Quantcast

ಎರವರ ಜಗತ್ತಿನಲ್ಲೊಂದು ಪಯಣ..

ಬೇರನ್ನೇ ಕಿತ್ತ ಮೇಲೆ?

ಒಂದು ನಾಡಿನ ಶ್ರೀಮಂತಿಕೆ ಅಲ್ಲಿನ ಜನಾಂಗ ಪ್ರತಿಬಿಂಬಿಸುತ್ತಿದೆ. ಆದರೆ ಇವತ್ತು ಅನುಕರಣೆಯ ಅಬ್ಬರಕ್ಕೆ ಎಲ್ಲವು ಅಸ್ತವ್ಯಸ್ತಗೊಂಡಿದೆ. ಕಣ್ಣೆದುರೇ ಹಲವು ಜನಾಂಗಗಳು ಕಣ್ಮರೆಯಾಗುತ್ತಿವೆ. ಈ ನಾಡಿನ ನೆಲ ಜಲ, ಭಾಷೆ,ಜನಾಂಗಗಳ ಬಗ್ಗೆ ಕನವರಿಸುವ ಪ್ರೀತಿಸುವ ಜೀವಗಳು ಇದನ್ನು ನೋಡಿ ಆತಂಕ ನೋವು ಪಡೋದನ್ನು ನಾನು ನೋಡುತ್ತಲೇ ಇದ್ದೇನೆ.ಒಂದು ರೀತಿಯ ಅಸಹಾಯಕತೆ ವೇದನೆ ಮನಸ್ಸಿನಲ್ಲಿ .

Jyothi column low resನಿಜ ಜೀನ್ಸ್ ಹಾಕೋಣ, ಆದರೆ ಸೀರೆಯನ್ನು ಮರೆಯದಿರೋಣ. ಸಿಮೆಂಟು ಹಾಕೋಣ ಅಂಗಳಕ್ಕೆ( ನಿಜವಾಗಿಯು ಇಷ್ಯವಿಲ್ಲ) ಆದರೆ ಮೊದಲಿದ್ದ ಅಂಗಳದ ಮಣ್ಣಿನ ವಾಸನೆಯ ಮರೆಯದಿರೋಣ.ದುರಂತವೆಂದರೆ ಮೊದಲೇನಿತ್ತು ಅನ್ನೋದನ್ನೇ ಮರೆತು ಬಿಡುತ್ತಿದ್ದೇವೆ. ಕೆಲವೊಮ್ಮೆ ಇಂತಹ ಸುಂಟರಗಾಳಿಗೆ ಸಿಲುಕಿ ನಾನು ಕಳೆದುಹೋದಂತೆ ಭಾಸವಾಗುತ್ತದೆ. ಮತ್ತೆ ಸಂಭಾಳಿಸಿ ತಿದ್ದಿಕೊಳ್ಳುತ್ತೇನೆ.ಹೆಜ್ಜೆ ಹಾಕುತ್ತೇನೆ.

ಜನಾಂಗದ ಹಿನ್ನೆಲೆ, ಅಂದಿನ ಕುರುಹುಗಳು, ಅದು ಹಾಸುಹೊಕ್ಕಾಗಿ ನಮ್ಮ ಜೀವನದಲ್ಲಿ ಬೆರೆತುಹೋದ ರೀತಿ ಕೌತುಕವನ್ನು ಸೃಷ್ಟಿಸುತ್ತದೆ. ಹರಪ್ಪ ಮೊಹಂಜಾದಾರೋ, ಈಜಿಪ್ಟ್ ನಾಗರೀಕತೆ ಹೀಗೆ ಎಲ್ಲವು ಆ ಜಗತ್ತಿನ್ನು ಅರಿಯಬೇಕೆಂಬ ಕುತೂಹಲದ ಪ್ರಪಂಚಕ್ಕೆ ನಮ್ಮನ್ನು ದೂಡುತ್ತದೆ. ಇನ್ನು ನಮ್ಮ ಮಧ್ಯೆಯಿರುವ ರಾಜ್ಯದಲ್ಲೇ ಅದೆಷ್ಟೋ ವಿಭಿನ್ನ ಜನಾಂಗಗಳು. ಕೆಲವು ಕಣ್ಣರೆಯಾದರೆ ಇನ್ನುಕಣ್ಣ ಮುಂದೆಯೇ ನಾಶವಾಗುತ್ತಿವೆ. ಕೊರಗ ಜನಾಂಗ ಈ ಸಾಲಿನಲ್ಲಿ ಈಗ ಬಂದು ನಿಂತಿದೆ.

