Quantcast

ಯಾವುದೋ ತಂತಿಯೊಂದು ಇನ್ನೂ ಮೀಟುತ್ತಿದೆ..

ಮರಳು ದಾರಿಯ ಉಳಿದ ಬಣ್ಣಗಳು

ಅಷ್ಟಾಗಿ ಮನುಷ್ಯರೇ ಕಾಣಿಸದ ರಾಜಸ್ಥಾನದ, ಉದ್ದನೆಯ ದಾರಿಗಳು ಮೌನವಾಗಿ ಹೊಳೆಯುತ್ತಿದ್ದವು.

ರಸ್ತೆಯ ಇಕ್ಕೆಲಗಳಲ್ಲಿ ಹಬ್ಬಿದ್ದ ಅನಾಥ  ಮರಳು ಭೂಮಿಯಲ್ಲಿ ಕುರುಚಲು ಗಿಡಗಳು ಮೆಲ್ಲಗೆ ಚಿಗುರುತ್ತಿದ್ದವು. ಎಲ್ಲವನ್ನೂ ನುಂಗುವ ಸಾತ್ವಿಕ ರಾಕ್ಷಸನಂತೆ ಅನಾಯಸವಾಗಿ ಆವರಿಸುವ ಉರಿ ಉರಿ ಬೆಳ್ಳಗಿನ ಬಿಸಿಲು; ಬಿಸಿಲಲ್ಲಿ ಕುದಿಯುತ್ತಿದ್ದ ರಾಜ ಮಹಾರಾಜರ ಕೆಂಪು ಕಲ್ಲಿನ ಭವ್ಯ ಕೋಟೆಗಳು ; ನಡುನಡುವೆ ಅಲ್ಲಲ್ಲಿ ಹಾಯೆನಿಸುವ ಬಣ್ಣ ಬಣ್ಣದ ಒಣ ಗೊಂಬೆಗಳಂತೆ ರಾಚುವ ಮನುಷ್ಯ ಜೀವಿಗಳು. ಉಳಿದಿರುವ ಸಣ್ಣ ದುಃಖ ತುಂಬಿಕೊಂಡ ಆತ್ಮವೊಂದರ ಸುಖದ ಹಾಡು ಕೇಳುತ್ತಿತ್ತು.

avadhi-column-nagashree- horiz-editedಬದುಕಿನ ಜಂಜಾಟಗಳಿಗೆ ರಜೆ ಕೊಟ್ಟು ಖಾಲಿ ಖಾಲಿ ಸುಖದಲ್ಲಿ ರಾಜಸ್ಥಾನದ ಮರುಭೂಮಿಗೊಮ್ಮೆ ತಲೆಯಾನಿಸಿದರೆ, ಮರಳುಗಾಡಿನ ಸಂಗೀತಗಾರನ ಯಾವುದೋ ತಂತಿಯೊಂದು ಈ ನನ್ನ ತಲೆಯೊಳಗೆ ಇನ್ನೂ ಮೀಟುತ್ತಿದೆ. ಊರಿನ ಪರಿಚಿತ ದಾರಿಗಳಲ್ಲಿ, ಈ ಬದುಕು ಹಳೆಯ ಮಾಸಿದ ತೇಪೆಗಳಂತೆ, ರಾಜಸ್ಥಾನದ ಕೆಂಪು, ಹಳದಿ, ನೀಲಿ, ಹಸಿರು ಬಣ್ಣದ ಜೀವಗಳಲ್ಲಿ ಕದಡಿ ಹೋದಂತೆ ಅನ್ನಿಸುತ್ತಿದೆ.

ಜೈಸಲ್ಮೇರಿನ ಮೋಣ್ ಪಿಯಾ ಗ್ರಾಮದ ಅಗಾಧ ಮರುಭೂಮಿಯ ನಟ್ಟನಡುವಿನ ರಣಬಿಸಿಲಲ್ಲಿ ಅಸ್ಕರ್ ಅಲಿ ಎಂಬ ತರುಣನ ಹಿಂದೆ ನಡೆದು ಹೋಗುತ್ತಿದ್ದೆ. ಸ್ತಭ್ದ ಸಮುದ್ರದ ನುಣುಪು ಅಲೆಗಳಂತೆ ಕಣ್ಣು ನೋಡಿದಷ್ಟು ಕಾಣುವ ಮರಳ ರಾಶಿಯಲ್ಲಿ ಸೋದರನಂತಹ ಆ ತರುಣ ಹುಡುಗ, ಅಲ್ಲಿನ ಭಿಲ್ ಬುಡಕಟ್ಟು ಜನರು, ಈಗಲೂ ಕಾಡುತ್ತಿದ್ದಾರೆ.

