Quantcast

ಗೋಪಾಲ ವಾಜಪೇಯಿ ಕಾಲಂ : ಅಲ್ಲಿ ಬಂದರು ಬೇಂದ್ರೆ…

ಸುಮ್ಮನೇ ನೆನಪುಗಳು – 20

ನಮ್ಮ ಊರಿನ ‘ಒನ್ನೇ ನಂಬರ್ ಸಾಲಿ’ಯಲ್ಲಿ ಆರನೆಯ ಇಯತ್ತೆಯ ತನಕ ಓದಿದೆ ಎಂದೆನಲ್ಲ… ಮನೆಯ ಪರಿಸ್ಥಿತಿ ಸರಿಯಾಗಿರದ ಕಾರಣ ಆ ನಂತರ ನಾನು ಊರು ಬಿಡಬೇಕಾಯಿತು.

ಅದಕ್ಕೂ ಮುನ್ನ ನಮ್ಮ ಹಿರಿಯರೆಲ್ಲ ಒಂದೆಡೆ ಸೇರಿ, ”ಅಪ್ಪ ಇಲ್ಲದ ಈ ಹುಡಗನ್ನ ಓದಿಸಿ, ಬೆಳಸಿ, ದೊಡ್ದಾವನ್ನಾಗಿ ಮಾಡೂದು ನಮ್ಮೆಲ್ಲಾರ ಕರ್ತವ್ಯ… ಮ್ಯಾಟ್ರಿಕ್ ತನಕಾ ಓದಲಿಕ್ಕೆ ನಾವೆಲ್ಲಾ ಹ್ಯಾಂಗಾರೆ ಮಾಡಿ ಮದತ್ ಮಾಡೂಣು,” ಎಂಬ ನಿರ್ಧಾರಕ್ಕೆ ಬಂದಿದ್ದರು. ವರ್ಷಕ್ಕೆ ಒಬ್ಬರಂತೆ ನನ್ನ ‘ಹೊಣೆ’ಯನ್ನು ಹೊರಲು ಸಿದ್ಧರಾಗಿದ್ದರು ಆ ಕರುಣಾಳುಗಳು…

ಹೀಗೆ ಶುರುವಾಯಿತು ನನ್ನ ‘ವಿದ್ಯಾಯಾನ.’

ಎಷ್ಟು ಊರುಗಳು, ಎಷ್ಟು ಮನೆಗಳು…! ಎಷ್ಟು ಊರುಗಳ ಎಷ್ಟು ಬಗೆಯ ನೀರುಗಳು…! ಎಷ್ಟೆಲ್ಲ ಮಾತೆಯರ ಕೈತುತ್ತಿನ ರುಚಿಗಳು…! ಎಷ್ಟೆಲ್ಲ ಹಿರಿಯರ ‘ಕೈಹಿಡಿದು ಮುನ್ನಡೆಸುವಿಕೆ’ಗಳು…! ಎಷ್ಟೆಲ್ಲ ನೋಟಗಳು, ಎಷ್ಟೆಷ್ಟು ಆಟಗಳು…! ಎಷ್ಟೊಂದು ತರಹದ ‘ಪಾಠ’ಗಳು…! ಎಷ್ಟೊಂದು ರೀತಿಯ ‘ಅನುಭವ’ಗಳು…!

ಆದದ್ದೆಲ್ಲಾ ಒಳಿತೇ ಆಯಿತು…

ಈ ನನ್ನ ‘ವಿದ್ಯಾಯಾನ’ದ ಮೊದಲ ನಿಲ್ದಾಣವೇ ಧಾರವಾಡ…

ಧಾರವಾಡ… !

ಹೆಸರು ಕೇಳಿದ ಕೂಡಲೇ ಬೇಂದ್ರೆ, ಬೆಟಗೇರಿ, ಶಂ.ಬಾ., ಮನಸೂರ, ಕಣವಿಯವರ ಚಿತ್ರಗಳು ನಿಮ್ಮೆದುರು ಕುಣಿಯುತ್ತವೆ ಎಂಬುದು ನನಗೆ ಗೊತ್ತು. ಹಾಗೆಯೇ ಅಲ್ಲಿಯ ಲೈನ್ ಬಜಾರ್ ಪೇಡಾ ನೆನಪಾಗಿ ನಾಲಿಗೆ ನೀರೂರುತ್ತದೆ…

ಬನ್ನಿ, ನಾನೀಗ ನಿಮ್ಮನ್ನು ಸುಮಾರು ಐವತ್ತು ವರ್ಷಗಳ ಹಿಂದಿನ ಧಾರವಾಡಕ್ಕೆ ಕರೆದೊಯ್ಯುತ್ತೇನೆ. ‘ಮಲೆನಾಡಿನ ಸೆರಗು’ ಎಂದೇ ಪ್ರಸಿದ್ಧವಾದ ಧಾರವಾಡಕ್ಕೆ.

‘ವಿದ್ಯಾನಗರಿ’ ಎಂಬ ಬಿರುದು ಹೊತ್ತ ಧಾರವಾಡಕ್ಕೆ.

