Quantcast

ಸಮಯದ ಪರಿವೆ ಕಳೆದುಕೊಂಡೆ..

ಅಕ್ಷಯವಾಗಲಿ ‘ಅಕ್ಷಯಾಂಬರ’ದ ಪ್ರದರ್ಶನಗಳು

athree-ashok1

ಜಿ ಎನ್  ಅಶೋಕವರ್ಧನ 

ಬನ್ನಂಜೆ ಸಂಜೀವ ಸುವರ್ಣರು ಮೊನ್ನೆಯಷ್ಟೇ ಚರವಾಣಿಸಿ “ದ್ರೌಪದಿಯ ಒಂದು ನಾಟಕ ನಾಳೆ ಇದೆ. ಇದಕ್ಕೆ ಹಿಮ್ಮೇಳ ನಮ್ಮ ಕೇಂದ್ರದ್ದೇ. ಬನ್ನಿ” ಎಂದರು.

ಪರಂಪರೆಯನ್ನು ಆಮೂಲಾಗ್ರ ಎನ್ನುವಂತೆ ಸಂಗ್ರಹಿಸುತ್ತಲೂ ಒರೆಗೆ ಹಚ್ಚುತ್ತಲೂ ಫಲಿತಾಂಶವನ್ನು ಕೇಳಿ ಬಂದ ಯಾರಿಗೂ ಅದ್ವಿತೀಯವಾಗಿ ಮತ್ತು ನಿರ್ಮಮವಾಗಿ ಹಂಚುತ್ತಲೇ ಇರುವ ಗುರು ಸಂಜೀವರ ಕರೆ, ಹುಸಿಯಿರದು.

akshayambara by sureen

ಮತ್ತೆ `ನಾಟಕ’ಕ್ಕೆ ಯಕ್ಷಗಾನ ಹಿಮ್ಮೇಳ, ಎಂದರೆ ವಿಶಿಷ್ಟವೇ ಇರಬೇಕು ಎಂಬೆರಡು ವಿಚಾರಗಳೇ ನನ್ನನ್ನು ನಿನ್ನೆ ಮಂಗಳೂರಿನಿಂದ ಮಣಿಪಾಲದ ಅಪ್ರಸಿದ್ಧ ಮೂಲೆಯ ಸಭಾಭವನದ ಆಪ್ತರಂಗ ವೇದಿಕೆಗೆ ಸೆಳೆದಿತ್ತು.

ಪ್ರಯಾಣ ಮತ್ತು ಕಾಲಗಳ ಹೊಂದಾಣಿಕೆಗಳು ತೊಡರುಗಾಲುಗಳಾಗಿ, ನಾನು ಆವರಣ ಹೊಕ್ಕಾಗ ಕಣ್ಣಿರಿವ ಕತ್ತಲು, ಏದುಸಿರೂ ಹೊರ ಬರಲು ಹೆದರುವ ಮೌನ! ಇದೇನು ಪ್ರದರ್ಶನ ರಂಗವೋ ಮೇಳದ ಚೌಕಿಯೇ ಬಯಲಿಗೆ ಬಿದ್ದದ್ದೋ ಎನ್ನುವ ಸ್ಥಿತಿಯಲ್ಲಿ, ಸ್ತ್ರೀವೇಷವೊಂದು ಸಜ್ಜುಗೊಳ್ಳುವುದನ್ನೇ ತುಂಬಿದ ಸಭಾಸದರು ನೋಡುತ್ತಿದ್ದರು! ಕೆಲವೇ ಮಿನಿಟುಗಳಲ್ಲಿ ನಾನೂ ಆ ತಲ್ಲೀನತೆಯಲ್ಲಿ ಒಂದಾಗಿ ಸಮಯದ ಪರಿವೆ ಕಳೆದುಕೊಂಡದ್ದು (ಅನಂತರ ಯಾರೋ ಹೇಳಿದಂತೆ ಸುಮಾರು ಒಂದೂಮುಕ್ಕಾಲು ಗಂಟೆ!) ನಾಟಕದ ಅದ್ಭುತ ಯಶಸ್ಸಿನಿಂದಲೇ!

