Quantcast

ನೀರೊಲೆಯ ನಿಗಿ ಕೆಂಡ ಸತ್ಯವೇ..

ಧನಂಜಯ ಕುಲಕರ್ಣಿ 

“ನೀವು ಬರೇ ಫೇಸ್‍ಬುಕ್‍ನ್ಯಾಗ ಹಿಂಗ ಫೋಟೊ ಹಾಕಿದ್ರ ನಡಿಯೂದುಲ್ಲ, ನಮ್ಮನ್ನೂ ಊಟಕ್ಕ ಕರೀರಿ” ಹಿಂಗ ಅಗ್ದೀ ಹಕ್ಕಿಲೇ ಮಾತಾಡಿದ್ರೆಲಾ, ಅಷ್ಟ ಹಕ್ಕಿಲೇ “ನಾ ಹಾಸ್ಪಿಟಲ್‍ಗೆ ಅಡ್ಮಿಟ್ ಆಗೇನಿ, ಪ್ರೋಗ್ರಾಮ್ ಕ್ಯಾನ್ಸಲ್ ಮಾಡ್ರಿ” ಅಂತನೂ ಮೆಸೇಜ್ ಕಳಸಿದ್ರಿ. ನಿಮ್ಮ ಅಜ್ಞಾನ ನಾ ಶಿರಸಾ ವಹಿಸಿ ಪಾಲಿಸಿದ್ದೆ. ನೀವು ಬಯ್ಸಿಧಂಗ್ “ಜ್ವಾಳದ ರೊಟ್ಟಿ, ಮುಳಗಾಯಿ ಪಲ್ಯ, ಝುಣಕ, ರಂಜಕ (ಕೆಂಪು ಚಟ್ನಿ), ಸವತಿಕಾಯಿ ಕೋಸಂಬರಿ, ಮೆಂಥೆ ತೊಪ್ಪಲ, ಅಗಸಿ ಹಿಂಡಿ, ಬೆಣ್ಣಿ, ಮೊಸರು……” ಹಿಂಗ ಎಲ್ಲಾ ತಯಾರೀನೂ ಆಗಿತ್ತು….ನೀವು, ತೋಂಟದರ್ಯ ಸರ್, ಶ್ರೀಪತಿ ಸರ್ ಮತ್ತ ದಿಲವರ್ ಬರೋದಷ್ಟ ಬಾಕೀ ಇತ್ತು. ನೀವೆಲ್ಲ ಬಂದಿದ್ರ ಅವತ್ತೊಂದು ದೊಡ್ಡ ಮೆಹಫಿಲ್ ಆಗತಿತ್ತು….ಧಾರವಾಡದ ಹಳೇ ನೆನಪುಗಳನ್ನ ಕೆದಕಲಿಕ್ಕೆ ನೀವು, ತೋಂಟದಾರ್ಯ ಸರ್ ಮತ್ತ ಶ್ರೀಪತಿ ಸಾಕಲ್ಲ…ಹಿಂದ ಸೋ…. ಅನ್ಲಿಕ್ಕೆ ನಾನು ಮತ್ತ ದಿಲಾವರ್ ತಯಾರಾಗೇ ಇದ್ವಿ….ಆದ್ರ…..

unnamed೧೯೮೮ ರಾಗ ಬಸೂ ನಮಗೆಲ್ಲ ಧಾರವಾಡ ಸಮುದಾಯಕ್ಕ ರಂಗಮೇಳ ಮಾಡಿದಾಗ ನೀವು “ಸಂತ್ಯಾಗ ನಿಂತಾನ ಕಬೀರ” ಬರದು ಕೊಟ್ರಿ, ನಮ್ಮೆಲ್ಲರ ಮುಂದ ವಿಧೇಯ ವಿದ್ಯಾರ್ಥಿ ಹಂಗ ಕೂತು ಅದನ್ನ ಓದಿದ್ರಿ…..ನಾವೆಲ್ಲ ಭಾಳ ಖುಷಿ ಪಟ್ಟಿದ್ವಿ…..ಕ್ಯಾಕಿ ಹೊಡದಿದ್ವಿ…ಅಲ್ಲಿಂದ ಸುರು ಆಗಿತ್ತು ನಮ್ಮ ಒಡನಾಟ….ಮುಂದ ಸಂಯುಕ್ತ ಕರ್ನಾಟಕಕ್ಕ ನಾನು ೧೯೯೪ ರಾಗ ಕೆಲಸಕ್ಕ ಸೇರಿದಾಗ ನನಗ ಕೆಲಸ ಕಲಿಸಿದ ಗುರುಗಳಾದ್ರಿ….ಬೆಂಗಳೂರಿನ ಸಂಯುಕ್ತ ಕರ್ನಾಟಕ ಆಫೀಸಿನ್ಯಾಗ ಅವತ್ತು ಸಂಜೀಮುಂದ ನೀವು, ಗುರುರಾಜ ಜೋಷಿ ಅವರ ಮುಂದ ನಿಮ್ಮ ಕಬೀರ ನಾಟಕದ ಹಾಡುಗಳನ್ನ ನಾ ಹಾಡಿದಾಗ ಬೆರಗು ಕಣ್ಣಿನಿಂದ ನನ್ನ ನೋಡಕೋತ ಕೂತಿದ್ರಿ…. ಅದೇಷ್ಟು ಹಾಡು ಹಾಡಿಸಿದ್ರಿ ಅವತ್ತು ನನ್ನ ಕಡೆಯಿಂದ……

