Quantcast

ಏಣಗಿ ನಟರಾಜ ಪಾತ್ರ ಮುಗಿಸಿದರು..

ಏಣಗಿ ನಟರಾಜ : ಒರಟ, ಆದರೂ ಒಳ್ಳೆಯ ನಟ…

gopal-wajapeyi-150x150

ಗೋಪಾಲ ವಾಜಪೇಯಿ

ಏಣಗಿ ನಟರಾಜ

enagi-nataraj1

ರಂಗಭೂಮಿಯಲ್ಲೇ ಹುಟ್ಟಿದ ಈ ನಟ ರಂಗಭೂಮಿಯಲ್ಲೇ ಬೆಳೆದು,

ರಂಗಭೂಮಿಯಲ್ಲೇ ಬದುಕಿ, ರಂಗಭೂಮಿಯಲ್ಲೇ ಸತ್ತು ಹೋದ…

ಆದರೆ, 54 ನೆಯ ವಯಸ್ಸು ಸಾಯುವ ವಯಸ್ಸಾಗಿರಲಿಲ್ಲ,

ಇನ್ನಷ್ಟು ಸಾಧನೆಗೆ ಸಿದ್ಧಗೊಳ್ಳಬೇಕಾಗಿದ್ದ ವಯಸ್ಸು…

ಅದೇನು ಕೊರಗಿತ್ತೋ ಮನಸ್ಸಿನಲ್ಲಿ… ಯಾರೆದುರೂ ಹೇಳಿಕೊಳ್ಳದೆ

ಯಾರಿಗೂ ಹೇಳದೆ ಹೋಗಿಬಿಟ್ಟ ನಟರಾಜ…

”ಬೇರೆ ಏನೇ ಆದರೂ ಸರಿ, ‘ಅದೊಂದು’ ಮಾತ್ರ ಆಗಬಾರದು ನೋಡ್ರಿ…” ಅಂತ ನಾನು.

”ಹೌದು ಸರ್… ‘ಅದು’ ಆಗಲೇಬಾರದು…” ಅಂತ ರಂಗ ನಿರ್ದೇಶಕ ಗೆಳೆಯ ಧನಂಜಯ ಕುಲಕರ್ಣಿ.

ಈಗ ಮೂರು ತಿಂಗಳಿಂದ ನಮ್ಮಿಬ್ಬರ ಸಂಭಾಷಣೆಯಲ್ಲಿ ಈ ಮಾತು ಒಮ್ಮಿಲ್ಲೊಮ್ಮೆ ಬಂದು ಹೋಗುತ್ತಿತ್ತು.

ಆತ ನಮ್ಮ ನಡುವಿನ ಒಬ್ಬ ‘ಅಪೂರ್ವ ನಟ’ ಎಂಬ ಕಾರಣಕ್ಕೆ ಅಷ್ಟೇ ಅಲ್ಲ, ನಮ್ಮಿಬ್ಬರೊಡನೆ ರಂಗಭೂಮಿಯಲ್ಲಿ ‘ಒಡನಾಡಿದ ಗೆಳೆಯ’ ಎಂಬ ಕಾರಣಕ್ಕೆ…

ಆವೊತ್ತು ಏಣಗಿ ನಟರಾಜ ‘ರಂಗ ಶಂಕರ’ದಲ್ಲಿ ಕುಸಿದುಬಿದ್ದು, ‘ನಾ ತುಕಾರಾಮ ಅಲ್ಲ…’ ನಾಟಕದ 44 ನೆಯ ಪ್ರದರ್ಶನ ರದ್ದುಗೊಂಡ ಸುದ್ದಿಯನ್ನು ಗೆಳೆಯ ಬಿ. ಸುರೇಶ ‘ಫೇಸ್ ಬುಕ್’ಲ್ಲಿ ಹಾಕಿದ್ದನ್ನು ಓದಿದೆನಲ್ಲ… ಆಗಿನಿಂದ ನನಗೆ ಒಳಗೊಳಗೇ ಏನೋ ಅಳುಕು, ಏನೋ ಆತಂಕ, ಏನೋ ಕಸಿವಿಸಿ…

ತಡೆಯಲಾರದೇ, ‘ಹೀಗಂತೆ…’ ಅಂತ ರಾತೋರಾತ್ರಿ ಧನಂಜಯಗೆ ಹೇಳಿದರೆ, ”ಸರ್, ನಾನು ಆ ಹೊತ್ತಲ್ಲಿ ಅಲ್ಲಿಯೇ ಇದ್ದೆ. ಅದೇನೋ ಪಿತ್ತ ಹೆಚ್ಚಾಗಿ ತಲೆ ತಿರುಗಿ ಬಿದ್ದದ್ದಂತೆ… ನಾನೇ ಒಂದು ಕಾರು ವ್ಯವಸ್ಥೆ ಮಾಡಿ ಧಾರವಾಡಕ್ಕೆ ಕಳಿಸಿಕೊಟ್ಟು, ಈಗ ಮನೆಗೆ ಬರ್ತೀದ್ದೀನಿ,” ಅಂತ ಅವರು.

ಆ ಸಂದರ್ಭದಲ್ಲಿ ನಟರಾಜನ ಮಗ ಆದೇಶ ಜೊತೆಯಲ್ಲಿದ್ದದ್ದು ಮತ್ತು ಆ ಕಾರು ಧಾರವಾಡದವರದೇ ಎಂಬುದು ತುಸು ಸಮಾಧಾನದ ಸಂಗತಿಯಾಗಿತ್ತು.

enagi-nataraj2

 

”ಇವೊತ್ತು ಇಲ್ಲಿಯೇ ಯಾವುದಾದರೂ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದು ನಾಳೆ ಹೋಗಿ,” ಎಂಬ ಧನಂಜಯರ ಮಾತು ಕೇಳದೇ, ರಾತ್ರಿಯೇ ಮರಳಿ ಹೋಗುವ ಹಠ ಹಿಡಿದಿದ್ದನಂತೆ ನಟರಾಜ.

ಅವನು ಹಾಗೆಯೇ… ಬಲು ಹಠಮಾರಿ.

