Quantcast

ನಾಗಮಂಡಲ’ದ ಹಾಡು-ಪಾಡು!

ಸುಮ್ಮನೇ ನೆನಪುಗಳು

gowa-kalam3“ರ್ರೀ ಸ್ಸ್ವಾಮಿ… ಬನ್ರೀ ಇಲ್ಲಿ…”

ಆಗಷ್ಟೇ ಒಳಗೆ ಅಡಿಯಿಡಲೋ ಬೇಡವೋ ಅಂತ ಇದ್ದ ನಾನು ದನಿ ಕೇಳಿ, ಗಾಬರಿಯಾಗಿ ಅವರತ್ತ ನೋಡಿ, ನಿಂತಲ್ಲೇ ನಿಂತೆ.

ಅವರು ಗತ್ತಿನಿಂದ ಸುತ್ತಲಿದ್ದವರನ್ನು ಒಮ್ಮೆ ನೋಡಿ, ಮೀಸೆಯಲ್ಲೇ ನಗುತ್ತ, ”ನಿಮಗೇ… ನಿಮಗೇ ಹೇಳಿದ್ದು… ಕನ್ನಡ ಬರುಲ್ವೇನ್ರೀ ನಿಮಗೆ…? ಆಂ…? ‘ಇಲ್ಲಿ’ ಅಂದ್ರೆ ಇಲ್ಲಿ… here. ಅಂದ್ರೆ, ನನ್ನ ಎದುರ್ಗೆ… ತಿಳೀತಾ…?” ಅಂತ ತಮ್ಮೆದುರಿನ ಜಾಗದತ್ತ ತೋರ್ಬೇರಳಿನ ಸನ್ನೆ ಮಾಡಿದರು. ಸುತ್ತಲಿನವರೆಲ್ಲ ಮುಸಿ ಮುಸಿ ನಗತೊಡಗಿದರು.

ನನಗೆ ಗೊತ್ತಾಗಿಹೋಯ್ತು, ಆಸಾಮಿ ನನ್ನ ಕಾಲೆಳೆಯೋದಕ್ಕೆ ಸಿದ್ಧವಾಗಿ ಕೂತಿದ್ದಾರೆ ಅಂತ… ನಾನು ಅವರೆದುರು ಹೋಗಿ ನಿಂತೆ. ಅವರು ನನ್ನನ್ನೇ ಮಿಕಿಮಿಕಿ ನೋಡತೊಡಗಿದರು. ಅವರು ಹಾರ್ಮೊನಿಯಮ್ಮಿನ ಮೇಲೆ ಕೈತಟ್ಟುತ್ತ ,

”ಇದಕ್ಕೆ ‘ಹಾ ರ್ಮೋ ನಿ ಯ ಮ್ಮು’ ಅಂತಾರೆ… ಭಾsರವಾಗಿರತ್ತೆ… ನಿಂತ್ಕೊಂಡು ಇದನ್ನ ನುಡಿಸೋಕ್ಕಾಗಲ್ರೀ… ಅದಕ್ಕೇ, ಕೂsತ್ಕೊಳ್ಳಿ…” ಅಂತ ನನ್ನತ್ತ ನೋಡುತ್ತಲೇ ‘ಪಕ್ಕವಾದ್ಯ’ದವರತ್ತ ವಾರೆ ನೋಟ ಬೀರಿದರು. ಹೌದು. ಅವರ ಜೊತೆಗೆ ಕೆಲವರು ‘ಪಕ್ಕವಾದ್ಯ’ದವರಿರುತ್ತಿದ್ದರು ; ನಮ್ಮ ಕಡೆ ದುರಗಮುರಗಿಯವನ ಜೊತೆ ‘ಪುಂಗಾಪಾಲಾಪೆ’ ಅಂತ ಹೇಳುತ್ತಲೇ ಇರುವ ಹೆಂಗಸಿನ ಹಾಗೆ… ಇವರು ಮಾಡಿದ್ದಕ್ಕೆಲ್ಲ ಅವರು ನಗೆಗೂಡಿಸುತ್ತಿದ್ದರು…

ತಕ್ಕ ಉತ್ತರವನ್ನ ಕೊಡೋ ಯೋಚನೆಯಲ್ಲೇ ನಾನು ಅವರೆದುರು ಕೂತೆ.

”ನಿಮಗೆ ನಾವು ‘ನಾಗಮಂಡಲ’ ನಾಟಕಕ್ಕೆ ಹಾಡು ಬರೀರಿ ಅಂತ ಹೇಳಿದ್ದು ನಿಜ… ಆದ್ರೆ, ಎರಡೇ ಸಾಲು ಬರದ್ರೆ ಅದು ಪಲ್ಲವಿ ಆಗಲ್ರೀ… ನೋಡೀ… ನಾವೇ ಬೇರೆ, ನಮ್ ಸ್ಟೈಲೇ ಬೇರೆ… ನಮ್ಮ ಸ್ಟೈಲಿಗೆ ತಕ್ ಹಾಗೆ ಬರೀರೀ…” ಅಂತ ಎದುರಿದ್ದ ಹಾಳೆಯನ್ನ ನನ್ನತ್ತ ಸರಿಸಿ ಮತ್ತೆ ಸುತ್ತಮುತ್ತಲಿದ್ದವರೆಡೆ ನೋಡಿದರು… ‘ಪಕ್ಕವಾದ್ಯ’ಗಳು ಮತ್ತೆ ಸದ್ದುಮಾಡಿದವು.

ಅದು ಸಿ. ಅಶ್ವಥ್ ಸ್ಟೈಲು. ಮೂಡು ಬಂದರೆ ಅವರು ಹಾಗೇ. ಯಾರೋ ಒಬ್ಬರನ್ನ ಗೋಳು ಹುಯ್ದುಕೊಳ್ಳಬೇಕು. ಆ ಪ್ರಾಣಿಯನ್ನು ಗಾಬರಿಗೀಡುಮಾಡಿ ಕೂಡಿಸಬೇಕು. ಮತ್ತು ಕನ್ಫ್ಯೂಜನ್ನಿನ ಕೂಪಕ್ಕೆ ನೂಕಿ ತಾವು ಮಜಾ ತೆಗೆದುಕೊಳ್ಳಬೇಕು. ಸಿನಿಮಾ ಶೂಟಿಂಗೇ ಇರಲಿ, ಹಾಡುಗಳ ಕಂಪೋಜಿಂಗೇ ಇರಲಿ, ನಾಟಕದ ಹಾಡುಗಳ ಟ್ಯೂನ್ ಮಾಡುವುದೇ ಇರಲಿ ಅವರು ಯಾರನ್ನಾದರೂ ‘ಕುರಿ’ ಮಾಡಿಯೇ ಸಿದ್ಧ.

