Quantcast

ಗೋಪಾಲ ವಾಜಪೇಯಿ ಕಾಲ೦ : ಬಂದಾನೇನs ಇದುರು ನಿಂದಾನೇನs…

ಇವರು ಗೋಪಾಲ ವಾಜಪೇಯಿ. ಇವರು ಬರೆದ ನಾಟಕವನ್ನು ನೋಡುತ್ತಾ, ಇವರು ಸಿನೆಮಾಗಳಿಗೆ ಬರೆದ ಭಿನ್ನ ಹಾಡುಗಳನ್ನು ಕಿವಿದುಂಬಿಕೊಂಡು ಬೆಳೆದವನು ನಾನು. ಗೋಪಾಲ ವಾಜಪೇಯಿ ‘ದೊಡ್ಡಪ್ಪ’ ಬರೆದಾಗ, ‘ಸಂತ್ಯಾಗ ನಿಂತಾನ ಕಬೀರ’, ‘ಧರ್ಮಪುರಿಯ ಶ್ವೇತ ವೃತ್ತಾಂತ..’ ಹೀಗೆ ನಾಟಕಗಳನ್ನು ಅನುವಾದಿಸುತ್ತಾ ಹೋದಾಗ ಅವರನ್ನು ಬೆರಗಿನಿಂದ ನೋಡಿದವನು ನಾನು. ಅಂತಹ ವಾಜಪೇಯಿಯವರೊಡನೆ ಕೆಲಸ ಮಾಡುವ ಅವಕಾಶ ಕೂಡಿಬಂದಾಗ ನಾನು ಸಂತಸಗೊಂಡಿದ್ದೆ. ಈಟಿವಿ ಚಾನಲ್ ನ ನ್ಯೂಸ್ ವಿಭಾಗದ ಮುಖ್ಯಸ್ಥನಾಗಿ ನಾನು ರಾಮೋಜಿ ಫಿಲಂ ಸಿಟಿಗೆ ಹೋದಾಗ ಅಲ್ಲಿ ಮನರಂಜನಾ ವಿಭಾಗದಲ್ಲಿ ವಾಜಪೇಯಿ ಅವರು ಇದ್ದರು. ಎಷ್ಟು ಸರಳ ಬದುಕಿನ, ಮೆಲು ಮಾತಿನ, ಕಾಳಜಿಯ ಹೃದಯದ ವಾಜಪೇಯಿ ಅವರ ಸನಿಹದಲ್ಲಿದ್ದೆ ಎಂಬುದು ನನಗೆ ಖುಷಿಯ ವಿಷಯವೇ.

ಅಲ್ಲಿದ್ದಾಗ ನಾನು ಓದಿದ ಪುಸ್ತಕಗಳು ಅವರ ಕೈಗೂ, ಅವರ ಭಂಡಾರದಲ್ಲಿದ್ದ ಪುಸ್ತಕಗಳು ನನಗೂ, ನಾನು ಮಾಡಿದ ಕಾರ್ಯಕ್ರಮಗಳನ್ನು ಮೆಚ್ಚುತ್ತ ಅವರೂ, ಅವರು ‘ನಾಗಮಂಡಲ’ಕ್ಕೆ ಬರೆದ ಹಾಡುಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾ ಬದುಕು ಸಾಗಿಸಿದೆವು.

– ಜಿ ಎನ್ ಮೋಹನ್

ಗೋಪಾಲ ವಾಜಪೇಯಿ ಅವರ ನೆನಪಿನ ನವಿಲುಗರಿಯ ಸ್ಪರ್ಶ ಪ್ರತಿ ಭಾನುವಾರ, ಅವಧಿ ಓದುಗರಿಗಾಗಿ

ಬಂದಾನೇನs ಇದುರು ನಿಂದಾನೇನs…

(ಶಂಕರ್ ನಾಗ್ ಕುರಿತ ಕೆಲವು ನೆನಪುಗಳು)

 

-ಗೋಪಾಲ ವಾಜಪೇಯಿ

ಪಕ್ಕದಲ್ಲಿ ಕೂತಿದ್ದ ಸುರಸುಂದರಾಂಗ ಮೊಳಕೈಯಿಂದ ನನ್ನ ಪಕ್ಕೆ ತಿವಿದ. ಅವನೆಡೆ ತಿರುಗಿದರೆ, ಕೈಗೊಂದು ಚೀಟಿ ತುರುಕಿದ.

”ಈ ಸಿನೆಮಾ ಕೆಟ್ಟರೆ ಇವನಿಂದಲೇ ಕೆಡಬೇಕು…” ಎಂಬ ಒಕ್ಕಣೆಯಿತ್ತು ಅದರಲ್ಲಿ. ಓದಿ ನಕ್ಕು, ಚೀಟಿಯನ್ನು ಜೇಬಿನಲ್ಲಿಟ್ಟುಕೊಂಡೆ. (ಆತ ಖ್ಯಾತನಾಮ ನಿರ್ದೇಶಕರೊಬ್ಬರ ಒಂದೆರಡು ಚಿತ್ರಗಲ್ಲಿ ಕಂಡರೂ ಕಾಣದಂಥ ಪಾತ್ರ ಮಾಡಿದ್ದವ.)

ಅದು ೧೯೭೭ರ ಡಿಸೆಂಬರ್. ಕಿತ್ತೂರು ಬಳಿಯ ತೂರಮರಿಯ ವಾಡೆಯ ಅಟ್ಟದಲ್ಲಿ ‘ಒಂದಾನೊಂದು ಕಾಲದಲ್ಲಿ…’ ಚಿತ್ರೀಕರಣ. ಶತ್ರುಗಳ ದಾಳಿಯ ಭಯದಿಂದ ಕುಗ್ಗಿ ಹೋದ ಮಾರನಾಯಕನಿಗೆ ಆತನ ಬಾಡಿಗೆಯ ಬಂಟ ಗಂಡುಗಲಿ ಧೈರ್ಯ ಹೇಳುವ ಸನ್ನಿವೇಶ. ಆ ಸಂಸ್ಥಾನ ಪ್ರದೇಶದ ನಕ್ಷೆಯನ್ನು ಒಡೆಯನಿಗೆ ತೋರಿಸುತ್ತ, ತಾನು ಹೇಗೆ ಅವರನ್ನು ಎದುರಿಸಬಲ್ಲೆ ಎಂಬುದನ್ನು ವಿವರಿಸುವ ಸಂದರ್ಭ. ಕನ್ನಡಕ್ಕೆ ಮತ್ತು ಆ ಭಾಷಾ ಶೈಲಿಗೆ ಹೊಸಬ ಶಂಕರ ನಾಗ್. ಅಂದಾಗ ಕನ್ನಡ ಉಚ್ಚರಿಸಲು ಕಷ್ಟಪಡುತ್ತಿದ್ದದ್ದು ಸಹಜವೇ. ಅದರಲ್ಲೂ ಅವು ನಮ್ಮ ‘ಜಡಭರತ’ ನಾಮಾಂಕಿತ ಜಿ.ಬಿ. ಜೋಶಿ ಬರೆದ ಮಾತುಗಳೆಂದ ಮೇಲೆ ಅಷ್ಟು ಸುಲಭವೇ…?

ಶಂಕರ್ ಹಾಗೆ ಕಷ್ಟಪಡುತ್ತಿದ್ದಾಗಲೇ ಪಕ್ಕದ ‘ಚೀಟಿಗ’ ನನ್ನ ಪಕ್ಕೆ ತಿವಿದದ್ದು.

ಮಾರನಾಯಕನ ಪಾತ್ರ ವಹಿಸಿದ್ದವರು ರಂಗಭೂಮಿಯ ದೈತ್ಯ ವಸಂತರಾವ್ ನಾಕೋಡ. ಆಕಾರ, ಅಭಿನಯ, ದನಿ ಹಾಗೂ ಉಚ್ಹಾರಸ್ಪಷ್ಟತೆಯಲ್ಲಿ ಅವರು ನಿಜಕ್ಕೂ ‘ದೈತ್ಯ’ನೆ. ಅವರು ಒಂದೆರಡು ಸಲ ಶಂಕರಗೆ ”ಹಾಗಲ್ಲ, ಹೀಗೆ” ಎಂದು ತಿದ್ದಿ ಹೇಳಿದರು. ಗಿರೀಶರೂ ಅದನ್ನು ಅನುಮೋದಿಸಿದರು.

ಅಪಾರ ಆತ್ಮವಿಶ್ವಾಸದ ಶಂಕರ್ ಮುಂದೆ ಒಂದೇ ‘ಟೇಕ್’ನಲ್ಲಿ ದೀರ್ಘ ಸಂಭಾಷಣೆಯ ಆ ಶಾಟ್ ಅನ್ನು ಮುಗಿಸಿದ್ದರು.

ನಾನು ಆ ‘ಚೀಟಿಗ’ನ ಕಡೆ ನೋಡಲು ತಿರುಗಿದರೆ ಆತ ಆಗಲೇ ಪರಾರಿಯಾಗಿದ್ದ.