ಆಚೆ ಹೋದರೂ ಬಿಸಿಲು ಈಚೆ ಬಂದರೂ ಬಿಸಿಲು. ಮೇಲೆ ಕೆಳಗೆ ಭೂಮಂಡಲದ ದಶದಿಕ್ಕುಗಳಲ್ಲಿ ಎಲ್ಲಿ ಓಡಿದರೂ ತಪ್ಪಿಸಿಕೊಳ್ಳಲಾಗದೆ ನಗುತ್ತಾ ಬೆನ್ನಟ್ಟಿ ಬರುವ ಬಿಸಿಲು. ಆ ಮರಳ ರಾಶಿಯಲ್ಲಿ ನಡೆಯುತ್ತಾ ಆ ತರುಣ, “ಇಲ್ಲಿನ ಜನರು ಸ್ವಲ್ಪ ಒರಟರು, ನೀವು ಹಠ ಮಾಡುತ್ತಿದ್ದೀರೆಂದು ಕರೆದುಕೊಂಡು ಹೋಗುತ್ತಿದ್ದೇನೆ ದೀದಿ” ಎನ್ನುತ್ತಾ ಸುಡು ಬಿಸಿಲಲ್ಲಿ ದೊಡ್ಡದೊಡ್ಡ ಬಂಡೆಗಳನ್ನು ಒಡೆಯುತ್ತಿದ್ದವರನ್ನು ತೋರಿಸುತ್ತಿದ್ದ.

“ನಾನೂ ಮೊದಲು ಇದೇ ಕೆಲಸ ಮಾಡುತ್ತಿದ್ದೆ, ದಿನಕ್ಕೆ ಬರೀ 250 ರೂಪಾಯಿ ಕೊಡುತ್ತಿದ್ದರು. ನನ್ನ ಅಪ್ಪ ಕಲ್ಲು ಒಡೆದೂ ಒಡೆದೂ ಸೋತು ಹೋಗಿದ್ದಾನೆ, ಹೀಗೆಯೇ ಕಲ್ಲೊಡೆದು ಈಗ ಕೆಲಸಕ್ಕಿರುವ ದೊಡ್ಡ ಹೋಟೆಲಿನ ಗೋಡೆಗಳನ್ನು ನಾವೇ ಕಟ್ಟಿರುವುದು. ಆಮೇಲೆ ನನಗೆ ಅಲ್ಲಿಯೇ ಹೌಸ್ ಕೀಪಿಂಗ್ ಕೆಲಸ ಕೊಟ್ಟಿದ್ದಾರೆ, ಈಗ ಸ್ವಲ್ಪ ಆರಾಮವಾಗಿದ್ದೇವೆ” ಎನ್ನುತ್ತಿದ್ದ.

castleಮಂಗನಿಯಾರ್ ಜನಾಂಗಕ್ಕೆ ಸೇರಿದ ಅಸ್ಕರ್ ಅಲಿ ಮದುವೆಯಾಗಿ ಮೂರು ತಿಂಗಳಾಗಿತ್ತು. ಹೆಂಡತಿಯನ್ನು ಅಲ್ಲೇ ಹತ್ತಿರದ ಊರಲ್ಲಿ ಬಿಟ್ಟು ವಿರಹಕ್ಕಿಂತ ಮರುಳುಗಾಡಿನ ಧಗೆಯಂತಹ ಬಡತನ ದೊಡ್ಡದು ಎಂದು ಕೆಲವು ದಿನಗಳ ಹಿಂದೆಯಷ್ಟೇ ಪಂಚತಾರಾ ಹೋಟೆಲಿನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದನಂತೆ.

ಈಗಷ್ಟೇ ಕೋಶದಿಂದ ತೆವಳುತ್ತಾ ಈ ಆಧುನಿಕ ಜಗತ್ತಿನೊಳಕ್ಕೆ ಕಾಲಿಡುವ ಮುಗ್ಧ ಹುಡುಗನಂತಿದ್ದ.

ದೂರದಲ್ಲಿ ಕಲ್ಲೊಡೆಯುವವರ ಭಾರದ ಏಟುಗಳನ್ನು ನೋಡಿ ನಾನು ಮತ್ತೂ ಬೆವರಿ ಹೋಗಿದ್ದೆ. ಮೋಣ್ ಪಿಯಾ ಗ್ರಾಮದ ಅನತಿ ದೂರದಲ್ಲಿ ಕಲ್ಲೊಡೆಯುವ ಒಂದು ಬುಡಕಟ್ಟಿನವರು ಆ ದೊಡ್ಡ ಕೆಂಪು ಬಂಡೆಯ ಆಸುಪಾಸಲ್ಲಿ ಹುಲ್ಲಿನ ಜೋಪುಡಿಯಂತಹ ಡಾಣಿಯಾಗಳನ್ನು ಕಟ್ಟಿಕೊಂಡಿದ್ದರು.

ಕೆಲಸ ಮುಗಿದ ಮೇಲೆ ಡಾಣಿಯಾಗಳನ್ನು ಅಲ್ಲೇ ಬಿಟ್ಟು ಮತ್ತೆ ಗ್ರಾಮಕ್ಕೆ ಮರಳುವರಂತೆ. ಜೊತೆಗೆ ಕುರಿಗಳನ್ನೂ ಸಾಕಿ, ಮಾರುತ್ತಾರೆ. ಎಂದೋ ಒಮ್ಮೆ ಬರುವ ಮಳೆ ನೀರನ್ನು ಸಂಗ್ರಹಿಸಿ ಒಂದಿಷ್ಟು ಚೆನ್ನದಾಲ್ ಬೆಳೆಯುತ್ತಾರೆ. ಅದು ಬಿಟ್ಟರೆ ಯಾರ ತಲೆ ಒಡೆದರೂ ಅಲ್ಲಿ ಬದುಕುವುದಕ್ಕೆ ಬೇರೆ ಮಾರ್ಗಗಳಿರಲಿಲ್ಲ. ಇತ್ತೀಚೆಗೆ ಬರುವ ಟೂರಿಸ್ಟ್ ಗಳ ಕೃಪೆಯಿಂದ ಒಂದಷ್ಟು ಹೊಸ ಕೆಲಸಗಳು ಸೃಷ್ಟಿಯಾಗುತ್ತಿದ್ದವು.