ಮುಂದ ನೀವು ಸಂಯುಕ್ತ ಕರ್ನಾಟಕ ಬಿಟ್ಟು ಹೈದರಾಬಾದಿಗೆ ಹೋದ ಮ್ಯಾಲ ನಮ್ಮ ಸಂಪರ್ಕ ಬಹುತೇಕ ನಿಂತಿತ್ತು…ಮುಂದೊಂದು ದಿನ, ಈಗ ಆರು ವರ್ಷದ ಹಿಂದ ನನ್ನ ಇ-ಮೇಲ್ ಅಡ್ರೆಸ್ ಹುಡುಕಿ, ನನ್ನ ಜೊತಿ ಮತ್ತ ಮಾತುಕತಿ ಶುರು ಮಾಡಿದ್ರಿ….ಅವತ್ತು ನಿಮಗಾದ ಖುಷಿ ಎಂಥದ್ದು…ಅಕ್ಷರ ಶಹಃ ಕ್ಯಾಕಿ ಹೊಡದಿದ್ರಿ ಅವತ್ತು…. ನನ್ನ “ನೆನಪುಗಳ ರಾವೀ ನದಿಯ ದಂಡೆ” ಪುಸ್ತಕ ಓದಿ, ಅದರೊಳಗಿನ “ಬಂಡೂನ ಪ್ರಸಂಗಗಳನ್ನ” ಓದಿ ಅದೆಷ್ಟು ನಕ್ಕಿದ್ರಿ…..ಮೊನ್ನೆ ನೀವು ಆಸ್ಪತ್ರೆಗೆ ಹೋಗೋದಿನ ಸಹಿತ ಬಂಡೂನ ವಿಷಯ ತಗದು ಬಾಯ್ತುಂಬ ನಕ್ಕಿದ್ರಿ…”ಬಂಡೂನ್ನ ಖರೇನ ಚಾಲ್ತಿಯೊಳಗ ಇಟ್ಟಾವ್ರು ನೀವು” ಅಂತ ಅಂದಿದ್ರಿ…. ಅಷ್ಟ ಅಲ್ಲ, ಬಂಡೂನ ಮ್ಯಾಲೆ ನೀವೇನರ ಒಂದು ಧಾರಾವಾಹಿ ಮಾಡಿದ್ರ ಅದು ಗ್ಯಾರಂಟೀ ೫೦೦ ಎಪಿಸೋಡ್ ಓಡೋದು ಗ್ಯಾರಂಟಿ ಮತ್ತ ಅದಕ್ಕ ಸಂಭಾಷಣೆ ಬರಿಯೋದು ನಾನ ಅಂತ ಹೇಳಿದ್ರಿ…..

ನನ್ನ ಮ್ಯಾಲೆ ನಿಮಗ ಯಾಕ ಅಷ್ಟು ಪ್ರೀತಿ ಇತ್ತೋ ಗೊತ್ತಿಲ್ಲ, ನೀವು ಬರದ ಪ್ರತಿಯೊಂದು ಲೇಖನ ಸಹಿತ ಎಲ್ಲಾರ್ಕಿಂತ ಮೊದಲ ನನಗ ಕಳಿಸಿ, ನನ್ನ ಅಭಿಪ್ರಾಯ ಕೇಳಿ ಮುಂದ ವರೀತಿದ್ರಿ….ನಿಮಗ ಕನ್ನಡ ಕಲಾ ಸಂಘದಿಂದ “ಕೈಲಾಸಂ ಪ್ರಶಸ್ತಿ” ಬಂದದ ಅಂತ ಹೇಳಿದಾಗ “ನಾ ಇನ್ನೂ ಭಾಳ ಸಣ್ಣಾಂವ…. ನಿಮ್ಮೆಲ್ಲರ ಋಣ ನಾ ಹ್ಯಾಂಗ ತೀರಸ್ಲಿ” ಅಂತ ತೀರ ಸಣ್ಣ ಹುಡುಗ್ರ ಹಂಗ ಬಡಬಡಿಸಿದ್ರಿ……