ಅವರ ಮೂಡುಗಳ ಪರಿಚಯ ನನಗೆ ಅದಕ್ಕೂ ಮೊದಲೇ, ನಾಗಾಭರಣರ ‘ಸಂತ ಶಿಶುನಾಳ ಶರೀಫ’ದ ಚಿತ್ರೀಕರಣದ ಹೊತ್ತಿನಲ್ಲಿಯೇ, ಆಗಿತ್ತು. ಕೆಲಸದ ಮಧ್ಯೆ ಅವರು ಹಾಗೆಯೇ. ಸ್ವಲ್ಪ ಮಜಾ ತೆಗೆದುಕೊಳ್ಳುವುದು. ಆಗ ‘ಬಲಿ’ಯಾಗುತ್ತಿದ್ದವರು ಆಕಸ್ಮಿಕವಾಗಿ ಅಲ್ಲಿಗೆ ಆಗಮಿಸುವ ಮಿತ್ರರು.

ಅವತ್ತು ನಾನು ‘ಕುರಿ’ಯಾಗಿದ್ದೆ ; ಕೀಟಲೆಗೆ ‘ಗುರಿ’ಯಾಗಿದ್ದೆ.

ಅದು 1989ರ ಮಾರ್ಚ್ ಎರಡನೆಯ ವಾರ ಇರಬೇಕು. ನಾನಾಗ ಬೆಂಗಳೂರಿನಲ್ಲಿಯೇ ಕೆಲಸ ಮಾಡುತಿದ್ದೆ. ಶಂಕರ್ ನಾಗ್ ಮತ್ತು ಸೂರಿ ಸೇರಿ ‘ಸಂಕೇತ್ ನಾಟಕ ತಂಡ’ಕ್ಕೆ ಕಾರ್ನಾಡರ ‘ನಾಗಮಂಡಲ’ ನಾಟಕವನ್ನು ನಿರ್ದೇಶಿಸುತ್ತಿದ್ದ ಸಂದರ್ಭ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ವಿಶಾಲ ಬಯಲಿನಲ್ಲಿ ನಡೆಯುತ್ತಲಿತ್ತು ನಾಟಕದ ತಾಲೀಮು. ಅದಕ್ಕೂ ಮೊದಲೇ ಶಂಕರ್ ನನಗೆ ‘ನಾಗಮಂಡಲ’ದ ಸ್ಕ್ರಿಪ್ಟು ಕೊಟ್ಟು, ತಮಗೆ ಎಲ್ಲೆಲ್ಲಿ ಹಾಡುಗಳು ಬೇಕು ಅಂದು ವಿವರಿಸಿದ್ದರು. ”ನೀವು ಬರೆದುಬಿಡೀಪ್ಪಾ ಹಾಡುಗಳ್ನ… ಆಮೇಲೆ ಟ್ಯೂನ್ ಮಾಡಿದರಾಯಿತು,” ಅಂತ ಅಪ್ಪಣೆ ಕೊಡಿಸಿದ್ದರಲ್ಲ ಅಶ್ವಥ್… ಆವತ್ತು ಅಲ್ಲಿಯೇ ಆ ಹಾಡುಗಳಿಗೆ ರಾಗ ಸಂಯೋಜಿಸುವ ಕೆಲಸದಲ್ಲಿ ಅವರು ಮಗ್ನರಾಗಿ ಕೂತಿದ್ದರು.

 

nagamandalಅಶ್ವಥ್ ನನ್ನನ್ನು ಗೋಳುಹುಯ್ದುಕೊಳ್ಳಲು ಆರಂಭಿಸುವ ಹೊತ್ತಿಗೆ ಸರಿಯಾಗಿ ಎಂಟ್ರಿ ತಕ್ಕೊಂಡವರು ಶಂಕರ್ ನಾಗ್. ತಮ್ಮ ದಿನದ ಶೂಟಿಂಗ್ ಮುಗಿಸಿ ಸಂಜೆಯ ಹೊತ್ತಿಗೆ ನಾಟಕದ ತಾಲೀಮಿಗೆಂದು ಚಿತ್ರಕಲಾ ಪರಿಷತ್ತಿಗೆ ಧಾವಿಸುತ್ತಿದ್ದರು ಶಂಕರ್.

”ಎಲ್ಲಿಗೆ ಬಂತು ಸಾರ್ ಟ್ಯೂನಿಂಗು?” ಅಂತ ಶಂಕರ್ ಕೇಳಿದರೆ, ”ಏನ್ ಮಣ್ಣಾಂಗಟ್ಟಿ ಟ್ಯೂನಿಂಗು?? ಸಾಂಗೇ ಪೂರ್ತಿ ಆಗಿಲ್ಲಾ…” ಅಂತ ಅಶ್ವಥ್. ನನಗೆ ಗಾಬರಿ.

”ಏನಾಯ್ತು ಸಾರ್…? ಎಲ್ಲಾ ಹಾಡುಗಳ್ನೂ ಪೂರ್ತಿ ಬರದುಕೊಟ್ಟಿದ್ದಾರಲ್ಲಾ ಗೋವಾ…”

(ಈ ‘ಗೋವಾ’ ಎಂಬುದು ನನ್ನ ಪೂರ್ತಿ ಹೆಸರಿನ ಹೃಸ್ವರೂಪ. ಕಾವ್ಯನಾಮ ಕೂಡ. ಶಂಕರ್ ಗೆ ತುಂಬಾ ಇಷ್ಟವಾದ ಹೆಸರಿದು. ‘ಟಿಂಗ್ ಟಾಂಗ್’ ಲಯದಲ್ಲಿ ಅವರು ನನ್ನನ್ನು ‘ಗೋವಾ’ ಕರೆಯುತ್ತಿದ್ದುದೇ ಒಂದು ಸೊಗಸು. ಅದೆಷ್ಟು ಪ್ರೀತಿ ತುಂಬಿರುತ್ತಿತ್ತು ಅವರ ದನಿಯಲ್ಲಿ…!)

”ಏನ್ ಬರದುಕೊಡ್ತಾರೆ? ಫಸ್ಟ್ ಸಾಂಗಿನ ಪಲ್ಲವಿಗೆ ಇನ್ನೂ ಎರಡು ಲೈನ್ ಬೇಕು…”

”ಅಬ್ಬಾ…! ಅಷ್ಟೇನಾ…! ಇಷ್ಟು ಹೇಳಿಬಿಟ್ಟಿದ್ರೆ ಆಗಿರೋದಲ್ವಾ ಗುರುವೇ? ಪಲ್ಲವಿಯಲ್ಲಿ ಏನು ಬೇಕು ಹೇಳಿ ನನಗೆ. ಫಟಾಫಟ್ ಬರದುಕೊಡ್ತೀನಿ…” ಅಂದೆ.

”ಹೂಂ… ಆಯ್ತಾಯ್ತು… ಕೇಳಿ ಸರಿಯಾಗಿ,” ಅಂತ ಹಾರ್ಮೊನಿಯಮ್ಮಿನ ಮೇಲೆ ಕೈ ತಟ್ಟುತ್ತ ಹಾಡತೊಡಗಿದರು ಅಶ್ವಥ್.

