೇ ಕಾರಣ. ನಾಗೇಶರು ನನಗೂ ಬಯ್ಯಬಹುದು ಎಂಬ ಭಯದಿಂದ ಅವರ ಜೊತೆಗಿರುವಾಗಲೆಲ್ಲಾ ಓದಿದಷ್ಟು ಭಾಗಕ್ಕೆ ಯಾವುದೋ ಕಾಗದದ ತುಂಡು, ಬಸ್ ಟಿಕೇಟು ತೂರಿ ಇಡುತ್ತಿದ್ದೆ. ಅದೀಗ ಸ್ವಲ್ಪ ರೂಢಿಯಾಗುತ್ತಿದ್ದರೂ ಅವಸರಕ್ಕೆ ಕಿವಿ ಮಡಚಿಡುವುದೇ ಪರಿಹಾರ.

ಪುಸ್ತಕ ಬಿಚ್ಚಿ ನಾಲ್ಕು ಸಾಲು ಓದುವುದರೊಳಗೆ ಮನಸ್ಸು ಅದಕ್ಕಿಂತಲೂ ವೇಗವಾಗಿ ಓಡತೊಡಗಿತು. ಎರಡು ನಿಮಿಷ ಕಳೆದು ಮತ್ತೆ ಮನಸ್ಸನ್ನು ಏಕಾಗ್ರತೆಗೆ ತರುವಷ್ಟರಲ್ಲಿ ಮೊಬೈಲ್ ಬಡಿದಾಡಿಕೊಳ್ಳಲಾರಂಭಿಸಿತು. ಬಹುಶಃ ನನ್ನ ಹುಡುಗಿ ಕರೆ ಮಾಡಿರಬಹುದು ಎಂದು ಸ್ಕ್ರೀನ್ ನೋಡಿದರೆ ಮತ್ತದೇ ಹಾಳು ಕಂಪನಿಯ ಜಾಹೀರಾತು ಕರೆ. ಸ್ವೀಕರಿಸದೆ ಕಟ್ ಮಾಡಿದೆ.

ಅಷ್ಟು ಹೊತ್ತಿಗೆ ತೆರೆದಿಟ್ಟ ನನ್ನ ಪುಸ್ತಕದೊಳಗೆ ಇರುವೆಯೊಂದು ಹತ್ತಿ ಬಂತು. ಆಹಹಾ… ಏನು ವೇಗ ಅದರದ್ದು… ಸಾಮಾನ್ಯವಾಗಿ ನಾನು ಓದುವಾಗ ಇರುವೆ ಪುಸ್ತಕದ ಮೇಲೆ ಬಂದರೆ ಕೇರಂ ಆಡುವಂತೆ ಹೆಬ್ಬೆರಳು ಮತ್ತು ತೋರುಬೆರಳನ್ನು ಮಡಚಿ ಇರುವೆಯನ್ನು ದೂರಕ್ಕೆ ತಳ್ಳುವುದೋ, ಉಫ್ ಎಂದು ಊದಿ ಇರುವೆಯನ್ನು ದೂರಕ್ಕೆ ನೂಕಿ ಬಿಡುವುದೋ ಇನ್ನಿತ್ಯಾದಿ ತರಲೆ ಮಾಡುತ್ತಿದ್ದೆ. ಆದರೆ ಇವತ್ತು ಇರುವೆಗೆ ಸ್ವಾತಂತ್ರ್ಯ ಘೋಷಿಸಿ ಅದರಷ್ಟಕ್ಕೇ ಬಿಟ್ಟು ಬಿಟ್ಟೆ. ಮೂರ್ನಾಲ್ಕು ಸುತ್ತು ಅಕ್ಷರ ರಾಶಿಯ ಮೇಲೆ ಓಡಾಡಿದ ಇರುವೆ ಇಲ್ಲಿ ತನಗೇನೂ ಕೆಲಸವಿಲ್ಲ ಎಂದರಿತು ಪುಸ್ತಕದಿಂದ ಕೆಳಗಿಳಿದು ದೂರ ಹೋಯಿತು. ಮತ್ತೆ ಓದಲು ಪ್ರಾರಂಭಿಸಿದೆ.

antಜಯಂತ ಕಾಯ್ಕಿಣಿಯವರಿಗೆ ತಾನು ನೋಡಿದ್ದೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಓದುಗರ ಮುಂದಿಡುವ ತವಕ. ಅವರ ಲೇಖನಗಳಲ್ಲಿ, ಕತೆಗಳಲ್ಲಿ ಪ್ರತಿಯೊಂದರಲ್ಲೂ ಭಾವನೆಗಳ ಮೆರವಣಿಗೆಯೇ ನಡೆದಿರುತ್ತದೆ. ಸುಂದರ ಕಲಾಕೃತಿಯೊಂದನ್ನು ನೋಡಿದಂತೆ ಅವರ ಬರಹಗಳನ್ನು ಸವಿಯಬಹುದು.

