Quantcast

ಈ ಪುಸ್ತಕವೇ ಒಂದು ದೃಶ್ಯಕಾವ್ಯ..

ಬೇಲೂರು-ಹಳೇಬೀಡು
ಎಂಬ ಶಿಲ್ಪಕಾವ್ಯ
r-poornimaಡಾ. ಆರ್. ಪೂರ್ಣಿಮಾ

ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡುಗಳಲ್ಲಿ ಇರುವ ಹೊಯ್ಸಳ ದೇವಾಲಯಗಳು ಜಗತ್ಪ್ರಸಿದ್ಧ.

ಈ ದೇವಾಲಯಗಳ ಸುತ್ತಮುತ್ತ ನಡೆದಾಡಿದಷ್ಟೂ, ನೋಡಿದಷ್ಟೂ ಕಣ್ಮನಗಳಿಗೆ ರಸದೌತಣ. ಬೇಲೂರಿನ ಶಿಲ್ಪಕಲಾ ವೈಭವವನ್ನು ಆನಂದಿಸಿ “ಅಂತಃಪುರ ಗೀತೆ” ಯನ್ನು ಬರೆದ ಡಿವಿಜಿ ಅವರು “ಅದು ಕಲ್ಲಿನಲ್ಲಾದ ಕಾವ್ಯ” ಎಂದು ಕರೆದು unnamed“ಕಾಳಿದಾಸನು ಮಾತಿನಲ್ಲಿ ಮಾಡಿಟ್ಟಿದ್ದನ್ನು ಜಕಣಾಚಾರಿ ಕಲ್ಲಿನಿಂದ ಹೊರಡಿಸಿದ್ದಾನೆ” ಎಂದು ಬಣ್ಣಿಸಿದ್ದಾರೆ. ನಿಜಕ್ಕೂ ಬೇಲೂರು- ಹಳೇಬೀಡು ದೇವಾಲಯಗಳು ಕನ್ನಡ ಜನಾಂತರಾಳದಿಂದ ಹೊಮ್ಮಿದ ಅದ್ಭುತ ಶಿಲ್ಪಕಾವ್ಯ; ಅದುವೇ ಭುವನದ ಭಾಗ್ಯ.

ಶತಮಾನಗಳುದ್ದಕ್ಕೂ ಬೇಲೂರು- ಹಳೇಬೀಡು ಶಿಲ್ಪಸೌಂದರ್ಯದ ಆಸ್ವಾದನೆ, ಅನ್ವೇಷಣೆ ಮತ್ತು ಅನುಸಂಧಾನ ನಿರಂತರವಾಗಿ ನಡೆಯುತ್ತಿವೆ. ಅಲ್ಲಿಗೆ ಭೇಟಿ ಕೊಡುವ ಕೋಟ್ಯಾನುಕೋಟಿ ಜನರ ಮನೋಭಿತ್ತಿಯಲ್ಲಿ ಅವು ಅಚ್ಚೊತ್ತುವ ಬಗೆಗೆ ಸರಿಮಿಗಿಲಿಲ್ಲ. ಅಕ್ಷರದಲ್ಲಿ, ಕುಂಚದಲ್ಲಿ, ಆಧುನಿಕ ಕಾಲದ ಕ್ಯಾಮರಾದಲ್ಲಿ ಅದನ್ನು ಮತ್ತೆ ಮತ್ತೆ ಸೆರೆಹಿಡಿಯುವ ಜನರ ಆಕಾಂಕ್ಷೆಗೂ ಮೇರೆ ಇಲ್ಲ.

ಆದರೆ, ಇದು ಬರೀ ಅಲ್ಲಿ ಇರುವುದರ ಪ್ರತಿಬಿಂಬ ತೆಗೆಯುವ ಕೆಲಸ ಅಲ್ಲ. ಬೇಲೂರು- ಹಳೇಬೀಡು ಶಿಲ್ಪಸೌಂದರ್ಯದ ಆಂತರ್ಯವನ್ನು ಅರಿಯಲು ಸೂಕ್ಷ್ಮ ಮನಸ್ಸೂ ಬೇಕು, ಸೂಕ್ಷ್ಮಾತಿಸೂಕ್ಷ್ಮ ಒಳಗಣ್ಣೂ ಬೇಕು. ಕಲಾವಿದ ಪುಂಡಲೀಕ ಕಲ್ಲಿಗನೂರ ಅವರ ಈ ನಯನ ಮನೋಹರ ಪುಸ್ತಕ ಅಂಥದೊಂದು ಮಿಡಿಯುವ ಮನ ಮತ್ತು ಅದರ ಒಳಗಣ್ಣು ನಡೆಸಿರುವ ಕಲಾತ್ಮಕ ಅಭಿಯಾನ; ಅವರ ಕೈಯಲ್ಲಿದ್ದ ಕ್ಯಾಮರಾ ಕೇವಲ ಒಂದು ಉಪಕರಣ. ಬೇಲೂರು-ಹಳೇಬೀಡು ಎಂಬ ಶಿಲ್ಪಕಾವ್ಯವನ್ನು ಕುರಿತ ಅವರ ಈ ಪುಸ್ತಕವೇ ಒಂದು ದೃಶ್ಯಕಾವ್ಯ.