ಹಿಂಗಿದ್ದಳೊಬ್ಬಳು ಹುಡುಗಿ

ದಿವಿನಾದ ರೂಪಿನ ಬೆಡಗಿ

ತತಿ ತತೆಯ ತತತಿತಾ ತತತಿ

ತತಿತತ್ತತಾತೆತಾ ತತತೀ

 

ಹಿಂಗಿದ್ದಳೊಬ್ಬಳು ಹುಡುಗಿ

”ನೋಡ್ರಿ, ಆ ‘ತತಿ ತತೆಯ ತತತಿತಾ ತತತಿ’ ಮತ್ತೆ ‘ತತಿತತ್ತತಾತೆತಾ ತತತೀ’ ಇರೋ ಕಡೆ ಮೀಟರಿಗೆ ಸರಿಯಾಗಿ ಒಳ್ಳೇ ವರ್ಡ್ಸ್ ಹಾಕಿ…”

ಈ ಸಂಗೀತ ಸಂಯೋಜಕರು ಹೀಗೆಯೇ. ಅವರ ದೃಷ್ಟಿಯಲ್ಲಿ ಟ್ಯೂನಿಗೆ ಬರೆಯುವುದೆಂದರೆ ವರ್ಡ್ಸ್ ಹಾಕುವುದು… ಅಂದರೆ ಶಬ್ದಗಳನ್ನು ತುಂಬುವುದು… ಅಷ್ಟೇ.

ನಾನು ಬರೆದುಕೊಟ್ಟೆ.

nagamandala-casette-cover

ಹಿಂಗಿದ್ದಳೊಬ್ಬಳು ಹುಡುಗಿ

ದಿವಿನಾದ ರೂಪಿನ ಬೆಡಗಿ

ಹದಿ ಹರೆಯ ಮನಸಿನಾ ತುಡುಗಿ

ನವಿಲಾಂಗ ಆಕಿಯಾ ನಡಿಗೀ

ಹಿಂಗಿದ್ದಳೊಬ್ಬಳು ಹುಡುಗಿ

ಅದು ‘ನಾಗಮಂಡಲ’ದ ನಾಟಕದ ಪ್ರಯೋಗಕ್ಕೆಂದು ನಾನು ಬರೆದ ಮೊದಲ ಹಾಡು. ಕಥಾ ನಾಯಕಿಯ ವರ್ಣನಾತ್ಮಕ ಪರಿಚಯ. ಜೊತೆಗೆ, ಆಕೆಗೆ ಹುಡುಕಿದ ವರನ ಕುರಿತು ಹೇಳುತ್ತಾ ಸಾಗುವ ಈ ಹಾಡು ಆಕೆಯ ಮದುವೆಯಾಗಿ ಬೀಳ್ಕೊಡುವಲ್ಲಿಗೆ ಮುಗಿಯುತ್ತದೆ…

 

ನಮ್ಮ ಎಡ ಭುಜದ ನೇರದ ತುದಿಯಲ್ಲಿ ಆರಂಭವಾಗುವ ಈ ಹಾಡಿನ ದೃಶ್ಯ, ನಂತರ ಮದುವೆಯ ಸಂದರ್ಭವಾಗಿ ಮುಂದುವರೆದು, ಮೆರವಣಿಗೆಯ ರೂಪ ತಾಳಿ, ನಮ್ಮ ಬಲ ಭುಜದ ನೇರದ ತುದಿಯಲ್ಲಿ ಮುಗಿಯುತ್ತದೆ. ಚಿತ್ರಕಲಾ ಪರಿಷತ್ತಿನ ಆ ಬಯಲನ್ನೇ ರಂಗ ವೇದಿಕೆಯಾಗಿ ಬಳಸಿಕೊಳ್ಳಲಾಗಿತ್ತು. ಅಂದಮೇಲೆ ಪ್ರೇಕ್ಷಕ ಪುಂಗಿಯ ಎದುರಿನ ಹಾವಿನಂತೆ ಮಂತ್ರಮುಗ್ಧ.

ದನಿಯಂತು ಜೇನ್ ತುಪ್ಪಾ

ಮನಿ ತುಂಬ ಹಾಲ್ ತುಪ್ಪಾ

ಜರಬೀಲೆ ನಿಂತಾಂಗ ಗೊಂಬೀ

ತುರುಬಂತೂ ಹಾವಿನ ಸಿಂಬಿ

ಹಿಂಗಿದ್ದಳೊಬ್ಬಳು ಹುಡುಗಿ

 

ಅಪ್ಪಾ ಅಮ್ಮನ ಜೀವದುಸರ

ಅಬ್ಬಾ ಏನಂತಿ ಅವಳಾ ಹೆಸರ?

ಮನಿ ಎಂಬೋ ರಾಜ್ಯಕ್ಕ ವಾರಸುದಾರಿಣಿ

ಒಪ್ಪಾಗಿ ಕರದರೋ ‘ರಾಣಿ’ ‘ರಾಣಿ’…

ಹಿಂಗಿದ್ದಳೊಬ್ಬಳು ಹುಡುಗಿ

ಇಂಥಾ ಮಗಳಿಗಿನ್ನೆಂಥ ವರಾ…

ಇಂಥಾವನ, ಇಕಿಯಂಥವನs ಜರಾ

ಸಿರಿಮನಿಯವನಂತೂ ಖರೆ,

ಸುದ್ದ ಸಂಪತ್ತು ಬರೇ…

ಹಡದವರ ಕಾಣದ ಪರದೇಶಿ ಅಂವಾ

ಮಗಳಿಗಿನ್ನೆಂಥ ವರಾ…

 

ಅಂಥ ಹುಡುಗನೊಂದಿಗೆ ಮದುವೆಯಾಗಿ, ರಾಣಿ ಆತನ ಮನೆಗೆ ಬರುತ್ತಾಳೆ.

ಇನ್ನು ಮುಂದೆಲ್ಲ ‘ನಾಗಮಂಡಲ’ ನಾಟಕದ ಕಥೆಯನ್ನು ಸಂಕ್ಷೇಪದಲ್ಲಿ ಹೇಳುತ್ತಲೇ, ಆಯಾ ಸನ್ನಿವೇಶಕ್ಕೆ ನಾನು ಬರೆದ ಹಾಡನ್ನು ನಿಮಗೆ ಕೊಡುತ್ತ ಮುಂದುವರಿಯುತ್ತೇನೆ.

-೦-೦-೦-೦-೦-

ಯಾರ ಅಂಕುಶವೂ ಇಲ್ಲದೆ ಬೇಕಾಬಿಟ್ಟಿಯಾಗಿ ಬದುಕುತ್ತ ಒರಟು ಸ್ವಭಾವ ಬೆಳೆಸಿಕೊಂಡಿರುವ ಅಪ್ಪಣ್ಣನ ಮಡದಿಯಾಗಿ ರಾಣಿ ಆ ಮನೆಗೆ ಬಂದಿದ್ದಾಳೆ. ಅದು ಮನೆಯಲ್ಲ… ದೊಡ್ಡ ವಾಡೆ. ಕೋಟೆಯಂಥ ಮನೆ. ಪ್ರೀತಿಯನ್ನೇ ಉಂಡು-ಉಟ್ಟು, ಕೊಂಡು-ಕೊಟ್ಟು ಪ್ರೀತಿಯ ಪ್ರತಿಮೆಯಂತೆ ಬೆಳೆದ ಬಾಲೆ ರಾಣಿ. ಆಕೆಗೆ ಬೇಕಾದ್ದು ಕೈಹಿಡಿದವನ ಪ್ರೀತಿ. ನೇಹದ ನೇವರಿಕೆ. ಊಹೂಂ… ಅದಾವುದೂ ದೊರೆಯುವ ಲಕ್ಷಣಗಳು ಮೊದಲ ದಿನದಿಂದಲೇ ಕಾಣದೆ ಹೋದಾಗ ನಯ-ವಿನಯದ ನಾಜೂಕಿನ ರಾಣಿಗೆ ಭಯ ಶುರುವಾಗುತ್ತದೆ.

