Quantcast

ಎಂಥ ಹಸಿರು ಸಿರಿ ಕಂಡರೂ ನವಿಲು ಕುಣಿಯುವುದಿಲ್ಲ.

ಶಮ ನಂದಿಬೆಟ್ಟ 

ಕಾವೇರಿ ನೀರು ಹಂಚಿಕೆ ವಿಚಾರಕ್ಕಾಗಿ ಬಂದ್ ನಡೆಯೋ ಮುನ್ನಾದಿನ ಒಂದಷ್ಟು ಕೆಲಸಗಳನ್ನ ಮುಗಿಸುವ ತರಾತುರಿಯಿಂದ ಹೊರಗೆ ಹೊರಟಿದ್ದೆ.

ಮಾರನೇ ದಿನ ಪೂರ್ತಿ ಮನೇಲಿರುವ ಪ್ಲಾನಿತ್ತು. ಇದ್ದಕ್ಕಿದ್ದ ಹಾಗೆ ಗೆಳತಿ ಫೋನ್ ಮಾಡಿ “ವಾಜಪೇಯಿ ಮಾಮಾ ಫೋನ್ ಮಾಡಿ ನಾಳೆ ಕುಂಕುಮಕ್ಕೆ ಕರ್ದಿದಾರೆ ಬರ್ತೀಯೇನೇ” ಕೇಳಿದಾಗ ಹಿಂದೆ ಮುಂದೆ ಯೋಚಿಸದೇ ಬರ್ತೀನಿ ಅಂದೆ.

ಕರೆಯದಿದ್ದರೂ ಹಾಗೆ ಹೋಗಬಹುದಾದ ಮನೆ ವಾಜಪೇಯಿ ಮಾಮಂದು ಮಾತ್ರ !! ಬಂದ್ ಇದ್ದ ಕಾರಣ ಹುಶಾರಾಗಿ ಹೋಗೋದು, ಎಲ್ಲಿ ಮೀಟ್ ಆಗೋದು ಎಲ್ಲ ನಿರ್ಧರಿಸಿ ಪೋನಿಡುವಷ್ಟರಲ್ಲಿ ವಾಜಪೇಯಿ ಮಾಮಂದೇ ಫೋನ್. “ನಾಳೆ ಕುಂಕುಮಕ್ಕೆ ಬರ್ಬೇಕಲ್ಲಾ ನಮ್ಮನೆಗೆ” ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯ್ತು ನಂಗೆ.

14368666_1421720924524651_4421063709012433929_nನಾಲ್ಕಾರು ಮಾತಿನ ನಂತರ ನಮ್ಮಮ್ಮ ಮನೇಲಿರೋದು ಗೊತ್ತಾಗಿ “ಹಿರಿ ಮುತ್ತೈದೆ ಕಣಮ್ಮಾ. ಕರ್ಕೊಂಬಾ ಅಂಥ ಸತ್ಕಾರದ ಅದೃಷ್ಟ ಸಿಗೋದೇ ಭಾಗ್ಯ” ಎಂದ ವಿನೀತ ಭಾವ. ಅವರ ಮನೆಗೆ ಹೋಗೋದು ಮಕ್ಕಳಿಗೂ ಸಂಭ್ರಮ. ಹೊರಟು ಪಿ.ಇ.ಎಸ್ ಕಾಲೇಜ್ ತಲುಪುವ ಮೊದಲೇ ರಸ್ತೆಯುದ್ದಕ್ಕೂ ಬೆಂಕಿ. ಕಾರಿಂದಿಳಿದು ಪರಿ ಪರಿಯಾಗಿ ಬೇಡಿಕೊಂಡರೂ ಮುಂದಕ್ಕೆ ಬಿಡಲೊಲ್ಲರು. ಅನಿವಾರ್ಯವಾಗಿ ಹಿಂದಿರುಗಬೇಕಾಯ್ತು. ಫೋನ್ ಮಾಡಿ ತಿಳಿಸಿದರೆ “ಸದ್ಯ ನಿಮಗೇನೂ ಆಗಿಲ್ವಲ್ಲಾ ಹುಷಾರಮ್ಮ” ಅಂದಿತ್ತು ಹಿರಿ ಜೀವ.

