Quantcast

ಅವಳ ಸೀರೆ ನನಗೆ ತಾಗಿ..

prasad shenoy r kಪ್ರಸಾದ್ ಶೆಣೈ ಆರ್ ಕೆ

ಕೆಲವೊಮ್ಮೆ ಹಾಗೇ ದಾರಿ ಸರಿದು ಹೋಗುತ್ತಿರುವಾಗ ದೂರದಲ್ಲಿ ನಿಮ್ಮ ಗೆಳೆಯ ರಾಜೇಶನೋ, ರಮೇಶನೋ ಬರುತ್ತಿದ್ದಾನೆ ಅಂತಂದುಕೊಂಡು, ಇವನತ್ತಿರ  ಏನಾದ್ರೂ ಮಾತಾಡ್ಬೇಕಲ್ಲ ಅಂತ ಒಳಗೊಳಗೆ ಇಲ್ಲದ ಮಾತುಗಳಿಗಾಗಿ ತಡಕಾಡುತ್ತಿದ್ದಾಗ ಆ ವ್ಯಕ್ತಿ ಹತ್ತಿರ ಬರುತ್ತಾನೆ.

ಅಷ್ಟೊತ್ತಿಗೆ “ಅಯ್ಯೋ ಇವನು ರಮೇಶನಲ್ಲ ರಮೇಶನ ಹಾಗೇ ಇದ್ದಾನಲ್ಲ” ಅನ್ನಿಸಿ ಸೋಜಿಗದಲ್ಲಿ ಮುಳುಗುತ್ತಾ ಅವನನ್ನು ಸರಿದು ದಾರಿ ಸಾಗುತ್ತದೆ.

tundu-hykluಮತ್ತೊಂದು ಗಳಿಗೆಯಲ್ಲೇ ಮುಂದಿನ ತಿರುವಲ್ಲಿ ನಿಜಕ್ಕೂ ರಮೇಶನೇ ಸಿಕ್ಕಿ ಬಿಡುತ್ತಾನೆ. ನಿಮಗೆ ಹೀಗೆ ಆಗಿದೆಯೋ ನಂಗೆ ಗೊತ್ತಿಲ್ಲ.

ಆದರೆ ನಂಗಂತೂ ಇಂತಹ ಅನುಭವಗಳು ದಾರಾಳವಾಗಿಯಾಗಿದೆ. ಇವಳು ಬಿಎಸ್ಸಿಯಲ್ಲಿ ಓದುತ್ತಿದ್ದ ನನ್ನ ಬ್ಯಾಚ್ ಮೇಟ್ ಸುಗಂಧಿ ಅಲ್ವಾ ಅಂತ ದೂರದಲ್ಲಿ ಬರುತ್ತಿರುವ ಕಳ್ಳ ಹೆಜ್ಜೆಯ ಹುಡುಗಿಯನ್ನು ನಿಟ್ಟಿಸುತ್ತಲೇ ನೋಡುವಾಗ. ಅವಳು ಸುಗಂದಿಯಾಗಿರದೇ ಅವಳದ್ದೇ ಮತ್ತೊಂದು ಜೆರಾಕ್ಸ್ ಪ್ರತಿಯಂತೆ ತೋರುತ್ತಾ, ಏನೋ ಹಾಗೆ ಕದ್ದು ಮುಚ್ಚಿ ನೋಡ್ತೀಯಾ ? ಅಂತ ಬರಿ ಹುಬ್ಬಿನಿಂದಲೇ ದಿಟ್ಟಿಸಿದಾಗ ನಾನು ಪೂರ್ತಿ ತಬ್ಬಿಬ್ಬು.

ಅವಳ ಹುಬ್ಬಿನ ಹಿಡಿತದಿಂದ ತಪ್ಪಿಸಿಕೊಂಡು ಸುಧಾರಿಸಿಕೊಳ್ಳುವ ಮೊದಲೇ ಪಕ್ಕದ ಬೀದಿಯಲ್ಲಿ ನಿಜಕ್ಕೂ ಸುಗಂಧಿಯೇ ಸಿಕ್ಕಿ ಸಣ್ಣ ಸಣ್ಣಗೇ ನಗುವಾಗ ನಾನು ದಿಗ್ಮೂಡನಾಗುತ್ತೇನೆ, ಅಂದುಕೊಂಡದ್ದು ಅಂದುಕೊಂಡಾಗ ಸಿಗದೇ ಮತ್ತೊಂದು ಗಳಿಗೆಯಲ್ಲಿ ಸಿಗೋದು ಅಂದರೆ ಹೀಗೆನಾ ? ಹೇಗೆ ಹೀಗೆ ಧುತ್ತನೇ ಮುಖಗಳು ಎದುರಾಗುತ್ತವೆ ಅಂತ ಕೇಳಿದರೆ ಅದೆಲ್ಲಾ ಸಹಜವಪ್ಪಾ ಅನ್ನಿಸಬಹುದು. ಆದರೂ ಹೀಗೆ ಧುತ್ತನೇ ಎದುರಾಗುವ ಮುಖ ಏನೋ ಒಂದು ಹೊಸ ಸುಖವನ್ನು ದಯಪಾಲಿಸಿ ಬಿಡುತ್ತದೆ ಅನ್ನಿಸೋದು ನಂಗೆ.