ನಾನು ಫೋಟೋ ತೆಗೆಯುವುದನ್ನು ನೋಡಿ ಹರಿಯಾ ಎಂಬ ಹೆಂಗಸು ಓಡಿ ಬಂದು,  “ಫೋಟೋ ತೆಗೆದರೆ ಹುಶಾರ್, ಹುಡುಗಿ, ಬೇಕಾದರೆ ಒಂದು ಫೋಟೋಕ್ಕೆ ಸಾವಿರ ರೂಪಾಯಿಯಂತೆ ಕೊಟ್ಟು ನಮ್ಮ ಫೋಟೋ ತೆಗೆ” ಎಂದು, ಧಮಕಿ ಹೊಡೆದು,  ಫೋಟೋ ತೆಗೆಸಿಕೊಂಡ ಮಕ್ಕಳಿಗೆ ಬೈಯ್ಯುತ್ತಿದ್ದಳು.

“ದೀದಿ ಫೋಟೋ ತೆಗೆಯಬೇಡಿ, ಎರಡು ಏಟು ಹೊಡೆದರೂ ಹೊಡೆದಾರು ಇವರು”, ಎಂದು ಓಡಿ ಬಂದ ಅಸ್ಕರ್ ಅಸಹಾಯಕನಂತೆ ನನ್ನತ್ತ ನೋಡುತ್ತಿದ್ದ.

ಅವರ ಫೋಟೋ ತೆಗೆದು, ಮಾರಿ ದುಡ್ಡು ಮಾಡುತ್ತಾರೆ ಎಂದು ಅವರಿಗೆ ಹೇಗೋ ಗೊತ್ತಿದೆಯಂತೆ, “ಅವರಿಗೆ ದುಡ್ಡು ಕೊಡಬೇಡಿ, ಕಂಠಮಟ್ಟ ಕುಡಿಯುತ್ತಾರೆ, ಸುಮ್ಮನೆ ಹೀಗೆ ಬಂದವರೆಲ್ಲಾ ದುಡ್ಡು ಕೊಟ್ಟರೆ ಅದೇ ಅಭ್ಯಾಸವಾಗಿ ಅವರ ಬದುಕು ಇನ್ನೂ ದುರ್ಬರವಾಗುತ್ತದೆ”, ಅವನ ಮುಖದಲ್ಲಿ ಸಣ್ಣ ನೋವಿನ ಎಳೆಯೊಂದು ಕಾಣುತ್ತಿತ್ತು.

rajastan

ಪುಟ್ಟ ಮಕ್ಕಳು ಮರವೊಂದರಲ್ಲಿ ಜೋಕಾಲಿ ಜೀಕುತ್ತಿದ್ದರು. ತಮಗೆ ದೊರೆತ ಪವಿತ್ರ ನೆಲದ ಮರಳ ರಾಶಿಯಲ್ಲಿ ಹಾಯಾಗಿ ಆಟವಾಡುತ್ತಿದ್ದರು.  ಮಳೆಯ ಸುಳಿವಿಲ್ಲ, ಬೆಳೆಯ  ಮಾತಿಲ್ಲ, ಹಸಿರ ಗಂಧವಿಲ್ಲ, ತಂಗಾಳಿಯ ಸದ್ದಿಲ್ಲ, ಕತ್ತಲಾದಂತೆ ಇನ್ನೂ ಹೆಚ್ಚುವ ಉರಿ ಸೆಖೆಯಲ್ಲಿ ಚಂದಿರನೊಬ್ಬ ತಣ್ಣಗಿರುವಂತೆ ಕಾಣುತ್ತಿದ್ದ. ಹಗಲಾದರೂ ಇರುಳಾದರೂ ಮುಕ್ತಿಯೇ ಇಲ್ಲದ ನೆಲವೊಂದರಲ್ಲಿ ಬದುಕುವ ಪಾಪಿಗಳಂತೆ ಅವರಿದ್ದರು. ಅವರ ಒರಟು ಒಣ ಮೈಯ್ಯಲ್ಲಿ ಅಂತಹದೇ ಒರಟು ಸಿಟ್ಟು, ತುಂಬಿಕೊಂಡಿರುವುದಲ್ಲದೆ,  ಇನ್ನೇನೂ ಇರಲು ಸಾಧ್ಯವಾಗದು ಅನ್ನಿಸುತ್ತಿತ್ತು.

ಇದೊಂದು ಶ್ರೀಮಂತರ ನಾಡಾಗಿತ್ತಂತೆ.  ಪಾಕಿಸ್ತಾನವು ಅಖಂಡ ಭಾರತದ ಭಾಗವಾಗಿದ್ದಾಗ, ಅಫಘಾನಿಸ್ತಾನದವರೆಗೂ, ವ್ಯಾಪಾರ ವಿಸ್ತರಿಸಿತ್ತು.

