Quantcast

ಬಂದಾನೇನ….ಎದುರು ನಿಂದಾನೇನಾ

ಬಂದಾನೇನ….ಎದುರು ನಿಂದಾನೇನಾ

ಎನ್  ಸಂಧ್ಯಾರಾಣಿ 

‘ದನದ ಕೊರಳಾ ಗಂಟಿ, ಜೀರುಂಡಿ ಝೇಂಕಾರ
ಮನದ ದುಕ್ಕವು ಮಾಯಾ ಎಲ್ಲೆಲ್ಲೂ ಓಂಕಾರ
ರಾತ್ರಿ ರಾಣಿಯ ಗಂಧಾ ತಂದಾನೇನಾ
ಖಾತ್ರಿಲೆ ಒಂಟಿತನ ಕೊಂದಾನೇನಾ…?

ಅಂದು ಹನುಮಂತ ನಗರದಲ್ಲಿ ಒಂದು ಸಂವಾದ ಕಾರ್ಯಕ್ರಮ.

ಅಲ್ಲಿಗೆ ಹೋಗಿದ್ದೆ. ‘ಇವರು ಗೋಪಾಲ ವಾಜಪೇಯಿ’ ಅಂತ ಪರಿಚಯ ಮಾಡಿಸಿದಾಗ, ನಾನು ಮುಗುಳ್ನಕ್ಕು ‘ನಮಸ್ತೆ’ ಎಂದಿದ್ದೆ.

14368666_1421720924524651_4421063709012433929_n

ಇವರೇ ’ನಾಗಮಂಡಲ’ದ ಹಾಡನ್ನು ಬರೆದಿರೋದು ಅಂದರು ನೋಡಿ ನನಗೆ ಅಕ್ಷರಶಃ ಕಣ್ಣೆದುರಲ್ಲಿ ಮತಾಪು ಹಚ್ಚಿದಂತಾಗಿತ್ತು.

ನಾಗಮಂಡಲದ ಹಾಡುಗಳಲ್ಲಿನ ಉತ್ಕಟತೆ, ಮುಚ್ಚಿದ ಬಾಗಿಲ ಹಿಂದೆ ಹೆಣ್ಣೊಬ್ಬಳು ಅನುಭವಿಸುವ ಒಂಟಿತನ, ಹತಾಶೆ, ನಿರಾಸೆ, ಆಳವಾದ ಅಭೀಪ್ಸೆ, ಶೃಂಗಾರ ಎಲ್ಲವೂ ತೀವ್ರವಾಗಿ ಕಾಡಿದ್ದವು ಮತ್ತು ಕಾಡುತ್ತಲೇ ಇದ್ದವು. ಹಾಗಾಗಿಯೇ ನಾಗಮಂಡಲದ ಹಾಡುಗಳನ್ನು ಬರೆದವರು ಇವರೇ ಎಂದಾಗ ಅವರು ನನಗೆ ಚಿರಪರಿಚಿತರೆನಿಸಿದ್ದರು. ಆಗ ಅವರ ಬಗ್ಗೆ ನನಗೆ ಗೊತ್ತಿದ್ದದ್ದು ಅಷ್ಟೇ.

ಆಮೇಲೆ ಅವರು ’ಅವಧಿ’ಗೆ ಅಂಕಣ ಬರೆಯಲು ಪ್ರಾರಂಭಿಸಿದರು. ಅವಧಿಯೊಡನಿನ ನನ್ನ ಒಡನಾಟದ ಇಷ್ಟು ವರ್ಷಗಳಲ್ಲಿ ಅವರಷ್ಟು ಶಿಸ್ತಿನಿಂದ ಅಂಕಣ ಬರೆದು ಕಳಿಸುತ್ತಿದ್ದ ಇನ್ನೊಬ್ಬ ಅಂಕಣಕಾರರನ್ನು ನಾನು ಕಂಡಿಲ್ಲ. ಭಾನುವಾರ ಅವರ ಅಂಕಣ ಬರುತ್ತಿತ್ತು, ಬುಧವಾರ ಮಧ್ಯಾಹ್ನ, ಇಲ್ಲವೆಂದರೆ ಗುರುವಾರ ಬೆಳಗ್ಗೆ ಅವರ ಅಂಕಣ, ಮತ್ತು ಅದಕ್ಕೆ ಸಂಬಂಧಿಸಿದ ಫೋಟೋಗಳು ಅವಧಿಯ ಮೇಲ್ ಗೆ ಬಂದಿರುತ್ತಿದ್ದವು.