ಆ ಶಾಟ್ ಮುಗಿದ ಮೇಲೆ ಈಚೆ ಬಂದ ಶಂಕರ್ ಜೊತೆ ಒಂದೆರಡು ನಿಮಿಷ ಮಾತಾಡಿದೆ. ಇಂಥ ಸಣ್ಣ ಬಿಡುವಿನಲ್ಲೇ ಆಗೀಗ ಅಷ್ಟಿಷ್ಟು ಮಾತಾಡಿ ನನ್ನ ಪತ್ರಿಕೆಗಾಗಿ ಅವರ ಮೊಟ್ಟ ಮೊದಲ ‘ಸಂದರ್ಶನ’ವನ್ನು ನಾನು ಮುಗಿಸಿದ್ದು. ಆ ಚೇತನದ ಚಿಲುಮೆಯತ್ತ ನಾನು ಆಕರ್ಷಿತನಾದದ್ದು, ಪರಿಚಿತನಾದದ್ದು ಕ್ರಮೇಣ ಆತ್ಮೀಯನೂ ಆದ್ದದ್ದು ಆ ಸಂದರ್ಭದಲ್ಲೇ.

ಸರಳ ನಡೆನುಡಿಯ ಶಂಕರ್ ಹಾಗೆಲ್ಲ ಸುಮ್ಮನೆ ಕಾಡುಹರಟೆಯಲ್ಲಿ ಕಾಲ ಕಳೆಯುವ ಜಾಯಮಾನದವರಲ್ಲ. ಕ್ಯಾಮರಾ ಮುಂದೆ ತಮ್ಮ ಕೆಲಸ ಇಲ್ಲ ಅಂತಾದರೆ, ಗಿರೀಶರ ಹಿಂದೆ ನಿಂತು ಅವರ ಕಾರ್ಯವೈಖರಿಯನ್ನು ಗಮನಿಸುತ್ತಿದ್ದರು. ಇಲ್ಲವೇ ಒಂದು ಪುಸ್ತಕ ಕೈಗೆತ್ತಿಕೊಳ್ಳುತ್ತಿದ್ದರು. ತೀರ ಬೇಸರವಾಗಿದೆ ಎಂದರೆ ಅಲ್ಲಿಯೇ ಸಮೀಪದ ಮಲಪ್ರಭಾ ನದಿಯ ದಂಡೆಯ ಕಡೆ ಹೋಗುತ್ತಿದ್ದರು. ಒಟ್ಟಿನಲ್ಲಿ ಒಂದು ಕ್ಷಣವನ್ನೂ ವ್ಯರ್ಥಗೊಳಿಸದೆ ಓದು, ಇಲ್ಲವೇ ಚಿತ್ರನಿರ್ಮಾಣಕ್ಕೋ, ರಂಗಭೂಮಿಗೋ ಸಂಬಂಧಿಸಿದ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ‘ ಜ್ಞಾನಪಿಪಾಸು.’ ಹೊಸದು ‘ಏನೇ’ ಇದ್ದರೂ ಅದನ್ನು ಸಾಧಿಸಿ ಮೈಗೂಡಿಸಿಕೊಳ್ಳುವ ಪ್ರಯತ್ನವಾದಿ.

ಚಿತ್ರ ಪೂರ್ಣಗೊಂಡು ಡಬ್ಬಿಂಗ್ ಆಗಬೇಕು. ಶಂಕರಗೆ ಹೊಂದುವ ಹತ್ತಾರು ಕಂಠಗಳನ್ನು ಪ್ರಯತ್ನಿಸಿ ನೋಡಿದರೂ ಗಿರೀಶರಿಗೆ ಸಮಾಧಾನವಾಗಿರಲಿಲ್ಲ. ಕೊನೆಗೆ ”ನಾನೇ ಡಬ್ ಮಾಡ್ತೀನಿ,” ಅಂತ ನಿಂತ ಶಂಕರ್ ಕನ್ನಡದ ಮಟ್ಟಿಗೆ ‘ಹೊಸ ದನಿ’ಯಾಗಿ ಹೊಮ್ಮಿದರು.

ಹೇಳೀ ಕೇಳೀ ಬಾಡಿಗೆಯ ಬಂಟನ ಪಾತ್ರ ಅದು. ಆತನೋ ನಾಡಾಡಿ. ಒಡೆಯನ ‘ವಿಶ್ವಾಸ’ವಿರುವತನಕ ಅಲ್ಲಿದ್ದು, ಜೀವದ ಹಂಗುದೊರೆದು ಆತನನ್ನು ಕಾಪಾಡುವ ಜೀವ. ಒಂದೇ ಪ್ರದೇಶಕ್ಕೆ ಸೀಮಿತನಲ್ಲದ್ದರಿಂದ ಆತ ಹೀಗೆಯೇ ಮಾತಾಡುತ್ತಾನೆ ಎಂದೇನಿಲ್ಲವಲ್ಲ. ಹೀಗಾಗಿ ಶಂಕರನ ಮಾತಿನ ಶೈಲಿ ಆ ಪಾತ್ರಕ್ಕೆ ಸೂಕ್ತವೆನಿಸಿತ್ತು, ಆ ಪಾತ್ರದ ತೂಕವನ್ನು ಇನ್ನಷ್ಟು ಹೆಚ್ಚಿಸಿತ್ತು.

ಈ ಡಬ್ಬಿಂಗ್ ನಡೆಯುತ್ತಿದ್ದಾಗ ನಮ್ಮ ಒಂದು ನಾಟಕದ ಪ್ರದರ್ಶನಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಬಿಡುವಿನ ವೇಳೆಯಲ್ಲಿ ಡಬ್ಬಿಂಗ್ ಸ್ಟುಡಿಯೋಗೂ ಹೋಗಿದ್ದೆ. ‘ಅರೆ, ಅಲ್ಲಿ ಡಬ್ ಮಾಡುತ್ತಿದ್ದದ್ದು ಶಂಕರ್ ಅವರಾ?’ ಎಂದು ಅನುಮಾನಪಡುವಷ್ಟು ಸ್ಪಷ್ಟವಾಗಿ ಕನ್ನಡ ಮಾತಾಡಲು ರೂಢಿಸಿಕೊಂಡಿದ್ದರು ಶಂಕರ್. ಆದರೂ ಬಲ್ಲವರನ್ನು ‘ಇದು ಹೀಗಾ?’, ‘ಅಲ್ಲದಿದ್ದರೆ ಹೇಗೆ?’ ಎಂದು ಕೇಳಿ ತಿಳಿದುಕೊಂಡು ತಿದ್ದಿಕೊಳ್ಳುವ ಸತತಾಭ್ಯಾಸ ಸಾಗಿಯೇ ಇತ್ತು.

‘ಒಂದಾನೊಂದು ಕಾಲದಲ್ಲಿ…’ ಪ್ರೇಕ್ಷಕನಿಗೆ ಹೊಸ ಅನುಭವ ನೀಡಿತಾದರೂ ಲಾಭ ತಂದುಕೊಡುವ ಚಿತ್ರವೆನಿಸಲಿಲ್ಲ. ಆದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಉಂಟುಮಾಡಿದ ‘ಪರಿಣಾಮ’ ಮಾತ್ರ ಅಗಾಧ. ಅದು ಆ ವರ್ಷದ ಶ್ರೇಷ್ಠ ಚಿತ್ರವೆಂದು ‘ಸ್ವರ್ಣಕಮಲ’ ಗಳಿಸಿತು. ಶಂಕರ್ ಆ ವರ್ಷದ ‘ಅತ್ಯುತ್ತಮ ನಟ’ ಪ್ರಶಸ್ತಿ ಗಳಿಸಿ ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದ್ದರು. (ನಿಜ ಹೇಳಬೇಕೆಂದರೆ ಈ ಚಿತ್ರದಲ್ಲಿ ಶಂಕರಗೆ ಸರಿಸಾಟಿಯಾಗಿ ಅಭಿನಯಿಸಿ, ಪ್ರಶಸ್ತಿ ಸಮಿತಿಯ ಗಮನ ಸೆಳೆದಿದ್ದ ಇನ್ನೊಬ್ಬ ನಟ ಎಂದರೆ ಸುಂದರಕೃಷ್ಣ ಅರಸ್. ಆದರೆ, ಚಿತ್ರವಿಡೀ ಆವರಿಸಿ, ಅವಿಸ್ಮರಣೀಯ ಅಭಿನಯ ನೀಡಿದ್ದು ಶಂಕರ್.)

