Quantcast

ಓಡಿ ಹೋಯ್ತು ‘ಕೊಡಾಮಾಸೆ’

 

ಸಿದ್ದಕ್ಕಿ ದೋಸೆ ಸಿದ್ದಕ್ಕಿ ಪಾಯ್ಸೆ ಹೋಗಿ ಬಾ ಕೊಡೆ ಅಮವಾಸ್ಯೆ

nempe devaraj

ನೆಂಪೆ ದೇವರಾಜ್, ತೀರ್ಥಹಳ್ಳಿ

ಮಳೆ ಹೊಡೆದೂ ಹೊಡೆದೂ ಕಾಲಿಟ್ಟಲ್ಲೆಲ್ಲ ಹೆಜ್ಜೆ ಮುಳುಗುವಷ್ಟು ಕೆಸರು.

ಮನೆಯ ಮೇಲ್ಚಾವಣಿಗಳು ಹಸಿರನ್ನೇ ಹೊದ್ದುಕೊಂಡಂತೆ ಹತ್ತು ಹಲವು ಸಣ್ಣ ಸಣ್ಣ ಸಸಿಗಳಿಗೆ ವೇದಿಕೆಯಾಗುವ ಕಾಲ. ಕಾಲುಗಳ ಸಂದು ಗೊಂದುಗಳು ಬಿಳಿಯಾಗಿ ಒಳ ಚರ್ಮ ಅಸಹ್ಯ ಹುಟ್ಟಿಸುತ್ತಿರುತ್ತವೆ. ಕೆಲವರ ಬೆರಳುಗಳು ಬಿದ್ದೇ ಹೋಗುತ್ತವೇನೋ ಎಂಬಷ್ಟು ಕರಗಿರುತ್ತದೆ.Kenjiruve

ಕಾಲಸಂದಿಗಳು ಕಾಡು ಗೇರು, ಅಣಲೆಕಾಯಿ, ಹರಳೆಣ್ಣೆ ಕುಂಕುಮಗಳಿಂದ ಲೇಪಿತಗೊಂಡು ಮೂಲ ಬಣ್ಣವನ್ನೇ ಕಳೆದುಕೊಂಡು ಕೆಸರಲ್ಲಿ ಓಡಾಡುತ್ತಿರುತ್ತವೆ.

ಮಣ್ಣಿನ ನೆಲದ ಗೋಡೆಗಳಿಗೆ ತಣಿಸು ತೇವವನ್ನೇ ಹೀರುತ್ತೇವೆ ಎಂದು ನುಗ್ಗುವ ಕೆಂಜಿಗೆ ಇರುವೆಗಳ ಕಾಟ ಮಾಮೂಲಿ. ಒಮ್ಮೆ ನಮ್ಮ ದನದ ಕರುವೊಂದಕ್ಕೆ ಕೆಂಜಿಗೆ ಇರುವೆಗಳು ಕಚ್ಚಿ ಬೆಳಗಾಗುವುದರೊಳಗೆ ಉರಿ ತಾಳದೆ ಸತ್ತೇ ಹೋಗಿತ್ತು. ಸಾವಿರಾರು ಕೆಂಜಿಗೆ ಇರುವೆಗಳು ಅದಾವ ಕಾರಣಕ್ಕೆ ಮುತ್ತಿಕೊಂಡಿದ್ದವೋ ಏನೋ? ಈ ಕಾರಣಕ್ಕೇ ನಮ್ಮ ಮನೆಯ ಹಸುವೊಂದರ ಹೆಸರು ಕೆಂಜಿಗೆಯಾಗಿ ಮನೆ ಮಾತಾಗಿತ್ತು. ಪ್ರತಿ ವರ್ಷ ಕೆಂಜಿಗೆ ಇರುವೆಗಳು ಕಚ್ಚಿ ಕರುಗಳು ಸಾಯುತ್ತಿದ್ದರಿಂದ ಒಂದು ಹಸುವಿಗೆ ಈ ಹೆಸರು ಇಟ್ಟ ಮೇಲೆ ಕೆಂಜಿಗೆ ಇರುವೆಗಳು ಕಾಟ ಕೊಡುವುದನ್ನು ಬಿಟ್ಟುವೆಂಬುದು ನಂಬಿಕೆಯಾಗಿತ್ತು.

