Quantcast

ಹುಷಾರು..! ಇಲ್ಲಿ ಎದೆಯನ್ನೇ ಸುಟ್ಟು ಹಾಕಲಾಗುತ್ತದೆ..

breast-ironing7‘ಚಿಕ್ ಚಿಕ್ ಸಂಗತಿ’ಯಲ್ಲಿ ‘ಹಾಳಾದೊವೆರಡು ಮೊಲೆ ಬಂದು..’ ಪ್ರಕಟವಾಗುತ್ತಿದ್ದಂತೆ ಓದುಗರು ಅಕ್ಷರಶಃ ಬೆಚ್ಚಿ ಬಿದ್ದರು. ‘ಇದು ಸಾಧ್ಯವೇ..” ಎನ್ನುವ ಉದ್ಘಾರ ಎಲ್ಲರಿಂದಲೂ. ಜೊತೆಗೆ ಹೇಳಲಾಗದ ನೋವು.

ಯೋನಿ ಛೇಧನದ ಬಗ್ಗೆ ಆಗೀಗ ವರದಿಗಳಾದರೂ ಬಂದಿವೆ. ಆದರೆ ಎದೆಯನ್ನೇ ಚಿವುಟಿ ಹಾಕಿಬಿಡುವ ಕ್ರೂರ ಆಚರಣೆಯೊಂದು ಸದ್ದಿಲ್ಲದೇ ಆವರಿಸಿಕೊಳ್ಳುತ್ತಿದೆ. ಓದಿದ ಪ್ರತಿಯೊಬ್ಬರೂ ಇದರ ಬಗ್ಗೆ ಇನ್ನಷ್ಟು ವಿವರ ಬೇಕು ಎಂದು ಕೇಳಿದರು 

ಪ್ರಸಾದ್ ನಾಯ್ಕ್ ಕ್ಯಾಮೆರೂನ್ ನಲ್ಲಿರುವ ಆಚರಣೆಯನ್ನು ನಮ್ಮ ಗಮನಕ್ಕೆ ತಂದಿದ್ದರು. ಆ ಆಚರಣೆ ಹೇಗೆ ಜಗದ ಎಲ್ಲೆಡೆ ನಿಧಾನವಾಗಿ ವ್ಯಾಪಿಸುತ್ತಿದೆ ಎನ್ನುವುದನ್ನೂ ತಿಳಿಸಿದ್ದರು.

prasad naikನಿಮ್ಮ ಓದಿಗಾಗಿ ಇಲ್ಲಿವೆ ನೋಡಿ ಕಣ್ಣೀರಿನ ಕಥೆಗಳು 

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ಈಗ ಆಫ್ರಿಕಾ ಖಂಡದ ಅಂಗೋಲಾ ವಾಸಿ. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಪಡೆದ ಪ್ರಸಾದ್ ಜಲ ಸಂಪನ್ಮೂಲ ಇಲಾಖೆಯ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪಟ್ಟಣದಲ್ಲಿದ್ದಾರೆ. ವಿಶ್ವಬ್ಯಾಂಕ್ ಪ್ರಾಯೋಜಿತ ಯೋಜನೆಯ ಉದ್ಯೋಗ.

ಪ್ರಸಾದ್ ಹವ್ಯಾಸಿ ಬರಹಗಾರರಾಗಿ ಕಳೆದ ಕೆಲವು ವರ್ಷಗಳಿಂದ ಬರೆಯುತ್ತಾ ಬಂದವರು. ‘ಅವಧಿ’ಯಲ್ಲಿ ಅವರ ಅನೇಕ ಲೇಖನಗಳು ಪ್ರಕಟವಾಗಿದೆ. ಸಧ್ಯದಲ್ಲೇ ಇವರ ಅಂಕಣ ಮಾಲೆ ಅವಧಿಯಲ್ಲಿ ಪ್ರಕಟವಾಗಲಿದೆ

breast-ironing8

“ಕ್ಯಾಮೆರೂನ್: ಎದೆಯಾಳದ ನೋವು”

ಪ್ರಸಾದ್ ನಾಯ್ಕ್ 

“ರಾತ್ರಿಗಳಲ್ಲಿ ಎದೆಯ ಸುತ್ತ ಬಿಗಿಯಾದ ಪಟ್ಟಿಯೊಂದನ್ನು ಧರಿಸುವುದು ಒಂದು ಕಡೆಯಾದರೆ ದಿನದ ಸಮಯಗಳಲ್ಲಿ ಸುಡುವ ಕಲ್ಲಿನಿಂದಲೋ, ಕುಟ್ಟಾಣಿಯಂಥಾ ಕೋಲಿನಿಂದಲೋ ನನ್ನಮ್ಮ ನನ್ನ ಎದೆಯ ಮೇಲೆ ಒತ್ತಿ ಮಸಾಜ್ ಮಾಡುತ್ತಿದ್ದಳು. ಅದೆಂಥಾ ಯಮಯಾತನೆಯೆಂಬುದನ್ನು ನನಗೀಗ ಹೇಳಲೂ ಸಾಧ್ಯವಿಲ್ಲ”.

“ಇದನ್ನು ನಿಲ್ಲಿಸೆಂದು ನಾನು ಅಮ್ಮನಲ್ಲಿ ಗೋಗರೆಯುತ್ತಿದ್ದೆ. ಅವಳು ಕೊನೆಗೆ ನಿಲ್ಲಿಸಿದಳೇನೋ ಸರಿ. ಆದರೆ ಕೆಲವು ತಿಂಗಳುಗಳ ಕಾಲ ನಡೆದ ಈ ಕ್ರಿಯೆಯ ನಂತರ ವಿರೂಪಗೊಂಡ ನನ್ನ ಸ್ತನಗಳು ದೊಡ್ಡದಾಗಿ ಬೆಳೆಯಲಾರಂಭಿಸಿದವು. ಯದ್ವಾತದ್ವಾ ಬೆಳವಣಿಗೆಯಾಗಿ ನನ್ನ ಸ್ತನಗಳು ಅದೆಷ್ಟು ದೊಡ್ಡದಾಗಿ ಬೆಳೆದವೆಂದರೆ ನಾನು ಕೀಳರಿಮೆಯಿಂದ ಕುಗ್ಗಿಹೋದೆ”.