‘ಏಳು ಮರಡಿಗಳ ಮೇಲಿರುವ ಊರು’ ಈ ಧಾರವಾಡ. ಮರಡಿ ಅಥವಾ ಮೊರಡಿ ಎಂದರೆ ಬೆಟ್ಟಕ್ಕಿಂತ ಚಿಕ್ಕದು, ದಿಬ್ಬಕ್ಕಿಂತ ದೊಡ್ಡದು. ಅದೇ ಆಡುಮಾತಿನಲ್ಲಿ ‘ಮಡ್ಡಿ’ಯಾಗಿದೆ. ನಿಮ್ಮಲ್ಲಿ ಅನೇಕರಿಗೆ ಧಾರವಾಡದ ಮಾಳಮಡ್ಡಿ ಪ್ರದೇಶ ಗೊತ್ತು ಎಂದು ಭಾವಿಸಿದ್ದೇನೆ. ಅಲ್ಲಿಯೇ ಹಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪಟು ಬಸವರಾಜ ರಾಜಗುರುಗಳು ಇದ್ದದ್ದು… ಹಿರಿಯ ವಿಮರ್ಶಕ ಲೇಖಕ ಶಂಕರ ಮೊಕಾಶಿ ಪುಣೇಕರ್ ವಾಸಿಸಿದ್ದು… ಹಿಂದಿ ಚಿತ್ರ ರಂಗದಲ್ಲಿ ಮನೆಮಾತಾಗಿ ಮೆರೆದ ಲೀನಾ ಚಂದಾವರಕರ್ ಹುಟ್ಟಿ ಬೆಳೆದದ್ದು…

ಇಲ್ಲಿಯ ಸುತ್ತಮುತ್ತಲಿನ ಭೂಮಿಯಲ್ಲಿ ‘ಮಮತೆ’ ತುಂಬಿದೆ. ಅದು ಅನುಭವಕ್ಕೆ ಬರಬೇಕೆಂದರೆ ನೀವು ಮಾವಿನ ಹಣ್ಣಿನ ಸೀಜನ್ನಿನಲ್ಲಿ ಇಲ್ಲಿಗೆ ಬರಬೇಕು. ನಿಮ್ಮ ತಲೆಗೆ ತಾಗುವಷ್ಟು ಎತ್ತರದಲ್ಲೇ ಮಾವಿನ ಪಾಡುಗಾಯಿಗಳು ಒಲವಿನಿಂದ ಓಲಾಡುತ್ತಿರುತ್ತವೆ. ಇದು ‘ಕಲ್ಮಿ’ ಮಾವು. ಉಳಿದ ದಿನಗಳಲ್ಲಾದರೆ ನವಲೂರ ಪೇರಳೆಯಂತೂ ಇದ್ದೇ ಇದೆ. ಬಂಗಾರ ಬಣ್ಣದ ಹಣ್ಣನ್ನು ಕತ್ತರಿಸಿದರೆ ಒಳಗೆಲ್ಲ ಗಾಢ ಗುಲಾಬಿ ಬಣ್ಣದ ತಿರುಳು… ಜೊತೆಗೆ ಅದರದೇ ಆದ ಘಮ… !

ಹಾಂ, ಐವತ್ತು ವರ್ಷಗಳ ಹಿಂದೆ ಈ ಊರಲ್ಲಿನ್ನೂ ಅನೇಕ ಕೆರೆಗಳಿದ್ದವು. ಅವುಗಳಿಗೆಲ್ಲ ಒಂದೊಂದು ಹೆಸರೂ ಇದ್ದವು : ‘ಎಮ್ಮೀಕೇರಿ’, ‘ಕೊಪ್ಪದಕೇರಿ’, ‘ಕೆಂಪೀಗೇರಿ’, ‘ಹಾಲಗೇರಿ’ ಮತ್ತು ನೋಡಿರದಿದ್ದರೂ ನೀವು ಕೇಳಿ ಬಲ್ಲಂಥ ‘ಸಾಧನಕೇರಿ’… ಹೀಗೆ ಇನ್ನೂ ಹಲವು…

ಅರೆ, ‘ಕೆರೆಗಳು’ ಎನ್ನುತ್ತೀರಿ, ಯಾವುದೋ ಕೇರಿಗಳ ಹೆಸರು ಹೇಳುತ್ತಿದ್ದೀರಿ ಎಂದು ಗೊಣಗಬೇಡಿ. ನಮ್ಮಲ್ಲಿ ಮರಾಠಿಯ ಪ್ರಭಾವದಿಂದಾಗಿ ಎಳೆದೆಳೆದು ಹೇಳುವ ಚಟ ಬೆಳೆದುಬಿಟ್ಟಿದೆ. ಆ ಜನ ಹಾಗೆಯೇ. ‘ಪೆನ್’ ಅವರ ಬಾಯಲ್ಲಿ ‘ಪೇನ್’ ಆಗುವುದನ್ನು ಕೇಳುವಾಗ ನಮಗೆ ನಿಜವಾಗಿಯೂ ನೋವಾಗುತ್ತದೆ. ನಾವು ‘ಟೆಸ್ಟ್’ ಮಾಡಲು ಕುಳಿತರೆ, ಅವರು ‘ಟೇಸ್ಟ್’ ಮಾಡತೊಡಗುತ್ತಾರೆ. ಇರಲಿ. ಧಾರವಾಡದ ಕೆರೆಗಳ ಬಗ್ಗೆ ಹೇಳುತ್ತಿದ್ದೆ. ಇಲ್ಲಿದ್ದ ಕೆರೆಗಳ ಪೈಕಿ ಲೈನ್ ಬಜಾರಿನ ಹತ್ತಿರವಿದ್ದ ಕೆಂಪೀಗೇರಿ ಮತ್ತು ಊರ ನಡುವಿದ್ದ ಹಾಲಗೇರಿಗಳು ವಿಸ್ತಾರದಲ್ಲಿ ಬಲು ದೊಡ್ಡವು.