‘ಸೀತಾರಾಮು’ದಲ್ಲಿ ನಟಿಸುವ ಅವಕಾಶ ಸಿಗುವ ತನಕ ಶಂಕರಗೆ ಕರ್ನಾಟಕಕ್ಕೆ ಬರುವ ಯೋಚನೆಯಿರಲಿಲ್ಲ. ‘ಸೀತಾರಾಮು’ ತೆರೆಕಂಡ ಮೇಲೆ ಈ ‘ಗಂಧದ ಗುಡಿ’ಯಲ್ಲಿ ವಾಸ್ತವ್ಯ ಹೂಡದೆ ಅನ್ಯ ವಿಧಿ ಇರಲಿಲ್ಲ. ಶಂಕರ್ ಒಬ್ಬ ನಟನಾಗಿ, ಒಬ್ಬ ನಿರ್ದೇಶಕನಾಗಿ ಕನ್ನಡಿಗರಿಗೆ ಹೆಚ್ಹೆಚ್ಚು ಇಷ್ಟವಾಗತೊಡಗಿದರು. ಆಮೇಲೆ ತಮ್ಮದೇ ಚಿತ್ರಗಳನ್ನು ನಿರ್ದೆಶಿಸತೊಡಗಿದರು. ತುಂಬ ‘ಬೀಜೀ ನಟ’ರಾಗಿ ದಿನೇ ದಿನೇ ಎತ್ತರಕ್ಕೆ ಏರತೊಡಗಿದರು. ಆದರೂ ಕಾಲು ನೆಲಕ್ಕಂಟಿಸಿಕೊಂಡೆ ಉಳಿದರು ವಿನಾ, ‘ತಲೆ ತಿರುಗಿಸಿ’ಕೊಳ್ಳಲಿಲ್ಲ. ತಾವೊಬ್ಬ ರಂಗಭೂಮಿ ನಟ ಎಂಬುದನ್ನು, ರಂಗಕರ್ಮಿ ಎಂಬುದನ್ನು ಮರೆಯಲಿಲ್ಲ. ರಂಗಭೂಮಿಯ ಗೆಳೆಯರನ್ನು ಮರೆಯಲಿಲ್ಲ. ‘ಸಂಕೇತ್’ ನಾಟಕ ತಂಡ ಕಟ್ಟಿ, ಹೊಸ ಹೊಸ ಪ್ರಯೋಗಗಳನ್ನು ಮಾಡತೊಡಗಿದರು.

‘ನೋಡಿ ಸ್ವಾಮಿ, ನಾವಿರೋದು ಹೀಗೆ…’ ನಾಟಕದೊಂದಿಗೆ ಅವರು ಹುಬ್ಬಳ್ಳಿಗೆ ಬಂದಾಗ ಅಲ್ಲಿಯ ರಂಗಮಂದಿರದಲ್ಲಿ ಸೆಟ್, ಲೈಟ್ ಅಂತ ಓಡಾಡುತ್ತಲೇ ನನ್ನ ಜೊತೆ ಮಾತಾಡಿದ್ದರು. ಆಗೀಗ ಬೆಂಗಳೂರಿನಲ್ಲೋ ಮತ್ತೆಲ್ಲೋ ಗುಂಪಿನಲ್ಲಿ ಕಂಡ ನನ್ನತ್ತ ‘ಸಸ್ನೇಹ ನಗೆ’ಯೊಂದನ್ನು ಚೆಲ್ಲಿ, ‘ಹೇಗಿದ್ದೀರಿ…’ ಎಂದು ಕಣ್ಣಲ್ಲೇ ಕೇಳುತ್ತಿದ್ದರು. ಧಾರವಾಡದಲ್ಲಿ ‘ಮಿಂಚಿನ ಓಟ’ದ ಚಿತ್ರೀಕರಣದ ನಂತರ ಅವರ ಭೇಟಿ ಅಪರೂಪವಾಗತೊಡಗಿತು.

ಆ ನಂತರ ತಮ್ಮ ಅಭಿನಯಕ್ಕಷ್ಟೇ ಅಲ್ಲ, ಸಜ್ಜನಿಕೆ, ಸಮಯ ಪರಿಪಾಲನೆಗಳಿಗೆ ಮತ್ತೊಂದು ಹೆಸರೆನಿಸಿದ ಶಂಕರ್ ಅತ್ಯಲ್ಪಕಾಲದಲ್ಲೇ ಜನಮಾನಸದಲ್ಲಿ ನೆಲೆನಿಂತರು. ಅವರೊಂದಿಗೆ ಹೆಚ್ಚು ಸೃಜನಾತ್ಮಕವಾಗಿ, ಅರ್ಥಪೂರ್ಣವಾಗಿ ನಾನು ಕಳೆದ ಅವಧಿಯೆಂದರೆ ೧೯೮೮-೮೯ರ ವರ್ಷ.

ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಅಧಿಕಾರಸೂತ್ರವನ್ನು ಹಿಡಿದವರಿಗೆ ನಾಟಕ, ಸಾಹಿತ್ಯ, ಸಂಗೀತಗಳೆಲ್ಲ ‘ಬರ್ಷಣ’ (ಅಲರ್ಜಿ). ಇಂಥವುಗಳಲ್ಲಿ ತೊಡಗಿಕೊಂಡವರಿಗೆ ಸಿಗುತ್ತಿದ್ದ ‘ಕರಿನೀರಿನ ಶಿಕ್ಷೆ’ ಎಂದರೆ ಬೆಂಗಳೂರಿಗೆ ವರ್ಗಾವಣೆ. ನಾನು ಹಾಗೆ ಶಿಕ್ಷೆಗೊಳಗಾಗಿ ಈ ವಿಚಿತ್ರ ನಗರಿಗೆ ಬಂದಿಳಿದಾಗ ನನ್ನ ಕೊರಗನ್ನು ಕಳೆದು ಸಂತಸದಿಂದ ಇಟ್ಟದ್ದು ರಂಗಭೂಮಿಯ ಗೆಳೆಯರೇ.

‘ಬೆಳಕಿನ ಮುದ್ದಣ್ಣ’ನ ರೂಮಿನಲ್ಲಿದ್ದುಕೊಂಡು ‘ಸಂತ್ಯಾಗ ನಿಂತಾನ ಕಬೀರ’ ನಾಟಕ ಅನುವಾದಿಸಿ ಮುಗಿಸಿದ ಹೊಸತಿನಲ್ಲೇ ಗೆಳೆಯ ನಾಗಾಭರಣರ ಕರೆ ಬಂತು. ಆಗ ‘ಸಂತ ಶಿಶುನಾಳ ಶರೀಫ’ ಚಿತ್ರದ ಪೂರ್ವಸಿದ್ದತೆ ನಡೆದಿತ್ತು. ಭರಣರ ಭೇಟಿಗೆ ಹೋದ ನಾನು ‘ಸಂತ…’ದ ಸಂಭಾಷಣೆ ಬರೆಯುವ ಕಾಯಕಕ್ಕೆ ನಿಲ್ಲಬೇಕಾಯಿತು. ಗಾಯಕ ಸಿ. ಅಶ್ವಥ್ ಪರಿಚಯ ನನಗಾದದ್ದು ಆಗಲೇ. ಚಿತ್ರ ಮುಗಿದು ಡಬ್ಬಿಂಗ್ ಹಂತದಲ್ಲಿದ್ದಾಗ ನಾನು ಸಂಜೆಗಳನ್ನು ‘ಸಂಕೇತ್’ ಸ್ಟುಡಿಯೋ’ದಲ್ಲಿ ಕಳೆಯತೊಡಗಿದೆ.

ಅದೊಂದು ದಿನ ಗೆಳೆಯ ಸೂರಿ (ಎಸ್. ಸುರೇಂದ್ರನಾಥ್) ”ಶಂಕರ್ ಈ ಸಂಜೆ ನಿನ್ನನ್ನ ಭೇಟಿಯಾಗ್ಬೇಕಂತೆ. ಚಿತ್ರಕಲಾ ಪರಿಷತ್ತಿಗೆ ಬಾ,” ಎಂದು ಸಂದೇಶ ಕಳುಹಿಸಿದ. ಆಗ ಗಿರೀಶ್ ಕಾರ್ನಾಡರ ‘ನಾಗಮಂಡಲ’ ನಾಟಕವನ್ನು ಸಂಕೇತ್ ತಂಡಕ್ಕಾಗಿ ನಿರ್ದೆಶಿಸುತ್ತಲಿದ್ದರು ಶಂಕರ್ ಮತ್ತು ಸುರೇಂದ್ರನಾಥ್. ಅದನ್ನೊಂದು ಅಭೂತಪೂರ್ವ ಪ್ರಯೋಗವನ್ನಾಗಿ ಮಾಡುವ ಹಂಬಲ ಶಂಕರಗೆ. ಚಿತ್ರಕಲಾ ಪರಿಷತ್ತಿನ ಬಯಲೇ ಅವರ ರಂಗ ವೇದಿಕೆ.

ನನ್ನನ್ನು ಆತ್ಮೀಯವಾಗಿಯೇ ಬರಮಾಡಿಕೊಂಡ ಶಂಕರ್, ”ನೀವು ಹಾಡುಗಳನ್ನೂ ಬರೀತೀರಿ ಅಂತ ನನಗೆ ಗೊತ್ತೇ ಇರಲಿಲ್ಲ ನೋಡಿ. ತುಂಬಾ ಚೆನ್ನಾಗಿ ಬರೀತೀರಂತೆ ನೀವು. ಅಶ್ವಥ್ ಸಾರ್ ಹೇಳೀದ್ರು… ಈ ಪ್ರಯೋಗಕ್ಕೆ ದಯವಿಟ್ಟು ಒಂದಷ್ಟು ಒಳ್ಳೆಯ ಹಾಡುಗಳನ್ನ ಬರೆದುಕೊಡಿ ಸಾರ್… ” ಅಂತ ಸ್ಕ್ರಿಪ್ಟ್ ಕೈಗಿತ್ತು, ಗಟ್ಟಿಯಾಗಿ ಕೈ ಹಿಡಿದರು. (ಆಹಾ, ಅದೆಂಥ ‘ಸಸ್ನೇಹ’ ಹಸ್ತಲಾಘವ ಅದು…!) ಎಲ್ಲೆಲ್ಲಿ ಹಾಡುಗಳು ಬೇಕು ಎಂಬುದನ್ನೂ ವಿವರಿಸಿದರು.

