Quantcast

ಶಿವಶಿವೆಯರಂತೆ ತಂತಿ ತಾಳ ಮೀಟಿ..

ತಾಯೆಂಬ ತಾಟಗಿತ್ತಿ

ಇಬ್ಬರು ತಾಯಂದಿರು.

ಒಬ್ಬಳಿಗೆ ಎಪ್ಪತ್ತು ವರ್ಷ. ಗಂಡನ ಜೊತೆಲಿ ರೇವಣಸಿದ್ದೇಶ್ವರ ಮಠದಲ್ಲಿ ದೀಕ್ಷೆ ತಗೊಂಡಿದಾಳೆ. ಗಂಡ ಹೆಂಡತಿ ಇಬ್ರೂ ತಂಬೂರಿ ಗಾಯಕರು. ಮೌಖಿಕ ಪರಂಪರೆಯ ತತ್ವಪದಕಾರರು. ಕೋಶ ಓದದ್ದಿದ್ದರೂ ದೇಶ ಸುತ್ತಿ ಬಂದವರು. ಮನೆ ಮನೆಯಲ್ಲಿ, ಸಭೆ ಸಮಾರಂಭದಲ್ಲಿ, ಸಾವು ನೋವಿನಲ್ಲಿ, ಆಟಕೂಟದಲ್ಲಿ ಗಂಟೆಗಟ್ಟಲೆ ಹಾಡಿ ಕೇಳುಗರ ಆಸಕ್ತಿಯ ಮೇರೆಗೆ ಅವರ ಕಿವಿಯಲ್ಲಿ ಗೂಡುಕಟ್ಟಿ ನೆಲೆ ನಿಂತವರು.

ಇನ್ನೊಬ್ಬಳು ಐವತ್ತು ವರ್ಷದವಳು. ಗಂಡ ಹೆಂಡಿರಿಬ್ಬರು ಇಂಥವರ ಆರಾಧಕರು. ತಕ್ಕಮಟ್ಟಿಗೆ ಮನೆಯಲ್ಲಿ ಯಾವುದೇ ತಾಪತ್ರಯಗಳಿಲ್ಲದ ಸಂಸಾರಸ್ಥರು. ಆದರೂ ದೇಶಕೋಶ ಎರಡನ್ನೂ ಬಲ್ಲವರು. ಇವರಿಬ್ಬರೂ ತಮ್ಮ ತವರಿನ ಆ ತಂಬೂರಿ ಗಾಯಕರನ್ನು ಮನೆಗೆ ಕರೆತಂದಿದ್ದರು. ಹಳೆ ಪರಿಚಯಸ್ಥರಾದ್ದರಿಂದ ಮಾತಾಡ್ತಲೇ ಗಾಯನವೂ ಅರಳಿತು.

nammuru-1ತಂಬೂರಿ ದಂಪತಿಗಳಿಬ್ಬರೂ ಶಿವಶಿವೆಯರಂತೆ ತಂತಿ ತಾಳ ಮೀಟಿ, ಶಿವಶಿವ ಹರಹರ… ಓಂ ನಾಮ ಹಾಡಿ ಶಿವನನ್ನು ಮೆಚ್ಚಿಸಿದರು. ಭವಾಬ್ಧಿಯನ್ನೂ ದಾಟಿ ಪಾರ್ವತಿಯನ್ನು ಒಲಿಸಿದರು.

ಕೊನೆಗೆ ಈ ನರ ಮನುಶರ ಜಗತ್ತಿನಲ್ಲಿ ಹೆಣ್ಣು ಬೀಳುವ ಪಾಡಿನ ಕಥೆಗೆ ಬಂದರು.

“ಮೂಗತಿ ಮುರಿದರೆ ಮರಳಿ ಮಾಡಿಸಬಹುದು.

ಈ ಮಡದಿ ಸತ್ತರೆ ತರಬಹುದು. ಅಣ್ಣಯ್ಯ,

ಒಡಹುಟ್ಟಿದವರ ಪಡೆದಿ…ರಾ.