-೦-

ಇದಕ್ಕೂ ಮೊದಲು, ‘ಮಹಾನವಮಿ’ ಧಾರಾವಾಹಿಯ ಸಂದರ್ಭದಲ್ಲಿಯೂ ಹೀಗೆಯೇ ಅಂತೆ. ನಟರಾಜ ನಿತ್ಯವೂ ಶೂಟಿಂಗ್ ಮುಗಿಸಿ, ರಾತ್ರಿ-ಅಪರಾತ್ರಿ ಎನ್ನದೆ ಮುಂಡರಗಿ ಬಳಿಯ ಕವಲೂರಿನಿಂದ ದೂರದ ಧಾರವಾಡಕ್ಕೆ ಹೋಗಿಬಿಡುತ್ತಿದ್ದನಂತೆ. ಯಾರು ಹೇಳಿದರೂ ಕೇಳುತ್ತಿರಲಿಲ್ಲವಂತೆ. ಏನಿಲ್ಲೆಂದರೂ ನೂರು ಚಿಲ್ಲರೆ ಕಿಲೋಮೀಟರು ಪ್ರಯಾಣಕ್ಕೆ ಕನಿಷ್ಠ ಎರಡೂವರೆ ಗಂಟೆಗಳಾದರೂ ಬೇಕು. ದಿನವಿಡೀ ದಣಿದ ದೇಹಕ್ಕೆ ಆತ ವಿಶ್ರಾಂತಿಯನ್ನೇ ಕೊಡುತ್ತಿರಲಿಲ್ಲ. ಮರುದಿನ ಶೂಟಿಂಗ್ ವೇಳೆಗೆ ಸರಿಯಾಗಿ ಹಾಜರಾಗುತ್ತಿದ್ದನಂತೆ. ಅಷ್ಟು ದಣಿದಿದ್ದರೂ, ಕ್ಯಾಮರಾ ಮುಂದೆ ನಿಂತರೆ ಮುಗಿಯಿತು. ಆತನಿಂದ ಚಮತ್ಕಾರದ ಮೇಲೆ ಚಮತ್ಕಾರ…! ನಿರ್ದೇಶಕರ ಮನಸ್ಸನ್ನು ‘ಓದಿಕೊಂಡವ’ನಂತೆ, ಆ ಪಾತ್ರಕ್ಕೆ, ಆ ಸನ್ನಿವೇಶಕ್ಕೆ ಏನು ಬೇಕು ಎಂಬುದನ್ನರಿತು ಸಲೀಸಾಗಿ ಅಭಿನಯಿಸಿಬಿಡುತ್ತಿದ್ದ ನಟರಾಜ.

”ಹೌದು. ಆತ ಒಬ್ಬ ಪರ್ಫೆಕ್ಟ್ ಪ್ರೊಫೆಶನಲ್. ತುಂಬ ಕೋ-ಆಪರೇಟಿವ್. ಪಾತ್ರ ಬಯಸುವುದಾದರೆ ಎಂಥದಕ್ಕೂ ಸೈ. ‘ಮಹಾನವಮಿ’ಯ ಪಾತ್ರಕ್ಕೆ ತಲೆಯನ್ನು ಪೂರ್ತಿ ನುಣ್ಣಗೆ ಮಾಡಿಸಿಕೊಳ್ಳಬೇಕು ಅಂದದ್ದೇ ತಡ, ನಾಪಿತನೆದುರು ತಲೆಬಗ್ಗಿಸಿ ಕೂತುಬಿಟ್ಟ… ಆಮೇಲೆ ಆ ಪಾತ್ರವನ್ನು ಆತ ಎತ್ತಿಕೊಂಡ ಬಗೆ ಇದೆಯಲ್ಲ… ಅದು ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದು. ‘Action…’ ಅಂದ ಕೂಡಲೇ ಆತನೊಳಗಿದ್ದ ನಟ ‘ಅಲರ್ಟ್’ ಆಗಿಬಿಡುತ್ತಿದ್ದ. ಕ್ಯಾಮರಾದ ಆಚೆ ಇದ್ದಾಗ ಯಾವದೋ ಗುಂಗಿನಲ್ಲಿದ್ದಂತೆ, ಯಾರಯಾರದೋ ಮೇಲೆ ಹರಿಹಾಯುತ್ತಲೋ, ಸಿಡಿಮಿಡಿ ಮಾಡುತ್ತಲೋ ಕೂತಿರುತ್ತಿದ್ದ. ಶಾಟ್ ಸಂದರ್ಭದಲ್ಲಿ ಮಾತ್ರ ಎಲ್ಲರೂ ‘ಅವನೇ ಇವನಾ…?’ ಎಂದು ಬಾಯ್ಮೇಲೆ ಬೆರಳಿಟ್ಟುಕೊಳ್ಳಬೇಕು, ಹಾಗಿರುತ್ತಿತ್ತು ಆತನ ಪರ್ಫಾರ್ಮನ್ಸ್. ನಟರಾಜ ‘Single Take’ ನಟ.ಸುಮ್ಮನೇ ಒಮ್ಮೆ ಸ್ಕ್ರಿಪ್ಟ್ ನೋಡಿಕೊಳ್ಳುತ್ತಿದ್ದ. ಮನನ ಮಾಡಿಕೊಳ್ಳುತ್ತಿದ್ದ. ‘ರೆಡೀನಾ?’ ಅಂತ ಕೇಳಿದರೆ ‘ಓಹೋ ರೆಡಿ’ ಎಂಬಂತೆ ತಲೆಯಾಡಿಸುತ್ತಿದ್ದ… ಒಮ್ಮೆ ಹದಿನೈದು ನಿಮಿಷದ ಒಂದು ಸುದೀರ್ಘ ಸನ್ನಿವೇಶವನ್ನು ಒಂದೇ ‘ಶಾಟ್’ನಲ್ಲಿ ಒಂದೇ ‘ಟೇಕ್’ನಲ್ಲಿ ಓಕೆ ಮಾಡಿಬಿಟ್ಟ…! ಊಹೂಂ, ಅವನಂಥ ಬೇರೆ ನಟ ಸಿಗೋದು ಸಾಧ್ಯವೇ ಇಲ್ಲ…” ಅಂತ ನೆನಪಿಕೊಳ್ಳುತ್ತಾರೆ ಛಾಯಾಗ್ರಾಹಕ-ನಿರ್ದೇಶಕ ನಾಗರಾಜ ಆದವಾನಿ.

ಪಾತ್ರವನ್ನು ‘ಆವಾಹಿಸಿಕೊಂಡು’ ಅದರಲ್ಲಿ ತಲ್ಲೀನನಾಗಿಬಿಟ್ಟರೆ ಮುಗಿಯಿತು. ನಿಮ್ಮನ್ನು ಕೂತಲ್ಲಿಯೇ ‘ಕಟ್ಟಿ’ ಹಾಕಿಬಿಡುತ್ತಿದ್ದ ನಟರಾಜ.

ಅದು ಒಂದು ಮಾತಾಗಿರಬಹುದು, ಒಂದು ನೋಟವಾಗಿರಬಹುದು, ಒಂದು ಪ್ರತಿಕ್ರಿಯೆಯೇ ಆಗಿರಬಹುದು… ಅದರಲ್ಲಿ ‘ಏಣಗಿತನ’ ಎದ್ದು ಕಾಣುತ್ತಿತ್ತು. ಪಾತ್ರದ ಬಗ್ಗೆ ಅಂಥ ತಲ್ಲೀನತೆ ಆತನದು.