ಎರಡು ವರ್ಷಗಳ ಹಿಂದೆ ಕೊಡಗಿನ ಹಾಡಿಯಲ್ಲಿ ಕಳೆದುಹೋಗುತ್ತಿರುವ ಅಲ್ಲಿನ ಮೂಲನಿವಾಸಿಗಳ ಬದುಕನ್ನು ಸಂಸ್ಕೃತಿಯನ್ನು ಅದು ನಾಶವಾಗುತ್ತಿರುವ ಆತಂಕವನ್ನು ವರದಿಯ ಮೂಲಕ ತಿಳಿಸುವ ಉದ್ದೇಶದಿಂದ ಅವರ ಜೊತೆ ಒಂದು ದಿನ ಹಾಡಿಯಲ್ಲೇ ನಮ್ಮ ತಂಡ ಕಳೆಯಿತು.

ಮಳೆಯ ತಂಪಿನ ನಡುವೆ, ದಟ್ಟವಾದ ಹಾದಿಯಲ್ಲಿ ಪಯಣ ಸಾಗಿತ್ತು. ಜೊತೆಗೆ ಜನಾಂಗವೊಂದು ಕಣ್ಣೆದುರೇ ನಿಧಾನವಾಗಿ ಕಣ್ಣರೆಯಾಗುತ್ತಿರುವ ಆತಂಕ ಮೈಸೋಕಿದ ತಂಪನ್ನು ಬಿಸಿಯಾಗಿಸಿತ್ತು.

ಅದು ವಿರಾಜಪೇಟೆಯ ಬ್ರಹ್ಮಗಿರಿ ಗ್ರಾಮ. ಸುರಿಯುತ್ತಿರುವ ಮಳೆಯ ಮಧ್ಯೆ ಬೆಚ್ಚನೆ ಯುವಕರ ಗುಂಪು ಮೈಗಂಟಿಕೊಂಡು ಅಲ್ಲಿ ಕಂಡಿತು. ಸರಿ ನೀವೆಲ್ಲಾ ಎಷ್ಟು ಓದಿದ್ದೀರಿ ಅಂದ್ರೆ ಹತ್ತನೇ ತರಗತಿ ಓದಿದ ಯಾರು ಅಲ್ಲಿರಲಿಲ್ಲ. ಕೂಲಿ ಮಾಡುವ ಮಂದಿಗೆ ಓದಿಸಲು ಸಾಧ್ಯವಾಗದ ಸ್ಥಿತಿಯಿತ್ತು.

