Quantcast

ಇದೆಂಥಾ ಸಂತ್ಯಾಗ ಕೈಬಿಟ್ಟ ಹೋದ್ಯೋ ಕಬೀರಾ..

ಇದೆಂಥಾ ಸಂತ್ಯಾಗ ಕೈಬಿಟ್ಟ ಹೋದ್ಯೋ ಕಬೀರಾ….

ಇಲ್ಲಾ ಇಂಥಾದ್ದೊಂದು ಸುದ್ದಿ ಸುಳ್ಳಾಗಲಿ ಅಂತ್ಯಾವ ದೇವರ ಮುಂದ ಬೇಡಲಿ? ಕಾಕಾ ಮೋಸಾ ಮಾಡಿದ್ರಿ, ದೊಡ್ಡ ಘಾತಾ ಮಾಡಿದ್ರಿ, ವಾರದ ಹಿಂದ ಫೋನಿನ್ಯಾಗ ಏನ ಹೇಳಿದ್ರಿ ನೆಪ್ಪೈತೇನ ನಿಮಗ? ರಾಜಾ ನಿನ್ನ ಪುಸ್ತಕ ಬಿಡುಗಡೆಗೆ ಬರ್ತೇನಿ ಆದ್ರ ನಾ ಪುಸ್ತಕದ ಬಗ್ಗೆ ಮಾತಾಡುದಿಲ್ಲ ನಿನ್ನ ಬಗ್ಗೆ ಮಾತಾಡ್ತೀನಿ ಬರೊಬ್ಬರಿ ಅರ್ಧಾತಾಸು ಅಂದಿದ್ರಿ, ಯಾಕ ಹಿಂಗ ಮಾಡಿದ್ರಿ? ಅಪ್ಪ ಸತ್ತಾಗ ಅತ್ತಾಂವ ನಾ , ಈಗ ಅಷ್ಟsss ದುಃಖ ಅಷ್ಟsss ಕಣ್ಣೀರು, ಕಾಕಾ ಅರಗುಸ್ಕೊಳ್ಳಿ ಹೆಂಗ ಎದ್ಯಾಗ ಹಿಂಗ ಕೊಳ್ಳಿ ಇಟ್ಟು ಹ್ವಾದ್ರ!

ನನ ಗೋಪಾಲ ಅಂತ ಪ್ರೀತಿಲೆ ಒಂಟೆಕ್ಷರದಾಗ ಕರೀತಿದ್ದೆ, ಸಿಟ್ಟ ಮಾಡಲಿಲ್ಲ ನೀವು. “ರಂಗದ ಒಳ-ಹೊರಗೆ” ಧಾರವಾಡದಾಗ ನಾ ಬಿಡುಗಡೆ ಇಟ್ಕೊತಿನಿ ಬರಬೇಕು ನೀವು ಅಂದೆ, ಅವತ್ತು ನಿಮ್ಮ ಕಣ್ಣಾಗ ಸಣ್ಣ ಹನಿ, ಏನು ಧಾರವಾಡದಾಗಾ? ಇದು ಆಗೂ ಮಾತಲ್ಲ ಅಂದ್ರಿ, ಹೊಕ್ಕ ಬಿದ್ದು ಕರದೆ ಅದೆಷ್ಟು ಪ್ರಯಾಸಪಟ್ಟು ಬಂದಲ್ಲಿ ನೀವು, ಧಾರವಾಡದಾಗ ನನ್ನ ಪುಸ್ತಕ ಬಿಡುಗಡೆ ಕನಸು ಅಂದ್ಕೊಂಡಿದ್ದೆ ನನ್ನ ರಾಜಕುಮಾರ ಖರೇ ಮಾಡಿದ ಅಂತ ನಿಮ್ಮ ಮಾತಿನ್ಯಾಗ ಅಂದ್ರಿ, ನಿಮ್ಮ ರಾಜಕುಮಾರ ಸಕಲ ದೌಲತ್ತು ಕಸಗೊಂಡು ಹೊಂಟನಿಂತ್ರಿ. ತಪ್ಪು ಕಾಕಾ ಇದು ದೊಡ್ಡ ತಪ್ಪು.

ಕಬೀರಾ ಬಿಡುಗಡೆ ನೀ ಬಾ ಮತ್ತ, ಒಂದಿನಾ ಮದ್ಲ ಬಾ, ಸಭಾದಾಗ ನೀನು ಮಾತಾಡಬೇಕು ಯಾಜಿ ಗೆ ಹೇಳೇನಿ ಅಂದ್ರಿ, ಈ ಸಣ್ಣ ಹುಡುಗನ್ನ ದೊಡ್ಡ ಮಾತಿಗೆ ಹಚ್ಚಿದ್ರಿ.
ದೊಡ್ಡಪ್ಪ ಮರು ಮುದ್ರಣಕ್ಕ ಹೊಂಟಾನ ಅದನ್ನ ಮತ್ತೊಮ್ಮೆ ಸ್ಟೇಜ್ ಮ್ಯಾಲ ನೋಡ್ಬೇಕು ಅಂದಿದ್ರೆಲ್ಲಾ ಯಾಕ ತಡಾ ಆತು ಅಂತ ಬ್ಯಾಸರಾತೇನು?