ಮಾರ್ತಾ ಆಶ್ಟನ್ನಿನಿಂದ ತೊಡಗಿ, ನಿತ್ಯದ ನಡಿಗೆಯೂ ದೃಢವಾಗದ ಕೂಸುಗಳವರೆಗೆ ಅಸಂಖ್ಯ ಸ್ತ್ರೀಯರು `ಗಂಡು’ಕಲೆಯಾದ ಯಕ್ಷಗಾನದ ಮೇಲೆ `ದಾಳಿ’ ನಡೆಸುತ್ತಲೇ ಇದ್ದಾರೆ. ಇವರಲ್ಲಿ ಪಕ್ಕಾ ಕಸುಬುದಾರಿಕೆ ತೋರಿದವರ ಸಂಖ್ಯೆ ಸಣ್ಣದಲ್ಲ. ಅವರೊಡನೆ ಸ್ತ್ರೀ ಎನ್ನುವ ಹೆಚ್ಚುಗಾರಿಕೆಯ ಅನುಕಂಪದ ಅಂಕ ಗಳಿಸಿ, ಸ್ತ್ರೀ ಭೂಮಿಕೆಗಳನ್ನಷ್ಟೇ ನಿರ್ವಹಿಸಿ `ಗೆದ್ದ’ವರನ್ನೂ ಎಣಿಸಿದರೆ ಮಹಿಳಾ ಪ್ರಾಬಲ್ಯ ನಿಜಕ್ಕೂ ಅಸಂಖ್ಯವೇ ಇದೆ.

ಆದರೆ ಇಷ್ಟಾಗಿಯೂ ಯಕ್ಷಗಾನ ಪೂರ್ಣಮತದಿಂದ `ಸಾರ್ವಜನಿಕ ಕಲೆ’ ಎನ್ನಿಸಿಕೊಳ್ಳಲಾಗದ ವಿಚಿತ್ರವನ್ನೇ ಗುರುತಿಸಿ, ಯಕ್ಷಗಾನೀಯ ಮಾಧ್ಯಮದಲ್ಲೇ ಗಂಭೀರ ಚರ್ಚೆಯನ್ನು ಎತ್ತಿಟ್ಟ ನಾಟಕ ಅಕ್ಷಯಾಂಬರ. ಇದು ಶರಣ್ಯ ರಾಮಪ್ರಕಾಶ್ ಅವರ ಕೃತಿ. ಎರಡೇ ಪಾತ್ರಧಾರಿಗಳ ಈ ನಾಟಕದಲ್ಲಿ ಮುಖ್ಯ ಭೂಮಿಕೆಯನ್ನೂ ಸಮರ್ಥವಾಗಿ ಶರಣ್ಯ ನಿರ್ವಹಿಸಿದ್ದರೆ, ಅದ್ವಿತೀಯ ಎನ್ನುವಂತೆ ಸಹಭಾಗಿಯಾದವರು ಸುಪ್ರಸಿದ್ಧ ಯಕ್ಷ-ಕಲಾವಿದ ಪ್ರಸಾದ ಚೇರ್ಕಾಡಿ.

ನಾಟಕದಲ್ಲಿ ಹೆಣ್ಣು, ಗಂಡುಗಳಾಗಿಯೇ ಕಾಣಿಸುವ ನಟರು, ಅದರೊಳಗಿನ ಯಕ್ಷಗಾನದಲ್ಲಿ ಗಂಡು ಹೆಣ್ಣಾಗಿ ಅಭಿನಯಿಸುತ್ತಾರೆ. ಪ್ರಸಂಗ ಅಕ್ಷಯಾಂಬರವೆಂದೇ ಪ್ರಸಿದ್ಧವಾದ ದ್ರೌಪದೀ ವಸ್ತ್ರಾಪಹರಣದ ಪ್ರಯತ್ನವನ್ನೇ ಬಿಂಬಿಸುತ್ತದೆ. ಆದರೆ ಅಷ್ಟಕ್ಕೇ ನಿಲ್ಲದೆ ನೇಪಥ್ಯದಲ್ಲಿ (ಚೌಕಿಯಲ್ಲಿ) ನಡೆಯುವ ನಾಟಕ ವ್ಯತಿರಿಕ್ತವಾದ ಅನುಭವವನ್ನು ಬಿತ್ತರಿಸುತ್ತದೆ. ರಂಗಕ್ರಿಯೆಯಲ್ಲಿ ಕಾಣಿಸುವ ಈ ದ್ವಂದ್ವ ಪ್ರೇಕ್ಷಕ ಮನೋಭೂಮಿಕೆಯಲ್ಲಿ ಮೂಡಿಸುವ ರೂಪ ಮತ್ತು ವಾದತರಂಗಗಳು ಅದ್ಭುತ, ಅಸಂಖ್ಯ. ನಾಟಕ ಮುಗಿದನಂತರ ಕಲಾವಿದರೊಡನೆ ನಡೆದ ಅನೌಪಚಾರಿಕ ಆದರೆ ಸ್ವಾರಸ್ಯಕರ ಸಂವಾದ ಇದಕ್ಕೆ ಸಣ್ಣ ಸಾಕ್ಷಿಯೇ ಆಯ್ತು.