ತಮ್ಮ ಬೇರು ಅಂದ್ರೆ ಜನಾಂಗದ ಬಗ್ಗೆ ಅಪಾರ ಮಮತೆ ಹೊಂದಿದ್ದ ಪ್ರಕಾಶ್ ಎಂಬ ಯುವಕ ಇಲ್ಲಿ ಯಾರು ಡಾಕ್ಟರ್ ಇಂಜಿನಿಯರ್ ಓದಿಲ್ಲ.ಊರಲ್ಲಿ ದ್ವಿತೀಯ ಪಿಯುಸಿ ಮಾಡಿದ ಇಬ್ಬರು ಹಾಗೂ ಡಿಗ್ರಿ ಮಾಡಿದ ಒಬ್ಬರಿದ್ದಾರೆ ಎಂದ್ರು.
ಅಷ್ಟು ಹೊತ್ತಿಗೆ ಪೇಟೆಗೆ ಕೂಲಿಗಾಗಿ ಹೋದ ಮಹಿಳೆಯರು ಗಂಡಸರನ್ನು ಹೊತ್ತ ವಾಹನ ಅವರನ್ನು ತುಂಬಿಕೊಂಡು ಬಂತು. ಒಬ್ಬೊಬ್ಬರಾಗಿ ಇಳಿದು ಅವರವರ ಮನೆಯತ್ತ ಹೆಜ್ಜೆ ಹಾಕಿದ್ರು. ಮಿತಿ ಮೀರಿದ ಶ್ರಮದಿಂದ ದಣಿವಾದಂತೆ ಆ ಮಹಿಳೆಯರ ಮುಖವಿತ್ತು. ಶಾಲೆಗೆ ಹೋಗದ ಹೆಣ್ಣು ಮಕ್ಕಳ ಮುಖ ಶಿಕ್ಶಣದಿಂದ ದೂರವಿಟ್ಟ ವ್ಯವಸ್ಥೆಯನ್ನು ಅಣಕಮಾಡಿದಂತೆ ಭಾಸವಾಯಿತು. ಸ್ವಾಭಿಮಾನಿ ಹೆಣ್ಣುಮಕ್ಕಳನ್ನು ಹಿಲರಿ ಕ್ಲಿಂಟನ್, ಮಮತಾ ಬ್ಯಾನರ್ಜಿಯಂತವರಲ್ಲಿ ನನ್ನನ್ನೇ ಕಾಣುವ ನನ್ನಂತವಳಿಗೆ ಈ ಹುಡುಗಿಯರಲ್ಲಿ ನನ್ನದೇ ಪ್ರತಿಬಿಂಬ ಕಂಡು ನೋವು ನನ್ನನ್ನೇ ನುಂಗಿದಂತೆ ಭಾಸವಾಯಿತು.

ಅಷ್ಟು ಹೊತ್ತಿಗೆ ರಘು ಎಂಬ ಯುವಕ ಹೇಳಿದ ಮಾತು ಸರ್ಕಾರ ಸಮಾಜವೆರೆಡು ಎದೆ ಮುಟ್ಟಿ ನೋಡಿಕೊಳ್ಳುವಂತಿತ್ತು. “ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರು ಈ ಜನಾಂಗದ ಅಭಿವೃದ್ಧಿಯಾಗಿಲ್ಲ, ಉನ್ನತ ಉದ್ಯೋಗದಲ್ಲಿರುವ ಒಂದೇ ಒಂದೇ ಮುಖ ಇಲ್ಲಿಲ್ಲ, ಪರಿಶಿಷ್ಟ ಜಾತಿ ಪಂಗಡಕ್ಕಾಗಿರುವ ಸವಲತ್ತು ಅವರನ್ನು ತಲುಪಿಲ್ಲ. ಯಾಕೆ ಹೀಗೆ ಅಂತ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. “

ನಿಜ ಸಾಗಿ ಬಂದ ಹೆಜ್ಜೆ, ತಪ್ಪುಗಳು ವ್ಯವಸ್ಥೆಯ ಲೋಪವನ್ನು ಗುರುತಿಸುವ ಇಂತಹ ಸಾಮಾನ್ಯ ಧ್ವನಿಯ ಕಾಳಜಿಯನ್ನು ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಆದರೆ ಅದ್ಯಾಕೋ ಆ ಕುರಿತು ಗಮನ ಹರಿಸಿದಂತೆ ಅರ್ಥವಾಗುತ್ತಿಲ್ಲ. ಸಮಸ್ಯೆಯ ಅರಿವಾಗಬೇಕಾದರೆ ಹಾಡಿಯಲ್ಲಿ ಅಧಿಕಾರಿಗಳು ಕಾಣಬೇಕು. ಎಸಿ ರೂಮಿನಿಂದ ಸ್ವಲ್ಪ ದಿನವಾದರು ದೂರವಾಗಬೇಕು.

jyothi2ಕೇರಳದ ವೈನಾಡಿನ ಮೂಲ ಹೊಂದಿರುವ ಎರವರ ಭಾಷೆ ಮಲಯಾಳ, ತಮಿಳು ಮತ್ತು ಕೊಡವ ಭಾಷೆಗಳ ಮಿಶ್ರಣ. ರಾತ್ರಿ ಅಲ್ಲೇ ಅವರ ಜಾನಪದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಾ ಕುಣಿತವನ್ನು ಅನುಭವಿಸುತ್ತಾ ಮಾತಾಡುತ್ತಿದ್ದರೆ ಸಮಯ ಹೋದದ್ದೇ ತಿಳಿಯಲಿಲ್ಲ. ರಾತ್ರಿ ಹಾಗೆ ಅಲ್ಲೇ ಒಂದು ಮನೆಯಲ್ಲಿ ಮಲಗಿದೆವು.