ಸಾಮಾನ್ಯವಾಗಿ ಇಂಥದ್ದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಳ್ಳದೇ ಸುಮ್ಮನಿರುವ ನನಗೂ ಯಾಕೋ ಈ ಸಲ ಯಾವತ್ತಾದರೂ ಹೋಗಿ ಮಾತಾಡಿಸಿಕೊಂಡು ಬರಬೇಕೆನಿಸಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡು ಹಲವು ಚಟುವಟಿಕೆಗಳಲ್ಲಿರುವ ಅವರ ಮನೆಗೆ Surprise ಭೇಟಿಯಂತೂ ಆಗದ ಮಾತು. ಅವರ ಅನುಕೂಲದ ಸಮಯ ಕೇಳಬೇಕೆಂದು ಹೋದ ವಾರ ಫೋನ್ ಮಾಡಿದರೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಮಾತಾಡಿದರು.

ಮನೆಯಲ್ಲಿರುವ ಅಮ್ಮಂದಿರ ಬಗ್ಗೆ ವಿಚಾರಿಸಿದಾಗ ಇಬ್ಬರ ಆರೋಗ್ಯದ ಬಗ್ಗೆಯೂ ಅಲವತ್ತುಗೊಂಡರು. ಗೌತಮ್ ಇನ್ನೇನು ಎರಡು ವರ್ಷದಲ್ಲಿ ವಾಪಾಸ್ ಬರ್ತಾನೆ ಅಂದರು. “ಯಾಕಮ್ಮಾ ಈ ನಡುವೆ ಅವಧೀಲೂ ನೋಡಿಲ್ಲ, ಫೇಸ್ ಬುಕ್ ನಲ್ಲೂ ಬರಹಗಳು ಬರ್ತಿಲ್ಲ, ಬರೀಬೇಕಮ್ಮಾ” ಕಾಳಜಿ ತೋರಿಸಿದ್ರು.

ಎಲ್ಲದರ ನಡುವೆ ಯಾಕೋ ಅವರ ದನಿಯಲ್ಲೇ ಉತ್ಸಾಹ ಕುಂದಿದೆ ಎನಿಸಿ “ಹುಶಾರಿಲ್ವಾ ಮಾಮಾ” ಕೇಳಿದ್ರೆ “ಹೂಂ ಕಣಮ್ಮಾ ಸ್ವಲ್ಪ ಆರಾಮಿಲ್ಲ. ನಿನ್ ಗಂಡನ ಆಸ್ಪತ್ರೆಗೆ ಬರ್ಬೇಕು. ಔಷಧಿ ತೊಗೋಬೇಕು. ಒಂದಷ್ಟು ಒಪ್ಪಿಕೊಂಡಿರೋ ಕೆಲಸಗಳಿದಾವೆ ಮುಗಿಸಿ ಬರ್ತೀನಿ” ಅದೇ commitment. “ಕೆಲಸಗಳಿರ್ಲಿ ಮೊದ್ಲು ಆರೋಗ್ಯ ನೋಡಿ” ಸಲಿಗೆಯಲ್ಲಿ ಸ್ವಲ್ಪ ಜೋರಾಗೇ ಒಂದೆರಡು ಮಾತಂದಿದ್ದೆ.

ಸ್ವಲ್ಪ ಹೆಚ್ಚೇ ಮಾತಾಡಿದೆನಾ ಕಸಿವಿಸಿಯಾದರೆ “ಏನೇ ಆದ್ರೂ ಹೆಣ್ಣು ಮಕ್ಕಳಿರ್ಬೇಕು ನೋಡು. ಎಷ್ಟು ಕಾಳಜಿ ಮಾಡ್ತೀಯವ್ವಾ” ಅಂದಾಗ ಭಾವುಕತೆ. “ಈ ಸಲ ಆಸ್ಪತ್ರೆಗೆ ಬಂದಾಗ ಮನೆಗೂ ಬನ್ನಿ. ಹಾಗೇ ನನ್ನನ್ನೇ ದತ್ತು ಕೊಡ್ತಾರಾ ನಿಮಗೆ ಅಂತ ನನ್ ಗಂಡನ್ನ ಕೇಳಿ ನೋಡಿ” ಅಂದು ಇಬ್ಬರೂ ನಕ್ಕಿದ್ದೆವು. “ನೀ ಅದೃಷ್ಟ ಮಾಡಿದ್ದಿ ಬಿಡಮ್ಮಾ ಇಬ್ಬರೂ ಹೆಣ್ಣು ಮಕ್ಕಳು. ಕರ್ಕೊಂಬಾ ಮನೆಗೆ ಮುಂದಿನ ವಾರ ಬಿಡುವಾಗಿರೋ ಹೊತ್ತು ಹೇಳ್ತೀನಿ. ಎರಡೂ ನಕ್ಷತ್ರಗಳನ್ನ ನೋಡ್ಬೇಕು” ಅಂದಾಗ ಹೆಣ್ಣು ಮಕ್ಕಳನ್ನ ಹೀಗೆ ಬಯಸುವ ಹಿರಿಯರೇ ಎಲ್ಲ ಮನೆಗಳಲ್ಲಿದ್ರೆ ಅನಿಸಿತ್ತು.