ಒಮ್ಮೆಲೇ ಆ ಕೆಲಸವನ್ನು ಒಪ್ಪುವುದು ಕಷ್ಟದ ಕೆಲಸವೇ. ಆದರೂ, ಅವರ ದನಿಯಲ್ಲಿನ ಪ್ರೀತಿ, ಜತೆಗೆ ನನ್ನ ಹೆಸರನ್ನು ಶಿಫಾರಸು ಮಾಡಿದ್ದ ‘ಗುರು’ ಸಿ. ಅಶ್ವಥ್ ಅವರ ಮೇಲಿನ ಗೌರವಗಳು ನನ್ನನ್ನು ಒಪ್ಪುವಂತೆ ಮಾಡಿಬಿಟ್ಟವು.

‘ಶರೀಫ…’ದ ಚಿತ್ರೀಕರಣ ಸಂದರ್ಭದಲ್ಲಿ ಕಾರ್ನಾಡರು ‘ನಾಗಮಂಡಲ’ದ ಕರಡನ್ನು ತಿದ್ದುತ್ತಲಿದ್ದುದರಿಂದ ಆ ಕಥೆ ನನಗೆ ಗೊತ್ತಿತ್ತು. ಆಗೀಗ ಗಿರೀಶ್ ಅದರ ಬಗ್ಗೆ ಅಲ್ಲಿ ಚರ್ಚಿಸಿದ್ದೂ ಇತ್ತಲ್ಲ. ನಾಲ್ಕು ನಾಲ್ಕು ಸಲ ಆ ಹಸ್ತಪ್ರತಿಯನ್ನು ಓದಿದೆ. ಆದರೂ ಅದೇನೋ ಅಳುಕು. ಶಂಕರರಂಥ ಪ್ರತಿಭಾವಂತ, ಅಶ್ವಥ್ ಅವರಂಥ ರಾಗಸಂಯೋಜಕ… ಅವರ ನಿರೀಕ್ಷೆಗೆ ತಕ್ಕಂತೆ ನಾನು ಹಾಡುಗಳನ್ನು ಬರೆಯಬಲ್ಲೇನೆ ಎಂಬ ಅನುಮಾನ. ಹೀಗಾಗಿ ಸ್ವಲ್ಪ ನಡುಕ ಹುಟ್ಟಿದ್ದೂ ನಿಜ.

ಏನಾದರಾಗಲಿ ಅಂತ, ‘ಹೀಂಗಿದ್ದಳೊಬ್ಬಳು ಹುಡುಗೀ…’ ಎಂಬ ಹಾಡು ಬರೆದು ಮುಗಿಸಿದೆ. ಮತ್ತೆ ಮತ್ತೆ ನನಗೆ ನಾನೇ ಓದಿ ನೋಡಿದೆ. ಆ ಹಾಡು ಏನೋ ಒಂದು ರೀತಿ ಖುಷಿ ಕೊಟ್ಟಿತು. ನನಗೆ ಸ್ವಲ್ಪ ಧೈರ್ಯ ಬಂತು. ಇನ್ನೂ ಒಂದೆರಡು ಹಾಡು ಬರೆದು ಮುಗಿಸಿದೆ.

ಅವನ್ನು ನೋಡಿ, ”ಚೆನ್ನಾಗಿವೇರೀ…ಲಯದಲ್ಲೇ ಇವೆ…” ಅಂತ ಸಿ. ಅಶ್ವಥ್.

”ಹಾಗಿದ್ರೆ ಕಂಪೋಸಿಂಗ್ ಯಾವಾಗ ಮಾಡ್ತೀರೀ ಗುರುವೇ…” ಅಂತ ಶಂಕರ್.

”ಎಲ್ಲಾ ಹಾಡುಗಳೂ ಮುಗೀಲಿ,” ಅಂತ ಸುರೇಂದ್ರ…

ನಾಲ್ಕಾರು ದಿನಗಳಲ್ಲೇ ಎಲ್ಲ ಹಾಡುಗಳೂ ಮುಗಿದವು. ಶಂಕರ್ ಅವನ್ನು ನೋಡಿ ”ಅದ್ಭುತವಾಗಿದೆ ಸಾರ್…” ಅಂತ ಕುಣಿಯತೊಡಗಿದರೆ,

”ಏನು ಅದ್ಭುತ? ಮಣ್ಣಾಂಗಟ್ಟಿ… ಮೀಟರಿಗೆ ಬರೀರಿ ಅಂದ್ರೆ ಕಿಲೋಮೀಟರಿಗೆ ಬರೆದಿದ್ದಾರೆ…” ಅಂತ ಅಶ್ವಥ್.

ನಾನು ಕುಗ್ಗಿಹೋದೆ. ”ಹೀಗೆ ಕಾಲೆಳೆಯೋದು ಅಶ್ವಥ್ ಸ್ಟೈಲ್ ಕಣೋ…” ಅಂತ ಸುರೇಂದ್ರ ಆಗ ಸಮಾಧಾನಿಸದಿದ್ದರೆ ನಾನು ಪೂರ್ತಿ ಕುಸಿದುಬಿಡುತ್ತಿದ್ದೆನೇನೋ.

ಎಲ್ಲ ಹಾಡುಗಳೂ ಮುಗಿದ ಮೇಲೆ, ”ನಮ್ಮ ‘ಫಾರ್ಮ್ ಹೌಸ್’ನಲ್ಲೆ ಕಂಪೋಸಿಂಗ್ ಆಗಿಬಿಡ್ಲಿ ಗುರುವೇ…” ಅಂತ ಶಂಕರ್ ಅಭಿಪ್ರಾಯಕ್ಕೆ, ”ನೀವು ಎಲ್ಲಂತೀರೋ ಅಲ್ಲಿ… ಒಟ್ಟು ‘ವ್ಯವಸ್ಥೆ’ ಅಂದ್ರೆ, ‘ವಾತಾವರಣ’ ಚೆನ್ನಾಗಿರಬೇಕು, ಅಷ್ಟೇ…” ಅಂತ ನಕ್ಕರು ಅಶ್ವಥ್.

ನೀವು ನಂಬುತ್ತೀರೋ ಇಲ್ಲವೋ, ಆ ಕಾಲಕ್ಕೆ ತುಂಬ ಬೇಡಿಕೆಯಲ್ಲಿದ್ದ ಶಂಕರ್ ಅಂಥ ಒಬ್ಬ ‘ಸ್ಟಾರ್’ ನಮ್ಮನ್ನೆಲ್ಲ ತಮ್ಮ ಮೆಟಾಡೋರ್ ವಾಹನದಲ್ಲಿ ಹೇರಿಕೊಂಡು, ‘ಸಂಕೇತ್’ ಸ್ಟುಡಿಯೋ ಆವರಣದಿಂದ ತಾವೇ ಡ್ರೈವ್ ಮಾಡಿಕೊಂಡು, ಎನ್ನಾರ್ ಕಾಲನಿಯ ಅಶ್ವಥ್ ಅವರ ಮನೆಗೆ ಬಂದು, ಅವರ ಹಾರ್ಮೊನಿಯಮ್ಮನ್ನು ತಾವೇ ಒಳಗಿಂದ ತಂದು ವ್ಯಾನಿನಲ್ಲಿಟ್ಟು, ದಾರಿಯಲ್ಲಿ ಅಲ್ಲಲ್ಲಿ ಒಂದೆರಡು ಅಂಗಡಿಗಳ ಎದುರು ನಿಲ್ಲಿಸಿ, ಯಾವುದೇ ಎಗ್ಗು-ಸಿಗ್ಗಿಲ್ಲದೆ ತಾವೇ ಅಂಗಡಿಗೆ ಹೋಗಿ ಸಿಗರೇಟು ಇತ್ಯಾದಿ ‘ಸಾಮಗ್ರಿ’ಗಳನ್ನು ಕೊಂಡುಕೊಂಡು, ಹೊಸೂರು ರಸ್ತೆಯ ಸಿಂಗಸಂದ್ರದ ತಮ್ಮ ‘ಫಾರ್ಮ್ ಹೌಸ್’ಗೆ ಕರೆದೊಯ್ದಿದ್ದರು.