1467805367-akshayambaraಮೂರೋ ನಾಲ್ಕೋ ಬಣ್ಣದಮನೆಯ ಸ್ಥಾನಗಳು, ಕೇಂದ್ರದಲ್ಲಿ ಎಂಬಂತೆ ರಂಗಸ್ಥಳದ ರೂಪಣೆ, ಅಸಡ್ಡಾಳವಾಗಿಯೇ ತೋರುವ ರಂಗ ಪರಿಕರಗಳು, ವೀಕ್ಷಕರನ್ನು ಉದ್ದೇಶಪೂರ್ವಕ ಕೋರೈಸುವ ಅಥವಾ ಮಂಕಾಗಿಸುವ ಬೆಳಕಿನ ವಿನ್ಯಾಸ, ಗುನುಗು ಗೊಣಗಿನಿಂದ ತೊಡಗಿ ಅಬ್ಬರದ ನುಡಿಗಳವರೆಗಿನ ಮಾತುಗಳು, ಮೋಹಕ ಯಕ್ಷಾಭಿನಯಗಳು, (ನಿಜ-ನೇಪಥ್ಯದಲ್ಲೇ ಉಳಿದ ಯಕ್ಷಗಾನ ಕೇಂದ್ರದ್ದೇ ಬಳಗದ) ಸಮರ್ಥ ಹಿಮ್ಮೇಳ ಎಂದಿತ್ಯಾದಿ ಪಟ್ಟಿ ಮಾಡತೊಡಗಿದರೆ ಕಳೆಯಂಕ ಎಲ್ಲೂ ಹಾಕಲಾಗದ ಪ್ರಯೋಗವಾಗಿ ಮೂಡಿತು ಅಕ್ಷಯಾಂಬರ.

ತಡವಾಗಿ ಹೋದ ನಾನು ಪ್ರೇಕ್ಷಾಂಗಣದ ಹಿಂದಿನ ಸಾಲಿನಲ್ಲಿದ್ದೆ. ಹೊಸದಾಗಿ ಪಳಗಿಸ ಹೊರಟ ನನ್ನ ಚರವಾಣಿಯ ಕ್ಯಾಮರಾದ ಅಸಹಕಾರವೂ ಸೇರಿಕೊಂಡದ್ದರಿಂದ ನಾನು ಹೆಚ್ಚಿನ ಚಿತ್ರಗಾರಿಕೆಯ ಪ್ರಯತ್ನ ನಡೆಸಲಿಲ್ಲ. ಅನಂತರ ತಿಳಿದು ಬಂದಂತೆ ಮೊದಲೇ ಸಂಘಟಕರ “ಚರವಾಣಿ ಬಂದ್ ಮಾಡಿ, ಚಿತ್ರಗ್ರಹಣ ನಿಷೇಧಿಸಿದೆ” ಘೋಷಣೆಗೂ ಇದು ನ್ಯಾಯವೇ ಆಯ್ತು. ( ಅಂತರ್ಜಾಲದಲ್ಲಿ ಇರುವ ಅನ್ಯರ ಚಿತ್ರಗಳನ್ನು ಕೃತಜ್ಞತಾಪೂರ್ವಕವಾಗಿ ಬಳಸಿಕೊಂಡಿದ್ದೇನೆ.) ಅದಕ್ಕೂ ಮಿಗಿಲಾಗಿ ಯಾವುದೇ ಮಾತು, ಮಾಧ್ಯಮ ಇದನ್ನು ಸಮರ್ಥವಾಗಿ ಪ್ರತಿನಿಧಿಸಲಾರದು ಎಂಬ ಸತ್ಯವನ್ನು ಒಪ್ಪಿಕೊಂಡು, ಎಲ್ಲರೂ ಇನ್ನಷ್ಟು ನಿಜ ಪ್ರದರ್ಶನವನ್ನೇ ಬಯಸಿ ನೋಡುವಂತಾಗಲಿ ಎಂದು ಮುಗಿಸುತ್ತೇನೆ.

Add Comment

Leave a Reply