ನಾಳಿಂದ ನಮ್ಮ ಜಿ ಎನ್ ಅವಧಿಯೊಳಗ ನನ್ನ ಅಂಕಣಾ ಹಾಕ್ತಾನ ಮತ್ತ ಅವಧಿಗೆ ಹೊಂಟೆನಿ, ಅಲ್ಲಿ ಒನ್ನಮೊನಿ ಸುಖ ಐತಿ ಅಂದಿದ್ರಿ ಆ ಸುಖ ಬ್ಯಾಡಾತೇನು?

ಇವಿಷ್ಟು ಪ್ರಶ್ನಾಕ ಉತ್ತರಾ ಕೊಡವರ್ಯಾರು ಕಾಕಾ? ಒಂದೈವತ್ತು ಫೋನು, ಹಿಂಡು ಮೆಸೆಜ್ ಬಂದಾವ ಏನಂತ ಉತ್ತರಾ ಕೊಡ್ಲಿ?

ನೀವು ಹಿಂಗಿವತ್ತು ಪರಿಚೆ ಆಗಿ, ನಾಳೆ ದೂರ ಹೊಕ್ಕೆನಿ ಅಂದಿದ್ರ ನಾ ದೂರ ಉಳಿತಿದ್ದೆ, ಹಿಂಗ ಈ ಅಕ್ಷರಗೊಳ ಸಂತ್ಯಾಗ ನನ್ನ ಕರಕೊಂಡುಬಂದು ಕೈಬಿಟ್ಟು ಹ್ವಾದ್ರಿ.

ಒಬ್ಬ ಮನಷ್ಯಾ ಒಮ್ಮೆ ತಬ್ಬಲಿ ಆಗೂದ ಭಯಾನಕ. ನಾನು ಈಗೆರಡನೆ ಸಲ ತಬ್ಬಲಿಯಾಗಿರುವೆ. ಗೋಪಾಲ ವಾಜಪೇಯಿ ಈಗ್ಗೆ ಐದಾರು ದಿನದ ಹಿಂದೆ ಮಾತಾಡಿದ್ದರು, ಅದಕ್ಕೂ ಮೊದಲು ಎರಡು ದಿನಕ್ಕೊಮ್ಮೆ ಬರೊಬ್ಬರಿ ರಾತ್ರಿ ಹತ್ತಕ್ಕೆ ಅವರ ಫೋನು, ಮಿನಿಮಮ್ ಅಲ್ಲ ತಾಸಿನ ಮಾತು, ನಾನು ಕಂಡ ಅತ್ಯಂತ ಸರಳ ವ್ಯೆಕ್ತತ್ವದ ವಿರಳ ಮತ್ತು ಏಕೈಕ ಶುದ್ಧ ಮನುಷ್ಯ, ಧಾರವಾಡ ಕೈಬಿಟ್ಟರೂ ಧಾರವಾಡವನ್ನ ಎದೆಯಲ್ಲಿಟ್ಟುಕೊಂಡು ಧಾರವಾಡವನ್ನೇ ಮಾತಾಡುವ+ಅಕ್ಷರಕ್ಕಿಳಿಸುವ ಮೇಧಾವಿ, ಅನರ್ಘ್ಯ ನಾಟಕಕಾರ, ಅದ್ಭುತ ಸಂಭಾಷಣಾಕಾರ, ಬೇಂದ್ರೆ ಬಗ್ಗೆ ವಿಶಿಷ್ಟ ಒಲವಿದ್ದ ” ಮಾತು ಮಾತಿಗೆ ನಕ್ಕು ನಗಿಸಿ ಆಡಿಸ್ಯಾಡಾಂವಾ,
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವ”
ದೊಡ್ಡಪ್ಪನಾದರೂ ಕಾಕಾ ಅನಿಸಿಕೊಂಡ ಸಜ್ಜನಿಕೆಯ ಗೋವಾ ಇನ್ನಿಲ್ಲ..ನಾನು………?

-ರಾಜಕುಮಾರ ಮಡಿವಾಳರ 

3 Comments

  1. ಗೋನವಾರ ಕಿಶನ್ ರಾವ್
    September 21, 2016
  2. samyuktha
    September 21, 2016
  3. Sathyakama Sharma K
    September 20, 2016

Add Comment

Leave a Reply