ಸಾಮಾನ್ಯವಾಗಿ ಎಲ್ಲ ಇರುವೆಗಳಿಗಿಂತ ಭಿನ್ನವಾಗಿರುವ ಕೆಂಜಿಗೆ ಇರುವೆಗಳ ಕಡು ಹಳದಿಯ ಬಣ್ಣ ಹಾಗೂ ಕಚ್ಚಿದರೆ ಇವುಗಳಿಂದಾಗುತ್ತಿದ್ದ ವಿಲಕ್ಷಣ ಉರಿ ಇಡೀ ಮಳೆಯ ಮಹತ್ವವನ್ನೇ ರೇಜಿಗೆ ಒಡ್ಡುವಷ್ಟು ಶಕ್ತಿ ಪಡೆದಿತ್ತು.

ಕೆಲವೊಮ್ಮೆ ಮಾಡಿಟ್ಟ ಸಾರು ಪಲ್ಯಗಳ ಮೇಲೆ, ಕಡೆಯುವ ಕಲ್ಲಿನ ಮೇಲೆಲ್ಲ ಇವುಗಳ ಹರಿದಾಟ ನಿಧಾನವಾಗಿ ನಡೆಯುತ್ತಿರುತ್ತದೆ. ಇಂತಹ ಕ್ಷುದ್ರಾತಿ ಕ್ಷುದ್ರ ಜೀವಿಗಳೂ ಒಮ್ಮೊಮ್ಮೆ ನಡೆಸುವ ದಾಳಿಗಳನ್ನು ಹೇಳುವಂತೆಯೂ ಇಲ್ಲದೆ ಬಿಡುವ ಹಾಗೂ ಇಲ್ಲದೆ ಮಲೆನಾಡಿನ ಸಹವಾಸವೇ ಬೇಡಾ, ಎಲ್ಲಾದರೂ ವಲಸೆ ಹೋಗೋಣ ಎನಿಸುವಷ್ಟು ಇಂತವುಗಳ ಶಕ್ತಿ ಇಮ್ಮಡಿಯಾಗುವುದೂ ಉಂಟು.

ಮಳೆ ಆರಂಭವಾಗುವಾಗ ಇದ್ದ ಉಲ್ಲಾಸ ನಿಧಾನವಾಗಿ ಮನಸ್ಸಿಂದ ಮರೆಯಾಗುವ ಕಾಲ. ಎಲ್ಲಿ ನೋಡಿದರೂ ನೀರೇ ನೀರು. ಮಳೆ ನೀರು ಸಂಗ್ರಹಿಸುವ ವಿಧಾನಗಳ ಬಗ್ಗೆ ಪಶ್ಚಿಮ ಘಟ್ಟದ ಸೆರಗಿನಲ್ಲಿ ಸಲಹೆ ಸೂಚನೆಗಳನ್ನು ಕೊಟ್ಟು ತಜ್ಞರುಗಳು ಮಾತಾಡುವಾಗ ಹಲವರು ಒಳಗೊಳಗೇ ನಗುತ್ತಾ ಕೇಳಿಸಿಕೊಳ್ಳುವುದೂ ಉಂಟು.

ಒಮ್ಮೊಮ್ಮೆ ಮಳೆಗಾಲದಲ್ಲಿ ನೀರಿನಿಂದ ಮನುಷ್ಯರೂ, ಪ್ರಾಣಿ, ಪಕ್ಷಿಗಳೂ, ಗದ್ದೆ-ತೋಟಗಳೂ, ಕಾಡಿನ ಹತ್ತು ಹಲವಾರು ಸಸ್ಯಗಳೂ ತಪ್ಪಿಸಿಕೊಳ್ಳಲು ಕಾಯುತ್ತಿರುವ ವಾತಾವರಣ ಎಲ್ಲೆಲ್ಲೂ ರಾಚುವಂತಿರುವಾಗ ಮಳೆಕೊಯ್ಲು ಮಹತ್ವ ಪಡೆಯಲು ಸಾಧ್ಯವೆ? ಮಳೆಗೆ ಬೈದೂ ಬೈದೂ ಸುಸ್ತಾದ ಹೆಂಗಸರು. ಆರಿದ್ರಾ, ಪುನರ್ವಸು, ಪುಷ್ಯದಂತಹ ಒಂದೂವರೆ ತಿಂಗಳ ಕಾಲದ ಮಳೆಗೆ ಕಣ್ಣು ಹಾಯಿಸಿದಲ್ಲೆಲ್ಲ ಬಳ ಬಳನೆ ಹರಿದು ಹೊಳೆ, ಹಳ್ಳ ಸೇರುವ ನೀರು. ಗಂಧದ ಎಲೆಗಳು ಉದುರಿವೆ. ಅಡಿಕೆ ಮರದ ಬುಡದಲ್ಲಿ ಕೊಳೆರೋಗದಿಂದ ನಲುಗಿ ಉದುರಿದ ಅಡಿಕೆ ಕಾಯಗಳನ್ನು ನೋಡಿ ಮರುಗುವ ಬೆಳೆಗಾರ. ಸಣ್ಣ ಪುಟ್ಟ ಗಿಡಗಳು ಎಲೆಗಳನ್ನು ಉದುರಿಸಿಕೊಂಡು ಇಂದೋ ನಾಳೆಯೋ ಎಂಬಂತೆ ಸಾವಿನ ಸೂತಕದ ಮನೆಯಂತೆ ವಾಲಿಕೊಂಡಿರುತ್ತವೆ.