ಕನ್ನಡಿ ಒಡೆದು ಹನ್ನೆರಡು ಚೂರಾಗಿ,

ಹೆಣ್ಣಿನ ಮನವು ಎರಡಾಗಿ,

ಈ ದಾಳಿಂಬೆ, ಹಣ್ಣಾದರೆನು, ಫಲವೇನು” ಅಂದು ತವರಿನಲ್ಲಿ ಅಣ್ಣನ ನಿರ್ಲಕ್ಷದಿಂದ ನಲುಗಿದ ಹೆಣ್ಣಿನ ಬವಣೆಯ ಕಥೆಯನ್ನು ಶುರುವಿಟ್ಟರು.

ಕೊನೆಗೆ ಅಗಲಿದ ತನ್ನ ಜೀವವೊಂದನ್ನು ನೆನೆದು ನಿಷ್ಕರುಣಿ ಯಮರಾಯನ ಅನ್ಯಾಯದ ಮನೋಧರ್ಮವನ್ನು ಖಂಡಿಸುತ್ತಾ ಹಾಡು ಕೊನೆಯಾಯಿತು.

“ಓ ನನ್ನ ಚಿನ್ನವೆ, ಓ ನನ್ನ ರನ್ನವೇ

ಓ ನನ್ನ ಪ್ರಾಣದ ಪದಕ ಪಚ್ಚೆತೆನೆಯ ಜವರಾಯ

ಯಾಕೆ ಕರೆಕೊಂಡೊ ಯಮರಾಯ.

ಹಾಡ್ತಾ ಹಾಡ್ತಾ ತಂಬುರದ ತಾಯಿ ತಲ್ಲೀನಳಾದಳು. ಕೇಳುತ್ತಾ ಕೇಳುತ್ತಾ ಈ ತಾಯಿ ಕಣ್ಣೀರಾದಳು. ನೋಡ್ತ ನೋಡ್ತಲೆ ಹಾಡು ಅವರಿಬ್ಬರನ್ನು ಭಾವಾತಿರಾಗದಲ್ಲಿ  ಮುಳುಗಿಸಿತು. ಒಳಗೆ ಇರುವ ನೋವಿನ ಒರತೆಯಲ್ಲಿ ಕಣ್ಣೀರನ್ನು ಮುಕ್ಕುಳಿಸಿ, ಕಣ್ಣಗೂಡಿನ ಆಚೆಗೆ ಹನಿಹನಿಯಾಗಿಸಿ ಕೆಳಗಿಳಿಸಿತು. ತಂಬೂರಿ ನಾದ ನಿಂತು ಸಾಕಾಗಿ ಮೂಲೆಗೊರಗಿತು.

“ಯಾಕೆ ಕಣ್ಣೀರಾದ್ಯವ್ವ?” ತಂಬುರದ ತಾಯಿ ಕೇಳ್ತಾ, ಅವಳೇ ಮಾತನ್ನ ಮುಂದುವರ್ಸದ್ಲು.

“ನಮ್ಮಕ್ಕ್ಳಿಗೆ ಅದ ಮಾಡಬೇಕು. ಈದ ಮಾಡಬೇಕು ಅಂತ ನಿಮ್ಮ ಕನವರಿಕೆ. ಅದ್ಕೆ ಶಿವ ಅಲ್ಲಲ್ಲಗೆ ಅಲ್ಲಲ್ಲಗೆ ಒಂದು ಕೊಡ್ಲಿ ಮಡಗಿರ್ತಾನೆ. ಯಾಕೆ ? ನಾವು ಸತ್ಯವಾಗ ನಡಿತಿವಲ್ಲ ಅದುಕ್ಕೆ. ಯಾರ್ನೂ ಬುಡುದಿಲ್ಲ ಅವನು.”

ಆ ತಾಯಿ ಪಕ್ಕದಲ್ಲಿದ್ದ ಗಂಡ ತಟ್ಟನೆ ಕೇಳಿದರು.