ಮುಂದಿನ ವಾರ ಖಂಡಿತಾ ನಿಮ್ಮನೇಗೆ ಬಂದು ಪಡ್ಡು ತಿಂತೀನಿ ಅಂದಿದ್ದವರು ಮೊದಲ ಬಾರಿಗೆ ಮಾತು ಮುರಿದರು. ನಕ್ಷತ್ರಗಳನ್ನ ನೋಡಬೇಕೆಂದವರು ತಾನೇ ನಕ್ಷತ್ರವಾದರು. ಅಲ್ಲಿಂದಲೇ ಕೇಳಿಸ್ಕೊಳ್ಳಿ ಮಾಮಾ, ಇವತ್ತು ಬೆಳಗ್ಗೆ ಪಡ್ಡು ಮಾಡಿದ್ದೆ, ನಿಮ್ಮ ಹೆಸರಲ್ಲಿ ಒಂದಷ್ಟು ಜನರಿಗೆ ಹಂಚಿದೆ. ಆದರೂ ನೀವು ಹೀಗೆ ಎದ್ದು ಹೋಗಬಾರದಿತ್ತು. ಬರೆವುದನ್ನು ನಿಲ್ಲಿಸಿದವಳು ಇದನ್ನ ಬರೆದು ಮತ್ತೆ ಶುರು ಮಾಡುವಂತೆ ಆಗಬಾರದಿತ್ತು.

ಸಂತೆಯಲ್ಲಿ ನಮ್ಮನ್ನ ಬಿಟ್ಟು ಕಬೀರನಂತೆ ನೀವು ನಡೆದಿರಿ. ಧುತ್ತನೆ ಬಂದೆರಗಿದ ಸಿಡಿಲಿಗೆ ನಾವು ಕಂಬದ ಮ್ಯಾಲಿನ ಗೊಂಬೆಗಳಾಗಿದ್ದೇವೆ. “ಅದ ಗ್ವಾಡಿ, ಅದ ಸೂರು, ದಿನವೆಲ್ಲ ಬೇಜಾರು… ತಿದಿಯೊತ್ತಿ ನಿಟ್ಟುಸಿರು, ಎದಿಯಾಗ ಚೂರು ಚೂರು ಬಂದಾನೇನ ಎದುರು ನಿಂದಾನೇನ….” ಹೀಗಿನ್ನು ಕಾಯುವಂತಿಲ್ಲ ಅನ್ನೋದು ಅರಗಿಸಿಕೊಳ್ಳೋಕಾಗ್ತಿಲ್ಲ. ಇನ್ನು ತುಂಬ ದಿನಗಳ ವರೆಗೆ ಎಂಥ ಹಸಿರು ಸಿರಿ ಕಂಡರೂ ಮನಸೆಂಬ ನವಿಲು ಕುಣಿಯುವುದಿಲ್ಲ.

ಕಾಕಾ, ಎಲ್ಲಾರೂ Rest In Peace ಅಂದರೆ ನಾ ಅದೇ RIP ಯನ್ನ Return If Possible ಅಂತೀನಿ. ಒಮ್ಮೆ ಬರ್ತೀರಾ ?

2 Comments

  1. Anonymous
    September 23, 2016
  2. samyuktha
    September 21, 2016

Add Comment

Leave a Reply