ಎರಡು ಸಾಲು ಓದುವಾಗ ನಾನೂ ಯಾಕೆ ಇಂದು ನಡೆದಿದ್ದನ್ನೆಲ್ಲಾ ಬರೆದಿಡಬಾರದು ಎಂದು ಅನ್ನಿಸಿತು. ಬರೆಯದೇ ಕೆಲವು ದಿನಗಳಾದದ್ದರಿಂದ ನನ್ನ ರಟ್ಟು ರೂಮಿನ ಮೂಲೆಯಲ್ಲಿ ಬಿದ್ದಿತ್ತು.

ಅದರ ಮೇಲೆ ನನ್ನದೇ ಒಂದಿಷ್ಟು ಬಟ್ಟೆ, ಓದಲೇಬೇಕೆಂದು ತಗೊಂಡು ಓದದೆ ಇಟ್ಟಿದ್ದ ಎರಡು ಇಂಗ್ಲೀಷ್ ಕಾದಂಬರಿಗಳು, ಅಮ್ಮ ಕೂದಲು ಬಾಚುವಾಗ ಗಾಳಿಗೆ ಹಾರಿ ಬಿದ್ದಿದ್ದ ತಲೆಗೂದಲಿನ ಉಂಡೆ ಎಲ್ಲವೂ ಅದರ ಮೇಲಿತ್ತು. ಅದೆಲ್ಲವನ್ನೂ ಮೂಲೆಗೆ ಹಾಕಿ ರಟ್ಟು ಕೈಗೆತ್ತಿಕೊಂಡೆ.

ರಟ್ಟಿನ ಕ್ಲಿಪ್ಪಿನೊಳಗೆ ಬರೆಯುವ ಪೇಪರ್ ಒಂದು ಬಿಟ್ಟು ಬೇರೆಲ್ಲಾ ಇದ್ದವು. ಯಾವುದೋ ರಿಪೋರ್ಟು, ಎಲ್‌ಐಸಿಯ ಪ್ರೀಮಿಯಂ ಕಂತಿನ ನೋಟೀಸು, ಒಂದೆರಡು ಬಿಲ್ಲು, ಎಂದೋ ಗೀಚಿದ ಒಂದೆರಡು ಸಾಲುಗಳು ರಟ್ಟಿನ ಕ್ಲಿಪ್ಪಿನೊಳಗೆ ಜೋಪಾನವಾಗಿ ಸಿಕ್ಕಿಕೊಂಡಿದ್ದವು.

ಅವಕ್ಕೆಲ್ಲಾ ಮುಕ್ತಿ ಕಾಣಿಸಿ ಒಳ್ಳೆಯ ಪೇಪರ್ ಅದರೊಳಗೆ ಸಿಕ್ಕಿಸಿದೆ. ಖುಷಿಯಿಂದ ಆರಂಭಿಸಿ ಒಂದೂವರೆ ಪುಟಗಳಷ್ಟು ಬರೆದೆ. ಮೊದಲು ನೀಟಾಗಿದ್ದ ಅಕ್ಷರಗಳು ಬರಬರುತ್ತಾ ವಕ್ರವಾದವು. ಆಸಕ್ತಿ ಕಡಿಮೆಯಾಗುತ್ತಿರುವ, ಆಲಸ್ಯ ಜಾಸ್ತಿಯಾಗುತ್ತಿರುವ ಲಕ್ಷಣ ಅದು. ಒತ್ತಕ್ಷರಗಳು ಸ್ವಸ್ಥಾನದಿಂದ ಕದಲಲು ಆರಂಭಿಸಿದವು.

ಇನ್ನು ಬರೆಯುವುದು ನಿಲ್ಲಿಸಿ ಮತ್ತೆ ಓದೋಣ ಎಂದು ಅನ್ನಿಸುತ್ತಿದೆ. ಕಣ್ಣೆದುರಲ್ಲಿ ಮತ್ತದೇ ಬೊಗಸೆಯಲ್ಲಿ ಮಳೆ…

ಎಲ್ಲಿಯವರೆಗೆ ಓದಿದ್ದೇನೆಂದು ನೆನಪಾಗುತ್ತಿಲ್ಲ. ಪುಸ್ತಕ ತೆರೆದು ನೋಡುತ್ತೇನೆ, ಓದಿದ್ದಕ್ಕೆ ಸಾಕ್ಷಿಯಾಗಿ ನಡುವಲ್ಲೊಂದು ಪುಟದ ಕಿವಿ ಮಡಚಿದೆ… !

6 Comments

 1. Avinash
  September 20, 2016
 2. SANTHOSH THIMMOTTU
  September 20, 2016
 3. Suchith Kotian
  September 20, 2016
 4. Anonymous
  September 19, 2016
 5. ಜೋಗಿ
  September 15, 2016
  • ಸುಚಿತ್ ಕೋಟ್ಯಾನ್
   September 15, 2016

Add Comment

Leave a Reply