“ಮತ್ತೆ ನಾವಿಬ್ಬರು ದಿನಬೆಳಗಾದ್ರೆ ಶಿವನ ಗ್ಯಾನ ಮಾಡ್ತೀವಲ್ಲ. ನಮಗಿಂಗ್ಯಾಕೆ ಆಯ್ತು ? ಮಕ್ಳು ಮೊಮ್ಮಕ್ಕಳು ಬಾಣಂತನ ಮಾಡುದ್ ನೀನೆ ಹಿಂಗಂದ್ರೆ, ಒಬ್ಬ ಮಗನ್ನ ಹೆತ್ತ, ಆ ತಾಯಿ ಸಂಕಟ ಏನು ಇರಬಹುದು ಹೇಳು ? ” ಅಂದ ಗಂಡನ ಮಾತಿಗೆ ತಂಬುರದ ತಾಯಿ ನಿಟ್ಟುಸಿರಿಟ್ಟು, ತಮ್ಮ ಕಥೆ ಹೇಳಿದ್ರು.

 

“ನೀನು ಒಬ್ಬ ಮಗನ್ನ ಹೆತ್ತಿ ನಿನಗ್ ಸಂಕಟ. ಅವನ್ನ ನೀ ಕಳಕಂದೆ ಅಂತ ಅಳ್ತಿದ್ದಿಯಾ. ನಾನು ಏಳು ಮಕ್ಳ ಹೆತ್ತಿ ನಂಗೆ ಒಬ್ರೂ ಇಲ್ಲ ಈಗ. ಏಳರಲ್ಲಿ ಐದು ಸತ್ತು ಎರಡು ಉಳ್ದು, ಅವ್ರಿಗೆ ತಲಾ ಮೂರು ಮೂರು ಮಕ್ಳು ಅದ್ರು. ಕೊನಿಗೆ ಅವ್ರು ಸತ್ರು. ಹಿಂಗೆ, ಮಕ್ಕಳು ಸಾಕಿ ಮಣ್ಣಿಗಿಟ್ಟು, ಮೊಮ್ಮಕ್ಕಳು ಸಾಕಿದ್ವಿ. ಈಗ ನಮ್ಮತ್ರ ಒಬ್ಬಳು ಮೊಮ್ಮಗಳವಳೆ. ಇದ್ದರೆಲ್ಲ ಬಂದು ನಮ್ಮ ನೋಡದೆ ಇಲ್ಲ”.

tamboori“ಈ ವಯಸಲ್ಲಿ ಮರಿಮಕ್ಕಳನ್ನೂವೆ ಸಾಕ ಅಣೆಬರ ನಮ್ಮದು. ಮೊಮ್ಮಗಳೇನೋ… ನಮ್ಮ ಕಂಡ್ರೆ ಪ್ರಾಣ ಬಿಟ್ಟ್ಕತಳೆ. ಆದ್ರೆ… ಅವಳ ಗಂಡನ ಹಿಂಸೆ ಅವಳಿಗೆ. ನಮ್ಮ ದುಡಿಮೇಲಿ ಕುಡ್ದು ತಿಂದು ಸುಳ್ಳುಸತ್ರ ಹೇಳ್ಕಂದು ಆ ಹುಡುಗಿಯ ಗೋಳು ಹುಯ್ಕತನೆ. ಪಾಪಿ ನನ್ಮಗ… ತಿನ್ನ ಕಾಲ್ದಲ್ಲಿ ನಮಗೆ ಹೊಟ್ಟೆ ಲವಲವ ಅನ್ನದು. ತಿನ್ನಕೆ ಇರ್ನಿಲ್ಲ. ಯಾರ ಮನಿಗೆ ಕರುದ್ರೂ, ಅದಕಾಗೆ… ಎಷ್ಟೋ ದೂರದರ್ಗೂ, ಹೋಗ್ಬುಡುವಿ. ಈಗ ಅಷ್ಟೋ ಇಷ್ಟೋ ಐತೆ. ಇರ ಕಾಲ್ದಲ್ಲಿ ಶಿವ ಬಾಯ ಕಿತ್ಕತಾನೆ. ಈಗ ಬಿ.ಪಿ.ಶುಗರ್ರು ಮಾತ್ರೆ, ಏನ್ನೂ ತಿನ್ನಕ ಬುಡದಿಲ್ಲ.