ಅಲ್ಲಿ ಇಳಿಯುತ್ತಿದ್ದಂತೆಯೇ, ”ವೆಲ್ ಕಂ ಗೋವಾ… ವೆಲ್ ಕಂ…” ಅಂತ ಶಿವರಾಜ್ ಓಡಿ ಬಂದು ನನ್ನ ಕೈಕುಲುಕಿದರು. ಈ ಶಿವರಾಜ್ ಸದಾ ಹಸನ್ಮುಖಿ. ಒಣಗಿದ ಮರವನ್ನೂ ಮಾತಾಡಿಸಿ, ಅದು ಮತ್ತೆ ಚಿಗುರುವಂತೆ ಮಾಡಬಲ್ಲ ಸ್ನೇಹಜೀವಿ.) ನನಗೆ ೧೯೭೪ರಷ್ಟು ಹಿಂದಿನಿಂದಲೂ ಆತ್ಮೀಯ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಒಂದು ನಾಟಕ ಸಂದರ್ಭದಲ್ಲಿ ಅವರ ಮೊದಲ ಭೇಟಿ ನನಗೆ.

”ಆಂ…! ‘ಗೋವಾ’ನಾ…? ಏನ್ ಸಾರ್ ಹಂಗಂದ್ರೆ…?” ಎಂಬ ಶಂಕರ್ ಜಿಜ್ಞಾಸೆಗೆ ನಾನು, ”ಅದು ನನ್ನ ಹೆಸರಿನ ಹೃಸ್ವರೂಪ. ನನ್ನ ಕಾವ್ಯನಾಮವೂ ಅದೇ,” ಅಂತ ವಿವರಣೆ ಕೊಟ್ಟೆ. ತಗೋ… ಅಂದಿನಿಂದ ನನ್ನನ್ನು ಶಂಕರ್ ‘ಗೋವಾ’ ಅಂತಲೇ ಕರೆಯೋದಕ್ಕೆ ಶುರು ಮಾಡಿದರು. ಅವರು ಕರೆಯುತ್ತಿದ್ದ ರೀತಿ ಹ್ಯಾಗಿರುತ್ತಿತ್ತೆಂದರೆ – ಒಮ್ಮೆ ನೀವು ಕರೆಗಂಟೆಯ ‘ಟಿಂಗ್-ಟಾಂಗ್’ ಲಯವನ್ನು ನೆನಪಿಸ್ಕೊಳ್ಳಿ, ನಿಮಗೇ ಗೊತ್ತಾಗುತ್ತದೆ.

ನಾವೆಲ್ಲಾ ಅಲ್ಲಿಳಿದ ಮೇಲೆ, ಎಲ್ಲರಿಗೂ ಒಂದಷ್ಟು ಕುರುಕಲು ತಿಂಡಿ-ಕಾಫಿ ಕೊಟ್ಟು, ಅಲ್ಲಿಯ ಏರ್ಪಾಟಿಗೆ ನಿಂತರು ಶಂಕರ್. ತಾವೇ ಒಳಗೆ ಹೋಗಿ ನಾಲ್ಕಾರು ಗಾದಿಗಳನ್ನು ಹೊತ್ತು ತಂದು, ಆ ಹುಲ್ಲುಗಾವಲಿನ ಅಂಗಳದಲ್ಲಿ ಹಾಕಿ, ಅವುಗಳ ಮೇಲೆ ಶುಭ್ರ ಬಿಳಿ ಮೆದುವಾಸು ಹೊದಿಸಿ, ಆತುಕೊಳ್ಳಲು ಅಲ್ಲಲ್ಲಿ ‘ಲೋಡು’ಗಳನ್ನು ಇಟ್ಟು, ಸುತ್ತ ಒಂದಷ್ಟು ಮಂದ ಬೆಳಕು ಬೀರುವ ಕಂದೀಲುಗಳನ್ನು ಇರಿಸಿ, ನಟ್ಟ ನಡುವೆ ಅಶ್ವಥ್ ಅವರು ಕೂರಲು ‘ವಿಶೇಷ’ ಆಸನ ಹಾಕಿ, ”ಹೂಂ, ಶುರು ಹಚ್ಕೊಳ್ಳಿ ಸಾರ್…” ಅಂತ ಒಂದು ನಗೆ ಚೆಲ್ಲಿದರು.

ಅಶ್ವಥ್ ಆ ವ್ಯವಸ್ಥೆಯಿಂದ ‘ಸುಪ್ರಸನ್ನ’ರಾದರು. ಮೂಡಿಗೆ ಬಂದು ಒಂದೊಂದೇ ಒಂದೊಂದೇ ಟ್ಯೂನನ್ನು ಕೇಳಿಸತೊಡಗಿದರು. ಎರಡು ರಾತ್ರಿ ಅಂಥದೇ ‘ವಾತಾವರಣ’ದಲ್ಲಿ ಕಂಪೋಸಿಂಗ್ ನಡೆದು, ಅಶ್ವಥ್ ಸ್ಪರ್ಶದಿಂದ ಹೊಸ ರೂಪ ಪಡೆದು ನಿಂತವು ನನ್ನ ಹಾಡುಗಳು. ಶಂಕರ್ ಅಂತೂ ಹಾಡಿದ್ದೇ ಹಾಡಿದ್ದು, ಕುಣಿದದ್ದೇ ಕುಣಿದದ್ದು… ಅದರಲ್ಲೂ ಶಂಕರ್ ಇಷ್ಟಪಟ್ಟ ಹಾಡೆಂದರೆ-

ಅದs ಗ್ವಾಡಿ, ಅದs ಸೂರು…ದಿನವೆಲ್ಲಾ ಬೇಜಾರು…

ತಿದಿಯೊತ್ತಿ ನಿಟ್ಟುಸಿರು, ಎದಿಯಾsಗ ಚುರು ಚುರು…

ಬಂದಾನೇನs ಇದುರು ನಿಂದಾನೇನs…

ಈ ಕಂಪೋಸಿಂಗ್ ನಡೆಯುತ್ತಿದ್ದಾಗ ಬಾಯಿಗೆ ಹಾಕಿಕೊಳ್ಳಲು ಆಗಾಗ ಒಂದಷ್ಟು ಬಿಸಿ ಬಿಸಿ ಪಕೋಡಾ, ಒಂದಷ್ಟು ಕಾಂಗ್ರೆಸ್ ಕಡಲೆ ಬೀಜ, ಒಂದಷ್ಟು ಚೌ ಚೌ ಅಂತ ಒಂದರ ನಂತರ ಒಂದು ತಂದು ಇಡುತ್ತಲೇ ಇರುತ್ತಿದ್ದರು ಅತಿಥಿಪ್ರಿಯ ಶಂಕರ್.

ಆನಂತರ ಹಾಡುಗಳ ಸಮೇತ ತಾಲೀಮು. ಅಲ್ಲಲ್ಲಿ ಸಣ್ಣ-ಪುಟ್ಟ ತಿದ್ದುಪಡಿಗಳು, ಸೇರ್ಪಡೆಗಳು.

ಮುಂದಿನ ಹತ್ತು ದಿನ ಅಬ್ಬಾ… ಚಿತ್ರಕಲಾ ಪರಿಷತ್ತಿನ ಬಯಲಿನಲ್ಲಿ ‘ನಾಗಮಂಡಲ’ವೆಂಬ ಮಾಯಾಲೋಕವನ್ನೇ ತೆರೆದಿಟ್ಟರು ಶಂಕರ್. ಜನಕ್ಕೆ ನನ್ನ ಹಾಡುಗಳು ಇಷ್ಟವಾದವು. ಸ್ವತಃ ಗಿರೀಶ ಕಾರ್ನಾಡರೆ ಹಾಡುಗಳ ಬಗ್ಗೆ ಪ್ರಶಂಸಿಸಿ ನನ್ನನ್ನು ಅಭಿನಂದಿಸಿದರು.

(ಮುಂದೆ, ೧೯೭೨ರಲ್ಲಿ ಈ ಹಾಡುಗಳ ಒಂದು ಕ್ಯಾಸೆಟ್ ಹೊರಬಂತು. ಈ ಪೈಕಿ ‘ಮಾಯಾದೋ ಮನದ ಭಾರಾ…’ ಹಾಡನ್ನು ನನ್ನ ಅನುಮತಿ ಸಹಿತ ‘ನಾಗಮಂಡಲ’ ನಾಟಕದ ೨೦೦೫ರ ಆವೃತ್ತಿಯಲ್ಲೂ, ೨೦೦೮ರಲ್ಲಿ ಹೊರಬಂದ ತಮ್ಮ ‘ಸಮಗ್ರ ನಾಟಕ ಸಂಪುಟ’ದಲ್ಲೂ ಗಿರೀಶರು ಬಳಸಿಕೊಂಡರು. ಆದರೆ, ಎರಡೂ ಕಡೆ ನನ್ನ ಹೆಸರನ್ನು ‘ಸ್ಮರಿಸಲು’ ಕಾರ್ನಾಡರಿಗೆ ‘ನೆನಪಾಗಲೇ ಇಲ್ಲ.’)

ಇರಲಿ. ನಾನು ಬರೆದ ಆ ಹಾಡುಗಳು ಈಗಲೂ ರಂಗಪ್ರಿಯರಿಗೆ ನೆನಪಿವೆಯಲ್ಲ… ಅದು ದೊಡ್ಡದು.