“ಸಂತೆಯಲ್ಲಿ ನಿಂತ ಕಬೀರ” ಚಲನ ಚಿತ್ರದ ಬಗ್ಗೆ ನನ್ನ ಖಂಡ ತುಂಡ ಅಭಿಪ್ರಾಯ ಹೇಳಿದಾಗ ನೀವು ಬ್ಯಾಸರಾ ಮಾಡ್ಕೋಳ್ಳಿಲ್ಲ….ಸತ್ಯನ್ನ ಒಪ್ಪಕೊಂಡ್ರಿ…..ಹಿಂದ ನಿಮ್ಮ “ರಂಗದ ಒಳ ಹೊರಗೆ” ಪುಸ್ತಕ ಬಿಡುಗಡೆಯ ದಿವ್ಸ ನಾನು ಪುಸ್ತಕ ಪರಿಚಯ ಮಾಡೋವಾಗ “ ಜಡಭರತರು, ಕಂಬಾರರನ್ನ ಬಿಟ್ರ ಉತ್ತರ ಕರ್ನಾಟಕದ ಭಾಷೆಯನ್ನ ನಾಟಕದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬರೀತಿರೋರು ನೀವೊಬ್ರ” ಅಂತ ನಾನು ಹೇಳಿದಾಗ ಸಭಿಕರೊಳಗ ನಾಚಿ ನೀರಾಗಿದ್ರಿ….ನಟರಾಜ ಏಣಗಿ, ಗಜಾನನ ಮಹಾಲೆ ಅವರು ತೀರಿಕೊಂಡಾಗ, ನನಗ ಫೋನ್ ಮಾಡಿ, ಫೋನಿನ್ಯಾಗ ಅತ್ತಿದ್ರಿ…… ಅದೆಂಥ ಮುಗ್ಧ ಮನಸ್ಸು ನಿಮ್ದು…..

ಹೋದ ವರ್ಷ ನವೆಂಬರ್ ತಿಂಗಳಿನ್ಯಾಗ ಗೊಟಗೋಡಿ, ಧಾರವಾಡ, ಬೆಳಗಾವಿಯಲ್ಲಿ ನಿಮ್ಮ “ರಂಗದ ಒಳ ಹೊರಗೆ” ಪುಸ್ತಕ ಬಿಡುಗಡೆಗೆ ಅಂತ ನಾನು, ನೀವು, ಶ್ರೀಪತಿ ಕಾರಿನ್ಯಾಗ ಪ್ರವಾಸ ಮಾಡಿದಾಗ ಅದೆಂಥ ಅನುಭವಗಳನ್ನ ಹಂಚಿಕೊಂಡಿದ್ರಿ…..ಮೂರು ದಿನದಾಗ ಒಂದು ಸಾವಿರ ಕಿಲೋ ಮೀಟರ್‍ಕಿಂತಲೂ ಹೆಚ್ಚು ಪ್ರವಾಸ ಮಾಡಿದ್ರೂ ನನಗ ಆಯಾಸ ಅನಸ್ಲಿಲ್ಲ….ನಿಮ್ಮ ಅನುಭವದ ಮೂಸೆಯೊಳಗ ಬೆಂದು ಬಂದಿದ್ದೆ…..ಅದೆಲ್ಲಾನೂ ದಾಖಲಿಸಿ, ಪುಸ್ತಕ ರೂಪದಲ್ಲಿ ತರೋ ನಮ್ಮ ಕನಸು ಕನಸಾಗೇ ಉಳೀತಲ್ಲ ಸರ್!!!!

ಇನ್ನೂ ಏನು ಬರೀಬೇಕೋ ತಿಳೀವಲ್ತು….ಕಣ್ಣು ಮಂಜಾಗ್ಲಿಕತ್ತಾವು…..ನಿನ್ನೆ ನಿಮ್ಮ ಪಾರ್ಥಿವ ಶರೀರವನ್ನ ನೋಡಿದ ಮ್ಯಾಲೆ ನನ್ನ ಕಣ್ಣನ್ನ ನಾನು ನಂಬಲಿಕ್ಕೆ ಆಗವಲ್ತು….

“ಅದ ಗ್ವಾಡಿ, ಅದ ಸೂರು

ದಿನವೆಲ್ಲ ಬೇಜಾರು…

ತಿದಿಯೊತ್ತಿ ನಿಟ್ಟುಸಿರು

ಎದಿಯಾಗ ಚೂರು ಚೂರು ಬಂದಾನೇನ ಎದುರು ನಿಂದಾನೇನ….

 

ಬಂದಾನೇನ ಹೊಸ ನಾಟಕ ಬರದಾನೇನ………

3 Comments

  1. sindhu
    September 21, 2016
  2. Shama, Nandibetta
    September 21, 2016
  3. samyuktha
    September 21, 2016

Add Comment

Leave a Reply