“ಈ ಮಾರವಾಡಿಗಳ ಹತ್ತಿರ ಎಂತಹ ಅಚ್ಚ ಬೆಳ್ಳಿ ಬಂಗಾರವಿದೆ ಗೊತ್ತಾ ಮೇಡಂ, ಅದೆಲ್ಲಿಂದ ಬರುತ್ತದೆ ಎಂದುಕೊಂಡಿದ್ದೀರಿ, ಪಾಕಿಸ್ತಾನ ಗಡಿಯು ಇಲ್ಲಿಂದ 160 ಕಿ,ಮೀ ಗಳಷ್ಟೇ ಇರುವುದು. ಗಾಂಜಾ, ಅಫೀಮು, ಬೆಳ್ಳಿ, ಬಂಗಾರ, ಕಳ್ಳ ವ್ಯವಹಾರಗಳು ಇಲ್ಲಿ ಬೇಕಾದಷ್ಟು ನಡೆಯುತ್ತದೆ”, ಎಂದು ನಮ್ಮ ಡ್ರೈವರ್ ಹರಿಲಾಲ್ ಸಿಂಗ್ ಹೇಳುತ್ತಿದ್ದ. ಸ್ವತಃ ಮಾರವಾಡಿಯಾಗಿದ್ದ ಆತ ಬಟ್ಟೆ ಅಂಗಡಿಗಳನ್ನು ಇಟ್ಟುಕೊಂಡು, ಡ್ರೈವರ್ ಕೆಲಸವನ್ನೂ ಮಾಡುತ್ತಿದ್ದ. ಸಿಕ್ಕಾಪಟ್ಟೆ ನಾಜೂಕು ಮನುಷ್ಯ. ಪಕ್ಕಾ ವ್ಯವಹಾರಸ್ಥ.

“ಇಲ್ಲಿನ ಜನರು ಲೆಕ್ಕಾಚಾರದವರು ಮೇಡಂ, ಹೋಟೆಲುಗಳಲ್ಲಿ ತಾರಾಮಾರಾ ಚಾರ್ಜ್ ಮಾಡುತ್ತಾರೆ. ಬೆಳೆಯುವುದಕ್ಕೆ ಭೂಮಿಯಿಲ್ಲ, ರೈತರಿಲ್ಲ, ಬೇರೇನೂ ಆದಾಯವಿಲ್ಲ, ಪ್ರವಾಸಿಗರನ್ನೆ ನಂಬಿ ಬದುಕಿದ್ದಾರೆ”, ಎಂದು ಎಲ್ಲದಕ್ಕೂ ಸಮಜಾಯಿಸಿ ಕೊಡುತ್ತಿದ್ದ.

ಒಂದು ಕಡೆ ಊಟಕ್ಕೆ ನಿಲ್ಲಿಸುವಾಗ ಮಂಗಮಾಯಾಗಿದ್ದವನು ನಗುತ್ತಾ ಬಂದು ದೊಡ್ಡ ಪವಾಡದ ಕಥೆ ಹೇಳುತ್ತಾ ಪುಳಕವಾಗುತ್ತಿದ್ದ.

ಊಟ ಮಾಡುವಾಗ ಅವನಿಗೆ ಯಾರೋ ಬಾಬಾ ಸಿಕ್ಕಿದ್ದನಂತೆ. ಹತ್ತು ರೂಪಾಯಿ ನೋಟಿನ ತುದಿಯನ್ನು ಕೈಯ್ಯಲ್ಲಿ ಕತ್ತರಿಸಿ, ರಜಪೂತರು ಯುದ್ಧಕ್ಕೆ ತೆರಳುವಾಗ ತಿಲಕ ಇಡುವಂತೆ ಆ ಚೂರನ್ನು ಅವನ ಹಣೆಯ ಮೇಲೆ ಇಟ್ಟನಂತೆ. “ಬೇಟಾ, ನನಗೆ 500 ರ ನೋಟು ಕೊಡು, ನಿನ್ನ ಭವಿಷ್ಯ ಹೇಳುವೆ”, ಎಂದು 500 ರೂಪಾಯಿ ಇಸಕೊಂಡನಂತೆ. ಕಣ್ಣುಮುಚ್ಚಿ ಕಣ್ಣು ತೆಗೆಯುವುದರೊಳಗೆ ಆ 500 ರ ನೋಟನ್ನು ಕೈಯ್ಯ ಮುಷ್ಟಿಯಲ್ಲಿ ಬಿಗಿ ಹಿಡಿದು ಕೈಯ್ಯನ್ನು ಹರಿಲಾಲನ ತಲೆಗೆ ತಾಗಿಸಿದ ಕೂಡಲೇ ನೋಟು ಪುಡಿಪುಡಿಯಾಗಿ ಕೆಳಗೆ ಉದುರಿತಂತೆ.

musician“ಬೇಟಾ ನೀನು ಒಳ್ಳೆ ಮನುಷ್ಯ, ಅದಕ್ಕೆ ಈ ನೋಟು ಪುಡಿಯಾಯಿತು, ಹೀಗೇ ಇದೇ ದಾರಿಯಲ್ಲಿ ನಡೆ, ನಿನಗೆ ಇಷ್ಟರಲ್ಲಿ ಏನೋ ಒಂದು ಒಳ್ಳೆಯದು ಸಂಭವಿಸುವುದಿದೆ” ಎಂದಿದ್ದಾನಂತೆ.