ಆದರೆ, ಒಂದಷ್ಟು ಒರಟುತನ, ವಾದಿಸುವಿಕೆ, ಜಗಳ… ತೀರ ಕ್ಷೀಣಿಸಿದ್ದ ಆರೋಗ್ಯದತ್ತ ತೋರುತ್ತಿದ್ದ ದಿವ್ಯ ನಿರ್ಲಕ್ಷ್ಯ ಮತ್ತು ಒಂದಷ್ಟು ‘ಮೇಲರಿಮೆ’, ಒಂದಷ್ಟು ‘ಚಟಗಳ ಮಹಿಮೆ’ ಇವೆಲ್ಲದರಿಂದ ಸಹ ನಟರಿಗೆ ಬೇಸರವಾದದ್ದೂ ಉಂಟು.

‘ಮಹಾನವಮಿ’ ಶುರು ಆದಾಗ, ದೂರದ ಹೈದರಾಬಾದಿನಲ್ಲಿದ್ದ ನಾನು, ಆತನನ್ನು ಅಭಿನಂದಿಸಿ ಸಂದೇಶ ಕಳಿಸಿದ್ದೆ. ಅದನ್ನು ನೋಡಿದ ಕೂಡಲೇ ನನ್ನನ್ನು ಸಂಪರ್ಕಿಸಿದ. ತುಂಬ ಪುಳಕಿತನಾಗಿದ್ದ.

”ನೋಡಿದೇನು…? ನನ್ನ ಪಾರ್ಟ್ ನೋಡೀದ್ರ ನಿನಗ ಏನಸತೈತಿ…??”

“ಅಪ್ಪಾವರನ ನೋಡಿದಂಗನಸತೈತಿ…”

”ಹಾಂ… ಬರಾಬ್ಬರಿ ಹಿಡದಿ ನೋಡು. ಅಪ್ಪನ್ನ ನೆನಸೇ ಮುಂದಿನ ಕೆಲಸ…”

ಅಪ್ಪನ ಅಭಿಮಾನದ ಮಗ ನಟರಾಜ. ದನಿಯಲ್ಲಿ, ಹಾವಭಾವದಲ್ಲಿ, ನಗೆಯಲ್ಲಿ, ನೋಟದಲ್ಲಿ… ಎಲ್ಲದರಲ್ಲೂ ಏಣಗಿ ಬಾಳಪ್ಪನವರ ಪಡಿಯಚ್ಚು.

ನಡುವೆ ಒಮ್ಮೆ ದೀರ್ಘ ಕಾಲದ ತನಕ ‘ಮಹಾನವಮಿ’ಯಿಂದ ಆತನ ಪಾತ್ರ ತೆರೆಯಿಂದ ಮರೆಯಾಗಿತ್ತು. ನನಗೋ ಆತ ಎಲ್ಲಿ ಜಗಳವಾಡಿಕೊಂಡು ಹೊರನಡೆದಿದ್ದಾನೋ ಎಂಬ ಅನುಮಾನ… ಹೈದರಾಬಾದಿನಿಂದ ಮತ್ತೆ ಸಂಪರ್ಕಿಸಿ,

”ಯಾಕೋ…? ಇತ್ತಿತ್ತಾಗ ‘ಮಹಾನವಮಿ’ಯೊಳಗ ಕಾಣsವಲ್ಲೆಲಾ… ಯಾಕs?” ಎಂದು ಕೇಳಿದ್ದೆ.

ನನ್ನೆದುರು ಆತ ಯಾವ ಮುಚ್ಚುಮರೆ ಇಲ್ಲದೆ ‘ಕಾರಣ’ವನ್ನು ಹೇಳಿಬಿಟ್ಟಿದ್ದ.

ತನ್ನ ‘ಅಶಿಸ್ತಿನ’ ಬದುಕಿನಿಂದಾಗಿ, ಸ್ವ-ಸ್ವಾಸ್ಥ್ಯದೆಡೆ ತೋರಿದ್ದ ದುರ್ಲಕ್ಷ್ಯದಿಂದಾಗಿ ನಟರಾಜ ಆಗ ನಾಲ್ಕು ತಿಂಗಳ ಕಾಲ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದ. ಆಮೇಲೆ ಮತ್ತೆ ಬಂದು ‘ಮಹಾನವಮಿ’ಗೆ ಕಳೆ ತಂದುಕೊಟ್ಟಿದ್ದನಾದರೂ ಆತನಲ್ಲಿ ಮುಂಚಿನ ಲವಲವಿಕೆ ಇರಲಿಲ್ಲ.

”ಆದರೆ, ಒಮ್ಮೆ ತನ್ನ ಶಾಟ್ ಮುಗಿದು ನಡುವೆ ಸ್ವಲ್ಪ ಬಿಡುವಿದೆ ಅಂದರೆ, ಹೋಗಿ ರಗ್ಗು ಹೊದ್ದು ಮಲಗಿಬಿಡುತ್ತಿದ್ದ. ಆ ಹೊತ್ತಿನಲ್ಲಿ ನಟರಾಜ ರೆಸ್ಟ್ ಮಾಡುತ್ತಿದ್ದನೋ ತನ್ನ ಪಾತ್ರದ ಕುರಿತು ಒಳಗೊಳಗೇ ಚಿಂತಿಸುತ್ತಿದ್ದನೋ ತಿಳಿಯದು… ಆದರೆ, ‘ಈಗ ನಿಮ್ಮದೇ ಶಾಟ್’ ಅಂದರೆ ಸಾಕು, ಆತನ ಮೈಯಲ್ಲಿ ಮಿಂಚು ಸಂಚರಿಸುತ್ತಿತ್ತು. ಆತನ ‘ತಾಕತ್ತು’ ಅಂಥದು. ಅದೊಮ್ಮೆ, ಇಡೀ ಒಂದು ಎಪಿಸೋಡು ತಾನೊಬ್ಬನೇ ಆವರಿಸಿಕೊಂಡು, ಎಲ್ಲೂ ಬೇಸರವೆನಿಸದಂತೆ ನಿಭಾಯಿಸಿದ್ದಿದೆಯಲ್ಲ… ಅದು ಬೇರೆಯವರ ಅಳವಿನ ಮಾತಲ್ಲ. ಸ್ಕ್ರಿಪ್ಟ್ ಬರೆಯುವವರಿಗೆ ಅಂಥ ನಟ ಬೇಕು. ಅವನ ಆ ‘ಗುಣ’ವೇ ನನಗೆ ಒಳ್ಳೆಯ ಸ್ಕ್ರಿಪ್ಟ್ ಬರೆಯಲು ಹುಮ್ಮಸ್ಸು ಕೊಡುತ್ತಿತ್ತು. ನಾನು ಬರೆದದ್ದನ್ನು ಆತ ಅಭಿನಯಿಸಿದಾಗ ಅದಕ್ಕೊಂದು ಬೇರೆಯೇ ರಂಗು. ‘ಮಹಾನವಮಿ’ ಗೆಲ್ಲಲು ನಟರಾಜನ ಕೊಡುಗೆ ಸಾಕಷ್ಟಿದೆ…” ಎಂಬುದು ನಾಟಕಕಾರ ಗೆಳೆಯ ಹೂಲಿ ಶೇಖರ್ ಅವರ ಅಂಬೋಣ.