ಹೀಗೆ ಅವು ನೆನಪಿನಲ್ಲಿ ಉಳಿಯುವ ಹಾಡುಗಳಾಗಿ ನಿಂತದ್ದಕ್ಕೆ ಶಂಕರ್ ಅವರ ಒತ್ತಾಸೆ, ಮತ್ತು ಅಶ್ವಥ್ ಅವರ ರಾಗಸಂಯೋಜನೆಯೇ ಕಾರಣ… (ಅಶ್ವಥ್ ರಾಗಸಂಯೋಜನೆ ಮಾಡಿದ ಕೊನೆಯ ನಾಟಕ ಈ ‘ನಾಗಮಂಡಲ’.)

ಆ ನಂತರ, ಶಂಕರ್ ಅವರ ‘ಫಾರ್ಮ್ ಹೌಸ್’ಗೆ ನಾನು ನಿತ್ಯದ ಅತಿಥಿಯಾದೆ. ಸಂಜೆ ಸಂಕೇತ್ ಸ್ಟುಡಿಯೋದಲ್ಲಿ ಕೂತಿರುತ್ತಿದ್ದ ನನ್ನನ್ನು ಶಂಕರ್, ”ಬನ್ನಿ ಗೋವಾ, ‘ಫಾರ್ಮ್ ಹೌಸ್’ಗೆ ಹೋಗೋಣ ಬನ್ನಿ…” ಎಂದು ಕರೆಯುತ್ತಿದ್ದರು. (ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಕರೆದವರ ಮನೆಯಲ್ಲಿ ಉಂಡು, ಇಲ್ಲೇ ಇರು ಎಂದವರ ಮನೆಯಲ್ಲಿ ಮಲಗಿ ಕಾಲ ಕಳೆದದ್ದೂ ಇದೆ ನಾನು.) ರಾತ್ರಿ ಎರಡರ ತನಕ ಏನಾದರೂ ಮಾಡುತ್ತಲೇ ಇರುತ್ತಿದ್ದ ಶಂಕರ್ ಮತ್ತೆ ಬೆಳಗಿನ ಐದೂವರೆಗಾಗಲೇ ಎದ್ದು, ‘ಶೂಟಿಂಗ್ ಸ್ಪಾಟ್’ಗೆ ಹೋಗಲು ಅಣಿಯಾಗಿಬಿಡುತ್ತಿದ್ದರು. ನಾನವರ ಗೆಸ್ಟ್ ರೂಮಿನಲ್ಲಿನ್ನೂ ಸಕ್ಕರೆ ನಿದ್ದೆಯಲ್ಲಿರುತ್ತಿದ್ದ ಸಮಯದಲ್ಲಿ, ಶಂಕರ್ ತಮ್ಮ ಡ್ರೈವರ್ ನಿಂಗಣ್ಣನಿಗೆ, ”ಈ ಸಾರು ಎದ್ದು ಕಾಫಿ ಕುಡಿದ ಮೇಲೆ, ಅವರ ರೂಮಿಗೆ ಡ್ರಾಪ್ ಕೊಡಬೇಕು ನಿಂಗಣ್ಣಾ…” ಅಂತ ಹೇಳಿದ್ದನ್ನು ಎಷ್ಟೋ ಸಲ ಕೇಳಿದ್ದೇನೆ. ಅದೆಂಥ ಕಾಳಜಿ ಅವರದು…! ಬಂಕಾಪುರದ ನಿಂಗಣ್ಣ ಹಾಗೆಯೇ ಮಾಡುತ್ತಿದ್ದ. (ಈ ನಿಂಗಣ್ಣ ಶಂಕರ್ ಜತೆಯೇ ಆ ಅವಘಡದಲ್ಲಿ ಅಸು ನೀಗಿದ, ಪಾಪ…)

ಚಿತ್ರಕಲಾ ಪರಿಷತ್ತಿನ ಬಯಲಿನಲ್ಲಿ ‘ನಾಗಮಂಡಲ’ ಪ್ರಯೋಗಗಳ ನಂತರ ಶಂಕರ್ ‘ಮಾಲ್ಗುಡಿ…’ ಸರಣಿಯ ಚಿತ್ರೀಕರಣಕ್ಕಾಗಿ ಆಗುಂಬೆಗೆ ಹೋದರು. ‘ಸಂತ…’ದ ಡಬ್ಬಿಂಗ್ ಇನ್ನೂ ನಡೆದೇ ಇತ್ತಾದ್ದರಿಂದ ಅದೊಂದು ರವಿವಾರ ನಾನು ಸಂಕೇತ್ ಸ್ಟುಡಿಯೋದಲ್ಲಿ ಕೂತಿದ್ದೆ. ಗೆಳೆಯ ಶಿವರಾಜ್ ಒಂದು ಟೆಲಿಗ್ರಾಂ ತಂದುಕೊಟ್ಟರು. ನೋಡಿದರೆ, ಎರಡು ದಿನಗಳ ಮಟ್ಟಿಗೆ ನನ್ನನ್ನ ಆಗುಂಬೆಗೆ ಕರೆದುಕೊಂಡು ಬರುವಂತೆ ಅವರು ಶಿವೂಗೆ (ಶಿವರಾಜರನ್ನು ಶಂಕರ್ ಕರೆಯುತ್ತಿದ್ದದ್ದೆ ಹಾಗೆ) ಕಳಿಸಿದ ತಂತಿ ಅದು. ನಾನು, ಸಹೋದ್ಯೋಗಿ ಉದಯ ಮರಕ್ಕಿಣಿ ಮತ್ತು ಶಿವರಾಜ್ ಆ ರಾತ್ರಿಯೇ ಕಾರಿನಲ್ಲಿ ಆಗುಂಬೆಯ ಕಡೆಗೆ ಹೊರಟೆವು.

ಮುಂಜಾನೆ ನಮ್ಮನ್ನು ಎದುರುಗೊಂಡ ಶಂಕರ್, ”ಏನಿಲ್ಲಾ ಗೋವಾ… ಇಲ್ಲಿ, ಈ ವಾತಾವರಣದಲ್ಲಿ ನಿಮ್ ಜತೆ ಒಂದು ರಾತ್ರಿ ಸುಮ್ನೆ ಹಾಡು, ಹರಟೆ ಅಂತ ಕಾಲಾ ಕಳೀಬೇಕು ಅನಿಸ್ತು. ಅದಕ್ಕೇ ಬರೋದಕ್ಕೆ ಹೇಳಿದ್ದು…” ಅಂತ ನಕ್ಕರು. ನಾನು, ಉದಯ ಮರಕ್ಕಿಣಿ, ಶಿವರಾಜ್ ಆ ದಿನವಿಡೀ ‘ಮಾಲ್ಗುಡಿ…’ಯ ಚಿತ್ರೀಕರಣ ನೋಡುತ್ತ, ಆಗುಂಬೆಯ ಚೆಂದವನ್ನ ಸವಿಯುತ್ತ, ಸಂಜೆ ಒಂದಷ್ಟು ಹೊತ್ತು ಶೃಂಗೇರಿಗೆ ಹೋಗಿ ಶಾರದಾಂಬೆಯ ದರ್ಶನ ಮಾಡಿ, ಅವರ ಕ್ಯಾಂಪಿಗೆ ಮರಳಿ ಬಂದೆವು.

ಆ ರಾತ್ರಿ ಬೆಳದಿಂಗಳಲ್ಲಿ ಊಟ ಮಾಡುತ್ತ ಶಂಕರ್, ”ಗೋವಾ… ‘ನಾಗಮಂಡಲ’ವನ್ನ ಸಿನೆಮಾ ಮಾಡೋ ಯೋಚನೆ ಇದೆ… ಅಶ್ವಥ್ ಸಾರೇ ಮ್ಯೂಜಿಕ್ ಮಾಡ್ಬೇಕು… ನೀವೇ ಹಾಡು ಬರೀಬೇಕು… ಏನಂತೀರಿ…?” ಅಂತ ತಮ್ಮ ವಿಚಾರವನ್ನು ಬಿಚ್ಚಿಟ್ಟರು. ಅವರು ಹಾಗೆಯೇ. ಒಳ್ಳೊಳ್ಳೆಯ ಯೋಜನೆಗಳನ್ನು ಹಾಕುತ್ತ, ಅವನ್ನು ಶಿಸ್ತುಬದ್ಧವಾಗಿ ಕಾರ್ಯರೂಪಕ್ಕೆ ತರುತ್ತ, ಹತ್ತಾರು ಯುವಕರನ್ನು ತಮ್ಮೊಂದಿಗೆ ಸೇರಿಸಿಕೊಂಡು ದುಡಿಯುವ ಹುಮ್ಮಸ್ಸಿನ ವ್ಯಕ್ತಿ. ಅವರ ಯೋಚನೆಗಳು, ಯೋಜನೆಗಳು ಎಂಥವು ಎಂಬುದು ಸರ್ವವಿದಿತವೆ.