ಅವನು ಕಥೆ ಹೆಣೆದ ಶೈಲಿಗೆ ನಾನು ಮರುಳಾಗಿ ಕೇಳುತ್ತಿದ್ದೆ. ಹರಿಲಾಲ್ ಸಿಂಗ್ ಎಷ್ಟು ಜೀವ ತುಂಬಿಸಿಕೊಂಡಿದ್ದ, ಮರುಳಗಾಡಿನ ಒಂಟಿ ದಾರಿಗಳಲ್ಲಿ ಎಂತಹದೋ ಭರವಸೆಯನ್ನು ಹೊತ್ತು, ಅವನ ಬದುಕಿನ ದಿಕ್ಕೇ ಬದಲಾದಂತೆ ಖುಷಿಯಾಗಿದ್ದ. ಅವನ ಉಡಾಫೆ, ಚತುರತೆಗಳೆಲ್ಲಾ ಮಾಯವಾಗಿ ಭಾವುಕ ಭಕ್ತನಂತೆ ನಿಷ್ಪಾಪಿಯಾಗಿ ಕಾಣುತ್ತಿದ್ದ. ಆಗ ಕೇಳುತ್ತಿದ್ದ ಯಾವುದೋ ಹಳೆಯ ರಾಜಸ್ಥಾನಿ ಸಂಗೀತ, ಬಾಬಾನ ಕಿಸೆಯಲ್ಲಿನ ಐನೂರರ ನೋಟುಗಳು, ಮತ್ತು ತುಂಬು ಜೀವದ ಹರಿಲಾಲ್, ಸ್ವಲ್ಪ ಹೊತ್ತು ನನ್ನನ್ನು ಹಾಗೇ ಆವರಿಸಿದ್ದರು.

ರಾಶಿ ರಾಶಿ ಮರಳ ಗುಪ್ಪೆಗಳು, ಸಂಜೆಯ ಬಿಸಿಲಲ್ಲಿ ಹೊನ್ನಿನ ಹಾಗೆ ಹೊಳೆಯುತ್ತಿತ್ತು. ಪುಟ್ಟ ಅಂಬಾರಿಯನ್ನು ಹೊತ್ತಂತೆ ಒಣಕಲು ಒಂಟೆಗಳು, ಅವರ ಸರದಾರರು ಗಿರಾಕಿಗಳಿಗೆ ಕಾಯುತ್ತಾ ಯಾರಾದರೂ ಸಿಕ್ಕಿದರೆ ಉಸಿರುಗಟ್ಟಿಸುವಂತೆ ಅವರನ್ನು ಮುತ್ತುತ್ತಿದ್ದರು. ಅಸ್ಕರ್ ಅಲಿ ಮತ್ತು ಡ್ರೈವರ್ ಹರಿಲಾಲ್, ಒಂಟೆ ಸವಾರ ಸಬೀರ್ ಖಾನನ ಜೊತೆ, “ನೋಡೂ ಮಾರಾಯ ಸುಮ್ಮನೆ ಮಾತಾಡಬೇಡ, 1200 ರೂಪಾಯಿ ಕೊಡಲು ನಾವೇನು ಅಂಗ್ರೇಜಿಗಳಲ್ಲ  ನಿನ್ನ ಮಗಳೂ ಚೆನ್ನಾಗಿರಬೇಕು, ನನ್ನ ಮಗಳೂ ಚೆನ್ನಾಗಿರಬೇಕು”, ಎಂದು ಚೌಕಾಸಿ ಮಾಡಿ 800 ರೂಪಾಯಿಗೆ ಒಪ್ಪಿಸಿ ಅವನ ಶಾರುಖ್ ಖಾನ್ ಎಂಬ ಒಂಟೆ ಹತ್ತಿಸಿದ್ದರು.

ಸಬೀರ ಖಾನ, ಮನೆಯಲ್ಲಿ ತನ್ನ ಬಾಣಂತಿ ಹೆಂಡತಿ, ಮತ್ತು ಎರಡು ತಿಂಗಳ ಹಸುಳೆಯನ್ನು ಬಿಟ್ಟು ಬಂದಿದ್ದನಂತೆ. ಬಾಣಂತಿ ತಾಯಿಯನ್ನು ನೋಡಿಕೊಳ್ಳಲು ಎಂಟು ವಯಸ್ಸಿನ ಮಗಳಿದ್ದಳು ! ಇನ್ನೊಬ್ಬ ಮಗ ಅವನ ಜೊತೆಯಲ್ಲಿ ಒಂಟೆಗಳ ಪಕ್ಕ ಕುಳಿತಿದ್ದ. ಶಾಲೆಯಲ್ಲಿ ಹತ್ತು ದಿನಕ್ಕೊಮ್ಮೆ ಟೀಚರೊಬ್ಬರು ಬಂದರೆ  ಬರುತ್ತಾರೆ,  ಉಳಿದ ದಿನಗಳಲ್ಲಿ ಆ ಮಕ್ಕಳು ಅವನ ಐದು ಒಂಟೆಗಳನ್ನು ನೋಡಿಕೊಂಡು ಅವನ ಜೊತೆಯಲ್ಲಿಯೇ ಇರುತ್ತಾರೆ.

