Quantcast

ಹೊಯಿಗೆ ನುಂಗುವ ಮರಳು ಮಾಧವರು…

rajaram tallur low res profile

ರಾಜಾರಾಂ ತಲ್ಲೂರು

ಡಿಮಾಂಡು- ಸಪ್ಲೈ ಆಧರಿಸಿದ ಇಕನಾಮಿಕ್ಸು ಈ ದೇಶವನ್ನು ಹರಿದುತಿಂದಷ್ಟು ಬೇರಾವುದೂ ಹರಿದುತಿಂದಿಲ್ಲ. ಹಾಸಿಗೆ ಗಾತ್ರದಲ್ಲಿ ಹಿಗ್ಗುವುದಿಲ್ಲ ಎಂಬ ಸತ್ಯ ಗೊತ್ತಿದ್ದೂ, ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕಾದಲ್ಲಿ ಒಮ್ಮೆ ಹಾಸಿಗೆಯನ್ನು ಕೆಳಗೆಳೆಯುತ್ತಾ ಇನ್ನೊಮ್ಮೆ ಕಾಲನ್ನೂ  ಚಾಚುತ್ತಾ ಸಾಗಿದ್ದೇವೆ. ಹಾಸಿಗೆ ಪೂರ್ಣ ಕೆಳಜಾರಿದರೆ, ನೆಲವೇ ಗತಿ ನಮಗೆ.

ನಾನೀಗ ಹೇಳಹೊರಟಿರುವುದು ಇಂತಹದ್ದೇ ಒಂದು “ದಿಂಬು ಜಾರಿದವರ” ಕಥೆ!

ರಿಯಲ್ ಎಸ್ಟೇಟ್ ಮಾಫಿಯಾ

avadhi-column-tallur-verti- low res- cropವಸತಿ ಮನುಷ್ಯನಿಗೆ ಮೂಲಭೂತ ಆವಶ್ಯಕತೆ. ಈ ಆವಶ್ಯಕತೆಯ ಪೂರೈಕೆ ಸಹಜವಾಗಿದ್ದಷ್ಟು ಕಾಲ ಅದರಿಂದ ಅಪಾಯ ಇರಲಿಲ್ಲ. ಆದರೆ ಯಾವತ್ತು ವಸತಿ ಎಂಬುದು ಇಂಡಸ್ಟ್ರಿ ಆಯಿತೋ, ಅಲ್ಲಿಗೆ ಅದಕ್ಕೆ ಜೊತೆಯಾಗಿ ಲಾಭಕೋರತನ, ದಳ್ಳಾಲಿ ಬುದ್ಧಿ, ಕಲಬೆರಕೆ, ಲಾಬಿಗಿರಿ, ಕಾಳಸಂತೆ ಇತ್ಯಾದಿ ಅಕ್ಷೋಹಿಣಿಗಳೆಲ್ಲ ಸೇರಿಕೊಳ್ಳುತ್ತಿವೆ.

ಹಾಗಾಗಿ ಮೊದ ಮೊದಲು ಬರೀ “ರಿಯಲ್ ಎಸ್ಟೇಟ್ ಮಾಫಿಯಾ” ಆಗಿ ಆರಂಭಗೊಂಡದ್ದು, ಕ್ರಮೇಣ ಸೂಪರ್ ಸ್ಪೆಷಲೈಜೇಷನ್ ಪಡೆದುಕೊಂಡು ಮರಳು ಮಾಫಿಯಾ, ಸಿಮೆಂಟು ಮಾಫಿಯಾ, ಕಬ್ಬಿಣ ಮಾಫಿಯಾ… ಎಂದು ಬಗೆ ಬಗೆಯ ವಿಭಾಗಗಳನ್ನು ಹೊಂದಿ “ದೊಡ್ಡಾಸ್ಪತ್ರೆ!” ಆಗಿಬಿಟ್ಟಿದೆ.

ದೇಶದ ಇಕಾನಮಿ ಕೈಕೊಡುತ್ತಿದೆ ಎಂಬ ಸ್ಥಿತಿ ಎದುರಾದಾಗಲೆಲ್ಲ ನೀತಿ ನಿರೂಪಕರಿಗೆ ಮೊದಲು ನೀರು ಗೊಬ್ಬರ ಉಣ್ಣಿಸಬೇಕೆನ್ನಿಸುವ ಕ್ಷೇತ್ರ – ವಸತಿ.

ಯಾಕೆಂದರೆ ಅದು ಹತ್ತು ಕೈಗಳಿಗೆ ಕೆಲಸ ಕೊಡುವ, ನೂರು ಮನೆಗಳಲ್ಲಿ ಅಡುಗೆ ಒಲೆ ಹೊತ್ತಿಸುವ ತಾಕತ್ತು ಹೊಂದಿದೆ ಎಂಬ ಸರಳ ನಂಬಿಕೆ.