ನಾನು ಡಿಗ್ರಿಯಲ್ಲಿ ಸೈಕಾಲಜಿ ಓದಿದ್ದು, “ಇದೆಂತ ಸರ್… ನಾನು ಯಾರ್ಯಾರಲ್ಲೋ ಮತ್ಯಾರನ್ನೋ ಕಂಡು ಕೊನೆಗೆ ಅವರು ನಾನಂದು ಕೊಂಡವರಲ್ಲ ಅಂತ ಗೊತ್ತಾಗೋದು, ಆದ್ರೆ ಸ್ವಲ್ಪ ಹೊತ್ತಿನಲ್ಲಿಯೇ… ನಿಜಕ್ಕೂ ನಾನೆಣಿಸಿದ ವ್ಯಕ್ತಿ ಎದುರಿಗೆ ಪ್ರತ್ಯಕ್ಷವಾಗಿ ಬಿಡುತ್ತಾರಲ್ಲಾ ?ಇದೆಲ್ಲಾ ಹೇಗೆ ಸಾಧ್ಯ ? ಸೈಕಾಲಜಿಯಲ್ಲಿ ಇದೆಕ್ಕೆನಾದ್ರೂ ಹೆಸರುಂಟಾ ?” ಅಂತ ನಮ್ಮ ಸೈಕಾಲಜಿ ಲೆಕ್ಚರರ್ ಹತ್ತಿರ ಕೇಳಿದಾಗ, ಆ ಪುಣ್ಯಾತ್ಮ ಹಲ್ಲು ಕಿರಿದು ನಕ್ಕಿದ್ದು ಬಿಟ್ಟರೆ ಏನೂ ಉತ್ತರ ಕೊಟ್ಟಿರಲಿಲ್ಲ.

ಕೆಲವೊಮ್ಮೆ ದುತ್ತನೇ ಎದುರಾಗುವ ಹಳೆಯ ಮುಖಗಳು ಕೊಡುವ ಸುಖ, ಆಕೆಯ ಮೊದಲ ಸ್ಪರ್ಶವೂ ಕೊಡಲಾರದು ಅನ್ನಿಸುತ್ತದೆ. ಮೊನ್ನೆ ಸುಮ್ಮನೆ ಪೇಟೆ ಸುತ್ತುತ್ತಿದ್ದಾಗ ದೂರದಲ್ಲಿ ತಿಳಿ ಗುಲಾಬಿ ಬಣ್ಣದ ಸೀರೆ ಉಟ್ಟು ಇಷ್ಟಿಷ್ಟೇ ಉದ್ದದ ಮಲ್ಲಿಗೆ ಮಾಲೆ ಮುಡಿದು, ಮೆಲ್ಲಗೆ ಬರುತ್ತಿದ್ದ ಅವಳನ್ನು ನೋಡಿದ್ದೇ “ಇವಳು ಅಶ್ಚಿನಿ ಅಲ್ವಾ, ಅಂತ ಒಳಗೊಳಗೇ ಬನ್ಸಿನಂತೆ ಉಬ್ಬಿಹೋದೆ, ತುಂಬಾ ವರ್ಷಗಳ ನಂತರ ಸಿಗುತ್ತಿದ್ದಾಳೆ ಹೇಗೆ ಮಾತಾಡಲಿ ಈಗ ?” ಅಂತ ಪೀಠಿಕೆ ರೆಡಿ ಮಾಡುತ್ತಿದ್ದಾಗಲೇ ಆಕೆ ಮತ್ತೂ ಮತ್ತೂ ಝೂಮ್ ಇನ್ ಆದಳು…ನೋಡುತ್ತೇನೆ ಆಕೆ ಅಶ್ವಿನಿಯೇ ಅಲ್ಲ !! ಆದ್ರೂ ಅವಳ ಗುಲಾಬಿ ಬಣ್ಣದ ಸೀರೆಯ ಅಂಚು ನನ್ನ ಮೈ ಸಣ್ಣಗೇ ಸೋಕಿ ಸುಖ ಕೊಡೋದನ್ನು ಮಾತ್ರ ನಿಲ್ಲಿಸಲಿಲ್ಲ.