ನನ್ನ ಪ್ರಕಾರ ಈ ಕೊಡೆ ಅಮಾವಾಸ್ಯೆ ಅಥವಾ ಕ್ಯಾಲೆಂಡರಿನಲ್ಲಿ ಮಾತ್ರ ಕರೆಸಿಕೊಳ್ಳುವ ಭೀಮನ ಅಮಾವಾಸ್ಯೆ ಭಯಂಕರ ದಾರಿದ್ರ್ಯ ಹುಟ್ಟಿಸುವ ಹಸಿ ಬರದ ಹಬ್ಬ. ಗದ್ದೆಯಲ್ಲಿ ಬದಗಳನ್ನು ಕಡಿದೋ, ನಾಟಿ ಮಾಡಲು ನೊಳ್ಳಿಯನ್ನು ಹೊಡೆದೋ, ಗಡ ಗಡ ನಡುಗುವ ಚಳಿಯಲ್ಲಿ ಮನೆಗೆ ಬಂದರೆ ಹಬ್ಬದೂಟ ಸೂಸುವ ಪರಿಮಳವಿಲ್ಲ, ಸೆಗಣಿ ಸಾರಿಸಿದ ಅಂಗಳವಿಲ್ಲ, ಹೊಸಿಲ ಹತ್ತಿರ ಎಳೆದ ರಂಗೋಲಿಗಳಿಲ್ಲ. ಅಂಗಳದ ತುಂಬ ಹಾಸುಂಬ, ಜಾರಿಕೆ, ಪರಜಡ್ಡು ಇವನ್ನೆಲ್ಲ ನೋಡಿದರೆ ಹಬ್ಬ ಮಾಡುವುದೇ ಬೇಡಾ ಎನಿಸುವಷ್ಟು ಮಳೆ ಹೊಡೆಯುತ್ತಿರುತ್ತದೆ.

ಒಂದು ಕಡೆ ಗದ್ದೆ ಗಣ್ಣಗಳಲ್ಲಿ ನಟ್ಟಿ ಜೋರಾಗಿ ನಡೆಯುತ್ತಿರುತ್ತದೆ. ಮನೆಯಲ್ಲಿ ಮೊದಲ ಹಬ್ಬವಾಗಿ ಕೊಡೆ ಅಮವಾಸ್ಯೆ ಬಂದು ಕರೆಯುತ್ತಿದೆ. ಕೊಡೆ ಹಿಡಿದುಕೊಂಡೇ ಹಬ್ಬ ಮಾಡಬೇಕಿದ್ದರಿಂದ ಕೊಡೆ ಅಮವಾಸ್ಯೆ ಎಂದು ಹೇಳುವುದು ರೂಢಿ.malenadu-dairy-promo

ಆದರೂ ಇತ್ತೀಚೆಗೆ ಹೊಸದಾಗಿ ಮದುವೆಯಾದ ಹುಡುಗ ಹುಡುಗಿಯರ ಹಬ್ಬವಾಗಿ ಪರಿವರ್ತಿಸಲು, ಮಹಾಭಾರತದ ಕತೆಯೊಂದನ್ನು ಇದಕ್ಕೆ ಸೇರಿಸಿರುದರಿಂದ ಈ ಕೊಡೆ ಅಮವಾಸ್ಯೆಯ ದಿನದಂದು ನಮ್ಮ ಊರಿನ ಪಕ್ಕದ ಭೀಮನ ಕಟ್ಟೆಯ ಹತ್ತಿರ ತುಂಗಾ ನದಿಗೆ ಹೋಗಿ ಪೂಜೆ ಸಲ್ಲಿಸುವುದೂ ಕೊಡೆ ಅಮವಾಸ್ಯೆಯೊಂದಿಗೆ ತಣ್ಣಗೆ ಸೇರಿಕೊಂಡಿದೆ.

ಅದೂ ಅಲ್ಲದೆ ಹೊಸದಾಗಿ ಮದುವೆಯಾದ ಹುಡುಗಿ ತನ್ನ ಗಂಡನ ಪಾದ ಪೂಜೆ ಮಾಡುವುದು, ನಂತರ ಅಡ್ಡ ಉದ್ದ ಗಂಡನ ಕಾಲಿಗೆ ಬೀಳುವುದೆಲ್ಲ ಸೇರಿ ಹೆಣ್ಣಿನ ಗುಲಾಮಗಿರಿ ಹೊಸ ಹೊಸ ಆಚರಣೆಗಳ ಮೂಲಕ ಮುಂದುವರಿಯಲು ಈ ಹಬ್ಬವೂ ಸಹಾಯಕವಾದದ್ದು ಒಟ್ಟು ಭಾರತೀಯ ಮನಸ್ಥಿತಿಯ ದ್ಯೋತಕವೇ ಆಗಿದೆ.

ಈ ಮಳೆ ಎಂಬುದು ಒಮ್ಮೊಮ್ಮೆ ಎಲ್ಲ ಕಾಲದಲ್ಲೂ ಕೈ ಕೊಟ್ಟ ಉದಾಹರಣೆಗಳಿವೆ. ಇಂದು ಮಳೆ ಸಾಧಾರಣ ಎಂದಾಗ ದನಗೋಲೆ ಹೊಡೆದದ್ದಿದೆ. ಬಾರಿ ಮಳೆ ಎಂದು ಭವಿಷ್ಯ ನುಡಿದಾಗ ಒಂದು ಹನಿಯೂ ಬೀಳದೆ ಪ್ರಖರ ಸೂರ್ಯನಿಂದ ಮುಗ್ಗಲು ಹಿಡಿದ ಬಟ್ಟೆಗಳೆಲ್ಲ ಗರಿ ಗರಿಯಾಗಿದ್ದೂ ಇದೆ. ಆದರೆ ಕೊಡೆ ಅಮವಾಸ್ಯೆಯ ದಿನ ಮಳೆ ಕೈಕೊಟ್ಟ ವರುಷ ನನ್ನ ನೆನಪಿಗೆ ಬರುತ್ತಲೇ ಇಲ್ಲ. ಏಕೆಂದರೆ ಕೊಡೆ ಹಿಡಿಯದೆಯೋ, ಕಂಬಳಿ ಇಲ್ಲದೆಯೋ ತುಳಸಿ ಪೂಜೆ ಮಾಡಿದ್ದ ನೆನಪಂತೂ ಇಲ್ಲ.

ಅರ್ಧಂಬರ್ಧ ನಾಟಿ ಮಾಡಿಯೋ, ಹೂಟಿಯನ್ನು ಬಿಟ್ಟೋ, ಹೆಂಗಸರು ಗಂಡಸರು ಮನೆಗೆ ಬಂದರೆ ತುಳಸಿ ಪೂಜೆಗೆ ಒಮ್ಮೊಮ್ಮೆ ತೆಂಗಿನ ಕಾಯಿಯೇ ಸಿಗದಂತಹ ದಟ್ಟ ದಾರಿದ್ರ್ಯದ ಪರಿಸ್ಥಿತಿ. ಜಕ್ಕಣಿಗೆ ಇಡಲು ವಿವಿಧ ಭಕ್ಷ್ಯ ಭೋಜನಗಳನ್ನು ಮಾಡುವುದಿರಲಿ. ನಾಟಿಯನ್ನು ಅರ್ಧಕ್ಕೆ ಬಿಟ್ಟು ಹಬ್ಬದಡುಗೆ ಮಾಡಲು ಬಂದು ಅಕ್ಕಿಗಾಗಿ ಹುಡುಕಿದರೆ ಗಡುಗಿಯೇ ಖಾಲಿ ಖಾಲಿ. ಇರುವ ಅಕ್ಕಿಯಲ್ಲೇ ಪಾಯಸ ಮತ್ತು ದೋಸೆ ಮಾಡುವ ದುರ್ದಿನದ ಹಬ್ಬದಲ್ಲಿ ಜಕ್ಕಣಿಗಳಿಗೆ ತಮ್ಮ ಕೈಚಳಕದಲ್ಲಿ ತೃಪ್ತಿ ಪಡಿಸುವ ಗೃಹ ತಪಸ್ವಿಯ ಕಲಾವಂತಿಕೆ ಕೆಲವೊಮ್ಮೆ ಆಶ್ಚರ್ಯ ಹುಟ್ಟಿಸುವಂತದ್ದು.

ಸಿದ್ದೆ ಅಕ್ಕಿಯನ್ನು ಕಡೆಯುವ ಕಲ್ಲಿಗೆ ಹಾಕಿ ದಡ ಬಡ ತಿರುಗಿಸಿ ಹಿಟ್ಟು ಮಾಡಿ, ಒಣಗಿಸಿಟ್ಟಿದ್ದ ಅಡಿಕೆ ಹಾಳೆಗಳನ್ನು ಒಲೆಗೆ ಹಾಕಿ ಬೆಂಕಿ ಹತ್ತಿಸಿ, ಕಪ್ಪಾಗಿ ಮೂಲೆ ಸೇರಿದ್ದ ದೋಸೆ ಕಾವಲಿಯನ್ನು ಒಲೆಗೆ ಇಟ್ಟು, ಅರ್ಧ ಕೊಯ್ದ ಬಾಳೆಯ ಕಾಯಿಯನ್ನು ಎಣ್ಣೆಗೆ ಅದ್ದಿ ಕಾವಲಿಗೆ ಒರೆಸಿ, ಚಿಪ್ಪಿನಲ್ಲಿ ತೆಗೆದು ಬಿಳಿಯ ಹಿಟ್ಟನ್ನು ಕಾವಲಿಗೆ ಸುರಿದಾಗ ಇಡೀ ಊರೇ ಬೆಚ್ಚಗಾಗುವಂತೆ ಚೊಂಯ್ ಎನ್ನುತ್ತಿದ್ದದನ್ನು ಈ ಮಳೆಗಾಲದಲ್ಲಿ ನೆಪಿಸಿಕೊಳ್ಳುವುದು ಮತ್ತಷ್ಟು ಬೆಚ್ಚಗಾಗುವ ಘಟನೆ.

ಇವರ ಕೈಚಳಕದಿಂದ ದೋಸೆಯ ಪರಿಮಳ ಇಡೀ ಊರಿನ ಬಾಯಲ್ಲಿ ನೀರೂರಿಸುತ್ತಿತ್ತು. ಏಕೆಂದರೆ ದೋಸೆ ಕಾವಲಿ ಎಂದೋ ಅಟ್ಟ ಸೇರಿದ್ದರೂ ಕೊಡೆ ಅಮವಾಸ್ಯೆಯ ದಿನ ಮಾತ್ರ ತಪ್ಪದೆ ಒಲೆಗೆ ಮೈ ಒಡ್ಡುತ್ತಿತ್ತು. ಮಳೆಗಾಲ ಹಿಡಿದ ಎರಡು ತಿಂಗಳ ಕಾಲವೂ ಹುರುಳಿ ಸಾರು, ಗದ್ದೆ ಸೌತೆಕಾಯಿ ಹುಳಿ, ಹಾಗೂ ಕೆಸುವಿನ ಸೊಪ್ಪೋ, ಕಳಲೆಯಲ್ಲೋ, ಏಡಿ ಮೀನುಗಳಲ್ಲೋ ಕಾಲ ನೂಕುತ್ತಿದ್ದವರಿಗೆ ಒಂದೇ ಚಮಚೆ ಶೇಂಗಾ ಎಣ್ಣೆಯಿಂದ ಮಾಡಿದ ಹತ್ತಾರು ತಳುಗನ ದೋಸೆಗಳು ಹೊಟ್ಟು ಅನ್ನಕ್ಕಿಂತ ಎಷ್ಟೋ ವಾಸಿಯಲ್ಲವೆ?

ಒಂದು ಸಿದ್ದೆಯಲ್ಲಿ ದೋಸೆಯೂ, ಉಳಿದ ಇನ್ನೊಂದು ಸಿದ್ದೆಯಲ್ಲಿ ಬೆಲ್ಲದ ಪಾಯಸವೂ ಆಗುತ್ತಿದ್ದರಿಂದ ಹೇಗಾದರೂ ಮಾಡಿ ಹಬ್ಬ ಮುಗಿಸುವ ಹುನ್ನಾರದೊಂದಿಗೆ ಸಿದ್ದಕ್ಕಿ ದೋಸೆ ಸಿದ್ದಕ್ಕಿ ಪಾಯ್ಸೆ ಹೋಗಿ ಬಾ ಕೊಡಾಮಾಸೆ ಎಂದು ಹೇಳಿ ಹಬ್ಬವನ್ನೇ ಹೊರಹಾಕುವ ಪರಿ ಎಲ್ಲ ರೈತರದೂ ಹೌದು. ಕೊಡೆ ಅಮವಾಸ್ಯೆ ಬಂತೆಂದರೆ ನನ್ನ ಅಪ್ಪ ಇಡೀ ಊರಿಗೆ ಕೇಳುವಂತೆ ಈ ಗಾದೆ ಹೇಳುತ್ತಿದ್ದುದು ನನ್ನ ಕಿವಿಯಲ್ಲಿ ಗುಂಯ್ ಗುಟ್ಟುತ್ತಿದೆ.

ಹಬ್ಬಗಳು ಆರಂಭವಾಗುವುದು ನಾಗರ ಪಂಚಮಿಯಿಂದ ಎನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಕಡೆಯ ಹಬ್ಬದ ಆರಂಭವನ್ನು ಕೊಡೆ ಅಮವಾಸ್ಯೆಯ ದೋಸೆ ಪಾಯಸದಿಂದಲೇ ಶುರು ಮಾಡುತ್ತಿರುವುದು ದಾಖಲಾಗದಿದ್ದರೂ ಕೊಡೆ ಅಮವಾಸ್ಯೆ ಉಳಿದಿಲ್ಲವೆ? ಕ್ಯಾಲೆಂಡರಿನಲ್ಲಿರುವಂತೆ ಭೀಮನ ಅಮವಾಸ್ಯೆ ಎಂಬ ಹೆಸರೇ ಮೇಲುಗೈ ಸಾಧಿಸುವ ಸಾಧ್ಯತೆ ಇದ್ದರೂ ಇರಬಹುದು. ಭೀಮ ಬಲಶಾಲಿಯ ಜೊತೆ ದ್ರೋಣಾಚಾರ್ಯರ ಶಿಷ್ಯ ಕೂಡಾ.

ಶಾಲಾ ಕಾಲೇಜುಗಳಿಗೆ ರಜಾ ಇಲ್ಲದಿರಬಹುದು, ಮಂತ್ರಘೋಷಗಳಿಲ್ಲದಿರಬಹುದು. ಮೆರವಣಿಗೆ, ಪಲ್ಲಕ್ಕಿಗಳು ಇಲ್ಲದೆ ಇರಬಹುದು, ಈ ಹಬ್ಬ ಕಷ್ಟಳನ್ನೆಲ್ಲ ತನ್ನ ಮೈಮೇಲೆ ಹೇರಿಕೊಂಡು ರೈತನ ಮನೆಯ ಬಾಗಿಲಿಗೆ ಬಂದು ರೈತನಿಂದ ಉಪಾಯವಾಗಿ ಹೊರಗೆ ಹಾಕಿಸಿಕೊಂಡಿದ್ದರೂ ಕೂಡಾ ಮೊದಲ ಹಬ್ಬ ಎಂಬ ತನ್ನ ಹೆಗ್ಗಳಿಕೆಯಿಂದ ಇದನ್ನು ಹೊರದಬ್ಬುವುದು ಸರಿಯಲ್ಲ ಸಲಭವೂ ಅಲ್ಲ…

ಅದೂ ಅಲ್ಲದೆ ನಮ್ಮ ಭಾಗದ ಶೇ. 90 ರಷ್ಟು ಮಂದಿ ಕೊಡೆ ಅಮಾವಾಸ್ಯೆ ಹಬ್ಬ ಮಾಡಿದರೆ, ನಾಗರ ಪಂಚಮಿ ಹಬ್ಬ ತನ್ನ ಇರುವಿಕೆಯನ್ನು ಬಹಳಷ್ಷು ವರುಷಗಳವರೆಗೆ ಶಾಲೆಗೆ ಸಿಕ್ಕ ರಜಾ ದಿನದ ಆಧಾರದ ಮೂಲಕ ಗುರುತಿಸಿಕೊಂಡಿದ್ದನ್ನೂ ಪ್ರಸ್ತಾಪಿಸಬೇಕಾಗುತ್ತದೆ.

Add Comment

Leave a Reply