ಮರುದಿನ ಎರವರ ಥರಾನೆ ಸೀರೆ ಉಡಿಸಿಕೊಂಡು ಕೊನೆಗು ನನ್ನಾಸೆ ಪೂರೈಸಿಕೊಂಡಿದ್ದೆ. ಚೈನಿಹಡ್ಲು ಹಾಡಿಯತ್ತ ಮತ್ತೆ ಪಯಣ ಬೆಳೆಸಿದೆವು. ಕಾಡು ಆನೆಗಳ ಹಾವಳಿಗೆ ತುತ್ತಾಗುತ್ತಿರುವ ಹಾಡಿಯಲ್ಲಿ ತುಂಬಾ ದೂರ ನಡೆದ ಮೇಲೆ ಒಂದು ಗುಡಿಸಲು. ಚಳಿಗೆ ಮೈಬಿಸಿ ಮಾಡಿಕೊಳ್ಳಲು ಹಿರಿಯ ಜೀವವೊಂದು ಬೀಡಿಯನ್ನು ಸೇದುತ್ತಿದ್ರೆ ಹೊಗೆ ಸಾಗುವ ಹಾದಿಯತ್ತ ನೋಡುತ್ತಿದ್ದೆ. ಅಲ್ಲೇ ಬಿದಿರಿನಿಂದ ಮಾಡಿದ ಬಿಲ್ಲು ಕಾಣುತ್ತಿತ್ತು.

ಯಾಕಿದನ್ನು ನೇತು ಹಾಕಿದ್ದೀರಾ ಎಂದೆ. ಗಂಡು ಮಗು ಹುಟ್ಟಿದ್ರೆ ಈ ರೀತಿ ಬಿದಿರಿನಿಂದ ಮಾಡಿದ ಬಿಲ್ಲನ್ನು ನೇತುಹಾಕುತ್ತೇವೆ, ಹಾಗೆ ಹೆಣ್ಣು ಮಗು ಹುಟ್ಟಿದ್ರೆ ಬಿದಿರಿನ ತೊಟ್ಟಿಲ ಮನೆಯಲ್ಲಿಡುತ್ತೇವೆ ಎಂದು ಅಲ್ಲಿದ್ದವರು ಹೇಳಿದ್ರು. ನಿಜ ಸಾಕಷ್ಟು ಕುತೂಹಲ ಸಂಗತಿಗಳು ತಿಳಿದುಕೊಳ್ಳಲು ಇನ್ನು ಬಾಕಿಯಿದ್ದವು.

ಹೀಗೆ ಎರವ ಜನಾಂಗದ ಬಗ್ಗೆ ಅದು ನಾಶದ ಅಂಚಿಗೆ ಬಂದು ನಿಂತಿರುವ ಬಗ್ಗೆ ಕಾರಣಗಳನ್ನು ಹುಡುಕಲು ಪೊನ್ನಂಪೇಟೆಯ ಅಡ್ಡಂಡಿ ಕಾರ್ಯಪ್ಪ ಅವರ ಮನೆಗೆ ತೆರಳಿತ್ತು ನಮ್ಮ ತಂಡ.