ಮನುಷ್ಯ ಅಂದ ಮೇಲೆ ತಾಪತ್ರೆಯ ಇದ್ದುದ್ದೆಯ ! ಏನ್ ಮಾಡದು ? ಎಷ್ಟೇ ಮಕ್ಕಳಿದ್ರೂವೆ, ಮಣ್ಣು ಮಾಡಿ ಬಂದ ಮಕ್ಕಳ ಮರೆಯಾಕೆ ಆದದವ್ವಾ? ಪಕ್ಕಕ್ಕೆ ತಿರುಗಿ ನೋಡುದ್ರೆ, ಹನ್ನೊಂದು ತಲೆ ವಳಗೆ ಇನ್ನೊಂದು ತಲೆ ಇದ್ರೆ ! ಎದೆ ಭಾರ ಏಸು ನಿಸೂರಾಗದೊ ದೇವ್ರೇ, ಅನ್ನುಸ್ತದೆ. ನಾವು ಬುಟ್ರು ಆ ಕಾತರಿಕೆ ನಮ್ಮ ಬುಡದಿಲ್ಲ. ಹಾಡೂ ಪಾಡಲ್ಲಿದ್ದಾಗ ಎಂಗೊ ವಸಿ ಕಣ್ಣಿಗೆ ಮರೆಯಾಗಿರದು, ತಿರುಗಿ ಮಗಚಿ ಹಾಕಂಡು ಕಣ್ಣಿಗೆ ಬಂದು ಕುಂತ್ಕತದೆ. ನಮ್ಮೊಳಗೆ ಸುತ್ಕಂಡಿರೊ ಕರುಳು, ಇರ್ತದೆ ನಾವಿರಗಂಟ…ಎಲ್ಲೂ ಕಳಸಾದು ಬ್ಯಾಡ. ಆ….ದ್ರೆ ಯೋಸ್ನೆ ಬುಟ್ಬುಡಿ. ಅದು ಹಾರಿ ಹೋಯ್ತು. ಅಷ್ಟೇಯಾ ಅದ್ರ ರುಣ. ಜೀವ ದಣುಸುದ್ರೆ ಕಾಯಕಂದು ಕುಂತಿರೊ ಕಾಯ್ಲೆ ಬಂದು ಸೇರ್ಕತವೆ. ಇರಗಂಟಲಾದ್ರೂ ಚೆನ್ನಾಗಿ ಇರ್ಬೇಕಲ್ರಾ? ಭೂಮಿ ಮೇಲೆ ಹುಟ್ಟದ್ ಮೇಲೆ ಎಲ್ಲರೂ ಒಂದಿನ ಕಂತೆ ಎಸ್ತು ಹೋಗದೆಯಾ… ಅಂತ ನಿಚ್ಚಯಿಸ್ಕಬೇಕು.”