ಅವತ್ತು ಅಪ್ಪಣ್ಣನೆದುರು ರಾಣಿ, ‘ರಾತ್ರೆ ಹೊತ್ತು ನನಗೊಬ್ಬಳಿಗೆ ಮನೆಯಲ್ಲಿ ಹೆದರಿಕೆ’ ಅನ್ನುತ್ತಾಳೆ. ಆತ, ‘ಹೆದರಲಿಕ್ಕೆ ಏನಾಗಿದೆ? ನಿನ್ನ ಪಾಡಿಗೆ ನೀನು ಬಿದ್ದುಕೊಂಡಿರು. ಯಾರೂ ಬರೋದಿಲ್ಲ ನಿನ್ನ ಸುದ್ದಿಗೆ…’ ಅಂತ ಊಟ ಮುಗಿಸಿ ಎದ್ದು ಹೋಗಿಬಿಡುತ್ತಾನೆ.

ಒಂದು ಪ್ರೀತಿಯ ಮಾತಿಲ್ಲ, ನಗೆಯಿಲ್ಲ. ಬಂದರೆ, ಬರೀ ದುಮು ದುಮು ಉರಿಯುತ್ತ ಇರುವವ…

ರಾಣಿಗೆ ತಾನು ಇಲ್ಲಿ ಬರೀ ಕೂಳು ಕುದಿಸಿ ಇಕ್ಕುವ ಆಳು ಅನ್ನಿಸುತ್ತದೆ. ತನಗೆ ಮೋಸವಾಗಿದೆ ಎಂಬ ಭಾವ ಅವಳದು. ಆ ಸಂದರ್ಭದ ಹಾಡು –

ಯಾವ ದೇಸದ ರಮಣ ಬಂದು

ಏನು ಮೋಸವ ಮಾಡಿದ…

ಚಿಂತಿಯರಿಯದ ಚಿಗರಿಗೆ ಚಿತಿಯು ಸುತ್ತರಿದಂಗ

ನಂಬಿ ಬಂದವಳು ತಾ ಇಂಬುಗೇಡ್ಯಾಧಂಗ

ಚಡಪಡಿಸ್ಯಾಳೋ ಇದು ಏನಾತೋ…

ಗಡಬಡಿಸ್ಯಾಳೋ ಎಂತಾ ಘಾತಾತೋ…

ಕ್ವಾಟ್ಯಾಗಿಟ್ಟು ಕೀಲಿ ಜಡಿದು ಪ್ಯಾಟಿಗ್ಹೋದ

ಸ್ವಾಟಿ ತಿರುವಿ ತಾ ಬ್ಯಾರೆ ಬ್ಯಾಟಿಗ್ಹೋದ-

ಇಂಗಿಹೋಗಬಹುದ ಮನದ ಚಿಂತೀ…?

ಇಲ್ಲ, ಇಲ್ಲೇ ಎಣಿಸಲೇನ ಮನಿಯ ಜಂತಿ…

ಆತ ಈ ‘ಕಟ್ಟಿಕೊಂಡ’ವಳನ್ನು ಮನೆಯಲ್ಲಿ ಕೂಡಿಹಾಕಿ, ಕೀಲಿ ಜಡಿದು, ‘ಇಟ್ಟುಕೊಂಡ’ವಳ ಬಳಿ ಹೋಗಿ ಆಕೆಯ ತೋಳತೆಕ್ಕೆಯಲ್ಲಿ ರಾತ್ರಿ ಕಳೆಯುವಾತ. ಮನೆಗೆ ಬಂದರೆ ಸ್ನಾನ, ಊಟ. ಅಷ್ಟೇ. ಆತ ಸ್ನಾನ ಮುಗಿಸಿ ಬರುವುದರೊಳಗೆ ಆಕೆ ತಾಟು ನೀಡಿ ಇಟ್ಟಿರಬೇಕು. ಮಾತಿಗೆ ಅಲ್ಲಿ ಅವಕಾಶವೇ ಇಲ್ಲ. ಬೇಕು ಬೇಡ ಎನ್ನುವುದನ್ನು ಕೂಡ ‘ಹೂಂ…’ ಮತ್ತು ‘ಹೂಂಹೂಂ…’ ಎಂಬುದರಲ್ಲೇ ದಾಟಿಸಿಬಿಡುತ್ತಿದ್ದ. ಊಟ ಮುಗಿಯಿತೆಂದರೆ ಮತ್ತೆ ಕೀಲಿ ಜಡಿದು ಹೊರಟುಬಿಡುತ್ತಿದ್ದ ಭೂಪ.

ಆಕೆಗೆ ಆತ ಬಂದರೊಂದು ಭಯ… ಬರದಿದ್ದರಿನ್ನೊಂದು ಭಯ…

ದುಃಖ ಒತ್ತರಿಸಿ ಬರುತ್ತದೆ. ಯಾರ ಮುಂದೆ ಹೇಳಿಕೊಂಡಾಳು? ಯಾರೊಂದಿಗೆ ಮಾತಾಡಿಯಾಳು? ಮೊದಮೊದಲು ತನ್ನಷ್ಟಕ್ಕೇ ಮಾತಾಡಿಕೊಳ್ಳಲು ಆರಂಭಿಸಿ, ಬರಬರುತ್ತ ಅಲ್ಲಿಯ ಗೋಡೆ, ಸೂರು, ಕಂಬ, ಬಾಗಿಲುಗಳ ಜತೆ ಮಾತಾಡಿಕೊಳ್ಳತೊಡಗುತ್ತಾಳೆ. ಇಲ್ಲವೆಂದರೆ ಕಿಟಕಿಯಲ್ಲಿ ಮುಖವಿಟ್ಟು ಕೂತು, ಆಕಾಶವನ್ನು, ಹಾರುವ ಹಕ್ಕಿಗಳನ್ನು ನೋಡುತ್ತಾಳೆ. ಕಾಣುತ್ತ ಕಾಣುತ್ತ ಕನಸಿಗೆ ಜಾರುತ್ತಾಳೆ. ‘ಆತ ಬಂದಾನೆಯೇ? ಇದುರು ನಿಂದಾನೆಯೇ?’ ಎಂಬ ನಿರೀಕ್ಷೆಯಲ್ಲಿ ಮೈಮರೆಯುತ್ತಾಳೆ…

ಅದs ಗ್ವಾಡಿ, ಅದs ಸೂರು ದಿನವೆಲ್ಲ ಬೇಜಾರು…

ತಿದಿಯೊತ್ತಿ ನಿಟ್ಟುಸಿರು ಎದಿಯಾಗ ಚುರು ಚುರು

ಬಂದಾನೇನs ಇದುರು ನಿಂದಾನೇನs

ಬಾ ರಾಣಿ ಸುರತಕ ಅಂದಾನೇನs…?