ಅದಾದ ಮೇಲೆ, ಕಳೆದ ಎರಡು ಮೂರು ವರ್ಷಗಳಿಂದ ನಟರಾಜ ಆರೋಗ್ಯ ತುಂಬ ಕ್ಷೀಣಿಸಿತ್ತು. ಆದರೂ ನಾಟಕ, ಧಾರಾವಾಹಿ, ಸಿನೆಮಾ ಅಂತ ಓಡಾಟ, ಒದ್ದಾಟ… ಕುಡಿತ, ಗುಟಕಾ… ಇವೆಲ್ಲದರ ಮೇಲೆ ಹೊತ್ತುಹೊತ್ತಿಗೆ ಸರಿಯಾಗಿ ಊಟ ಮಾಡದೆ ಇರುವುದು…

ಅಂದಮೇಲೆ ‘ಒಳಗಿನ ಯಂತ್ರ’ ಕೆಡದೆ ಇದ್ದೀತೆ…?

-೦-

ಬಹುಶಃ ನಟರಾಜನಿಗೆ ತನ್ನಿಂದ ಇನ್ನು ಈ ಓಡಾಟ ಸಾಧ್ಯವಿಲ್ಲ ಎಂದು ಗೊತ್ತಿತ್ತೋ ಏನೋ… ಅದಕ್ಕೇ ತಾನಿನ್ನು ‘ನಾ ತುಕಾರಾಮ ಅಲ್ಲ…’ ನಾಟಕದಲ್ಲಿ ಅಭಿನಯಿಸೋದಿಲ್ಲ ಅಂತ ಸ್ಪಷ್ಟವಾಗಿ ‘ಸಂಕೇತ್ ತಂಡ’ದವರಿಗೆ ಹೇಳಿಬಿಟ್ಟಿದ್ದನಂತೆ. ಅದೇ ಮಾತನ್ನು ಆತ ಧನಂಜಯರೆದುರೂ ಹೇಳಿದ್ದನಂತೆ.

ಆತ ಒಮ್ಮೆ ಇಲ್ಲ ಅಂದರೆ ಮುಗಿದುಹೋಯಿತು. ಜಪ್ಪಯ್ಯ ಅಂದರೂ ಮತ್ತೆ ಒಪ್ಪುತ್ತಿರಲಿಲ್ಲ. ಇದು ಗೊತ್ತಿದ್ದ ಧನಂಜಯ ಕುಲಕರ್ಣಿ ಆ ದಿನದ ಶೋ ನೋಡಿದ ಹಾಗೂ ಆಯಿತು, ನಟರಾಜನನ್ನು ಕಂಡಂತೆಯೂ ಆಯಿತೆಂದು ರಂಗಶಂಕರಕ್ಕೆ ಹೋದರೆ ಅಲ್ಲಿ ಈ ಪರಿಸ್ಥಿತಿ.

ಮರು ಮುಂಜಾನೆ ನಾನು ಮಾಡಿದ ಮೊದಲ ಕೆಲಸವೆಂದರೆ ನಟರಾಜನಿಗೆ ಫೋನ್ ಹಚ್ಚಿದ್ದು.

”ಹ್ಞೂ… ಹೇಳಪಾ ಅಣ್ಣಾ… ಈಗ ಬಂದು ಮುಟ್ಟೀನಿ ನೋಡು…”

”ಏನಾಗಿತ್ತೋ ನಿನಗs…?”

”ಕೆಟ್ ಎಸಿಡಿಟೀನೋ ಮಾsರಾsಯಾ…”

”ನೀನು ಮದಲ ಆ ಗುಟಕಾ ತಿನ್ನೂದು ಬಿಡು…”

”ನೀ ಒಬ್ಬ ಕಡಿಮಿ ಆಗಿದ್ದಿ ನೋಡು ಅದನ ಹೇಳಾಕ…”

”ನೀ ಬಿಡೋತನಕಾ ನಾವು ಹೇಳಾವ್ರs…”

”ಹ್ಞೂ… ಆತು. ಸದ್ಯೇ ನಾ ಒಂದೀಟು ರಾಮನಗೌಡರ ಹಾಸ್ಪಿಟಲ್ಲಿಗೆ ಹೋಗಿಬರ್ತೀನಿ… ಆಮ್ಯಾಲ ಮಾತಾಡೂಣಂತ. ಏsನಣ್ಣಾ…”

ಎಂದು ಫೋನ್ ಕಟ್ ಮಾಡಿದ್ದ ನಟರಾಜ.

ಆತ ‘ಅಣ್ಣಾ’ ಎನ್ನುತ್ತಿದ್ದನಲ್ಲ… ಆ ಪದವನ್ನು ಎಷ್ಟು ರೀತಿಯಲ್ಲಿ ಉಚ್ಚರಿಸುತ್ತಿದ್ದ ಎಂಬುದು ಕೇಳಿದವರಿಗೇ ಗೊತ್ತು. ಒಂದೊಂದು ರೀತಿಯ ಉಚ್ಚಾರಕ್ಕೂ ಒಂದೊಂದು ‘ಅರ್ಥ’ವಿರುತ್ತಿತ್ತು.

ಆತನ ಮಾತೇ ಹಾಗೆ. ನಾವೆಷ್ಟು ಸಲ ಬೈದೆವೋ, ಆತ ಅದೆಷ್ಟು ಸಲ ಬೈಸಿಕೊಂಡನೋ… ನಾವು ಬಿಡಲಿಲ್ಲ, ಆತ ಬದಲಾಗಲಿಲ್ಲ…

ಇಷ್ಟೆಲ್ಲ ಆದರೂ ನಟರಾಜನೊಂದಿಗಿನ ನನ್ನ ಸ್ನೇಹ ಮಧುರವಾಗೇ ಇತ್ತು.

-೦-

ನಮ್ಮದು ಬಲು ಹಳೆಯ ಸ್ನೇಹ. 1980 ರ ದಶಕದಿಂದ ಆರಂಭವಾದದ್ದು. ಆತ ‘ನೀನಾಸಂ ರಂಗ ಶಿಕ್ಷಣ ಕೇಂದ್ರ’ದಲ್ಲಿ ತರಬೇತಿ ಪಡೆದು ಬಂದ ಹೊಸತು. ನಾವು ಕೆಲವು ಮಿತ್ರರು ಹುಬ್ಬಳ್ಳಿಯಲ್ಲಿ ರಂಗತಂಡ ಕಟ್ಟಿಕೊಂಡು ರಂಗ ಪ್ರಯೋಗ, ರಂಗ ತರಬೇತಿ ಅಂತೇನೇನೋ ಮಾಡುತ್ತಿದ್ದ ಕಾಲ. ‘ನೀನಾಸಂ ತಿರುಗಾಟ’ದ ಮೂಲಕ ಏಣಗಿ ನಟರಾಜ ಎಂಬ ಅದ್ಭುತ ಪ್ರತಿಭೆಯ ಪರಿಚಯ ಹುಬ್ಬಳ್ಳಿ-ಧಾರವಾಡದ ಜನಕ್ಕೆ ಆಗ ತಾನೇ ಆಗಿತ್ತು.