ನೀವು ಧಾರವಾಡದ ಹಳೆಯ ಬಸ್ ನಿಲ್ದಾಣದಿಂದ ಹೊರಗೆ ಬಂದು ಬಲಕ್ಕೆ ಹೊರಳಿ ಹಾಗೇ ಸಾಗಿದರೆ ಸಿಗುವುದೇ ಸುಭಾಸ ರಸ್ತೆ. ಅದರ ಎಡಕ್ಕೆ ಅಂಗಡಿಸಾಲುಗಳ ಹಿಂದೆ ಬಲು ವಿಸ್ತಾರವಾಗಿ ಹರಡಿಕೊಂಡ ತರಕಾರಿ ಮಾರುಕಟ್ಟೆ ಕಾಣುತ್ತದೆ. ಈ ಪ್ರದೇಶ ಆ ಕಾಲಕ್ಕೆ ಒಂದು ದೊಡ್ಡ ಕೆರೆ. ಹೆಸರು ‘ಹಾಲಗೇರಿ’. ಅದನ್ನು ಎಡಕ್ಕಿಟ್ಟುಕೊಂಡೇ ಮುನ್ನಡೆದರೆ ನೀವು ಗಾಂಧೀ ಚೌಕ ಎಂಬಲ್ಲಿಗೆ ಬರುತ್ತೀರಿ. ಇಲ್ಲಿ ರಸ್ತೆ ಮೂರು ಟಿಸಿಲೊಡೆಯುತ್ತದೆ… ನೇರ ಹೋದರೆ ಮಂಗಳವಾರ ಪೇಟೆ. ಬಲಕ್ಕೆ ಹೊರಳಿ ಮುಂದುವರಿದರೆ ಹೊಸ ಯಲ್ಲಾಪುರ. ಚೌಕದ ಎಡ ರಸ್ತೆಯತ್ತ ತಿರುಗಿದರೆ ಸಿಗುವುದೇ ‘ಕೆರೀ ತೆಳಗಿನ ಓಣಿ.’ (‘ಕೆಳಗಿನ’ ಎಂಬುದು ನಮ್ಮವರ ಬಾಯಲ್ಲಿ ‘ತೆಳಗಿನ’ ಆಗಿದೆ.) ಕೆರೆಗೆ ಅತಿ ಸಮೀಪವಿದ್ದ ಕಾರಣ ಇಲ್ಲಿಯ ಮನೆಗಳೆಲ್ಲ ಆಗ ಸದಾ ತಂಪಿನ ತಾಣವಾಗಿರುತ್ತಿದ್ದವು. ನೆಲಕ್ಕೆ ಕಲ್ಲು ಹಾಸು ಇದ್ದರಂತೂ ಅಲ್ಲಿ ಕಾಲುಗಳು ಜುಮುಗುಡುವಷ್ಟು ತಂಪು. ನೆಲಮಟ್ಟದಿಂದ ಸ್ವಲ್ಪ ಮೇಲಿದ್ದ ಮನೆಗಳಲ್ಲಿ ಈ ಸಮಸ್ಯೆ ಇರುತ್ತಿರಲಿಲ್ಲ.

ಈ ‘ಕೆರೀ ತೆಳಗಿನ ಓಣಿ’ಯ ಮೂಲಕ ಹಾದು ಹೋಗುವ ರಸ್ತೆಗೆ ‘ಶಿವಾಜಿ ಬೀದಿ’ ಅಥವಾ ‘ಶಿವಾಜಿ ರಸ್ತೆ’ ಎಂದು ಹೆಸರು.

ಈ ಬೀದಿಯಲ್ಲೇ ಶುರುವಾಯಿತು ನನ್ನ ‘ವಿದ್ಯಾಯಾನ’…

ಬನ್ನಿ… 1964ರ ಅವಧಿಯ ಶಿವಾಜಿ ಬೀದಿಗೆ ಹೋಗೋಣ.

ಆಗ ಈ ಬೀದಿಯಲ್ಲಿದ್ದ ‘ರಿಸ್ಬೂಡ್ ಚಾಳ್ ‘ನಲ್ಲಿದ್ದರು ವೇದಬ್ರಹ್ಮ ಮಹಾದೇವ ಭಟ್ಟ ಸದರಜೋಶಿಯವರು. ನನ್ನ ‘ವಿದ್ಯಾಯಾನ’ದ ಯೋಜನೆಯನ್ನು ರೂಪಿಸಿದವರೇ ಈ ಮಹಾದೇವ ಭಟ್ಟರು. ಅವರ ಧರ್ಮಪತ್ನಿಯೇ ನಮ್ಮ ಸೋದರತ್ತೆ. ಆಕೆ ನನಗೆ ಒಂದರ್ಥದಲ್ಲಿ ಅಜ್ಜಿಯೂ ಹೌದು. ನನ್ನ ಅವ್ವನ ದೊಡ್ಡಮ್ಮ. (‘ಸದ್ದು ಮಾಡುವ ರೊಟ್ಟಿ’ ನೆನಪಿಸಿಕೊಳ್ಳಿ. ನನ್ನ ಅವ್ವನನ್ನು ಕಿಲ್ಲೆಗೆ ಕರೆದೊಯ್ದು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದ್ದವಳು ಇದೇ ಅಜ್ಜಿ.) ದಂಪತಿ ಇಬ್ಬರೂ ಧಾರಾಳಿಗಳು.