 

ದನದ ಕೊರಳಾ ಗಂಟಿ, ಜೀರುಂಡಿ ಜೇಂಕಾರ

ಮನದ ದುಕ್ಕವು ಮಾಯಾ ಎಲ್ಲೆಲ್ಲೂ ಓಂಕಾರ

ರಾತ್ರಿ ರಾಣಿಯ ಗಂಧಾ ತಂದಾನೇನs

ಖಾತ್ರಿಲೆ ಒಂಟಿತನಾ ಕೊಂದಾನೇನs…?

ಅಂಥ ಸಂದರ್ಭದಲ್ಲಿಯೇ ಅಲ್ಲಿಗೆ ಬಂದಿದ್ದಾಳೆ ಕುರುಡವ್ವ. ಅಪ್ಪಣ್ಣನ ಅವ್ವನ ಗೆಳತಿ. ಆಕೆಗೆ ‘ಈಕೆ’ಯ ಬಗ್ಗೆ ಎಲ್ಲ ಅರಿವಿಗೆ ಬರುತ್ತದೆ. ಒಂದು ಬೇರು ಕೊಟ್ಟು ಪ್ರಯೋಗಿಸಿ ನೋಡು ಅನ್ನುತ್ತಾಳೆ. ಆ ಬೇರಿನ ಪರಿಣಾಮ ಏನೂ ಆಗದಿದ್ದಾಗ ಇನ್ನೂ ಒಂದು ಬೇರು ನೀಡಿ ಒಳ್ಳೆಯದಾಗಲಿ ಅಂತ ಹರಸುತ್ತಾಳೆ.

ಕುರುಡವ್ವ ಹೇಳಿದ ಹಾಗೆ ರಾಣಿ ಆ ಬೇರನ್ನು ಕುಟ್ಟಿ ಕುದಿಯುವ ಸಾರಿಗೆ ಹಾಕಿದ್ದಾಳೆ. ಅರೆ, ಇದ್ದಕ್ಕಿದ್ದಂತೆಯೇ ಅದೇನೋ ಸ್ಫೋಟದಂಥ ಸದ್ದು. ಮಾಡಿನ ತನಕ ನೆಗೆದಿದೆ ಹಸಿರು ಜ್ವಾಲೆ… ಸಾರಿನ ಪಾತ್ರೆ ಉಕ್ಕಿದೆ… ಅಲ್ಲೆಲ್ಲ ಕೆಂಪು ಕೆಂಪು ದ್ರವ… ಮನೆಯನ್ನೆಲ್ಲ ದಟ್ಟ ಹೊಗೆ ಆವರಿಸಿದೆ. ರಾಣಿ ಗಾಬರಿಯಾಗಿದ್ದಾಳೆ. ಅಷ್ಟರಲ್ಲೇ ಬಂದಿದ್ದಾನೆ ಅಪ್ಪಣ್ಣ. ಆತಂಕಗೊಂಡ ರಾಣಿ ಆ ಪಾತ್ರೆಯನ್ನು ಮರೆಯಲ್ಲಿ ಮುಚ್ಚಿಟ್ಟಿದ್ದಾಳೆ. ಆತ ಎಂದಿನಂತೆ ‘ಜಳಕಾ ಮಾಡಿ ಬರತೀನಿ… ತಾಟ ಬಡಿಸಿ ಇಡು…’ ಅಂದಿದ್ದಾನೆ. ಆಕೆಗೆ ಮತ್ತಷ್ಟು ಭಯ. ಎದೆ ನಡುಗಿದೆ.

ಗುಡುಗುಡುಗಿನಾಂಗ ಸಿಡಿಸಿಡಿಲಿನಾಂಗ

ನಡುನಡುಗಿಸಿತೆದಿಯನ್ನ…

ಎಂಥ ಸಪ್ಪಳ, ಅಯ್ಯೋ ಎಂಥ ಸಪ್ಪಳ…

ಅಡಿಗಿ ಮನಿಯ ಮೂಲಿ ಸೇರಿ

ಉಡುಗಿ ಹೋದಳಲ್ಲ ರಾಣಿ…

ಮಡಿಗಿ ತನಕ ತಾ ಸಿಡಿದು

ಕರಿಯ ಹೊಗಿಯಾಯ್ತು ಸಾರು…

ಏನು ಕಾವಳಾ ಅಯ್ಯೋ ಎಂಥಾ ಕಳವಳಾ

 

ಅಂತ ಏನು ಮಾಡುವುದೆಂದು ತಿಳಿಯಲಾಗದೇ ಅತ್ತಿತ್ತ ಸುತ್ತುತ್ತಾಳೆ… ಇಂಥ ಸಾರನ್ನು ಗಂಡನಿಗೆ ಉಣಿಸಿ ಪಾಪ ಕಟ್ಟಿಕೊಳ್ಳಲಾರೆ ಎಂದು ನಿರ್ಧರಿಸುತ್ತಾಳೆ ರಾಣಿ.

 

ಎಂಥಾ ಹೇಸಿಗೆಲಸಕ್ಕ ನಿಂತೆ ನಾನು…

ಸ್ವಂತ ಪುರುಷಗ ವಿಷಬೇರ ಸಾರಿಕ್ಕಲೇನು

ಎಂಥಾ ಹೇಸಿಗೆಲಸಕ್ಕ ನಿಂತೆ ನಾನು…

ಎಂದು ಅದನ್ನೆಲ್ಲಿಯಾದರೂ ಹೊರಗೆ ತಿಪ್ಪೆಗೆ ಸುರಿಯಲು ಯೋಚಿಸಿ ಹೊರಡುತ್ತಾಳೆ. ಒಂದೆಡೆ ಸುರಿಯುತ್ತಿದ್ದಂತೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಅದು ಮತ್ತಿಷ್ಟು ತಾಪತ್ರಯಕ್ಕೆ ಕಾರಣವಾಗಬಹುದೆಂದು ಯೋಚಿಸಿ, ಸೂಕ್ತ ಜಾಗಕ್ಕಾಗಿ ಆಚೀಚೆ ನೋಡಿದರೆ ಅಲ್ಲಿ ಹುತ್ತ ಕಾಣುತ್ತದೆ. ಅಲ್ಲಿ ಸುರಿದು ಬಿಡುತ್ತಾಳೆ. ಸುಡುವ ಸಾರು ಒಳಗೆ ಮಲಗಿದ ನಾಗಪ್ಪನನ್ನು ರೊಚ್ಚಿಗೆಬ್ಬಿಸುತ್ತದೆ. ಆತ ಬುಸುಗುಡುತ್ತ ಹುತ್ತದಿಂದ ಧುತ್ತಂತ ಕತ್ತೆತ್ತಿ ನಿಲ್ಲುತ್ತಾನೆ.