ಪ್ರಸನ್ನರ ‘ತದ್ರೂಪಿ’ಯಲ್ಲಿ ಸರ್ವಾಧಿಕಾರಿಯಾಗಿ ಅಭಿನಯಿಸಿದ ನಟರಾಜನೆ ಬೇರೆ… ಕಂಬಾರರ ‘ಸಾಂಬಶಿವ ಪ್ರಹಸನ’ದ ಸಾಂಬನೇ ಬೇರೆ… ಸುಬ್ಬಣ್ಣ ಅವರ ‘ಮಿಸ್ ಸದಾರಮೆ’ಯ ಕಳ್ಳನೆ ಬೇರೆ… ಸಂಸರ ‘ವಿಗಡ ವಿಕ್ರಮರಾಯ’ದಲ್ಲಿ ಆಸನಗಳನ್ನು ಹಾಕುತ್ತ ಆತ ಹೇಳುವ ಮಾತುಗಳಿವೆಯಲ್ಲಾ, ಇನ್ನೂ ಆ ‘ಅಭಿನಯ’ ಕಣ್ಣೆದುರೇ ನಿಂತಿದೆ, ಆ ‘ದನಿ’ ಕಿವಿಯಲ್ಲೇ ಕೂತಿದೆ.

ನಟರಾಜನೊಂದಿಗೆ ‘ನೀನಾಸಂ ತಿರುಗಾಟ’ದಲ್ಲಿ ನಟನಾಗಿ ಭಾಗವಹಿಸಿದ್ದ ಮಂಡ್ಯ ರಮೇಶ್ ಹೇಳುವುದನ್ನಿಷ್ಟು ಕೇಳಿ :

”ಮ್ಯಾಕ್ ಬೆತ್ ಆಗಿ ಶೇಕ್ಸ್ಪಿಯರನ ಸಾಲುಗಳನ್ನು ಅವನಷ್ಟು ಪರಿಣಾಮಕಾರಿಯಾಗಿ ಹೇಳಿದ ನಟನನ್ನು ನಾನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ…” ಇದು ನಿಜವಾದ ಸಾಮರ್ಥ್ಯ ಮತ್ತು ನಿಜವಾದ ಗುಣಗ್ರಾಹಕತೆ.

ಧಾರವಾಡದಲ್ಲಿ, ಮರಾಠಿಯಿಂದ ಅನುವಾದಿಸಲ್ಪಟ್ಟ ‘ನಟ ಸಮ್ರಾಟ್’ ನಾಟಕ ಪ್ರದರ್ಶನ. ಹತ್ತು ನಿಮಿಷದ ಒಂದು ಸಂಭಾಷಣೆಯನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದಾಗ ಮುಂದಿನ ಹತ್ತು ನಿಮಿಷಗಳ ವರೆಗೆ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಲೇ ಇದ್ದರಂತೆ…

ಆತನ ವಿಶಿಷ್ಟ ಆಂಗಿಕಾಭಿನಯ, ಧ್ವನಿಯ ಏರಿಳಿತ, ಎಲ್ಲವೂ ವಿಶಿಷ್ಟವೇ.

ವೃತ್ತಿ ರಂಗಭೂಮಿಯ ವಾತಾವರಣದಲ್ಲಿಯೇ ಬೆಳೆದ ಈ ನಟ ‘ನೀನಾಸಂ ತಿರುಗಾಟ’ದ ಮೂಲಕ ನಾಡಿನಲ್ಲೆಲ್ಲ ಮನೆಮಾತಾದ. ವೃತ್ತಿರಂಗಭೂಮಿಯ ಶಕಪುರುಷರಲ್ಲಿ ಒಬ್ಬರಾದ ನಾಡೋಜ ಡಾ. ಏಣಗಿ ಬಾಳಪ್ಪ ಅವರಿಗೆ ಮಗ ಹೆಸರಿಗೆ ತಕ್ಕ ಹಾಗೆ ‘ನಟರಾಜ’ನೇ ಆಗಿ ಬೆಳೆಯತೊಡಗಿದ್ದು ಎಲ್ಲಕ್ಕಿಂತ ಹೆಮ್ಮೆಯ ಮಾತಾಗಿತ್ತು. ಈತ ತಮ್ಮ ವೃತ್ತಿಯ ವಾರಸುದಾರನಾಗುತ್ತಿದ್ದಾನೆ ಎಂಬ ಹೆಮ್ಮೆ ಒಂದೆಡೆಯಾದರೆ, ನಾಡೇ ಅವನ ಅಭಿನಯಕ್ಕೆ ಮಾರು ಹೋಗಿದೆ ಎಂಬ ಸಂತೋಷ ಇನ್ನೊಂದೆಡೆ.

ಇಂಥ ನಟರಾಜ ನನಗೆ ತೀರ ಹತ್ತಿರದವನಾಗಿ, ‘ಅಣ್ಣ’ ಎನ್ನತೊಡಗಿದ್ದು 1987 ರಲ್ಲಿ. ಆಗ ಮುಂದಿನ ಮೂರು ವರ್ಷಗಳ ಅವಧಿಗೆ ನಾವಿಬ್ಬರೂ ‘ಕರ್ನಾಟಕ ನಾಟಕ ಅಕಾಡೆಮಿ’ಯ ಸದಸ್ಯರಾಗಿ ನೇಮಕಗೊಂಡಿದ್ದೆವು. ಮೊದಲ ಸಭೆಯಿಂದಲೇ ಇಬ್ಬರೂ ಅಕ್ಕ-ಪಕ್ಕದಲ್ಲಿಯೇ ಕೂಡತೊಡಗಿದೆವು. ಇಬ್ಬರೂ ಒಂದೇ ಜಿಲ್ಲೆಯಿಂದ ಆಯ್ಕೆಯಾದ ಸದಸ್ಯರು. ನಮ್ಮ ಜಿಲ್ಲೆಗೆ ಆದಷ್ಟು ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಪಡೆದುಕೊಳ್ಳುವ ತವಕ. ಆ ಹೊತ್ತಿಗೆ ಬಿ..ವಿ ಕಾರಂತರ ಒತ್ತಾಸೆಯ ಮೇರೆಗೆ ನಟರಾಜ ಮೈಸೂರಿನ ರಂಗಾಯಣದ ಪ್ರಶಿಕ್ಷಕನಾಗಿ ಸೇರಿಕೊಂಡಿದ್ದ. ಆದರೂ, ಜಿಲ್ಲೆಯ ಕಾರ್ಯಕ್ರಮಗಳ ಪ್ರಶ್ನೆ ಬಂದಾಗ ಆತ ಧಾರವಾಡಕ್ಕೆ ಬರುತ್ತಿದ್ದ, ಕಾರ್ಯಕ್ರಮಗಳ ಯೋಜನೆ, ಸಂಘಟನೆ ಮತ್ತು ಯಶಸ್ಸಿಗೆ ಸಹಕರಿಸುತ್ತಿದ್ದ.