breast-ironing1 “ಮಿತಿಮೀರಿ ಉಬ್ಬಿದ ನನ್ನ ಎದೆಯ ಭಾಗವನ್ನು ಕೆಕ್ಕರಿಸಿ ನೋಡುತ್ತಾ ಎಲ್ಲರೂ ನನ್ನನ್ನು ವ್ಯಂಗ್ಯವಾಡುವುದು ಸಾಮಾನ್ಯವಾಯಿತು. ಸ್ವಚ್ಛಂದವಾಗಿ ಓಡಾಡಬೇಕಾದ ವಯಸ್ಸಿನಲ್ಲಿದ್ದ ನಾನು ಜನರ ಕಣ್ಣಿಗೆ ಬೀಳದಂತೆ ಅಡಗಿ ಕುಳಿತುಕೊಳ್ಳಬೇಕಾಯಿತು. ನನ್ನ ವಯಸ್ಸು ಇಪ್ಪತ್ತರ ಗಡಿ ತಲುಪುವಷ್ಟರಲ್ಲೇ ನನ್ನ ಜೋಡಿಮೊಲೆಗಳು ಐವತ್ತರ ಪ್ರಾಯದ ಹೆಂಗಸೊಬ್ಬಳ ಸ್ತನಗಳಂತೆ ಮಿತಿಮೀರಿ ದಪ್ಪಗಾಗಿ ಜೋತುಬಿದ್ದಿದ್ದವು. ಇಂದಿಗೂ ಜನರ ಮಧ್ಯೆ ನನಗೆ ಬಟ್ಟೆ ಬದಲಾಯಿಸಲು ನನಗೆ ಸಂಕೋಚವಾಗುತ್ತದೆ. ನನ್ನ ಸಂಗಾತಿಯೊಂದಿಗಿನ ಖಾಸಗಿಕ್ಷಣಗಳಲ್ಲೂ ಮೇಲ್ವಸ್ತ್ರವನ್ನು ಧರಿಸಿಯೇ ಇರುತ್ತೇನೆ. ನನ್ನನ್ನು ಈ ಸ್ಥಿತಿಗೆ ದೂಡಿದ ನನ್ನ ತಾಯಿಯ ವಿರುದ್ಧ ನನಗೆ ದ್ವೇಷವಿದೆ.”

“ಆಗ ನನಗೆ ಎಂಟರ ಪ್ರಾಯ. ಸೊಂಟದ ಮೇಲ್ಭಾಗದ ವಸ್ತ್ರವನ್ನು ತೆಗೆಯಲು ಹೇಳಿದ ನನ್ನಮ್ಮ ನನ್ನ ಎದೆಯನ್ನು ನೋಡುತ್ತಾ `ಆಗಲೇ ಬೆಳೆದುಬಿಟ್ಟಿಯಲ್ಲೇ ನೀನು. ಈ ವಯಸ್ಸಿನಲ್ಲೇ ನಿನ್ನ ಸ್ತನಗಳು ಬೆಳೆದರೆ ಸುತ್ತಮುತ್ತಲ ಗಂಡಸರೆಲ್ಲಾ ನಿನ್ನನ್ನೇ ನೋಡತೊಡಗುತ್ತಾರೆ’, ಎಂದಿದ್ದಳು.

ಅವಳ ಮಾತುಗಳ ತಲೆಬುಡವೂ ನನಗೆ ಆ ದಿನಗಳಲ್ಲಿ ತಿಳಿದಿರಲಿಲ್ಲ. ಅಂದಿನಿಂದ ದಿನಕ್ಕೆ ಮೂರುಬಾರಿಯಂತೆ ಚಪ್ಪಟೆಯಾದ ಮರದ ಸೌಟೊಂದರಿಂದ ನನ್ನ ಎದೆಯ ಮೇಲೆ ಬಡಿಯುತ್ತಾ, ಸಣ್ಣಗೆ ಹೊಗೆಯಾಡುತ್ತಿರುವ ಬಿಸಿಯಾದ ಆ ಮರದ ಸೌಟಿನಿಂದ ನನ್ನ ಎದೆಯ ಮೇಲೆ ಮಸಾಜ್ ಮಾಡುತ್ತಾ ಅದೇನೋ ಮಾಡುತ್ತಿದ್ದಳು. `ಚೀರಾಡಬೇಡ ಮಗಳೇ… ಇದೆಲ್ಲಾ ನಿನ್ನ ಒಳಿತಿಗೇ’ ಎಂದು ಪುಸಲಾಯಿಸುತ್ತಾ ತನ್ನ ವಿಲಕ್ಷಣ ಪ್ರಯೋಗಗಳನ್ನು ನನ್ನ ಎದೆಯ ಮೇಲೆ ಆಕೆ ಮಾಡುತ್ತಿದ್ದರೆ, ನನಗಂತೂ ಒಂದೊಂದು ಕ್ಷಣವೂ ದುಃಸ್ವಪ್ನವಾಗಿತ್ತು.

ಆದರೆ ಮಾಲೀಷು ಹೆಚ್ಚು ಹೆಚ್ಚು ಮಾಡುತ್ತಲೇ ನನ್ನ ಸ್ತನಗಳು ಇನ್ನಷ್ಟು ಉಬ್ಬುತ್ತಾ ಹೋಗುತ್ತಿರುವುದು ಅಮ್ಮನನ್ನು ಚಿಂತೆಗೀಡುಮಾಡುತ್ತಿದ್ದವು. ನನ್ನ ದೇಹದ ಬೆಳವಣಿಗೆಯನ್ನು ನೋಡುತ್ತಾ ಅವಳ ಮುಖದಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನವನ್ನು ನಾನು ಆಗಲೇ ಕಂಡುಕೊಂಡಿದ್ದೆ. ಈ ಮರದ ಸೌಟಿನಿಂದ ಯಾವ ಪ್ರಯೋಜನವೂ ಇಲ್ಲ ಎಂದು ತಿಳಿದ ನಂತರ ಆ ಸೌಟಿನಂಥಾ ಕೋಲನ್ನು ಮೂಲೆಗೆಸೆದು ಕಲ್ಲನ್ನು ಬಳಸತೊಡಗಿದಳು.

ಆ ಬಿಸಿಯಾದ ಕಲ್ಲು ನನ್ನ ಪುಟ್ಟ ಎದೆಯ ಮೇಲೆ ಅಯಸ್ಕಾಂತದಂತೆ ಬಿಗಿಯಾಗಿ ಅಂಟಿಕೊಂಡು ವೇಗವಾಗಿ ಹಿಂದಕ್ಕೂ ಮುಂದಕ್ಕೂ ಜಾರುತ್ತಿದ್ದರೆ ನಾನು ಕೆಂಡದ ಹಾಸಿಗೆಯಲ್ಲಿ ಮಲಗಿರುವವಳಂತೆ ಅಸಾಧ್ಯ ನೋವಿನಿಂದ ಒದ್ದಾಡುತ್ತಿದ್ದೆ. ಕೊನೆಗೂ ಸ್ಥಳೀಯ ಕೌನ್ಸೆಲರ್ ಒಬ್ಬರನ್ನು ಗುಟ್ಟಾಗಿ ಕಂಡು, ಅವರಿಗೆ ವಿಷಯವನ್ನು ತಿಳಿಸಿದ ನಂತರ, ಅವರು ಮನೆಗೆ ಬಂದು ಅಮ್ಮನಿಗೆ ತಿಳಿಹೇಳಿದರು. ಅಂತೂ ಶಾಪವಿಮೋಚನೆಯಾಯಿತೆಂದು ನನಗೆ ಸಮಾಧಾನವಾಯಿತು.