ಹುತ್ತದಿಂದ ಧುತ್ತಂತ ಕತ್ತೆತ್ತಿ ನಿಂತ

ಕಿತ್ತುಕೊಂಡು ಬಂದಂಥ ಮೈಯ ನೋಡಿಕೊಂಡ

ಸುಡುವ ಸಾರಿನ ಸಂಕ್ಟ ಸಿಟ್ಟು ಸೆಡವನು ಬಿಟ್ಟು

ಕಡುಬ್ಯಾಗದಿಂದಲಿ ಬೆಸಗೊಂಡ…

ನಾಗರಾಜ ಸುತ್ತ ದೃಷ್ಟಿ ಹಾರಿಸುತ್ತಾನೆ. ಆ ಹೊತ್ತಿಗೆ ಗಂಡ ಕರೆದ ದನಿ ಕೇಳಿ ಮನೆಗೆ ಧಾವಿಸುತ್ತಿರುವ ರಾಣಿಯ ಬೆನ್ನು, ಮತ್ತು ಆ ಬೆನ್ನ ಮೇಲೆ ಕರಿಯ ನಾಗರದಂತೆ ಶೋಭಿಸುವ ದಪ್ಪದ ಜಡೆಯನ್ನು ಕಂಡು ನಾಗಪ್ಪ

ಯಾರೀಕಿ… ಈ ನಾಗರಾಣಿ?

ಒನಪು ವೈಯಾರದಲಿ ನಿಂತಂಥ ಜಾಣಿ…

ಎಂದು ಬೆಸಗೊಳ್ಳುತ್ತಾನೆ, ಮೋಹದಲ್ಲಿ ಬೀಳುತ್ತಾನೆ… ಆ ಮೋಹದಲ್ಲೇ ತನಗಾದ ನೋವನ್ನು ಮರೆಯುತ್ತಾನೆ.

ಇವಳೆನ್ನ ಮಲ್ಲೀಗಿ, ಇವಳೆನ್ನ ಸಂಪೀಗಿ,

ಇವಳೆನ್ನ ಕ್ಯಾದೀಗಿ, ಇವಳೇ ಸೇವಂತೀಗಿ

ಸರ ಸರ ಸರಿದು ಹೊಂಟಾ, ನಾಗರಾಜ

ಭರ ಭರ ಹರಿದು ಹೊಂಟಾ…

ಹಾಗೆ ಸರಿಯುತ್ತ ಮುಂದುವರಿಯುತ್ತಾನೆ.

ಅತ್ತ ಅಪ್ಪಣ್ಣನದು ಮತ್ತದೇ ಕತೆ. ಆತ ಎಂದಿನಂತೆ ರಾಣಿಯ ಮೇಲೆ ಮುನಿಸಿಕೊಂಡು, ಊಟ ಮಾಡದೆಯೆ ಹೊರಟುಬಿಡುತ್ತಾನೆ. ಅವಳು ಮತ್ತೆ ಬಂದಿ.

ಬೇರಿನ ಸಾರಿನ ಕಾರಣದಿಂದ ನಾಗಪ್ಪ ರಾಣಿಯೆಡೆ ಆಕರ್ಷಿತನಾಗಿದ್ದಾನೆ. ರಾತ್ರಿಯಾಗುತ್ತದೆ. ನಾಗಪ್ಪ ಬಚ್ಚಲು ಮೋರಿಯ ಮೂಲಕ ರಾಣಿ ಮಲಗಿರುವಲ್ಲಿಗೆ ಬರುತ್ತಾನೆ. ಆಕೆ ನೋಡಿದರೆ ಗಾಬರಿಯಾದಾಳೆಂದುಕೊಂಡು ಮನುಷ್ಯರೂಪ ತಾಳುತ್ತಾನೆ… ಈಗಾತ ಹೂಬೇಹೂಬ್ ಅಪ್ಪಣ್ಣ…

ಮುಂದಿನ ಕತೆ ನಿಮಗೆ ಗೊತ್ತೇ ಇದೆ.

ಅವರ ಭೇಟಿ ನಿತ್ಯದ ಮಾತಾಗುತ್ತದೆ. ಅದೊಂದು ರಾತ್ರಿ ಅವರ ಸಮಾಗಮವಾಗುತ್ತದೆ. ಆತ ಲೋಕದ ಪರಿವೆ ಇಲ್ಲದೇ ಆಕೆಯೊಂದಿಗೆ ರಮಿಸುತ್ತಾನೆ. ಆಕೆ ಬೆರಗಿನಿಂದ ಬಾಯಿಬಿಟ್ಟು ಅದನ್ನೆಲ್ಲ ಅನುಭವಿಸುತ್ತಾಳೆ. ಅದನ್ನು ಹಾಡಿನಲ್ಲಿ ಹೇಗೆ ಹೇಳುವುದು? ಆಗ ಮೂಡಿಬಂದ ಹಾಡಿದು :

ಮಾಯಾದೋ ಮನದ ಭಾರ, ತಗಧಾಂಗ ಎಲ್ಲ ದ್ವಾರ

ಏನ ಏನಿದು ಎಂಥಾ ಬೆರಗ…!

ಕಟ್ಟೊಡದು ಹರಿದ ನೀರ, ದಟ್ಟಡವಿ ಕೊಚ್ಚಿ ಪೂರ

ಏನs ಏನಿದು ಎಂಥಾ ಬೆರಗ…!

ಜೋರಾಗಿ ಮಳಿ ಸುರಿದು, ಹನಿ ಹನಿಯು ಮುತ್ತಾಗಿ

ಮುತ್ತೀನ ಮಂಟಪದಿ ರತಿಯ ಮೂರ್ತಿ…

ಮಾರಾ ತಾ ಸುಕುಮಾರಾ ಹೂಬಾಣಾ ಹೊಡದಾನೊ

ಸುರಲೋಕ ಹೂ ಸುರದೋ ಮನದ ಪೂರ್ತಿ

ಏನs ಏನಿದು ಎಂಥಾ ಬೆರಗ…!

ಹಗಲಾಗs ಇರುಳಾಗಿ, ಇರುಳs ತಾ ಹಗಲಾಗಿ

ಭೂಮೆಲ್ಲ ತಾನs ನೀಲಿ ಮುಗಲಾಗಿ

ಹೊಳದಾವೋ ನಕ್ಷತ್ರ, ಸುಳದಾವೋ ಆ ಚಿತ್ರ

ಅಳತಿ ಮೀರಿ ತೋರಿ ಮಿಗಿಲಾಗಿ…

ಏನs ಏನಿದು ಎಂಥಾ ಬೆರಗ…!