‘ಜಡಭರತ’ ನಾಮಾಂಕಿತ ನಾಟಕಕಾರ ಜಿ.ಬಿ. ಜೊಶಿಯವರ ಎಲ್ಲ ನಾಟಕಗಳ ಒಂದು ‘ಉತ್ಸವ’ವನ್ನು ನಾನು ಹುಬ್ಬಳ್ಳಿಯಲ್ಲಿ ಅಕಾಡೆಮಿಯ ವತಿಯಿಂದ ಸಂಘಟಿಸಿದೆ. ಆಗ ನಾನು ಮೊದಲ ಬಾರಿ ಏಣಗಿ ಬಾಳಪ್ಪ ಅವರನ್ನು ಸಮೀಪದಿಂದ ನೋಡಿದ್ದು. ನಮಸ್ಕರಿಸಿ, ”ನಾನು ನಟರಾಜನ ಗೆಳೆಯ,” ಎಂದೆ. ಅದಕ್ಕವರು ತಟ್ಟನೆ, ”ನಾನು ನಟರಾಜನ ತಂದೆ…” ಎಂದರು. ಹಾಗೆ ಹೇಳುವಾಗ ಅವರ ಕಣ್ಣಲ್ಲಿಯ ಹೊಳಪು ನೋಡುವ ಹಾಗಿತ್ತು. ಮಗನ ಬಗ್ಗೆ ಅಂಥ ಅಭಿಮಾನ ಅಪ್ಪನಿಗೆ. ಭರವಸೆ ಮೂಡಿಸಿದ ಮಗ ಮೈಸೂರಿನಿಂದ ಕೇರಳಕ್ಕೆ ವಲಸೆ ಹೋಗಿಯಾಗಿತ್ತು.

ಆದರೆ, ಅಲ್ಲಿಯೂ ಆತ ಹೆಚ್ಚು ದಿನ ನಿಲ್ಲಲಿಲ್ಲ. ಧಾರವಾಡಕ್ಕೆ ಮರಳಿದ.

ನಟರಾಜ ಎಂದಿನಿಂದಲೂ ಹಾಗೆಯೇ. ಒಂದೆಡೆ ನೆಲೆ ನಿಲ್ಲುವ ಜಾಯಮಾನ ಅವನದಲ್ಲ. ಆದರೆ ಆತನಿಗೊಂದು ನೆಲೆ ಹುಡುಕಿಕೊಡಲು ತಂದೆ ಏಣಗಿ ಬಾಳಪ್ಪ ಬಹುವಾಗಿ ಶ್ರಮಿಸಿದರು. ಹುಬ್ಬಳ್ಳಿಯಲ್ಲಿ ‘ಬೆಲ್ಲದ ಕಂಪನಿ’ಯಲ್ಲಿ ಕೆಲಸ ಕೊಡಿಸಿದರು. ಕೆಲವೇ ದಿನಗಳಲ್ಲಿ ಅಲ್ಲಿಂದ ಹೊರಬಿದ್ದ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಒಂದು ತಾತ್ಕಾಲಿಕ ಕೆಲಸ ಕೊಡಿಸಿದರು. ಅಲ್ಲೂ ಅಷ್ಟೇ. ಅವನಿಗಾಗಿ ‘ಮ್ಯಾಳ’ ಎಂಬ ತಂಡವನ್ನು ಕಟ್ಟಿ ಅಲ್ಲಾದರೂ ಮುಂದುವರಿಯಲಿ ಎಂದರೆ ಅದೂ ಅಲ್ಪಾವಧಿಯದಾಯಿತು.

1995 ರ ಸುಮಾರಿಗೆ ಸಿನೆಮಾ ರಂಗ ಆತನ ಪ್ರತಿಭೆಯನ್ನು ಬಳಸಿಕೊಳ್ಳಲು ಮನಸು ಮಾಡಿತು. ಕೆಲವು ಚಿತ್ರಗಳಲ್ಲಿ ನಟಿಸಿದ. ಛಾಪು ಮೂಡಿಸಿದ. ಮುಂದೆ ನಾಗಾಭರಣರ ಸಹ ನಿರ್ದೇಶಕನಾಗಿ ಕೆಲಸ ಮಾಡತೊಡಗಿದ ನಟರಾಜ ‘ನಾಗಮಂಡಲ’, ‘ವಿಮೋಚನೆ’, ‘ನೀಲಾ’ಗಳಿಂದ ಆರಂಭಿಸಿ ‘ಸಿಂಗಾರೆವ್ವ’ದ ತನಕ ಅವರೊಂದಿಗೆ ಉಳಿದ. ಕನ್ನಡದಲ್ಲಿ ಖಾಸಗಿ ಚಾನೆಲ್ಲುಗಳು ಶುರುವಾಗುವ ತನಕ ನಟರಾಜ ಪಟ್ಟ ಪಾಡು ಅಷ್ಟಿಷ್ಟಲ್ಲ. ಆತ ನಟನಾಗಿ, ತಂತ್ರಜ್ಞನಾಗಿ ಕಿರುತೆರೆಯಲ್ಲಿ ಶ್ರಮಿಸಿದ.

ಆದರೂ ನಟರಾಜನನ್ನು ನಾಡು ಗುರುತಿಸಿದ್ದು ಒಬ್ಬ ‘ಅದ್ಭುತ ನಟ’ ಎಂದೇ.

ಕನ್ನಡದಲ್ಲಿ ಮೆಗಾ ಧಾರಾವಾಹಿಗಳ ಹಾವಳಿ ಶುರುವಾಯಿತು ನೋಡಿ. ಆಗ ತಕ್ಕ ಮಟ್ಟಿಗೆ ನಟರಾಜನಿಗೆ ಅವಕಾಶಗಳು ಸಿಗಲಾರಂಭಿಸಿದವು. ನಾಗಾಭರಣ ನಿರ್ದೇಶನದ ‘ಸಂಕ್ರಾಂತಿ’ಯ ಶೇಷಪ್ಪನಾಗಿ ಇಂದಿಗೂ ನಟರಾಜ ಜನರ ಮನದಲ್ಲಿ ಉಳಿದಿದ್ದಾನೆ.