ಆದರೆ ಒಂದೆರಡು ದಿನಗಳಲ್ಲೇ ಅಮ್ಮ ಅದೇ ತನ್ನ ಎಂದಿನ ಚಾಳಿಯನ್ನು ಮುಂದುವರೆಸಿದಳು. ಈ ಬಾರಿ ಕಲ್ಲು ಹೋಗಿ ಬಿಸಿಯಾದ ತೆಂಗಿನ ಚಿಪ್ಪುಗಳು ಬಂದಿದ್ದವು. ನನ್ನ ಹಿಂದೆ ನೆರಳಿನಂತೆ ಬರುವುದೇ ಅವಳಿಗೊಂದು ಕೆಲಸವಾಯಿತು. ನನಗಂತೂ ರೋಸಿಹೋಗಿ ಒಂದೊಳ್ಳೆ ದಿನ ತನ್ನ ಗಂಟುಮೂಟೆ ಕಟ್ಟಿ ಸಂಬಂಧಿಯೊಬ್ಬರ ಮನೆಯನ್ನು ಸೇರಿಕೊಂಡೆ. ಇವತ್ತಿಗೂ ನನ್ನ ತಾಯಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಆದರೆ ಕನ್ನಡಿಯ ಎದುರು ನಿಂತಾಗಲೆಲ್ಲಾ ನನ್ನ ಎದೆಯ ಬಗ್ಗೆ, ನನ್ನ ದೇಹದ ಬಗ್ಗೆ ನನಗೆ ಹೇಸಿಗೆಯೆನಿಸುತ್ತದೆ.”
“ಪ್ಲಾಸ್ಟಿಕ್ ಡ್ರೀಮ್” ಎಂಬ ಹೆಸರಿನ ಪ್ರೊಜೆಕ್ಟ್ ನ ಅಂಗವಾಗಿ ಕ್ಯಾಮೆರಾ ಒಂದನ್ನು ತನ್ನ ಹೆಗಲಿಗೇರಿಸಿ ಕ್ಯಾಮೆರೂನ್ ಗೆ ಹೊರಟಿದ್ದ ಫ್ರೆಂಚ್ ಫೋಟೋಗ್ರಾಫರ್ ಗಿಲ್ಡಾಸ್ ಪಾರ್ ನಿಗೆ ಸಿಕ್ಕಿದ್ದು ಇಂಥದ್ದೇ ನೂರಾರು ನೋವಿನ ಕಥೆಗಳು.

ಅದರಲ್ಲೂ ಈ ಎರಡು ಹೇಳಿಕೆಗಳು ಇಪ್ಪತ್ತರ ಆಸುಪಾಸಿನ ಹೆಣ್ಣುಮಕ್ಕಳಿಂದ ಕೊಡಲ್ಪಟ್ಟವುಗಳು. ಮೇಲ್ನೋಟಕ್ಕೆ ಏನೂ ಗೊತ್ತಾಗದಿದ್ದರೂ ಎಲ್ಲರಿಗೂ ತಿಳಿದಿರುವ, ಆದರೂ ಒಂದು ದೊಡ್ಡ ರಹಸ್ಯವೆಂಬಂತೆ ಕಾಯ್ದುಕೊಂಡಿರುವ ಈ ಸಂಪ್ರದಾಯವು ಹೆಣ್ಣುಮಕ್ಕಳಿದ್ದ ಬಹುತೇಕ ಎಲ್ಲಾ ಮನೆಗಳಲ್ಲೂ ಗಿಲ್ಡಾಸ್ ರಿಗೆ ಎದುರಾಗಿತ್ತು.

breast-ironing3ಜೊತೆಯಲ್ಲೇ ಇದ್ದ ಪತ್ರಕರ್ತ, ಈ ವಿಷಯಗಳ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ತಯಾರಿಸುವ ಯೋಜನೆಯನ್ನಿಟ್ಟುಕೊಂಡಿದ್ದ ಕಿರ್ಕ್ ಕೂಡ ಒಂದಕ್ಕೊಂದು ಭಯಾನಕವಾದ ಕಥೆಗಳನ್ನು ಕ್ಯಾಮೆರೂನಿನ ಹೆಂಗಳೆಯರಿಂದ ಕೇಳುತ್ತಾ ದಂಗಾಗಿಹೋಗಿದ್ದ.

ಅಂತೂ `ಬ್ರೆಸ್ಟ್ ಐರನಿಂಗ್’ ಎಂಬ ಸೂಕ್ಷ್ಮ ವಿಷಯವೊಂದನ್ನು ತನ್ನ ಛಾಯಾಚಿತ್ರಗಳ ಮೂಲಕವಾಗಿ ಜಗತ್ತಿಗೆ ಪರಿಣಾಮಕಾರಿಯಾಗಿ ತೆರೆದಿಡುವ ಗಿಲ್ಡಾಸ್ ರ ಯೋಚನೆಯು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಸವಾಲಿನದ್ದಾಗಿತ್ತು ಎಂಬುದನ್ನು ಕಂಡುಕೊಳ್ಳಲು ಅವರಿಗೆ ಹೆಚ್ಚಿನ ಸಮಯವೇನೂ ತಗುಲಲಿಲ್ಲ. ಇನ್ನೇನಿದ್ದರೂ ಈ ನೋವುಗಳಿಗೆ ದನಿಯಾಗುವ ಸವಾಲು ಅವರ ಮುಂದಿತ್ತಷ್ಟೇ.

ಆಫ್ರಿಕಾ ಖಂಡದ ಕ್ಯಾಮೆರೂನ್ ಎಂಬ ದೇಶವೊಂದರಲ್ಲಿ ಕಂಡುಬರುವ `ಬ್ರೆಸ್ಟ್ ಐರನಿಂಗ್’ ಎಂಬ ಅಮಾನುಷ ಸಂಪ್ರದಾಯದ್ದೇ ಒಂದು ದೊಡ್ಡ ಕಥೆ. ಆಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ ಹೆಣ್ಣುಮಕ್ಕಳು ಈ ಬರ್ಬರ ಸಂಪ್ರದಾಯಕ್ಕೆ ಬಲಿಯಾಗುತ್ತಿರುವ ನತದೃಷ್ಟೆಯರು.