ತಮ್ಮ ವಿಷಯದಲ್ಲೇ ಇರಲಿ ಇತರರ ವಿಚಾರದಲ್ಲೇ ಆಗಲಿ, ಶ್ರಮಕ್ಕೆ ತಕ್ಕ ಗೌರವ ಮತ್ತು ಪ್ರತಿಫಲಗಳು ಸಿಕ್ಕಬೇಕೆಂಬುದು ಶಂಕರ್ ದೃಷ್ಟಿ. ‘ಮಾಲ್ಗುಡಿ’ಯ ಒಂದೆರಡು ಕಂತುಗಳಲ್ಲಿ ನಾನು ಒಬ್ಬಿಬ್ಬರು ಕಲಾವಿದರಿಗೆ ಹಿಂದಿಯಲ್ಲಿ ‘ಕಂಠದಾನ’ ಮಾಡಿದ್ದೆ. ಆಕಾಶವಾಣಿ ನಾಟಕಗಳಲ್ಲಿ ಭಾಗವಹಿಸಿ ಅನುಭವ

ಇತ್ತಾದರೂ, ಚಿತ್ರವೊಂದಕ್ಕೆ ‘ಕಂಠದಾನ’ ಮಾಡುವ ಅನುಭವ ಹೇಗಿರುತ್ತದೆಂದು ನೋಡುವುದಷ್ಟೇ ನನ್ನ ಉದ್ದೇಶವಾಗಿತ್ತು.

ಮುಂದೆ ಒಂದು ಸಂಜೆ ನಾನು ಹೀಗೇ ‘ಸಂಕೇತ್ ಸ್ಟುಡಿಯೋ’ ಆವರಣದಲ್ಲಿ ಕಾಲಿಡುತ್ತಲೂ, ‘ಬಂದಾನೇನs ಇದುರು ನಿಂದಾನೇನs…’ ಎಂದು ಹಾಡುತ್ತ ನನ್ನ ಬಳಿ ಓಡಿ ಬಂದರು ಶಂಕರ್. ”ಏನ್ ಟೈಮಿಂಗ್ ಗೋವಾ ನಿಮ್ಮದು… ಬನ್ನಿ ಬನ್ನಿ, ಇಲ್ಲೊಂದ್ ಸೈನ್ ಹಾಕಿ. ಇದು ನಿಮ್ ಚೆಕ್ಕು… ” ಅಂತ ಕೈಗೊಂಡು ಚೆಕ್ಕು ತುರುಕಿ ನಕ್ಕರು. ಹೆಚ್ಚೆಂದರೆ ನಾಲ್ಕಾರು ಡೈಲಾಗುಗಳಿರಬೇಕು ನಾನು ಹೇಳಿದ್ದು… ಅಷ್ಟಕ್ಕೇ ಆ ಕಾಲದಲ್ಲಿ ನನಗೆ ಅವರು ಕೊಟ್ಟ ಸಂಭಾವನೆ ಹಣ ೫೦೦-೦೦ ರೂಪಾಯಿಗಳು!

ಅಂದಿನಿಂದ ಮುಂದೆಲ್ಲ ಶಂಕರ್ ನನ್ನನ್ನು ಎದುರುಗೊಳ್ಳತೊಡಗಿದ್ದು ‘ಬಂದಾನೇನs ಇದುರು ನಿಂದಾನೇನs…’ ಎಂಬ ಹಾಡಿನಿಂದಲೇ…

‘ಮಾಲ್ಗುಡಿ’ಯ ಸಂಬಂಧದಲ್ಲಿ ಅವರು, ಕಲಾವಿದರು, ತಂತ್ರಜ್ಞರು, ಮತ್ತು ಗೆಳೆಯರನ್ನೆಲ್ಲ ಕರೆದು ತಮ್ಮ ‘ಫಾರ್ಮ್ ಹೌಸ್’ನ ಹುಲ್ಲು ಹಾಸಿನ ಮೇಲೆ ಕೊಟ್ಟ ಪಾರ್ಟಿಗಳಂತೂ ನೆನಪಿನಿಂದ ಮಾಸುವಂತೆಯೇ ಇಲ್ಲ. ಅಲ್ಲಿ ಬರುತ್ತಿದ್ದ ವೈಎನ್ಕೆ ಅವರು ಮಾಡುತ್ತಿದ್ದ ಜೋಕುಗಳು, ಪನ್ನುಗಳು… ಒಂದೇ ಎರಡೇ…?

‘ನಾಗಮಂಡಲ’ ಹತ್ತನೆಯ ಪ್ರಯೋಗ ಮುಗಿದ ರಾತ್ರಿ ಕಲಾವಿದರು, ತಂತ್ರಜ್ಞರು, ಮತ್ತು ಗೆಳೆಯರನ್ನೆಲ್ಲ ಹೀಗೆ ತಮ್ಮ ‘ಫಾರ್ಮ್ ಹೌಸ್’ಗೆ ಕರೆದು ಪಾರ್ಟಿ ಕೊಟ್ಟು, ನಕ್ಕು ನಲಿದಾದ ಮೇಲೆ ನಮ್ಮಲ್ಲಿ ಕೆಲವರನ್ನು ನಮ್ಮ ನಮ್ಮ ರೂಮುಗಳಿಗೆ ಬಿಡಲು ತಾವೇ ಮೆಟಾಡೋರ್ ಏರಿದರು ಶಂಕರ್. ಕೋರಮಂಗಲ ಬರುವ ಹೊತ್ತಿಗೆ ಅದಾಗಲೇ ಅವರು ತುಂಬ ಸುಸ್ತಾದಂತೆ ಕಂಡಿತಾದ್ದರಿಂದ ನಾವೇ, ”ಬೇಡ ಸಾರ್, ಇಲ್ಲೇ ಇಳಿಸಿಬಿಡಿ. ಆಟೋನಲ್ಲಿ ಹೋಗ್ತೀವಿ,” ಅಂತ ಒತ್ತಾಯಿಸಿದೆವು. ಶಂಕರ್ ಗಾಡಿ ನಿಲ್ಲಿಸಿದರು. ಕೆಳಗಿಳಿದರು. ಆಗ ಅಲ್ಲಿದ್ದ ಆಟೋದವರನ್ನು ನೋಡಬೇಕಿತ್ತು. ತಮ್ಮ ‘ಮನೆದೇವರನ್ನು’ ನೋಡಿದಂತೆ ಅವರೆಲ್ಲ ಕೈಮುಗಿದು, ‘ಅಣ್ಣಾ…’ ‘ಅಣ್ಣಾ…’ ಎನ್ನುತ್ತ ಕೈಕಟ್ಟಿ ನಿಂತರು. ”ಇವರೆಲ್ಲ ನನ್ನ ಸ್ನೇಹಿತರಪ್ಪಾ… ಸೇಫಾಗಿ ರೂಮಿಗೆ ಬಿಡಬೇಕು…” ಅಂತ ಹೇಳಿ, ಶಂಕರ್ ನಮ್ಮನ್ನೆಲ್ಲ ಆಟೋ ಹತ್ತಿಸಿ ಬೀಳ್ಕೊಟ್ಟರು.

ಇಂಥದೇ ಇನ್ನೊಂದು ಸಂದರ್ಭದಲ್ಲಿ ಶಿವರಾಜ್ ಜೊತೆ ಅವರ ‘ಫಾರ್ಮ್ ಹೌಸ್’ಗೆ ಹೋಗಿದ್ದೆ. ಆ ವೇಳೆಗೆ ನಮ್ಮ ಆಡಳಿತಗಾರರ ‘ಕೃಪಾ ದೃಷ್ಟಿ’ ನನ್ನ ಮೇಲೆ ಬಿದ್ದಿತ್ತು. ಮರಳಿ ಹುಬ್ಬಳ್ಳಿಗೆ ವರ್ಗಾವಣೆಯಾದ ‘ಆಜ್ಞಾ ಪತ್ರ’ವೂ ನನ್ನ ಕೈಸೇರಿತ್ತು. ಊಟ ಮಾಡುತ್ತ ವಿಚಾರ ತಿಳಿಸಿದೆ. ಥಟ್ಟನೆ ಎದ್ದರು ಶಂಕರ್. ”ಯಾರ್ರೀ ಅವ್ರು ನಿಮ್ಮ ಬಾಸು…? ಅವರಿಗೆ ಹೇಳಿ ನಿಮ್ಮ ಆರ್ಡರ್ ಕ್ಯಾನ್ಸಲ್ ಮಾಡಿಸಲೆನ್ರೀ…?” ಅಂತ ಕೇಳಿದರು. ನಾನು, ”ಬೇಡ ಸಾರ್… ಎರಡು ವರ್ಷದಿಂದ ಇಲ್ಲಿ ಒಬ್ನೇ ಒದ್ದಾಡ್ತಿದ್ದೀನಿ. ಹೆಂಡ್ತಿ-ಮಕ್ಳು-ತಾಯಿ ಎಲ್ಲಾ ಹುಬ್ಬಳ್ಳಿಯಲ್ಲಿದ್ದಾರೆ. ನಾನು ಹೋಗ್ಬೇಕು…” ಅಂದೆ. ”ಹೂಂ… ಆಯ್ತು… ಹುಬ್ಬಳ್ಳಿ ಏನು ದೂರದ ಊರಲ್ಲವಲ್ಲ… ಸಂಪರ್ಕದಲ್ಲಿರೋಣ… ಹೋಗಿ ಬನ್ನಿ ಶುಭವಾಗಲಿ,” ಅಂತ ಕೈ ಕುಲುಕಿದರು.