love-pendantಆದರೆ ಆ ದಿನ ನಿಜವಾದ ಅಶ್ಚಿನಿ ಮರುಕ್ಷಣದಲ್ಲಿಯೇ ಕಾಣಬಹುದೇನೋ ಅಂತ ಕಾದೆ. ಆದ್ರೆ ಆಕೆ ಮಾತ್ರ ಸಿಗಲಿಲ್ಲ. ಆದರೆ ಆ ಅಶ್ಚಿನಿ ಅಲ್ಲದ ಸೀರೆ ಅಂಚಿನ ಖುಷಿ ಕೊಟ್ಟ ಅಶ್ವಿನಿ, ಆ ದಿನ ನಿಜವಾದ  ಅಶ್ಚಿನಿಯನ್ನು ನೆನಪಿಸಿದಳು. ನನ್ನೆದೆಯ ಕಡಲು ಕೆಂಪಾಗಿಸಿದಳುಸುರಿವ ಮುತ್ತಿನ ಮಳೆಯ… ಬಿರಿದ ಸಂಜೆ ಸೂರ್ಯನ ನಶೆಯಲ್ಲಿ ತೇಲಿಸಿ ಕಡಲೆಲ್ಲಾ ಬರಿ ಹಿಗ್ಗಿ ಕೆಂಪಾಗಿಸಿದಳು.

ಮೊನ್ನೆ ಬೆಳಗ್ಗೆ ಮಳೆ ಬಿದ್ದು ದಾರಿ ಪೂರ್ತಿ ಮೆತ್ತಗಾಗಿತ್ತು, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಸೋ ಎಂದು ಶೃತಿ ಹಿಡಿದು ಸುರಿಸುತ್ತಿತ್ತು. ಕಣವಿಯವರ ಸಾಲನ್ನು ಆಸ್ವಾದಿಸುತ್ತಾ, ಮತ್ತೆ ಮತ್ತೆ ಸುರಿವ ಮುಗಿಲನ್ನು ನೋಡುತ್ತಾ ಚಟ ಚಟ ಗಾಳಿಯ ತೊಡೆಯಲ್ಲಿ ಕೂತು ಜೀಕುತ್ತಾ, ಕಳೆದೇ ಹೋಗಿದ್ದ ಅದ್ಬುತ ರಮ್ಯ ಬೆಳಗು. ಹಾಗೇ ದಾರಿಲಿ ಹೊಳೆದು, ನಾಚಿ, ನಿಮಿರಿ, ಸರಸವಾಡಿ ಉದುರುತ್ತಿದ್ದ ಸಾವಿರಾರು ಮಳೆ ಮುತ್ತಿನ ನಡುವೆ ಕಂಡವಳು ನಿಜವಾದ ಅಶ್ಚಿನಿಯೇ.

ಎಷ್ಟೋ ವರ್ಷದ ಬಾಕಿಯಿದ್ದ ಒಲುಮೆಯ ಸಾಲವನ್ನೆಲ್ಲಾ, ಮಾದಕ ನೋಟದ ಬಾಕಿ ಲೆಕ್ಕವನ್ನೆಲ್ಲಾ ಒಂದೇ ಸಲ ತೀರಿಸಿ ಬಿಡುವ, ಅಂತರಂಗದ ಸಂಚಾರಿಣಿಯಂತೆ, ಕ್ಷಣ ಕ್ಷಣಕ್ಕೂ ಸ್ಪೂರ್ತಿಯ ಮಧುರ ಬೆಣ್ಣೆಯನ್ನು ನಯವಾಗಿ ಮೊಗೆಮೊಗೆದು ಕೊಡುವ ರಸದೀಪಿಕೆಯಂತೆ.  ಆಕೆ ನಿಂತಿದ್ದಾಗ, ನೆನಪಿನ ಕಡಲುಕ್ಕಿ ಮೊರೆದು, ಗುಪ್ತಗಾಮಿನಿ ಹೊಳೆಯೊಂದು ಎದೆಯ ತುಂಬೆಲ್ಲಾ ಹೊಳೆದು ಜಲಪಾತವಾಗಿದ್ದೆ. ಅಷ್ಟಕ್ಕೂ ಅಶ್ಚಿನಿಯನ್ನೇನೂ ನಾನು ಪ್ರೀತಿಸುತ್ತಿಲ್ಲ…ಅವಳು ಸಿಕ್ಕ ಗಳಿಗೆಯನ್ನು, ಅವಳು ಕೊಟ್ಟ ನೋಟವನ್ನು, ಆ ಸುಂದರ ಬೆಳಗು ನನ್ನೆದೆಯಲ್ಲಿ ತುಂಬಿಕೊಂಡ ತೋಟವನ್ನು ಹಾಂ !! ಆ ಬೆರಗನ್ನು ನಾನು ಪ್ರೀತಿಸುತ್ತಿದ್ದೇನಷ್ಟೇ.