ಮಹಾದೇವ ಭಟ್ಟರ ಹಿರಿಯ ಮಗ ತಮ್ಮಣ್ಣ ಮಾಮಾ… ಪ್ರಾಥಮಿಕ ಶಾಲಾ ಮಾಸ್ತರ್. ಆತ ಕೆಲಸ ಮಾಡುತ್ತಿದ್ದ ಶಾಲೆಯಲ್ಲೇ ನನ್ನನ್ನೂ ಸೇರಿಸಿದ್ದಾಯಿತು.

ಸರಕಾರೀ ಶಾಲೆ ಆದ್ದರಿಂದ ನನಗೆ ಫೀಜು-ಗೀಜುಗಳ ಗೋಜೇ ಇರಲಿಲ್ಲ. ಇನ್ನು ಪುಸ್ತಕ, ನೋಟ್ ಬುಕ್ಕು, ಬಟ್ಟೆಬರೆಗಳು… ದಯಾಳುಗಳು ತಮ್ಮ ಹುಡುಗರು ಓದಿ ಬಿಟ್ಟ ಪುಸ್ತಕಗಳನ್ನು ನನಗೆ ಕೊಡುತ್ತಿದ್ದರು. ಇನ್ನು ನೋಟ್ ಬುಕ್ ವ್ಯವಸ್ಥೆ ತಮ್ಮಣ್ಣ ಮಾಮಾನ ಹೊಣೆ. ನಮ್ಮ ಇತರ ಸಂಬಂಧಿಕರ ಮಕ್ಕಳು ಹಾಕಿಕೊಂಡು ಬಿಟ್ಟ ಅಂಗಿ-ಪ್ಯಾಂಟುಗಳನ್ನೇ ನಮ್ಮ ಅವ್ವ (ನಮ್ಮ ಊರಲ್ಲಿಯೇ ಇದ್ದ ಆಕೆ ಉಪಜೀವನಕ್ಕೆ ಬಟ್ಟೆ ಹೊಲಿಯುತ್ತಿದ್ದಳು) ಆಲ್ಟರ್ ಮಾಡಿ ಕಳಿಸುತ್ತಿದ್ದಳು.

ಆಯಿತಲ್ಲ, ಮತ್ತಿನ್ನೇನು ಬೇಕು…?

-0-0-0-

ಆ ವರ್ಷದ ಮೇ 27ರಂದು ಶುರುವಾಯಿತು ಶಾಲೆ…

ನಾನು ಹೊಸ ಶಾಲೆಯಲ್ಲಿ ಕಾಲಿರಿಸಿದ ಮೊದಲ ದಿನ. ಹೊಸ ಸಹಪಾಠಿಗಳು, ಹೊಸ ಮಾಸ್ತರುಗಳು, ಹೊಸ ವಾತಾವರಣ…

ಅವತ್ತು ನಮ್ಮೆಲ್ಲರ ‘ಹಾಜರಿ’ ತೊಗೊಂಡ ಮಾಸ್ತರರು ಮೊದಲು ಒಬ್ಬೊಬ್ಬರನ್ನೇ ಪರಿಚಯಿಸಿಕೊಂಡರು. ಕನ್ನಡ ಆಯಿತು, ಇಂಗ್ಲಿಷ್ ಆಯಿತು, ಹಿಂದಿ ಪಾಠ ಮುಗಿದರೆ ಒಂದಷ್ಟು ವಿರಾಮ.

ಅದನ್ನು ಮುಗಿಸಿಕೊಂಡು ಬರುತ್ತಿದ್ದಂತೆಯೇ ಮುಖ್ಯಗುರುಗಳು ಒಳಗೆ ಬಂದರು. ಶುಭ್ರ ಮಲ್ಲಿಗೆಯಂಥ ಬಿಳಿ ಧೋತರ, ಬಿಳಿ ಜುಬ್ಬಾ, ಬಿಳಿ ಗಾಂಧೀ ಟೋಪಿ ಧರಿಸಿದ್ದ ಅವರ ಹೆಸರು ‘ಮಲ್ಲಿಗವಾಡ ಮಾಸ್ತರು’ ಅಂತ.

ಅವರು ಬಂದವರೇ, ಕಪ್ಪು ಹಲಗೆಯ ಮೇಲೆ ಒಂದು ರೇಖಾಚಿತ್ರ ಬಿಡಿಸಿ, ”ಮಕ್ಕಳೇ, ಇವರು ಯಾರು…?” ಅಂತ ಕೇಳಿದರು.

ನಾವೆಲ್ಲ ಒಕ್ಕೊರಲಿನಿಂದ ”ಚಾಚಾ ನೆಹರೂರೀ ಸsರs…” ಎಂದು ಉತ್ತರಿಸಿದೆವು.