ಸಮಾಗಮದ ಫಲ? ರಾಣಿ ಗರ್ಭಧರಿಸುತ್ತಾಳೆ. ಸುದ್ದಿ ಅಪ್ಪಣ್ಣನಿಗೆ ಗೊತ್ತಾಗುತ್ತದೆ. ‘ನೀನು ಬಸರಿ ಆಗಿದ್ದು ಹೌದೇನು?’ ಅಂತ ಕೇಳುತ್ತಾನೆ ಆಕೆ ಹೌದೆನ್ನುತ್ತಾಳೆ. ‘ಹೌದನಲಿಕ್ಕೆ ನಾಚಿಕಿ ಆಗೂದಿಲ್ಲೇನು ಹಾದರಗಿತ್ತಿ? ಕೀಲಿ ಜಡಿದು ಇಟ್ಟರೂ ನೀನು ಮಿಂಡನ್ನ ಕೂಡಿದೆಲ್ಲಾ…?’

ಗಂಡನ ಮಾತಿನಿಂದ ರಾಣಿ ನಿಜಕ್ಕೂ ಗಾಸಿಗೊಳ್ಳುತ್ತಾಳೆ. ಹಾಗಾದರೆ ತನ್ನೊಂದಿಗೆ ರಾತ್ರಿ ಸೇರುತ್ತಿದ್ದಾತ ಗಂಡನಲ್ಲದಿದ್ದರೆ ಇನ್ನಾರು? ಎಂಬ ಪ್ರಶ್ನೆ ಅವಳೆದುರು ಬೃಹದಾಕಾರವಾಗಿ ನಿಲ್ಲುತ್ತದೆ. ರಾತ್ರಿ ಎಂದಿನಂತೆ ನಾಗಪ್ಪ ಬರುತ್ತಾನೆ. ಪ್ರೀತಿ ಸುರಿಸುತ್ತಾನೆ. ಇದರಿಂದ ಆಕೆಗೆ ಇನ್ನಷ್ಟು ಗೊಂದಲ. ‘ಹಗಲು ನೀವು ಹಂಗ್ಯಾಕ… ರಾತ್ರಿ ಹಿಂಗ್ಯಾಕ…?’ ಅಂತ ಕೇಳುತ್ತಾಳೆ. ಆತ ಹಾರಿಕೆಯ ಉತ್ತರ ಕೊಡುತ್ತಾನೆ. ಮತ್ತೆ ಹಗಲಿನಲ್ಲಿ ಅಪ್ಪಣ್ಣ. ‘ಹೇಳು ಯಾರವಾ ನಿನ್ನ ಕೂಡಿದವಾ?’ ಅಂತ ಕಾಡ ತೊಡಗುತ್ತಾನೆ. ‘ಹಂಗೆಲ್ಲಾ ಮಾತಾಡೀದ್ರ ನಿಮ್ಮ ಬಾಯಾಗ ಹುಳಾ ಬೀಳ್ತಾವು…ನಾನೇನೂ ತಪ್ಪು ಮಾಡಿಲ್ಲಾ. ನಿಮ್ಮನ್ನ ಬಿಟ್ರ ನಾನು ಬ್ಯಾರೆ ಯಾವ ಗಂಡಸಿನ ಕಡೆ ತಿರಗ್ಯೂ ನೋಡಿಲ್ಲಾ… ಬೇಕಾದ್ರ ಎಲ್ಲೇ ನಿಂತು ಆಣಿ ಮಾಡು ಅಂದ್ರೂ ಮಾಡ್ತೀನಿ,’ ಅನ್ನುತ್ತಾಳೆ.

ಅಪ್ಪಣ್ಣನಿಗೆ ಈ ಪ್ರಕರಣವನ್ನು ಪಂಚರ ಎದುರು ಚೌಕಶಿ ಮಾಡಿಸುವ ಇರಾದೆ. ನಾಗಪ್ಪ ಆಕೆಗೆ ಹುತ್ತದಲ್ಲಿ ಕೈಹಾಕುವ ನಾಗನ ದಿವ್ಯ ಮಾಡು ಅಂತ ಸಲಹೆ ಕೊಡುತ್ತಾನೆ. ರಾಣಿಗೆ ಒಟ್ಟು ಗೊಂದಲ. ಯಾಕೆ ಈ ಗಂಡ ಹೀಗೆ? ಈಗ ಪಂಚರ ಎದುರು ನಾಗನ ದಿವ್ಯ ಮಾಡು ಅಂತಿದ್ದಾನಲ್ಲ… ನನ್ನನ್ನು ಕೊಲ್ಲುವ ಸುಲಭ ಉಪಾಯ ಇರಬೇಕಿದು ಎಂದುಕೊಳ್ಳುತ್ತಾಳೆ. ‘ಸತ್ಯ ಹೇಳಿದರೆ ಏನೂ ಆಗೋದಿಲ್ಲ. ಧೈರ್ಯದಿಂದ ಹೇಳು’ ಅಂತ ಬೇರೆ ಹೇಳುತ್ತಿದ್ದಾನೆ…

ಸೇರಿದ ಸಾವಿರ ಜನರೆದುರು ಆರೋಪಿ ಸ್ಥಾನದಲ್ಲಿ ನಿಂತಿದ್ದಾಳೆ ರಾಣಿ. ಅವರೆಲ್ಲ ಬೇಡಬೇಡವೆಂದರೂ, ಹುತ್ತದಲ್ಲಿ ಕೈಹಾಕಿ ಆಣೆ ಮಾಡುವ ಕ್ರಮವನ್ನೇ ಆಯ್ಕೆ ಮಾಡಿಕೊಳ್ಳುತ್ತಾಳೆ. ಹಾಗೆ ಮಾಡಿ, ‘ನಾನು ಲಗ್ನ ಆಗಿ ನನ್ನ ಗಂಡ ಮತ್ತು ಈ ನಾಗಸರ್ಪ ಈ ಇಬ್ಬರನ್ನು ಬಿಟ್ಟು ಬೇರೆ ಯಾರನ್ನೂ ಮುಟ್ಟಿಲ್ಲ. ಯಾವ ಗಂಡಸಿಗೂ ನನ್ನನ್ನ ಮುಟ್ಟಗೊಟ್ಟಿಲ್ಲ. ಇದು ಸುಳ್ಳಾದರೆ ಈ ನಾಗಸರ್ಪ ಕಡಿದು ನಾನು ಇಲ್ಲೇ ಸಾಯಲಿ…’ ಎಂದು ಘಂಟಾಘೋಷವಾಗಿ ಹೇಳಿಬಿಡುತ್ತಾಳೆ. ನಾಗರ ಹಾವು ಸೌಮ್ಯವಾಗಿ, ಅವಳ ತೋಳನ್ನು ಸುತ್ತಿಕೊಂಡು, ಕ್ರಮೇಣ ಕತ್ತನ್ನು ಸುತ್ತಿ, ತಲೆಯ ಮೇಲೆ ಕಿರೀಟದಂತೆ ಹೆಡೆ ಬಿಚ್ಚಿ ಆಡತೊಡಗುತ್ತದೆ.

ಜನ ಅಚ್ಚರಿಗೊಳ್ಳುತ್ತಾರೆ. ಇದು ನಿಜಕ್ಕೂ ಪವಾಡವೇ ಎನ್ನುತ್ತಾರೆ. ಆಕೆಯನ್ನು ‘ಮಹಾ ಸಾಧ್ವಿ’, ‘ದೇವಿ’ ಎಂದೆಲ್ಲ ಹೊಗಳಿ ಆಕೆಯ ಕಾಲಿಗೆರಗುತ್ತಾರೆ.