ಬಾಲಕಿಯೊಬ್ಬಳು ಎಂಟರಿಂದ ಹನ್ನೆರಡರ ಪ್ರಾಯವನ್ನು ತಲುಪಿದಾಕ್ಷಣ ಆಕೆಯ ತಾಯಿಯೋ, ಅಜ್ಜಿಯೋ ಬಿಸಿಯಾದ ಕಲ್ಲನ್ನೋ, ಮರದ ಸೌಟನ್ನೋ, ಕುಟ್ಟಾಣಿಯಂಥಾ ಕೋಲನ್ನೋ ಹಿಡಿದುಕೊಂಡು ಈ ಬಾಲಕಿಯರ ಪುಟ್ಟ ಎದೆಯ ಮೇಲೆ ದಿನನಿತ್ಯವೂ ಜೋರಾಗಿ ಉಜ್ಜತೊಡಗುತ್ತಾರೆ. ಹೆಣ್ಣುಮಗುವಿನ ಸ್ತನಗಳು ಚೆನ್ನಾಗಿ ಬೆಳವಣಿಗೆಯಾಗದಿರಲಿ ಮತ್ತು ಆ ಮೂಲಕವಾಗಿ ಹೆಣ್ತನದ ಈ ಮುಖ್ಯಭಾಗವು ಸುತ್ತಮುತ್ತಲ ಪುರುಷವರ್ಗವನ್ನು ಲೈಂಗಿಕವಾಗಿ ಆಕರ್ಷಿಸದಿರಲಿ ಎಂಬುದು ಇಲ್ಲಿರುವ ಹುನ್ನಾರ.

ಹೀಗಾಗಿ ವಯೋಸಹಜವಾಗಿ ಬರಲಿರುವ ಸ್ತನಗಳನ್ನು ಬೆಳವಣಿಗೆಯಾಗಲು ಬಿಡದೆ, ಆದಷ್ಟು ಅವುಗಳನ್ನು ಸಮತಟ್ಟಾಗಿಸಿ ತಮ್ಮ ಹೆಣ್ಣುಮಕ್ಕಳನ್ನು ಹೊಂಚುಹಾಕುತ್ತಿರುವ ಗಂಡಸರ ಕಾಕದೃಷ್ಟಿಯಿಂದ, ಅತ್ಯಾಚಾರ-ಅಕಾಲಿಕ ಗರ್ಭಧಾರಣೆಗಳಿಂದ ದೂರವಿಡುವುದು ಈ ತಾಯಂದಿರ ಉದ್ದೇಶ.

ಈ ವಿಧಾನದಲ್ಲಿ ಗಟ್ಟಿಯಾದ ಮತ್ತು ಬಿಸಿಯಾದ ವಸ್ತುವೊಂದರಿಂದ ಹೆಣ್ಣುಮಗುವಿನ ಎದೆಯ ಮೇಲೆ ಒತ್ತಿ ಮಸಾಜ್ ಮಾಡುತ್ತಾ, ಹರೆಯದ ಹೊಸ್ತಿಲಿನಲ್ಲಿ ಸದ್ಯದಲ್ಲೇ ಬರಲಿರುವ ಸ್ತನಗಳನ್ನು ಅಥವಾ ಆಗಲೇ ಬಂದಿರುವ ಸ್ತನಗಳನ್ನು ಸಮತಟ್ಟಾಗಿಸಲು ಪ್ರಯತ್ನಿಸಲಾಗುತ್ತದೆ. ಸಾಮಾನ್ಯವಾಗಿ ಚಪ್ಪಟೆಯಾದ ಕಲ್ಲುಗಳು, ಮರದ ಸೌಟುಗಳು, ಕುಟ್ಟಾಣಿಯಂತಹ ಕೋಲುಗಳು, ತೆಂಗಿನ ಚಿಪ್ಪುಗಳು ಮತ್ತು ಅಗಲವಾದ ಎಲೆಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ಹಲವು ವಾರಗಳ ಅಥವಾ ತಿಂಗಳುಗಳ ಕಾಲ ಎದೆಯ ಭಾಗಕ್ಕೆ ಕೋಲಿನಿಂದ ಬಡಿಯುತ್ತಲೂ ಕೂಡ ಸ್ತನಗಳ ಬೆಳವಣಿಗೆಯನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತದೆ. ಈ ಬಿಸಿಯಾದ ವಸ್ತುಗಳು ಬರೋಬ್ಬರಿ ಎಪ್ಪತ್ತೈದು ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನವುಳ್ಳವುಗಳಂತೆ. ಹೀಗಾಗಿ ಸಹಜವಾಗಿಯೇ ಈ ಕ್ರಿಯೆಗೊಳಗಾಗುವ ಮುಗ್ಧ ಬಾಲಕಿಯರು ಅಸಾಧ್ಯ ನೋವಿನಿಂದ ನರಳುತ್ತಾರೆ.

ಸಾಮಾನ್ಯವಾಗಿ ತಾಯಂದಿರು ಅಥವಾ ಕುಟುಂಬದ ಇತರ ಹಿರಿಯ ಮಹಿಳಾ ಸದಸ್ಯರು ಮನೆಯಲ್ಲಿರುವ ಪುರುಷರಿಗೂ ತಿಳಿದುಬರದಂತೆ ಗುಟ್ಟಾಗಿ ಈ ಕ್ರಿಯೆಯನ್ನು ನಡೆಸುತ್ತಾ ಬಂದು, ಬೆಳೆಯುತ್ತಿರುವ ಮಗಳ ಯೌವನವನ್ನು ಮರೆಮಾಚುತ್ತಾ ದಿನತಳ್ಳುತ್ತಾರೆ. ಹಲವು ಬಾರಿ ಬಿಗಿಯಾದ ಇಲಾಸ್ಟಿಕ್ ಪಟ್ಟಿಯೊಂದನ್ನು ಹೆಣ್ಣುಮಕ್ಕಳ ಎದೆಯ ಸುತ್ತಲೂ ಗಂಟೆಗಟ್ಟಲೆ ಅಥವಾ ರಾತ್ರಿಯಿಡೀ ಕಟ್ಟಿ ಆ ಜಾಗವನ್ನು ಅದುಮಿಡಲಾಗುತ್ತದೆ.

ನೈಸರ್ಗಿಕವಾದ ದೈಹಿಕ ಬೆಳವಣಿಗೆಯೊಂದನ್ನು ತಡೆಯಲು ಅಥವಾ ಮುಂದೂಡಲು ಮಾಡಲಾಗುವ ಈ ವಿಲಕ್ಷಣ ಪ್ರಯತ್ನವು ಅಲ್ಪ ಮತ್ತು ದೀರ್ಘಪ್ರಮಾಣದ ಸಮಸ್ಯೆಗಳನ್ನುಂಟುಮಾಡುವುದೂ ಅಷ್ಟೇ ಸತ್ಯ. ಬಿಸಿಯಾದ ಕಲ್ಲುಗಳನ್ನು ರಭಸದಿಂದ ಉಜ್ಜಿ ಮೂಡಿಬರುವ ಸುಟ್ಟಗಾಯಗಳಲ್ಲದೆ ಹುಣ್ಣುಗಳಾಗುವ ಸಾಧ್ಯತೆಗಳು ಹೆಚ್ಚು. ಸ್ತನಗಳ ಗಾತ್ರಗಳಲ್ಲಿ ಏರುಪೇರು, ಸೋಂಕುಗಳು, ಅತಿಯಾಗಿ ಬೆಳವಣಿಗೆಯಾದ ಅಥವಾ ಬೆಳವಣಿಗೆಯು ತೀರಾ ಕುಂಠಿತವಾಗಿ ಸಮತಟ್ಟಾದ ಎದೆಯಿಂದ ಕೀಳರಿಮೆಯನ್ನು ಅನುಭವಿಸುವ ಸಾವಿರಾರು ಹೆಣ್ಣುಮಕ್ಕಳು ಖಿನ್ನತೆಗೆ ಜಾರುವುದನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು. ಸ್ತನ ಕ್ಯಾನ್ಸರಿನಂಥಾ ಮಹಾಮಾರಿಯೂ ಈ ಕ್ರಿಯೆಯಿಂದಾಗುವ ದುಷ್ಪರಿಣಾಮಗಳಲ್ಲೊಂದು ಎಂದು ಹೇಳಲಾಗುತ್ತದೆ.