ಅವರು ಗದ್ಗದಿತರಾದರು. ದುಃಖಿಸುತ್ತಲೇ, ”ಮಕ್ಕಳೇ… ಇವತ್ತು ನಿಮ್ಮೆಲ್ಲರ ಪ್ರೀತಿಯ ಚಾಚಾ ನೆಹರೂ ನಿಧನರಾಗಿದ್ಡಾರೆ… ಅದಕ್ಕೇ ನಿಮಗೆಲ್ಲ ಸಾಲಿ ಸೂಟಿ…” ಎಂದರು.

ಸೂಟಿ, ರಜೆ ಎಂದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ…? ದೊಡ್ದವರೇ ‘ಹೋ’ ಎಂದು ಹಾರಾಡಿಬಿಡುತ್ತಾರೆ. ಅಂಥದರಲ್ಲಿ ನಾವು ಮಕ್ಕಳು…

ಅದು ಗೊತ್ತಿದ್ದ ಮಲ್ಲಿಗವಾಡ ಮಾಸ್ತರರು, ”ಗದ್ಲಾ ಮಾಡದ ಮನೀಗೆ ಹೋಗ್ರಿ… ನಾಳೆ, ನಾಡದ, ಅಚ್ಚೀ ನಾಡದ ಪೇಪರಿನ್ಯಾಗ ಬರೋ ಸುದ್ದೀ ಓದ್ರಿ.

ನಿಮ್ಮ ಪ್ರೀತಿಯ ಚಾಚಾ ನೆಹರೂ ಅವರ ಬಗ್ಗೆ ಒಂದೊಂದು ಪುಟದಷ್ಟು ನಿಬಂಧ ಬರಕೊಂಡು ಬರ್ರಿ…”

ಅಂದು ಬುಧವಾರ…

ನಾನು ಶಾಲೆಯಲ್ಲಿ ಕಾಲಿಟ್ಟ ‘ಗಳಿಗೆ’ಯೇ ಸರಿ ಇರಲಿಲ್ಲವೇನೋ…

-0-0-0-

ಆದರೆ, ಹೀಗೆ ಶುರುವಾದ ‘ವಿದ್ಯಾಯಾನ’ದ ಮೊದಲ ವರ್ಷ ನನ್ನ ಪಾಲಿಗೆ ಹೊಸ ಲೋಕವನ್ನೇ ತೆರೆದಿಟ್ಟಂಥದು ಎಂಬುದನ್ನಂತೂ ಮರೆಯುವ ಹಾಗಿಲ್ಲ.

ಆ ಲೋಕಕ್ಕೆ ದಾರಿಯಾದದ್ದು ಈ ಶಿವಾಜಿ ಬೀದಿಯೇ.

ಅಬ್ಬಬ್ಬಾ ಅಂದರೆ ಹದಿನೈದು ಅಡಿ ಅಗಲದ ಆ ಸಣ್ಣ ಬೀದಿ ಸಾಹಿತ್ಯ ಕ್ಷೇತ್ರದ ಮಟ್ಟಿಗೆ ತುಂಬಾ ‘ಎತ್ತರ’ದ್ದು. ಬೀದಿಯ ಆರಂಭ ಬಿಂದುವಿಗೆ ಹಿನ್ನೆಲೆಯಾಗಿ ಕಂಗೊಳಿಸುತ್ತಿದ್ದದ್ದು ಸಂಸ್ಕೃತ ಪಾಠಶಾಲೆಯ ಐದಂತಸ್ತಿನ ಪ್ರಾಚೀನ ಕಟ್ಟಡ. ಅದನ್ನು ಬೆನ್ನಿಗಿಟ್ಟುಕೊಂಡು ಹಾಗೇ ಮುಂದುವರಿದರೆ ಬಲಕ್ಕೆ ಒಂದೆರಡು ಮನೆಗಳ ಸಾಲು. ಅವುಗಳಲ್ಲಿ ಕೊನೆಯ ಮನೆಯಲ್ಲಿ ಆಗ ಇದ್ದವರು ಕನ್ನಡದ ಖ್ಯಾತ ಕವಿ, ಅನುವಾದಕ, ಉರ್ದು-ಕನ್ನಡ ಭಾಷಾ ಪಂಡಿತ ಡಾ. ಪಂಚಾಕ್ಷರಿ ಹಿರೇಮಠರು. ಅವರ ಸೋದರ ಅಳಿಯ ಸ್ವಾಮೀ ಮುಂದೆ ನನ್ನ ಗೆಳೆಯನಾದ. (ಪಂಚಾಕ್ಷರಿ ಹಿರೇಮಠರಿಗೆ ನಾನು ಇಂದಿಗೂ ‘ಪ್ರೀತಿಯ’ ಗೋಪಾಲ. ಇವತ್ತಿಗೂ ಸಿಕ್ಕರೆ ಸ್ವಾಮಿಯ ವಿಚಾರ ಪ್ರಸ್ತಾಪಿಸದೆ ಇರುವುದಿಲ್ಲ ಆ ಹಿರಿಜೀವ.)