ಎರವರ ಬಗ್ಗೆ ಮಾತಾಡುವಾಗ ಭಾವುಕರಾಗಿ ಆಕ್ರೋಶಭರಿತರಾಗಿ ಕಾರ್ಯಪ್ಪ ಮಾತಾಡುತ್ತಿದ್ರು. ಎರವರ ಸಂಖ್ಯೆ ಶೇಕಡಾ 50 ರಷ್ಟು ಕುಸಿದಿದೆ ಎಂಬ ಆತಂಕದ ಸಂಗತಿಯನ್ನು ಅವರು ಹೇಳಿದರು. ಕುಟುಂಬ ನಿಯಂತ್ರಣ ಯೋಜನೆಯಿಂದ ಸಿಗುವ ಹಣಕ್ಕಾಗಿ ಶಸ್ಸ್ತಚಿಕಿತ್ಸೆ ಮಾಡಿಕೊಳ್ಳುತ್ತಿರುವುದು, ಕುಡಿತ ಈ ಜನಾಂಗವನ್ನು ಅಳಿವಿನ ಅಂಚಿಗೆ ತಂದು ನಿಲ್ಲಿಸಿದೆ ಎಂದು ನೋವಿನಿಂದ ನುಡಿದ್ರು.

jyothi3ನಮ್ಮ ಅಧಿಕಾರಿಗಳು ಹಾಡಿಗೆ ಬರಲಿ. ಅವರ್ಯಾಕೆ ಕೊಡವರನ್ನು, ಗೌಡರನ್ನು , ಲಿಂಗಾಯಿತರನ್ನು ಎಳೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಿಸೋದಿಲ್ಲ? ಈ ಮುಗ್ಧರನ್ನು ಎಳೆದುಕೊಂಡು ಹೋಗ್ತಾರೆ. ಕೊಡೋ ಹಣದಾಸೆಗೆ ಇವರು ಹೋಗುತ್ತಾರೆ. ಎಂದರು.

ಸಮಸ್ಯೆ , ಬಡತನ ಅಬ್ಬಾ ಎಷ್ಟು ಅಪಾಯಕಾರಿ. ಜನಾಂಗವೊಂದನ್ನೇ ನಾಶದಂಚಿಗೆ ತಂದು ನಿಲ್ಲಿಸಿದ ನಮ್ಮ ವ್ಯವಸ್ಥೆ, ಈ ಕಿತ್ತುತಿನ್ನೋ ಬಡತನ ಯಾಕೋ ಸ್ಥಿತಿಗೆ ಮನಸ್ಸು ಮೌನವಾಗಿ ರೋದಿಸಿತ್ತು.

ಬಿಪಿಎಲ್ ಕಾರ್ಡ್ ಬಗ್ಗೆ ಕೆಲವರಿಗೆ ಮಾಹಿತಿಯಿಲ್ಲ. ಮಾಹಿತಿ ನೀಡುವ ಮನಸ್ಸುಗಳಿಲ್ಲ. ರಕ್ತಹೀನತೆಯಿಂದ ಸಾಯುವ ಗರ್ಭಿಣಿಯರ ಅಂಕಿ ಅಂಶಗಳು ಕಾಣುತ್ತಿಲ್ಲ.ಎರವ ಜನಾಂಗ ಅಳಿವಿನಂಚಿಗೆ ಬಂದು ನಿಂತ ಕಾರಣ ಹುಡುಕಲು ಹೊರಟ ನನಗೆ ಕಂಡಿದ್ದು ಕೈಯಾರೆ ನಾವೇ ಹೊಸಕು ಹಾಕುತ್ತಿರುವ ಒಂದು ಶ್ರೀಮಂತ ಜನಾಂಗದ ಭ್ರೂಣ.
ಹೀಗೆ ಎರವರ ಜಗತ್ತು ವಿಶಾಲತೆಯಿಂದ ಕುಬ್ಜತೆಯೆಡೆಗೆ ಸಾಗುತ್ತಿರುವ ರೀತಿ ನೋಡಿ ಭಾರವಾದ ಹೃದಯದಿಂದ ನಮ್ಮ ತಂಡ ರಾಜಧಾನಿಗೆ ವಾಪಸಾಗಿತ್ತು.

ಈ ಬಾರಿ ಈ ನೋವಿನ ಪಯಣ ನೆನಪಾಯಿತು.

ಮತ್ತೆ ಒಂದು ವರದಿಯ ನೆನಪಿನೊಂದಿಗೆ ಬರ್ತೀನಿ.
ಜ್ಯೋತಿ..

Add Comment

Leave a Reply