ಧುತ್ತನೆ ಎದುರಾಗುವ ಮುಖಗಳು, ಅದು ಪ್ರತಿ ಕ್ಷಣವೂ ಕೊಡುವ ನಿರ್ಲಿಪ್ತ ಸುಖಗಳು ಇವೆಲ್ಲಾ ಅನುಭವಿಸಿಯೇ ಮೆಲ್ಲಬೇಕು. ಇಷ್ಟು ವರ್ಷ ಕಳೆದೇ ಹೋಗಿದ್ದ ದಾಳಿಂಬೆಯಂತವಳು ನಿಮಗೂ ಈ ದಿನ ಅದ್ಯಾವುದೋ ಗಳಿಗೆಯಲ್ಲಿ ಎದುರಾಗಬಹುದು. ಆವತ್ತು ಸಿಟ್ಟು ಮಾಡಿಕೊಂಡು ಹಾಗಲಕಾಯಿಯಾದವಳು ಇದೀಗ ಒಲವ ಪಾಯಸ ಬಡಿಸಲಿಕ್ಕೆಂದೇ ಸಂತೆಯ ಅಷ್ಟೂ ಮುಖಗಳ ನಡುವೆ ನಿಮ್ಮ ಕಣ್ಣ ಕಿಟಕಿಯಲ್ಲಿ ಮೆಲ್ಲಗೇ ಇಣುಕಬಹುದು… ನಿಮ್ಮೊಳಗೇ ಕಳೆದೇ ಹೋದ ಜಾತ್ರೆಯಂತಹ ಸಡಗರ, ನಿಮ್ಮೊಳಗಿನ ಪುಟ್ಟ ಮಗು, ನಿಮ್ಮೊಳಗಿನ ರಸಬಾಳೆಯಂತಹ ಅವನು, ಮತ್ತೆ ಮತ್ತೆ ಕಾಡಿದರೂ ಕೊನೆಗೇ ಸಿಕ್ಕೇ ಇರದಿದ್ದ ಯಾವುದೋ ಒಂದು ನಿಗೂಢ  ನಿಧಿ. ಇವೆಲ್ಲಾ ತುಂಬಿದ ಸಂತೆಯಲ್ಲೋ, ಬೆಳಗಾತ ಗುಂಪು ಕಟ್ಟಿಹೋಗುವ ನೀಲಿ ಸಮವಸ್ತ್ರದ ಪುಟ್ಟ ಪುಟ್ಟ ಬಾಲಕರ ಚಿರಪರಿಚಿತವೂ ಅಪರಿತವೂ ಅನ್ನಿಸುವ ಬೆಳ್ನಗುವಿನಲ್ಲಿ ಸಿಗಬಹುದು.

ಇಲ್ಲಿ ಧುತ್ತನೇ ಎದುರಾಗುವ ಮುಖಗಳು ಹೊಸ ಸುಖವನ್ನೇ ಕೊಡುತ್ತದೆ. ನಂಗೆ ಅಶ್ವಿನಿಯ ಮುಖ ಸುಖಕೊಟ್ಟಿರಬಹುದು… ನಿಮಗೆ ಮತ್ಯಾವುದೋ ಮುಖ ಧುತ್ತನೇ ಎದುರಾಗುತ್ತದೆ ಕಾಡುತ್ತದೆ ಆ ಕ್ಷಣ ಸಲಹುತ್ತದೆ. ಕೆಲವೊಮ್ಮೆ ಬದುಕಿಗೂ ಜೊತೆಯಾಗುತ್ತದೆ. ಹಾಗಾಗಲಿ ಅನ್ನೋದೇ ನನ್ನ ಆಸೆನೂ ಕೂಡ.                                                                                                                          

3 Comments

  1. `ಶ್ರೀ' ತಲಗೇರಿ
    September 20, 2016
  2. Sangeeta Kalmane
    September 20, 2016
  3. shama nandibetta
    September 20, 2016

Add Comment

Leave a Reply