ಈ ಹೊತ್ತಿಗಾಗಲೇ ನಾನು ಈಟೀವಿ ಸೇರಿದ್ದೆ. ಆರಂಭದಲ್ಲಿ ಎಲ್ಲ ಧಾರಾವಾಹಿಗಳ ಚಿತ್ರೀಕರಣ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲೇ ನಡೆಯುತ್ತಿತ್ತು.

‘ಶ್ರೀ ವೆಂಕಟೇಶ ಮಹಿಮೆ’ ಧಾರಾವಾಹಿಯಲ್ಲಿ ನಟರಾಜನದು ನಾರದನ ಪಾತ್ರ. ಅದಕ್ಕಾಗಿ ಹೈದರಾಬಾದಿಗೆ ಬರುತ್ತಿದ್ದ. ನನ್ನ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದ. ತಾನೂ ಏನಾದರೂ ಒಂದು ಧಾರಾವಾಹಿ ಕೈಗೆತ್ತಿಕೊಳ್ಳಬೇಕು ಎಂಬ ಹಂಬಲ ಅವನಿಗೆ.

”ಒಂದಿಷ್ಟು ಮಂದೀ ಗೆಳಿಯಾರ್ನ ಕೂಡ್ಸಿ, ರೊಕ್ಕಾ ಹಾಕ್ಸಿ, ಧಾರಾವಾಹಿ ಮಾಡಬೇಕು ಅಂತೈತಿ ನನ ಮನಸಿನ್ಯಾಗ,” ಅಂದ.

”ಬ್ಯಾಡಾ. ಯಾರಾದ್ರೂ ಪ್ರೊಡ್ಯೂಸರ್ ಸಿಕ್ರ ಮಾಡು,” ಅಂದೆ ನಾನು. ಅವನ ಮನಸ್ಸಿನಲ್ಲಿ ತನ್ನ ತಂದೆಯ ಕಂಪನಿಯ ಪ್ರಮುಖ ನಾಟಕಗಳಾದ ‘ಮಾವ ಬಂದನಪೋ ಮಾವ…’ ಮತ್ತು ‘ಖಾದೀ ಸೀರೆ’ಗಳನ್ನು ಧಾರಾವಾಹಿಯನ್ನಾಗಿ ಮಾಡಬೇಕೆಂಬ ಆಸೆ ಬಲವಾಗಿತ್ತು.

ಆದರೆ, ಆಗ ಒಂದಾದಮೇಲೊಂದು ಅಭಿನಯದ ಅವಕಾಶಗಳು ಬರತೊಡಗಿ, ನಿರ್ದೇಶಕನಾಗುವ ವಿಚಾರ ಹಿಂದೆಯೇ ಉಳಿಯಿತು.

‘ಗೋಧೂಳಿ’, ‘ನಾಕು ತಂತಿ’, ‘ಸುಕನ್ಯ’… ಹೀಗೆಯೇ ಸಾಗುತ್ತಿದ್ದಾಗ ಈಟೀವಿಯ ‘ಇದು ಎಂಥಾ ಲೋಕವಯ್ಯಾ’ ಎಂಬೊಂದು ಧಾರಾವಾಹಿಯನ್ನು ನಿರ್ದೇಶಿಸುವ ಅವಕಾಶ ನಟರಾಜನಿಗೆ ಒದಗಿತು. ತುಂಬ ಉತ್ಸಾಹದಿಂದಲೇ ಕೆಲಸ ಶುರು ಮಾಡಿದ. ಚಿತ್ರೀಕರಣವೂ ಶುರುವಾಯಿತು. ಎಲ್ಲಿ ಏನು ಎಡವಟ್ಟಾಯಿತೋ… ಅದು ಬಹಳ ದಿನ ನಡೆಯಲಿಲ್ಲ. ನಟರಾಜ ತುಂಬ ಮನಸ್ಸಿಗೆ ಹಚ್ಚಿಕೊಂಡ. ಆ ಮೇಲೆ ಮತ್ತೆ ಕೆಲವು ಹೊಸ ಚಾನೆಲ್ಲುಗಳು ಕನ್ನಡದಲ್ಲಿ ಶುರುವಾದಾಗ ಮತ್ತೆ ಆಸೆ ಚಿಗುರಿತು. ‘ಕಿನ್ನರಿ’ ಎಂಬ ಧಾರಾವಾಹಿಯನ್ನು ಕೈಗೆತ್ತಿಕೊಂಡ. ಆದರೆ ಅದು ಕೂಡ ಹೆಚ್ಚು ದಿನ ಮುಂದುವರಿಯಲಿಲ್ಲ.

”ಇದಕ್ಕೇನು ಕಾರಣ…?” ಎಂದು ಆ ಧಾರಾವಾಹಿಯ ನಟನೊಬ್ಬನನ್ನು ಕೇಳಿದೆ.

”ನಟರಾಜ ಒಬ್ಬ ಅನುಭವೀ ನಟ. ಆದರೆ, ನಿರ್ದೇಶಕನಾಗಿ ಆತ ಗೆಲ್ಲಲಿಲ್ಲ… ಅದಕ್ಕೆ ಕಾರಣ ಎಲ್ಲ ನಟರನ್ನೂ ಹೀಗೆಯೇ ಅಭಿನಯಿಸಿ ಎಂದು ಒತ್ತಾಯಿಸುತ್ತಿದ್ದದ್ದು… ಆದರೆ, ಹಿರಿಯ ನಟನಾಗಿ ನಟರಾಜ ನೀಡುತ್ತಿದ್ದ ಸಲಹೆಗಳಿವೆಯಲ್ಲ, ಅವು ನಮಗೆಲ್ಲ ತುಂಬ ‘ಮಾರ್ಗದರ್ಶಕ’ವೆನಿಸಿದವು…” ಎಂಬ ಪ್ರಾಂಜಲ ಉತ್ತರ ಅವನಿಂದ ಬಂತು.

ಕೆಲವು ತಿಂಗಳುಗಳ ಹಿಂದೆ ಒಮ್ಮೆ ಬೆಂಗಳೂರಿಗೆ ಬಂದವ ನನಗೆ ಫೋನ್ ಮಾಡಿದ.

”ಅಣ್ಣಾ… ನನಗ ಧಾರವಾಡ ರಂಗಾಯಣದ ನಿರ್ದೇಶಕ ಆಗು ಅಂತ ಸಂಸ್ಕೃತಿ ಇಲಾಖೆಯವರು ಗಂಟು ಬಿದ್ದಾರ… ಏನ್ ಮಾಡ್ಲಿ…?” ಎಂದು ಕೇಳಿದ.