ಅವರ ಮನೆಯೆದುರಿನ ಮಹಡಿಯಲ್ಲಿ ವಾಸಿಸಿದ್ದವರು ಕಾರ್ಮಿಕ ಹಕ್ಕುಗಳ ಹೆಸರಾಂತ ಹೋರಾಟಗಾರ ಕವಿ ಕೆ.ಎಸ್. ಶರ್ಮಾ. ಆಗ ವಿದ್ಯಾರಣ್ಯ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದ ಶರ್ಮಾಜೀ ಬಿಡುವಿದ್ದಾಗ ಮಕ್ಕಳೊಂದಿಗೆ ಚಿನ್ನಿ-ದಾಂಡು ಆಡುತ್ತಿದ್ದರು. ಅವರ ಸಹೋದ್ಯೋಗಿ ಆಗಿದ್ದವರು ಡಾ. ವಾಮನ ಬೇಂದ್ರೆ. ಅವರಿಬ್ಬರೂ (ಶರ್ಮಾ ಮತ್ತು ವಾಮನ ಬೇಂದ್ರೆ) ಹೀರೋ ಸೈಕಲ್ಲನ್ನೇರಿ ಹೀರೋಗಳಂತೆ ಹೊರಟರೆ ನಾವು ‘ಹೋ’ ಎಂದು ಅವರ ಬೆನ್ನತ್ತುತ್ತಿದ್ದೆವು. (ಆ ಕಾಲಕ್ಕೆ ಆಫೀಸು-ಗೀಫೀಸುಗಳಿಗೆ ನಡೆದುಕೊಂಡೇ ಹೋಗುವ ರೂಢಿ. ಅದಕ್ಕೇ ಅವರು ಅಷ್ಟು ಗಟ್ಟಿಯಾಗಿರುತ್ತಿದ್ದರು. ಸೈಕಲ್ ಕೊಳ್ಳುವುದೆಂದರೆ ದೊಡ್ಡ ಸಾಹಸದ ಕೆಲಸ ಆಗ. ಕೊಂಡವರಿಗೆ ಅದನ್ನು ದಿನವೂ ಲಕ ಲಕ ಹೊಳೆಯುವಂತೆ ಇಟ್ಟುಕೊಳ್ಳುವುದೇ ಒಂದು ಶೋಕಿ.)

ಅಲ್ಲಿಂದ ಹಾಗೆಯೇ ಮುಂದೆ ಸಾಗಿದರೆ ಎಡಕ್ಕೆ ‘ಸಮಾಜ ಪುಸ್ತಕಾಲಯ’ ಹಾಗೂ ‘ಪ್ರತಿಭಾ ಗ್ರಂಥ ಮಾಲೆ’ ಎಂಬ ಫಲಕಗಳನ್ನು ಹೊತ್ತು ನಿಂತ ಒಂದು ಮೂರಂತಸ್ತಿನ ಕಟ್ಟಡ. ಕನ್ನಡ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಅದ್ವಿತೀಯ ಸ್ಥಾನವನ್ನು ಗಳಿಸಿಕೊಂಡದ್ದು ‘ಸಮಾಜ ಪುಸ್ತಕಾಲಯ.’ ಅದರ ಸ್ಥಾಪಕ ಬಾಲಚಂದ್ರ ಘಾಣೇಕರರದು ಅನನ್ಯ ರೀತಿಯ ಕನ್ನಡ ಸೇವೆ. ಕರ್ನಾಟಕ ಏಕೀಕರಣ ಮತ್ತು ಭಾರತ ಸ್ವಾತಂತ್ರ್ಯಕ್ಕಾಗಿ ಬಾಲಚಂದ್ರ ಘಾಣೇಕರರು ಪಟ್ಟ ಶ್ರಮ, ಅನುಭವಿಸಿದ ಕಷ್ಟ-ನಷ್ಟಗಳದೇ ಒಂದು ಪ್ರತ್ಯೇಕ ಅಧ್ಯಾಯವಾಗುತ್ತದೆ. ಅವರು ಬಿಳಿಯರ ವಿರುದ್ಧ ಭೂಗತರಾಗಿ ಕೆಲಸ ಮಾಡಿದವರು. 1964ರ ಹೊತ್ತಿಗಾಗಲೇ ಅವರ ಮಗ ಮನೋಹರ ಘಾಣೇಕರರು ತಂದೆಯ ಪ್ರಕಾಶನ ಕಾರ್ಯವನ್ನು ಕಾಲಕ್ಕೆ ತಕ್ಕಂಥ ಸುಧಾರಣೆಗಳೊಂದಿಗೆ ಮುನ್ನಡೆಸತೊಡಗಿದ್ದರು.