ಆ ಮರುಭೂಮಿಯಲ್ಲಿ ಅವರೆಲ್ಲರೂ ಯಾವ ದೇಶದ ಯಾವ ಕಾಲದ ಯಾವ ಜನರೆಂಬುದು ಅರಿವಾಗುತ್ತಿರಲಿಲ್ಲ. ನುಣುಪು ಮರಳ ರಾಶಿ, ಸಂಜೆಗೆ ನಾಚುತ್ತಿತ್ತು. ಸಬೀರ ಖಾನ್ ನಂತಹ ದಿನದ ರೊಟ್ಟಿಗೆ ಕಾಯುವ ಮನುಷ್ಯರು, ಅವರಿಗೆ ಆತುಕೊಂಡರೂ ತಾವು ಬೇರೆಯೇ ಎಂಬಂತೆ ಮರಳ ಬಿಸಿಲಲ್ಲಿ ಕಾಲುಬಿಟ್ಟು ಉದ್ದಕ್ಕೆ ಅಡ್ಡಬಿದ್ದಿದ್ದ ಒಂಟೆಗಳು, ಮೋಡಗಳಿಲ್ಲದ ಆಕಾಶದಲ್ಲಿ ತಡವಾಗಿ ಮುಳುಗುತ್ತಿದ್ದ ಸೂರ್ಯ, ಎಲ್ಲರಿಗೂ ಅಂತಹ ವ್ಯತ್ಯಾಸಗಳೇನಿರಲಿಲ್ಲ.

ರಾವಣ್ ಹತ್ತಾ ಎಂಬ ಬಿದಿರಿನ ಉದ್ದ ಕೋಲಿಗೆ ಗೆರಟ ಕಟ್ಟಿ, ಪ್ರಾಣಿಯ ಚರ್ಮ ಬಿಗಿದು, ಗೆಜ್ಜೆ ಕಟ್ಟಿದ ಹಳೆಯ ಸಂಗೀತ ಉಪಕರಣವನ್ನೋ ಆಲ್ಗೋಜ ಎಂಬ ಕೊಳಲಿನಂತಹ ಉದ್ದ ಉಪಕರಣವನ್ನೋ ಹಿಡಿದು ಹಳೆಯ ಮುದುಕರು  ಓಡಾಡುತ್ತಿದ್ದರು. ಕೆಂಪು, ಹಸಿರು, ಹಳದಿ ಬಣ್ಣದ ಅವರ ದೊಡ್ಡ ರುಮಾಲು, ಬಿಸಿಲಿಗೆ ಹೊಳೆಯುವ ಅವರ ಮುಖದಲ್ಲಿ ರಾಗಗಳನ್ನು ಹೇಗೆ ನುಡಿಸಿದರೂ ಬದಲಾಗುತ್ತಾ ಅವರ ಮಾತುಗಳಿಗಿಂತ ಹರಿತವಾಗಿ ಕೇಳಿಸುತ್ತಿತ್ತು.

ದೇವಿ ಲಾಲ್ ಎಂಬ  ವಯಸ್ಸಾದ ಹಿರಿಯೊರಬ್ಬರು ನಡೆಯುತ್ತಾ ‘ನಾನು ನುಡಿಸುವುದನ್ನು ಒಮ್ಮೆ ಕೇಳಿ’ ಎಂಬಂತೆ ಏನೂ ಮಾತಾಡದೆ ಮುಖದಲ್ಲೇ ದೀನರಾಗಿ ಹೇಳುತ್ತಿದ್ದರು. ಮೂರು ನಿಮಿಷ ನುಡಿಸಿ, ಮತ್ತೆ ಐದು ನಿಮಿಷ ಏದುಸಿರು ಬಿಟ್ಟು, ಕೆಮ್ಮಿ ಸುಸ್ತಾಗುತ್ತಿದ್ದರು. ಮತ್ತೆ ಎದ್ದು ಅವರ ಕಿವಿಯ ಬಂಗಾರದ ಬಣ್ಣದ ವಂಟಿಯಂತೆ, ಒಂಟಿಯಾಗಿ ಮರಳ ಮೇಲೆ ನಡೆಯುತ್ತಿದ್ದರು.

ಸಂಜೆಗತ್ತಲಲ್ಲಿ ಬಿಳಿ ನಿಲುವಂಗಿಯ ಗಂಡಸೊಬ್ಬ ಬೀಡಿ ಸುಡುತ್ತಿದ್ದ. ಬೀಡಿಯ ತುದಿಯ ಕೆಂಡದಂತೆ ಸೂರ್ಯ ಮೆಲ್ಲನೆ ಮುಳುಗುತ್ತಿದ್ದ. ಟೀ ಕುಡಿಯುತ್ತಾ ಖುಷಿಯಲ್ಲಿಯೋ, ಸುಸ್ತಾಗಿಯೋ ಕಾಣುತ್ತಿದ್ದ ಪ್ರವಾಸಿಗರು ; ಹರಕು ಚಾಪೆಯ ಮಂಚದಲ್ಲಿ ದಿನದ ವಹಿವಾಟಿನಂತೆ ಹರಟೆ ಹೊಡೆಯುತ್ತಿದ್ದ ಒಂಟೆ ಸವಾರರು ; ಶಾಲೆ ಓದು ಇಲ್ಲದೆ ಭವಿಷ್ಯದ ವಾರಸುದಾರರಂತೆ ಒಂಟೆಯನ್ನು ಖುಷಿಯಿಂದ ಸವರುತ್ತಿದ್ದ ಅವರ ಮುದ್ದು ಮಕ್ಕಳು ; ಇನ್ನೆಲ್ಲಿಯೋ ಕಲ್ಲಿನ ಗುಡ್ಡೆಯಲ್ಲಿ ಕಲ್ಲೊಡೆದು ಒರಟು ಕೈಯ್ಯಲ್ಲಿ ಸಾರಯಿ ಕುಡಿಯುತ್ತಿದ್ದ ಭಿಲ್ ಬುಡಕಟ್ಟಿನವರು ಎಲ್ಲರೂ ಮರಳ ಧಗೆಯಲ್ಲಿ ಬೆರೆತು ಹೋಗುತ್ತಿದ್ದರು.