ತಂಬುರದಯ್ಯ ಆ ಹೆಂಡತಿ ಕಡೆಗೆ ತಿರುಗಿ ಬೊಚ್ಚುಬಾಯಿ ಬಿಟ್ಕಂದು, “ಅದು ಈಗಿಂದಲ್ಲ. ಶ್ರೀ ಕ್ರಿಷ್ಣ ಪರಮಾತ್ಮನ ಶಿಕ್ಷೆ ನಮಗೆ ಸಿಕ್ಕಿರದು.” ಅಂತ ಕೈ ಮ್ಯಾಲಕ್ಕೆ ತೋರುಸ್ತು… ತಂಬುರದ ತಾಯಿ ಕಥೆ ಶುರು ಮಾಡಿದ್ಲು. ಹೂ ಕನ, ಅವನು ಮಾಡಿರದೆ ಅದು. ನಾವೂ ಇದ ಹಿರೀಕರ ಹತ್ರ ಕೇಳಿರದು. ನಾವೇನು ನೋಡೋಕೆ ಹೋಗಿದ್ವಾ ? ಕ್ರಿಷ್ಣ  ಹುಟ್ಟುದ್ದ… ಅವ್ನು ಬೆಳುದು ನಡದಾಡ ಹಂಗಾದ. ಏನಾಯ್ತು ? ಬುದ್ಧಿ ಬಂತು. ಒಂದಿನ ಬಾವಿ ಸುತ್ತ ಸುತ್ಕಂದು ಅವರವ್ವನ್ನ,  ಚಿಟ್ಟೆ ಮೆಳೆ ಆಡುಸ್ತಿದ್ದ. ಯಶೋದೆ ತಾಯಿ ಅವನ ಹಿಂದಹಿಂದೆನೆ ತಿರುಗ್ತಿದ್ಲಾ. ಇವ್ನು… ಏನ್ ಮಾಡುದ ? ಅವರವ್ವನ್ನ ಗೋಳು ಹಾಕ್ಕಳನ ಅನ್ನುಸ್ತು. “ಬಾವಿಗ್ ಬಿದ್ದೋಯ್ತಿನಿ… ಬಿದ್ದೋಯ್ತಿನಿ.” ಅಂತ ಹೆದ್ರುಸ್ಕಂಡು ಬಾವಿಕಟ್ಟೆ ಸುತ್ಲೂ ಸುತ್ತದ. ಇವಳೂ ಮಗನ ಹಿಂದಗಡೆಲೇ ಸುತ್ತಿದ್ಲು. “ನಿನ್ ದಮ್ಮಯ್ಯ ಬೇಡ ಕನಪ್ಪ” ಅಂತ ದಮ್ಮಯ್ಯಗುಡ್ಡೆ ಹಾಕಂಡು, “ನೀ ಸತ್ರೆ ನಾನು ಸತ್ತುಹೋಯ್ತಿನಿ ಕನಪ್ಪ” ಅನ್ಕ್ಂದು ಅವನ ಹಿಂದೆಲೆ ಹೋಯ್ತಿದ್ಲು.

tamboori coupleಅವನು ಏನ್ ಮಾಡದ ? ನೋಡನ ನಮ್ಮವ್ವ ಇಂಗಂತಳಲ್ಲಾ ? ಅಂತ ಪರೀಕ್ಷೆ ಮಾಡಕೆ ಅಂತಲೆ, ಬಾವಿಕಟ್ಟಿ ಹತ್ತಿ ಬಿದ್ದೆಬುಟ್ಟ. “ನಮ್ಮವ್ವ ಈಗ ಏನ್ ಮಾಡ್ತಾಳೆ ? ನೋಡನ” ಅಂದು ಅಲ್ಲೇ… ಬಾವಿ ವಳಗೆ ಸುಮ್ಮಗಿದ್ದ.