ನಾನಾಗ ಹನ್ನೆರಡರ ಬಾಲಕ. ಆಗೀಗ ಆಡುತ್ತಾಡುತ್ತಾ ಅವರ ಅಂಗಡಿಗೆ ಹೋಗುತ್ತಿದ್ದೆ. ಅದೊಮ್ಮೆ ಮನೋಹರರು ರಬ್ಬರಿನಂಥ ಒಂದು ವಸ್ತುವಿನ ಮೇಲೆ ಏನೇನೋ ರೇಖೆಗಳನ್ನು ಮೂಡಿಸಿ, ಆಮೇಲೆ ಅದನ್ನು ವಿಶೇಷ ಬ್ಲೇಡಿನಿಂದ ಕೆತ್ತಿ ತೆಗೆಯುತ್ತ ಕೂತಿದ್ದರು. ”ಅದು ಏನು?” ಎಂದು ಕೇಳಿದರೆ, ”ನೀನs ಹೇಳು ನೋಡೂಣು,” ಎಂದು ಅದನ್ನು ನನ್ನೆದುರು ಹಿಡಿದರು… ”ಗುಡ್ಡ, ಗಿಡ, ಗುಡಿ…” ಅಂದೆ. ‘ಶಬಾಶ್’ ಎಂದರು. (ಮುಂದೆ 1983ರ ಸುಮಾರಿಗೆ ಹೆಗ್ಗೋಡಿನಲ್ಲಿ ನಮ್ಮ ಕಲಾವಿದ ಇಕ್ಬಾಲ್ ಅಹ್ಮದ್ ಇಂಥದೇ ಕೆತ್ತನೆ ಮಾಡುತ್ತಿದ್ದಾಗ ಅದು ‘ಲಿನೋಲಿಯಂ ಬ್ಲಾಕ್ ‘ -ಪಡಿಯಚ್ಚು- ಎಂದು ತಿಳಿಯಿತು. ಅಕ್ಷರ ಪ್ರಕಾಶನ ಹೊರ ತಂದ ನನ್ನ ‘ದೊಡ್ಡಪ್ಪ’ ನಾಟಕದ ಮುಖಪುಟದ ಪಡಿಯಚ್ಚನ್ನು ಹೀಗೇ ರೂಪಿಸಿದ್ದು.)

ಅದೊಂದು ಸಂಜೆ ಐದು-ಐದೂವರೆ ವೇಳೆಗೆ ‘ಸಮಾಜ ಪುಸ್ತಕಾಲಯ’ದ ಆ ಕಾರ್ಯಾಲಯದಲ್ಲಿ ಬಾಲಚಂದ್ರ ಘಾಣೇಕರರ ಎದುರು ಒಬ್ಬ ವೃದ್ಧರು ಜೋರು ಜೋರು ದನಿಯಲ್ಲಿ ಮಾತಾಡುತ್ತ, ನಗುತ್ತ ಕೂತಿದ್ದರು. ಅವು ಬಲು ಚಮತ್ಕಾರಿಕ ಮಾತುಗಳು.

ಕೆಟ್ಟ ಕುತೂಹಲಿ ನಾನು. ಅವರು ಯಾರು ಎಂಬುದನ್ನು ತಿಳಿದುಕೊಂಡ ಹೊರತು ಅಲ್ಲಿಂದ ಸರಿಯಬಾರದು ಎಂದು ನಿರ್ಧರಿಸಿ ಅಲ್ಲಿಯೇ ಠಳಾಯಿಸುತ್ತಲಿದ್ದೆ. ಒಂದು ಹಂತದಲ್ಲಿ ಬಾಲಚಂದ್ರ ಘಾಣೇಕರರು, ”ಆತು ಬೇಂದ್ರೆ ಮಾಸ್ತರs… ಹಂಗs ಮಾಡೂಣು… ಅದಕ್ಕೇನಂತs?”… ಎಂದಾಗ ನನ್ನ ಕಿವಿಗಳು ನಿಮಿರಿದವು. ಜತೆಗೇ ಒಂದು ಸಣ್ಣ ಡೌಟು : ಅವರು ದ.ರಾ. ಬೇಂದ್ರೆಯವರಾ? ಅಂತ… ಅಷ್ಟೊತ್ತಿಗಾಗಲೇ ನಮಗೆ ಅವರ ‘ಪಾತರಗಿತ್ತಿ ಪಕ್ಕಾ…’ ಕವಿತೆ ಪಾಠದಲ್ಲಿ ಬಂದಿತ್ತು.

ಅಲ್ಲಿಂದ ಗೆಳೆಯರ ಕೂಡ ಆಡಲು ಹೋದವ ಆ ವಿಷಯ ಮರೆತೇ ಬಿಟ್ಟಿದ್ದೆ. ಆದರೆ, ಸಂಜೆಯ ಹೊತ್ತಿಗೆ ಮನೆಗೆ ಬಂದರೆ ಮತ್ತದೇ ನಗು ಅದೇ ಆ ದನಿ… ಅಜ್ಜಿಯ ಮನೆಯ ಮೇಲಿನ ಮನೆಯಿಂದ ಕೇಳಿಸುತ್ತಿತ್ತು.

ನಾನು ಅಜ್ಜಿಯೆದುರು ನನ್ನ ಅನುಮಾನವನ್ನು ಇಟ್ಟೆ. ”ಹೌದು… ಅವರs ಬೇಂದ್ರೆಯವರು… ಮ್ಯಾಲಿನವ್ರು ಅವರ ಸಮಂಧಿಕ್ರು…” ಅಂದಳು.

ರಿಸ್ಬೂಡ್ ಚಾಳಿನಲ್ಲಿ ಒಟ್ಟು ಒಂಬತ್ತು ಮನೆಗಳು. ಕೆಳಗೆ ನಾಲ್ಕು, ಮೊದಲ ಅಂತಸ್ತಿನಲ್ಲಿ ಐದು… ಎದುರು ಬದುರು ಮನೆಗಳು. ನಟ್ಟ ನಡುವೆ ಕಲ್ಲು ಹಾಸಿನ ಅಂಗಳ. ಮೇಲಿನ ಮನೆಗಳಿಗೆ ಹೋಗಲು ಎರಡು ಕಡೆಯಿಂದ ಕಟ್ಟಿಗೆಯ ಮೆಟ್ಟಿಲುಗಳು.