desertಎಷ್ಟು ಬಣ್ಣಗಳು ಈ ಊರಲ್ಲಿ, ಬೆಳಗಾದರೆ ಬೂದು ಬಣ್ಣ, ಮಧ್ಯಾಹ್ನ ಕಡು ಹಳದಿ ಬಿಳಿ ಬಣ್ಣ, ಸಂಜೆಯಾದರೆ  ಹೊನ್ನಿನ ಬಣ್ಣ, ಅದಕ್ಕೆ ತಕ್ಕಂತೆ ಜನರು ಧರಿಸುತ್ತಿದ್ದ ಢಾಳ ಬಣ್ಣದ ಲೆಹೆಂಗಾಗಳು, ಅವರ ಬಗೆಬಗೆಯ ಓಲೆ, ಒಡವೆಗಳು. ಈ ಮರಳುಗಾಡಿನ ಒಣ ಜೀವನದಲ್ಲಿ ಈ ಬಣ್ಣದ ಬಟ್ಟೆ ಒಡೆವೆಗಳು ಹೇಗೆ ಬಂದಿರಬಹುದೆಂದು ಯೋಚಿಸುತ್ತಿದ್ದೆ.

ಒಂದು ಕಡೆ, ರಾಜಾಸ್ಥಾನದ ಪ್ರಸಿದ್ಧಗೊಂಬೆಯಾಟದ ಅಲೆಮಾರಿ ಜನರು, ಸಣ್ಣ ಟೆಂಟಿನೊಳಗೆ ಬಣ್ಣದ ಬೊಂಬೆಗಳನ್ನು ಕುಣಿಸುತ್ತಿದ್ದರು.

“ನೋಡಮ್ಮಾ, ಈ ಗೊಂಬೆಯಾಟದ ಕರಾಮತ್ತು ನಿನಗೆ ತಿಳಿದಿಲ್ಲಾ ಸಿನೆಮಾ ಗಿನೆಮಾ ಎಲ್ಲಾ ಬರೋ ಮುಂಚೆಯೇ ರಾಜರಾಣಿಯರ ಕಾಲದದಲ್ಲೇ ಇದು ಶುರುವಾಗಿತ್ತು. ನೋಡಿ,  ಇದು ರಾಜಾಸ್ಥಾನದ ಮೈಕಲ್ ಜಾಕ್ಸನ್, ಈಗ ರಾಜಸ್ಥಾನದ ಶಕೀರಾ ಕುಣಿಯುತ್ತಾಳೆ ನೋಡಿ. ಎಂದು ಪ್ರವಾಸಿಗರನ್ನು ನಗಿಸುತ್ತಿದ್ದದ್ದು ದೂರದ ವರೆಗೆ ನನಗೆ ಕೇಳಿಸುತ್ತಿತ್ತು.

ಈ ಅಲೆಮಾರಿ ಜನರ ಜನಪದ ಹಾಡು, ಕುಣಿತಗಳು, ಇದನ್ನು ಹೀಗೆಯೇ ಕುಳಿತು ನೋಡಿರಬಹುದಾದ ರಾಜರು ಅವರ ಜೈಪುರದ ಆಮೇರ್ ಕೋಟೆಯೋ ಜೋಧ್ ಪುರದ ಮೆಹ್ರಾನ್ಗಡ್ ಕೋಟೆಯೋ, ಬಿಕಾನೇರಿನ ಜುನಾಗರ್ ಕೋಟೆಯೋ ನನ್ನನ್ನು ಮೆಲ್ಲಮೆಲ್ಲಗೆ ಆವರಿಸುತ್ತಿತ್ತು.

rajastan_peopleಸಾವಿರಾರು ಜನರು ಆ ಕೆಂಪುಬಂಡೆಯನ್ನು ಒಡೆದು ಕಟ್ಟಿರಬಹುದಾಗಿದ್ದ, ಮೊಘಲರ ಊಳಿಗರಾಗಿ ರಾಜಪೂತರ ಸಂತತಿಗಳು ಬಾಳಿ ಬದುಕಿದ ಆಳೆತ್ತರದ ಕೋಟೆಯದು. ಅರಮನೆಯ ರಕ್ತಪಾತ-ಷಡ್ಯಂತ್ರ, ದ್ವೇಷ-ಮತ್ಸರ, ಹುಟ್ಟು-ಸಾವು, ಸೋಲು-ಗೆಲುವು, ಅಳಿವು-ಉಳಿವುಗಳು,  ಇನ್ನೂ ಏನೇನೋ ನಡೆದಿರುವ ಸಾವಿರ  ಕಥೆಗಳು ಸಣ್ಣ ಕಲ್ಲಿನ ಕಿಟಕಿಗಳಲ್ಲಿ ಪಿಸುಗುಡುತ್ತಿದ್ದವು. ಪರದೆಯ ಹಿಂದಿನ ಹೆಂಗಸರ ಆಸೆ ಕಂಗಳು, ಅವರ ದಿಗ್ಭ್ರಮೆಯ ಜಗತ್ತು ಆ ಕೆಂಪು ಕೋಟೆಗಳು ಏನೆಲ್ಲಾ ಎಷ್ಟೆಲ್ಲಾ ಕಂಡಿರಬಹುದು. ನೂರಾರು ಪಾರಿವಾಳಗಳು ಅಲ್ಲಿ ಅಘೋಷಿತ ಒಡೆಯರಂತೆ ಹಾರುತ್ತಾ ನೋಡುತ್ತಿದ್ದವು.