ದೇಶದ GDPಗೆ ಈ ಕ್ಷೇತ್ರದ ಕೊಡುಗೆ 5-6% ಅಂತೆ. ಆದರೆ, ಇಕಾನಮಿ ಬೇರಾವುದೋ ಕಾರಣಕ್ಕೆ ಪದೇ ಪದೇ ಕೈಕೊಡುತ್ತಿದ್ದು, ಆ ಪ್ರತೀಬಾರಿಯೂ ವಸತಿ ಕ್ಷೇತ್ರಕ್ಕೇ ಆದ್ಯತೆ ಕೊಡುತ್ತಾ ಬಂದರೆ, ಅದರಿಂದ ಸಂತುಲನ ತಪ್ಪೀತು ಎಂಬ ಎಚ್ಚರಿಕೆ ನೀತಿ ನಿರೂಪಕರಿಗೆ ತಪ್ಪಿದಂತಿದೆ; ಅದರ ಫಲಿತಾಂಶಗಳು ಢಾಳಾಗಿ ಕಾಣಿಸುತ್ತಿವೆ.

housing3ರಾಜ್ಯದಲ್ಲಿ ಈಗ ಇರುವ ವಸತಿಗಳಲ್ಲಿ ಹತ್ತರಲ್ಲಿ ಒಂದು ಮನೆ ಖಾಲಿ ಇದೆ ಎಂದು ವರದಿಗಳು ಹೇಳುತ್ತಿವೆ. ಇದರಲ್ಲಿ ನಗರ ಪ್ರದೇಶದಲ್ಲಿ ನಿಬಿಡವಾದ ಮನೆಗಳು, ತಳವರ್ಗದವರಲ್ಲಿ ದೊಡ್ಡ ಪಾಲು ಮಂದಿಗೆ ಈವತ್ತಿಗೂ ಸ್ವಂತ ಮನೆ ಇಲ್ಲದಿರುವುದು… ಇಂತಹ ಹಲವು ಅಸಮತೋಲನಗಳನ್ನೂ ಸೇರಿಸಿದರೆ ಪರಿಸ್ಥಿತಿಯ ಚಿತ್ರಣ ಇನ್ನಷ್ಟು ಹದಗೆಟ್ಟೇ ಕಾಣಿಸಬೇಕು. 2011ರ ಬಳಿಕ ಪರಿಸ್ಥಿತಿ ಸುಧಾರಿಸಿಯೇ ಇಲ್ಲ ಎಂಬುದು ಅಂಕಿ-ಅಂಶಗಳಿಂದ ಖಚಿತವಾಗುತ್ತದೆ. ಆದರೆ ಉದ್ದಿಮೆ ಮತ್ತು ಸರಕಾರ ಇದನ್ನು ಖರೀದಿ ಮುಂದೂಡಿರುವ ಸಂಭಾವ್ಯ ಗ್ರಾಹಕರು ಎಂದು ಪರಿಗಣಿಸಿಕೊಂಡಿವೆ!

ಹೊಯಿಗೆ ಮಾಫಿಯಾ

ಯಾವುದೇ ಸ್ಪಷ್ಟ ಅಂಕಿ-ಸಂಖ್ಯೆಗಳ ವಿಶ್ಲೇಷಣೆಗಾಗಲೀ, ಸಮಗ್ರ ನೋಟಕ್ಕಾಗಲೀ ಅವಕಾಶ ಇಲ್ಲದಂತೆ ನೋಡಿಕೊಂಡು, ವಸತಿ ಕ್ಷೇತ್ರದಲ್ಲಿ ಭಾರೀ ಬೇಡಿಕೆ ಇದೆ ಎಂಬ “ಮೂಢನಂಬಿಕೆ”ಯನ್ನೇ ಆಧಾರವಾಗಿಟ್ಟುಕೊಂಡು, ಮರಳು ರಾಜಕೀಯ ನಡೆಯುತ್ತಿದೆ.  ಮೊದಲೆಲ್ಲ ಬಿಡಾಬೀಸು ನಡೆದಿದ್ದ ಹೊಯಿಗೆ ತೆಗೆಯುವ ವ್ಯವಹಾರ ಸುದ್ದಿ ಆಗತೊಡಗಿದ್ದು, CRZ ನೊಟಿಫಿಕೇಶನ್ 2011ರಲ್ಲಿ ಆದ ಬಳಿಕ. ಹೊಯಿಗೆಯನ್ನು ಯಂತ್ರಗಳಿಂದ ತೆಗೆಯುವುದಕ್ಕೆ, ಎಲ್ಲೆಂದರಲ್ಲಿ ತೆಗೆಯುವುದಕ್ಕೆ, ಸಾಗಾಟಕ್ಕೆ ನಿರ್ಬಂಧಗಳು ಬಂದಾಗ ನಿಜವಾದ ಆವಶ್ಯಕತೆ ಇರುವವರಿಗೆ ಹೊಯಿಗೆ ತುಟ್ಟಿ ಅನ್ನಿಸತೊಡಗಿದರೆ, ವ್ಯವಹಾರಸ್ಥರಿಗೆ ಅಲ್ಲಿ “ಕಾಳಸಂತೆಯ ಲಾಭ” ಕಾಣತೊಡಗಿತು.  ಹಾಗಾಗಿಯೇ ಹೊಯಿಗೆ ಈವತ್ತು ಕೊಲೆ-ಸುಲಿಗೆಗಳಿಗೂ ಕಾರಣ ಆಗಬಲ್ಲ ಕಮಾಡಿಟಿ ಆಗಿಬಿಟ್ಟಿದೆ!