breast-ironing5ಮೇಲ್ಕಂಡ ಅಂಶಗಳೂ ಅಲ್ಲದೆ ಮುಂದೆ ತಾಯಿಯಾಗುವ ಇದೇ ಬಾಲಕಿಯ ಎದೆಯು ತನ್ನ ಮಗುವಿಗಾಗಿ ಹಾಲಿಲ್ಲದೆ ಬರಿದಾಗುವುದೂ ಉಂಟು. ಮಾರುಕಟ್ಟೆಯಲ್ಲಿ ಸಿಗುವ ಬಾಟಲ್ ಹಾಲುಗಳನ್ನು ಖರೀದಿಸುವಷ್ಟು ಆರ್ಥಿಕವಾಗಿ ಶಕ್ತರಲ್ಲದ ಬ್ರೆಸ್ಟ್ ಐರನಿಂಗ್ ಕ್ರಿಯೆಗೊಳಗಾದ ಹಲವು ಮಹಿಳೆಯರು ತಮ್ಮ ಸ್ತನಗಳಿಂದ ಹಾಲಿನ ಬದಲಾಗಿ ಕಪ್ಪನೆಯ ದ್ರವವೊಂದು ಹೊರಬಂದು ತಮ್ಮ ನವಜಾತ ಶಿಶುಗಳಿಗೆ ಹಾಲುಣಿಸಲಾಗದೆ ಕಂಗಾಲಾಗಿದ್ದನ್ನು ಉಲ್ಲೇಖಿಸುತ್ತಾರೆ.

ಆಫ್ರಿಕಾದ ಹಲವು ಭಾಗಗಳಲ್ಲಿ ಹಾಲಿನಂತಹ ಅಗತ್ಯವಸ್ತುಗಳು ಮಾರುಕಟ್ಟೆಗಳಲ್ಲಿ ವಾರಗಟ್ಟಲೆ ಉಪಲಭ್ಯವಾಗದಿರುವುದು ಸರ್ವೇಸಾಮಾನ್ಯವಾಗಿರುವುದರಿಂದ ಪರಿಸ್ಥಿತಿಯು ಆಗಾಗ ಬಿಗಡಾಯಿಸುತ್ತಿರುವುದೂ ಸತ್ಯ. ಎದೆಹಾಲು ಬರಿದಾದ ಹಲವು ದೃಷ್ಟಾಂತಗಳಲ್ಲಿ `ಸಫಾರಿ ಆಂಟ್’ ಎಂದು ಕರೆಯಲಾಗುವ ವಿಷಯುಕ್ತ ಇರುವೆಗಳನ್ನು ತಾಯಂದಿರ ಸ್ತನಗಳ ಮೇಲೆ ಬಿಟ್ಟು, ಈ ಇರುವೆಗಳಿಂದ ಕಚ್ಚಿಸಿ ಎದೆಹಾಲು ಉತ್ಪತ್ತಿಮಾಡುವಂಥಾ ವಿಲಕ್ಷಣ ವಿಧಾನಗಳೂ ಕ್ಯಾಮೆರೂನಿನಂತಹ ದೇಶಗಳಲ್ಲಿವೆ. `ಆದರೆ ನನ್ನ ಪ್ರಕರಣದಲ್ಲಿ ಈ ವಿಧಾನವೂ ಫಲಕಾಣಲಿಲ್ಲ’ ಎಂದು `ಪ್ಲಾಸ್ಟಿಕ್ ಡ್ರೀಮ್’ ಪ್ರೊಜೆಕ್ಟ್ ಗಾಗಿ ಗಿಲ್ಡಾಸ್ ರಲ್ಲಿ ಹೇಳುತ್ತಾ ಹದಿನಾಲ್ಕನೇ ವಯಸ್ಸಿನಲ್ಲೇ ತಾಯಿಯಾದ ಯುವತಿಯೊಬ್ಬಳು ನಿಟ್ಟುಸಿರಾಗುತ್ತಾಳೆ.

ಈ ಅಮಾನುಷ ಪದ್ಧತಿಯ ಹಿಂದಿರುವ ನಂಬಿಕೆಗಳೂ, ಉದ್ದೇಶಗಳೂ ಕೂಡ ಈ ಸಂಪ್ರದಾಯದಂತೆಯೇ ವಿಚಿತ್ರವಾದವುಗಳು. ಆಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ ತನ್ನ ಮಗಳು ಸುತ್ತಮುತ್ತಲ ಗಂಡಸರಿಂದ ಆಕರ್ಷಿತರಾಗಿ, ಗರ್ಭವತಿಯಾಗಿ ತನ್ನ ಬಾಲ್ಯ ಮತ್ತು ವಿದ್ಯಾಭ್ಯಾಸವನ್ನು ಹಾಳುಮಾಡುವ ಸಾಧ್ಯತೆಯನ್ನು ಕಂಡುಕೊಳ್ಳುವ ತಾಯಿಯೊಬ್ಬಳು ನೈಸರ್ಗಿಕವಾದ ದೈಹಿಕ ಬೆಳವಣಿಗೆಯೊಂದನ್ನು ತಡೆಯಲೋ, ನಿಧಾನವಾಗಿಸಲೋ ಯತ್ನಿಸಿ ಇನ್ನಷ್ಟು ಸಮಸ್ಯೆಗಳಿಗೆ ಸೆರಗೊಡ್ಡುತ್ತಾಳೆ.

ಉಸಿರುಗಟ್ಟುವಷ್ಟು ಬಿಗಿಯಾದ ಪಟ್ಟಿಯನ್ನು ತನ್ನ ಮಗಳ ಎದೆಯ ಸುತ್ತಲೂ ತಾಸುಗಟ್ಟಲೆ ಕಟ್ಟುತ್ತಾ, ತನ್ನ ಕೈಯಾರೆ ಬಿಸಿಯಾದ ವಸ್ತುಗಳೊಂದಿಗೆ ಆ ಪುಟ್ಟ ಎದೆಯ ಭಾಗವನ್ನು ಮಾಲೀಷು ಮಾಡುತ್ತಾ ಅವಳನ್ನು ನೋವಿನ ಕೂಪಕ್ಕೆ ತಳ್ಳುತ್ತಾಳೆ. ಬಾಲಕಿಯೊಬ್ಬಳ ಸ್ತನಗಳು ದೊಡ್ಡದಾಗಿ ಬೆಳೆದರೆ ಅವಳ ಹರೆಯವು ಬಹುಬೇಗನೆ ಶುರುವಾಗಿದೆಯೆಂದೂ, ಲೈಂಗಿಕತೆಯ ವಿಷಯಗಳನ್ನೇ ತಲೆಯನ್ನು ತುಂಬಿಕೊಂಡಿದ್ದರಿಂದ ಅಥವಾ ಪುರುಷನೊಬ್ಬನ ಸ್ಪರ್ಶದಿಂದ ಸ್ತನಗಳು ವೇಗವಾಗಿ ಬೆಳೆಯುತ್ತದೆ ಎನ್ನುವುದು ನಂಬಿಕೆ.