ಅಂಕಣ ಪ್ರಕಟವಾದ ಮೇಲೆ ಮಕ್ಕಳ ಕುತೂಹಲ, ಸಂತಸದಿಂದ ಅವರು ಅದಕ್ಕೆ ಬರುವ ಪ್ರತಿಕ್ರಿಯೆಗಳನ್ನು ಎದುರು ನೋಡುತ್ತಿದ್ದರು. ಅದನ್ನು ಜನ ಓದುತ್ತಿದ್ದಾರಾ, ಹೇಗೆ ಸ್ವೀಕರಿಸುತ್ತಿದ್ದಾರೆ ಇದು ಅವರ ಯಾವಾಗಿನ ಪ್ರಶ್ನೆ. ಅವರ ಆ ಅಂಕಣ ಬರಹಗಳ ಮೊದಲ ಓದುಗಳು ನಾನು ಎನ್ನುವುದು ನನ್ನ ಸಂತಸ ಮತ್ತು ಹೆಮ್ಮೆ.

ಅವರ ಅಂಕಣ ಒಂದು ರೀತಿಯಲ್ಲಿ ರಂಗಭೂಮಿಯ ಇತಿಹಾಸವನ್ನೂ ದಾಖಲಿಸುತ್ತಿತ್ತು. ಓದುತ್ತಾ ಓದುತ್ತಾ ಹೋದ ಹಾಗೆ ಅವರ ರಂಗಭೂಮಿಯ ನಂಟು, ಅವರ ಪ್ರತಿಭೆ, ಯಾವುದೇ ರೀತಿಯಲ್ಲೂ ರಂಗಚಟುವಟಿಕೆಗಳಿಗೆ ಪೂರಕವಾಗಿಲ್ಲದ ಉದ್ಯೋಗದಲ್ಲಿರುವಾಗಲೂ ರಂಗಭೂಮಿಯನ್ನು ಬಿಡದ ಅವರ ರಂಗಪ್ರೀತಿ ಅಸಾಧಾರಣ ಅನ್ನಿಸಿತ್ತು.

14344907_10207987189020924_5213242475664009891_n೨೦೧೪, ಸೇಡಂ ನ ಮಹಿಪಾಲರೆಡ್ಡಿ ಮುನ್ನೂರು ಅವರ ’ಅಮ್ಮ ಪ್ರಶಸ್ತಿ’ ಗೋಪಾಲ ವಾಜಪೇಯಿ ಅವರಿಗೆ ಬಂದಿತ್ತು. ನನ್ನ ಅದೃಷ್ಟವೋ ಎನ್ನುವಂತೆ ಅದೇ ವರ್ಷ ನನಗೂ ಆ ಪ್ರಶಸ್ತಿ ಬಂದಿತ್ತು. ಫೋನ್ ಮಾಡಿ, ಒಟ್ಟಿಗೇ ಹೋಗೋಣ ಸರ್ ಎಂದು ಕೇಳಿದೆ. ಆಗಾಗಲೆ ಅವರು ದಣಿದಿದ್ದರು, ಆಮ್ಲಜನಕದ ಸಮಸ್ಯೆ ಎದುರಿಸುತ್ತಿದ್ದ ಅವರು ಪ್ರತಿ ರಾತ್ರಿ ಯಂತ್ರದ ಸಹಾಯದಿಂದಲೇ ಉಸಿರಾಡಬೇಕಿತ್ತು. ಆದರೂ ಅವರು ಸೋಲೊಪ್ಪಿಕೊಂಡಿರಲಿಲ್ಲ.