ಏನಾಟ ಆಡಿದೆವ್ವಾ, ಎಂಥಾ

ಮಾಟವ ಮಾಡಿದೆವ್ವಾ…

ಎಂದೆಲ್ಲ ಹಾಡುತ್ತ ಆಕೆಯನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತಾರೆ.

nagamandala-casette-cover2

-೦-೦-೦-೦-೦-

1989ರ ಮಾರ್ಚ್ 31ರಿಂದ ಎಪ್ರಿಲ್ 9ರ ವರೆಗೆ ‘ನಾಗಮಂಡಲ’ ನಾಟಕ ಸತತ ಹತ್ತು ಪ್ರಯೋಗಗಳನ್ನು ಕಂಡು, ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಿತು. ಸ್ವತಃ ಶಂಕರ್ ನಾಗ್ ಹಾಡುಗಳನ್ನು ತುಂಬಾ ಮೆಚ್ಚಿಕೊಂಡರು. ‘ಮುಂದೊಮ್ಮೆ ಇದನ್ನ ಸಿನಿಮಾ ಮಾಡ್ತೀನಿ ಸಾರ್… ಆಗ ಅಶ್ವಥ್ ಸಾರ್ ಮ್ಯೂಜಿಕ್ಕು ಮಾಡ್ತಾರೆ, ನೀವೇ ಹಾಡು ಬರೀಬೇಕು…’ ಅಂದಿದ್ದರು.

ಆ ಸಂದರ್ಭದಲ್ಲೇ ಸಂಕೇತ್ ಸ್ಟುಡಿಯೋದಲ್ಲಿ ‘ಸಂತ ಶಿಶುನಾಳ ಶರೀಫ’ ಚಿತ್ರದ ಡಬ್ಬಿಂಗ್ ಕಾರ್ಯ ನಡೆದಿತ್ತು. ಅದರ ಸಂಭಾಷಣಕಾರರಲ್ಲಿ ನಾನೂ ಒಬ್ಬ. ಹೀಗಾಗಿ ಅಲ್ಲಿಯೂ ನಾನಿರಬೇಕಿತ್ತು. ಒಂದು ಸಂಜೆ, ‘ನಾಗಮಂಡಲ’ ನಾಟಕ ಶುರುವಾಗುವ ಮುನ್ನವೇ ಚಿತ್ರಕಲಾ ಪರಿಷತ್ತಿನಿಂದ ನಾನು ‘ಸಂಕೇತ್’ಗೆ ಹೊರಟೆ. ನನ್ನ ಹಿಂದೆಯೇ ಗಿರೀಶ ಕಾರ್ನಾಡರೂ ಬಂದರು. ಅವರದು ಬೀಸು ಹೆಜ್ಜೆ. ಪಕ್ಕದಲ್ಲಿಯೇ ಹಾದು ಹೊರಟಿದ್ದವರು ನನ್ನನ್ನು ನೋಡಿ, ”ನೀವು ಇಷ್ಟು ಚೊಲೊ ಹಾಡು ಬರೀತೀರಿ ಅಂತ ನನಗ ಗೊತ್ತಿದ್ದಿಲ್ಲ ಬಿಡ್ರಿ… ವೆರಿ ಬ್ಯೂಟಿಫುಲ್ ಸಾಂಗ್ಸ್,” ಅಂತ ಜತೆಗೆ ಹೆಜ್ಜೆ ಹಾಕತೊಡಗಿದರು. ಅವರು ಹೊರಟದ್ದೂ ಸಂಕೇತ ಕಡೆಗೇ.

ಸಿ. ಅಶ್ವಥ್ ಅಂತೂ ತುಂಬಾ ಥ್ರಿಲ್ ಆಗಿದ್ದರು.

-೦-೦-೦-೦-೦-

ಆದರೆ, ಶಂಕರ್ ಅಕಾಲಿಕ ನಿಧನದಿಂದ ‘ನಾಗಮಂಡಲ’ ಸಿನಿಮಾ ಆಗದೆ ಉಳಿಯಿತು.

ಅವರ 39ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಕೇತ ನಾಟಕ ತಂಡದ ಗೆಳೆಯರು ಮತ್ತು ಆಕಾಶ್ ಆಡಿಯೋ ಜಂಟಿಯಾಗಿ ನಾನು ಬರೆದ ಹಾಡುಗಳ ಕ್ಯಾಸೆಟ್ಟನ್ನು ಹೊರತಂದರು.

ಮುಂದೆ ನಾಗಾಭರಣ ನಿರ್ದೇಶನದಲ್ಲಿ ‘ನಾಗಮಂಡಲ’ ಚಿತ್ರವಾದಾಗ ಮತ್ತೆ ನನಗೆ ಹಾಡುಗಳನ್ನು ಬರೆಯುವ ಅವಕಾಶ ಸಿಕ್ಕಿತು…

 

ಇಂದಿಗೂ ‘ನಾಗಮಂಡಲ’ ನಾಟಕಕ್ಕೆ ನಾನು ಬರೆದ ಹಾಡುಗಳನ್ನು ಪ್ರೀತಿಯಿಂದ ಹಾಡುವವರಿದ್ದಾರೆ. ‘ನಾಗಮಂಡಲ’ ಚಿತ್ರದ ಹಾಡುಗಳನ್ನು ಮೆಚ್ಚಿಕೊಳ್ಳುವವರಿದ್ದಾರೆ.

ಆದರೂ, ಈ ಹಾಡುಗಳ ಸಂಬಂಧದಲ್ಲಿ ನಾನು ‘ಪಾಡು’ಪಡುವಂತಾದದ್ದೂ ಇದೆ…

ಆ ಕುರಿತು ಮುಂದೆದಾದರೂ ನಿಮ್ಮೆದುರು ಹೇಳಿಕೊಂಡೇನು…

***

23 Comments

 1. samyuktha
  February 28, 2013
 2. CHANDRASHEKHAR VASTRAD
  February 27, 2013
 3. sumathi shenoy
  February 26, 2013
 4. Jayalaxmi Patil
  February 25, 2013
 5. radha s talikatte
  February 25, 2013
 6. Krish Joshi
  February 25, 2013
 7. Rj
  February 25, 2013
 8. R.RAJU
  February 25, 2013
 9. umesh desai
  February 25, 2013
 10. ಉಷಾಕಟ್ಟೆಮನೆ
  February 24, 2013
 11. Mudgal Venkatesh
  February 24, 2013
 12. arathi ghatikaar
  February 24, 2013
 13. Sunil Rao
  February 24, 2013
 14. Prasad V Murthy
  February 24, 2013
 15. suguna
  February 24, 2013
 16. pravara
  February 24, 2013
 17. hipparagi Siddaram
  February 24, 2013
 18. Ramesh Gururajarao
  February 24, 2013
 19. prajna
  February 24, 2013
 20. Rekha Nataraj
  February 24, 2013
 21. prakash hegde
  February 24, 2013
 22. Mohan V Kollegal
  February 24, 2013

Add Comment

Leave a Reply