ಇವ್ಳು, ಬಗ್ಗಿ ನೋಡಿ, ಬಾಯ ಬಡ್ಕಂದ್ಲೆ ಹೊರತು ಬಾವಿಗೆ ಬೀಳ್ನಿಲ್ಲ. ಕೊಣಿಗೆ ಆ ಕಡಿಂದ ಮಗ ಬಂದನೆ, ಹಿಂದಗಡಿಂದ ಕಣ್ಣುಮುಚ್ಚಿ ಅವರಮ್ಮನ್ನ ತಿರುಗ್ಸಿ ಹಿಡಕಂಡು, ಕೇಳುದ್ನಂತೆ. “ಎಲ್ಲಮ್ಮ ? ಸಾಯ್ತಿನಿ, ಸಾಯ್ತಿನಿ ಅಂದ್ಯಲ್ಲ. ಇಲ್ಲೆ ನಿಂತಿದಿಯಲ್ಲ…” ಅಂತವ. ಅವ್ನು… ಸಾಯ್ತನ !!! ಅಂಥ ಮಾಯಕಾರಿ ಮಗನು ಅವನು. ಇದ ಕಂಡು, ಅವಳು ಬಾಯ ಆಆ…ಅನ್ಕಂಡು ಮುಚ್ಚಲೆ ಇಲ್ಲ. ಹಿಂಗೆ, ” ನೋಡ್ದಾ, ತಾಯಿರ ಸತ್ತರೆ ಮಕ್ಳು ಸಾಯದಿಲ್ಲ. ತಮ್ಮ ಮುಂದಲೆ ಮಕ್ಳು ಸತ್ತರೆ ತಾಯೀರು ಸಾಯದಿಲ್ಲ.” ಅನಕಂದ ಕ್ರಿಷ್ಣ ಏನು ಮಾಡುದ ? ಶಾಪ ಕೊಟ್ಬುಟ್ಟ.

“ಮಕ್ಳು ಮುಂದೆ ತಾಯದಿರು ಸಾಯ್ಬೇಕು. ತಾಯದಿರ ಮುಂದಲೆ ಮಕ್ಳೂ ಸಾಯಬೇಕು. ಇದು ಜಗತ್ತು ಇರವರ್ಗೂವೆ… ನಡಿತಲೆ ಇರ್ಲಿ… ಅಂಥವ.”

ಗಂಡನ ಕಥೆನ ತಂಬುರದ ತಾಯಿ ನಿಟ್ಟುಸಿರಿಡ್ತಾ, ಇವಳ ಮುಖ ನೋಡಕಂಡು ಮುಂದುವರೆಸುದ್ಲು. “ಅವ್ರು ಹೇಳುತಿದ್ದುದು ಈಗ್ಲೂ ನಡಿತಿದ್ಯಲ್ಲ. ಮಕ್ಳು ಸತ್ತೋದ್ರೆ ನಾವು ಸತ್ತೋದೆವೆ? ಏನೋ ಎರಡು ದಿನದ ದುಃಖ ಅಷ್ಟೆ. ಆ ಶಾಪ ಇವತ್ತಿಗೂ ಸತ್ಯವಾಗೋಯ್ತು ನೋಡವ್ವಾ. ಅವಳು…. ಯಶೋದೆ, ಆವತ್ತು… ಓಗಿ, ಬಾವಿಗೆ  ತಟಕ್ಕನೆ, ನೆಗುದುಬುಟ್ಟಿದ್ರೆ ಆ ಮುಂಡೆ… ಏನಾಗದು ಶಾಪ ತೀರದು. ಆ ಶಾಪ ಅಂಗೆ ಈಗ್ಲೂ ಉಳಕಂದು ಬಂದು, ಸತ್ಯವಾಗಿ ನಡೆತಿದ್ದದೋ… ಇಲ್ವೋ… ನೀವೆ ಯೋಳಿ. ಆದ್ರೆ… ನನಗೆ ಆಸೆ ಅನ್ನದು ತುಂಬಿತ್ತಲ್ಲ, ವಳಗೆ. ಮಮಕಾರ ಅನ್ನದು ತುಂಬಕಂದಿತ್ತಲ್ಲ. ನನ್ನ ಮಗ ಸತ್ರೂ… ನಾನದ್ರು ಊಳ್ಕತಿನಿ ಅಂತ ಆಸೆ ಹುಟ್ಕತಲ್ಲ… ಆ ತಾಯೆಂಬ ತಾಟಗಿತ್ತಿಗೆ ಆವತ್ತು…ಆ, ಆಸೆಗೆ, ನಾವು ನೀವು, ಈಗಲೂ ಬಲಿಯಾಗಿ ನರಳಬೇಕು. ನೋಡವ್ವಾ…”.

tamburi_couple-370x315

Add Comment

Leave a Reply