ಸ್ತನಗಳ ಬೆಳವಣಿಗೆಯನ್ನು ಹತ್ತಿಕ್ಕಿದರೆ ಇತರೇ ದೈಹಿಕ ಬೆಳವಣಿಗೆಗಳನ್ನೂ ಹದ್ದುಬಸ್ತಿನಲ್ಲಿಡಬಹುದೆಂದೂ, ಸ್ತನಗಳು ದೊಡ್ಡದಾಗಿ/ಆರೋಗ್ಯಕರವಾಗಿ ಬೆಳೆದರೆ ಅವುಗಳ ಭಾರದಿಂದ ಹೆಣ್ಣುಮಕ್ಕಳು ಎತ್ತರವಾಗಿ ಬೆಳೆಯುವುದಿಲ್ಲವೆಂದೂ… ಹೀಗೆ ಹತ್ತುಹಲವು ಅವೈಜ್ಞಾನಿಕ ವಿಚಾರಧಾರೆಗಳನ್ನೂ, ನಂಬಿಕೆಗಳನ್ನೂ ಇವರಲ್ಲಿ ಕಾಣಬಹುದು. `ಬಡತನ, ಅಪೌಷ್ಟಿಕತೆಗಳಂಥಾ ಸಮಸ್ಯೆಗಳೇ ಸಾಕಷ್ಟಿರುವಾಗ ಈ ಬಗ್ಗೆ ಮಾತನಾಡುವುದಕ್ಕೇನಿದೆ?’, ಎಂದು ಇದೊಂದು ಗಂಭೀರವಾದ ಸಮಸ್ಯೆಯೇ ಅಲ್ಲವೆಂಬಂತೆ ಅಲ್ಲಗಳೆಯುವ ಜನಗಳೂ ಆಫ್ರಿಕಾದ ಕೆಲಭಾಗಗಳಲ್ಲಿ ಸಿಗುವುದು ಅರಗಿಸಿಕೊಳ್ಳಲೇಬೇಕಾದ ಸತ್ಯ.

ಕ್ಯಾಮೆರೂನಿನಲ್ಲಿ ದಟ್ಟವಾಗಿರುವ ಈ ಪೈಶಾಚಿಕ ಪದ್ಧತಿಯು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ, ಬೆನಿನ್, ಜಿಂಬಾಬ್ವೆ, ಕೀನ್ಯಾ ಮತ್ತು ಟೋಗೋದಂಥಾ ದೇಶಗಳಲ್ಲೂ ಕಾಣಬರುವುದುಂಟು. ದಕ್ಷಿಣ ಆಫ್ರಿಕಾದಲ್ಲಿ ಈ ಪದ್ಧತಿಯನ್ನು `ಬ್ರೆಸ್ಟ್ ಸ್ವೀಪಿಂಗ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಬರೋಬ್ಬರಿ ಮೂರೂವರೆ ಮಿಲಿಯನ್ ಹೆಣ್ಣುಮಕ್ಕಳು ವಿಶ್ವದಾದ್ಯಂತ ಈ ಸಾಮಾಜಿಕ ಅನಿಷ್ಟಕ್ಕೊಳಗಾಗಿದ್ದಾರೆ ಎಂದು ಹೇಳುವ ವಿಶ್ವಸಂಸ್ಥೆಯ ಅಂಕಿಅಂಶವೊಂದು `ಬ್ರೆಸ್ಟ್ ಐರನಿಂಗ್’ ಅನ್ನು ಯೋನಿಛೇದನಾ ಕ್ರಿಯೆಯಷ್ಟೇ (ಫೀಮೇಲ್ ಜನೈಟಲ್ ಮ್ಯುಟಿಲೇಷನ್ / ಎಫ್.ಜಿ.ಎಮ್) ಗಂಭೀರ ಸಮಸ್ಯೆಯೆಂಬುದಾಗಿ ಒತ್ತಿಹೇಳುತ್ತಿದೆ.

breast-ironing4ಐವತ್ತು ಪ್ರತಿಶತಕ್ಕೂ ಹೆಚ್ಚಿನ ಬಾಲಕಿಯರು ತಮ್ಮ ತಾಯಂದಿರಿಂದಲೇ ಈ ಕ್ರಿಯೆಗೊಳಗಾಗಿದ್ದಾರೆ ಎಂದು ಜಂಡರ್ ಎಂಪವರ್ಮೆಂಟ್ ಡೆವಲಪ್ಮೆಂಟ್ (ಜಿ.ಇ.ಡಿ) ನ ವರದಿಯು ಹೇಳುತ್ತದೆ. ಅಷ್ಟೇ ಅಲ್ಲದೆ ಈ ದೇಶಗಳಿಂದ ವಲಸೆಹೋಗಿರುವ ಕುಟುಂಬಗಳು ಪಶ್ಚಿಮದ ದೇಶಗಳಲ್ಲೂ ಈ ಪದ್ಧತಿಯನ್ನು ರಹಸ್ಯವಾಗಿ ಮುಂದುವರಿಸಿ ಸ್ಥಳೀಯ ಸಕರ್ಾರಗಳಿಗೆ ತಲೆನೋವಾಗಿ ಪರಿಣಮಿಸಿವೆ. ಉದಾಹರಣೆಗೆ ಲಂಡನ್, ಬಮರ್ಿಂಗ್ ಹ್ಯಾಮ್, ಮ್ಯಾಂಚೆಸ್ಟರ್ ನಂತಹ ಭಾಗಗಳಲ್ಲಿ ಹಲವು ಬ್ರೆಸ್ಟ್ ಐರನಿಂಗ್ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಹಿಂದೆ ಬ್ರಿಟನ್ನಿನ ಕನ್ಸವರ್ೇಟಿವ್ ಪಕ್ಷದ ಸಂಸದರಾಗಿದ್ದ ಜೇಕ್ ಬೆರ್ರಿಯವರು ಲಂಡನ್ನಿನ ಹೌಸ್ ಆಫ್ ಕಾಮನ್ಸ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಾ ತಮ್ಮ ದೇಶದಲ್ಲಿ ಹೆಚ್ಚುತ್ತಿರುವ ಈ ಸಾಮಾಜಿಕ ಅನಿಷ್ಟದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದರು. ಜೊತೆಗೇ ಕೇಮ್ ವಿಮೆನ್ ಆಂಡ್ ಗರ್ಲ್ಸ್ ಡೆವಲಪ್ಮೆಂಟ್ (ಸಿ.ಎ.ಡಬ್ಲ್ಯೂ.ಒ.ಜಿ.ಒ), ಜಂಡರ್ ಎಂಪವರ್ಮೆಂಟ್ ಡೆವಲಪ್ಮೆಂಟ್ (ಜಿ.ಇ.ಡಿ), ರೆನಾಟಾದಂತಹ ಸಕರ್ಾರೇತರ ಸಂಸ್ಥೆಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಾ ಈ ಪದ್ಧತಿಯನ್ನು ಬುಡಸಮೇತ ಕಿತ್ತುಹಾಕುವ ಗುರಿಯನ್ನಿಟ್ಟುಕೊಂಡು ಹೆಜ್ಜೆಹಾಕುತ್ತಿವೆ.