ಮುಂದೆ ನಾನು ಹುಬ್ಬಳ್ಳಿಯಲ್ಲಿ ‘ಜಡಭರತ ನಾಟಕೋತ್ಸವ’ (ಅವರ ಎಲ್ಲ ನಾಟಕಗಳ ಒಂದು ಉತ್ಸವ ನಡೆದದ್ದು ಅದೇ ಮೊದಲು) ಸಂಘಟಿಸಿದೆ. ಅದರ ಒಂದು ‘ಸ್ಮರಣ ಸಂಚಿಕೆ’ಗಾಗಿ ಜಾಹೀರಾತು ಸಂಗ್ರಹಕ್ಕಾಗಿ ಬೆಂಗಳೂರಿಗೆ ಬಂದೆ. ಶಂಕರ್ ಅವರನ್ನ ಭೇಟಿಯಾಗಿ ಒಂದು ಜಾಹೀರಾತು ಪಡೆಯಲು, ಹಾಗೆಯೇ, ನಾಟಕೋತ್ಸವದ ಉದ್ಘಾಟನೆ ಇಲ್ಲವೇ ಸಮಾರೋಪಕ್ಕೆ ಮುಖ್ಯ ಅತಿಥಿಯಾಗಿ ಬರುವಂತೆ ಅವರನ್ನು ಕೇಳಿಕೊಳ್ಳಲು ಬಯಸಿ ‘ಸಂಕೇತ್ ಸ್ಟುಡಿಯೋ’ಗೆ ಹೋದೆ.

ಶಂಕರ್ ಅಲ್ಲಿರಲಿಲ್ಲ. ‘ಕಂಠಿರವ’ದಲ್ಲಿ ಶೂಟಿಂಗಲ್ಲಿದ್ದಾರೆ ಅಂತ ಅಲ್ಲಿಯ ಸಿಬ್ಬಂದಿಯಿಂದ ಗೊತ್ತಾಯಿತು. ”ಅವರೊಂದಿಗೆ ಮಾತಾಡಬಹುದೇ…?” ಅಂತ ಕೇಳಿದೆ. ”ಸ್ವಲ್ಪ ಇರಿ ಸಾರ್…” ಅಂತ ಆತ ‘ಕಂಠಿರವ’ಕ್ಕೆ ಫೋನ್ ಹಚ್ಚಿಯೇಬಿಟ್ಟ. ಶಂಕರ್ ಲೈನ್ ಮೇಲೆ ಬಂದರು. ”ನಿಮ್ಮನ್ನ ಭೇಟಿಯಾಗಬೇಕಲ್ಲಾ…” ಅಂತ ನಾನು. ”ಎಂಥಾ ಸೌಭಾಗ್ಯ ಗೋವಾ ನಂದು…! ಬಂದ್ಬಿಡಿ… ಬಂದ್ಬಿಡಿ…” ಅಂತ ಅವರು.

ನನ್ನ ಆಟೋ ಅಲ್ಲಿ, ‘ಕಂಠಿರವ’ದ ಗೇಟಿನಲ್ಲಿ ಪ್ರವೇಶಿಸುವುದಕ್ಕೂ, ಅಲ್ಲಿರುವ ಆ ಗುಡಿಯ ಹಿಂದಿನಿಂದ, ‘ಬಂದಾನೇನs ಇದುರು ನಿಂದಾನೇನs…’ ಎಂಬ ದನಿ ಕೇಳುವುದಕ್ಕೂ ಸರಿಯಾಯಿತು. ಶಂಕರ್ ಒಬ್ಬರೇ ಅಲ್ಲ, ನಟ ರಾಮಕೃಷ್ಣ ಕೂಡ ದನಿಗೂಡಿಸಿದ್ದರು. ಅದು ‘ಪ್ರಾಣಸ್ನೇಹಿತ’ದ ಚಿತ್ರೀಕರಣ.

ನಾನು ಬಂದ ಉದ್ದೇಶವನ್ನು ವಿವರಿಸಿದೆ. ”ಜಾಹೀರಾತು ಕೊಡ್ತೇನೆ ಗೋವಾ… ಜಿ.ಬಿ. ಅಂದ್ರೆ ನಮ್ಮ ‘ಅಜ್ಜ’… ಅವ್ರ ನಾಟಕಗಳ ಉತ್ಸವ ಅಂದಮೇಲೆ ಕೊಡದೆ ಇರೋದಕ್ಕಾಗುತ್ತದೆಯೇ…? ಆದ್ರೆ, ಆ ಹೊತ್ತಿಗೆ ಬಹುಶಃ ನಾನು ಅಬ್ರಾಡಲ್ಲಿರ್ತೇನೆ… ನಾಟಕೋತ್ಸವಕ್ಕೆ ಬರೋದಕ್ಕೆ ಆಗೋದಿಲ್ಲವಲ್ಲಾ…” ಅಂತ ಪೇಚಾಡಿಕೊಂಡರು. ”ಹಾಂ… ನೀವೀಗ ಬಂದಿದ್ದು ಒಳ್ಳೇದೆ ಆಯ್ತು ಬಿಡಿ. ಮುಂದಿನ ವಾರ ‘ನಾಗಮಂಡಲ’ ಶೋ. ರಾಣಿ ರೋಲ್ ಈ ಸಲ ಪಿಂಟಿ (ಪದ್ಮಾವತಿ ರಾವ್) ಮಾಡ್ತಾಳೆ… ಅವಳ ಡೈಲಾಗ್ ಡೆಲಿವರಿ ಸರಿಯಾಗಿದೆಯೋ ಇಲ್ವೋ ನೋಡಿಬಿಡಿ ಗೋವಾ… ನಾನೀಗ ಒಂದು ಶಾಟ್ ಮುಗಿಸಿ ಬರ್ತೇನೆ…” ಅಂತ ಅತ್ತ ಹೋದರು.

ಅವರ ರೀತೀನೆ ಹಾಗೆ. ಎಲ್ಲಿದ್ದರೂ ನಾಟಕದ್ದೆ ಯೋಚನೆ. ಅಥವಾ ತಾವು ಹಮ್ಮಿಕೊಂಡ ಯೋಜನೆಗಳದೇ ಚಿಂತನೆ…

ಅಂದು ಆ ‘ಪ್ರಾಣಸ್ನೇಹಿತ’ನಿಂದ ಬೀಳ್ಕೊಂಡು ಹುಬ್ಬಳ್ಳಿ ಸೇರಿದೆ. ಆದರೆ, ನನಗೆ ಅದೇ ಅವರ ಕೊನೆಯ ಭೇಟಿಯಾಗುತ್ತದೆ ಅನಿಸಿರಲೇ ಇಲ್ಲ…

ಭೌತಿಕವಾಗಿ ಇಲ್ಲಿಲ್ಲದಿದ್ದರೂ ಸಮಸ್ತ ಕನ್ನಡಿಗರ ಮನೋಮಂದಿರದಲ್ಲಿ ಜೀವಂತವಾಗಿ ನಲಿಯುತ್ತಿರುವವ ಗೆಳೆಯ ಶಂಕರ್.

ಆದರೂ ಒಮ್ಮೊಮ್ಮೆ, ಇಲ್ಲಿಯೇ ಎಲ್ಲಿಯಾದರೂ ಮರೆಯಲ್ಲಿ ನಿಂತು, ‘ಬಂದಾನೇನs ಇದುರು ನಿಂದಾನೇನs…’ ಎಂಬ ಹಾಡು ಹೇಳುತ್ತ, ಎದುರು ಬಂದು ನಗುತ್ತ ನಿಲ್ಲಬಹುದೇ ನನ್ನ ಶಂಕರ್ ಎನಿಸುವುದೂ ಉಂಟು…

25 Comments

 1. Shreepad Patil
  October 4, 2015
 2. Geetanjali
  September 30, 2015
 3. ಡಾ.ಹ.ವೆಂ.ಕಾಖಂಡಿಕಿ.
  September 30, 2015
 4. Suguna Mahesh
  September 30, 2015
 5. V G Nagesh
  June 14, 2012
 6. vimarsha
  June 13, 2012
 7. suresha deshkulkarni
  June 12, 2012
 8. r n mittimani
  June 11, 2012
 9. Pramod ambekar
  June 11, 2012
 10. keshav kulkarni
  June 11, 2012
 11. Nivedita Rao
  June 11, 2012
 12. vijayendra kulkarni gulbarga
  June 11, 2012
 13. ಆನಂದ ಯಾದವಾಡ
  June 11, 2012
 14. meera
  June 11, 2012
 15. meera
  June 11, 2012
 16. SK
  June 11, 2012
 17. Gayathri Deshkulkarni
  June 10, 2012
 18. Padmanabh bhat, shevkar
  June 10, 2012
 19. GONWAR KISHAN RAO
  June 10, 2012
 20. jaya.janabana5
  June 10, 2012
 21. D.RAVI VARMA
  June 10, 2012
 22. mahadev hadapad
  June 10, 2012

Add Comment

Leave a Reply