ತಮ್ಮ ಎಂದಿನ ಮಗುವಿನ ಉತ್ಸಾಹದಲ್ಲೇ ‘ರೈಲಿನಲ್ಲಿ ಆಗಲ್ಲಮ್ಮ, ಆದರೂ ಮಗನ ಜೊತೆ ಕಾರಿನಲ್ಲಿ ಬರ್ತೀನಿ’ ಅಂದರು. ಅವರ ಜೊತೆಗಿನ ಪ್ರಯಾಣ ತಪ್ಪಿದ ನಿರಾಸೆ ಇದ್ದರೂ, ಅವರ ಜೊತೆ ವೇದಿಕೆ ಹಂಚಿಕೊಳ್ಳುವುದು ನನ್ನ ಸುಕೃತ ಎಂದೇ ನಾನು ಭಾವಿಸಿದೆ. ಆದರೆ ಅವರು ಅಲ್ಲಿಗೆಂದು ಹೊರಟು, ಯಲಹಂಕದ ಹತ್ತಿರ ಬರುವಷ್ಟರಲ್ಲಿ ಮನೆಯಲ್ಲಿ ತೊಂಬತ್ತು ವರ್ಷಗಳ ಅವರ ತಾಯಿ ಕಾಲುಜಾರಿ ಬಿದ್ದು ಹಾಸಿಗೆ ಹಿಡಿದಿದ್ದರು. ಅಲ್ಲಿಂದಲೇ ಅವರು ಹಿಂದಿರುಗಿದ್ದರು. ಆಮೇಲೆ ಫೋನ್ ಮಾಡಿದಾಗ, ’ಬರಕ್ಕಾಗಲಿಲ್ಲ ಸಂಧ್ಯಾ’ ಅಂತ ನೋವಿನಲ್ಲೇ ಹೇಳಿದರು.

’ಅವಧಿ’ಯಲ್ಲಿ ಬಂದ ಅವರ ಅಂಕಣ ಪುಸ್ತಕವಾಗುತ್ತದೆ ಎಂದು ಖುಷಿಯಿಂದಲೇ ಒಮ್ಮೆ ಫೋನ್ ಮಾಡಿದ್ದರು, ‘ಕಿರಣ್ ವಟಿ ಪುಸ್ತಕ ಮಾಡ್ತಾ ಇದ್ದಾರೆ, ನೀವು ಬರಲೇಬೇಕು ಮತ್ತೆ’ ಅಂದರು. ಅದು ನಮ್ಮ ಪುಸ್ತಕ ಅಲ್ಲವ ಸರ್, ಬರದೆ ಇರ್ತೀನಾ ಅಂದೆ.

ಆದರೆ ಪುಸ್ತಕ ಬಿಡುಗಡೆಗೆ ಮೊದಲು ಅವರ ಆರೋಗ್ಯ ಕೈಕೊಟ್ಟಿತ್ತು, ಪುಸ್ತಕ ಬಿಡುಗಡೆ ಮುಂದೂಡಲಾಗಿದೆ ಅಂತ ಓದಿದವಳು, ’ಯಾಕೆ ಸರ್’ ಅಂತ ಮೆಸೇಜು ಮಾಡಿದೆ. ಆಮೇಲೊಂದು ದಿನ ಫೋನ್ ಮಾಡಿ, ಆರೋಗ್ಯ ಸರಿ ಇಲ್ಲ ಅಂದರು. ಪಾಪ ಅವರ ಖುಷಿ ಯಾಕೋ ವಿಧಿಗೆ ಸಹಿಸುತ್ತಿಲ್ಲ ಅಂದುಕೊಂಡೆ. ಆಮೇಲೆ ಅವರ ಪುಸ್ತಕ ಬಿಡುಗಡೆ ಆಯಿತು, ನಾನು ಊರಿನಲ್ಲಿ ಇರದೆ ಇದ್ದುದ್ದರಿಂದ ಹೋಗಲಾಗಿರಲಿಲ್ಲ. ’ಮಾತು ತಪ್ಪಿಸಿದಿರಿ’ ಎಂದು ಪ್ರೀತಿಯಲ್ಲೇ ಮುನಿಸಿಕೊಂಡಿದ್ದರು.