housingಆದ್ಯತೆ ಬದಲಾಗಬೇಕು

ಸರ್ಕಾರ ವಸತಿ ಹೀನರಿಗೆ ವಸತಿ ಕಲ್ಪಿಸಲು ಈಗಾಗಲೇ ಲಭ್ಯ ಇರುವ ಖಾಲಿ ಮನೆಗಳನ್ನು ಬಳಸಿಕೊಳ್ಳುವುದಕ್ಕೆ ಮನಸ್ಸು ಮಾಡಿದರೆ, ಅಂತಹ ನೀತಿಯಿಂದ ಒಂದೇ ಕಲ್ಲಿಗೆ ಹಲವು ಹಣ್ಣುಗಳು ಉದುರುವುದು ಸಾಧ್ಯವಿದೆ.

1. ಖಾಲಿಬಿದ್ದು ಆಯಸ್ಸು ಕಳೆಯುತ್ತಿರುವ ಮನೆಗಳಲ್ಲಿ ಜನವಾಸ ಆರಂಭವಾಗಿ ರಾಷ್ಟ್ರೀಯ ಸಂಪನ್ಮೂಲ ಸದ್ಬಳಕೆ ಆಗುವ ಜೊತೆಗೇ, ಸಾಲದ ಉರುಳಲ್ಲಿ ಸಿಲುಕಿಕೊಂಡಿರುವ ಕೆಲವು ಮರಿ ಬಿಲ್ಡರ್ ಗಳಿಗೂ ಉಸಿರಾಡುವ ಅವಕಾಶ ದೊರೆತೀತು.

2. ಸ್ವಂತ ಸೂರು ಹೊಂದಿರದ ನೂರಾರು ಮಂದಿಗೆ ಸೂರು ದೊರೆಯುತ್ತದೆ; ಸರಕಾರಕ್ಕೂ ಸಿಕ್ಕ ಸಿಕ್ಕ ವಸತಿ ಯೋಜನೆಗಳ ಹೆಸರಲ್ಲಿ ಯಾರ್ಯಾರದ್ದೋ ಹೊಟ್ಟೆ ತುಂಬಿಸುವ ಕರ್ಮ ತಪ್ಪಿಹೋಗಿ, ಆ ಹಣ ಬೇರೆ ಕಡೆ ಬಳಕೆ ಆಗುವುದು ಸಾಧ್ಯ.

3. ವಸತಿಗಾಗಿ ಕಾಡು ಕಡಿಯುವ, ಮರಳು ಮತ್ತಿತರ ಸಂಪನ್ಮೂಲಗಳ ಅತಿ ಬಳಕೆ ಮಾಡುವ, ನಗರ ಕೇಂದ್ರಿತ ಒತ್ತಡದ ಬದುಕನ್ನು ತಡೆಯುವ ಶಕ್ತಿ ಸರಕಾರಕ್ಕೆ ಸುಲಭವಾಗಿ ಸಿಗುತ್ತದೆ.

ದೇವರಾಜ ಅರಸರ ಕಾಲದಲ್ಲಿ “ಉಳುವವನೇ ಹೊಲದೊಡೆಯ”ನೀತಿ ಮಾಡಿದ ಕ್ರಾಂತಿಯನ್ನು ನೆನಪಿಟ್ಟುಕೊಂಡು, ಈಗ “ಮನೆ ಇರದವನೇ ಖಾಲಿ ಮನೆಯೊಡೆಯ” ಎನ್ನಲು ಬೇಕಾದ ಧೈರ್ಯ ಸರಕಾರಕ್ಕೆ ಬರಬೇಕು.

ಹೆಚ್ಚುವರಿ ಓದಿಗಾಗಿ:

ಮರಳು ಮಾಫಿಯಾ ಬಗ್ಗೆ ಆಕ್ಷನ್ ಏಡ್ ವರದಿ: http://actionaid.org/sites/files/actionaid/actionaid_sand_mining_report.pdf

ಅರ್ನ್ಸ್ಟ್ ಅಂಡ್ ಯಂಗ್ ಸಂಸ್ಥೆ ರಿಯಲ್ ಎಸ್ಟೇಟ್ ಪರಿಸ್ಥಿತಿಯ ಬಗ್ಗೆ 2014ರಲ್ಲಿ ಸಿದ್ಧಪಡಿಸಿದ ವರದಿ: http://www.ey.com/Publication/vwLUAssets/EY-real-estate-making-india/$FILE/EY-real-estate-making-india.pdf

housing1

 

2 Comments

  1. Suma
    September 19, 2016
    • ರಾಜಾರಾಂ ತಲ್ಲೂರು
      September 19, 2016

Add Comment

Leave a Reply