”ಸುಮ್ಮನ ‘ಹೂಂ’ ಅನ್ನು…”

”ಆದ್ರ, ನನಗ ಬ್ಯಾರೆ ಏನೂ ಕೆಲಸಾ ಮಾಡಾಕ ಆಗೂದೇ ಇಲ್ಲಲೋ ಎಪ್ಪಾ…”

”ಊಹೂಂ… ಬಂದ ಅವಕಾಶಾನ ಬಿಡಬ್ಯಾಡಾ…”

”ಹಾಂಗಿದ್ರ ನೀ ನನ್ನ ಕೂಡ ಇರ್ತೀ…?”

”ಯಾಕಿಲ್ಲಾ…? ಬೇಕಾದಾಗ ಕರಿ… ಬರ್ತೀನಿ. ನನ್ನಿಂದ ಆಗೂ ಕೆಲಸಾ ಮಾಡತೀನಿ…”

ಮುಂದೆ ಆತ ಧಾರವಾಡ ರಂಗಾಯಣದ ನಿರ್ದೇಶಕನಾಗಿ ನೇಮಕವಾದ ಸುದ್ದಿ ತಿಳಿದು ಫೋನ್ ಮಾಡಿದರೆ, ಆತ ಆ ಹಿಗ್ಗಿನಲ್ಲಿ ಜಗ್ಗಷ್ಟು ಹಿಗ್ಗಿ ಕೂತಿದ್ದ…

ಧಾರವಾಡ ರಂಗಾಯಣದ ನಿರ್ದೇಶಕನಾದ ಮೇಲೆ ನಟರಾಜ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ ಬಗ್ಗೆ ಆಗೀಗ ವರದಿಗಳನ್ನು ಓದುತ್ತಿದ್ದೆ ಹೊರತು ಆತ ಮಾತಿಗೆ ಸಿಕ್ಕಲಿಲ್ಲ. ಫೋನ್ ಮಾಡಿದರೂ ಏನಾದರೊಂದು ಮೀಟಿಂಗೋ, ಸೆಮಿನಾರೋ ನಡೆದಿರಬೇಕು… ನಾನು ಸುಮ್ಮನೇ ಮೆಸ್ಸೇಜ್ ಬಿಟ್ಟು ಆತನ ಫೋನಿಗಾಗಿ ಕಾಯಬೇಕು…

-೦-

ಆತನ ಆರೋಗ್ಯ ತೀರ ಹದಗೆಟ್ಟ ಮೇಲೆ ಬರೀ ಆಸ್ಪತ್ರೆ ವಾಸವೇ ಆಯಿತು. ಯಾವುದೋ ಒಂದು ತೊಂದರೆ ಇದ್ದರೆ ಗುಣಪಡಿಸಬಹುದು… ಆದರೆ ತನ್ನ ದೇಹವನ್ನು ಗುಣಪಡಿಸಲಾರದ ಹಂತಕ್ಕೆ ತಲಪಿಸಿದರೆ ಅದಕ್ಕೆ ಯಾರು ಹೊಣೆ?

ಆಗಲೇ ನನಗೂ, ನನ್ನಂಥ ಮಿತ್ರರಿಗೂ ಸಂಕಟ ಶುರುವಾದದ್ದು…

ನೂರರ ಅಂಚನ್ನು ತಲಪಿರುವ ತಂದೆ ಮತ್ತು ತೊಂಬತ್ತರ ಗಡಿಯನ್ನು ಮುಟ್ಟುತ್ತಿರುವ ತಾಯಿಯ ಎದುರು ಮಗ ಕಣ್ಣು ಮುಚ್ಚುವುದಿದೆಯಲ್ಲ… ಅದರಂಥ ಘೋರ ಇನಾವುದಿದ್ದೀತು…?

ನಾನು ಮತ್ತು ಧನಂಜಯ ಕುಲಕರ್ಣಿ ಮತ್ತೆ ಮತ್ತೆ ಅದೇ ಕಾಳಜಿಯೊಂದಿಗೆ ನಟರಾಜನ ಬಗ್ಗೆ ಧಾರವಾಡದ ಗೆಳೆಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದದ್ದು. ಆತ ಗುಣಮುಖನಾಗಿ ಬಂದರೆ ಸಾಕು ಎಂಬುದೇ ನಮ್ಮ ನಿತ್ಯದ ಹಾರೈಕೆ ಆಗಿರುತ್ತಿತ್ತು.

ಆದರೆ ಯಾವುದು ಆಗಬಾರದು ಅಂತ ನಾವು ಬಯಸುತ್ತಿದ್ದೆವೋ ‘ಅದು’ ಆಗಿಹೋಯಿತು.

ನಟರಾಜ ‘ಪಾತ್ರವನ್ನು ಮುಗಿಸಿ’ ಎದ್ದು ಹೋಗಿಬಿಟ್ಟ.

ನಟರಾಜ ತೀರಿಕೊಂಡ ಸುದ್ದಿ ಕೇಳಿ ಕೆಲವರು ‘ಈ ಸಾವು ನ್ಯಾಯವೇ…?’ ಅಂತೆಲ್ಲ ಕಾವ್ಯಮಯವಾಗಿ ಶೋಕಿಸಿದರು.

ಆದರೆ ನಾನು, ”ಇದು ಸಾವಲ್ಲ, ಆತ್ಮಹತ್ಯೆ… ನಟರಾಜ ದಿನವೂ ಅಷ್ಟಷ್ಟೇ ತನ್ನನ್ನು ತಾನು ಕೊಂದುಕೊಂಡ…” ಎನ್ನುತ್ತೇನೆ.

ಮತ್ತು ಆತನ ನೆನಪಿನಲ್ಲಿ ಮತ್ತೆ ಮತ್ತೆ ‘ಅವ್ವ’ ಚಿತ್ರದ ಮಾಸ್ತರನನ್ನೂ, ‘ಸಿಂಗಾರೆವ್ವ’ದ ರಣಹದ್ದಿನಂಥ ಶೆಟ್ಟಿಯನ್ನೂ, ಆತನ ಆ ‘ಶೇಷಪ್ಪ’, ‘ದೇಸಾಯರು’ ಮುಂತಾದ ಪಾತ್ರಗಳನ್ನೂ ಮೆಲುಕು ಹಾಕುತ್ತ ಕೂಡುತ್ತೇನೆ…

10 Comments

 1. MANDYA RAMESH
  July 24, 2012
 2. ಸುಧಾ ಚಿದಾನಂದಗೌಡ
  July 10, 2012
 3. Srikanth
  July 9, 2012
 4. ಹಿಪ್ಪರಗಿ ಸಿದ್ದರಾಮ್
  July 9, 2012
 5. SK
  July 9, 2012
 6. Gopal Wajapeyi
  July 9, 2012
  • D.RAVI VARMA
   July 9, 2012
 7. Nataraju S M
  July 9, 2012
 8. prakash hegde
  July 9, 2012
 9. D.RAVI VARMA
  July 9, 2012

Add Comment

Leave a Reply