ಆಮೇಲೆ ಅವರ ಮನೆಯಲ್ಲಿ ಏನೋ ಕಾರ್ಯಕ್ರಮಕ್ಕೆ ಕರೆದಾಗ ಹೋಗಿ, ಕೈ ಹಿಡಿದು ಕ್ಷಮೆ ಕೇಳಿದ್ದೆ. ವಿಳಾಸ ತೆಗೆದುಕೊಂಡು ಅವರ ಪುಸ್ತಕ ಕಳಿಸಿದ್ದರು, ’ನಿಮ್ಮ ಪುಸ್ತಕ ಬಂದಿಲ್ಲ ಸಂಧ್ಯಾ’ ಎಂದು ಜೋರು ಮಾಡಿದ್ದರು. ’ಇದೋ ಸರ್, ಇವತ್ತೇ ಕಳಿಸ್ತೀನಿ’ ಎಂದು ಅಂದೇ ಕಳಿಸಿದ್ದೆ.

೨೦೧೫, ಅವಿರತ ತಂಡ ಸಂಸ ರಂಗಮಂದಿರದಲ್ಲಿ ಗೋಪಾಲ ವಾಜಪೇಯಿ ಮತ್ತು ಕೆ ವೈ ನಾರಾಯಣ ಸ್ವಾಮಿಯವರ ರಂಗ ಗೀತೆಗಳ ಹಾಡುಗಾರಿಕೆಯನ್ನು ಏರ್ಪಡಿಸಿತ್ತು. ಕಾರ್ಯಕ್ರಮ ಅದ್ಭುತವಾಗಿ ಆಯಿತು, ಆದರೆ ಅಲ್ಲಿಗೆ ಅವರು ಬಂದಿರಲಿಲ್ಲ. ಮರುದಿನ ಫೋನ್ ಮಾಡಿ ’ಕಾರ್ಯಕ್ರಮ ಚೆನ್ನಾಗಿ ಆಯಿತು, ಆದರೆ ಯಾಕೆ ಸರ್ ನೀವು ಬರಲಿಲ್ಲ’ ಎಂದು ಕೇಳಿದೆ. ’ನ್ಯುಮೋನಿಯ ಆಗಿತ್ತಮ್ಮ, ಸಣ್ಣ ಸೋಂಕನ್ನೂ ಶ್ವಾಸಕೋಶ ತಡೆಯುವುದಿಲ್ಲ’ ಅಂದಿದ್ದರು.

ಯಾಕೋ ತುಂಬಾ ಬೇಸರ ಆಗಿತ್ತು. ಅವರ ಪಾಲಿನ ಸಣ್ಣ ಸಣ್ಣ ಖುಷಿಯನ್ನೂ ಯಾಕೆ ಬದುಕು ಹೀಗೆ ಕಿತ್ತುಕೊಳ್ಳುತ್ತದೆ ಅನ್ನಿಸಿ ನೋವಾಗಿತ್ತು. ’ಬೇಗ ಹುಷಾರಾಗಿ ಸರ್, ಇನ್ನೊಂದು ಕಾರ್ಯಕ್ರಮ ಆಗುತ್ತದೆ’ ಅಂದೆ. ’ಹೂ ಈ ಸಲ ಕಲಾಗ್ರಾಮದಾಗ ಮಾಡೋಣು’ ಅಂದವರ ದನಿಯಲ್ಲಿ ದೀಪಾವಳಿ ಮತಾಪು.