ಬ್ರೆಸ್ಟ್ ಐರನಿಂಗ್ ವಿರುದ್ಧ ಬಿಗಿಯಾದ ಕಾನೂನುಗಳನ್ನು ಜಾರಿಗೆ ತಂದು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಕರ್ಾರಗಳ ಮೇಲೆ ಒತ್ತಡಗಳನ್ನು ಹೇರುವ ಮತ್ತು ಈ ವಿಷಯದ ಬಗ್ಗೆ ದಾಖಲೆಗಳು, ಅಂಕಿಅಂಶಗಳು, ಅಧ್ಯಯನ ಸಂಬಂಧಿ ವಸ್ತುಗಳ ಪ್ರಮಾಣವೂ ತೀರಾ ಕಮ್ಮಿಯಿರುವುದರಿಂದಾಗಿ ಅವುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲೂ ಪ್ರಯತ್ನಗಳು ಮುಂದುವರಿದಿವೆ.

ಮರಳಿ ನಮ್ಮ ಕಥಾನಾಯಕನಾದ ಗಿಲ್ಡಾಸ್ ರತ್ತ ಬರೋಣ. ಬ್ರೆಸ್ಟ್ ಐರನಿಂಗ್ ಎಂಬ ಸಮಸ್ಯೆಯನ್ನು ತನ್ನ ಛಾಯಾಚಿತ್ರಗಳಿಂದ ಜಗತ್ತಿನ ಮುಂದಿರಿಸುವ ಉದ್ದೇಶವಿರಿಸಿಕೊಂಡು ಕಿಕರ್್ನೊಂದಿಗೆ ಕ್ಯಾಮೆರೂನಿಗೆ ಬಂದಿಳಿದ ಗಿಡರ್ಾಸ್ ಬಾಗಿಲು ತಟ್ಟಿದ್ದು ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ರೆನಾಟಾ ಎಂಬ ಸ್ವಯಂಸೇವಾ ಸಂಸ್ಥೆಯದ್ದು. ಬ್ರೆಸ್ಟ್ ಐರನಿಂಗ್ ಏನಿದ್ದರೂ ಅದೊಂದು `ಫ್ಯಾಮಿಲಿ ಸೀಕ್ರೆಟ್’ ಎಂಬ ಅಂಶದ ಬಗ್ಗೆ ಮೊದಲೇ ತಿಳಿದಿದ್ದರಿಂದ ತನ್ನ ಮುಂದಿರುವ ಸವಾಲಿನ ಸ್ಪಷ್ಟ ಅರಿವು ಅವರಿಗಿತ್ತು.

ಈ ಸಂಸ್ಥೆಯಲ್ಲಿ ಬ್ರೆಸ್ಟ್ ಐರನಿಂಗ್ ಕ್ರಿಯೆಗೊಳಗಾದ ನತದೃಷ್ಟ ಹೆಣ್ಣುಮಕ್ಕಳೊಂದಿಗೆ ಬೆರೆತದ್ದು, ಅವರನ್ನು ಎದೆಯ ಭಾಗದಲ್ಲಿ ನಗ್ನರಾಗುವಂತೆ ಮತ್ತು ಜೊತೆಗೇ ಮುಖವನ್ನೂ ಮರೆಮಾಚದಂತೆ ಕ್ಯಾಮೆರಾದ ಮುಂದೆ ನಿಲ್ಲಲು ಅಣಿಗೊಳಿಸಲು ಒಪ್ಪಿಸಿ ಯಶಸ್ವಿಯಾಗಿದ್ದು… ಹೀಗೆ ತಮ್ಮ ಅನುಭವಗಳನ್ನೆಲ್ಲಾ ಸಂದರ್ಶನವೊಂದರಲ್ಲಿ ಗಿಲ್ಡಾಸ್ ಬಿಚ್ಚಿಟ್ಟಿದ್ದಾರೆ.

ಇನ್ನು ಈ ಅಮಾನುಷ ಪದ್ಧತಿಗೆ ಬಲಿಯಾಗಿ ದೈಹಿಕವಾಗಿಯೂ, ಮಾನಸಿಕವಾಗಿಯೂ ಜರ್ಝರಿತರಾದ ಈ ಹೆಣ್ಣುಮಕ್ಕಳು ಕಾಣುತ್ತಿರುವ ಏಕೈಕ ಕನಸೆಂದರೆ ಪ್ಲಾಸ್ಟಿಕ್ ಸರ್ಜರಿ. ತಾವೂ ಈಜುಡುಗೆಗಳನ್ನು ಧರಿಸಿ ಸಂಕೋಚವಿಲ್ಲದೆ ನೀರಿಗಿಳಿಯಬೇಕು, ಬಣ್ಣಬಣ್ಣದ ಆಧುನಿಕ ದಿರಿಸುಗಳನ್ನು ಧರಿಸಿ ಎಲ್ಲರೊಂದಿಗೆ ಓಡಾಡಬೇಕು ಎಂಬ ಮುಗ್ಧ ಹೆಣ್ಣುಮಕ್ಕಳ ವಯೋಸಹಜ ಆಕಾಂಕ್ಷೆಗಳಿಗೆ ತಮ್ಮ ದೇಹದ ಬಗೆಗಿರುವ ಕೀಳರಿಮೆಯು ಕಲ್ಲುಹಾಕಿದೆ.