ಬೇಲೂರು ಶಿಲ್ಪಸೌಂದರ್ಯವನ್ನು ಬಿಸಿಲಿನಲ್ಲಿ ಮಳೆಯಲ್ಲಿ ಬಗೆಬಗೆಯಾಗಿ ನೋಡುವುದೇ ಒಂದು ವಿಶಿಷ್ಟ ಅನುಭವ. ದೇವಾಲಯದ ಗೋಡೆಗಳ ಮೇಲಿನ ಅವವೇ ಸುಂದರ ಶಿಲ್ಪಗಳು ಎಳೆಬಿಸಿಲಿನಲ್ಲಿ ಮಿಂದು, ಹನಿಮಳೆಯಲ್ಲಿ ನೆಂದು, ಬೇರೇನೋ ಮಿನುಗು ಮಿಂಚುಗಳನ್ನು ಪಡೆವ ಕ್ಷಣಗಳನ್ನು ಪುಂಡಲೀಕ ಅವರ ಕ್ಯಾಮರಾ ಕಣ್ಣು ಸೆರೆಹಿಡಿದಿರುವ ರೀತಿಯೇ ಅದ್ಭುತ. ಇವುಗಳಲ್ಲಿ ಒಂದೊಂದನ್ನೂ ಕಲಾಕೃತಿಯಂತೆ ಆಸ್ವಾದಿಸಿ ಆನಂದಿಸಬಹುದು. ಛಾಯಾಗ್ರಹಣವೂ ಒಂದು ಸೃಜನಶೀಲ ಕಲೆ ಎಂಬುದನ್ನು ಈ ಚಿತ್ರಗಳು ಸಾಬೀತು ಮಾಡುವುದು ನಿಸ್ಸಂಶಯ.

unnamed-1ಪುಂಡಲೀಕ ಕಲ್ಲಿಗನೂರ ಅವರ ಈ ಅಭಿಯಾನದ ಉದ್ದೇಶ ಬರೀ ಸೌಂದರ್ಯದ ಆಸ್ವಾದನೆಯಲ್ಲ. ಬೇಲೂರು- ಹಳೇಬೀಡು ಶಿಲ್ಪಕಲಾ ವೈಭವದಲ್ಲಿ ಅಷ್ಟೊಂದು ಪ್ರಚಾರಕ್ಕೆ ಬಾರದ ವಿಶಿಷ್ಟ ಶಿಲ್ಪಗಳು ಮತ್ತು ಅಂಶಗಳಿಗೆ ಪ್ರಾಮುಖ್ಯ ನೀಡುವ ಮೂಲಕ ಅನ್ವೇಷಣೆ ನಡೆಸಿರುವುದು ಇಲ್ಲಿ ಗಮನಾರ್ಹ. ಇಂಥ ಚಿತ್ರಗಳು ಸಂಶೋಧಕರು, ಇತಿಹಾಸಕಾರರರಿಗೆ ಆಕರ ಸಾಮಗ್ರಿಯಾಗಿ ನೆರವಿಗೆ ಬರುವಷ್ಟು ಉಪಯುಕ್ತವಾಗಿವೆ. ವಿಶೇಷವಾಗಿ ಹಳೇಬೀಡು ಇಲ್ಲಂತೂ ಹೊಸನೋಟದಲ್ಲಿ ಕಾಣುತ್ತದೆ. ಪುಂಡಲೀಕ ಅವರ ಕ್ಯಾಮರಾ ಇಲ್ಲಿ ತೆರೆಮರೆಗೂ ಬೆಳಕು ಚೆಲ್ಲುವ ಕಾರ್ಯ ಮಾಡಿದೆ.

ಕುಂಚ ಕಲಾವಿದನ ಈ ಕ್ಯಾಮರಾ ಕಲೆಯ ಅಚ್ಚುಕಟ್ಟು, ಕನ್ನಡನಾಡಿಗೆ ಖಂಡಿತ ಅಚ್ಚುಮೆಚ್ಚು ಆಗುತ್ತದೆ. ಈ ಅನನ್ಯ ಕೊಡುಗೆಗಾಗಿ ಪುಂಡಲೀಕ ಕಲ್ಲಿಗನೂರ ಅವರನ್ನು ಅಭಿನಂದಿಸುತ್ತೇನೆ.

 

 

 

pundalik puttannayya poster web

 

One Response

  1. nirmala I shettar
    September 16, 2016

Add Comment

Leave a Reply

%d bloggers like this: