Quantcast

ಕದವನಿಕ್ಕಿದಳ ಅದೋ ನೋಡಿ..

rajakumar madiwalar

ರಾಜಕುಮಾರ ಮಡಿವಾಳರ 

 

1) ಕದವನಿಕ್ಕಿದಳ ಅದೋ ನೋಡಿ ಚಿಲಕವಲ್ಲಾಡುತಿದೆ..
2)ಎಡಕಿನ ಚಿಲಕ ಬಲಕ್ಕ ಬಿದ್ದು ಘಿಲಕ್ಕಂತಲ್ಲೋ..

ಇವೆರಡು ಚಿಲಕ ಮತ್ತು ಚಿಲಕ ಮಾಡಿದ ಸದ್ದು ಕನ್ನಡ ಸಾಹಿತ್ಯದಲ್ಲೆ ಸ್ಥಾನ ಗಿಟ್ಟಿಸಿದ್ದು ಸೋಜಿಗವಲ್ಲದೆ ಮತ್ತೇನು?
ಇವೆರಡೂ ಚಿಲಕದ ಸದ್ದು ಆಗಾಗ ನನ್ನ ಕಾಡುತ್ತಲೆ ಬಂದಿವೆ, ನೀವು ಕೇಳಿಸಿಕೊಳ್ಳಿ.

door-lockedಮೊದಲನೇದ್ದು ಶತಮಾನಗಳ ಹಿಂದಿನ ಚಿಲಕ, ದಾಸ ಶ್ರೇಷ್ಠರು ಕಂಡಿದ್ದು, ಕಂಡು ಹೊಗಳಿದ್ದು!, ಕಾಣುತ್ತಲೇ ಹಾಡಿದ್ದು! ಇಲ್ಲಿ ಅಲ್ಲಾಡಿದ್ದರ ಕುರಿತು ಹಾಡಿದ್ದಾರೆಯೇ ಹೊರತು ಚಿಲಕದ ಶಬ್ದ-ಸದ್ದು ದಾಸರಿಗೆ ಕೇಳಿಸಿಲ್ಲ, ಕೇಳಿಸಿರಕ್ಕಿಲ್ಲ, ಕೇಳಿಸಿದ್ದರೂ ನಮಗೆ ಕೇಳಿಸಲಿಲ್ಲ! ಸದ್ದಿನ ಹೊರತಾಗಿಯೂ ಹೇಳಬೇಕಾದ್ದನ್ನ ಚಿಲಕದ ಅಲ್ಲಾಡುವಿಕೆಯಲ್ಲೆ ಸಮಗ್ರವಾಗಿ ಹೇಳಬೇಕಾದ್ದನ ಹೇಳಿದ್ದಾರೆ,ದಾಟಿಸಬೇಕಾದ್ದನ್ನ ದಾಟಿಸಿದ್ದಾರೆ, ಮುಟ್ಟಿಸಬೇಕಾದ್ದನ್ನ ಮುಟ್ಟಿಸಿದ್ದಾರೆ.

ಈ ಚಿಲಕ ನಿಷೇಧಿತ ಚಿಲಕ! ಒಳಗಿನಿಂದ ಬಾಗಿಲು ಹಾಕಿಕೊಂಡದ್ದನ್ನ ನೇರವಾಗಿ ಹೇಳುವ ಚಿಲಕ, ಯಾರನ್ನೋ ನೋಡಬಾರದು, ಕೇಳಬಾರದು, ಅಂದು ತಿರಸ್ಕರಿಸಿ ಹಾಕಿಕೊಂಡ ಬಾಗಿಲ ಚಿಲಕ. ಇದು ಮನೆ, ಬಾಗಿಲು, ಮುಚ್ಚಿಕೊಂಡಾಗಿಯೂ ಮನೆಯನ್ನು ದಾಟಿ ಮತ್ತೆಲ್ಲೋ ನಮ್ಮನ್ನು ದಾಟಿಸುವ ಚಿಲಕ.
ಹರಿನಾಮ ಕೇಳದೆ ಕಿವಿಯ ಕದವನಿಕ್ಕಿದಳ್
ಹರಿಬಂದುದ ನೋಡದೆ ಕಣ್ಣ ಕದವನಿಕ್ಕಿದಳ್
ಅದೋ ನೋಡು ಕದವನಿಕ್ಕಿದಳ್ ಚಿಲಕವಲ್ಲಾಡುತ್ತಿದೆ!
ಇಡಿ ದೇಹವೆ ಮನೆಯಾಗಿ ಸರ್ವಾಂಗಗಳು ಕದಗಳಾಗಿ, ಮುಚ್ಚಿದ ಅಜ್ಞಾನದ ಸದ್ದು.. ಅಲ್ಲಾಡು ಇದು ಅಶಕ್ತತೆ ಸೂಚಕ ಪದ, ಅಲ್ಲಾಡು ಇದು ಅಪೂರ್ಣತೆ ಸೂಚಕ ಪದ, ಅಲ್ಲಾಡು ಇಲ್ಲಿ ಅಜ್ಞಾನ ಸೂಚಕ ಪದ ( ಉದಾ- ತುಂಬಿದಕೊಡ ತುಳುಕುವುದಿಲ್ಲ, ಅರೆತುಂಬಿದಕೊಡ ಅಲ್ಲಾಡುತ್ತದೆ).

ಲೌಕಿಕದ ಕದ ಮುಚ್ಚಿ ಅಲೌಕಿಕದ ಮಹಾದ್ವಾರ ತೆರೆಯಲು ಅಲ್ಲಾಡಿದ ಚಿಲಕ. ಮತ್ತು ಕೊಡುವ ಮನಸಿಲ್ಲದ್ದೆಕ್ಕೋ ಏನೋ ಸದ್ದು ಮಾಡದ ಚಿಲಕ!

ಎರಡನೇಯದು- ಇದು ತೀರ ಇತ್ತಿಚಿನ ನನ್ನ ಹಿಂದಿನ ಎರಡನೇ ತಲೆಮಾರು ಕಂಡಂತಹ, ಬಿದ್ದ ಚಿಲಕದ ಘಿಲುಕು ನನಗೆ ಕೇಳಿಸುವಷ್ಟು ಸಮೀಪದ ಊರಿನ ಸಂಗ್ಯಾಬಾಳ್ಯಾರ ಗೆಳೆತನದ ಸಣ್ಣಾಟದಲ್ಲಿ ಬರುವ ಗೌಡ-ಗಂಗಿ ದಂಪತಿಗಳ ವಾಡೆ ಬಾಗಿಲ ಚಿಲಕ.

ಇಲ್ಲಿ ಚಿಲಕದ ರೂಪ-ಸ್ವರೂಪ ಲಕ್ಷಣ ಗಮನಿಸಬಹುದು ಅಂದರೆ ಎಡಕಿನ ಚಿಲಕ (ತಮ್ಮ ಮನೆಯ ಬಾಗಿಲು ಗಮನಿಸಿ ಚಿಲಕ ಎಡಕ್ಕೆ ಇರುತ್ತದೆ, model ಬದಲಾದರೆನಂತೆ!) ಅಂದರೆ ಬಾಗಿಲು ಮುಚ್ಚಿದ ಸ್ಥಿತಿ, ಇದು ಹೊರಗಿನಿಂದಾದರೂ ಆಗಿರಬಹುದು, ಒಳಗಿನಿಂದಾದರೂ ಆಗಿರಬಹುದು! ಆದರೆ ಗೌಡನಿಗೆ ಹುಲಿಯಂತ ತಮ್ಮಂದಿರಿದ್ದ ಕಾರಣ ಮತ್ತು ಗೌಡ-ಗಂಗಿಯರದು ಅನೂಹ್ಯ ದಾಂಪತ್ಯದ ರೂಹಿನಿಂದ ಇದು ಒಳಗಿನಿಂದಲೇ ಹಾಕಿಕೊಂಡ ಚಿಲಕ, ಇಲ್ಲಿ ಕೂಡ ಬಾಗಿಲು ಹಾಕಿದೆ ಆದರೂ ನಿಷೇಧಿತ ಬಾಗಿಲಲ್ಲ! ಇಲ್ಲಿ ಸಂಗ್ಯಾನ ತುಂದಿಲತೆಯ ಮೋಹ, ಗಂಗಿಯ ಸಹನೆ ಕಟ್ಟೆಯೊಡೆದ ಕಾಮ, ಮಿಲನಕ್ಕೆ ಹಾತೊರೆದ ಸಹಜ ವಾಂಛೆ, ನೈತಿಕತೆಯ (ನನಗರ್ಥವಾಗದ) ಹದ್ದು ಮೀರಿ ಹುಟ್ಟಿದ ಕಾಂಕ್ಷೆಗಳ ತಣಿಸಲೋಸುಗ ಬೇಕಾದವನ ಆಹ್ವಾನಿಸಿ ಮತ್ಯಾರ ಕಣ್ಣಿಗೂ ಬೀಳದಂತೆ ಭದ್ರವಾಗಿ ಬಾಗಿಲಿಟ್ಟು ಹಾಕಿದ ಚಿಲಕ.

ವಿಚಿತ್ರವೆಂದರೇ ಸದ್ದು ಈ ಚಿಲಕದ್ದಲ್ಲ ಒಳಹಾಕುವಿಕೆಯಿಂದಾದ ಸದ್ದು ಇಲ್ಲಿ ಇಲ್ಲವೆ ಇಲ್ಲ, ಗೌಡ ಪರ ಊರಿಗೆ ಹೋಗುವಾಗ ಹಾಕಿದ ಚಿಲಕ (ಹೆಂಡತಿಯನ್ನು ಕೂಡಿಟ್ಟು ಹೋದನಾ?) ಬೇರೆ ಯಾರೋ ತೆರೆದ ಚಿಲಕ, ಬೇರೆ ಯಾರೋ ತೆರೆದರೆಂದರೆ ಸಹಜ ಹೆದರಿಕೆಯಿಂದ ನಡುಗುವ ಕೈಯಿಂದ ತೆರೆದ ಚಿಲಕ! ತೆರೆದ ತಕ್ಷಣ ಕೈ ಬಿಟ್ಟ ಚಿಲಕ, ಅದು ಸ್ವಸ್ಥಾನಕ್ಕೆ ಚಣಂಗನೆ ನೇತು ಬಿದ್ದಾಗ ಕೊಂಡಿಕೊಂಡಿಯ ನಡುವೆ ಉಂಟಾದ ಪಲ್ಲಟದ ಸದ್ದು, ಸ್ವಸ್ಥಾನಕ್ಕೆ ಸರಿಯುವಾಗ ಕದಕ್ಕೆ ಬಡಿದ ಸದ್ದು, ತೆರೆದ ರಭಸಕ್ಕೆ ಜೋಲಿಸಾಲದೆ ಅಲ್ಲಾಡಿದ ಸದ್ದು, ತುಸು ಸಾವರಿಸಿಕೊಂಡು ನಿಲ್ಲುವ ಪ್ರಯತ್ನದ ನಡುವಿನ ಘಿಲುಕು!

ಇಲ್ಲಿ ಸಮಸ್ತವೂ ಲೌಕಿಕವೆ ಆದ್ದರಿಂದ ಈ ಚಿಲಕ ಆ ಚಿಲಕದಂತೆ ಅಲ್ಲಾಡದೆ ಘಿಲಕೂ ಅಂದಿದೆ, ಇಲ್ಲಿ ಸಮರ್ಪಣೆ ಇದೆ. ಸಹಜವಾಗಿ ಎಲ್ಲರ ಕಿವಿ ಹೊಕ್ಕಿದೆ!

-ಮೊದಲನ್ನೆದ್ದು ಅವಳೇ ಹಾಕಿದ್ದು(ಅಲ್ಲಾಡಿದರೂ ಸದ್ದು ಬರಲಿಕ್ಕಿಲ್ಲ!)
-ಎರಡನೆದ್ದು ಯಾರೋ ತೆರೆದದ್ದು (ಇದಕ್ಕೆ ಸದ್ದು ಬರುವುದು ಲೋಕಾರೂಢಿ)

-ಮೊದಲನೆದ್ದರಲ್ಲಿ “ನೋಡು” ಅಂತ ಸ್ವತಃ ದಾಸರೆ ಅಪ್ಪಣೆಕೊಟ್ಟಿದ್ದರಿಂದ ಇದು “ದರ್ಶನ” ಕವಿತೆ, ನೋಡುವ ಸ್ವತಂತ್ರವಿದೆ.
-ಎರಡನೆದ್ದರಲ್ಲಿ- ಹೇಳುವವನೆ ಬರಿ ಕೇಳಿದ್ದರಿಂದ ಇದೊಂದು ಕೇಳಲು ಮಾತ್ರ ಸೂಕ್ತ ಕಥಾನಕ. ಇಲ್ಲಿ ಕೇಳುಗರು ತಮ್ಮ ಅಭಿರುಚಿಗೆ ತಕ್ಕ ಹಾಗೆ ಕಟ್ಟಿಸಿಕೊಳ್ಳಲು ಸ್ವತಂತ್ರವಿದೆ.

-ಎರಡೂ ಕೂಡ ಹೆಣ್ಣು ಹೀಗೆ ಇರಬೇಕೆಂಬ ಚೌಕಟ್ಟಿನಲ್ಲೇ ರಚನೆಯಾಗಿದ್ದು ಇದು ಶತಶತಮಾನದ ಜಾಡ್ಯದಂತೆಯೆ ಕಾಣಿಸುತ್ತದೆ. ಕಾಲ ಎಲ್ಲಕ್ಕೂ ಉತ್ತರ ಕೊಡುತ್ತದೆ, ಅವೆರಡೂ ತರದ ಜನ ಈಗಿಲ್ಲ ಅಂತಲ್ಲ! ಈಗ ಮುಚ್ಚಿದರು-ತೆರೆದರೂ ಅಲ್ಲಾಡದ ವ ಘಿಲಕೆನ್ನದ interlock ಇವೆ.

ಹೀಗೆ ಶಬ್ದಗಳು ಅದೆಕೋ ನನ್ನ ಎಡಹೊತ್ತಿನಲ್ಲಿ ಎಡೆಬಿಡದೆ ಕಾಡುತ್ತವೆ, ಅಂತಹ ಅನೇಕ ಸದ್ದುಗಳು ವಿಚಿತ್ರ ಸುದ್ದಿಯಿಂದ ತುಂಬಿರುತ್ತವೆ. ಆ ಸದ್ದು-ಸುದ್ದಿ ಸುಮ್ಮನೆ ಕೇಳುತ್ತೇನೆ, ಈ ಸದ್ದುಗಳಿಗೆ ಅದೆಂತ ಶಕ್ತಿಯೆಂದು ಮೂಕನಾಗುತ್ತೇನೆ ಆ ಮೌನವೆ ಈ ಲೇಖನ.!

Add Comment

Leave a Reply