ಅವರ ಆ ಇನ್ನೊಂದು ಕಾರ್ಯಕ್ರಮಕ್ಕೆ, ಅವರ ಹಾಡುಗಳಿಗೆ ನಾನಿನ್ನೂ ಕಾಯುತ್ತಲೇ ಕೂತಿದ್ದೇನೆ. ಇದೇನು ಹೀಗೆ ಎದ್ದು ನಡೆದುಬಿಟ್ಟರು ಗೋಪಾಲ ಕಾಕ? ಇಂದು ಪೋನಿನಲ್ಲಿ ಸುದ್ದಿ ಬಂದಾಗ ಮನಸ್ಸು ನಂಬಲು ತಯಾರಿರಲಿಲ್ಲ. ತಕ್ಷಣಕ್ಕೆ ಯಾರಿಗೆ ಫೋನ್ ಮಾಡುವುದು ಎಂದು ಸಹ ತೋಚಲಿಲ್ಲ. ಫೋನ್ ಮಾಡಿ ಏನೆಂದು ಕೇಳಲಿ, ಈ ಸುದ್ದಿ ಹೇಗೂ ಸುಳ್ಳಾಗಿರುತ್ತದೆ ಅಂತ ಮನಸ್ಸಿನ ಸುಳ್ಳು ಸಮಾಧಾನ. ಕಡೆಗೆ ತಡೆಯದೆ ಮೊದಲು ಶ್ರೀಪತಿ ಮಂಜನಬೈಲು ಅವರಿಗೆ ಫೋನ್ ಮಾಡಿದೆ. ’ಹಲೋ’ ಎಂದ ಅವರ ದನಿಯಲ್ಲಿ ಇನ್ನಿಲ್ಲದ ಭಾರ. ‘ನಿಜಾನಾ ಸರ್’ ಎಂದು ಕೇಳಿದೆ. ’ಹೌದಮ್ಮ, ಈಗ ಅರ್ಧ ಗಂಟೆ ಹಿಂದೆ’ ಅಂದರು. ನಾನು ಸ್ಥಬ್ಧಳಾಗಿ ಕೂತೆ….

ಯಾಕೋ ಮನಸ್ಸೊಳಗೆ ಕೈ ಹಾಕಿ ಯಾರೋ ಒಳಗನ್ನೆಲ್ಲಾ ಕಲಕಿದಂತೆ ಸಂಕಟ.

ಮನೆಯ ಆಲದ ಮರದಂತಿದ್ದ ಹಿರಿಜೀವವೊಂದು ಹೀಗೊಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಎದ್ದು ನಡೆದಂತೆ, ದೊಡ್ಡಪ್ಪನೆನ್ನುವ ನೆರಳು ಬಿರುಬಿಸಿಲಲ್ಲಿ ಇಲ್ಲವಾದಂತೆ. ಇನ್ನೊಂದೇ ಒಂದು ಸಲ ನಿಮ್ಮ ಜೊತೆ ಮಾತನಾಡಬೇಕಿತ್ತು ಸರ್, ಇನ್ನೊಂದು ಸಲ ನೀವು ಬರೆದ ಹಾಡುಗಳ ಹಿಂದಿನ ಕಥೆಯನ್ನು ಕೇಳಬೇಕಾಗಿತ್ತು. ನ್ಯುಮೋನಿಯ ಅಂದಿದ್ದಿರಲ್ಲ, ಈ ಚಳಿಯ ರಾತ್ರಿಯಲಿ ಹೀಗೆ ಎದ್ದು ನಡೆಯಬಹುದೆ ನೀವು? ಕಣ್ಣುಗಳು ಮಂಜು, ಮಂಜು…

 

8 Comments

 1. kalasree
  September 21, 2016
 2. ಭಾರತಿ ಬಿ ವಿ
  September 21, 2016
 3. Mamatha
  September 21, 2016
 4. samyuktha
  September 21, 2016
 5. Anonymous
  September 21, 2016
 6. Sandhya
  September 21, 2016
 7. lakshmikanth itnal
  September 21, 2016
 8. shama nandibetta
  September 21, 2016

Add Comment

Leave a Reply