ಸೌಂದರ್ಯದ ಪರಿಕಲ್ಪನೆಯೆಂದರೆ ಬಿಳಿಚರ್ಮ, ಸೈಝ್ ಝೀರೋ, ಸಿಕ್ಸ್ ಪ್ಯಾಕ್ ಎಂಬಿತ್ಯಾದಿ ರೆಡಿಮೇಡ್ ಸೂತ್ರಗಳನ್ನೇ ಮುಂದಿರಿಸಿ ಸಾಮಾನ್ಯರನ್ನು ಕಂಗೆಡಿಸಿರುವ ಆಧುನಿಕ(?) ಸಮಾಜದಲ್ಲಿ ಮತ್ತು ಸಂಪ್ರದಾಯ-ಶಿಷ್ಟಾಚಾರಗಳ ಅಡಕತ್ತರಿಯಲ್ಲಿ ಸಿಲುಕಿ ನಲುಗುತ್ತಿರುವ ಈ ಯುವತಿಯರ ಕೀಳರಿಮೆ, ನೋವುಗಳು ಅರ್ಥವಾಗುವಂಥದ್ದೇ. ಒಂದೊಂದು ಪೈಸೆ ಜೋಡಿಸುತ್ತಾ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳುವ ಕನಸನ್ನು ಕಾಣುತ್ತಿರುವ ಮತ್ತು ಈ ಮೂಲಕವಾಗಿಯಾದರೂ ತಮ್ಮ ಸ್ತನದ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಯಸುವ ಹೆಣ್ಣುಮಕ್ಕಳ ಸಂಖ್ಯೆಯು ದೊಡ್ಡದಿದೆ.

breast-ironing2ಗಿಲ್ಡಾಸ್ ರ “ಪ್ಲಾಸ್ಟಿಕ್ ಡ್ರೀಮ್” ಎಂಬ ಶೀರ್ಷಿಕೆಯ ಹಿಂದಿರುವ ಕಥೆಯೂ ಇದೇ. ಹಲವು ಪತ್ರಿಕೆಗಳಲ್ಲಿ ಮತ್ತು ವೇದಿಕೆಗಳಲ್ಲಿ ಪ್ರದರ್ಶನಗೊಂಡ ಪ್ಲಾಸ್ಟಿಕ್ ಡ್ರೀಮ್ ಪ್ರೊಜೆಕ್ಟ್ ನ ಛಾಯಾಚಿತ್ರಗಳ ಯಶಸ್ಸಿನ ಹಿಂದೆ ಗಿಲ್ಡಾಸರ ಛಾಯಾಚಿತ್ರಗಳಲ್ಲದೆ ಪತ್ರಕರ್ತರಾದ ಕಿರ್ಕ್ ಬಯಾಮಾ, ಲೇಖಕಿಯಾದ ಜೂಲೀ ಬಾಲ್ಡ್ವಿನ್ ಮತ್ತು ಧ್ವನಿಸಂಯೋಜನೆಯ ಹೊಣೆಯನ್ನು ಹೊತ್ತುಕೊಂಡ ವಿನ್ಸೆಂಟ್ ಫ್ರಿಬಾಲ್ಟರರ ಕೊಡುಗೆಯೂ ಸ್ಮರಿಸುವಂಥದ್ದು.

ಟಾಪ್-ಲೆಸ್ ಆಗಿ ಗಿಲ್ಡಾಸ್ ರ ಕ್ಯಾಮೆರಾಗೆ ಪೋಸ್ ಮಾಡಿರುವ, ಕೃಷ್ಣವರ್ಣದ ಹಿನ್ನೆಲೆಯ ಜೊತೆಗೆ ಮೂಡಿಬಂದಿರುವ, ಅಶ್ಲೀಲತೆಯ ಸೋಂಕಿಲ್ಲದ ಆಫ್ರಿಕನ್ ಮಹಿಳೆಯರ ಚಿತ್ರಗಳು ಶಬ್ದಗಳಲ್ಲಿ ಹಿಡಿದಿಡಲಾಗದಂತಹ ನೋವನ್ನು ನಮ್ಮ ಮುಂದಿರಿಸುತ್ತಿವೆ. ಪ್ರತೀ ಚಿತ್ರದೊಂದಿಗೂ ಲೋಹದ ಸಮತಲದಲ್ಲಿ ಆಸಿಡ್ ಅನ್ನು ಬಳಸಿ ಕೊರೆದು ಬರೆಸಲಾದ ಸಂಕ್ಷಿಪ್ತವಾದ ಟಿಪ್ಪಣಿಗಳಿವೆ.

ಈ ಲೋಹದ ಸಮತಲ ಮತ್ತು ಆಸಿಡ್ ಬರಹಗಳು ಬ್ರೆಸ್ಟ್ ಐರನಿಂಗ್ ಎಂಬ ಅಮಾನುಷ ಪದ್ಧತಿಗೊಳಗಾದ ಮಹಿಳೆಯರ ದೇಹ ಮತ್ತು ಮನಸ್ಸುಗಳ ಮೇಲಾದ ಭೂತ-ವರ್ತಮಾನಗಳ ವೈಪರೀತ್ಯಗಳನ್ನು ಬಿಂಬಿಸುವಂತಿರುವ ರೂಪಕಗಳು ಎಂಬುದು ಗಿಲ್ಡಾಸ್ ರ ಅಭಿಪ್ರಾಯ.

ಸಮಾಜ, ಸಂಸ್ಕೃತಿ, ಸಂಪ್ರದಾಯಗಳ ಹೆಸರಿನಲ್ಲಿ ಶತಶತಮಾನಗಳಿಂದ ನಡೆದುಬಂದಿರುವ ಮಹಿಳೆಯರ ವಿರುದ್ಧದ ಶೋಷಣೆ, ದಬ್ಬಾಳಿಕೆಗಳು ಇಪ್ಪತ್ತೊಂದನೆಯ ಶತಮಾನದಲ್ಲೂ ಎಗ್ಗಿಲ್ಲದೆ ಮುಂದುವರಿಯುತ್ತಿರುವುದು ವಿಪರ್ಯಾಸವೇ ಸರಿ. ಆಫ್ರಿಕಾದ ದುರ್ಗಮ ಮೂಲೆಗಳಲ್ಲಿ ಇಂಥಾ ಅಮಾನುಷ ನಂಬಿಕೆಗಳು, ಜೀವನಶೈಲಿಗಳು ಇಂದಿಗೂ ಇವೆ ಎಂಬ ಕಲ್ಪನೆಯೇ ತಮ್ಮ ಆರಾಮದಾಯಕ ಕಕ್ಷೆಗಳಲ್ಲಿ ಕುಳಿತಿರುವ ಉಳಿದ ದೇಶಗಳಿಗಿಲ್ಲ ಎನ್ನುವ ಸೊಮಾಲಿಯನ್ ಲೇಖಕಿ, ವಿಶ್ವಸಂಸ್ಥೆಯ ಮಾಜಿ ವಿಶೇಷ ರಾಯಭಾರಿ, ಸೂಪರ್-ಮಾಡೆಲ್ ವಾರಿಸ್ ಡಿರೀಯವರ ಮಾತುಗಳು ಕೆಲವೊಮ್ಮೆ ಅದೆಷ್ಟು ಸತ್ಯ ಎಂದೆನಿಸುತ್ತದೆ.

5 Comments

 1. Prasad
  September 20, 2016
 2. Sangeeta Kalmane
  September 19, 2016
 3. Gayatri Badiger, Dharwad
  September 19, 2016
 4. samyuktha
  September 19, 2016
 5. Smitha shenoy
  September 19, 2016

Add Comment

Leave a Reply