ನಮ್ಮ ಅಜ್ಜಿಯ ಮನೆಯ ಮೇಲಿನ ಮನೆಯಲ್ಲಿ ಇದ್ದವರು ಜೋಶಿ ಅಂತ. ಚಿತ್ಪಾವನರು. ದಂಪತಿ ಇಬ್ಬರೇ ಇದ್ದದ್ದು. ಆತ ಪಿ.ಡಬ್ಲು.ಡಿ.ಯಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಗೃಹಸ್ಥ. ಆಕೆ ಮನೆಯಲ್ಲೇ ಇರುತ್ತಿದ್ದ ಹಿರಿಯ ಗೃಹಿಣಿ. ಆಕೆಯ ಹೆಸರು ಕಮಲಾ ಮಾಂಶಿ ಅಂತ. ಅಸಲಿಗೆ ದ.ರಾ. ಬೇಂದ್ರೆಯವರ ಹೆಂಡತಿಯ ತಂಗಿ ಈ ಕಮಲಾ ಮಾಂಶಿ. ಹೀಗಾಗಿ ಸಮಾಜ ಪುಸ್ತಕಾಲಯದಲ್ಲಿ ಕೆಲಸವಿದ್ದರೆ ಅವರ ರಿಸ್ಬೂಡ್ ಚಾಳಿನ ಭೆಟ್ಟಿ ನಿಶ್ಚಿತವೆ.

ಬೇಂದ್ರೆಯವರಿಗೆ ಜನ ಬೇಕು. ಮಾತು ಬೇಕು. ರಿಸ್ಬೂಡ್ ಚಾಳಿಗೆ ಅವರು ಬಂದರೆ ಒಂದೆರಡಾದರೂ ಮನೆಗಳವರನ್ನು ಮಾತಾಡಿಸಿಯೆ ಮುಂದೆ ಹೋಗುತ್ತಿದ್ದದ್ದು. ರಿಸ್ಬೂಡ್ ಕುಟುಂಬದವರು ಮರಾಠಿ ಭಾಷಿಕರು. ಕನ್ನಡವನ್ನೂ ಅಷ್ಟೇ ಚೆನ್ನಾಗಿ ಮಾತಾಡುತ್ತಿದ್ದರು. ಹೀಗಾಗಿ ಬೇಂದ್ರೆಯವರು ಅವರೊಂದಿಗೆ ಮಾತಾಡುವಾಗ ಎರಡೂ ಭಾಷೆಗಳು ಬಂದು ಹೋಗುತ್ತಿದ್ದವು. ಅವರ ಮಾತು ನಿಂತು ‘ನೋಡುವ’ ಹಾಗಿರುತ್ತಿತ್ತಷ್ಟೇ ಅಲ್ಲ, ಕೂತು ‘ಕೇಳುವಂತೆ’ಯೂ ಇರುತ್ತಿತ್ತು.

ಹಾಲಗೇರಿಯ ದಂಡೆಗುಂಟ ಕೂತಿರುತ್ತಿದ್ದ ಬಾಗವಾನರ ಬಳಿ ಬೇಂದ್ರೆ ಚೌಕಾಶಿ ಮಾಡುವಾಗ ನೋಡುವ ಹಾಗಿರುತ್ತಿತ್ತು.

ನನಗೆ ಬೇಂದ್ರೆಯವರನ್ನು ಹತ್ತಿರದಿಂದ ನೋಡಬೇಕು, ಅವರೊಂದಿಗೆ ಒಮ್ಮೆಯಾದರೂ ಮಾತಾಡಬೇಕು ಎಂಬ ಆಶೆ ಹೆಚ್ಚುತ್ತಲೇ ಹೋಯಿತು…

 

27 Comments

 1. Tejaswini Hegde
  January 31, 2013
 2. ಸುಮನ್ ದೇಸಾಯಿ
  November 15, 2012
 3. Pushparaj Chauta
  November 3, 2012
 4. arathi ghatikaar
  October 31, 2012
 5. arathi ghatikaar
  October 30, 2012
 6. sumathi hegde
  October 30, 2012
 7. Jayalaxmi Patil
  October 29, 2012
 8. Raghu
  October 29, 2012
 9. Mudgal Venkatesh
  October 29, 2012
 10. SHILPA
  October 28, 2012
 11. ಆನಂದ
  October 28, 2012
 12. keshav kulkarni
  October 28, 2012
 13. sumathi shenoy
  October 28, 2012
 14. pravara kottur
  October 28, 2012
 15. kln
  October 28, 2012
 16. samyuktha
  October 28, 2012
 17. Raghupathi sringeri
  October 28, 2012
 18. Guruprasad Kurtkoti
  October 28, 2012
 19. bharathi bv
  October 28, 2012
 20. ಬಸೂ
  October 28, 2012
 21. umesh desai
  October 28, 2012
 22. Atmananda
  October 28, 2012
 23. Badarinath Palavalli
  October 28, 2012
 24. Rekha Nataraj
  October 28, 2012
 25. ಬಸೂ
  October 28, 2012

Add Comment

Leave a Reply