ಜೈಪುರದ ಆಮೇರ್ ಕೋಟೆಯ ರಾಜಾ ಮಾನ್ ಸಿಂಗ್ 12 ಅರಸಿಯರ ಒಡೆಯನಂತೆ.  12 ರಾಣಿಯರ ಅಂತಃಪುರಕ್ಕೆ ಹೋಗಲು ಅವನಿಗೆ ಗುಪ್ತ ಮಾರ್ಗಗಳಿದ್ದವಂತೆ. ರಾಜ, ಯಾವ ಇರುಳು ಯಾರ ಬಳಿಯಲ್ಲಿದ್ದ ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲವಂತೆ. ಅಂತಹದ್ದೇ ಒಂದು ರಾತ್ರಿಯಲ್ಲಿ ಜೋಧ್ ಪುರದ ರಾವ್ ಜೋಧಾನ ಮಗ ತಂದೆಯ ಜೊತೆ ಜಗಳವಾಡಿಕೊಂಡು ಕೇವಲ 500 ಸೈನಿಕರ ಜೊತೆ ಒಂದೆರಡು ದೊಡ್ಡ ಪಾತ್ರೆ ಪರಡಿಗಳನ್ನು ಹೊತ್ತು ನಡೆಯುತ್ತಾ ಸಿಟ್ಟಲ್ಲಿ ಬಿಕಾನೇರ್ ಗೆ ಬಂದು ಇಳಿದಿದ್ದ. ವರ್ಷಾನುಗಟ್ಟಲೆ ಸಾವಿರಾರು ಜನರು ಸತ್ತು ಕಟ್ಟಿದ್ದ ಬಿಕಾನೇರ್ ಕೋಟೆಯಲ್ಲಿ ಈಗ ಉಳಿದಿರುವ ರಾಜಮನೆತನದ ರಾಜಕುಮಾರಿ ಮತ್ತು ಉಳಿದವರು ಫ್ರೆಂಚ್ ಪೌರತ್ವ ಪಡೆದು ಫ್ರಾನ್ಸಿನಲ್ಲಿರುವರಂತೆ.

ಏನೆಲ್ಲಾ ಕಂಡಿರಬಹುದಾದ ಅರಮನೆಯ ಧೀಮಂತಿಕೆಯಲ್ಲಿ ಪ್ರವಾಸಿಯೊಬ್ಬನು ಪಾನ್ ತಿಂದು ಪಿಚಕ್ಕನೆ ಉಗಿಯುತ್ತಿದ್ದ. ಯಾವುದೋ ರಾಜನ ಹೃದಯ ಕವಾಟಗಳು ಧಸಕ್ ಎಂದಿದ್ದು ಕೇಳಿಸಿದಂತೆ ಅನ್ನಿಸುತ್ತಿತ್ತು.

ಆಕಾಶದ ಕೆಳಗಿನ ಮಾಯಾಲೋಕದಂತಹ ರಾಜಸ್ಥಾನದಲ್ಲಿ ಬಣ್ಣದ ಗೊಂಬೆಗಳಾವುದು ಮನುಷ್ಯರಾರು ಎಂದು ನನಗೆ ತಿಳಿಯುತ್ತಿರಲಿಲ್ಲ.

ಸಂಜೆಗತ್ತಲಲ್ಲಿ ಬಿಕೋ ಅನ್ನುತ್ತಿದ್ದ ಕೋಟೆ, ಉರಿಯುತ್ತಿದ್ದ ಮರಳುಗಾಡು.. “ಹಿವ್ದೆ ಸೆ ದೂರ್ ಮತ್ ಜಾ… ಎಂದು ಅಲೆಮಾರಿ ಹಾಡುಗಾರರು ಒಬ್ಬರ ಧ್ವನಿಯನ್ನು ಇನ್ನೊಬ್ಬರು ಎತ್ತಿಕೊಳ್ಳುತ್ತಾ ಒಬ್ಬರೊನ್ನಬ್ಬರು ಉಲ್ಲಾಸದಿಂದ ಕೆಣಕುತ್ತಾ ಯಾವುದೋ ಶೃತಿಯಲ್ಲಿ ಒಂದಾಗಿ, ದುಃಖವನ್ನೆಲ್ಲಾ ಚದುರಿಸಿ ಮುಂದೆ ಮುಂದೆ ನಡೆಯುತ್ತಿದ್ದರು.

Add Comment

Leave a Reply